ADVERTISEMENT

ಕನ್ನಡಿಗನೊಬ್ಬನ ಹಾರ್ಲೆಮ್ ದಿನಗಳು

ವಿಜಯಕುಮಾರ ಎಂ.ಬೋರಟ್ಟಿ
Published 19 ಫೆಬ್ರುವರಿ 2022, 19:30 IST
Last Updated 19 ಫೆಬ್ರುವರಿ 2022, 19:30 IST
ಎಚ್‌.ಜಿ.ಮುದ್ಗಲ್‌
ಎಚ್‌.ಜಿ.ಮುದ್ಗಲ್‌   

1970ರದಶಕದ ದಿನಗಳಲ್ಲಿ ದಲಿತ ಸಾಹಿತ್ಯ ಮತ್ತು ಆಫ್ರಿಕನ್ ಸಾಹಿತ್ಯವನ್ನು ತೌಲನಿಕವಾಗಿ ಅಧ್ಯಯನ ಮಾಡುವ ಅನೇಕ ಪ್ರಯತ್ನಗಳನ್ನು ನೋಡಬಹುದು. ಮರಾಠಿ ಸಂದರ್ಭದಲ್ಲಿ ದಲಿತ ಪ್ಯಾಂಥರ್ ಪಾರ್ಟಿಯ ದಿನಗಳಿಂದ ಹಿಡಿದು, ಕನ್ನಡದ ದಲಿತ ಸಾಹಿತ್ಯ ಚಳವಳಿಯವರೆಗೂ ಈ ಅಧ್ಯಯನಗಳ ವ್ಯಾಪ್ತಿಯನ್ನು ನಾವು ನೋಡಬಹುದು.

ಕರಿಯ ಜನಾಂಗದ ಆಫ್ರಿಕನ್ನರು ಮತ್ತು ಭಾರತೀಯ ಸಮಾಜದ ದಲಿತರು ಇತಿಹಾಸದಾದ್ಯಂತ ವರ್ಣ ಮತ್ತು ಜಾತಿಯಾಧಾರಿತ ಶೋಷಣೆಗೆ ಒಳಗಾದವರೆಂದು, ಅವರ ನಡುವಿನ ಸಮಾಜೋ-ಐತಿಹಾಸಿಕ ಅಂಶಗಳು ಅನೇಕ ಸಾಮ್ಯತೆಗಳನ್ನೊಳಗೊಂಡಿವೆಯೆಂಬ ವಾದಗಳನ್ನು ನಾವಿಗಾಗಲೇ ತಿಳಿದುಕೊಂಡಿದ್ದೇವೆ. ರಾಜಕೀಯವಾಗಿ ಕರಿಯರ-ದಲಿತರ ಬೆಸುಗೆಯ ಬಗ್ಗೆ ಅನೇಕ ವಿಚಾರ-ಮಂಥನಗಳು ಸ್ಥಳೀಯವಾಗಿ ಮತ್ತು ಅಂತರಾಷ್ಟ್ರೀಯವಾಗಿ ನಡೆದಿವೆ. 2001ರಲ್ಲಿ ದಕ್ಷಿಣ ಆಫ್ರಿಕಾದ ದರ್ಬಾನ್‌ನಲ್ಲಿ ವರ್ಣಭೇದವನ್ನು ವಿರೋಧಿಸಿ ನಡೆದ ಅಂತರಾಷ್ಟ್ರೀಯ ವಿಚಾರ ಸಂಕಿರಣ ಇದಕ್ಕೆ ಉದಾಹರಣೆ.

ವರ್ಣ, ಜನಾಂಗ ಮತ್ತು ಜಾತಿಯಾಧಾರಿತ ಭೇದ-ಭಾವವು ಒಂದೇ ಮೂಲದಿಂದ ಹುಟ್ಟಿಕೊಂಡಿರುವ ಸಾಮಾಜಿಕ ಅನಿಷ್ಠ ಎಂದು ಅನೇಕರು ಈ ಸಂದರ್ಭದಲ್ಲಿ ತಮ್ಮ ವಾದವನ್ನು ಮಂಡಿಸಿದರು. ಈ ಎಲ್ಲಾ ಬೆಳವಣಿಗೆಗಳ ಮೂಲವನ್ನು ನಾವು ಇತಿಹಾಸದಲ್ಲಿ ನಡೆದ ಕರಿಯರ ಶೋಷಣೆ-ವಿರೋಧಿ ಹೋರಾಟದಲ್ಲಿ ಕಾಣಬಹುದು.

