ADVERTISEMENT

‘ಬೆಳಗು’ ಬ್ರಹ್ಮದ ಪರ್ಯಾಯವೇ?

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:30 IST
Last Updated 13 ಜುಲೈ 2019, 19:30 IST

ಕನ್ನಡದಲ್ಲಿ ಅಪೂರ್ವವಾದ ದ.ರಾ. ಬೇಂದ್ರೆಯವರ ‘ಬೆಳಗು’ ಕವಿತೆಯ ಕುರಿತು ‘ನೂರು ವರ್ಷದ ಬೆಳಗು’ ಎಂಬ ಶೀರ್ಷಿಕೆಯಲ್ಲಿ ಭಾನುವಾರದ ಪುರವಣಿಯಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದು ಅತ್ಯಂತ ಸಮಯೋಚಿತ. ಸಾಹಿತ್ಯ ಸೇವೆಯಲ್ಲಿ ‘ಪ್ರಜಾವಾಣಿ’ ತನ್ನ ಕೈಂಕರ್ಯವನ್ನು ಮುಂದುವರಿಸಿದೆ ಎಂಬುದಕ್ಕಾಗಿ ಸಂತೋಷವಾಗುತ್ತದೆ.

‘ನೂರು ವರ್ಷದ ಬೆಳಗು’ ಲೇಖಕರು ಬೇಂದ್ರೆಯವರ ‘ಬೆಳಗು’ ಕವಿತೆಯ ಆಕೃತಿಯ ಬಗೆಗೆ ಹೆಚ್ಚು ಪ್ರಸ್ತಾಪಿಸಿದ್ದಾರೆ. ಅದರ ಬಗೆಗೆ ಆಕ್ಷೇಪವೇನೂ ಇಲ್ಲ; ಅದು ಲೇಖಕರು ತಾವಾಗಿಯೇ ಹಾಕಿಕೊಂಡಿರುವ ಮಿತಿ ಇರಬಹುದು. ಆದರೆ ಆಕೃತಿಯೊಂದು ತನ್ನಷ್ಟಕ್ಕೆ ತಾನೇ ಏನೂ ಆಗಿರುವುದಿಲ್ಲ; ಅದು ಚಾಚಿಕೊಂಡಿರುವ ಅರ್ಥವಿಸ್ತಾರದ ಬಗೆಗೆ ಕೊಂಚವಾದರೂ ಪರಿಚಯವಿಲ್ಲದೇ ಹೋದರೆ ಲೇಖನ ಅವ್ಯಾಪ್ತಿಯಾಗುತ್ತದೆ.

ಈ ಬರೆಹದ ಮೂಲಕ ನಾನು ಕಂಡ ‘ಬೆಳಗು’ ಬಗೆಗೆ ಸಂಕ್ಷಿಪ್ತವಾಗಿ ಹಂಚಿಕೊಳ್ಳಬೇಕೆನಿಸಿದೆ.

ADVERTISEMENT

ನನ್ನ ತಾರುಣ್ಯದಿಂದಲೂ ನನಗೆ ಬೇಂದ್ರೆಯವರ ಈ ಕವಿತೆ ಆಪ್ತ. ಮೊದಮೊದಲು ಅದರ ಗೇಯತೆಯ ಕಾರಣದಿಂದ ಅಂತ ಅಂದುಕೊಂಡರೂ ಮುಂದಿನ ದಿನಗಳಲ್ಲಿ ಅದು ವಿಸ್ತರಿಸಿಕೊಳ್ಳಲು ಹವಣಿಸುವ ಪರಿಗಾಗಿ ಆಪ್ತವಾಯಿತು. ಮತ್ತೆ ಮತ್ತೆ ಈ ಕವಿತೆಯನ್ನು ಗುನುಗುತ್ತ ಈ ಬೆಳಗನ್ನು ನನ್ನ ‘ಗೇಹ’ಕ್ಕೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದೇನೆ. ಇದು ಇಲ್ಲಿಗೇ ನಿಲುತ್ತದೆ ಎಂದು ನಾನು ಭಾವಿಸಿಕೊಂಡಿಲ್ಲ.

