ಸಾಗರದಿಂದ ಹೆಗ್ಗೋಡಿಗೆ ಹೋಗುವ ಮಾರ್ಗದ ಬಲಭಾಗದಲ್ಲಿ ರಾಮನಗರವೆಂಬ ಜನವಸತಿ ಪ್ರದೇಶವಿದೆ. ಈಗೊಂದು 25 ವರ್ಷಗಳ ಹಿಂದೆ ಅಲ್ಲಿ ಹೇರಳವಾದ ಕಾಡಿತ್ತು. ಅಸಂಖ್ಯ ಜೀವಿವೈವಿಧ್ಯಗಳ ತವರಾಗಿದ್ದ ಅಬೇಧ್ಯವಾದ ಕಾಡನ್ನು ಸಾಗರ ನಗರ ನುಂಗಿಹಾಕಿತು. ಜನರಹಿತವಾಗಿದ್ದ ದಟ್ಟಾರಣ್ಯವನ್ನು ಜನರ ಹಿತಕ್ಕಾಗಿ ಬಲಿಕೊಡಲಾಯಿತು. ಅಲ್ಲೀಗ ಸಾವಿರಕ್ಕೂ ಹೆಚ್ಚು ಮನೆಗಳಿವೆ. ಸರ್ಕಾರವೂ ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕೆಂದು ಅಲ್ಲಿ ಆಶ್ರಯ ನಿವೇಶನಗಳನ್ನು ರಚಿಸಿತು. ಈಗೊಂದು ಹತ್ತು ವರ್ಷಗಳ ಹಿಂದೆ ರಾಮನಗರಕ್ಕೆ ತಾಗಿಕೊಂಡಂತೆ, ಇದ್ದ ನೂರು ಎಕರೆ ಪ್ರದೇಶದಲ್ಲಿ ಐ.ಟಿ.ಐ. ಕಾಲೇಜನ್ನು ಕಟ್ಟಲಾಯಿತು. ಈಗ ರಾಮನಗರ ಬೆಳೆಯುತ್ತಾ ಓತಿಗೋಡು ಊರಿನತ್ತ ಸಾಗಿದೆ. 1980ರಲ್ಲೇ ಎಂ.ಪಿ.ಎಂ. ಕಾರ್ಖಾನೆಗೆ ಕಚ್ಚಾ ಸಾಮಗ್ರಿಗಳನ್ನು ಒದಗಿಸಲು, ಇದೇ ಪ್ರದೇಶದಲ್ಲಿದ್ದ ನೈಸರ್ಗಿಕ ಕಾಡನ್ನು ಬುಲ್ಡೋಜರ್ ಬಳಸಿ ಕಿತ್ತುಹಾಕಿ, ಅಕೇಶಿಯಾ ನೆಡಲಾಗಿತ್ತು. ಜೀವಿವೈವಿಧ್ಯಕ್ಕೆ ಯಾವುದೇ ತರಹದ ಸೇವೆ ನೀಡದ ಅಕೇಶಿಯಾವೆಂಬ ಪ್ಲಾಸ್ಟಿಕ್ ಕಾಡು ಕಾಟಿಗಳ, ಜಿಂಕೆ-ಕಾನುಕುರಿಗಳ ಊಟವನ್ನು ಕಸಿಯಿತು. ಅವು ಅನಿವಾರ್ಯವಾಗಿ ರೈತರ ಬೆಳೆ ಪ್ರದೇಶಕ್ಕೆ ಬರುವ ಹಾಗಾಯಿತು.