ADVERTISEMENT

20ನೇ ಶತಮಾನದ ಎರಡನೇಯಾರ್ಧದಲ್ಲಿ ಮಾರ್ಟಿನ್ ಲೂಥರ್ ಜ್ಯೂನಿಯರ್ ನಾಯಕತ್ವದ ಚಳವಳಿ ಇರಬಹುದು ಅಥವಾ ಅದಕ್ಕೆ ಮೊದಲು ಆಮೇರಿಕಾದಲ್ಲಿ ಹೊಸ ಸಂಚಲನವನ್ನು ಉಂಟು ಮಾಡಿದ ಹರ‍್ಲೆಮ್ ರಿನೈಸನ್ಸ ಇರಬಹುದು. ಭಾರತದ ದಲಿತ ಚಳುವಳಿ ಈ ಹೋರಾಟಗಳಿಂದ ಸ್ಫೂರ್ತಿಗೊಂಡಿದ್ದು ಇತಿಹಾಸದಲ್ಲಿ ಆಗಿ ಹೋಗಿರುವ ಒಂದು ಘಟ್ಟ. ಇವೆರಡು ಹೋರಾಟಗಳಲ್ಲಿ ನಾವು ಅನೇಕ ಮಹನೀಯರನ್ನು ಹೆಸರಿಸಬಹುದು. ಆದರೆ ಕನ್ನಡ ಮತ್ತು ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಎಲ್ಲಾ ಮಹನೀಯರ ಹೆಸರುಗಳನ್ನು ನಾವು ನೋಡುವುದಿಲ್ಲ. ಯಾಕೆಂದರೆ ಇತಿಹಾಸದ ಪುಟಗಳಲ್ಲಿ ದಾಖಲಾಗದೆ ಮರೆಯಲ್ಪಟ್ಟಿರುವ ಅನೇಕ ಚಾರಿತ್ರಿಕ ವ್ಯಕ್ತಿಗಳು ನಮಗೆ ಗೊತ್ತೇ ಇಲ್ಲ. ಪ್ರಸ್ತುತ ಲೇಖನದಲ್ಲಿ ಹರ‍್ಲೆಮ್ ರಿನೈಸನ್ಸ (ಹರ‍್ಲೆಮ್ ಪುನುರುಜ್ಜೀವನ)ನ ಕಾಲಾವಧಿಯಲ್ಲಿ ಒಬ್ಬ ಕನ್ನಡ ವ್ಯಕ್ತಿಯು ಆಮೇರಿಕಾದ ಹರ‍್ಲೆಮ್ ಹೋರಾಟದಲ್ಲಿ ವಹಿಸಿದ ಪ್ರಮುಖ ಪಾತ್ರದ ಬಗ್ಗೆ ಒಂದೆರಡು ಮಾತುಗಳನ್ನು ಹಂಚಿಕೊಳ್ಳಲಾಗಿದೆ. ಹೀಗೆ ಅಗೋಚರ ಮತ್ತು ಅನಾಮಿಕವಾಗಿ ಆಗಿ ಹೋದ ವ್ಯಕ್ತಿಗಳಲ್ಲಿ ಹುಬ್ಬಳ್ಳಿಯ ಎಚ್.ಜಿ. ಮುದ್ಗಲ್ (ಹುಚ್ಚೆಶ್ವರ ಗುರುಸಿದ್ಧ ಮುದ್ಗಲ್) ಒಬ್ಬರು.

