ADVERTISEMENT

ಅಂಬೇಡ್ಕರ್‌ ಪರಿನಿರ್ವಾಣ ದಿನದ ನೆಪಪು: ಬಾಬಾಸಾಹೇಬರ ‘ಲಂಡನ್‌ ಮನೆ’ಯಲ್ಲಿ...

ಎಚ್.ಟಿ.ಪೋತೆ
Published 4 ಡಿಸೆಂಬರ್ 2021, 19:30 IST
Last Updated 4 ಡಿಸೆಂಬರ್ 2021, 19:30 IST
ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಲಂಡನ್ನಿನಲ್ಲಿ ವಾಸವಾಗಿದ್ದ ಮನೆ. ಈಗ ಇದನ್ನು ಸ್ಮಾರಕವಾಗಿ ಬದಲಾಯಿಸಲಾಗಿದ್ದು, ಭಾರತೀಯರ ಯಾತ್ರಾ ಸ್ಥಳವಾಗಿದೆ.   ಚಿತ್ರ: ಮಹಿಮಾ ಜೈನ್‌
ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಲಂಡನ್ನಿನಲ್ಲಿ ವಾಸವಾಗಿದ್ದ ಮನೆ. ಈಗ ಇದನ್ನು ಸ್ಮಾರಕವಾಗಿ ಬದಲಾಯಿಸಲಾಗಿದ್ದು, ಭಾರತೀಯರ ಯಾತ್ರಾ ಸ್ಥಳವಾಗಿದೆ.   ಚಿತ್ರ: ಮಹಿಮಾ ಜೈನ್‌   

ಇಂದು (ಡಿ. 06)ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನ. ಆ ನೆಪದಲ್ಲಿ, ಅವರು ವ್ಯಾಸಂಗ ಮಾಡುವಾಗ ತಂಗಿದ್ದ ಲಂಡನ್‌ನ ಮನೆಗೊಂದು ಭೇಟಿ...

*

‘ಡಾ. ಭೀಮರಾವ್‌ ರಾಮ್‌ಜಿ ಅಂಬೇಡ್ಕರ್‌ (1891–1956), ಭಾರತದ ಸಾಮಾಜಿಕ ನ್ಯಾಯದ ಹರಿಕಾರ, 1921–1922ರಲ್ಲಿ ಇಲ್ಲಿ ವಾಸವಾಗಿದ್ದರು’

ADVERTISEMENT

ಲಂಡನ್ನಿನ ಪ್ರಿಮ್‌ರೋಸ್‌ ಹಿಲ್‌ ಬಳಿಯ ಕಿಂಗ್‌ ಹೆನ್ರಿ ರಸ್ತೆಯ ಹತ್ತನೇ ನಂಬರ್‌ನ ಆ ಮನೆಯ ಗೋಡೆಯ ಮೇಲಿನ ಫಲಕವನ್ನು ನೋಡಿ ನಾವೆಲ್ಲ ಪುಳಕಗೊಂಡೆವು.

ಡಾ. ಅಂಬೇಡ್ಕರ್‌ ಅವರು ಇಂಗ್ಲೆಂಡ್‌ನಲ್ಲಿ ಅಧ್ಯಯನನಿರತರಾಗಿ ಕಳೆದ ಆ ದಿನಗಳು ಅವರ ಯೋಚನಾ ಕ್ರಮಕ್ಕೆ ಒಂದು ಸ್ಪಷ್ಟವಾದ ದಿಕ್ಸೂಚಿಯನ್ನು ತೋರಿದ ದಿನಗಳೂ ಹೌದು. ಆದ್ದರಿಂದಲೇ ಆ ಮಹಾನ್‌ ಸಾಧಕ ತಂಗಿದ್ದ ಮನೆಯನ್ನು ಕಂಡು ನಮಗೆಲ್ಲ ಅಷ್ಟೊಂದು ಪುಳಕವಾಗಿದ್ದು.