ಗಾಂಧಿ ಜಯಂತಿಯ ಮುನ್ನಾದಿನದಂದು, ದೇಶದ ಸುಮಾರು ಆರು ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿತ್ತು. ಅದೇ ಹೊತ್ತಿನಲ್ಲಿ ಅರಣ್ಯ ಇಲಾಖೆಗೆ ದೂರವಾಣಿ ಕರೆ ಬಂತು. ರಾಮನಗರದ ವಸತಿ ಪ್ರದೇಶದ ಅಂಚಿನಲ್ಲಿ ಹೆಬ್ಬಾವೊಂದು ನರಿಯನ್ನು ಹಿಡಿದಿದೆ, ನಮಗೆ ರಕ್ಷಣೆ ಕೊಡಿ! ರಕ್ಷಣಾ, ಪೋಲೀಸ್ ಇಲಾಖೆಯ ಹಾಗೆಯೇ ಅರಣ್ಯ ಸಿಬ್ಬಂದಿಯದ್ದೂ 24x7 ಡ್ಯೂಟಿ. ರಜಾದಿನವೆಂದು ಕಾಲುದ್ದ ಮಾಡಿ ಮಲಗುವ ಹಾಗಿಲ್ಲ. ಸಿಬ್ಬಂದಿಯು ಸ್ಥಳಕ್ಕೆ ದೌಡಾಯಿಸುವ ಹೊತ್ತಿಗೆ ರಾಮನಗರದ ಸಾಕಷ್ಟು ಜನ ಹೆಬ್ಬಾವಿನ ಸುತ್ತ ನೆರೆದಾಗಿತ್ತು. ಅದೆಷ್ಟು ದಿನಗಳಿಂದ ಹೊಂಚಿ ಕುಳಿತು ತನ್ನ ಊಟವನ್ನು ಹಿಡಿದಿತ್ತೋ? ಉಸಿರುಗಟ್ಟಿಸಿ ಕೊಂದುಕೊಂಡ ನರಿಯನ್ನು ತಿನ್ನುವ ಭಾಗ್ಯ ಹೆಬ್ಬಾವಿಗೆ ಇಲ್ಲದಾಯಿತು. ಹೆಬ್ಬಾವಿನ ಬೇಟೆ ಮಾಡುವ ಹಾಗೂ ಬಲಿಯನ್ನು ಕೊಲ್ಲುವ ವಿಧಾನ ತುಂಬಾ ವಿಶಿಷ್ಟವಾದದು. ಹೊಂಚು ಹಾಕಿಕೊಂಡು ಒಂದು ಸ್ಥಳದಲ್ಲಿ ಚಲನಾರಹಿತ ಸ್ಥಿತಿಯಲ್ಲಿ ಇರುವ ಹೆಬ್ಬಾವು ಬಲಿ ಎಟಗುವಷ್ಟು ಸಮೀಪ ಬಂದಾಗ ಮಿಂಚಿನ ವೇಗದಲ್ಲಿ ದಾಳಿ ಮಾಡುತ್ತದೆ. ಇಡೀ ಬಲಿಯನ್ನು ಬಲವಾಗಿ ಸುತ್ತಿಕೊಂಡು ಉಸಿರುಗಟ್ಟಿಸುತ್ತದೆ. ಗಾಬರಿಗೊಂಡ ಬಲಿಯು ತಪ್ಪಿಸಿಕೊಳ್ಳಲು ಹೋದಷ್ಟೂ ಅದರ ಸಾವು ಹತ್ತಿರವಾದಂತೆ. ಬಲಿಯು ಉಸಿರನ್ನು ನಿಶ್ವಾಸಗೊಳಿಸಿದಾಗ, ಹೆಬ್ಬಾವು ತನ್ನ ಹಿಡಿತವನ್ನು ಮತ್ತಷ್ಟು ಬಿಗಿಮಾಡುತ್ತದೆ. ಬಲಿಯ ರಕ್ತ ಸಂಚಾರವನ್ನು ನಿಲ್ಲಿಸಿ, ಉಸಿರುಗಟ್ಟಿಸಿ ಒಂದೆರಡು ನಿಮಿಷದಲ್ಲಿ ಬಲಿಯನ್ನು ಕೊಲ್ಲುತ್ತದೆ. ಬಲಿಯು ನಿಶ್ಚೇಷ್ಟಿತಗೊಂಡ ಮೇಲೆ ತನ್ನ ಹಿಡಿತವನ್ನು ಸಡಿಲಗೊಳಿಸಿ, ಬಲಿಯನ್ನು ಅದರ ತಲೆಯ ಭಾಗದಿಂದ ನುಂಗುತ್ತದೆ. ಬಲಿಪ್ರಾಣಿಯ ಗಾತ್ರದ ಮೇಲೆ ಹೆಬ್ಬಾವಿನ ಊಟ ಪೂರೈಸಲು ಹಿಡಿಯುವ ಸಮಯ ನಿರ್ಧರಿತವಾಗುತ್ತದೆ. ದೊಡ್ಡ ಪ್ರಾಣಿಯಾದಲ್ಲಿ ಹಲವು ತಾಸುಗಳು ಬೇಕಾಗುತ್ತದೆ.
