ಹತ್ತನೇ ತರಗತಿಗೆ ವಿಶೇಷ ಕ್ಲಾಸ್ ಇದ್ದಿದ್ದರಿಂದ ‘ಲೇಟಾಯ್ತು ಲೇಟಾಯ್ತು’ ಎನ್ನುತ್ತಲೇ ಬೇಗಬೇಗ ಹೊರಡುತ್ತಿದ್ದೆ. ಬೆಳಿಗ್ಗೆ ಬೇಗ ಎದ್ದು ಮಾಡಿಟ್ಟಿದ್ದ ಚಪಾತಿ ಮತ್ತು ಚಟ್ನಿಯನ್ನು ತಟ್ಟೆಗೆ ಹಾಕಿಕೊಂಡು ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸಿತು.
ತಟ್ಟೆಯನ್ನು ಅಲ್ಲೇ ಇಟ್ಟು ಕರೆ ಮಾಡಿದವರ ಹೆಸರನ್ನು ಒಮ್ಮೆ ನೋಡಿದೆ. ಅದು ನಮ್ಮ ಸಂಸ್ಥೆಯಲ್ಲಿ ಬಿ.ಇಡಿ ಇಂಟರ್ನ್‌ಶಿಪ್ ಮಾಡಲು ಬರುತ್ತಿದ್ದ ಶಿಕ್ಷಕಿಯ ಹೆಸರು. ಕರೆ ಸ್ವೀಕರಿಸಿ ‘ಹಲೋ’ ಎಂದೆ. ಆ ಕಡೆಯಿಂದ ‘ನಮಸ್ತೆ ಮೇಡಂ. ನಿಮ್ಮ ಶಾಲೆಯ ಮೂವರು ಮಕ್ಕಳು ನಿನ್ನೆ ಸಂಜೆ ನೀರಿಗೆ ಬಿದ್ದು ಮೃತಪಟ್ಟಿದ್ದಾರಂತೆ. ನಮ್ಮ ನೆರೆಮನೆಯವರು ಹೇಳಿದ್ರು. ನಿಮ್ಗೇನಾದ್ರೂ ವಿಷಯ ಗೊತ್ತಾ ಮೇಡಂ’ ಎಂದರು.
ಅವರ ಮಾತು ಕೇಳಿ, ಫೋನು ಹಿಡಿದ ಕೈಗಳು ನಿಧಾನವಾಗಿ ಕಂಪಿಸಿದವು. ಹೃದಯ ಬಡಿತ ಜೋರಾಗತೊಡಗಿತು. ‘ಇಲ್ಲ ಮೇಡಂ, ನನಗೆ ಗೊತ್ತಿಲ್ಲ. ಯಾವ ಮೆಸೇಜೂ ಬರ್ಲಿಲ್ಲ. ನಾನು ವಿಚಾರಿಸಿ ನಿಮಗೆ ತಿಳಿಸ್ತೇನೆ’ ಎಂದು ಫೋನು ಕಟ್ ಮಾಡಿದೆ.
ದೀರ್ಘವಾಗಿ ಉಸಿರೆಳೆಯುತ್ತ ನನ್ನನ್ನು ನಾನು ನಿಯಂತ್ರಣಕ್ಕೆ ತಂದುಕೊಂಡೆ. ಯಾರಾಗಿರಬಹುದಪ್ಪಾ ಆ ಮೂವರು ಮಕ್ಕಳು? ಯಾಕೆ ನೀರಿನ ಕಡೆ ಹೋದರು? ಶಾಲೆಗೆಂದು ಹೊರಟು ಈಜಲು ಹೋದರೇ? ಶಾಲೆ ಬಿಟ್ಟ ನಂತರ ಹೋದರೇ? ಸುಳ್ಳು ಕಾರಣ ಹೇಳಿ ಶಾಲೆಯಿಂದ ಹೋದರೇ? ಯಾವ ಕ್ಲಾಸಿನ ಮಕ್ಕಳಪ್ಪಾ? ನನ್ನ ಕ್ಲಾಸಿನಿಂದ ನಿನ್ನೆ ಯಾರೂ ಕೇಳಿ ಹೋದ ನೆನಪಿಲ್ಲ! ಹಾಗೆ ಕೇಳಿದರೂ ಮನೆಯವರಲ್ಲಿ ವಿಚಾರಿಸಿಯೇ ಬಿಡುವ ಕ್ರಮ ನಮ್ಮದು. ಆದರೂ ಯಾಕೆ ಹೀಗಾಯಿತು?
