ADVERTISEMENT

ಹಣ್ಣು ಹೆಚ್ಚುತ್ತ, ಚುರುಮುರಿ ಹಚ್ಚುತ್ತ...

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 19:30 IST
Last Updated 12 ಜುಲೈ 2024, 19:30 IST
   

ನಲ್ವತ್ತು ವರ್ಷಗಳ ಹಿಂದಿನ ಮಾತಿದು. ಆಗ ಚರ್ಚ್‌ಸ್ಟ್ರೀಟ್‌ ಹೀಗೆ ಆಹಾರ ಬೀದಿಯಾಗಿ ಬದಲಾಗಿರಲಿಲ್ಲ. ಸಂಜೆ ನಡಿಗೆಗೆ, ಸುಮ್ಮನೆ ಸುತ್ತಾಡಲೆಂದೇ ಎಂ.ಜಿ ರೋಡಿಗೆ ಬರುತ್ತಿದ್ದರು. ಆ ಕಾಲದ ಮಾತಿದು.

ಈಗಲೂ ಸುತ್ತಾಡಲೆಂದೇ ಬರುತ್ತಾರೆ. ಬಂದವರಿಗೆ ಇಳಿಸಂಜೆ ಹೊತ್ತಿಗೆ ಬಾಯಾಡಿಸಿಕೊಂಡು ಹೋಗಲೆಂದೇ ಈ ಗಾಡಿ ತಂದೆ. 

ಕಡಪಾ ಜಿಲ್ಲೆಯವನು ನಾನು. ಬೆಂಗಳೂರಿಗೆ ಬಂದು ನೆಲೆಸಿ ಐದಾರು ದಶಕಗಳೇ ಕಳೆದವು. ಮೊದಲು ಚುರುಮುರಿ ಮಾಡುವಾಗ ಹತ್ತು ರೂಪಾಯಿಗೆ ನೀಡುತ್ತಿದ್ದೆ. ಈಗ ನಲ್ವತ್ತು ರೂಪಾಯಿಗೆ.. ಎಂದು ಹೇಳುತ್ತಲೇ.. ಪಾಶಾ ಚುರುಮುರಿ ಕಲಿಸುತ್ತಿದ್ದರು.

ADVERTISEMENT

ಮೊದಲಿಗೆ, ಈರುಳ್ಳಿ, ಅದರ ಮೇಲೆ ಒಂದಿಷ್ಟು ಟೊಮೆಟೊ (ಬೇಕಿದ್ದರೆ, ನಿಮಗೆ ಬೇಡವೆಂದರೆ ಅವರಿಗೆ ತಿಳಿಸಬಹುದು) ಮನೆಯಲ್ಲಿಯೇ ಕುಟ್ಟಿದ ಜೀರಿಗೆಪುಡಿ, ಧನಿಯಾ ಪುಡಿ, ಬೆಳಗ್ಗೆ ರುಬ್ಬಿ ತಂದ ಹಸಿಮೆಣಸಿನ ಚಟ್ನಿ ಎಲ್ಲವನ್ನೂ ಗರ್‌...ಗರ್‌... ಅಂತ ಒಂದೆರಡು ಸಲ ತಿರುವಿ, ಅದಕ್ಕೆ ಚುರುಮುರಿ ಹಾಕಿ, ಉದ್ದುದ್ದ ಕನಕಾಂಬರಿಯ ಮೊಗ್ಗನ್ನು ಹೋಲುವ ಕ್ಯಾರೆಟ್‌ ತುರಿ, ಮಾವಿನಕಾಯಿ, ಸೌತೆಕಾಯಿ ಹಾಕಿ ಮತ್ತೆ ತಿರುವುತ್ತಾರೆ.

