ಮನೆ ಬದಲಾವಣೆ, ಉದ್ಯೋಗ, ಓದು ಹೀಗೆ ಬೇರೆ ಬೇರೆ ಕಾರಣದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾಗುತ್ತದೆ. ಬೇರೆ ಸ್ಥಳಕ್ಕೆ ಹೋಗುವ ಮೊದಲು ತಯಾರಿಗೆ ಎಷ್ಟು ದಿನ ಬೇಕು ಎಂಬುದು ಎಲ್ಲರಲ್ಲೂ ಮೂಡುವ ಪ್ರಶ್ನೆ. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು ಎಂದರೆ ಸುಮ್ಮನೆ ಕೈಬೀಸಿಕೊಂಡು ಹೋಗುವುದಲ್ಲ. ಬದಲಾಗಿ ಬಟ್ಟೆ–ಬರೆ, ಪಾತ್ರೆ–ಪಗಡೆ, ಸಾಮಾನು ಸರಂಜಾಮು ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು ಹೊರಡಬೇಕು. ಆ ಕಾರಣಕ್ಕೆ ಹೊರಡಲು ಕೆಲವು ತಿಂಗಳು ಇರುವಾಗಲೇ ಎಲ್ಲವನ್ನೂ ತಯಾರಿ ಮಾಡಿಕೊಳ್ಳಬೇಕು. ಕೊನೆಯ ತಕ್ಷಣದಲ್ಲಿ ತಯಾರಿ ಮಾಡಿಕೊಳ್ಳುತ್ತೇವೆ ಎಂದರೆ ಖಂಡಿತ ಎಡವಿ ಬೀಳುತ್ತೇವೆ. ಆ ಕಾರಣಕ್ಕೆ ತಿಂಗಳಿಂದಲೇ ತಯಾರಿ ಮಾಡಿಕೊಳ್ಳುವುದು ಅವಶ್ಯ.
ಹೊರಡುವ ತಿಂಗಳ ಮೊದಲು
ಕೊನೆಯ ಕ್ಷಣದಲ್ಲಿ ಗಡಿಬಿಡಿ ಮಾಡುವ ಬದಲು ಹೊರಡಲು ಒಂದು ತಿಂಗಳು ಇರುವಾಗಲೇ ತಯಾರಿ ಮಾಡಿಕೊಳ್ಳುವುದು ಅಗತ್ಯ. ಒಂದು ತಿಂಗಳ ಮೊದಲಿನ ತಯಾರಿಗೆ ಹೀಗಿರಬೇಕು:
* ನೀವಿದ್ದ ಹಳೆಯ ಮನೆಗೆ ಸಂಬಂಧಿಸಿದ ಎಲ್ಲಾ ಬಿಲ್‌ಗಳನ್ನು ಪರಿಶೀಲಿಸಿ. ಹಿಂದಿನ ಎಲ್ಲಾ ಬಾಕಿಯನ್ನು ಪಾವತಿಸಿ. ಮನೆಗೆ ಸಂಬಂಧಿಸಿದ ಕೇಬಲ್, ಇಂಟರ್‌ನೆಟ್ ಮುಂತಾದವೆಲ್ಲವನ್ನೂ ಆ ತಿಂಗಳಿಗೆ ಅಂತ್ಯವಾಗುವಂತೆ ನೋಡಿಕೊಳ್ಳಿ.
* ಹೊರಡಲು ತಿಂಗಳು ಇರುವಾಗಲೇ ಪ್ಯಾಕರ್ಸ್ ಅಂಡ್ ಮೂವರ್ಸ್ ಬಗ್ಗೆ ಅವರ ವೆಬ್‌ಸೈಟ್‌ಗೆ ಹೋಗಿ ತಿಳಿದುಕೊಳ್ಳಿ. ಮೂರ್ನಾಲ್ಕು ವೆಬ್‌ಸೈಟ್‌ಗಳಲ್ಲಿ ಪ್ಯಾಕಿಂಗ್ ಅಂಡ್ ಮೂವರ್ಸ್‌ಅಂದಾಜು ವೆಚ್ಚವನ್ನು ಪರಿಶೀಲಿಸಿ. ನಿಮ್ಮ ಮನೆಯ ಬಳಿಯ ಗಾಡಿಗೆ ಶಿಫ್ಟ್ ಮಾಡಲು ಜನವಿದ್ದರೆ ಅವರನ್ನೇ ಅವಲಂಬಿಸಿ.
* ಒಂದು ಪುಸ್ತಕದಲ್ಲಿ ನೀವು ಪ್ಯಾಕ್ ಮಾಡಿದ ಸಾಮಗ್ರಿಗಳ ಬಗ್ಗೆ ಬರೆದುಕೊಳ್ಳಿ. ನಂಬರ್ ಸಮೇತ ಒಂದೊಂದಾಗಿ ಬರೆದುಕೊಂಡರೆ ನಿಮ್ಮ ಪರಿಕರಗಳು ಕಳೆದು ಹೋಗುವ ಸಂದರ್ಭ ಕಡಿಮೆ.
