ADVERTISEMENT

ಕಾಲದ ಬೇಡಿಕೆಗೆ ಸ್ಪಂದಿಸುತಲಿ...

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:00 IST
Last Updated 23 ಫೆಬ್ರುವರಿ 2019, 20:00 IST

ಪ್ರಜಾವಾಣಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೂತನವಾಗಿ ಸ್ಥಾಪಿಸಿರುವ ಪ್ರಶಸ್ತಿಗೆ ಭಾಜನವಾಗಿದೆ ಎಂಬ ಸುದ್ದಿಯನ್ನು ಮೊನ್ನೆ ಮುಂಜಾನೆ ಓದಿದಾಗ ಮೈಮನಗಳಲ್ಲಿ ಪುಳಕ. ಸಹಜವಾಗಿಯೇ, ಇದಕ್ಕೆ ಪ್ರಜಾವಾಣಿಯೊಂದಿಗಿನ ನನ್ನ ಮೂವತ್ಮೂರು ವರ್ಷಗಳ ಸಂಪಾದಕೀಯ ವೃತ್ತಿ ಬಾಂಧವ್ಯ ಒಂದು ಕಾರಣ. ಇದಕ್ಕೂ ಮಿಗಿಲಾದ ಮುಖ್ಯ ಕಾರಣ, ಪತ್ರಿಕೆಯ ಸಂಪಾದಕೀಯ ನೀತಿಗೆ ಅದರ ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ಎಂದೋ ದೊರೆತ ಈ ಜನಮನ್ನಣೆಗೆ ಈಗ ಸಾಂಸ್ಥಿಕ ಸ್ವರೂಪದ ಅಂಗೀಕಾರ ಮುದ್ರೆ ಬಿದ್ದಿರುವುದು. ಈ ಸಂತೋಷ ಅರವತ್ತರ ದಶಕ ಮತ್ತು ನಂತರದ ವರ್ಷಗಳ ಬಾಗಿಲುಗಳನ್ನು ತೆರೆದು, ‘ನೆನೆ ಆ ದಿನಗಳ’ ಎನುವಂತೆ ಪುಳಕ ಪುಟಿದೇಳುತ್ತಿದೆ.

ಕವಿ ಎಜ್ರಾ ಪೌಂಡ್, ‘ದಿ ಏಜ್ ಡಿಮಾಂಡೆಡ್ ಆನ್ ಇಮೇಜ್’ ಎಂದು ಹೇಳಿರುವಂತೆ, ಅಂದಿನ ಕಾಲದ ಮನೋಧರ್ಮ. ತನ್ನ ಆತ್ಮಪ್ರತ್ಯಯ ಮತ್ತು ಆಶೋತ್ತರಗಳ ನೈಜ ಬಿಂಬದ ಅಭಿವ್ಯಕ್ತಿಗೆ ಹಾತೊರೆಯುತ್ತಿದ್ದ ದಿನಗಳು. ರಾಜಕೀಯವಾಗಿ, ಸಾಂಸ್ಕೃತಿಕವಾಗಿ ನವನವೋನ್ಮೇಷಶಾಲಿನಿ ಅವತರಣಕ್ಕೆ ಹಂಬಲಿಸುತ್ತಿದ್ದ ದಿನಗಳು. ಅದಕ್ಕೆ ಕಾಲ ಪಕ್ವವಾಗಿದ್ದ ದಿನಗಳು.

‘ಅನ್ಯರೊರದುದನೆ, ಬರೆದುದನೆ ನಾ ಬರೆದು ಬಿನ್ನಗಾಗಿದೆ ಮನವು...’ ಎಂದು ಬರೆದ ಕವಿ ಗೋಪಾಲಕೃಷ್ಣ ಅಡಿಗರು ಸಾಹಿತ್ಯಿಕವಾಗಿ ಹೊಸಮಾರ್ಗವೊಂದರ ಅನ್ವೇಷಣೆಯ ಅಗತ್ಯವನ್ನು ಹೊಸ ಕವಿಗಳ ಠರಾವೋ ಎಂಬಂತೆ ಘೋಷಿಸಿದ್ದರು. ‘ಜಾತಿ ಮತ ಭೇದಗಳ ಕಂದಕವು ಸುತ್ತಲೂ/ದುರ್ಭೇದ್ಯವೆನೆ ಕೋಟೆ ಕೊತ್ತಲಗಳ’, ‘ಕುಟ್ಟಿ ಪುಡಿ ಮಾಡಿ ಹೊಸ ನಾಡೊಂದನು’ ಸುಖದ ಬೀಡೊಂದನು’ ಕಟ್ಟಲು ಕರೆ ನೀಡಿದರು.