ಮೊದಲಿಗೆ ಏನಿದು ಈ ಹರ‍್ಲೆಮ್ ಚಳುವಳಿ ಅಥವಾ ರಿನೈಸನ್ಸ ಎಂದು ತಿಳಿಯೋಣ. 20ನೇ ಶತಮಾನದ ಮೊದಲೆರಡು ದಶಕಗಳಲ್ಲಿ ಆಫ್ರಿಕ ಮತ್ತು ವೆಸ್ಟ್ ಇಂಡೀಸ್ ಮೂಲದ ಕರಿಯ ಜನರು ದಕ್ಷಿಣ ಭಾಗದ ಆಮೆರಿಕಾದಿಂದ ನ್ಯೂಯಾರ್ಕ್ ಪಟ್ಟಣದ ನೆರೆಯ ಹರ‍್ಲೆಮ್ ಸ್ಥಳಕ್ಕೆ ಕೆಲಸ ಹುಡುಕಿಕೊಂಡು ವಲಸೆ ಹೋದರು. ಹೀಗೆ ಹೋದವರಲ್ಲಿ ಸಾವಿರಾರು ಕರಿಯರು ಹರ‍್ಲೆಮ್‌ನಲ್ಲಿ ಕ್ರಮೇಣ ಹೊಸ ಜಾಗೃತಿಯನ್ನುಂಟು ಮಾಡಿದರು. ಬಿಳಿಯರಿಂದ ತಮ್ಮ ಮೇಲೆ ಆಗುತ್ತಿದ್ದ ದಮನ, ಶೋಷಣೆ ಮತ್ತು ತಾರತಮ್ಯವನ್ನು ಒಕ್ಕೊರಲಿನಿಂದ ವಿರೋಧಿಸಿದರು. ಈ ವಿರೋಧ ಸಾಮಾಜಿಕ ಮತ್ತು ಜನಾಂಗೀಯ ಚಳವಳಿಯನ್ನೇ ಹುಟ್ಟು ಹಾಕಿತು. ಈ ಚಳವಳಿಯು ಕ್ರಮೇಣ ಮಹತ್ತರವಾದ ತಿರುವು ಪಡೆದುಕೊಂಡು ಕರಿಯರ ಸಾಂಸ್ಕೃತಿಕ ಪುನುರುಜ್ಜೀವನಕ್ಕೆ ಎಡೆ ಮಾಡಿಕೊಟ್ಟಿತು. ಕರಿಯರು ತಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟ್ಯ, ಸಂಗೀತ, ತತ್ವ ಮತ್ತು ಪರಂಪರೆಗೆ ಹೊಸ ಮೆರಗನ್ನು ನೀಡಿ, ಆಮೆರಿಕಾದಲ್ಲಿ ತಮ್ಮ ಅನನ್ಯ ಗುರುತನ್ನು ಸ್ಥಾಪಿಸಲು ಪ್ರಯತ್ನಿಸಿದರು. ಈ ದೀರ್ಘ ಕಾಲದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಳವಳಿಯಲ್ಲಿ ಡಬ್ಲ್ಯೂ ಇ.ಬಿ. ದು ಬಾಯ್, ಮರ‍್ಕಸ್ ಗಾರ್ವೆ, ಲ್ಯಾಂಗಸ್ಟನ್ ಹ್ಯೂಜಸ್ ಮತ್ತಿತರು ಪ್ರಮುಖವಾಗಿ ಕೇಳಿ ಬರುವ ಹೆಸರುಗಳು. ಭರದಿಂದ ಸಾಗುತ್ತಿದ್ದ ಈ ಚಳವಳಿಯಲ್ಲಿ ಹುಬ್ಬಳ್ಳಿ ಮೂಲದ 20 ವರ್ಷದ ಕನ್ನಡಿಗ ಮುದ್ಗಲ್ ಸುಮಾರು 1920ರಲ್ಲಿ ಸೇರಿಕೊಳ್ಳುತ್ತಾರೆ. ಕರಿಯರ ಚಳವಳಿಯನ್ನು ಬೆಂಬಲಿಸುತ್ತಾ ನ್ಯೂಯಾರ್ಕ್‌ನಲ್ಲಿ ಹದಿನೇಳು ವರ್ಷಗಳ ಕಾಲ ಚಿರಪರಿಚಿತ ವ್ಯಕ್ತಿಯಾಗಿ ಹೊಮ್ಮುತ್ತಾರೆ.

