ADVERTISEMENT

ಬೊಂಬೆಗಳಲ್ಲಿ ಕರುಳಕುಡಿಯ ಬಿಂಬಗಳು

ಹವ್ಯಾಸ–ಸುಧಾ

ಶಶಿಕುಮಾರ್ ಸಿ.
Published 12 ಫೆಬ್ರುವರಿ 2019, 11:46 IST
Last Updated 12 ಫೆಬ್ರುವರಿ 2019, 11:46 IST
ಕೆ.ವಿ. ಶ್ರೀನಿವಾಸ್ ಮತ್ತು ಪ್ರಭಾವತಿ ದಂಪತಿ
ಕೆ.ವಿ. ಶ್ರೀನಿವಾಸ್ ಮತ್ತು ಪ್ರಭಾವತಿ ದಂಪತಿ   

ಆ ಮನೆಗೆ ಕಾಲಿಟ್ಟೊಡನೆ ಕಣ್ಣಿಗೆ ಕಾಣುವುದೇ ಬೊಂಬೆಗಳು. ಮೂಲೆ ಮೂಲೆಯಲ್ಲೂ ಅವುಗಳದ್ದೇ ಕಾರುಬಾರು. ಎರಡು ಅಂತಸ್ತಿನ ಆ ಇಡೀ ಮನೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಸಣ್ಣ, ಅತಿಸಣ್ಣ, ಮಧ್ಯಮ ಗಾತ್ರದ ಬೊಂಬೆಗಳಿವೆ. ಬೊಂಬೆಗಳ ಸಾಮ್ರಾಜ್ಯವೇ ಆ ಮನೆಯಲ್ಲಿದೆ. ಹೀಗಾಗಿಯೇ ಆ ಮನೆಯನ್ನು ‘ಬೊಂಬೆಮನೆ’ ಎಂದು ಕರೆಯಲಾಗುತ್ತದೆ.

ಬೆಂಗಳೂರಿನ ಕತ್ರಿಗುಪ್ಪೆಯಲ್ಲಿರುವ ಆ ಮನೆ ಕೆ.ವಿ. ಶ್ರೀನಿವಾಸ್ (86) ಹಾಗೂ ಕೆ.ಎಸ್. ಪ್ರಭಾವತಿ (82 ವರ್ಷ) ದಂಪತಿಯದ್ದು. ತ ಮ್ಮನ್ನೇ ಯಾರಾದರೂ ಆರೈಕೆ ಮಾಡಬೇಕಾದ ವಯಸ್ಸು ಅವರದ್ದು. ಅವರೇ ತಮ್ಮ ಮನೆಯಲ್ಲಿರುವ ಬೊಂಬೆಗಳನ್ನು ಮಕ್ಕಳಂತೆ ಆರೈಕೆ ಮಾಡುತ್ತಿದ್ದಾರೆ. ಅವುಗಳನ್ನು ನೋಡುತ್ತಲೇ, ನಲಿದು, ಸಂಭ್ರಮಿಸಿ ದಿನದೂಡುತ್ತಾರೆ.

ಹವ್ಯಾಸ ಅನ್ನೋದು ನೆರಳಿದ್ದಂತೆ. ಅದರೊಂದಿಗಿನ ನಂಟು ಬಿಟ್ಟೂ ಬಿಡದೆ ಇರುವಂತಹದ್ದು. ಅದು ದೂರವಾಗುವುದು ಉಸಿರು ನಿಂತಾಗ. ಅಲ್ಲಿಯವರೆಗೂ ಒಂದಿಲ್ಲೊಂದು ರೀತಿಯಲ್ಲಿ ಅದರೊಂದಿಗೆ ನಂಟು ಬೆಸೆದುಕೊಂಡೇ ಇರುತ್ತದೆ. ಹಾಗೆಯೇ, ಹವ್ಯಾಸಕ್ಕೆ ಶುರುವಾದ ಬೊಂಬೆ ಸಂಗ್ರಹ ಇಂದು ಆ ದಂಪತಿಯ ಜೀವನದ ಭಾಗವಾಗಿಯೇ ಬೆಸೆದುಕೊಂಡಿದೆ.