ADVERTISEMENT

ರಾಜಕೀಯವಾಗಿಯೂ ಕಾಲಪ್ರಜ್ಞೆಯ ಆತ್ಮಸಾಕ್ಷಿಯಾಗಿದ್ದ ಈ ಕವಿ ಸ್ವಾತಂತ್ರ್ಯದ ಪಾಠಗಳನ್ನೆಲ್ಲ ಅರೆದು ಕುಡಿದು ಜೀರ್ಣಿಸಿಕೊಂಡು, 1958ರಲ್ಲೇ ‘ನೆಹರೂ ನಿವೃತ್ತರಾಗುವುದಿಲ್ಲ/ ಹರಿದೀತು ವಾಗ್ರೂಪದ ಹಾಲಿನ ಹಳ್ಳ/ ಸೇಕಡ ಹತ್ತಕ್ಕೆ ಮೋಸವಾಗುವುದಿಲ್ಲ/’ ಎಂದು ನೆಹರೂ ಮಾದರಿ ಸಮಾಜವಾದಿ ಆಡಳಿತಕ್ಕೆ ವ್ಯಂಗ್ಯದ ಭಾಷ್ಯ ಹಾಡಿದ್ದರು.

ರಾಮ ಮನೋಹರ ಲೋಹಿಯಾ ಅವರ ನೇತೃತ್ವದಲ್ಲಿ ಸಮಾಜವಾದದ ಕನಸು ಕಂಡಿದ್ದ ರಾಜಕೀಯ ಧುರೀಣರ ಭ್ರಮನಿರಸನಕ್ಕೆ ಕನ್ನಡ ಕಾವ್ಯ ಸ್ಪಂದಿಸಿದ ಮಾದರಿ ಇದು. ಅದೇ ಕಾಲಕ್ಕೆ ಪ್ರಜಾವಾಣಿ ಸಂಪಾದಕೀಯ ನೀತಿಯೂ ಜನಮನದ ಭ್ರಮನಿರಸನದ ಬಿಂಬವೇ ಆಗಿತ್ತು. ಅದನ್ನು ಸಮರ್ಥವಾಗಿ ಬಿಂಬಿಸಿ ‘ಹೊಸನಾಡೊಂದನು/ಸುಖದ ಬೀಡೊಂದನು/’ ಕಟ್ಟುವ ಉತ್ಸಾಹದಲ್ಲಿ ಟಿ.ಎಸ್. ರಾಮಚಂದ್ರ ರಾವ್ ಅವರ ನೇತಾರಿಕೆಯಲ್ಲಿ ಬಿಸಿ ರಕ್ತದ/ ಕಾಯಕ ಧರ್ಮದ ಹುರುಪಿನ ಸಂಪಾದಕೀಯ ಪಡೆ... ಖಾದ್ರಿ ಶಾಮಣ್ಣ, ವೈಎನ್ಕೆ, ಎಂ.ಬಿ.ಸಿಂಗ್, ಎಸ್ಸಾರ್ಕೆ, ಮ.ಶ್ರೀಧರ ಮೂರ್ತಿ, ಗೋಪಾಲ ಕಣ್ಣನ್, ಬಿ.ಎಂ.ಕೆ, ಹೇಮದಳ ರಾಮದಾಸ್, ಇಂದಿರಾತನಯ, ಬಿ.ವಿ. ವೈಕುಂಠರಾಜು, ಜಿ.ಎಸ್. ಸದಾಶಿವ, ಜಿ.ಎನ್. ರಂಗನಾಥ ರಾವ್... ಪೂರ್ವಗ್ರಹ ಮುಕ್ತ, ಸಂವೇದನಾಶೀಲ- ಸೃಜನಶೀಲ ಮನಸ್ಸುಗಳು.