ಮುದ್ಗಲ್ಲರ ಪೂರ್ವಾಪರದ ಬಗ್ಗೆ ಹೆಚ್ಚು ಮಾಹಿತಿಗಳು ಇನ್ನು ಲಭ್ಯವಿಲ್ಲ. ಅವರು ಯಾರ ಸಲಹೆ ಮೇರೆಗೆ ಆಮೆರಿಕಾಕ್ಕೆ ಹೋದರು ಎಂದು ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ಮೊದಲು ಅವರು ದಕ್ಷಿಣ ಆಫ್ರಿಕಾ ನಂತರ ವೆಸ್ಟ ಇಂಡೀಸ್‌ಗೆ ಹೋಗಿ ಅಲ್ಲಿಂದ ಕ್ಯೂಬಾ, ಸಂತ ಡಾಮಿಂಗೋ ಸೇರಿ ಕೊನೆಗೆ 1920ರ ಸುಮಾರಿಗೆ ನ್ಯೂಯಾರ್ಕ್ ಪಟ್ಟಣಕ್ಕೆ ಬಂದರು. ನಂತರ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ತೌಲನಿಕ ರಾಜ್ಯಶಾಸ್ತ್ರದಲ್ಲಿ ಎಂ.ಎ. ಮತ್ತು ಪಿಎಚ್. ಡಿ ಪಡೆದರು. ತನ್ನ ಶಿಕ್ಷಣಕ್ಕೆ ತಕ್ಕನಾದ ಕೆಲಸ ಸಿಗದೆ ಇದ್ದಾಗ, ಮುದ್ಗಲ್ ನ್ಯೂಯಾರ್ಕ್‌ ವಿಶ್ವವಿದ್ಯಾಲಯದ ಪ್ರೊಫೆಸರೊಬ್ಬರ ಸಲಹೆಯ ಮೇರೆಗೆ ಅಂದು ಆಫ್ರಿಕನ್ ಜನಾಂಗದ ಮುಖವಾಣಿಯಾದ ನಿಗ್ರೊ ವರ್ಲ್ಡ್‌ ಪತ್ರಿಕೆಯಲ್ಲಿ ಸಹಾಯಕ ಸಂಪಾದಕನಾಗಿ ಸೇರಿಕೊಂಡರು. 1924ರಲ್ಲಿ ಅನಿತಾ ಎಂಬ ಮಹಿಳೆಯನ್ನು ಲಗ್ನವಾಗುತ್ತಾರೆ. ಬಹುಭಾಷಿಯಾಗಿದ್ದ ಮುದ್ಗಲ್ ಇಂಗ್ಲೀಷ್, ಕನ್ನಡ ಮತ್ತು ಮರಾಠಿಯಲ್ಲಿ ಅನೇಕ ವಿಚಾರಗಳನ್ನು ಅಭಿವ್ಯಕ್ತಿಗೊಳಿಸಿದ್ದಾರೆ.

ಮುದ್ಗಲ್‌ ಕುರಿತ ಬರಹ

ನಿಗ್ರೊ ವರ್ಲ್ಡ್‌ ಪತ್ರಿಕೆಯ ಒಡೆತನವನ್ನು ಪ್ರಸಿದ್ಧ ಮರ‍್ಕಸ್ ಗಾರ್ವೆ ಹೊಂದಿದ್ದ. ಈ ಪತ್ರಿಕೆಗೆ ಸೇರಿದಾಗಿನಿಂದ ಮುದ್ಗಲ್ ಗಾರ್ವೆಯ ವಿಚಾರಗಳನ್ನು ಮತ್ತು ಕ್ರಾಂತಿಕಾರಕ ತತ್ವವನ್ನು ಈ ಪತ್ರಿಕೆಯ ಮೂಲಕ ಜನಪ್ರಿಯಗೊಳಿಸಿದರು. ಮುದ್ಗಲ್‌ ಅವರ ಬಗ್ಗೆ ನಮ್ಮ ಗಮನ ಸೆಳೆದಿರುವ ಮನನ್ ದೇಸಾಯಿ ಮತ್ತು ತಿಜರತ್ ಗಿಲ್ ರವರು ಹೇಳುವ ಪ್ರಕಾರ 1920ರಿಂದ 1975ರವರೆಗೆ ಕರಿಯರ ರಾಜಕೀಯ ವೇದಿಕೆಗಳಲ್ಲಿ ಮುದ್ಗಲ್ಲರ ಹೆಸರು ಸರ್ವೆಸಮಾನ್ಯವಾಗಿತ್ತು.