ADVERTISEMENT

ಬೊಂಬೆಗಳ ವಿಷಯಕ್ಕೆ ಬರೋದಾದರೆ, ಅವರ ಮನೆಯಲ್ಲಿ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಮೂರು ಸಾವಿರಕ್ಕೂ ಅಧಿಕ ಬೊಂಬೆಗಳಿವೆ. ಹಾಡುವ, ನರ್ತಿಸುವ ಬೊಂಬೆಗಳು ಮನೆಹೊಕ್ಕಾಗ ಆಕರ್ಷಿಸಿದರೆ, ‘ನಾನು ಯಾರಿಗೇನು ಕಮ್ಮಿ ಇಲ್ಲ’ ಎಂಬಂತೆ ಹಾಡಿನ ತಾಳಕ್ಕೆ ತಕ್ಕಂತೆ ಮೈ ಕುಲುಕಿಸುವ ‘ಟೋಪಿವಾಲ’ ಮುಖದಲ್ಲಿ ಮಂದಹಾಸ ಬೀರುತ್ತಾನೆ.

ನಿರ್ದಿಷ್ಟ ಥೀಮ್‌ನ ತರಹೇವಾರಿ ಬೊಂಬೆಗಳು ಅಲ್ಲಿವೆ. ಅಪ್ಪ, ಅಮ್ಮ ಹಾಗೂ ಮಕ್ಕಳ ಜೀವನಶೈಲಿ ಕಟ್ಟಿಕೊಡುವ ಬೊಂಬೆಗಳು, ಮನೆಯ ವಾತಾವರಣ ಕಟ್ಟಿಕೊಡುವ ಮಾದರಿ, ಸಾಮಾಜಿಕ ಬದುಕು, ಆಚಾರ–ವಿಚಾರ, ಸಂಸ್ಕೃತಿ, ಜನಜೀವನದ ಚಿತ್ರಣವನ್ನು ಬೊಂಬೆಗಳ ರೂಪದಲ್ಲಿ ಅಲ್ಲಿ ಕಾಣಬಹುದು.

ಸ್ಪರ್ಶಿಸಿದರೆ ಧ್ವನಿ ಹೊರಡಿಸುವ ಕುದುರೆ, ತೂಗಾಡುವ ಕೋಬ್ರಾ, ಕೊಂಬೆಯಿಂದ ಕೊಂಬೆಗೆ ನೆಗೆಯಲು ಸಿದ್ಧನಾದ ಕೋತಿ, ಇಂಗ್ಲಿಷ್‌ನಲ್ಲಿ ಸ್ವಾಗತಿಸುವ ನಾಯಿ, ಸೊಂಡಿಲೆತ್ತಿ ಹೂಂಕರಿಸುವ ಆನೆ, ಗರ್ಜಿಸುವ ಸಿಂಹ, ಮಿಯಾಂವ್ ಎನ್ನುವ ಬೆಕ್ಕು ಅಲ್ಲಿವೆ. ಅವಿಭಕ್ತ ಕುಟುಂಬದಿಂದ ಹಿಡಿದು ವಿಶ್ವಮಾನ್ಯತೆ ಪಡೆದಿರುವ ‘ಐಫೆಲ್ ಟವರ್’ವರೆಗಿನ ವಿವಿಧ ಮಾದರಿಗಳನ್ನು ಅಲ್ಲಿ ಕಾಣಬಹುದು.

ಅಂತರರಾಷ್ಟ್ರೀಯ ಮಕ್ಕಳ ಪಾರ್ಕ್, ಮ್ಯೂಸಿಕಲ್ ಗಣೇಶ, ಕ್ರಿಸ್‌ಮಸ್ ಆಚರಣೆ, ಚರ್ಚ್‌, ದಸರಾ, ನಾಡಹಬ್ಬ, ತುಳುನಾಡ ಸಿರಿ, ಗ್ರಾಮೋದ್ಯೋಗ, ಜಲಪಾತಗಳು, ರಾಕ್‌ ಗಾರ್ಡನ್ ಮಾದರಿ, ಫ್ಯಾರಿಸ್‌ನ ಐಫೆಲ್ ಟವರ್, ಬುದ್ಧ, ಪ್ರಣಯದಲ್ಲಿ ಮಿಂದೇಳುತ್ತಿರುವ ಜೋಡಿಗಳು, ಆದಿಮಾನವರು, ವಿಷ್ಣುವಿನ ದಶಾವತಾರ, ಸೇನಾಪಡೆ, ಭಾರತದ ಮಹಾನೀಯರು, ಭಾರತೀಯ ಮಹಿಳೆಯರು, ಕೃಷ್ಣ ಲೀಲೆ ಹೀಗೆ ಹೇಳುತ್ತಾ ಸಾಗಿದರೆ ಒಂದೇ ಎರಡೇ... ಮನೆಯನ್ನೆಲ್ಲ ಒಮ್ಮೆ ಹುಡುಕಾಡಿದರೆ ಇಂತಹ ಬೊಂಬೆ ಇಲ್ಲ ಎನ್ನುವಂತಿಲ್ಲ.