ಮಲೆನಾಡಿನಲ್ಲಿ ಹೆಬ್ಬಾವಿನ ಕುರಿತಾಗಿ ಒಂದು ಜನಪ್ರಿಯ ಕಟ್ಟುಕತೆಯಿದೆ. ಹೆಬ್ಬಾವು ತನ್ನ ಬಲಿಯನ್ನು ನುಂಗಿದ ನಂತರದಲ್ಲಿ, ದೊಡ್ಡ ಮರಕ್ಕೆ ಸುತ್ತಿಕೊಳ್ಳುತ್ತದಂತೆ. ಬಲಿ ಪ್ರಾಣಿಯ ಎಲುಬು, ಕೋಡು ಇತ್ಯಾದಿ ಪುಡಿ ಪುಡಿಯಾಗುತ್ತವಂತೆ. ಚೂಪಾದ ಕೆಲವು ಎಲುಬಿನ ತುಂಡುಗಳು ಹೆಬ್ಬಾವಿನ ಹೊಟ್ಟೆಯನ್ನು ಬಗೆದು ಹೊರಗೆ ಬರುತ್ತವಂತೆ. ಆಮೇಲೆ ಹೆಬ್ಬಾವಿಗೆ ಆದ ಗಾಯ ವಾಸಿಯಾಗುತ್ತದೆಯಂತೆ. ಇದು ಕತೆಯಷ್ಟೆ. ವಾಸ್ತವವಾಗಿ ಹೆಬ್ಬಾವಿನ ಕರುಳಿನ ಜೀರ್ಣ ಕಿಣ್ವಗಳು ತೀವ್ರತರವಾಗಿರುತ್ತವೆ. ಕೋಡು ಎಲುಬಿನ ಸಮೇತ ಹೊಟ್ಟೆಯಲ್ಲಿ ಜೀರ್ಣವಾದಂತೆ, ಸಕಲವೂ ಜೀರ್ಣಗೊಳ್ಳುತ್ತವೆ ಎನ್ನುವುದು ಜೀವವಿಜ್ಞಾನಿಗಳು ಕಂಡುಕೊಂಡಿರುವ ಸತ್ಯ.
ಎರಡು ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದ ಜಾವಳಿ ಸಮೀಪದ ಕಾಫಿತೋಟವೊಂದರಲ್ಲಿ ಹೆಬ್ಬಾವೊಂದು ಕಾನುಕುರಿಯನ್ನು ಬೇಟೆಯಾಡಿ ನುಂಗಿತ್ತು. ಕಾಫಿತೋಟದ ಮಾಲೀಕರ ದೂರಿನ ಆಧಾರದ ಮೇಲೆ ಅಲ್ಲಿನ ಅರಣ್ಯ ಇಲಾಖೆಯವರು ಹೆಬ್ಬಾವನ್ನು ಹಿಡಿದು ಚಾರ್ಮಾಡಿ ಘಾಟಿಯಲ್ಲಿ ಬಿಟ್ಟಿದ್ದರು. ಈ ಪ್ರಕ್ರಿಯೆಯಲ್ಲಿ ಹೆಬ್ಬಾವು ತಾನು ನುಂಗಿದ ಕಾನುಕುರಿಯನ್ನು ವಾಂತಿ ಮಾಡಿತ್ತು. ಕಾನುಕುರಿಯನ್ನು ನುಂಗಿ ಭಾರವಾಗಿದ್ದ ಹೆಬ್ಬಾವು, ಜನರಿಂದ ಬಂಧಿಯಾಗುವುರಿಂದ ತಪ್ಪಿಸಿಕೊಳ್ಳಲು ತನ್ನ ಬಲಿಯನ್ನು ವಾಂತಿ ಮಾಡುವುದರ ಮೂಲಕ ತನ್ನ ತೂಕವನ್ನು ಕಡಿಮೆಮಾಡಿಕೊಂಡಿತ್ತು. ಒಮ್ಮೆ ನುಂಗಿದ ಬೇಟೆಯನ್ನು ಬಲವಂತವಾಗಿ ಹೊರಹಾಕುವ ಸಂದರ್ಭ ಬಂದಲ್ಲಿ ಅದು ಹೆಬ್ಬಾವಿನ ಜೀರ್ಣಾಂಗಗಳಿಗೆ ಗಾಸಿಯಾಗಿ ಅದಕ್ಕೆ ಪ್ರಾಣಪಾಯವಾಗುವ ಅಪಾಯವಿರುತ್ತದೆ.