ಡಬ್ಲ್ಯೂ.ಇ.ಬಿ. ದು ಬಾಯ್ ಮತ್ತು ಮರ‍್ಕಸ್ ಗಾರ್ವೆಯರ ನಡುವೆ ಹರ‍್ಲೆಮ್ ಚಳುವಳಿಯ ಬಗ್ಗೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ದುಬಾಯ್ ಸಾಮರಸ್ಯದ ಧೋರಣೆಯನ್ನು ಹೊಂದಿದ್ದರೆ, ಗಾರ್ವೆ ಕಠಿಣ/ತೀವ್ರ ಪಂಥದ ಅನುಯಾಯಿ. ಕರಿಯರ ಆರ್ಥಿಕ ಸಬಲತೆಗೆ ಗಾರ್ವೆ ಹೆಚ್ಚು ಗಮನ ನೀಡಿದ. ಆರ್ಥಿಕವಾಗಿ ಸದೃಡತೆಯನ್ನು ಪಡೆದಾಗ ಮಾತ್ರ ಕರಿಯರು ಬಿಳಿಯರ ಸಮನಾಗಿ ನಿಲ್ಲಲು ಸಾಧ್ಯ ಎಂದು ಆತ ನಂಬಿದ್ದ. ಕೆಲವೊಮ್ಮೆ ತೀವ್ರ ಪಂಥೀಯನಾಗಿದ್ದ ಗಾರ್ವೆ ಹಿಂಸೆಯ ದಾರಿಯನ್ನು ಅಲ್ಲಗೆಳೆಯಲಿಲ್ಲ. ಗಾರ್ವೆಯ ಹಿಂಬಾಲಕರಾಗಿ ಮುದ್ಗಲರು ಗಾರ್ವೆಯ ತಾತ್ವಿಕ ಚಿಂತನೆಗಳನ್ನು ತಮ್ಮ ಭಾಷಣ, ಲೇಖನ ಮತ್ತು ವಿಚಾರಗಳ ಮೂಲಕ ಜನಪ್ರಿಯಗೊಳಿಸಿದರು. ಗಾರ್ವೆಯ ಹಾಗೆ ಮುದ್ಗಲ್ ಕೂಡ ಕಮ್ಯುನಿಸ್ಟರ ಅನೇಕ ವಿಚಾರಗಳನ್ನು ಟೀಕಿಸುತ್ತಿದ್ದರು. ಕರಿಯರ ಏಳಿಗೆ, ಪ್ರಗತಿಗೆ ಕಮ್ಯುನಿಸಂನಿಂದ ಮಾತ್ರ ಸಾಧ್ಯ ಎಂಬ ನಂಬಿಕೆಯನ್ನು ಅವರು ಬಲವಾಗಿ ವಿರೋಧಿಸುತ್ತಿದ್ದರು. ಕರಿಯರು ತಮ್ಮ ಪ್ರಗತಿಯನ್ನು ತಾವೇ ಸಾಧಿಸಬೇಕು ಮತ್ತು ಇದಕ್ಕಾಗಿ ಅವರು ಆರ್ಥಿಕವಾಗಿ ಸದೃಢರಾಗಬೇಕೆಂದು ಪ್ರಚಾರ ಮಾಡುತ್ತಿದ್ದರು. ಗಾರ್ವೆಯ ವಿಚಾರಗಳು ಸಮಕಾಲೀನ ಪ್ರಪಂಚಕ್ಕೆ ಹೆಚ್ಚು ಪ್ರಸ್ತುತ ಎಂದು ವಾದಿಸಿರುವ ಮುದ್ಗಲ್ಲರ ಅನೇಕ ಲೇಖನಗಳನ್ನು ನಾವು ನಿಗ್ರೊ ವರ್ಲ್ಡ್‌ ಪತ್ರಿಕೆಯಲ್ಲಿ ನೋಡಬಹುದು.