ಗ್ರಾಮವೊಂದರಲ್ಲಿ ನಾಟಿ ಮಾಡುವುದರಿಂದ ಹಿಡಿದು, ಕಳೆ ಕೀಳುವುದು, ಫಸಲು ಕೊಯ್ದು ಹೊತ್ತು ಸಾಗುವುದು, ಅದನ್ನು ಬಡಿಯುವ ಹಾಗೂ ಗಾಳಿಗೆ ತೂರಿ ಹಸನು ಮಾಡುವ ವರೆಗಿನ ವಿವಿಧ ಹಂತದ ಬೊಂಬೆಗಳು ಇಷ್ಟವಾಗುತ್ತವೆ. ಅವುಗಳನ್ನು ಕಂಡಾಗ, ಇಡೀ ಕೃಷಿ ಬದುಕಿನ ಸೊಬಗು ಈ ಮನೆಯಲ್ಲಿ ಅಡಗಿದೆ ಎಂದು ಭಾಸವಾಗುತ್ತದೆ. ದೇಶದ ಸಂಪ್ರದಾಯ ಹಾಗೂ ಪರಂಪರೆಯನ್ನು ಬಿಂಬಿಸುವ ಪ್ರಯತ್ನವು ಅಲ್ಲಿ ಬೊಂಬೆಗಳಾಗಿ ಮೈದಳೆದಿದೆ. ಕುಲಕಸುಬು, ಜಾತ್ರೆ, ಉತ್ಸವ, ಮಾರುಕಟ್ಟೆ ವ್ಯವಸ್ಥೆ, ಬುಡಕಟ್ಟು ಜನಾಂಗದ ಜೀವನಶೈಲಿಯೂ ರಾರಾಜಿಸುತ್ತಿದೆ.

ಮಗನ ಕಂಡೆವು

ವೆಂಕಿ, ಚಲನಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಕರಾಟೆ ಕಿಂಗ್ ಶಂಕರ್‌ನಾಗ್ ಗರಡಿಯಲ್ಲಿ ಪಳಗಿದ್ದ ಅವರು ಬಣ್ಣದ ಲೋಕದಲ್ಲೂ ಹೆಸರು ಮಾಡಿದ್ದರು. 16 ವರ್ಷಗಳ ಹಿಂದೆ ಮಿಂಚಂತೆ ಬಂದ ಯಮರಾಯ ವೆಂಕಿ ಅವರನ್ನು ಅಷ್ಟೇ ವೇಗವಾಗಿ ಕರೆದೊಯ್ದಿದ್ದ.

ಮಗನ ಅಕಾಲಿಕ ಮರಣದಿಂದ ಕುಸಿದಿದ್ದ ಈ ದಂಪತಿಗೆ ಮತ್ತೆ ಆಸರೆಯಾಗಿದ್ದು, ಇವೇ ಬೊಂಬೆಗಳು. ಬೊಂಬೆಗಳ ಸಂಗ್ರಹದ ಬಗ್ಗೆ ಕೊಂಚ ನಿರಾಸಕ್ತಿ ಹೊಂದಿದ್ದ ದಂಪತಿ, ಮಗ ಇನ್ನಿಲ್ಲವಾದ ಬಳಿಕ ಹೆಚ್ಚು ಆಸಕ್ತಿ ತೋರಿದರು. ಅವುಗಳಲ್ಲಿ ಮಗನ ನೆನಪು ಕಾಣುತ್ತಲೇ ಇಂದಿಗೂ ದಿನದೂಡುತ್ತಿದ್ದಾರೆ.