ಪತ್ರಿಕೆಯ ಜನಪರ ಸಂಪಾದಕೀಯ ನೀತಿಯನ್ನು ರೂಪಿಸಿದ, ‘ಸಹೋದ್ಯೋಗಿಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟು ಸಾಮರ್ಥ್ಯವನ್ನು ಬೆಳೆಸಿದ’ ರಾಮಚಂದ್ರ ರಾಯರ ಮಾರ್ಗದರ್ಶನ. ಜೊತೆಗೆ ದೇಶದ ರಾಜಕೀಯ ಆಗುಹೋಗುಗಳು ಮತ್ತು ಲೋಹಿಯಾ ಸಮಾಜವಾದದ ಪಾಠ ಹೇಳುತ್ತಾ ಇದ್ದ ಖಾದ್ರಿ ಶಾಮಣ್ಣ, ಸಾಹಿತ್ಯ, ರಂಗಭೂಮಿ, ಸಂಗೀತ- ನೃತ್ಯ ಮತ್ತು ಶೇಕ್ಸ್‌ಪಿಯರ್, ಪೌಂಡ್, ಎಲಿಯಟ್, ಕಾಮು, ಕಾಫ್ಕ, ಸಾರ್ತ್ರೆ, ಬರ್ಗ್‌ಮನ್, ಸತ್ಯಜಿತ್ ರಾಯ್, ಋತ್ವಿಕ್ ಘಟಕ್, ಪಿಕಾಸೊ ಎಂದು ಸಾಹಿತ್ಯ ಕಲೆಗಳ ಆಧುನಿಕ ಸಂವೇದನೆಯನ್ನು ನಮ್ಮಲ್ಲಿ ಬಿತ್ತಿದ ವೈಎನ್ಕೆ...

ಇಂಥ ಪರಿಸರದಲ್ಲಿ ಜನಪರವಾದ, ಸಾಮಾಜಿಕ ನ್ಯಾಯದ ಮುಕ್ತ ಸಂಪಾದಕೀಯ ನೀತಿಯ ಶ್ರೀರಕ್ಷೆಯಿಂದ ಹೊಸ ಅಭಿರುಚಿ ರೂಪಿಸುವ, ಹೊಸ ಮೌಲ್ಯ ಸೃಷ್ಟಿಸುವ ಹೊಣೆಯನ್ನೂ ಆದರ್ಶ ಕಾಯಕವಾಗಿಸಿಕೊ೦ಡಿದ್ದ ಸಂಪಾದಕೀಯ ಬಳಗ. ಹೀಗೆ ಬದಲಾವಣೆಗೆ, ಆಧುನಿಕತೆಗೆ ಹದಗೊಂಡಿದ್ದ ಪ್ರಜಾವಾಣಿಯ ಭೂಮಿಕೆ ಕನ್ನಡ ಸಾಹಿತ್ಯದ ಬೆಳವಣಿಗೆ, ಆಧುನಿಕ ಸಂವೇದನೆ, ಹೊಸ ರುಚಿ- ಅಭಿರುಚಿಗಳನ್ನು ರೂಪಿಸುವುದರಲ್ಲಿ, ಪೋಷಿಸುವುದರಲ್ಲಿ ಮಾರ್ಗಪ್ರವರ್ತಕ ಪಾತ್ರವಹಿಸಿದ್ದು, ಜನಮನ್ನಣೆ ಗಳಿಸಿದ್ದು ಈಗ ಇತಿಹಾಸ.

ನವೋದಯ ದಡ್ಡುಬಿದ್ದ ಮಾರ್ಗವಾಗಿ, ‘ಕೊಡದಿರು ಷಟ್ಪದಿಗೆ ಶರಧಿಯ ದೀಕ್ಷೆಯನು’ ಎಂದೋ, ‘ಅನ್ಯರೊರದೆನೆ ಬರೆಯಲಾರೆ’ ಎಂದೋ ಹೊಸ ತಲೆಮಾರಿನ ಹೊಸ ಲೇಖಕರು ಹೊಸ ಮಾರ್ಗಕ್ಕಾಗಿ, ಸ್ವೋಪಜ್ಞತೆಗಾಗಿ ತುಡಿಯುತ್ತಿದ್ದ ಆ ದಿನಗಳಲ್ಲಿ, ಅವರೀ ತುಡಿತಗಳಿಗೆ ವೇದಿಕೆಯಾದದ್ದು ಪ್ರಜಾವಾಣಿಯ ಭಾನುವಾರದ ಸಾಪ್ತಾಹಿಕ ಪುರವಣಿ ಮತ್ತು ದೀಪಾವಳಿ ವಿಶೇಷ ಸಂಚಿಕೆಗಳು. ಶುರುವಿಗೆ ಎಸ್ಸಾರ್ಕೆ ಪುರವಣಿ ಸಂಪಾದಕರಾಗಿದ್ದು, ನಂತರ ಎಂ.ಬಿ. ಸಿಂಗ್ ಅವರ ಸ್ಥಾನಕ್ಕೆ ಬಂದರು. ದೀಪಾವಳಿ ವಿಶೇಷ ಸಂಚಿಕೆಯ ಹೊಣೆ ಮೊದಲಿನಿಂದಲೂ ಸಾ.ಪು. ಸಂಪಾದಕರದೇ.