ಅತ್ಯಂತ ಸರಳವಾದ ಪದಗಳಿಂದ, ಇದು ಸೃಷ್ಟಿಸಿಕೊಡುವ ಸ್ನೇಹಮಯ ವಾತಾವರಣದಿಂದ ಈ ಕವಿತೆ ಸೆಳೆದುಬಿಡುತ್ತದೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು, ಏಳನೇ ಚರಣದಲ್ಲಿನ ‘ಅಣ್ಣ’ ಎಂಬ ಪದವನ್ನು ಗಮನಿಸಬೇಕು. ಈ ಅಣ್ಣ ವಯೋಮಾನದ ಅಣ್ಣ ಅಲ್ಲ; ವಿನಯದಿಂದ ಸಣ್ಣವರನ್ನೂ ಸಂಬೋಧಿಸಬಹುದಾದ ಅಣ್ಣ.

ಏಳು ಚರಣಗಳಿರುವ ಈ ಕವಿತೆಯ ಮೊದಲ ಚರಣವು ‘ಕಾರಣ’ವಾಗಿ ಬಂದಿದೆ. ಮತ್ತೆ ಮುಂದಿನ ನಾಲ್ಕು ಚರಣಗಳು ಪರಿಣಾಮವಾಗಿ (ಕಾರ್ಯ) ಬಂದಿವೆ. ಆರು ಮತ್ತು ಏಳನೇ ಚರಣಗಳಲ್ಲಿ ಕವಿಯು ಸ್ವತಃ ನೇರವಾಗಿ ಪ್ರವೇಶ ಮಾಡಿ ವಾಚ್ಯ ಮಾಡುತ್ತಾನೆ. ಸಾಮಾನ್ಯವಾಗಿ, ವಾಚ್ಯ ಮಾಡಿದರೆ ಆ ಕವಿತೆಯ ಶಕ್ತಿ ಕುಂದಿಬಿಡುತ್ತದೆ. ಆದರೆ ಇಲ್ಲಿ ಈ ಕವಿತೆಯ ಅರ್ಥವನ್ನು ವಿಸ್ತರಿಸಿಕೊಡುತ್ತದೆ. ಕವಿ ಬುದ್ಧಿಪೂರ್ವಕವಾಗಿ ವಾಚ್ಯ ಮಾಡಿ ಅರ್ಥವಿಸ್ತಾರದ ಕಡೆಗೆ ಓದುಗರ ಗಮನ ಸೆಳೆಯುತ್ತಾನೆ. ‘ಇದು ಕೇವಲವಾದ ಬೆಳಗಲ್ಲ’ ಎಂಬ ಎಚ್ಚರ ಮತ್ತು ಮಾಹಿತಿಯನ್ನು ಈತ ಕೊಡುವುದರಿಂದ ಓದುಗನು ಮತ್ತೆ ಕವಿತೆಯತ್ತ ಹಿಂಚಲನೆ ಮಾಡುತ್ತಾನೆ.

ನಿಜವಾಗಿ ನನಗೆ ತೋರುವಂತೆ ಇದು ಮಾಂತ್ರಿಕತೆ. ಆರನೇ ಚರಣದಲ್ಲಿ ಈ ಬೆಳಗು ಪಂಚೇಂದ್ರಿಯಗಳಲ್ಲೂ (ಕಣ್ಣು ಕಂಡಿತು, ನಾಲಗೆ ಸವಿದಿತು, ಸ್ವರ್ಶ ಪಡೆದಿತು, ಕಿವಿ ಕೇಳಿತು ಮತ್ತು ಮೂಗು ಮೂಸಿತು) ಉಂಟುಮಾಡಿದ ಪರಿಣಾಮಗಳನ್ನು ವಿವರಿಸುತ್ತಾನೆ. ಎಂಬಲ್ಲಿಗೆ ಈ ಕವಿತೆಯ ಆಶಯ ಸಾಮಾನ್ಯ ಬೆಳಗನ್ನು ಮಾತ್ರ ವಿವರಿಸುವುದಲ್ಲ ಎಂಬ ಸ್ಪಷ್ಟ ಸೂಚನೆ ಕೊಟ್ಟಂತಾಗುತ್ತದೆ. ವಿಚಿತ್ರವಾದುದನ್ನು ಗಮನಿಸಬೇಕು. ಅದೇನೆಂದರೆ ಬೆಳಗನ್ನು ಕಣ್ಣು ಕಾಣುತ್ತದೆ ಎಂಬುದು ಸಾಮಾನ್ಯವಾಗಿದ್ದರೂ, ‘ಬೆಳಗ’ನ್ನು ಕೇಳುವುದು, ಮೂಸುವುದು, ಸ್ಪರ್ಶಿಸುವುದು, ಸವಿಯುವುದು ವಿಶೇಷವೆನಿಸುತ್ತದೆ.