‘ಮಗ ತೀರಿ ಹೋದ ಬಳಿಕ ಬೊಂಬೆಗಳೇ ನಮಗೆ ಎಲ್ಲವೂ ಆದವು. ಪ್ರತಿ ಬೊಂಬೆಯಲ್ಲೂ ಅವನೇ ಕಾಣಿಸುತ್ತಿದ್ದಾನೆ. ಹೀಗಾಗಿ, ಅವುಗಳ ಆರೈಕೆಯಲ್ಲೇ ಸಾಗುತ್ತಿದ್ದೇವೆ. ಮನೆಯಲ್ಲಿ ಮೂರು ಸಾವಿರಕ್ಕಿಂತ ಅಧಿಕ ಬೊಂಬೆಗಳಿವೆ. ಅವುಗಳನ್ನು ಎರಡು ತಿಂಗಳಿಗೊಮ್ಮೆ ನಾನೇ ಖುದ್ದು ನಿಂತು ಕ್ಲೀನ್ ಮಾಡುತ್ತಿದ್ದೆ. ಏನ್ ಮಾಡ್ಲಿ ವಯಸ್ಸಾಯ್ತು... ದೇಹದಲ್ಲಿ ಶಕ್ತಿ ಕುಗ್ಗುತ್ತಿದೆ. ಈಚೆಗೆ ಕೆಲಸಗಾರರಿಂದ ಅವುಗಳನ್ನು ಕ್ಲೀನ್ ಮಾಡಿಸುತ್ತಿದ್ದೇನೆ. ಬೊಂಬೆಗಳನ್ನು ಸ್ವಚ್ಛಗೊಳಿಸುವುದು ತುಂಬಾ ಕಷ್ಟದ ಕೆಲಸ. ಅವುಗಳನ್ನು ತುಂಬಾ ಜಾಗೂರಕತೆಯಿಂದ ಸ್ವಚ್ಛಗೊಳಿಸಬೇಕು. ಸ್ವಲ್ಪ ಬಲಪ್ರಯೋಗ ಮಾಡಿದರೂ ಅವುಗಳಿಗೆ ಹಾನಿಯಾಗುತ್ತದೆ’ ಎನ್ನುತ್ತಾರೆ.

‘ಬುದ್ಧನ ಪರ್ಣಕುಟೀರ ಈ ದಂಪತಿಗೆ ಇಷ್ಟವಾದ ಬೊಂಬೆ ಹಾಗೂ ಕಲಾಕೃತಿ. ಅದರ ಜೊತೆಗೆ ರಾಕ್‌ ಗಾರ್ಡನ್ ಸಹ ಇಷ್ಟವಂತೆ. ಹಳ್ಳಿಯ ವಾತಾವರಣ, ಒಕ್ಕಲುತನ, ತೊಟ್ಟಿಲು, ರುಬ್ಬುಗುಂಡು ಎಲ್ಲವೂ ಅದರಲ್ಲಿದೆ. ನಮ್ಮ ಬಾಲ್ಯವನ್ನು ರಾಕ್‌ ಗಾರ್ಡನ್ ನೆನಪಿಸುತ್ತದೆ’ ಎನ್ನುತ್ತಾರೆ ಅವರು.

ದಸರಾ ವೇಳೆ ಇವರ ಮನೆಯಲ್ಲಿ ಬೊಂಬೆ ಉತ್ಸವ ಮಾಡಲಾಗುತ್ತದೆ. ವಿವಿಧ ಸ್ಪರ್ಧೆಗಳಲ್ಲಿಯೂ ಭಾಗಿಯಾಗಿ ಪ್ರಶಸ್ತಿ ಗಳಿಸಿದ್ದಾರೆ. ‘ಪತಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೊಂಬೆಗಳನ್ನು ಸಂಗ್ರಹ ಮಾಡಿ, ಇಡೀ ಮನೆಯನ್ನೇ ಬೊಂಬೆಮಯ ಮಾಡುವ ಆಸೆ ಇದೆ. ಆದರೆ, ಏನು ಮಾಡೋದು ದೇಹಕ್ಕೆ ವಯಸ್ಸಾಗಿದೆ. ಶಕ್ತಿ ಇಲ್ಲ’ ಎಂದರು.

