ಮಂಗಳೂರು ಸಮೀಪದ ತೆಂಕಎಕ್ಕಾರು ಗ್ರಾಮದ ಕೆ.ಭಾಸ್ಕರದಾಸ್ ಜನ ಸಂಘಟನೆಗಾಗಿ ನಿರಂತರ ಓಡಾಡುತ್ತಲೇ ಇದ್ದ ಅಪ್ಪಟ ಅಲೆಮಾರಿ. ಚೆನ್ನದಾಸರ ಎಂಬ ಪರಿಶಿಷ್ಟ ಜಾತಿಯ ಸಣ್ಣ ಅಲೆಮಾರಿ ಸಮುದಾಯದಲ್ಲಿ ಹುಟ್ಟಿ ತಮ್ಮ ಕಾಳಜಿ, ಪರಿಶ್ರಮ, ನಿರಂತರ ಓಡಾಟದಿಂದ ಸಾವಿರಾರು ಜನರ ನಿಷ್ಕಳಂಕ ಪ್ರೀತಿ ಸಂಪಾದಿಸಿದವರು.
ಐದು ಪೀಳಿಗೆಗಳ ಹಿಂದೆ ಉತ್ತರ ಕರ್ನಾಟಕದ ಯಾವುದೋ ಮೂಲೆಯಿಂದ ಚೆನ್ನದಾಸರ ಸಮುದಾಯದ ಒಂದಿಷ್ಟು ಕುಟುಂಬಗಳು ಭಿಕ್ಷಾಟನೆಯನ್ನೇ ಕಾಯಕವಾಗಿಸಿಕೊಂಡು ಗುಳೆ ಹೊರಟವು. ತಿರುಗಿ, ತಿರುಗಿ ಮಂಗಳೂರು ಸಮೀಪದ ತೆಂಕಎಕ್ಕಾರು ಗ್ರಾಮದಲ್ಲಿನ ಹೊಳೆಯೊಂದರ ಸಮೀಪ ನೆಲೆನಿಂತವು. ಅದೇ ಕುಟುಂಬಗಳ ಕುಡಿ ಸಂಜೀವದಾಸ್, ಅವರ ಹೆಂಡತಿ ಯಮುನಾದಾಸ್. ಈ ದಂಪತಿಗೆ ಐವರು ಗಂಡು ಮಕ್ಕಳು, ಒಬ್ಬ ಹೆಣ್ಣುಮಗಳು. ಈ ಕುಟುಂಬದ ಎರಡನೆಯ ಕುಡಿಯೇ ಭಾಸ್ಕರದಾಸ್. ಕಿತ್ತು ತಿನ್ನುವ ಬಡತನದ ದಿನಗಳು. ಅಜ್ಜಿ ಕೊಟ್ಟ ಪುಡಿಗಾಸು ಹಿಡಿದುಭಾಸ್ಕರದಾಸ್ ಮುಂಬೈ ಸೇರಿದರು. ಮಂಗಳೂರು ಮೂಲದ ಎಲ್ಲಪ್ಪ ಸುವರ್ಣರ ಪರಿಚಯವಾಗಿ ಕ್ಯಾಂಟೀನ್‌ನಲ್ಲಿ ನೌಕರಿ. ಅಲ್ಲಿಂದ ಕೇಟರಿಂಗ್ ಸಂಸ್ಥೆಯಲ್ಲಿ ಕೆಲಸ. ಹೇಗೋ ಮಾಡಿ ಸ್ವಂತದ್ದೇ ಒಂದು ಚಿಕ್ಕ ಹೋಟೆಲ್ ಆರಂಭ. ಅಷ್ಟರಲ್ಲಾಗಲೇ ಮುಂಬೈನಲ್ಲಿ ಆರ್‌ಎಸ್‌ಎಸ್ ಸಂಪರ್ಕ. ತುರ್ತುಪರಿಸ್ಥಿತಿ ಮುಗಿದು ಚುನಾವಣೆ ಸಮಯ. ರಾಮ್ ಜೇಠ್ಮಲಾನಿ ಪರ ಪ್ರಚಾರ. ಪೋಸ್ಟರ್ ಅಂಟಿಸಿ, ಬ್ಯಾನರ್ ಕಟ್ಟಿ ಗಲ್ಲಿ ಗಲ್ಲಿ ತಿರುಗಿ ಚುನಾವಣಾ ಪ್ರಚಾರ. ಅಷ್ಟು ಇಷ್ಟು ಕಲಿತ ಹಿಂದಿ, ಮರಾಠಿ ಪ್ರಯೋಜನಕ್ಕೆ ಬಂದವು.