ಸಂಚಲನ: ಕನ್ನಡ ಕಾವ್ಯ ಹೊಸಮಾರ್ಗದ ಹುಡುಕಾಟದಲ್ಲಿರುವ ಸಂದರ್ಭದಲ್ಲೇ ಸಿಂಗ್ ಅವರು ದೀಪಾವಳಿ ವಿಶೇಷ ಸಂಚಿಕೆಯಲ್ಲಿ ಅಡಿಗರ ‘ಪ್ರಾರ್ಥನೆ’ ಕವಿತೆಯನ್ನು ಪ್ರಕಟಿಸಿ ನಿಂತ ನೀರಾಗಿದ್ದ ಕನ್ನಡ ಕಾವ್ಯಕ್ಕೆ ಹೊಸ ಹರಿವನ್ನು ತಂದುಕೊಟ್ಟಿದ್ದರು.

‘ಪ್ರಾರ್ಥನೆ’ ಮಡಿವಂತರಲ್ಲಿ ಅಶ್ಲೀಲ ಎನ್ನುವ ಕೋಲಾಹಲಕ್ಕೆ ಕಾರಣವಾಯಿತು. ಸರ್ಕಾರಕ್ಕೆ ದೂರು ಹೋಯಿತು. ಸರ್ಕಾರ ಸಮಿತಿಯೊಂದನ್ನು ರಚಿಸಿತು. ಸಮಿತಿ ಮುಂದೆ ಸಾಕ್ಷ್ಯ ನೀಡಿದ ಸಂಪಾದಕ ಟಿಯೆಸ್ಸಾರ್, ‘ಪ್ರಾರ್ಥನೆ’ ಅಶ್ಲೀಲ ಎನ್ನುವುದಾದರೆ ಬೇಲೂರು ಶಿಲಾಬಾಲಿಕೆಯರಿಗೆ ಮುಸುಕು ಹಾಕಿ ಎಂದು ತಿರುಗೇಟು ನೀಡಿದರು. ಹೀಗೆ ‘ಪ್ರಾರ್ಥನೆ’ ಪ್ರಜಾವಾಣಿ ಸಾಹಿತ್ಯ ಲೋಕದಲ್ಲಿ ಒಂದು ಪುಟ್ಟ ಸಂಚಲನ ಉಂಟುಮಾಡಿತ್ತು.

ಇದರ ಆಜೂಬಾಜಿಗೇ ಸಿಂಗ್ ಅವರು ಸಾ.ಪು.ನಲ್ಲಿ ಕನ್ನಡ ಕಾವ್ಯ ಕುರಿತು ಕ.ವೆಂ. ರಾಜಗೋಪಾಲರಿಂದ ಸುದೀರ್ಘವಾದ ಒಂದು ಲೇಖನ ಬರೆಸಿ ಪ್ರಕಟಿಸಿದರು. ಹೊಸ ಕವಿಗಳ ಭಾವಚಿತ್ರಗಳೊಂದಿಗೆ ಪ್ರಕಟವಾದ ಪೂರ್ಣಪುಟದ ಈ ಲೇಖನದ ಮೂಲಕ ಪ್ರಜಾವಾಣಿ ವಿಧ್ಯುಕ್ತವಾಗಿ ನವ್ಯ ಕಾವ್ಯದ ಆಗಮನವನ್ನು ಸಾರಿತ್ತು. ಅಂದು ಬೆಳಿಗ್ಗೆ ಆರು ಗಂಟೆಗೇ ಗಾಂಧೀಬಜಾರಿನಲ್ಲಿ ಪ್ರಜಾವಾಣಿ ‘ಸೋಲ್ಡೌಟ್’. ಎಲ್ಲ ಪ್ರತಿಗಳನ್ನೂ ಆಗಿನ ವರ್ಧಿಷ್ಣು ಕವಿ ನಿಸಾರ್ ಅಹಮದ್ ಅವರೇ ಕೊಂಡು ಅಭಿಮಾನಿಗಳಿಗೆ ವಿತರಿಸಿದರೆಂದು ಗೆಳೆಯರು ತಮಾಷೆ ಮಾಡಿದ್ದೂ ಉಂಟು.