ವೇಷ ತೊರೆದ ಶ್ರೀನಿವಾಸ

ಶ್ರೀನಿವಾಸ್ ಅವರಿಗೆ ಮತ್ತೊಂದು ವಿಶೇಷವಾದ ಹವ್ಯಾಸವಿದೆ. ಪ್ರತಿ ವರ್ಷವೂ ಅವರು ಒಂದೊಂದು ರೀತಿಯ ವೇಷವನ್ನು ಧರಿಸಿ ಯಾವುದಾದರೂ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದರು. ಕಳೆದ ವರ್ಷ ಮೊಮ್ಮಗ ಸಿದ್ಧಾರ್ಥ್ ಮದುವೆ ವೇಳೆ ಸಾಯಿಬಾಬಾ ವೇಷ ಹಾಕಿ ಖುಷಿಪಟ್ಟಿದ್ದರು. ಆದರೆ, 45 ವರ್ಷಗಳಿಂದ ಮುಂದುವರೆಸಿಕೊಂಡು ಬಂದಿದ್ದ ಈ ಹವ್ಯಾಸಕ್ಕೆ ಅವರೀಗ ವಿದಾಯ ಹೇಳಿದ್ದಾರೆ. ಕಾರಣ ವಯಸ್ಸು. ‘ಮನಸ್ಸು ಇನ್ನೂ ಏನಾದರೂ ಮಾಡಬೇಕು ಎನ್ನುತ್ತೆ. ಆದರೆ, ಏನ್ ಮಾಡೋದು ದೇಹ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

ಅತ್ತೆಯ ಬಳುವಳಿ

ಈ ದಂಪತಿ, ಬೊಂಬೆ ಸಂಗ್ರಹ ಕಾರ್ಯ ಶುರು ಮಾಡಿದ್ದು ಇಂದು ನಿನ್ನೆಯಲ್ಲ. 60 ವರ್ಷಗಳ ಹಿಂದೆ. ‘ವಿವಾಹದ ಬಳಿಕ, ಪತಿಯ ತಾಯಿ (ಲಕ್ಷಮ್ಮ) ಪ್ರತಿ ನವರಾತ್ರಿಗೆ ಒಂದೊಂದುಥೀಮ್‌ನ ಬೊಂಬೆಗಳ ಸೆಟ್ ಅನ್ನು ನೀಡುತ್ತಿದ್ದರು. ಅದು ಪ್ರತಿವರ್ಷವೂ ಮುಂದುವರೆದಿತ್ತು. ಅವರು ನಿಧನರಾದ ಬಳಿಕ ನಾವಿಬ್ಬರು ಬೊಂಬೆಗಳ ಸಂಗ್ರಹ ಮುಂದುವರೆಸಿಕೊಂಡು ಬಂದೆವು’ ಎನ್ನುತ್ತಾರೆ ಪ್ರಭಾವತಿ.

‘ನನಗಿಂತಲೂ, ಪತಿಗೆ ಬೊಂಬೆಗಳೆಂದರೆ ಅತಿಯಾದ ಪ್ರೀತಿ. ಅವುಗಳನ್ನು ಅತಿಯಾಗಿ ಕಾಳಜಿ ಮಾಡುತ್ತಾರೆ. ವಯಸ್ಸಾದ್ದರಿಂದ ಬೊಂಬೆಗಳನ್ನು ನೋಡಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಆದರೆ, ಅವುಗಳೊಂದಿಗೆ ಕಾಲ ಕಳೆದು ಸಂತಸ ಪಡುತ್ತಾರೆ’ ಎನ್ನುತ್ತಾರೆ.

ದೆಹಲಿ, ಕೋಲ್ಕತ್ತ, ಮದ್ರಾಸ್, ಆಂಧ್ರಪ್ರದೇಶ ಹಲವು ರಾಜ್ಯಗಳಿಂದ ಹಾಗೂ ವಿದೇಶದಿಂದ ತಂದ ಬೊಂಬೆಗಳು ಅಲ್ಲಿವೆ. ದಂಪತಿಯ ಮಕ್ಕಳಾದ ವೆಂಕಿ ಹಾಗೂ ಸುಧೀರ್ ಕೆಲಸದ ನಿಮಿತ್ತ ಬೇರೆ ಕಡೆ ಅಥವಾ ವಿದೇಶಕ್ಕೆ ಹೋದಾಗಲೆಲ್ಲ ಅಲ್ಲಿಂದ ಬೊಂಬೆಗಳನ್ನು ಈ ದಂಪತಿಗೆ ಉಡುಗೊರೆಯಾಗಿ ತಂದು ಕೊಟ್ಟು ಅವರಿಬ್ಬರ ಹವ್ಯಾಸಕ್ಕೆ ತಾವೂ ಸಾಥ್ ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.