ಈ ಅಸಾಮಾನ್ಯ ವಿಶೇಷವನ್ನು ತಿಳಿಯಪಡಿಸುವುದಕ್ಕಾಗಿ ಕವಿ ಇದನ್ನು ವಾಚ್ಯ ಮಾಡುತ್ತಾನೆ. ಕವಿತೆಯ ಓದು ಇಲ್ಲಿಗೆ ಬರುವಷ್ಟಕ್ಕೆ ಇದು ಅಸಾಮಾನ್ಯವಾದುದು ಎಂಬ ಅನುಭವವನ್ನು ಓದುಗ ಪಡೆದುಕೊಳ್ಳುತ್ತಿರುವಾಗಲೇ ಕಡೆಯ ಚರಣದಲ್ಲಿ ‘ಇದು ಬರಿ ಬೆಳಗಲ್ಲೋ’ ಎಂದು ಸ್ಪಷ್ಟವಾಗಿ ಕವಿ ತಿಳಿಸುವುದರಿಂದ ಅದಾಗಲೇ ಮುಗಿದ ಓದನ್ನು ಮತ್ತೆ ಆರಂಭಿಸಬೇಕಾದ ಸಂದರ್ಭ ಒದಗಿಬರುತ್ತದೆ. ಹಾಗೆ ಒದಗಿಬರಬೇಕು ಎಂಬುದೇ ಕವಿಯ ಆಶಯವಾಗಿದೆ.

ಏಳನೆಯ ಚರಣದಲ್ಲಿ ‘ಅರಿಯದು, ತಿಳಿಯದು, (ಬಣ್ಣ) ಕಾಣದು; ಆದರೆ ಶಾಂತಿ ರಸವೇ ಪ್ರೀತಿಯಿಂದ ಮೈದೋರಿತು’, ಇದು ‘ಬರಿ ಬೆಳಗಲ್ಲೋ’- ಇವು ಇನ್ನಷ್ಟು ‘ಬೆಳಗು’ ಎಂಬುದನ್ನು ಹೊಸ ವಿಸ್ತಾರಕ್ಕೆ ಒಯ್ದುಬಿಡುತ್ತವೆ. ಈ ಮೊದಲೇ ಹೇಳಿದಂತೆ ವಾಚ್ಯವೂ ಧ್ವನಿಪೂರ್ಣವಾಗುವ ಈ ಪ್ರಕ್ರಿಯೆ ಅಸಾಧಾರಣವಾದದ್ದು. ಅತಿ ಸಾಮಾನ್ಯವಾದ ಅನುಭವಗಳ ಮೂಲಕವೇ ಅರ್ಥ ವಿಸ್ತಾರಕ್ಕೆ ಕೊಂಡುಹೋಗುವ ಈ ಕವಿತೆ ವಿಶೇಷವೆನಿಸುವುದು ಇದೇ ಕಾರಣಕ್ಕೆ.