ಸಂವಾದ: ಶುರುವಿನಿಂದಲೂ ಪ್ರಜಾವಾಣಿ ಸಾಹಿತ್ಯ ಮತ್ತು ಕಲೆಗಳಿಗೆ ಸೂಕ್ತ ಪ್ರಾಶಸ್ತ್ಯ, ಪೋಷಣೆ ನೀಡುತ್ತ ಬಂದಿರುವುದನ್ನು ಅದರ ಎಪ್ಪತ್ತು ವರ್ಷಗಳ ಇತಿಹಾಸದಲ್ಲಿ ನಾವು ಕಾಣಬಹುದಾಗಿದೆ. ನವೋದಯ ಮತ್ತು ಪ್ರಗತಿಶೀಲರ ಸೃಜನಶೀಲ ಬರವಣಿಗೆ, ವಿಮರ್ಶೆ, ಚರ್ಚೆ- ಸಂವಾದಗಳಿಗೆ ಸಾ.ಪು. ಸಮರ್ಥ ತಾಣವಾಗಿತ್ತು.

ಈ ಮಾತಿಗೆ ನಿದರ್ಶನವಾಗಿ ಸಾಹಿತ್ಯ ಮತ್ತು ಕಾಮಪ್ರಚೋದನೆ ಕುರಿತಂತೆ ಅನಕೃ ಮತ್ತು ನಿರಂಜನರ ನಡುವಣ ಸಂವಾದಕ್ಕೆ ‘ಪ್ರಜಾವಾಣಿ’ ವೇದಿಕೆಯಾದುದನ್ನು ಗಮನಿಸಬಹುದು. ಕನ್ನಡ ಸಾಹಿತ್ಯದಲ್ಲಿ ಹೊಸದನಿಗಳನ್ನು ಹುಡುಕಿ ಪ್ರೋತ್ಸಾಹಿಸುವುದರಲ್ಲಿ, ವಿಮರ್ಶೆ- ವಿಚಾರ ಸಂಕಿರಣ- ಸಂವಾದಗಳಿಗೆ ಸೂಕ್ತ ಅವಕಾಶ ಕಲ್ಪಿಸುವುದರಲ್ಲಿ ದೀಪಾವಳಿ ವಿಶೇಷ ಸಂಚಿಕೆಗಳ ಪಾತ್ರ ಮಹತ್ವಪೂರ್ಣವಾದುದು.

ದೀಪಾವಳಿ ಕಥಾ ಸ್ಪರ್ಧೆಯೊಂದೇ ಸಾಕು. ಅನಂತಮೂರ್ತಿ, ರಾಮಚಂದ್ರಶರ್ಮ, ರಾಜಲಕ್ಷ್ಮಿ ಎನ್.ರಾವ್ ಕೆ. ಸದಾಶಿವ, ತೇಜಸ್ವಿ, ಟಿ.ಜಿ. ರಾಘವ, ವೀಣಾ ಶಾಂತೇಶ್ವರ ಅವರುಗಳಿಂದ ಹಿಡಿದು ಅಬ್ದುಲ್ ರಶೀದ್(ಹಾಲು ಕುಡಿದ ಹುಡುಗ), ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಕುಂವೀ ಮೊದಲಾಗಿ ಮೂರು ನಾಲ್ಕು ತಲೆಮಾರಿನ ಸಮರ್ಥ ಕತೆಗಾರರನ್ನು ಕೊಟ್ಟ ಕೀರ್ತಿ ಈ ಕಥಾ ಸ್ಪರ್ಧೆಯದು.