ಮುದ್ಗಲ್‌ರ ವಿಶೇಷವಿರುವುದು ಗಾರ್ವೆಯ ಮತ್ತು ಗಾಂಧೀಯ ವಿಚಾರಗಳೆರಡಕ್ಕೂ ಒತ್ತನ್ನು ನೀಡಿರುವುದು. ನಿಗ್ರೊ ವರ್ಲ್ಡ್‌, ಫೆಬ್ರವರಿ 14, 1931ರ ಸಂಪಾದಕೀಯ ಪುಟದಲ್ಲಿ ಇವರಿಬ್ಬರ ವಿಚಾರಗಳನ್ನು ಚರ್ಚಿಸಲಾಗಿದೆ. ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ಹರ‍್ಲೆಮ್ ಚಳುವಳಿ ಮತ್ತು ಭಾರತೀಯ ರಾಷ್ಟ್ರೀಯಚಳವಳಿಗಳು ಅನೇಕ ಹೋಲಿಕೆಗಳನ್ನು ಹೊಂದಿವೆಯೆಂದು, ಅವೆರಡು ಸಾಮ್ರಾಜ್ಯಶಾಹಿ ಮತ್ತು ಶೋಷಣೆಯ ವಿರುದ್ಧ ಹೋರಾಡುತ್ತಿರುವುದನ್ನು ಶ್ಲಾಘಿಸಿ ಅನೇಕ ಲೇಖನಗಳನ್ನು ಮುದ್ಗಲ್ ಬರೆದಿದ್ದಾರೆ. ಇದೇ ದಿನದ ಪತ್ರಿಕೆಯಲ್ಲಿ ಗಾಂಧಿ ಮತ್ತು ಗಾರ್ವೆಯ ಅನೇಕ ವಿಚಾರಗಳನ್ನು ಹೋಲಿಸಿ ಅವರಲ್ಲಿರುವ ಸಮಾನ ಅಂಶಗಳ ಬಗ್ಗೆ ಪ್ರಶಂಸೆಯಿಂದ ಬರೆಯಲಾಗಿದೆ. ಇವರಿಬ್ಬರ ಚಳವಳಿಯ ಮಾರ್ಗಗಳು ಭಿನ್ನವಾಗಿದ್ದರೂ ಕೂಡ ಮುದ್ಗಲ್ ಇವರಿಬ್ಬರ ನಡುವೆ ಇರುವ ಸಮಾನ ಅಂಶಗಳನ್ನು ಹೆಕ್ಕಿ ಈ ಎರಡು ಚಳುವಳಿಗಳು ಒಂದನ್ನೊಂದು ಪ್ರಭಾವಿಸಿ, ಸಹಕರಿಸಿ ಬೆಳೆಯಬೇಕು ಎಂದು ಪ್ರತಿಪಾದಿಸುತ್ತಾರೆ. ಅಂದರೆ ಕರಿಯರ ಚಳುವಳಿಗು ಮತ್ತು ಭಾರತೀಯ ಸ್ವಾತಂತ್ರ್ಯ ಚಳವಳಿಗೂ ಇರುವ ಅನೇಕ ಹೋಲಿಕೆಗಳನ್ನು ಚರ್ಚೆ ಮಾಡುತ್ತಾ, ಹೇಗೆ ಇವೆರಡು ಚಳಬಳಿಗಳು ಒಂದಕ್ಕೊಂದು ಪೂರಕವಾಗಿರಬೇಕು ಎಂದು ಪ್ರತಿಪಾದಿಸಿದರು. ನಿಗ್ರೊ ವರ್ಲ್ಡ್ ಪತ್ರಿಕೆಯಲ್ಲಿ ಇಂಗ್ಲಿಷ್‌ ಲೇಖನಗಳನ್ನು (ಏಪ್ರಿಲ್ 30, 1931) ಬರೆದಿರುವ ಮುದ್ಗಲ್ ಕರಿಯರು ತಮ್ಮ ಮೈ ಬಣ್ಣದ ಬಗ್ಗೆ ಕಿಳರಿಮೆಯನ್ನು ಹೊಂದದೆ, ಹೆಮ್ಮೆಪಡಬೇಕು ಎಂದು ಕರೆಕೊಟ್ಟಿದ್ದಾರೆ. ಕರಿಯರ ಮೇಲೆ ಆಮೆರಿಕಾದಲ್ಲಿ ಆಗುತ್ತಿದ್ದ ದಬ್ಬಾಳಿಕೆ, ಹತ್ಯೆಗಳು ಮತ್ತು ಹಿಂಸೆಯನ್ನು ವಿರೋಧಿಸಿ ಬರೆಯಲ್ಪಟ್ಟ ಕವನಗಳನ್ನು ಸಂಗ್ರಹಿಸಿ, ಪ್ರಕಟಿಸುವ ಯೋಜನೆಯನ್ನು ಕೂಡ ಮುದ್ಗಲ್ ಹೊಂದಿದ್ದರು.