ನಿರಾಕರಣೆಗೊಳಗಾದ ಸಮುದಾಯದಿಂದ ಬಂದ ಅಂಬೇಡ್ಕರ್ ಅವರು ಸಯ್ಯಾಜಿರಾವ್ ಗಾಯಕ್‌ವಾಡ್‌ ಹಾಗೂ ಶಾಹೂ ಮಹಾರಾಜರ ಆರ್ಥಿಕ ನೆರವಿನಿಂದ ಮತ್ತು ಜ್ಞಾನದ ಸ್ವಸಾಮರ್ಥ್ಯದಿಂದ ವಿದೇಶಕ್ಕೂ ಹೋಗಿ ಓದಿದ ಪರಿ ನಿಬ್ಬೆರಗಾಗುವಂತಹದ್ದು. ಏಕೆಂದರೆ, ಅಂಬೇಡ್ಕರ್ ಅವರು ವಿದೇಶಕ್ಕೆ ಹೋಗಿದ್ದಕ್ಕೂ ಭಾರತದ ಆಗಿನ ಇತರ ಸಾಧಕರು ವಿದೇಶಕ್ಕೆ ಹೋಗಿದ್ದಕ್ಕೂ ತುಂಬಾ ವ್ಯತ್ಯಾಸವಿದೆ.

ಅಂಬೇಡ್ಕರ್ ಅವರು ಇಂಗ್ಲೆಂಡಿನಲ್ಲಿ ಉಳಿದುಕೊಂಡಿದ್ದ ಮನೆಯನ್ನು ನೋಡಲು ಗೆಳೆಯರೆಲ್ಲರೂ ನಡೆದುಕೊಂಡೇ ಹೋಗಿದ್ದೆವು.

ನಮ್ಮ ಪಾಲಿಗೆ ಅದೊಂದು ಪವಿತ್ರ ಯಾತ್ರೆಯಂತೆ ಭಾಸವಾಗಿತ್ತು. ಯುರೋಪ್‌ ಶೈಲಿಯ ಆ ಮನೆಯನ್ನು ಕಣ್ಣಾರೆ ಕಂಡಾಗ ನಾವೆಲ್ಲ ಭಾವುಕರಾಗಿದ್ದೆವು. ಅವರು ತುಳಿದ ಮನೆಯ ಮೆಟ್ಟಿಲುಗಳಿಗೆ ಹಣಿಹಚ್ಚಿ ನಾನು ನಮಸ್ಕರಿಸಿದೆ. ಗೆಳೆಯರು ನನ್ನನ್ನೇ ಅನುಸರಿಸಿದರು.

ಡಾ. ಅಂಬೇಡ್ಕರ್‌ ಅವರ ಬೌದ್ಧಿಕ ಯಾತ್ರೆಯಲ್ಲಿ ಈ ಮನೆಯ ಪಾತ್ರ ಗಣನೀಯವಾದುದು. ಎಷ್ಟೊಂದು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು ಅವರಿಲ್ಲಿ ಜಗತ್ತಿನ ಅಪ್ರತಿಮ ಸಾಹಿತ್ಯವನ್ನು ಓದಿಕೊಂಡಿದ್ದಾರೋ? ಅವರು ಬರೆದ ‘ಪ್ರಾವಿನ್ಶಿಯಲ್ ಡಿಸೆಂಟ್ರಲೈಸೆಷನ್ ಆಫ್ ಇಂಪಿರಿಯಲ್ ಫೈನಾನ್ಸ್ ಇನ್ ಬ್ರಿಟಿಷ್ ಇಂಡಿಯಾ’ ಎಂಬ ಪ್ರೌಢಪ್ರಬಂಧ 1921ರ ಜೂನ್ ತಿಂಗಳಲ್ಲಿ ಅಂಗೀಕಾರವಾಗಿ ಲಂಡನ್‌ ವಿಶ್ವವಿದ್ಯಾಲಯ ಅವರಿಗೆ ಮಾಸ್ಟರ್ ಆಫ್ ಸೈನ್ಸ್ (ಎಕಾನಾಮಿಕ್ಸ್) ಪದವಿಯನ್ನು ನೀಡಿತು.

ಲಂಡನ್‍ನಿಂದ ಹೊರಟು ಕೆಲಕಾಲ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಜನೆ ಮಾಡಿ ಪುನಃ ಲಂಡನ್ನಿಗೆ ವಾಪಾಸಾಗಿ ತಮ್ಮ ಮತ್ತೊಂದು ಬೃಹತ್ ಪ್ರಬಂಧ ‘ದಿ ಪ್ರಾಬ್ಲಂ ಆಫ್ ರುಪಿ-ಇಟ್ಸ್ ಒರಿಜನ್ ಆ್ಯಂಡ್‌ ಇಟ್ಸ್ ಸಲ್ಯೂಷನ್ಸ್’ ಗ್ರಂಥವನ್ನು ಲಂಡನ್ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು. ಪ್ರಬಂಧಕ್ಕೆ ಡಾಕ್ಟರ್ ಆಫ್ ಸೈನ್ಸ್, ಡಿ.ಎಸ್ಸಿ ಪದವಿ ಗೌರವ ಸಿಕ್ಕಿತು. ಅದೇ ಪ್ರಬಂಧದ ಆಧಾರದ ಮೇಲೆ ಭಾರತದ ರಿಜರ್ವ್ ಬ್ಯಾಂಕ್ ಸ್ಥಾಪನೆಯಾದದ್ದು ಇತಿಹಾಸ. ಈ ಎಲ್ಲ ಸಂಗತಿಗಳನ್ನೂ ಅವರು ವಾಸಿಸಿದ್ದ ಮನೆಯ ಮೆಟ್ಟಿಲ ಮೇಲೆ ಕುಳಿತು ಪುನರಾವಲೋಕನ ಮಾಡಿಕೊಂಡಾಗ ಮೈರೋಮಾಂಚನಗೊಂಡಿತು.