ಇರಾಕ್‌ನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಮುಂಬೈಗೆ ವಾಪಸ್ ಬಂದಿದ್ದ ನಿಖಿಲ್ ಮೋರೆ ಪರಿಚಯ. ಮೋರೆ ಮಾಡಿಸಿಕೊಟ್ಟ ವೀಸಾ- ಪಾಸ್‌ಪೋರ್ಟ್ ಹಿಡಿದು ದುಬೈನ ಕತಾರ್‌ಗೆ ಪ್ರಯಾಣ. ಏಳೆಂಟು ವರ್ಷ ಭರಪೂರ ದುಡಿಮೆ. ಕೈಯಲ್ಲೊಂದಿಷ್ಟು ಕಾಸು. ಪರದೇಶ ಸಾಕೆನಿಸಿ ಮತ್ತೆ ಭಾರತಕ್ಕೆ. ನ್ಯಾಷನಲ್ ಪರ್ಮಿಟ್ ಇದ್ದ ಲಾರಿ ಖರೀದಿ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ- ಸ್ವಂತ ಲಾರಿ ಚಲಾಯಿಸುತ್ತ ತಿರುಗಾಟ. ಮತ್ತೊಂದು ಲಾರಿ ಖರೀದಿ, ವಹಿವಾಟು ವೃದ್ಧಿ. 1987ರಲ್ಲಿ ಬೆಂಗಳೂರಿನಲ್ಲಿದ್ದ ಸುಧಾದಾಸ್ ಜೊತೆ ಮದುವೆ. ಸುಧಾ ಕರಾವಳಿಯಿಂದ ಹೋಟೆಲ್ ಉದ್ಯಮಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿದ್ದ ಕುಟುಂಬದ ಮಗಳು. ಮದುವೆಯ ನಂತರ ಹೆಂಡತಿ ಎಂಎಸ್ಸಿ- ಬಯಾಲಜಿ ಮುಗಿಸಲು ಹೆಗಲೆಣೆಯಾಗಿ ನಿಂತವರು ಈ ಭಾಸ್ಕರದಾಸ್.
ಈ ನಡುವೆ ಗುಜರಾತ್‌ನಲ್ಲಿ ಭೀಕರ ಲಾರಿ ಅಪಘಾತ. ಲಾರಿ ನಜ್ಜುಗುಜ್ಜಾಗಿದ್ದರೂ ಡ್ರೈವರ್ ಭಾಸ್ಕರದಾಸ್ ಏನೂ ಆಗದೆ ಪಾರು. ಸುಧಾರ ತಂದೆಯಿಂದ ಅಳಿಯನಿಗೆ ಟ್ರಕ್ ಡ್ರೈವರ್ ಕೆಲಸ ಬಿಟ್ಟು ಅವರದೇ ಹೋಟೆಲ್ ನೋಡಿಕೊಳ್ಳುವಂತೆ ಒತ್ತಾಯ. ಈ ನಡುವೆ ಸಿಂಡಿಕೇಟ್ ಬ್ಯಾಂಕಿನಲ್ಲಿದ್ದ ಚೆನ್ನದಾಸರ ಸಮುದಾಯದ ಯುವಕನಿಗೆ ಜಾತಿ ಪ್ರಮಾಣಪತ್ರದ ವಿಷಯದಲ್ಲಿ ಕಿರುಕುಳ. ಆ ಯುವಕನ ಪರವಾಗಿ ಹೋರಾಟಕ್ಕೆ ಇಳಿದ ಭಾಸ್ಕರದಾಸ್. ಹೋರಾಟದ ಅಲ್ಪ ಯಶಸ್ಸಿನಿಂದ ಭಾಸ್ಕರದಾಸ್‌ಗೆ ಚೆನ್ನದಾಸರ ಜಾತಿ ಸಂಘದ ಅಧ್ಯಕ್ಷ ಹುದ್ದೆ. ಮಾವನ ಒತ್ತಾಯಕ್ಕೆ ಮಣಿದು, ಹೋಟೆಲ್ ಉದ್ಯಮಕ್ಕೆ ಹೊರಳಿದ ಭಾಸ್ಕರದಾಸ್. ಬೆಂಗಳೂರಿನ ಆನಂದರಾವ್ ವೃತ್ತದ ಸಮೀಪದ ರಾಜಪ್ರಕಾಶ್ ಹೋಟೆಲ್‌ನ ಗಲ್ಲಾದಲ್ಲಿ ಕುಳಿತ ಭಾಸ್ಕರದಾಸ್.