ಶಾಲೆಯ ಹತ್ತಿರವೇ ಇರುವ ನನ್ನ ಸಹೋದ್ಯೋಗಿಯೊಬ್ಬರಿಗೆ ಕರೆ ಮಾಡಲು ಅವರ ಹೆಸರನ್ನು ಮೊಬೈಲಿನಲ್ಲಿ ಹುಡುಕುವ ಕಿರು ಅವಧಿಯಲ್ಲೇ ಹತ್ತಾರು ಪ್ರಶ್ನೆಗಳು ಒಂದೊಂದಾಗಿ ನನ್ನ ತಲೆಯೊಳಗೆ ಗಿರಕಿ ಹೊಡೆಯತೊಡಗಿದ್ದವು. ಸಹೋದ್ಯೋಗಿಯ ಹೆಸರನ್ನು ಓದಿ, ಅವರಿಗೆ ಕರೆ ಮಾಡಿದೆ. ‘ನಮಸ್ತೆ ಸರ್’ ಎಂದು ವಿಷಯ ಹೇಳಿದೆ. ಅವರಿಗೂ ನನ್ನಷ್ಟೇ ದಿಗಿಲಾಯಿತು. ‘ಇಲ್ಲ ಮೇಡಂ, ನನಗೆ ಗೊತ್ತಿಲ್ಲ. ಯಾವ ಮೆಸೇಜುಗಳೂ ಬರ್ಲಿಲ್ಲ. ನಾನು ಯಾರಲ್ಲಾದ್ರೂ ಕೇಳಿ ಹೇಳ್ತೇನೆ’ ಎಂದು ಫೋನು ಕಟ್ ಮಾಡಿದರು. ನನ್ನ ಆತಂಕ ಹೆಚ್ಚುತ್ತಲೇ ಇತ್ತು.
ನಮ್ಮದು ಸಂಯುಕ್ತ ಸಂಸ್ಥೆ. ಸುಮಾರು 500 ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ, 700 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಇರುವಾಗ ಈ ಮೂವರು ಮಕ್ಕಳು ಯಾರೆಂಬುದನ್ನು ಊಹಿಸಲೂ ನನ್ನಿಂದ ಆಗುತ್ತಿರಲಿಲ್ಲ. ನಮ್ಮ ಶಾಲೆಯಿಂದ ಕೂಗಳತೆ ದೂರದಲ್ಲಿರುವ ನೇತ್ರಾವತಿ ನದಿಯದ್ದೇ ನಮಗೆ ಭಯ! ಮಕ್ಕಳಿಗೆ, ಅದರಲ್ಲೂ ಹುಡುಗರಿಗೆ, ನಾವೆಷ್ಟೇ ಹೆದರಿಸಿ, ಬೆದರಿಸಿ, ಬುದ್ಧಿವಾದ ಹೇಳಿದರೂ ನೀರು ಕಂಡ ಕೂಡಲೇ ಅವರಿಗೆ ಅದೇನಾಗುತ್ತೋ ಗೊತ್ತಿಲ್ಲ. ಆದರೂ ಶಾಲೆಯ ಅವಧಿಯಲ್ಲಿ ನಾವು ಸಂಪೂರ್ಣ ಎಚ್ಚರಿಕೆಯಿಂದ ಇರುತ್ತೇವೆ. ಯಾವ ಮಗುವೂ ಆ ಕಡೆ ಹೋಗದಂತೆ, ಆ ಕಡೆ ಯಾರಾದರೂ ಹೋಗುವುದು ಕಂಡರೆ ನಮಗೆ ತಿಳಿಸುವಂತೆ ಆಗಾಗ ಸೂಚನೆ ಕೊಡುತ್ತಲೇ ಇರುತ್ತೇವೆ.
ಕೆಲವು ವರ್ಷಗಳ ಹಿಂದೆ ನಮ್ಮ ಶಾಲೆಯ ವಾರ್ಷಿಕ ಕ್ರೀಡಾಕೂಟದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಆಟ ಮುಗಿಸಿ ಸ್ನಾನಕ್ಕೆ ತೆರಳಿದವ ನೀರಲ್ಲಿ ಮುಳುಗಿ ಪ್ರಾಣಬಿಟ್ಟಿದ್ದ. ಇದೊಂದು ಕಹಿಘಟನೆ ನಮ್ಮ ಮನಸ್ಸಿನ ಮೂಲೆಯಿಂದ ಹೊರಬಾರದ ದಿನಗಳೇ ಇಲ್ಲವೇನೋ! ಊರಿನವರೆಲ್ಲರಿಗೂ ಈ ವಿಷಯ ಗೊತ್ತು. ಆದರೂ ಆ ಕಡೆ ಹೋಗಿ ನೀರಿನಲ್ಲಿ ಆಡುವುದು, ಈಜುವುದು ಮುಂದುವರಿದೇ ಇದೆ. ನಿನ್ನೆಯೂ ಈ ಮಕ್ಕಳು ಈಜಲೆಂದೇ ಹೋಗಿರಬೇಕೇನೋ? ಛೆ! ಎಂಥಾ ಮಕ್ಕಳಪ್ಪಾ ಅಂದುಕೊಳ್ಳುತ್ತಲೇ ನನ್ನ ಇನ್ನೊಬ್ಬ ಸಹೋದ್ಯೋಗಿಗೆ ಫೋನು ಮಾಡಿದೆ. ವಿಷಯ ಸಿಕ್ಕಿತು. ಕಾಲೇಜಿನ ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ದುರ್ದೈವಿಗಳು.
