ADVERTISEMENT

ಮನೆಗೆ ಮುದ್ದುಮರಿ ತರುವ ಮುನ್ನ...

ರೇಷ್ಮಾ
Published 13 ಜನವರಿ 2021, 19:30 IST
Last Updated 13 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮನೆಯಲ್ಲಿ ಮುದ್ದಾದ ನಾಯಿ ಪುಟಪುಟನೆ ಅತ್ತಿಂದಿತ್ತ ಜಿಗಿಯುತ್ತಿದ್ದರೆ ಮನಸ್ಸಿಗೆ ಏನೋ ಖುಷಿ. ನಾಯಿಮರಿಯ ತುಂಟಾಟ, ಓಡಾಟ ಎಂತಹವರ ಮನಸ್ಸಿಗೂ ಖುಷಿ ಕೊಡುತ್ತದೆ. ಜೊತೆಗೆ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ನಾಯಿಮರಿ ಸಾಕುವುದರಿಂದ ಒಂಟಿತನ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಅಧ್ಯಯನಗಳು ಸಾಬೀತು ಮಾಡಿವೆ.

ಲಾಕ್‌ಡೌನ್ ಸಮಯದಲ್ಲೂ ಎಷ್ಟೋ ಜನರಿಗೆ ಮನೆಯಲ್ಲಿನ ಸಾಕುಪ್ರಾಣಿಗಳ ಕಾರಣಗಳಿಂದ ಸಂತಸದಿಂದ ಸಮಯ ಕಳೆಯಲು ಸಾಧ್ಯವಾಗಿತ್ತು ಎಂಬುದು ಸುಳ್ಳಲ್ಲ. ಆದರೆ ಮನೆಗೆ ನಾಯಿಮರಿ ತರುವ ಮುನ್ನ ಕೆಲವೊಂದು ವಿಚಾರಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎನ್ನುತ್ತಾರೆ ಪಶುವೈದ್ಯ ಡಾ. ವಿವೇಕ್‌ ಎಂ. ರಾವ್‌.

*ಮನೆಗೆ ನಾಯಿಮರಿ ತರುವ ಮೊದಲು ಅದನ್ನು ಹೇಗೆ ಕಾಳಜಿ ಮಾಡಬೇಕು, ದಿನಕ್ಕೆ ಅದಕ್ಕೆ ತಗಲುವ ಖರ್ಚು ಎಷ್ಟು, ಅದರೊಂದಿಗೆ ಎಷ್ಟು ಸಮಯ ಕಳೆಯಬೇಕು ಎಂಬುದನ್ನೆಲ್ಲಾ ಮೊದಲೇ ತಿಳಿದುಕೊಂಡಿರಬೇಕು.

ADVERTISEMENT

*ಪ್ರತಿದಿನ ನಾಯಿಮರಿಯೊಂದಿಗೆ ಒಂದಿಷ್ಟು ಮೌಲ್ಯಯುತ ಸಮಯ ಕಳೆಯಬೇಕು. ಅದರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಗಮನ ಹರಿಸಬೇಕು.

*ನೀವು ಯಾವ ತಳಿಯ ಮರಿಯನ್ನು ಮನೆಗೆ ತಂದಿದ್ದೀರಿ ಎಂಬುದರ ಮೇಲೆ ಖರ್ಚು ಕೂಡ ನಿರ್ಧಾರವಾಗುತ್ತದೆ. ಬೇರೆ ಬೇರೆ ತಳಿಯ ಸಾಕುನಾಯಿಗೆ ಬೇರೆ ಬೇರೆ ರೀತಿಯ ಆಹಾರ ನೀಡಬೇಕು. ಇದರೊಂದಿಗೆ ಅವುಗಳಿಗೆ ಆರೋಗ್ಯ ಕೆಟ್ಟಾಗ ಅಥವಾ ಅಪಘಾತಗಳಾದಾಗ ವೈದ್ಯರ ಬಳಿ ತೋರಿಸಲು ಎಂದೇ ಒಂದಿಷ್ಟು ಹಣವನ್ನು ಉಳಿಸಿಕೊಂಡಿರಬೇಕು.

*ಸಾಕುನಾಯಿಗೂ ತರಬೇತಿ, ವ್ಯಾಯಾಮ ಹಾಗೂ ಸ್ವಚ್ಛವಾಗಿರಿಸುವುದು ಮುಖ್ಯವಾಗುತ್ತದೆ. ಕೆಲವು ನಾಯಿಮರಿಗಳಿಗೆ ಪ್ರತಿದಿನ ಅವುಗಳೊಂದಿಗೆ ಸಂವಹನ ನಡೆಸುವುದು ಮುಖ್ಯವಾಗುತ್ತದೆ.

*‍ಪ‍್ರತಿದಿನ ಒಂದೇ ಸಮಯಕ್ಕೆ ವ್ಯಾಯಾಮ ಮಾಡಿಸುವುದು, ಸಂಜೆ ಅಥವಾ ಬೆಳಿಗ್ಗೆ ವಾಕಿಂಗ್‌ಗೆ ಕರೆದುಕೊಂಡು ಹೋಗುವುದು, ಊಟ ನೀಡುವುದು, ಸ್ನಾನ ಮಾಡಿಸುವುದು ಮಾಡಬೇಕು.