ಮಂಗಳೂರಿನ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದ ಪರಿಸರದಲ್ಲಿ ಚೆನ್ನದಾಸರ ಸಮುದಾಯದ ರಾಜ್ಯ ಸಮಾವೇಶ ಮಾಡಲು ನಿರ್ಧಾರ. ಅದಕ್ಕಾಗಿ ರಾಜ್ಯ ಪ್ರವಾಸ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಜೋಗನ್ ಶಂಕರ್, ಡಾ. ಗುರುಲಿಂಗಯ್ಯ ಜೊತೆ ಸಮಾಲೋಚನೆ. ಆ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿದ್ದ ಡಾ. ಕೆ.ಎಮ್.ಮೇತ್ರಿ ಪರಿಚಯ. ಚೆನ್ನದಾಸರ ಸಮುದಾಯದ ಸಮಾವೇಶ ಮಾಡುವ ಬದಲು ಎಲ್ಲ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ರಾಜ್ಯ ಸಮಾವೇಶ ಮಾಡಲು ನಿರ್ಧಾರ. ಮೊದಲ ಬಾರಿಗೆ ಅಲೆಮಾರಿ ಸಮುದಾಯದವರೆಲ್ಲ ಒಟ್ಟಾಗಿ ಸೇರುವ ಸಂಭ್ರಮ. ಕಟೀಲು ದೇಗುಲದ ಸನ್ನಿಧಿಯಲ್ಲಿ ಭರ್ಜರಿ ಸಮಾವೇಶ. ಭಾಸ್ಕರದಾಸ್ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ.
ಆರ್‌ಎಸ್‌ಎಸ್‌ನಲ್ಲಿ ಒಂದಿಷ್ಟು ಪಳಗಿದ್ದು ಭಾಸ್ಕರದಾಸ್ ಒಳ್ಳೆಯ ಸಂಘಟಕರಾಗಲು ಸಹಾಯ ಮಾಡಿತು. ಹಂಪಿಯಲ್ಲಿ ಅಲೆಮಾರಿ ಸಮುದಾಯಗಳ ಮತ್ತೊಂದು ರಾಜ್ಯ ಸಮಾವೇಶವನ್ನು ಸಂಘಟಿಸಿದರು. 2008- 09ರಲ್ಲಿ ಸರ್ಕಾರದಿಂದ ಅನುದಾನ ತಂದು ಪ್ರತಿಯೊಂದು ಅಲೆಮಾರಿ ಸಮುದಾಯದ ಬಗ್ಗೆ ಡಾ. ಕೆ.ಎಂ.ಮೇತ್ರಿ ಅವರ ಸಂಪಾದಕತ್ವದಲ್ಲಿ ಅಧ್ಯಯನಪೂರ್ಣ ಕೃತಿಗಳು ಬರಲು ಕಾರಣರಾದರು. ಇಂತಹದ್ದೊಂದು ವಿಶಿಷ್ಟ ಪ್ರಯತ್ನ ಇಡೀ ದೇಶದಲ್ಲಿ ಕನ್ನಡದಲ್ಲಿ ಬಿಟ್ಟರೆ ಮತ್ತೆಲ್ಲೂ ಆಗಿಲ್ಲ ಎಂದು ಅನೇಕ ಹೊರರಾಜ್ಯಗಳ ವಿದ್ವಾಂಸರು