ಅದಕ್ಕೂ ಮಿಗಿಲಾಗಿ ಪಂಜೆ, ಮಾಸ್ತಿಯವರ ನಂತರ ಕನ್ನಡ ಸಣ್ಣಕತೆಯ ಹೊಸ ಮಾರ್ಗಕ್ಕೆ ಪ್ರವರ್ತಕ ಶಕ್ತಿಯಾದದ್ದು ಈ ಸ್ಪರ್ಧೆಯ ಹೆಗ್ಗಳಿಕೆ. ಮೊಗಳ್ಳಿ ಗಣೇಶ್ ಮತ್ತು ಅಮರೇಶ ನುಗಡೋಣಿಯವರದು ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸುವುದರಲ್ಲಿ ಹ್ಯಾಟ್ರಿಕ್ ಸಾಧಿಸಿದ ವಿಕ್ರಮ. ನವ್ಯೋತ್ತರದ ರಾಘವೇಂದ್ರ ಪಾಟೀಲ, ವಿವೇಕ ಶಾನಭಾಗ, ಜಯಂತ ಕಾಯ್ಕಿಣಿ, ಕೆ. ಸತ್ಯನಾರಾಯಣ, ನೇಮಿಚಂದ್ರ- ಹೀಗೆ ಪ್ರಜಾವಾಣಿ ಬೆಳೆಸಿದ ಕತೆಗಾರರ ಯಾದಿ ದೊಡ್ಡದೇ ಇದೆ.

ನವ್ಯ, ದಲಿತ, ಬಂಡಾಯ ಎಲ್ಲ ಮಾರ್ಗಗಳಿಗೂ ಪಂಥಾಹ್ವಾನದಂತೆ ತೆರೆದ ಬಾಗಿಲಾಗಿದ್ದ ಸಾ.ಪು. ಮತ್ತು ವಿಶೇಷ ಸಂಚಿಕೆಗಳಿಂದಾಗಿ ಪ್ರಜಾವಾಣಿ ಏಕಕಾಲದಲ್ಲಿ ಹೊಸ ಲೇಖಕರನ್ನೂ ಹೊಸ ಅಭಿರುಚಿಯ ಓದುಗ ಸಮುದಾಯವನ್ನೂ ರೂಪಿಸಿ ಬೆಳೆಸಿತು. ಹೊಸ ಪ್ರತಿಭೆಗಳನ್ನು, ಹೊಸ ಅಲೆಗಳನ್ನು ಗುರುತಿಸಿ ಪರಿಚಯಿಸುವುದರಲ್ಲಿ ಪ್ರಜಾವಾಣಿ ಮೊದಲಿನಿಂದಲೂ ಮುಂಚೂಣಿಯಲ್ಲಿದೆ.

ಅಂಕಣ ಸಾಹಿತ್ಯಕ್ಕೂ ಪ್ರಜಾವಾಣಿಯ ಕೊಡುಗೆ ಅನನ್ಯ. ಪ್ರಗತಿಶೀಲ ಘಟ್ಟದಲ್ಲಿ ನಿರಂಜನರ ‘ಬೇವು-ಬೆಲ್ಲ’ ತುಂಬ ಜನಪ್ರಿಯ ಅಂಕಣವಾಗಿತ್ತು.

ನಾನು ಸಾ.ಪು. ಸಂಪಾದಕನಾಗಿದ್ದಾಗ ಪ್ರಾರಂಭಿಸಿದ ಹಾ.ಮಾ. ನಾಯಕರ ‘ಸಂಪ್ರತಿ’ ‘ನ ಭೂತೋ...’ ಎನ್ನುವಷ್ಟರ ಮಟ್ಟಿಗೆ ಐದು ವರ್ಷಗಳಿಗೂ ಹೆಚ್ಚುಕಾಲ ಪ್ರಕಟಗೊಂಡು ಹೊಸ ದಾಖಲೆ ಸೃಷ್ಟಿಸಿತು. ಕರ್ನಾಟಕದುದ್ದಗಲಕೂ ಅತ್ಯಂತ ಜನಾದರಣೀಯವಾಗಿತ್ತು. ಜಿ. ವೆಂಕಟಸುಬ್ಬಯ್ಯನವರ ‘ಇಗೋ ಕನ್ನಡ’ ಅಂಕಣ ಇದಕ್ಕೂ ಹೆಚ್ಚು ಕಾಲ ಪ್ರಕಟಗೊಂಡು ಪ್ರಜಾವಾಣಿ ತನ್ನ ದಾಖಲೆಯನ್ನು ತಾನೇ ಮುರಿದ ಕೀರ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾಯಿತು.