ಇಷ್ಟ್ಟೆಲ್ಲ ದಮನಿತರ ಪರವಾಗಿದ್ದರೂ, ಎಲ್ಲಿಯೂ ಅವರು ಭಾರತದಲ್ಲಿ ದಲಿತರ ಮೇಲೆ ಆಗುತ್ತಿದ್ದ ಶೋಷಣೆಯ ಬಗ್ಗೆ ಮಾತನಾಡಿರುವ ಉದಾಹರಣೆಗಳಿಲ್ಲ. ಅಥವಾ ದಲಿತ-ಕರಿಯರ ಶೋಷಣೆಯ ಹೋಲಿಕೆ/ಸಮಾನ ಅಂಶಗಳ ಬಗ್ಗೆ ಅವರು ಕಳಕಳಿಯನ್ನು ವ್ಯಕ್ತಪಡಿಸಿರುವುದು ಕಾಣುವುದಿಲ್ಲ. ಅಂಬೇಡ್ಕರರು ಈಗಾಗಲೇ ಭಾರತದಲ್ಲಿ ದಲಿತರ ದನಿಯಾಗಿ ಹೊರಹೊಮ್ಮಿದ್ದರೂ ಕೂಡ, ಅವರ ಬಗ್ಗೆ ಮುದ್ಗಲ್ ಉಲ್ಲೆಖಿಸಿರುವುದು ಎಲ್ಲಿಯೂ ಕಾಣುವುದಿಲ್ಲ. ಬದಲಾಗಿ ಭಾರತೀಯರ ಆರ್ಯ ಮೂಲದ ಹಿನ್ನಲೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡಿರುವ ಅಂಶಗಳು ಅವರ ಕನ್ನಡ ಲೇಖನಗಳಲ್ಲಿ (ಕಳೆದುಂಬಿದ ಕನ್ನಡಿಗರು ಎಂಬ ಕನ್ನಡ ಗದ್ಯ ನಾಟಕ) ಕಾಣುತ್ತವೆ.

ನ್ಯೂಯಾರ್ಕನಲ್ಲಿ ಬಿಳಿಯರ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡ ಮುದ್ಗಲ್ ಕನ್ನಡವನ್ನು ಮರೆಯಲಿಲ್ಲ. ಅಲ್ಲಿಂದಲೇ ತಮ್ಮ ಕನ್ನಡ ಮತ್ತು ಕನ್ನಡ ಸಂಸ್ಕೃತಿಯ ಬಗ್ಗೆ ಇರುವ ಪ್ರೇಮವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಆಲೂರು ವೆಂಕಟರಾವ್‌ರ ಸಂಪಾದಕತ್ವದಲ್ಲಿ ಹೊರ ಬರುತ್ತಿದ್ದ ಜಯ ಕರ್ನಾಟಕ ಪತ್ರಿಕೆಯಲ್ಲಿ ಮುದ್ಗಲ್ ತಮ್ಮ ಸೃಜನಶೀಲ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಕಟಗೊಂಡ ಲೇಖನಗಳಲ್ಲಿ ಒಂದು ನಾಟಕ (ಕಳೆದುಂಬಿದ ಕನ್ನಡಿಗರು, 1922), ಲೇಖನ (‘ಕರ್ನಾಟಕವು ಹೇಗೆ ಮುಂದೆ ಬಂದೀತು’, 1922) ಮತ್ತು ಒಂದು ಸಣ್ಣ ಕತೆ (ಮುದ್ದು, 1923), ಪ್ರಮುಖವಾಗಿರುವಂತದ್ದು. ಕಳೆದುಂಬಿದ ಕನ್ನಡಿಗರು ಎಂಬ ಗದ್ಯ ನಾಟಕವನ್ನು ‘ಕನ್ನಡ ತರುಣರಲ್ಲಿ ಹೊಸ ಸ್ಪೂರ್ತಿಯನ್ನು ಹುಟ್ಟಿಸುವದಕ್ಕಾಗಿ ಬರೆದಿದೆ’ ಎಂದು ಮುದ್ಕಲ್‌ರವರು ನಾಟಕದ ಪರಿಚಯದಲ್ಲಿ ಬರೆದುಕೊಂಡಿದ್ದಾರೆ. ಈ ನಾಟಕದಾದ್ಯಂತ ಕರ್ನಾಟಕವು ಪರಕೀಯರ ದಾಸ್ಯದಿಂದ (ಬ್ರಿಟಿಷ್ ಮತ್ತು ಮರಾಠಿಯರ ದಬ್ಬಾಳಿಕೆ) ಮುಕ್ತವಾಗಬೇಕೆಂಬ ಕಳಕಳಿ ಇದೆ. ಕರ್ನಾಟಕ ಏಕೀಕರಣದ ಬಗ್ಗೆ ಕಾಳಜಿಯ ಮಾತುಗಳಿವೆ. ಕರ್ನಾಟಕವು ಹೇಗೆ ಮುಂದೆ ಬಂದೀತು ಎಂಬ ಲೇಖನದಲ್ಲಿ ಕನ್ನಡಿಗರು ಹೇಗೆ ವಿದ್ಯೆಗೆ ಮಹತ್ವವನ್ನು ನೀಡಿ, ವಿದ್ಯಾವಂತರಾಗಿ ಮುಂದೆ ಬರಬೇಕು ಎಂದು ಆಗ್ರಹಿಸಿದ್ದಾರೆ. ‘ಮುದ್ದು’ ಎಂಬ ಮತ್ತೊಂದು ನಾಟಕದಲ್ಲಿ ನಿಸರ್ಗ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಶೃಂಗಾರಮಯವಾಗಿ ವರ್ಣಿಸಿದ್ದಾರೆ. ನೀಲಲೊಚನ (ಅವರ ಮಗಳ ಹೆಸರು ಕೂಡ ಇದೇ ಆಗಿತ್ತು) ಎಂಬ ಪಾತ್ರವನ್ನು ಸೃಷ್ಟಿ ಮಾಡಿ ಆಕೆಯ ಮೂಲಕ ಪ್ರಕೃತಿಯ ಸೊಬಗು ಮತ್ತು ವಿಸ್ಮಯವನ್ನು ವರ್ಣಿಸಲಾಗಿದೆ.