ಫೋನು ಕೆಳಗಿಟ್ಟು ಮೌನವಾಗಿ ಕುಳಿತುಬಿಟ್ಟೆ. ಕಾಲೇಜಿನ ಅಷ್ಟೂ ಹುಡುಗರು ಕಣ್ಣ ಮುಂದೆ ಬಂದಂತಾಯಿತು! ಮೃತಪಟ್ಟ ಮೂವರೂ 18ರ ಆಸುಪಾಸಿನವರು. ಯಾವುದೇ ವಿಷಯವನ್ನು ಸ್ವತಂತ್ರವಾಗಿ ಆಲೋಚಿಸಿ ಮತ್ತೊಬ್ಬರಿಗೆ ತಿಳಿಹೇಳಬೇಕಾದ ವಯಸ್ಸಿನವರು! ಆದರೆ ಇಂದು ತಮ್ಮದೇ ಹುಡುಗಾಟಕ್ಕೆ ಪ್ರಾಣ ಬಲಿಕೊಟ್ಟಿದ್ದರು! ಹೊಟ್ಟೆಯೊಳಗೆ ಏನೋ ಸಂಕಟ. ಹೆತ್ತವರ ಆಕ್ರಂದನ ಕಿವಿಯ ಬಳಿಯೇ ಕೇಳಿಸಿದಂತಾಗುತ್ತಿತ್ತು. ಐದು ನಿಮಿಷ ಕಳೆಯುವುದರೊಳಗೆ ನಾನು ಮನೆಯಿಂದ ಶಾಲೆಗೆ ಹೊರಟೆ. ಎಲ್ಲವನ್ನೂ ಕಳೆದುಕೊಂಡಂತೆ ಮನಸ್ಸು ರೋದಿಸುತ್ತಿತ್ತು!
ಇಂತಹ ಮರಣದ ಸುದ್ದಿ ಹೊಸತೇನಲ್ಲ. ನಾನು ಸಣ್ಣವಳಿರುವಾಗ ನಮ್ಮ ನೆರೆಮನೆಯ ಯುವಕನೊಬ್ಬ ಗೆಳೆಯರೊಡನೆ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದ. ಊರಿಗೆಲ್ಲ ಸುದ್ದಿ ಹರಡುತ್ತಿದ್ದಂತೆ ನಮ್ಮ ಮನೆಯಲ್ಲೂ ಸೂತಕದ ಛಾಯೆ ಆವರಿಸಿತ್ತು. ಮಧ್ಯಾಹ್ನದ ಹೊತ್ತು ವಿಷಯ ಸಿಕ್ಕಾಗ ಅಮ್ಮ ಅಡುಗೆ ಮನೆಯ ಕೆಲಸಗಳನ್ನೆಲ್ಲ ಬಿಟ್ಟು ಹೊರಗೆ ಬಂದು ನಿಂತಿದ್ದಳು. ಆಚೀಚೆ ಮನೆಯ ಹೆಂಗಸರೆಲ್ಲ ಗಲ್ಲಕ್ಕೆ ಕೈ ಇಟ್ಟು ‘ಛೆ! ಎಂತಾ ಅವಸ್ಥೆ ನೋಡಿ. ಕಲ್ಲಿನಂತಹ ಹುಡುಗ! ದೊರೆ ಹಾಗಿದ್ದ! ಆ ಮನೆಯವ್ರಿಗೆ ಈ ನೋವು ಮರೀಲಿಕ್ಕುಂಟಾ?’ ಎಂದು ಪರಸ್ಪರ ಮಾತಾಡಿಕೊಳ್ಳುತ್ತ ಕಣ್ಣೀರು ಹಾಕುತ್ತಿದ್ದರು.