ಪ್ರಶಂಸಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ, ಸಬಲೀಕರಣ ಸಚಿವಾಲಯದ ಡಿಎನ್‌ಟಿ, ಎಸ್‌ಎನ್‌ಟಿ, ಎನ್‌ಟಿ ಅಭಿವೃದ್ಧಿ ನಿಗಮದ ಸದಸ್ಯರಾಗಿ ಭಾಸ್ಕರದಾಸ್ ನಿಯುಕ್ತರಾದರು. ಈ ಮೂಲಕ ಹೊರ ರಾಜ್ಯಗಳಿಗೂ ತಮ್ಮ ಓಡಾಟ ವಿಸ್ತರಿಸಿದ್ದರು. ಅಲೆಮಾರಿ ಸಮುದಾಯಗಳಿಂದ ಮತಾಂತರಗೊಂಡವರನ್ನು ವಾಪಸ್ ಕರೆತರುವ ಯೋಜನೆಯಲ್ಲಿಯೂ ಭಾಸ್ಕರದಾಸ್ ಸಕ್ರಿಯರಾಗಿದ್ದರು.
ಎಷ್ಟೋ ವರ್ಷಗಳ ಕಾಲ ಅವರ ರಾಜಪ್ರಕಾಶ್ ಹೋಟೆಲ್ ಅಲೆಮಾರಿಗಳೆಲ್ಲರ ನೆಚ್ಚಿನ ತಾಣ. ಅಲ್ಲಿ ಹೋದರಾಯಿತು. ‘ಸ್ಪೆಷಲ್ ದೋಸೆ’ಯ ರಸದೌತಣ ಸವಿಯಲೇಬೇಕಿತ್ತು. ಕಾರ್ಯಭಾರದಿಂದ ಭಾಸ್ಕರದಾಸ್ ಕೆಲ ವರ್ಷಗಳ ಹಿಂದೆ ಹೋಟೆಲ್ ವ್ಯವಹಾರ ನಿಲ್ಲಿಸಿದ್ದರು.
ನ. 3, 4ರಂದು ಭಾಸ್ಕರದಾಸ್ ಬೆಂಗಳೂರಿನಲ್ಲಿಯೇ ಇದ್ದರು. ಬೆಂಗಳೂರಿಗೆ ಬಂದರೆಂದರೆ ಭೇಟಿಯಾಗದೇ ಹೋದವರಲ್ಲ. ಸಚಿವ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಒಂದು ತಾಸು ಚರ್ಚೆ. ವಸತಿ ಯೋಜನೆ, ನಿಗಮ ರಚನೆ, ಮೂಲ ಸೌಕರ್ಯಗಳು, ಜಾತಿ ಪ್ರಮಾಣಪತ್ರ ವಿತರಣೆ ಹೀಗೆ ಎಷ್ಟೋ ವಿಷಯಗಳು. ಮಂಗಳೂರಿಗೆ ವಾಪಸ್ ಹೊರಟ ಭಾಸ್ಕರದಾಸ್ ಕುಣಿಗಲ್‌ನ ಬಿಂಡಿಗನವಿಲೆ ಹತ್ತಿರ ಅಪಘಾತದಲ್ಲಿ ಅಸ್ವಸ್ಥರಾದರು.6ರಂದು ಕೊನೆಯುಸಿರು ಎಳೆದರು. ಪುಟ್ಟ ಸಮುದಾಯದ ‘ಭಾಸ್ಕರ’ ಅಸ್ತಂಗತನಾದಾಗ ಅಂತ್ಯಕ್ರಿಯೆಗೆ ದೂರ ದೂರದಿಂದ ಬಂದಿದ್ದ ನೂರಾರು ಅಲೆಮಾರಿಗಳು. ಯಾವುದೋ ಜಾತಿ, ಯಾವುದೋ ಊರು. ಆದರೂ ತೀರದ ಬಂಧುತ್ವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.