ADVERTISEMENT

ಬಾಬಾಸಾಹೇಬರ ಸೂಟು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 19:30 IST
Last Updated 10 ಏಪ್ರಿಲ್ 2021, 19:30 IST
ಸೂಟುಧಾರಿ ಅಂಬೇಡ್ಕರ್‌ ಭಾವಚಿತ್ರದ ಫ್ರೇಮನ್ನು ಸರಿಪಡಿಸುತ್ತಿರುವ ಬೀದಿ ಬದಿಯ ವ್ಯಾಪಾರಿ  ಚಿತ್ರ: ದಾನಿಶ್‌ ಸಿದ್ದಿಕಿ
ಸೂಟುಧಾರಿ ಅಂಬೇಡ್ಕರ್‌ ಭಾವಚಿತ್ರದ ಫ್ರೇಮನ್ನು ಸರಿಪಡಿಸುತ್ತಿರುವ ಬೀದಿ ಬದಿಯ ವ್ಯಾಪಾರಿ  ಚಿತ್ರ: ದಾನಿಶ್‌ ಸಿದ್ದಿಕಿ   

ಮೈಸೂರಿನ ಅಶೋಕಪುರಂನ ದರ್ಜಿ ತನ್ನ ಅಂಗಡಿಯ ಮುಂದೆ ಸೂಟುಧಾರಿ ಅಂಬೇಡ್ಕರ್‌ ಅವರ ಭಾವಚಿತ್ರ ಹಾಕಿದ್ದು ಏಕೆ? ಭಾರತದ ಸಂವಿಧಾನಶಿಲ್ಪಿಯ ಉಡುಪು ನಮಗೆ ನೀಡುತ್ತಿರುವ ಸಂದೇಶವಾದರೂ ಯಾವುದನ್ನು? ಬಾಬಾಸಾಹೇಬರ ಜನ್ಮದಿನದ ಸಂದರ್ಭದಲ್ಲಿ ಅವರ ಸೂಟಿನ ಕುರಿತು ಹೀಗೊಂದು ಮೀಮಾಂಸೆ…

ಮೈಸೂರಿನ ಅಶೋಕಪುರಂನ (ಹೆಚ್ಚಾಗಿ ಪರಿಶಿಷ್ಟ ವರ್ಗದವರು ಇಲ್ಲಿ ವಾಸಿಸುತ್ತಾರೆ) ಗಲ್ಲಿಯಲ್ಲಿ ಒಂದು ಟೈಲರ್ ಅಂಗಡಿ ಇದೆ. ಬಹಳ ಹಿಂದೆ ಆ ಅಂಗಡಿಯ ಮುಂದೆ ಡಾ. ಅಂಬೇಡ್ಕರ್‌ ಅವರ ಸುಂದರ ಮತ್ತು ವರ್ಣಮಯವಾದ ಚಿತ್ರ ಇತ್ತು. ಸುಮಾರು ಆರು ಅಡಿಗಳಷ್ಟು ಎತ್ತರವಿದ್ದ ಆ ಭಾವಚಿತ್ರವು ನಾನು ಆ ಗಲ್ಲಿಯನ್ನು ಹಾದು ಹೋದಾಗಲೆಲ್ಲ ಆಕರ್ಷಿಸುತ್ತಿತ್ತು. ಆ ಅಂಗಡಿಯ ದರ್ಜಿಯು ಅಂಬೇಡ್ಕರರ ಅಭಿಮಾನಿಎಂಬುದು ಆ ಭಾವಚಿತ್ರದಿಂದ ಸ್ಪಷ್ಟವಾಗಿ ತಿಳಿಯುತ್ತಿತ್ತು. ನಾನು ಆ ಭಾವಚಿತ್ರವನ್ನು ಯಾವಾಗಲೂ ಸಂಶೋಧನಾದೃಷ್ಟಿಯಿಂದಲೇ ವೀಕ್ಷಿಸುತ್ತಿದ್ದೆ. ಆ ಭಾವಚಿತ್ರದ ಔಚಿತ್ಯ ನನ್ನನ್ನು ಬಹಳ ಸಲ ಯೋಚನೆಗೆ ಹಚ್ಚುತ್ತಿತ್ತು.