ಇಂಗ್ಲೆಂಡ್, ಐರ್ಲೆಂಡ್‌ ದೇಶಗಳ ಈ ಪ್ರವಾಸಕ್ಕೆ ನಾನು ಗೆಳೆಯರೊಂದಿಗೆ ಹೋಗಿದ್ದೆ. ಇಲ್ಲಿಯವರೆಗಿನ ನನ್ನ ಜೀವನದ ಬಹುದೊಡ್ಡ ಸಾಧನೆಯದು.

ಲಂಡನ್ನಿನಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ವಾಸವಾಗಿದ್ದ ಮನೆಯ ಆವರಣದಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಚಿತ್ರ: ಮಹಿಮಾ ಜೈನ್‌

ಕಾರಣ ನಾನು ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಗಾಂಧಿಕ್ಲಾಸ್‌ನಲ್ಲಿ ಪಾಸಾದವನು. ಅದಕ್ಕೂ ಮಿಗಿಲಾಗಿ ಊರಿನ ದಕ್ಷಿಣದ ದಿಕ್ಕಿನಲ್ಲಿ ವಾಸಿಸುವ ಕೇರಿಯಿಂದ ಬಂದವನು. ಹೆತ್ತವರ ಪ್ರೋತ್ಸಾಹ, ಒಡಹುಟ್ಟಿದವರ ಪ್ರೇರಣೆಯಿಂದ ವಿಶ್ವವಿದ್ಯಾಲಯದ ಕಟ್ಟಿ ಹತ್ತಿ ವಿಶ್ವವಿದ್ಯಾಲಯದಲ್ಲಿಯೇ ಜೀವನ ಕಳೆಯುತ್ತಿದ್ದೇನೆ. ನನ್ನಂಥವನೊಬ್ಬ ಈ ಸ್ಥಾಯಿಯನ್ನು ಮುಟ್ಟಲು ಕಾರಣ ಬಾಬಾಸಾಹೇಬ್‌ ಅಂಬೇಡ್ಕರ್ ಎಂಬ ಮಹಾತ್ಮ ಬಿಟ್ಟರೆ ಮತ್ಯಾರೂ ಅಲ್ಲ.

ಅಂಬೇಡ್ಕರ್ ಅವರು ಪ್ರತಿಭಾವಿಲಾಸಕ್ಕಾಗಿ ಆತ್ಮಾನಂದಕ್ಕಾಗಿ ಓದಿ, ಬರೆದವರಲ್ಲ. ಸಮಾಜದ ಹಿತಕ್ಕಾಗಿ, ಮಲಗಿದ್ದ ತನ್ನ ಶೋಷಿತ ಸಮುದಾಯದ ಬಿಡುಗಡೆಗಾಗಿ ಹಗಲು ರಾತ್ರಿಯೆನ್ನದೆ, ಆರೋಗ್ಯದ ಬಗ್ಗೆ ಲೆಕ್ಕ ಹಾಕದೆ ಓದಿ ಬರೆದ ಮಹಾತ್ಮ. ತಮ್ಮ ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನು ಅವರು ಬಿಡದೆ ಓದುತ್ತಿದ್ದರು. ಕೂತಲ್ಲಿಯೇ ತಮ್ಮ ಗ್ರಂಥಾಲಯದ ಪುಸ್ತಕದ ಬಣ್ಣ ಎಂತಹದ್ದು, ಕಟ್ಟು ಹೇಗಿದೆ ಮತ್ತು ಅದು ಯಾವ ರ‍್ಯಾಕ್‌ನಲ್ಲಿದೆ, ಯಾವ, ಪುಟದಲ್ಲಿ ಏನಿದೆ ಎಂಬುದನ್ನು ಹೇಳಬಲ್ಲಷ್ಟು ಅವರು ಪುಸ್ತಕ ಜಗತ್ತಿನಲ್ಲಿ ಮುಳುಗಿದ್ದರು.