ನನ್ನ ಅಜ್ಜಿ ಆ ಹುಡುಗನ ಅಮ್ಮನ ಕೈ ಹಿಡಿದು ಹೇಳಿದ ಮಾತು ನನಗೆ ಈಗಲೂ ನೆನಪಿದೆ. ‘ನಿನಗೆ ದೇವರು ಕೊಟ್ಟಿದ್ದರಿಂದ ನಿನ್ನ ಮಗನಾಗಿ ಇವನು ಬಂದ, ಅಷ್ಟೇ. ಇಲ್ಲಿ ಯಾವುದೂ ನಮ್ಮದಲ್ಲ. ಅಪ್ಪ, ಅಮ್ಮ, ಮಕ್ಕಳು, ಬಂಧುಗಳು ಎಲ್ಲರೂ ಅವನು ಕರುಣಿಸಿದ್ದರಿಂದಾಗಿ ನಮ್ಮ ಜೊತೆಗಿದ್ದಾರೆ. ಅವನು ಮರಳಿ ಕರೆದಾಗ ಅವನ ವಸ್ತುಗಳನ್ನು ಅವನಿಗೇ ಹಿಂದಿರುಗಿಸಬೇಕು’.
ಹಿಂದೆ ನಡೆದ ಇಂತಹ ಹಲವಾರು ಘಟನೆಗಳು ನನ್ನ ಮನಸ್ಸಿನ ಪರದೆಯ ಮೇಲೆ ಒಂದೊಂದಾಗಿ ಬರತೊಡಗಿದವು. ಸಂಕಟಗಳನ್ನು ಅದುಮಿ ಹಿಡಿದುಕೊಂಡೇ ಭಾರವಾದ ಹೆಜ್ಜೆಗಳೊಂದಿಗೆ ಬಸ್ಸು ಏರಿದೆ.
ಆಸ್ಪತ್ರೆಯಿಂದ ಮೃತದೇಹಗಳನ್ನು ಕಾಲೇಜಿಗೆ ತರುತ್ತಾರೆಂಬ ವಿಷಯ ಮೊಬೈಲಿಗೆ ಬಂದ ಮೆಸೇಜಿನಲ್ಲಿತ್ತು. ನನ್ನ ಪಕ್ಕದಲ್ಲೇ ಕುಳಿತಿದ್ದ ಆ ವಿದ್ಯಾರ್ಥಿಗಳ ಉಪನ್ಯಾಸಕಿ ಆ ವಿದ್ಯಾರ್ಥಿಗಳ ಬಗ್ಗೆಯೇ ಮಾತನಾಡುತ್ತಾ ‘ಇನ್ನು ಆ ತರಗತಿಗೆ ನಾನ್ಹೇಗೆ ಹೋಗ್ಲಿ ಮೇಡಂ’ ಎಂದು ಕಣ್ಣೀರಿಟ್ಟರು. ನನ್ನ ಕಣ್ಣಲ್ಲೂ ನೀರು ಜಿನುಗಿತ್ತು. ಯಾರ ಮಕ್ಕಳೇ ಆದರೂ ನಮ್ಮ ಶಾಲೆಯಲ್ಲಿ ಅದರಲ್ಲೂ ನಮ್ಮ ತರಗತಿಯಲ್ಲಿ ಇದ್ದಾರೆಂದರೆ ಅವರು ನಮ್ಮ ಮಕ್ಕಳಂತೆಯೇ.
ಪ್ರತಿ ಕ್ಷಣವೂ ಅವರ ಒಳಿತಿಗಾಗಿ ಶ್ರಮಿಸುವ ನಮಗೆ ಸಾವು ತಂದುಕೊಳ್ಳುವ ಮಕ್ಕಳ ಇಂತಹ ಬೇಜವಾಬ್ದಾರಿತನ ನಮ್ಮ ನಾಲಗೆಯನ್ನು ಕಟ್ಟಿಹಾಕುತ್ತದೆ. ಬದುಕಿನುದ್ದಕ್ಕೂ ಇಂತಹ ಘಟನೆಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ‘ದೇವರೇ ಎಲ್ಲಾ ಆಪತ್ತುಗಳಿಂದ ನಮ್ಮೆಲ್ಲರನ್ನು ರಕ್ಷಿಸು ಜಗದೊಡೆಯಾ’ ಎಂದು ಬೇಡಿಕೊಳ್ಳುತ್ತ ದೇವರ ನಾಮ ಸ್ಮರಿಸತೊಡಗಿದೆ. ಬಸ್ಸು ಮುಂದೆ ಮುಂದೆ ಸಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.