*ನೀವು ಮನೆಯಿಂದ ಹೊರಗೆ ಹೋಗುವ ಸಂದರ್ಭದಲ್ಲಿ ನಾಯಿಮರಿಗೆ ತಿನ್ನಲು, ಮಲಗಲು ಸರಿಯಾಗಿ ವ್ಯವಸ್ಥೆ ಮಾಡುವುದು ಮುಖ್ಯವಾಗುತ್ತದೆ. ಮನೆಯಿಂದ ದೂರ ಇರಬೇಕಾದ ದಿನಗಳಲ್ಲಿ ಹೆಚ್ಚು ಕಾಳಜಿ ತೋರಬೇಕಾಗುತ್ತದೆ.

*ಹೊಸತಾಗಿ ಮನೆಗೆ ನಾಯಿಮರಿಯನ್ನು ತಂದು ಸೂಕ್ತ ಕಾಳಜಿ ತೋರದೇ, ಅದರೊಂದಿಗೆ ಸಮಯ ಕಳೆಯಲು ಸಾಧ್ಯವಾಗದೇ ಇದ್ದರೆ ಅದು ಆತಂಕಕ್ಕೆ ಒಳಗಾಗುತ್ತದೆ.

*ನಾಯಿಮರಿಯನ್ನು ಮನೆಗೆ ತಂದಾಗ ಅವು ಹೊಸ ಜಾಗಕ್ಕೆ ಹೊಂದಿಕೊಳ್ಳುವಂತೆ ವ್ಯವಸ್ಥೆ ಮಾಡುವುದು ತುಂಬಾ ಮುಖ್ಯ. ನಿಮ್ಮ ಮನೆಯ ವಾತಾವರಣ ಹಾಗೂ ಮನೆಯ ಸದಸ್ಯರ ಜೊತೆ ಹೊಂದಿಕೊಳ್ಳಲು ಅಭ್ಯಾಸ ಮಾಡಿಸಬೇಕು.

*ನಿಮ್ಮ ಮನೆಗೆ, ಜೀವನಶೈಲಿಗೆ ಹೊಂದಿಕೊಳ್ಳುವ ನಾಯಿಮರಿ ಯಾವುದು ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ವಿವಿಧ ತಳಿ ಹಾಗೂ ನಾಯಿಯ ಗುಣಲಕ್ಷಣಗಳ ಬಗ್ಗೆ ಅರಿಯಿರಿ. ಅವುಗಳ ಆಹಾರ ಹಾಗೂ ಜೀವನಕ್ರಮದ ಬಗ್ಗೆ ತಿಳಿದುಕೊಂಡು ನಂತರ ಖರೀದಿ ಮಾಡುವುದು ಮುಖ್ಯ.

*ನಾಯಿಮರಿ ತರುವ ಮೊದಲೇ ಯಾವ ಜಾಗದಲ್ಲಿ ಅದರ ಗೂಡು ಇರಿಸಬೇಕು, ಎಷ್ಟು ಅಗಲ ಹಾಗೂ ಗಾತ್ರದ ಗೂಡು ಮಾಡಿಸಬೇಕು, ಯಾವ ರೀತಿಯ ಹಾಸಿಗೆ ಇರಿಸಬೇಕು ಎಂಬುದನ್ನೆಲ್ಲಾ ಮೊದಲೇ ಯೋಚಿಸಬೇಕು.

*ಕೆಲವೊಂದು ವೆಬ್‌ಸೈಟ್‌ಗಳಲ್ಲಿ ಸಾಕುನಾಯಿಗಳನ್ನು ಹೇಗೆ ಕಾಳಜಿ ಮಾಡಬೇಕು, ಅವುಗಳ ಚಟುವಟಿಕೆ, ತರಬೇತಿ ವಿಧಾನ, ಅವುಗಳು ಬೊಗಳುವ ರೀತಿ, ಹಸಿವಾದಾಗ ವರ್ತನೆ ಹೇಗಿರುತ್ತದೆ, ಆರೋಗ್ಯ ಸರಿಯಿಲ್ಲದಾಗ ಹೇಗಿರುತ್ತದೆ ಎಂಬೆಲ್ಲಾ ಅಂಶಗಳು ಇರುತ್ತವೆ. ಅದನ್ನು ಓದಿ ವಿವರ ತಿಳಿದುಕೊಳ್ಳಿ.

*ನಿಮಗೆ ಯಾವ ತಳಿಯ ನಾಯಿ ಬೇಕು, ಆ ತಳಿಯ ನಾಯಿಯ ಕುರಿತಾದ ಪುಸ್ತಕ ಓದುವುದು, ಅದರ ಕುರಿತು ಸ್ನೇಹಿತರೊಂದಿಗೆ ಚರ್ಚಿಸುವುದು, ಅಂತಹದ್ದೇ ತಳಿಯ ನಾಯಿಯನ್ನು ಹೊಂದಿರುವ ನೆರೆಯವರ ಜೊತೆ ಚರ್ಚಿಸುವುದರಿಂದ ಅವುಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಸವಿವರವಾಗಿ ತಿಳಿದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.