‘ನಾನು ಇಂಗ್ಲೆಂಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಒಂದು ಪದವಿಯನ್ನು ಮುಗಿಸಲು ಸಾಮಾನ್ಯವಾಗಿ ಎಂಟು ವರ್ಷಗಳು ಬೇಕಾಗಿದ್ದ ಒಂದು ಕೋರ್ಸ್‌ಅನ್ನು ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಮುಗಿಸಿದೆ. ಇದಕ್ಕಾಗಿ ನಾನು ದಿನಕ್ಕೆ 21 ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗಿರುತ್ತಿದ್ದೆ. ಈಗ ನನಗೆ ವಯಸ್ಸು 50 ವರ್ಷಗಳ ಮೇಲಾಗಿದೆ. ಆದರೂ ನಾನು ಒಂದೇ ಸಮನೆ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಬಲ್ಲೆ. ಆದರೆ ಇಂದಿನ ಯುವಕರು? ಕೇವಲ ಅರ್ಧ ಗಂಟೆ ಕೆಲಸ ಮಾಡಿದರೂ ಅವರಿಗೆ ವಿರಾಮ ಬೇಕೆನಿಸುತ್ತದೆ. ಸಿಗರೇಟು ಸೇದಿ ಕಾಲು ಚಾಚಿ ಉರುಳಿಕೊಳ್ಳುತ್ತಾರೆ’. – ಇದು ಡಾ. ಅಂಬೇಡ್ಕರ್ ಅವರೇ 1943ರಲ್ಲಿ ಹೇಳಿದ ಮಾತು. ಇದನ್ನೆಲ್ಲ ನೆನೆದು, ಲಂಡನ್ ವಿಶ್ವವಿದ್ಯಾಲಯದ ಆವರಣದ ಗಾಂಧೀಜಿ, ಟ್ಯಾಗೋರ್ ಹಾಗೂ ಥೇಮ್ಸ್ ನದಿ ತಟದ ಮೇಲಿನ ಬಸವಣ್ಣನವರ ಪ್ರತಿಮೆಗಳನ್ನು ನೋಡಲು ಪ್ರಯಾಣ ಬೆಳೆಸಿದೆವು.

ಲಂಡನ್ ಸ್ಕೂಲ್‌ ಆಫ್ ಎಕನಾಮಿಕ್ಸ್ ನೋಡಿದಾಗ ಆದ ಆನಂದ ಬಣ್ಣಿಸಲಸದಳ. ಬಾಬಾಸಾಹೇಬರು ಓದಿದ ಸಂಸ್ಥೆ ಎಂಬ ಹೆಮ್ಮೆ ನಮ್ಮಲ್ಲಿ ಇಮ್ಮಡಿಗೊಂಡಿತು. ಇಂಗ್ಲೆಂಡ್‌ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಸುತ್ತುತ್ತಿರಬೇಕಾದರೆ ವಿದೇಶಿಯರು ಯಾರೇ ಮಾತಾಡಿಸಿದರೂ ಖುಷಿಯಾಗುತ್ತಿತ್ತು. ಸ್ವದೇಶಿಯರು ಮಾತಾಡಿಸಿದಾಗಲೂ ಖುಷಿಯಾಗುತ್ತಿತ್ತು. ಆದರೆ, ಅವರು ಜಾತಿ, ಧರ್ಮದ ಕಹಿ ಕೆದಕಿದರೆ ಹೇಗೆ ಎಂಬ ಸಂಕೋಚವೂ ಕಾಡುತ್ತಿತ್ತು. ಆಗ ಜಾತಿ, ಧರ್ಮದ ಅಪಾಯದಿಂದ ಪಾರಾದ ಗಾಂಧೀಜಿ, ಅಂಬೇಡ್ಕರ್, ಬಸವಣ್ಣ, ಟ್ಯಾಗೋರ್ ಅವರೆಲ್ಲ ಪ್ರತಿಮಾತ್ಮಕವಾಗಿ ಇಲ್ಲಿ ನಿರುಮ್ಮಳಾಗಿದ್ದಾರಲ್ಲ ಎಂದೆನಿಸಿತ್ತು. ಲಂಡನ್ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಗಾಂಧೀಜಿಯ ಕುಳಿತ ಭಂಗಿಯ ಪ್ರತಿಮೆಗೆ ನಮಿಸಿ ಅಕ್ಕಪಕ್ಕದಲ್ಲಿದ್ದ ಹೊಲಸನ್ನು ಸ್ವಚ್ಛ ಮಾಡಿದೆವು. ದೇವರೆದುರು ಇಟ್ಟ ಹಾಗೆ ಕೆಲ ನಾಣ್ಯಗಳನ್ನು ಇಟ್ಟಿದ್ದರು. ಅವುಗಳನ್ನು ಒಂದುಗೂಡಿಸಿ ಪಕ್ಕದ ಕಟ್ಟೆಯ ಮೇಲಿಟ್ಟೆವು.

ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ನೆರವಿನಿಂದ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ದಲಿತ ಸಂಶೋಧಕರು 1952ರಲ್ಲಿ ಅಂಬೇಡ್ಕರ್‌ ಅವರು ಲಂಡನ್ನಿಗೆ ಭೇಟಿ ನೀಡಿದಾಗ ತೆಗೆಸಿಕೊಂಡ ಚಿತ್ರ

ಪ್ರತಿಮೆಯ ಎದುರಿನ ಕಲ್ಲಿನ ಬೆಂಚ್ ಮೇಲೆ ಕೆಂಪಗಿರುವ ಅಜಾನುಬಾಹು ವ್ಯಕ್ತಿಯೊಬ್ಬರು ಕೂತಿದ್ದರು. ಜಾಗ ಖಾಲಿ ಇದ್ದುದರಿಂದ ನಾವು ಹೋಗಿ ಸೇರಿಕೊಂಡೆವು. ಗಾಂಧೀಜಿಯವರೊಂದಿಗೆ ದಲಿತರಿಗೆ ತಾತ್ವಿಕ ಭಿನ್ನಾಭಿಪ್ರಾಯ ಇರುವುದು ಸಹಜ. ಕಾರಣ, ‘ಪೂನಾ ಒಪ್ಪಂದ’ದ ಮೂಲಕ ಸಿಗಬೇಕಾಗಿದ್ದ ರಾಜಕೀಯ ಹಕ್ಕುಗಳ ವಿರುದ್ಧ ಉಪವಾಸ ಕೂತು ವಿರೋಧಿಸಿದರಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಸುಳಿದುಹೋಯಿತು. ಹಾಗೆ ಮಾತಾಡುತ್ತ ಪಕ್ಕದಲ್ಲಿ ಕೂತಿದ್ದ ವ್ಯಕ್ತಿಯನ್ನು ಮಾತಿಗೆಳೆದೆ. ‘ನನ್ನ ಹೆಸರು ರಾಬರ್ಟ್, ಜರ್ಮನಿ ನನ್ನ ದೇಶ’ ಎಂದು ಹೇಳಿದರು. ‘ನಾನು ಗಾಂಧೀಜಿಯವರ ಅನುಯಾಯಿ. ಗಾಂಧೀಜಿ ಎಂದರೆ, ಜಗತ್ತಿನ ಸಾಮಾನ್ಯ ಮನುಷ್ಯರ ನಾಯಕ’ ಎಂದೂ ಹೇಳಿದರು. ಅಲ್ಲಿದ್ದ ನಮಗೆ ಗಾಂಧೀಜಿ ಬಗ್ಗೆ ಇದ್ದ ತಕರಾರುಗಳು ಕೆಲಕಾಲ ಸರಿದು ನಾವು ಭಾರತೀಯರು ಎಂಬ ಹೆಮ್ಮೆ ಉಕ್ಕಿ ಬಂತು. ಖುಷಿಯಿಂದಲೇ ಟ್ಯಾಗೋರ್‌ ಅವರ ಪ್ರತಿಮೆಯನ್ನು ನೋಡಿ ಫೋಟೊ ಕ್ಲಿಕ್ಕಿಸಿಕೊಂಡೆವು. ಲೇಖಕಿ ವರ್ಜಿನಿಯಾ ವೂಲ್ಫ್ ಬಾಳಿ ಬದುಕಿದ ಜಾಗದಲ್ಲಿ ನಿಂತು ಆನಂದಿಸಿದೆವು.