ಅದರ ಮೇಲೆ ಶೇಂಗಾ, ಸಣ್ಣ ಶೇವು, ತಾವೇ ಹದವಾಗಿ ಬೆರೆಸಿದ ಚೌಚೌ ಉದುರಿಸುತ್ತಾರೆ. ಹಾಳೆಯ ತುಣುಕೊಂದರಲ್ಲಿ ಮುತ್ತುಗದ ಎಲೆಯನ್ನಿತ್ತು, ಪುಡಿಕೆ ಕಟ್ಟಿ ಭೇಲ್‌ ಹಾಕಿ ಕೊಡುವಾಗಲೇ ರುಚಿಮೊಗ್ಗುಗಳು ಲಾಲಾರಸವನ್ನು ಚಿಮ್ಮುತ್ತಿರುತ್ತವೆ. ಇನ್ನು ಆರೋಗ್ಯಕರವೂ ಆಗಿರಬೇಕು. ರುಚಿಕರವೂ ಬೇಕು ಎನ್ನುವವರಿಗೆ ಟೊಮೆಟೊ ಮಸಾಲಾ ಮಾಡಿಕೊಡುತ್ತಾರೆ.

ದುಂಡನೆಯ ಚಕ್ರದಂತೆ ಟೊಮೆಟೊ ಕಟ್‌ ಮಾಡಿ, ಅದರ ಮೇಲೆ ಚುರುಮುರಿ, ಚೌಚೌ ಉದುರಿಸಿಕೊಡುತ್ತಾರೆ. ಪಾನಿಪುರಿಯ ನೀರಿನ ಬಗ್ಗೆ ಅನುಮಾನ ಇರೋರೆಲ್ಲ, ಇಲ್ಲಿ ಸುಖಾಪುರಿ ಆಸ್ವಾದಿಸಬಹುದು.

ಎಲ್ಲದಕ್ಕೂ ಮುಖ್ಯವಾಗಿ ಕಾಯಿಗಳನ್ನು ತಂದು, ಪೇಪರ್‌ ಸುತ್ತಿಟ್ಟು, ಹದವಾಗಿ ಬಿಸಿಲುಣಿಸಿ, ಮಾಗಿಸಿದ ಹಣ್ಣನ್ನು ಹೆಚ್ಚಿಕೊಡುತ್ತಾರೆ. ಕಾಯಿ ತಂದರೆ ಅವರಿಗೆ ದುಬಾರಿಯಾಗುವುದಿಲ್ಲ. ಜೊತೆಗೆ ರಾಸಾಯನಿಕಗಳಿಲ್ಲದ ಹಣ್ಣನ್ನು ಗ್ರಾಹಕರಿಗೆ ಉಣಿಸಿದ ಸಮಾಧಾನ. ಹಣ್ಣುಸೇವನೆ ಹೊಟ್ಟೆಗೆ, ಮನಸಿಗೆ ಸಮಾಧಾನವೆನಿಸುವಂತಾಗಬೇಕು. ಆ ಕಾರಣಕ್ಕೆ ಕಾಯಿ ತಂದು ತಾವೇ ಹಣ್ಣು ಮಾಡುವುದಾಗಿ ಪಾಶಾ ಹೇಳುತ್ತಾರೆ.

ಈ ಸಲ ಎಂಜಿ ರಸ್ತೆಗೆ ಬಂದರೆ, ಚುರುಚುರು ಚಾಟ್‌ ತಿನ್ನೇಬೇಕೆನಿಸಿದರೆ, ಜಗಮಗ ಲೈಟು ನೋಡಿ ದಣಿವಾಗಿದ್ದರೆ, ಶಾಪಿಂಗ್‌ ಮಾಡಿ ಕಸುವು ಕಡಿಮೆಯಾಗಿದೆ ಎಂದೆನಿಸಿದರೆ, ಒಮ್ಮೆ ಬಂದು ಇಲ್ಲಿ ಹಣ್ಣು ತಿಂದು, ಚುರುಮುರಿ ಸವಿದು ಹೋಗಿ.. ಮತ್ತೊಮ್ಮೆ ಪಾಶಾ ಅವರನ್ನು ಕಾಣಲೆಂದೇ ಬರುವಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.