‘ಸಂಪ್ರತಿ’ ಮುಂದೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಯಿತು. ಅಲ್ಲಿಯವರೆಗೆ ಅಂಕಣ ಬರಹವನ್ನು ಸಾಹಿತ್ಯದ ಸಾಲಿನಿಂದ ದೂರವಿರಿಸಿದ್ದ ಅಕಾಡೆಮಿ ಅಂಕಣ ಬರಹವನ್ನು ಸೃಜನಶೀಲ ಸಾಹಿತ್ಯವೆಂದು ಗೌರವಿಸಿ ಪ್ರಶಸ್ತಿ ನೀಡುವಂತಾಗಿತ್ತು. ಹೀಗೆ ಅಂಕಣ ಬರಹಗಳಿಗೆ ಸೃಜನಶೀಲ ಸಾಹಿತ್ಯದ ಸ್ಥಾನಮಾನ ತಂದುಕೊಟ್ಟ ಕೀರ್ತಿಯೂ ಪ್ರಜಾವಾಣಿಯದು. ಈ ಬೆಳವಣಿಗೆಯ ಸರಪಳಿಯಲ್ಲಿ ಮುವತ್ಮೂರು ವರ್ಷಗಳ ಕಾಲ ನಾನೂ ಒಂದು ಸಣ್ಣ ಕೊಂಡಿಯಾಗಿದ್ದೆ, ನಾನೂ ಬೆಳೆದೆ ಎಂಬ ಕಾರಣಕ್ಕೆ ಪ್ರಶಸ್ತಿಯ ಸಂತೋಷ ಇಮ್ಮಡಿಗೊಂಡಿದೆ.

ನನ್ನ ಮೆಚ್ಚಿನ ಪ್ರಜಾವಾಣಿಗೆ ಅಭಿನಂದನೆಗಳು. ವ್ಯಕ್ತಿ, ಪತ್ರಿಕೆ, ಸಂಸ್ಥೆ ಯಾರೇ ಇರಲಿ ತಾವು ಸ್ಥಾಪಿಸಿದ ಗುಣಮಟ್ಟವನ್ನು, ಸೃಜಿಸಿದ ಆಯಾಮಗಳನ್ನು, ಪ್ರತಿಪಾದಿಸಿದ ಮೌಲ್ಯಗಳನ್ನು ನಿರಂತರವಾಗಿ ತಲೆಮಾರೋತ್ತರ ಕಾಪಾಡಿಕೊಂಡು ಬರುವುದು ಕಷ್ಟವೇ. ಅದೊಂದು ‘ದಿವ್ಯ’. ಪ್ರಶಸ್ತಿಯೂ ‘ದಿವ್ಯ’. ಎಂದೇ ಪ್ರಜಾವಾಣಿಗೀಗ ಆತ್ಮಾವಲೋಕನದ ಸಮಯ.