ಅಂಬೇಡ್ಕರರು ಆ ಚಿತ್ರದಲ್ಲಿ ಆಧುನಿಕ ಸೂಟ್, ಬೂಟ್ ಹಾಕಿಕೊಂಡು ಸುಂದರವಾಗಿ ಕಾಣುವ ಒಬ್ಬ ವ್ಯಕ್ತಿ. ದರ್ಜಿಯು ಅಂಬೇಡ್ಕರರನ್ನು ಒಬ್ಬ ಮಾಡೆಲ್ ಆಗಿ ಕಾಣುವಂತೆ ಮಾಡಲು ಮತ್ತು ತನ್ನ ಅಂಗಡಿಯ ಸುತ್ತಲಿನ ಗ್ರಾಹಕರನ್ನು ಆಕರ್ಷಿಸಲು ಈ ರೀತಿಯ ಭಾವಚಿತ್ರವನ್ನು ಚಿತ್ರಿಸಿದ್ದ ಅಂತ ಅನಿಸುತ್ತದೆ. ತನ್ನ ವೃತ್ತಿಗೆ ಅನುಕೂಲವಾಗುವಂತೆ ಮತ್ತು ತಾನು ಇಷ್ಟಪಟ್ಟ ಅಂಬೇಡ್ಕರರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುವುದಕ್ಕೆ ಆ ಚಿತ್ರವನ್ನು ಅಂಗಡಿಯ ಮುಂದೆ ಚಿತ್ರಿಸಿರುವುದು ಎದ್ದು ಕಾಣುತ್ತಿತ್ತು. ಅಂಬೇಡ್ಕರರ ಭಾವಚಿತ್ರ ಉಪಭೋಗ ದೃಷ್ಟಿಯಿಂದಲೂ ಸಾಂಕೇತಿಕವಾಗಿ ಮತ್ತು ಅರ್ಥಪೂರ್ಣವಾಗಿ ಗೋಚರಿಸುತ್ತಿತ್ತು.

ADVERTISEMENT

ಸಾಮಾನ್ಯವಾಗಿ ಒಂದೇ ಬಗೆಯ, ಏಕದೃಷ್ಟಿಕೋನದ ಮತ್ತು ಒಂದೇ ರೀತಿಯ ಭಾವಚಿತ್ರದಲ್ಲಿ ಕಾಣುವ ಅಂಬೇಡ್ಕರರು ಈ ಟೈಲರ್ ಅಂಗಡಿಯ ಮುಂದೆ ಅಪೂರ್ವವಾದ ಅರ್ಥ ಮತ್ತು ನಾವೀನ್ಯದ ದೃಷ್ಟಿಕೋನವನ್ನು ಹೊಂದಿದ್ದಾರೆ ಎಂದು ನನಗೆ ಅನಿಸಿತು. ಈ ಅಂಗಡಿಯ ಟೈಲರ್‌ಗೆ ಅಂಬೇಡ್ಕರರು ಆಧುನಿಕ ಶೈಲಿಯ, ನೀಟಾಗಿ, ಶಿಸ್ತಾಗಿ ಮತ್ತು ಸುಂದರವಾಗಿ ಕಾಣುವ ವ್ಯಕ್ತಿ. ಅವರ ಉಡುಪು ಮತ್ತು ನಿಂತಿರುವ ಭಂಗಿ ಈಗಿನವರಿಗೆ ಅನುಕರಣೀಯ ಎಂದು ಆ ಟೈಲರ್ ಸಾರಿ, ಸಾರಿ ಹೇಳುವಂತೆ ಅನಿಸಿತು. ಬಹಳ ಇತ್ತೀಚಿನವರೆಗೂ ಅಂಬೇಡ್ಕರರನ್ನು ಸಾರ್ವಜನಿಕ ವಲಯ/ಕಲ್ಪನೆಯಿಂದ ದೂರವಿಟ್ಟಿದ್ದು ಕಟು ವಾಸ್ತವ. ಆದರೆ ಅಶೋಕಪುರಂನ ದರ್ಜಿಗೆ ಶಿಸ್ತಾಗಿ ಹಾಗೂ ಸ್ಟೈಲಾಗಿ ನಿಂತಿರುವ ಅಂಬೇಡ್ಕರರ ಭಾವಚಿತ್ರವು ಆತ್ಮಗೌರವ ಹಾಗೂ ಅಭಿಮಾನದ ಸಂಕೇತ. ಅಂಬೇಡ್ಕರರನ್ನು ಆ ರೀತಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅವನು ಹಿಂಜರಿಯುವುದಿಲ್ಲ. ತನ್ನ ಅಂಗಡಿಯ ಮುಂದೆ ಅವರ ಭಾವಚಿತ್ರವನ್ನು ಹಾಕಲು ಅವನಿಗೆ ಆತ್ಮಸ್ಥೈರ್ಯ ತುಂಬಿದ್ದು ಕಳೆದ ಐವತ್ತು ವರ್ಷಗಳಲ್ಲಿ ಅಂಬೇಡ್ಕರರ ಬಗ್ಗೆ ಉಂಟಾದ ಜನಜಾಗೃತಿ ಎಂದು ಹೇಳಬಹುದು.