ಸುತ್ತಮುತ್ತಲೂ ಜನಸಂದಣಿ, ತಲೆಗೊಂದು ಮಾತು, ಚಿಕ್ಕಪುಟ್ಟ ಕಲ್ಲುಗಳನ್ನು ತೂರುವುದು. ಬಹಳ ಸಾಹಸದಿಂದ ಹಿಡಿದ ತುತ್ತಿನ ಕೂಳನ್ನು ಬಿಡುವ ಅನಿವಾರ್ಯ ಹೆಬ್ಬಾವಿಗೆ ಒದಗಿಬಂತು. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬರುವ ಹೊತ್ತಿಗೆ ಜನಸಂದಣಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕಾರಣಕ್ಕೆ ಹೆಬ್ಬಾವು ಬಿಗಿಯಾದ ತನ್ನ ಹಿಡಿತವನ್ನು ಸಡಿಲಿಸಿ, ಬಲಿಯನ್ನು ಬಿಟ್ಟು ಪೂರ್ವಾಭಿಮುಖವಾಗಿ ಇಳಿಜಾರಿನಲ್ಲಿ ಚಲಿಸಿತು. ಹೆಬ್ಬಾವನ್ನು ಹಿಡಿದುಕೊಂಡು ಹೋಗಿ ದೂರದಲ್ಲಿ ಬಿಡಿ ಎಂಬ ಜನರ ಬೇಡಿಕೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಮಾನ್ಯ ಮಾಡಲಿಲ್ಲ. ಅದರಷ್ಟಕ್ಕೆ ಅದು ಕಾಡಿಗೆ ಹೋಗಿ ಬದುಕಿಕೊಳ್ಳುತ್ತದೆ ಎಂದರು. ಇತ್ತ ಸತ್ತ ನರಿಯನ್ನು ಎತ್ತಿಕೊಂಡ ಯುವಕರ ಗುಂಪು ಸೆಲ್ಫಿ ತೆಗೆದುಕೊಳ್ಳುವ ಭರಾಟೆಯಲ್ಲಿ ತೊಡಗಿತ್ತು. ರಾಮನಗರದ ಜನವಸತಿ ಪ್ರದೇಶದ ಹಿಂಭಾಗದಲ್ಲಿ ಲಿಂಗದಹಳ್ಳಿ ಗ್ರಾಮಕ್ಕೆ ಸೇರಿದ ಒಂದಿಷ್ಟು ಅರಣ್ಯ ಪ್ರದೇಶ ಇನ್ನೂ ಉಳಿದುಕೊಂಡಿದೆ. ಪೇಟೆಗೆ ಹತ್ತಿರವಿದ್ದ ಪ್ರದೇಶಗಳು ಪೇಟೆಯ ಬೆಳೆಯುವ ವೇಗಕ್ಕೆ ಬಲಿಯಾಗುತ್ತವೆ. ಆದರೆ, ಸುಮಾರು ಐದುನೂರು ಎಕರೆಯಷ್ಟು ಕಾಡು ಇಲ್ಲಿ ಕಾನೂನುಬದ್ಧವಾಗಿ ಉಳಿದುಕೊಂಡಿದೆ. ಆ ಕಾಡಿನ ಇಳಿಜಾರಿನಲ್ಲಿ ಹರಿದುಹೋದ ಹೆಬ್ಬಾವು, ಸುಮಾರು ಐದುನೂರು ಮೀಟರ್ ಚಲಿಸಿ, ಆ ಗ್ರಾಮದ ಒಬ್ಬರ ಅಡಕೆ ತೋಟಕ್ಕೆ ಇಳಿಯಿತು. ಹೆಬ್ಬಾವಿಗೆ ಇಲ್ಲೂ ಫಜೀತಿ ತಪ್ಪಲಿಲ್ಲ. 12 ಅಡಿಯಷ್ಟು ದೊಡ್ಡದಾದ ಹೆಬ್ಬಾವನ್ನು ನೋಡಿದ ಕೆಲಸದವರು ತೋಟದ ಮಾಲೀಕರಿಗೆ ತಿಳಿಸಿದರು. ಮಾಲೀಕರು ಮತ್ತೆ ಅರಣ್ಯ ಇಲಾಖೆಗೆ ಕರೆ ಮಾಡಿದರು. ಹೊಟ್ಟೆಗಿಲ್ಲದ ಹೆಬ್ಬಾವನ್ನು ಹಿಡಿದು ದೂರ ಸಾಗಿಸುವ ಅನಿವಾರ್ಯಕ್ಕೆ ಅರಣ್ಯ ಇಲಾಖೆ ಸಿಕ್ಕಿಕೊಂಡಿತು.