ಸುವರ್ಣ ಸಂಧಿ

ಬೆನ್ನುತಟ್ಟಿಕೊಳ್ಳುವ ಈ ಮಾತುಗಳ ಮರೆಯಲ್ಲಿ ಇನ್ನೊಂದು ಸತ್ಯ ಅಡಗಿದೆ. ಅದು ಇದೆಲ್ಲದರ ಜೀವಾಳ. ಅದೊಂದು ಸುವರ್ಣ ತ್ರಿಕೋನ. ‘ಪತ್ರಿಕೆ- ಓದುಗ- ಲೇಖಕ’ ಎಂಬ ‘ಸುವರ್ಣ ಸಂಧಿ’. ಇವರು ಮೂವರೂ ಪರಸ್ಪರ ಅವಲಂಬಿಗಳು. ಓದುಗರಿಲ್ಲದೆ,ಲೇಖಕರಿಲ್ಲದೆ ಪತ್ರಿಕೆ ಬೆಳೆಯದು.ಪತ್ರಿಕೆಯಿಲ್ಲದೆ ಓದುಗರು ಬೆಳೆಯರು.ಪತ್ರಿಕೆ ಮತ್ತು ಮತ್ತು ಓದುಗರು ಇಲ್ಲದೆ ಲೇಖಕರು ಬೆಳೆಯುವುದಿಲ್ಲ ಈ ಸುವರ್ಣ ಸಂಧಿಬಿಂದುವಿಲ್ಲದೆ ನಾಡು-ನುಡಿಯ ಅಭಿವೃದ್ಧಿ ಆಗದು.ಅಭಿವೃದ್ಧಿಗೆ ಬೆಸೆದುಕೊಂಡ ಈ ‘ಸುವರ್ಣ ಸಂಧಿ’ಯಲ್ಲಿ ಯಾರ ಪಾತ್ರವೂ ನಗಣ್ಯವಲ್ಲ. ಇದರಲ್ಲ್ಲಿ ಸಂಪಾದಕನ ಹೋಣೆ ತುಸು ಹೆಚ್ಚಿನದೇ. ಪತ್ರಿಕೆ ಪ್ರಸ್ತುತವಾಗಬೇಕಾದರೆ ಸಂಪಾದಕನಾದವನು ಲೇಖಕ/ಓದುಗರನ್ನು ಸಂಭಾಳಿಸುವುದರ ಜೊತೆಗೆ ಕಾಲದ ಮನೋಧರ್ಮಕ್ಕೆ, ಹೊಸ ಆಶಯಗಳಿಗೆ, ಹೊಸದನಿಗಳಿಗೆ ಸ್ಪಂದಿಸಬೇಕಾಗುತ್ತದೆ. ಲೇಖಕ- ಕಲಾವಿದರಿಗೆ ಪ್ರೇರಕ ಶಕ್ತಿಯಾಗಬೇಕಾಗುತ್ತದೆ, ಚಳವಳಿ ಆಂದೋಲನಗಳಲ್ಲಿ ಸಂಚಲನ ಉಂಟುಮಾಡಬೇಕಾಗುತ್ತದೆ. ಪ್ರಜಾವಾಣಿ ಮೊದಲಿನಿಂದಲೂ ಈ ಕೆಲಸ ಮಾಡಿಕೊಂಡು ಬಂದಿದೆ. ಒಂದು ಸಣ್ಣ ಉದಾಹರಣೆ.ಒಂದು ಕಾಲಘಟ್ಟದಲ್ಲಿ ಸಾ.ಪು.ದಲ್ಲಿ ಪ್ರಕಟವಾಗುತ್ತಿರುವ ಕಥೆಗಳು ಇತ್ತೀಚಿನ ದಿನಗಳಲ್ಲಿ ತುಂಬ ಕೆಟ್ಟದಾಗಿರುತ್ತವೆ ಎಂದು ಓದುಗರಿಂದ ದೂರುಗಳು ಬರಲಾರಂಭಿಸಿದವು. ಟಿಯೆಸ್ಸಾರ್ ‘ಸಾಪು’ ಸಂಪಾದಕನಿಂದ ಸಮಜಾಯಿಷಿ ಕೇಳಿದರು. ‘ಒಳ್ಳೆಯ ಕಥೆಗಳು ಬರುತ್ತಿಲ್ಲ’ ಎಂದು ಸಾ.ಪು. ಸಂಪಾದಕನ ವಿವರಣೆ. ತಕ್ಷಣ ಟಿಯೆಸ್ಸಾರ್ ಗುಡುಗಿದರು: ‘ಇಫ್ ಯು ಡೋಂಟ್ ಗೆಟ್ ಗುಡ್ ಸ್ಟೋರೀಸ್, ಯು ಬೆಟರ್ ರೈಟ್ ಒನ್’. ಅವರ ಈ ಮಾತಿನ ಧ್ವನಿ ‘ಸಾಪು’ ಸಂಪಾದಕನೇ ಬರೆದು ಪುಟಗಳನ್ನೆಲ್ಲ ತುಂಬಿಸಬೇಕು ಎಂದಾಗಿರಲಿಲ್ಲ. ಲೇಖಕರನ್ನು ಮೋಟಿವೇಟ್ ಮಾಡಿ ಬರೆಸಬೇಕು ಎಂಬುದೇ ಅವರ ಮಾತಿನ ಮರ್ಮವಾಗಿತ್ತು. ಈ ಕೆಲಸವನ್ನು ಪ್ರಜಾವಾಣಿ ಅಂದೂ– ಇಂದೂ ಮಾಡುತ್ತಾ ಬಂದಿದೆ. ಕಥೆ- ಕಾವ್ಯವನ್ನಷ್ಟೆ ಅಲ್ಲ ನವ್ಯ ವಿಮರ್ಶೆಯನ್ನು ಬೆಳೆಸುವುದರಲ್ಲೂ ಪ್ರಜಾವಾಣಿ ‘ಸಾಪು’ಪಾತ್ರ ಗಣನೀಯವಾದುದು. ವಿಮರ್ಶೆಯ ಅಂಕಣ ಹ್ರಸ್ವಗೊಂಡರೆ ವಾಚಕರ ಪತ್ರಗಳು ದಾಳಿ ಇಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.