ಅಂಬೇಡ್ಕರರನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದುದು ಭಿನ್ನ ಅಭಿರುಚಿಯ ಮತ್ತು ಭಿನ್ನ ದೃಷ್ಟಿಕೋನದ ಅಂಶವನ್ನು ತಿಳಿಸುತ್ತದೆ. ಅವರನ್ನು ಭಿನ್ನವಾಗಿ ಚಿತ್ರಿಸಿರುವ ಅಥವಾ ಭಾವಿಸಿಕೊಂಡಿರುವ ನಿದರ್ಶನಗಳು ಇಲ್ಲವೇ ಇಲ್ಲ ಎಂದು ಹೇಳಲು ಅಸಾಧ್ಯ. ಪ್ರಸಿದ್ಧ ದಲಿತ ಚಿಂತಕ ಮತ್ತು ಕಾರ್ಯಕರ್ತರಾದ ಚಂದ್ರಭಾನು ಪ್ರಸಾದರ ಜೀರೋ ಪ್ಲಸ್ ಎಂಬ ಸಂಸ್ಥೆಯು ಅಂಬೇಡ್ಕರರ ಉಡುಪಿನ ತಾತ್ವಿಕ ಚಿಂತನೆಯನ್ನು ಗಂಭೀರವಾಗಿ ತೆಗೆದುಕೊಂಡು ಉತ್ತರ ಪ್ರದೇಶದಲ್ಲಿ ಅನೇಕ ವಾಣಿಜ್ಯ ಉಪಭೋಗದ ವಸ್ತುಗಳನ್ನು ತಯಾರಿಸಿ (ವಿಶೇಷವಾಗಿ ಆಧುನಿಕ ಶರ್ಟ್‌ ಮತ್ತು ಪ್ಯಾಂಟ್‍ಗಳು), ಮಾರಾಟ ಮಾಡಲು ಸಕ್ರಿಯ ಹೆಜ್ಜೆಗಳನ್ನು ಇಟ್ಟಿದೆ. ವಾಣಿಜ್ಯ ಕ್ಷೇತ್ರದಲ್ಲಿ ಅತಿ ವಿರಳ ಸಂಖ್ಯೆಯಲ್ಲಿರುವ ದಲಿತರನ್ನು ಈ ಕ್ಷೇತ್ರಕ್ಕೆ ತರಲು ಮಾಡುವ ಪ್ರಯತ್ನಗಳಿವು ಎಂದು ಅವರು ಭಾವಿಸುತ್ತಾರೆ. ಅವರು ಕೂಡ ಅಂಬೇಡ್ಕರರ ಭಾವಚಿತ್ರವನ್ನು ಆಧುನಿಕ/ಪಾಶ್ಚಾತ್ಯ ಉಡುಪಿನಲ್ಲೇ ಪ್ರದರ್ಶಿಸಲು ಇಚ್ಛಿಸುತ್ತಾರೆ. ಏಕೆಂದರೆ ಅಂಬೇಡ್ಕರರ ಉಡುಪು ಕೇವಲ ಮಾನ ಮುಚ್ಚಿಕೊಳ್ಳಲು ಇರುವ ವಸ್ತ್ರವಲ್ಲ; ಅದು ಆಧುನಿಕತೆ, ಶಿಸ್ತು , ವಿದ್ಯೆ, ಗೌರವ, ಶಕ್ತಿ, ಸಾಮಾಜಿಕ ಸಮಾನತೆ, ಸೌಂದರ್ಯ ಮತ್ತು ಪ್ರತಿರೋಧದ ಸಂಕೇತವು ಕೂಡ ಹೌದು ಎಂದು ಅವರು ವಾದಿಸುತ್ತಾರೆ. ಪ್ರಸಿದ್ಧ ಇತಿಹಾಸಕಾರ ಮತ್ತು ಚಿಂತಕರಾದ ರಾಮಚಂದ್ರ ಗುಹಾ ಅವರ ಪ್ರಕಾರ ದಲಿತರಿಗೆ ಅಂಬೇಡ್ಕರರನ್ನು ಆಧುನಿಕ/ಪಾಶ್ಚಾತ್ಯ ಉಡುಪಿನಲ್ಲಿ ಕಲ್ಪಿಸಿಕೊಳ್ಳುವುದು ಅಥವಾ ವಿಜೃಂಭಿಸುವುದು ಪ್ರಬಲ ವರ್ಗಗಳ ಜನರ ಸಮಾನಕ್ಕೆ ನಿಲ್ಲುವ ಒಂದು ಪ್ರಯತ್ನವೇ ಆಗಿದೆ. ತಲೆತಲಾಂತರದಿಂದ ಒಂದಿಂಚು ವಸ್ತ್ರವನ್ನೂ ಕೊಡದ ಸಮಾಜದಲ್ಲಿ ಅಂಬೇಡ್ಕರರ ಉಡುಪು ಸಾಮಾಜಿಕ ನ್ಯಾಯದ ಸಂಕೇತ ಎಂದು ಗುಹಾರವರು ಬರೆಯುತ್ತಾರೆ.