ವಿವಿಧ ರೀತಿಯ ಪ್ರಾಣಿಗಳು ತಮ್ಮ ಆವಾಸಸ್ಥಾನದಲ್ಲಿ ಒಂದು ಗಡಿಯಲ್ಲಿ ಬದುಕಿಕೊಂಡಿರುತ್ತವೆ. ಹೆಬ್ಬಾವಿನಂತಹ ಜೀವಿಗೆ ಸಾಮಾನ್ಯವಾಗಿ ಅದರ ಗಡಿ ಅದರ ಮೂಲ ಸ್ಥಾನದಿಂದ 2-3 ಕಿಲೋಮೀಟರ್ ಸುತ್ತಳತೆಯಾಗಿರುತ್ತದೆ. ಅದನ್ನು ಹಿಡಿದು ನೀವು ಅದರ ಆವಾಸಸ್ಥಾನದಿಂದ ಬಹುದೂರಕ್ಕೆ ಬಿಟ್ಟರೆ, ಅದು ಅಲ್ಲಿನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ವಿಷರಹಿತವಾದ ಹೆಬ್ಬಾವನ್ನು ಉರಗ ಸಂರಕ್ಷಕರಾದ ಅನೂಪ್ ಹಿಡಿದು ಚೀಲಕ್ಕೇನೊ ತುಂಬಿದರು. ಅದನ್ನು ಎಲ್ಲಿ ಬಿಡುವುದು ಎಂಬ ಜಿಜ್ಞಾಸೆ ಶುರುವಾಯಿತು. ಅದು ಹಾಲಿ ವಾಸ ಮಾಡುತ್ತಿರುವ ಕಾಡಿನಲ್ಲೇ ಬಿಡಲು ಊರಿನ ಜನ ಒಪ್ಪುವುದಿಲ್ಲ. ಪೇಟೆಯ ಹತ್ತಿರದ ಯಲಗಳಲೆ ಕಾಡಿಗೆ ಬಿಡೋಣವೆಂದು ಒಂದು ಬಾರಿ ಯೋಚಿಸಿಲಾಯಿತು. ಆದರೆ, ಅಲ್ಲೂ ಜನವಸತಿ ಪ್ರದೇಶ ಹತ್ತಿರವಿದೆ. ಅಲ್ಲದೇ ಆ ಊರಿನ ಜಾನುವಾರುಗಳು ಕಾಡಿಗೆ ಮೇಯಲು ಹೋಗುತ್ತವೆ. ಜೊತೆಗೆ ಮಧ್ಯದಲ್ಲಿ ಹೊಸನಗರಕ್ಕೆ ಹೋಗುವ ರಸ್ತೆಯಿದೆ. ಒಂದೊಮ್ಮೆ ಹೆಬ್ಬಾವು ರಸ್ತೆ ದಾಟುವ ಸಂದರ್ಭ ಬಂದಲ್ಲಿ, ಅಪಘಾತವಾಗುವ ಸಾಧ್ಯತೆಯೂ ಇದೆ. ಹೀಗೆಲ್ಲಾ ಯೋಚನೆ ಮಾಡಿ, ಶರಾವತಿ ಹಿನ್ನೀರಿನ ಸಮೀಪದ ಕಾಡಿನಲ್ಲಿ ಬಿಡುವುದು ಎಂದು ಯೋಜಿಸಲಾಯಿತು.