ಆರನೇ ಚರಣದ ಕುರಿತು ಈ ಹಿಂದೆ ಉಲ್ಲೇಖಿಸಿದ್ದೇನೆ. ಬೆಳಗು ಪಂಚೇಂದ್ರಿಯಗಳ ಅನುಭವವಾಗುವುದು ಹೇಗೆ? ಬೆಳಕನ್ನು ಮೂಸುವುದು, ಸವಿಯುವುದು ಇತ್ಯಾದಿ ಅಸಾಧ್ಯವಾದವು ಇಲ್ಲಿ ಸಾಧ್ಯವಾಗಿವೆ ಎಂದರೆ ಈ ಅನುಭವಕ್ಕೆ ಬೇರೆಯದೇ ಆದ ಅರ್ಥವಿರಬಹುದು ಎಂಬುದು ಸ್ಪಷ್ಟವಾಗುತ್ತದೆ. ಮೊದಲನೇ ಚರಣವು ‘ಮೂಡಲಮನೆಯ ಬಾಗಿಲು’ ತೆರೆದಂತೆ ಒಳಗಡೆಯಿಂದ ಬೆಳಕು ‘ಹರಿದು’ ‘ಜಗವೆಲ್ಲ’ ತೊಯ್ದು ಹೋಯಿತು ಎಂದು ತಿಳಿಸುತ್ತದೆ. ಇಲ್ಲಿಯೂ ವಿಶೇಷವಿದೆ. ಬೆಳಕು ಹರಿಯುವುದು ತೋಯಿಸುವುದು ಹೇಗೆ? ಸಾಮಾನ್ಯವೆನಿಸುವ ಪದಗಳೇ ಅಸಾಮಾನ್ಯ ಅನುಭವದತ್ತ ಕೊಂಡುಹೋಗುವುದು ಹೀಗೆಯೇ.

ಈ ಕವಿತೆಯ ಪ್ರತಿ ಹಂತದಲ್ಲೂ ಒಂದು ವಿಶೇಷ ಜಾದೂ ಕೆಲಸ ಮಾಡುತ್ತಲೇ ಇರುತ್ತದೆ. ಪ್ರತಿ ಹಂತದಲ್ಲೂ ಸಾಮಾನ್ಯದಲ್ಲೇ ಅಸಾಮಾನ್ಯವಾದುದರ ಕಡೆಗೆ ಚಾಚಿಕೊಳ್ಳತ್ತ ಇರುವಾಗ ಓದುವವನಿಗೆ ಒಂದು ಬೆರಗು ಉಂಟಾಗುತ್ತಲೇ ಇರುತ್ತದೆ. ಈ ಕವಿತೆಯನ್ನು ಓದಿ ಮುಗಿಸಿ ಮತ್ತೆ ಓದುವಾಗ ಮೊದಲಿನ ಸಾಮಾನ್ಯವಾದ ಓದು ಈಗ ಬೇರೆಯದೇ ಆದ ವಿಸ್ತಾರವನ್ನು ಪಡೆದುಕೊಂಡಿರುವುದನ್ನು ಗಮನಿಸದೇ ಇರಲು ಸಾಧ್ಯವಿಲ್ಲ.

ಈ ಹಿನ್ನೆಲೆಯಿಂದಲೇ ನಾನು ಬೇರೆಯದೇ ವಿಸ್ತಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ನಮ್ಮಲ್ಲಿ ‘ಬ್ರಹ್ಮ’ ಎಂಬುದೊಂದು ತಾತ್ವಿಕ ಪದವಿದೆ ತಾನೇ? ಬ್ರಹ್ಮ ಎಂಬುದು ಎಲ್ಲವನ್ನೂ ಒಳಗೊಂಡಿದ್ದು (ವಚನಕಾರರು ಬಯಲು ಎನ್ನುತ್ತಾರೆ). ಮತ್ತು ಇದು ಜ್ಞಾನ. ಜ್ಞಾನವು ಬೆಳಕು ಎಂಬುದನ್ನು ಸೂಚಿಸುತ್ತದೆ. ಗಾಯತ್ರಿ ಮಂತ್ರಿದಲ್ಲಿ ‘ಧೀ’ ಎಂಬ ಪದ ಪ್ರಯೋಗವಿದೆ. ಧೀಯನ್ನು ಹೆಚ್ಚಿಸು ಎಂದು ಸೂರ್ಯನನ್ನು ಕುರಿತು ಪ್ರಾರ್ಥಿಸುವುದು ಇದು. ಈ ಬ್ರಹ್ಮವನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುವ ಪ್ರಕ್ರಿಯೆ ಇದೆ. ತಪಸ್ಸಿನ ಫಲವೇ ಶಾಂತಿ ರಸ! ಅದು ಆನಂದ ಸ್ವರೂಪಿ. ಇದೇ ಸರಣಿಯಲ್ಲಿ ಬ್ರಹ್ಮಾನಂದ ಎಂಬ ಪದ ದೊರಕುತ್ತದೆ. ಸಾಹಿತ್ಯದಲ್ಲಿ ದೊರಕುವ ಆನಂದವನ್ನು ‘ಬ್ರಹ್ಮಾನಂದ ಸಹೋದರ’ ಎಂದು ಕೂಡ ಕರೆಯುವವರಿದ್ದಾರೆ.