ಪ್ರಸಿದ್ಧ ವ್ಯಕ್ತಿ, ದೇವರುಗಳನ್ನು ಅನೇಕ ಕಾಲ್ಪನಿಕ ದೃಷ್ಟಿಕೋನಗಳಿಂದ ಭಿನ್ನ, ಭಿನ್ನವಾಗಿ ಚಿತ್ರಿಸಿರುವ ಭಾರತದಲ್ಲಿ ಅಂಬೇಡ್ಕರರನ್ನು ಇನ್ನೂ ಯಾಕೆ ಆಧುನಿಕ/ಪಾಶ್ಚಾತ್ಯ ಉಡುಪಿನಲ್ಲಿ ನೋಡಲು ಇಚ್ಛಿಸುತ್ತಾರೆ? ಅವರನ್ನು ಭಿನ್ನವಾದ ಗೆಟಪ್‍ನಲ್ಲಿ ಕಲ್ಪಿಸಿಕೊಳ್ಳಲು ಅಥವಾ ಚಿತ್ರಿಸಲು ಪ್ರಯತ್ನಗಳು ನಡೆದಿಲ್ಲವೇ? ಮೇಲೆ ಉಲ್ಲೇಖಿಸಲ್ಪಟ್ಟ ಸಂಕೇತಗಳು ಅಂಬೇಡ್ಕರರ ವ್ಯಕ್ತಿತ್ವ ಮತ್ತು ಸಿದ್ಧಾಂತವನ್ನು ಪ್ರದರ್ಶಿಸುತ್ತವೆ. ಇವು ಅಂಬೇಡ್ಕರರು ನಂಬಿದ ಜೀವನ ತತ್ವವನ್ನು ಪ್ರತಿಬಿಂಬಿಸುವ ಅಂಶಗಳು. ಈ ಅಂಶಗಳನ್ನು ನಂಬಿರುವ ಸಾವಿರಾರು ಭಾರತೀಯರಿಗೆ ಅಂಬೇಡ್ಕರರನ್ನು ಬೇರೆ ಗೆಟಪ್‍ನಲ್ಲಿ ಕಲ್ಪಿಸಿಕೊಳ್ಳುವುದೆಂದರೆ ಅವರ ನೀತಿ, ತತ್ವ, ಸಿದ್ಧಾಂತ ಹಾಗೂ ನಂಬಿಕೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಂತೆ. ಅಂಬೇಡ್ಕರರನ್ನು ಆಧುನಿಕ ಡ್ರೆಸ್ ಕೋಡ್‍ನಲ್ಲಿ ಕಲ್ಪಿಸಿಕೊಳ್ಳುವುದು ಅವರಿಗೆ ಒಂದು ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತವನ್ನು ಘೋಷಿಸಿದಂತೆ. ಇಷ್ಟಾದಾಗ್ಯೂ ಅಂಬೇಡ್ಕರರನ್ನು ಬೇರೆ ದೃಷ್ಟಿಕೋನದಿಂದ, ಭಿನ್ನವಾದ ಕಾಲ್ಪನಿಕ ನೆಲೆಯಿಂದ ಯಾರು ಕೂಡ ನೋಡಿಲ್ಲ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಐತಿಹಾಸಿಕವಾಗಿ ಅಂಬೇಡ್ಕರರನ್ನು ಮತ್ತು ಅವರ ಉಡುಪಿನ ಸಂಕೇತಗಳನ್ನು ಆಮೂಲಾಗ್ರವಾಗಿ ಬದಲಾಯಿಸುವ ಪ್ರಯತ್ನಗಳು ನಡೆದಿವೆ. ಅವುಗಳಲ್ಲಿ ಎರಡು ಉದಾಹರಣೆಗಳು ಮುಖ್ಯ.