* ನಿಮಗೆ ಬೇಡದ ಪೀಠೋಪಕರಣಗಳನ್ನು ಮಾರಾಟ ಮಾಡಿ. ಇದರಿಂದ ಸಾಗಿಸಲು ಸುಲಭವಾಗುತ್ತದೆ.
* ಸೂಪರ್ ಮಾರ್ಕೆಟ್ ಅಥವಾ ಹೈಪರ್ ಮಾರ್ಕೆಟ್‌ಗಳಿಗೆ ತೆರಳಿ ಒಂದಿಷ್ಟು ಎಲ್ಲಾ ಗಾತ್ರದ ಪೆಟ್ಟಿಗೆಗಳನ್ನು ತನ್ನಿ. ನಿಮ್ಮ ಸಾಮಗ್ರಿಗಳನ್ನು ಪೆಟ್ಟಿಗೆ ಒಳಗೆ ಜೋಡಿಸಿಕೊಳ್ಳುವುದು ಉತ್ತಮ. ಆದರೆ ಪೆಟ್ಟಿಗೆಯಲ್ಲಿ ವಸ್ತುಗಳನ್ನು ಇಡುವ ಮೊದಲು ಪೆಟ್ಟಿಗೆಯ ಬುಡ ಗಟ್ಟಿ ಇದೆಯೇ ಪರಿಶೀಲಿಸಿ. ಇಲ್ಲದಿದ್ದರೆ ಬಿದ್ದು ಹಾಳಾಗುವ ಸಂದರ್ಭಗಳು ಹೆಚ್ಚು.
* ಪೆಟ್ಟಿಗೆಗೆ ತುಂಬಿಸುವ ಮುನ್ನ ಬೇಕಾಗಿರುವುದಷ್ಟೇ ಆಯ್ಕೆ ಮಾಡಿ. ಯಾಕೆಂದರೆ ಸಾಗಿಸುವಾಗ ಅವರು ಎಲ್ಲದಕ್ಕೂ ಬಿಲ್ ಮಾಡುತ್ತಾರೆ. ಆ ಕಾರಣಕ್ಕೆ ಅನಾವಶ್ಯಕ ವಸ್ತಗಳನ್ನು ಪ್ಯಾಕ್ ಮಾಡಬೇಡಿ.
ವಾರದ ಮೊದಲು
* ಹೊರಡಲು ಒಂದು ವಾರ ಇರುವಾಗ ಬೇಡವೆಂದರೂ ಸಾಕಷ್ಟು ಒತ್ತಡವಿರುತ್ತದೆ. ಆದರೆ ಒತ್ತಡದ ನಡುವೆಯೂ ಯಾವುದೇ ವಸ್ತುವನ್ನು ಬಿಡದೇ ತೆಗೆದುಕೊಂಡು ಹೋಗುವುದು ಮುಖ್ಯ. ಹಾಗಾಗಿ ಮೊದಲೇ ಸಿದ್ಧವಿರುವ ಪೆಟ್ಟಿಗೆ, ಚೀಲಗಳು ಟೇಪ್‌ಗಳನ್ನು ತೆಗೆದುಕೊಂಡು ಪ್ಯಾಕ್ ಮಾಡಿದ ವಸ್ತುಗಳನ್ನು ಚೆನ್ನಾಗಿ ಮುಚ್ಚಿಡಿ.
* ಒಡೆದು ಹೋಗುವ ಹಾಗೂ ಒಡೆಯದ ವಸ್ತುಗಳನ್ನು ಬೇರೆ ಬೇರೆಯಾಗಿ ಜೋಡಿಸಿ.
* ಅಡುಗೆಮನೆಯ ಪ್ಲೇಟ್, ಚಮಚಗಳು, ಲೋಟಗಳು ಈ ಎಲ್ಲವನ್ನೂ ಒಂದು ಕಡೆ ಜೋಡಿಸಿಕೊಳ್ಳಿ.
* ನಿಮ್ಮ ಹೊಸ ಮನೆಯ ಇಂಟರ್‌ನೆಟ್ ಕನೆಕ್ಷನ್ ಬಗ್ಗೆ ವಾರಕ್ಕೂ ಮೊದಲು ಹತ್ತಿರದ ಡೀಲರ್ ಬಳಿ ಮಾತನಾಡಿ ಕನೆಕ್ಷನ್ ಹಾಕಿಸಿಕೊಳ್ಳಿ.
