ಮೂಡಿಗೆರೆಯಲ್ಲಿ ಮತ್ತೆ ತೇಜಸ್ವಿಯವರ ಜೀವಂತಿಕೆಯನ್ನು ಕಾಣಲು ರಾಜೇಶ್ವರಿ ಮೂಲಕ ಕಾಣಲು ಸಾಧ್ಯವಾಗಿತ್ತು.ತೇಜಸ್ವಿ ಮತ್ತು ರಾಜೇಶ್ವರಿ ಎರಡು ಜೀವಗಳಾದರೂ ಒಂದೇ ಆತ್ಮದ ರೀತಿ ಬದುಕಿದ್ದವರು. ರಾಜೇಶ್ವರಿ ಅವರು ತೇಜಸ್ವಿ ಅವರ ಎಲ್ಲ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಜೋಡಿ. ಅವರು ಪ್ರತಿಯೊಂದಕ್ಕೂ ಪೂರಕವಾಗಿಯೇ ಇದ್ದರು. ಮುಂದೆ ರಾಜೇಶ್ವರಿ ಅವರೂ ಕೂಡಾ ಮೌಲಿಕವಾದ ಸಾಹಿತ್ಯವನ್ನೇ ರಚಿಸಿದರು.
ಇದನ್ನೂ ಓದಿ... ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಲೇಖಕಿ ರಾಜೇಶ್ವರಿ ನಿಧನ
ಪೂರ್ಣಚಂದ್ರ ತೇಜಸ್ವಿ ಅವರು ಮೂಡಿಗೆರೆಗೆ ಬಂದಾಗ ನಾವಿನ್ನೂ ವಿದ್ಯಾರ್ಥಿಗಳು. ಸಮಾನ ಚಿಂತನೆ, ನಿಲುವುಗಳು, ಆಶಯಗಳು ಇದ್ದ ಕಾರಣ ನಾನು ತೇಜಸ್ವಿ ಅವರ ಒಡನಾಟ ಬಂದಿತು. ಮೂಡಿಗೆರೆಗೆ ಹೋದಾಗ ವಾರಕ್ಕೊಮ್ಮೆಯಾದರೂ ಅವರನ್ನು ಭೇಟಿಯಾಗುವುದು ಇದ್ದೇ ಇತ್ತು. ಆಗೆಲ್ಲಾ ನಮ್ಮ ವಿಚಾರ ವಿನಿಮಯಗಳಲ್ಲಿ ರಾಜೇಶ್ವರಿ ಅವರು ನಮ್ಮ ಜೊತೆ ಸೇರುತ್ತಿದ್ದರು. ಹೀಗೆ ನಾವೆಲ್ಲಾ ಒಂದು ಕುಟುಂಬದ ತರಹವೇ ಇದ್ದೆವು.
ಮುಂದೆ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ರಚನೆ ಆಗಿ ನಾನು ಅಧ್ಯಕ್ಷನಾದೆ. ರಾಜೇಶ್ವರಿ ಅವರು ಸದಸ್ಯರಾದರು. ಆ ಪ್ರತಿಷ್ಠಾನದ ಪ್ರತಿಯೊಂದು ಸಭೆಗೂ ಅವರು ಬರುತ್ತಿದ್ದರು. ತೇಜಸ್ವಿ ಅವರು ಬಳಸುತ್ತಿದ್ದ ಪ್ರತಿಯೊಂದು ವಸ್ತುವನ್ನೂ ಅವರು ಜೋಪಾನವಾಗಿರಿಸಿ ಅದನ್ನೊಂದು ಮ್ಯೂಸಿಯಂ ಮಾಡಿ ಪ್ರತಿಷ್ಠಾನದಲ್ಲಿ ಇರಿಸಬೇಕು ಎಂದು ಹೇಳಿದ್ದರು. ಆ ಕೆಲಸ ಪ್ರಗತಿಯಲ್ಲಿದೆ. ತೇಜಸ್ವಿಯವರ ತರಹವೇ ಅವರೂ ನಿಷ್ಠುರವಾಗಿಯೂ ಇದ್ದರು. ಆದರೆ ಬಹಳ ಮೃದು ಭಾಷಿ. ಇತ್ತೀಚೆಗೆ ಅವರು ಪ್ರತಿಷ್ಠಾನ, ಮ್ಯೂಸಿಯಂ ವಿಚಾರವಾಗಿ ಮಾತನಾಡಿದ್ದರು.
ನಿಧನರಾದ ನಂತರವೂ ಅವರ ದೇಹದಾನಕ್ಕೆ ನಿರ್ಧರಿಸಿದ್ದು, ಇವೆಲ್ಲವೂ ಅವರು ಎಷ್ಟು ನಿಸ್ವಾರ್ಥವಾಗಿ ಬಾಳಿದ್ದರು ಎಂಬುದನ್ನು ತೋರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.