ಮೊದಲನೆಯದು ಇತ್ತೀಚೆಗೆ ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿ ಅಂಬೇಡ್ಕರರ ಪುತ್ಥಳಿಯನ್ನು ಸ್ಥಾಪಿಸುವಾಗ ಅಂಬೇಡ್ಕರರ ಉಡುಪಿನ ವಿನ್ಯಾಸವನ್ನು ಬದಲಾಯಿಸಿ, ಪ್ರತಿಗಾಮಿತನವನ್ನು ಸೂಚಿಸುವ ವರ್ಣವನ್ನು ಅದಕ್ಕೆ ಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಇದಕ್ಕೆ ಅನೇಕರಿಂದ (ವಿಶೇಷವಾಗಿ ದಲಿತರಿಂದ) ಪ್ರತಿರೋಧವು ವ್ಯಕ್ತವಾಗಿದೆ. ಅವರ ಉಡುಪಿನ ವಿನ್ಯಾಸವನ್ನು ಬದಲಾಯಿಸುವ ಪ್ರಯತ್ನಗಳು ಸಾಮಾಜಿಕ ಮತ್ತು ರಾಜಕೀಯ ಸಮಾನತೆ-ವಿರೋಧಿಯ ಸಂಕೇತವೆಂದು ಭಾವಿಸಲಾಗಿದೆ. ಹಾಗಾಗಿ ಅಂಬೇಡ್ಕರರನ್ನು ಭಿನ್ನವಾದ ದೃಷ್ಟಿಕೋನದಿಂದ ಕಲ್ಪಿಸಿಕೊಂಡು, ಅದಕ್ಕೊಂದು ಸಾಕಾರ ರೂಪವನ್ನು ಕೊಡುವುದು ಸಾವಿರಾರು ಭಾರತೀಯರಿಗೆ ಅನುಮಾನಾಸ್ಪದ ಸಂಗತಿಯಾಗಿ ಕಾಣುತ್ತದೆ.

ಎರಡನೆಯದು ಅಂಬೇಡ್ಕರರ ಕುರಿತು ಲಭ್ಯವಿರುವ ಕಾರ್ಟೂನ್ ಚಿತ್ರಗಳಲ್ಲಿ ಅವರನ್ನು ಭಿನ್ನವಾಗಿ ಚಿತ್ರಿಸಿರುವ ಉದಾಹರಣೆಗಳು ಸಿಗುತ್ತವೆ. ಅಂಬೇಡ್ಕರರ ಕಾರ್ಟೂನ್ ಚಿತ್ರಗಳನ್ನು ಅಧ್ಯಯನ ಮಾಡಿರುವ ಉನ್ಮತಿ ಶ್ಯಾಮಸುಂದರರ ಪುಸ್ತಕದಲ್ಲಿ (No Laughing Matter) ಅಂಬೇಡ್ಕರರನ್ನು ಸವರ್ಣೀಯರು ಕಲ್ಪಿಸಿಕೊಂಡಿರುವ (ಎಪ್ಪತ್ತು ವರ್ಷಗಳ ಹಿಂದೆ) ಬಗೆಯನ್ನು ಟೀಕಿಸಿದ್ದಾರೆ. ಈ ಕಾರ್ಟೂನ್‍ಗಳು ಸವರ್ಣೀಯರ ಕುಚೋದ್ಯದ ಸಂಕೇತವೆಂದು ಅವರು ವಾದಿಸುತ್ತಾರೆ. ಕಾರ್ಟೂನ್ ಚಿತ್ರಗಳು ಮನರಂಜನೆಗೆ ಮಾತ್ರ ಸೀಮಿತವಲ್ಲ ಎಂದು ವಾದಿಸುತ್ತಾ, ಅಂಬೇಡ್ಕರ್ ಕಾರ್ಟೂನ್‌ಗಳ ಹಿಂದಿನ ಅಸ್ಪೃಶ್ಯತೆ-ಸಿದ್ಧಾಂತ ಮತ್ತು ಆಚರಣೆಗಳನ್ನು (ಸವರ್ಣೀಯರ ನಂಬಿಕೆಗಳಾಧಾರಿತ) ಬಯಲುಗೊಳಿಸಿದ್ದಾರೆ. ಕಲ್ಪನೆ ಮತ್ತು ಚಿತ್ರಕಲೆಯು ಕೂಡ ಸಾಮಾಜಿಕ ಮತ್ತು ಆರ್ಥಿಕ ಯಥಾಸ್ಥಿತಿಯನ್ನು ಕಾಪಾಡಿಕೊಂಡು ಹೋಗುವ ಸಾಧನಗಳೆಂದು, ಹಾಗಾಗಿ ಅವು ಸಾಮಾಜಿಕ ಹುನ್ನಾರವನ್ನು ಒಳಗೊಂಡಿರುತ್ತವೆಯೆಂದು ಈ
ಪುಸ್ತಕದಲ್ಲಿ ತೋರಿಸಲಾಗಿದೆ.