* ನಿಮ್ಮ ಬಟ್ಟೆಗಳನ್ನು ಒಗೆದು ಬಿಸಿಲಿನಲ್ಲಿ ಒಣಗಿಸಿಡಿ. ಇದರೊಂದಿಗೆ ನೆಲಹಾಸು, ಕರ್ಟನ್‌ಗಳನ್ನೂ ಒಗೆದು ಒಣಗಿಸಿ ಪ್ಯಾಕ್ ಮಾಡಿ. ಇದರಿಂದ ಹೊಸ ಮನೆಗೆ ಹೋದ ಕೂಡಲೇ ಬಳಸಲು ಸುಲಭವಾಗುತ್ತದೆ.
* ಆಹಾರ ಸಾಮಗ್ರಿಗಳನ್ನು ಹೊಸದಾಗಿ ಖರೀದಿ ಮಾಡುವ ಬದಲು ಹೊಸ ಮನೆಗೆ ಹೋದ ಮೇಲೆ ಖರೀದಿಸಿ. ವಾರಗಳ ಕಾಲ ಇರುವ ಸಾಮಗ್ರಿಗಳನ್ನೇ ಬಳಸಿ.
ಒಂದು ದಿನದ ಮೊದಲು
* ನಿಮ್ಮ ಮನೆಯ ಎಲ್ಲಾ ವಸ್ತುಗಳನ್ನು ತಿಂಗಳು, ವಾರದ ಮೊದಲೇ ಪ್ಯಾಕ್ ಮಾಡಿಕೊಂಡಿರುತ್ತೀರಿ. ಆದರೂ 24 ಗಂಟೆ ಎನ್ನುವುದು ಬಹಳ ಮುಖ್ಯವಾಗುತ್ತದೆ.
* ಫ್ರಿಜ್‌ನಲ್ಲಿರುವ ಎಲ್ಲಾ ವಸ್ತುಗಳನ್ನು ತೆಗೆದು ಇರಿಸಿ ಫ್ರಿಜ್ ಅನ್ನು ಸ್ವಚ್ಛ ಮಾಡಿ. ಅದು ಸಂಪೂರ್ಣ ಒಣಗಿದ ಮೇಲೆ ಫ್ರಿಜ್ ಬಾಗಿಲನ್ನು ಟೇಪ್‌ನಿಂದ ಮುಚ್ಚಿ. ಫ್ರಿಜ್‌ನ ಶೆಲ್ಫ್‌ಗಳನ್ನು ತೆಗೆದು ಪ್ಯಾಕ್ ಮಾಡುವುದು ಉತ್ತಮ.
* ಹೊಸ ಮನೆ ಹಾಗೂ ಹಳೆ ಮನೆಯ ಬೀಗವನ್ನು ತೆಗೆದು ಇರಿಸಿಕೊಳ್ಳಿ. ಇದನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.
* ಬ್ಯಾಕ್ ಪ್ಯಾಕ್ ಇರಲಿ: ಡಾಕ್ಯುಮೆಂಟ್‌ಗಳು, ಹಣ, ಮೇಕಪ್ ಬ್ಯಾಗ್, ತಕ್ಷಣಕ್ಕೆ ಬಳಸುವ ಬಟ್ಟೆಗಳು, ಔಷಧಿಗಳು, ನೋಟ್‌ಪ್ಯಾಡ್, ಫೋನ್ ಎಲ್ಲವನ್ನು ಬ್ಯಾಕ್‌ಪ್ಯಾಕ್‌ನಲ್ಲಿ ಹಾಕಿಕೊಳ್ಳಿ. ಅದರೊಂದಿಗೆ ಟಿಶ್ಯೂ ಪೇಪರ್, ಟವಲ್ ಹಾಗೂ ಸಾಕುಪ್ರಾಣಿಯ ತಿನಿಸುಗಳನ್ನೂ ಬ್ಯಾಕ್ ಪ್ಯಾಕ್‌ನಲ್ಲೇ ಇರಿಸಿಕೊಳ್ಳಿ.
* ಒಂದು ದಿನಕ್ಕಾಗುವಷ್ಟು ಆಹಾರ ಪದಾರ್ಥಗಳನ್ನು ತಯಾರಿಸಿ ಕಂಟೇನರ್ ಹಾಗೂ ಕೂಲರ್‌ಬ್ಯಾಗ್‌ನಲ್ಲಿ ಇರಿಸಿಕೊಳ್ಳಿ. ಟೀ, ಕಾಫಿ, ಸಕ್ಕರೆ ಪ್ಯಾಕ್‌ಗಳು ಹಾಗೂ ಮಕ್ಕಳ ಆಹಾರವನ್ನು ಇಟ್ಟುಕೊಳ್ಳಲು ಮರೆಯದಿರಿ. ಎಲೆಕ್ಟ್ರಿಕಲ್ ಕ್ಯಾಟಲ್ ನಿಮ್ಮ ಬಳಿ ಇರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.