‘ಬೆಳಗು’ ಎಂಬ ಕವಿತೆಯು ಈ ತಪಸ್ಸಿನ ಪ್ರಕ್ರಿಯೆ ಇರಬಹುದು ಎಂಬುದು ನಾನು ಕಂಡುಕೊಳ್ಳಲು ಮಾಡಿದ ಪ್ರಯತ್ನ. ‘ಬ್ರಹ್ಮೋಪನಿಷತ್’ ಎಂಬುದೊಂದು ಉಪನಿಷತ್ತಿನಲ್ಲಿ ತಪಸ್ಸಿನ ಕೋಶಗಳನ್ನು ವಿವರಿಸಿದ್ದಾರೆ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಎಂಬ ಐದು ಕೋಶಗಳನ್ನು ಅದು ವಿವರಿಸುತ್ತದೆ. ಮೊದಲ ಚರಣ (ಇದು ‘ಕಾರಣ’) ಮತ್ತು ಆರನೆಯ ಚರಣವನ್ನು ಹೊರತುಪಡಿಸಿ ಉಳಿದ ಐದು ಚರಣಗಳು ಈ ಪಂಚಕೋಶಗಳನ್ನು ವಿವರಿಸುತ್ತವೆ.

ಏಳನೆಯ ಚರಣದಲ್ಲಿ ‘ಬೆಳಗು’ ಆನಂದಮಯವಾಗುತ್ತದೆ. ಎಂದರೆ ಇದೇ ಬ್ರಹ್ಮವನ್ನು ಕಾಣುವುದು ಮತ್ತು ‘ಶಾಂತಿರಸವು ಪ್ರೀತಿಯಿಂದ ಹುಟ್ಟುವುದು’ ಇಲ್ಲಿಯೇ. ಹೀಗೆ ಜಗವೆಲ್ಲವನ್ನೂ ತೊಯ್ಸಿದ ‘ಬೆಳಕು’ ಆನಂದಮಯವಾಗಿ ನಿಲ್ಲುವಲ್ಲಿ ಒಂದು ತಪಸ್ಸಿನ ಪ್ರಕ್ರಿಯೆ ಇರಬಹುದು ಎಂದು ನಾನು ಕಾಣಲು ಪ್ರಯತ್ನಿಸಿದ್ದು.

ಬೇರೆ ಬೇರೆಯವರು ಬೇರೆ ಬೇರೆ ಅರ್ಥಗಳನ್ನು ಕಂಡಿರಬಹುದು. ಒಂದು ಯಶಸ್ವಿ ಕವಿತೆ ಯಶಸ್ವಿಯಾಗುವುದೇ ಇದಕ್ಕಾಗಿ; ಮತ್ತೆ ಮತ್ತೆ ಕಾಲಕಾಲಕ್ಕೆ ಬೇರೆ ಬೇರೆ ಅರ್ಥಗಳನ್ನು ಪಡೆದುಕೊಳ್ಳುತ್ತಿರುವುದಕ್ಕಾಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.