ಹೆಬ್ಬಾವಿನ ಕಠಿಣವಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸತ್ತುಹೋದ ನರಿಯನ್ನು ಏನು ಮಾಡುವುದು? ಹೆಬ್ಬಾವನ್ನು ಬಿಡುವ ಸ್ಥಳದಲ್ಲೇ ನರಿಯ ಶವವನ್ನೂ ಹಾಕಿದ್ದರೆ, ಹೆಬ್ಬಾವು ಮತ್ತೆ ಅದನ್ನು ತಿನ್ನುವ ಸಾಧ್ಯತೆಯಿತ್ತಾ? ಬಹುಶಃ ಇಲ್ಲವೆಂದು ಹೇಳಬಹುದು. ಏಕೆಂದರೆ, ಈಗಾಗಲೇ ಸತ್ತ ನರಿಯನ್ನು ಎತ್ತಿಕೊಂಡು ಹಲವರು ಸೆಲ್ಫಿ ತೆಗೆದಿದ್ದರು, ಮನುಷ್ಯರ ವಾಸನೆ ನರಿಯ ಮೈಯಲ್ಲಿತ್ತು. ಇಲಾಖೆಗೆ ಈಗ ಎರಡು ಸಂಕಟಗಳು ಒಟ್ಟಿಗೆ ಕೂಡಿ ಬಂದಹಾಗೆ ಆಗಿತ್ತು. ಸತ್ತ ನರಿಯನ್ನು ನಿಯಮಗಳ ಪ್ರಕಾರ ನಿರ್ವಹಣೆ ಮಾಡಬೇಕು. ಜೊತೆಗೆ ಹೆಬ್ಬಾವನ್ನು ಸುರಕ್ಷಿತ ಸ್ಥಳದಲ್ಲಿ ಬಿಡಬೇಕು. ಮೊದಲನೆಯದಾಗಿ, ನರಿಯನ್ನು ಪಶುಚಿಕಿತ್ಸಾ ವೈದ್ಯರು ತಪಾಸಣೆ ಮಾಡಿ, ಅದು ಸತ್ತಿದೆಯೆಂದು ಅಧಿಕೃತವಾಗಿ ಘೋಷಣೆ ಮಾಡಿದರು. ನಂತರದಲ್ಲಿ ಒಂದೈವತ್ತು ಕೆ.ಜಿ. ಒಣಕಟ್ಟಿಗೆಯನ್ನು ಹಾಕಿ ನರಿಯ ಶವವನ್ನು ಸುಟ್ಟುಹಾಕಲಾಯಿತು.
ರಾಮನಗರದ ಜನರು ನರಿಯನ್ನು ಹಿಡಿದ ಹೆಬ್ಬಾವನ್ನು ನೋಡಿದ ನಂತರದಲ್ಲಿ, ಒಂದಿಷ್ಟು ಸಂಯಮದಿಂದ ವರ್ತಿಸಿದ್ದರೆ, ಹೆಬ್ಬಾವಿಗೆ ಭೂರಿ ಭೋಜನವಾಗುತ್ತಿತ್ತು. ಕನಿಷ್ಠ ಇನ್ನು ನಾಲ್ಕು ತಿಂಗಳು ಅದು ತಿಂದ ನರಿಯನ್ನು ಸುರಕ್ಷಿತ ಪ್ರದೇಶದಲ್ಲಿ ಜೀರ್ಣಗೊಳಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿತ್ತು. ಜೀವಿವೈವಿಧ್ಯಗಳ ಅಥವಾ ವನ್ಯಜೀವಿಗಳ ಕುರಿತಾಗಿ ಜಾಗೃತಿಯಿಲ್ಲದ ಕಾರಣಕ್ಕೆ ಹೆಬ್ಬಾವು ಅನ್ಯಾಯವಾಗಿ ತನ್ನ ತುತ್ತು ಕಳೆದುಕೊಂಡಿತು. ಮಲೆನಾಡಿನಲ್ಲೂ ಅಪರೂಪವಾಗುತ್ತಿರುವ ನರಿಯೊಂದು ಹೆಬ್ಬಾವಿಗಾಗಿ ತನ್ನ ಪ್ರಾಣ ತೆತ್ತರೂ, ಅದರ ತ್ಯಾಗ ಸಾರ್ಥಕವಾಗಲಿಲ್ಲವೆಂಬುದೇ ಈ ಹೊತ್ತಿನ ದುರಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.