ನಮ್ಮ ದೇಶದಲ್ಲಿ ಗಾಂಧೀಜಿಯವರ ಅಣಕು ಹತ್ಯೆ ಮಾಡುವಂತಹ ಹೀನಕೃತ್ಯ ನೆನೆದ ಗೆಳೆಯ ವಿಕ್ರಮ ವಿಸಾಜಿ ಮೌನಿಯಾದರು. ಅವರ ತತ್ವಗಳನ್ನು ನಿರಂತರವಾಗಿ ಕೊಲ್ಲುತ್ತಿದ್ದಾರಲ್ಲ ಎಂಬ ನೋವೂ ಅದೇ ಕ್ಷಣದಲ್ಲಿ ಕಾಡಿತು. ಬುದ್ಧ, ಗಾಂಧಿ ಹಾಗೂ ಅಂಬೇಡ್ಕರ್ ಅವರಿಂದಲೇ ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಗೌರವ ಹೆಚ್ಚಾಗುತ್ತಿರುವುದನ್ನು ನಾವೆಲ್ಲ ಮರೆತಂತಿದೆ ಎಂದುಕೊಂಡೆವು.

ಮಾರನೆಯ ದಿನ ಆಕ್ಸ್‌ಫರ್ಡ್, ಕೇಂಬ್ರಿಜ್ ವಿಶ್ವವಿದ್ಯಾಲಯಗಳನ್ನು ನೋಡಿದೆವು. ಕೇಂಬ್ರಿಜ್ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಕಳಪೆ ಪುಸ್ತಕ ಖರೀದಿ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದ ಫಲಕ ನೋಡಿ ನಮಗೆ ಆಶ್ಚರ್ಯವಾಯಿತು. ‘ಇದು ನಮ್ಮಲ್ಲಿ ಸಾಧ್ಯವೇ’ ಎಂದು ಶ್ರೀಶೈಲ ನಾಗರಾಳ ಕೇಳಿದರು. ಹದಿನೈದನೆಯ ಶತಮಾನದ ಕಟ್ಟಡಗಳು ಸುಸಜ್ಜಿತವಾಗಿರುವುದನ್ನು ನೋಡಿ, ಜಗತ್ತಿಗೆ ತುಂಬ ಹಳೆಯದಾದ ನಳಂದಾ ವಿಶ್ವವಿದ್ಯಾಲಯದ ಸ್ಥಿತಿಗೆ ಜೀವ ಮರುಗಿತು.

ಥೇಮ್ಸ್ ನದಿ ನೀರು ಮುಟ್ಟುವಾಗ ಮಹಾಡ್ ಕೆರೆ ನೀರಿಗಾಗಿ ಅಂಬೇಡ್ಕರ್ ಅವರು ಮಾಡಿದ ಹೋರಾಟ ಮನಸ್ಸಿಗೆ ಮತ್ತೊಮ್ಮೆ ತಾಗಿತು. ಕೇಂಬ್ರಿಜ್ ವಿಶ್ವವಿದ್ಯಾಲಯದ ಚರ್ಚ್‌ನಲ್ಲಿ ನಿರಾತಂಕವಾಗಿ ಒಳಹೋಗಿ ಪ್ರಾರ್ಥನೆ ಮಾಡಿದೆವು. ಆಗ ಕಾಳಾರಾಮ ಗುಡಿ ಪ್ರವೇಶ ಹೋರಾಟದ ನೆನಪಾಯಿತು. ನಂತರ ಐರ್ಲೆಂಡಿಗೆ ತೆರಳಿದೆವು. ಐರ್ಲೆಂಡಿನ ಡಿಸಿಯು ವಿಶ್ವವಿದ್ಯಾಲಯದ ಸೌತ್ ಏಷ್ಯನ್ ಸ್ಟಡೀಸ್‌ ವಿಭಾಗದವರು ಹಮ್ಮಿಕೊಂಡ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೇವನೂರ ಮಹಾದೇವ ಅವರ ಕಥೆಗಳ ಸಾಮಾಜಿಕ ಆಶಯ ಕುರಿತು ಪ್ರಬಂಧ ಮಂಡಿಸಿದೆ. ಭಾರತೀಯರಲ್ಲದವರು ಭಾರತೀಯ ಸಾಹಿತ್ಯ, ಸಂಸ್ಕೃತಿ, ಸ್ಲಂನಲ್ಲಿ ಬೆಳೆಯುತ್ತಿರುವ ಬುದ್ಧಿಸಂ ಬಗ್ಗೆ ಪ್ರಬಂಧ ಮಂಡಿಸಿದರು. ಇದೆಲ್ಲವನ್ನು ಮೆಲುಕು ಹಾಕುತ್ತ ಭಾರತಕ್ಕೆ ಮರಳಿದೆವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.