1937ರಲ್ಲಿ ಭಾರತಕ್ಕೆ ಮರಳಿದ ಮುದ್ಗಲ್ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೊ, ಇಲ್ಲವೊ ಎಂಬುದು ಹೆಚ್ಚಾಗಿ ತಿಳಿದಿಲ್ಲ. ಹರ‍್ಲೆಮ್ ಚಳುವಳಿಯಲ್ಲಿ ಭಾಗವಹಿಸಿ, ಬಿಳಿಯರ ಶೋಷಣೆ ಮತ್ತು ಸಾಮ್ರಾಜ್ಯಶಾಹಿಯನ್ನು ವಿರೋಧಿಸಿದ ಮುದ್ಗಲ್ ಭಾರತದಲ್ಲಿ ವಿವಾದಕ್ಕೊಳಗಾಗುವ ಸನ್ನಿವೇಶಕ್ಕೆ ಸಿಲುಕಿದರು. 1950ರ ನೆಹರು ಸರ್ಕಾರದಲ್ಲಿ ಬಾಂಬೆಯನ್ನು ಪ್ರತಿನಿಧಿಸುವ ಪಾರ್ಲಿಮೆಂಟ್‌ನ ಸದಸ್ಯರಾಗಿದ್ದ ಅವರು ಭ್ರಷ್ಟಾಚಾರದ ಆರೋಪದ ಮೇಲೆ ಪಾರ್ಲಿಮೆಂಟ್‌ನ ಸದಸ್ಯತ್ವದಿಂದ ಉಚ್ಛಾಟಿಸಲ್ಪಟ್ಟರು. ಹೀಗೆ ಉಚ್ಚಾಸಿಲ್ಪಟ್ಟ ಪಾರ್ಲಿಮೆಂಟ್‌ನ ಪ್ರಥಮ ಸದಸ್ಯರು ಇವರೆ ಎಂಬ ದಾಖಲೆ ಕೂಡ ಇದೆ. ಹೀಗೆ ವಿಪರ್ಯಾಸ ಮತ್ತು ವೈರುಧ್ಯಗಳಿಂದ ಕೂಡಿದ ಮುದ್ಗಲ್‌ರಂತಹ ವ್ಯಕ್ತಿಗಳು ಇತಿಹಾಸದಲ್ಲಿ ಆರಿ ಹೋದ ನಕ್ಷತ್ರಗಳಂತೆ. ಅವರಂತಹ ವ್ಯಕ್ತಿಗಳ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುವ ಅವಶ್ಯಕತೆ ಮತ್ತು ಜವಾಬ್ದಾರಿ ಇತಿಹಾಸಕಾರರ ಹೆಗಲ ಮೇಲೆ ಇದೆ.

(ಲೇಖಕ ಸಹ ಪ್ರಾಧ್ಯಾಪಕ (ಇಂಗ್ಲಿಷ್‌ ವಿಭಾಗ) ಮೈಸೂರು ವಿಶ್ವವಿದ್ಯಾಲಯ ಮೈಸೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.