ಅಧ್ಯಯನ ಮತ್ತು ಸಂಶೋಧನ ದೃಷ್ಟಿಯಿಂದ ಇದುವರೆಗೆ ಅಂಬೇಡ್ಕರರನ್ನು ಭಾರತೀಯ ಸಮಾಜಗಳು ಯಾವ ರೀತಿಯಲ್ಲಿ ಕಾಲ್ಪನಿಕ ದೃಷ್ಟಿಕೋನದಿಂದ ಪರಿಭಾವಿಸಿವೆ ಎಂದು ತಿಳಿದುಕೊಳ್ಳುವ ಐತಿಹಾಸಿಕ ಜರೂರತ್ತು ಹಿಂದಿಗಿಂತಲೂ ಈಗ ಹೆಚ್ಚಾಗಿದೆ. ಇದರಿಂದ ಭಾರತೀಯ ಸಮಾಜಗಳ ಲಕ್ಷಣಗಳು ಮತ್ತು ಸ್ವಭಾವವನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ. ‘ಲೋಕೋ ಭಿನ್ನ ರುಚಿಃ ಅವರವರ ಕಲ್ಪನೆಗೆ ನಿಲುಕಿದ್ದು’ ಎಂದು ಅನೇಕಾನೇಕ ಭಾವಗಳನ್ನು/ಕಲ್ಪನೆಗಳನ್ನು ನಿರ್ಲಕ್ಷಿಸಿದರೆ ಭಾವಗಳು ಹೊರಸೂಸುವ ಚಿತ್ರಗಳ ಐತಿಹಾಸಿಕ ಮಹತ್ವ ನಮಗೆ ತಿಳಿಯದೇ ಹೋಗುತ್ತದೆ. ಚಿತ್ರಕಾರರ ಮನೋಧೋರಣೆ, ಸಾಮಾಜಿಕ ನಿಲುವು, ರಾಜಕೀಯ ಒಲವು ಹಾಗೂ ಆರ್ಥಿಕ ಸ್ಥಾನಮಾನಗಳನ್ನು ಅರಿಯಲು ಇಂತಹ ‘ಲೋಕೋ ಭಿನ್ನ ರುಚಿಃ’ ಕಲೆಯ ವಿಶ್ಲೇಷಣೆ ಅತ್ಯಗತ್ಯ. ಈ ದಿಸೆಯಲ್ಲಿ ಪ್ರಸ್ತುತ ಲೇಖನ ಒಂದು ಪುಟ್ಟ ಹೆಜ್ಜೆ. ಅಂಬೇಡ್ಕರರ ಜನ್ಮದಿನವನ್ನು ಆಚರಿಸಲು ಇರುವ ಮತ್ತೊಂದು ಮಾರ್ಗ ಅವರೇ ಪ್ರತಿಪಾದಿಸಿದ ಶಿಕ್ಷಣವಲ್ಲದೆ (ಜ್ಞಾನ ಸಂಪಾದನೆ/ಉತ್ಪಾದನೆ, ಸಮಾನತೆ, ಬೌದ್ಧಿಕ ಶಕ್ತಿಗಳಿಗೆ ಸಂಕೇತ) ಮತ್ತೇನು ಇರಲು ಸಾಧ್ಯ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.