ADVERTISEMENT

ಕೇಬಲ್ ಶುಲ್ಕ ದುಬಾರಿಯಾಗಲ್ಲ: ‘ಟ್ರಾಯ್‌’ ಮಾರ್ಗಸೂಚಿ

ಪೃಥ್ವಿರಾಜ್ ಎಂ ಎಚ್
Published 27 ಡಿಸೆಂಬರ್ 2018, 6:25 IST
Last Updated 27 ಡಿಸೆಂಬರ್ 2018, 6:25 IST
   

ಕೇಬಲ್‌ ಮತ್ತು ಡಿಟಿಎಚ್‌ ನೆಟ್‌ವರ್ಕ್‌ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಇದೇ 29ರಿಂದ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇದು ಗ್ರಾಹಕ ಸ್ನೇಹಿ ನೀತಿಯಾಗಿದ್ದರೂ ಹಲವು ಗೊಂದಲಗಳುಗ್ರಾಹಕರನ್ನು ಕಾಡುತ್ತಿವೆ, ಬಗೆ ಬಗೆಯ ಪ್ರಶ್ನೆಗಳು ಸುಳಿದಾಡುತ್ತಿವೆ. ಅಂತಹ ಕೆಲವು ಪ್ರಶ್ನೆಗಳಿಗೆ ‘ಟ್ರಾಯ್‌’ ಮಾರ್ಗಸೂಚಿಯಲ್ಲಿಯೇ ಉತ್ತರಗಳಿವೆ. ಅವುಗಳನ್ನು ಪ್ರಶ್ನೋತ್ತರ ರೂಪದಲ್ಲಿ ತಿಳಿಸಲಾಗಿದೆ.

* ಇದೇ 29ರ ಮಧ್ಯರಾತ್ರಿಯಿಂದ ಕೇಬಲ್‌ ಸಂಪರ್ಕ ಸ್ಥಗಿತಗೊಳ್ಳುತ್ತದೆಯೇ?
ಖಂಡಿತ ಸ್ಥಗಿತಗೊಳ್ಳುವುದಿಲ್ಲ. ದೂರದದರ್ಶನದ 26 ಚಾನೆಲ್‌ಗಳು ಸೇರಿದಂತೆ ಉಚಿತವಾಗಿ ಲಭ್ಯವಿರುವ ಯಾವುದಾದರೂ 74 ಚಾನೆಲ್‌ಗಳು ಪ್ರಸಾರವಾಗುತ್ತವೆ. ಅಂದರೆ 100 ಚಾನೆಲ್‌ಗಳನ್ನು ನೋಡಬಹುದು.

* ಕೇಬಲ್ ನೆಟ್‌ವರ್ಕ್ ಮತ್ತು ಡಿಟಿಎಚ್‌ ಸಂಸ್ಥೆಗಳೆರಡಕ್ಕೂ ಈ ನಿಯಮ ಅನ್ವಯವಾಗುತ್ತದೆಯೇ?
ಪ್ರಸ್ತುತ ಡೆನ್‌, ಸಿಟಿ ಕೇಬಲ್‌, ಇನ್ ನೆಟ್‌ವರ್ಕ್‌ನಂಥ ಕೇಬಲ್‌ ನೆಟ್‌ವರ್ಕ್‌ ಸಂಸ್ಥೆಗಳು ಮತ್ತು ಟಾಟಾ ಸ್ಕೈ, ಸನ್‌ ಡೈರೆಕ್ಟ್‌, ವಿಡಿಯೊಕಾನ್‌ನಂತ ಡಿಟಿಎಚ್‌ ಸಂಸ್ಥೆಗಳು ಬ್ರಾಡ್‌ಕಾಸ್ಟ್‌ ಸಂಸ್ಥೆಗಳ ಚಾನೆಲ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತಿವೆ. ಎಲ್ಲರಿಗೂ ಅನ್ವಯವಾಗುವಂತೆ ಹೊಸ ನಿಯಮಗಳನ್ನು ರೂಪಿಸಲಾಗಿದೆ.

ADVERTISEMENT

*ನಮ್ಮ ನೆಚ್ಚಿನ ಧಾರಾವಾಹಿ ಪ್ರಸಾರವಾಗುವ ಚಾನೆಲ್‌ಗೆ ಶುಲ್ಕ ವಿಧಿಸಲಾಗಿದೆ. ಇಂತಹ ಹಲವು ಚಾನೆಲ್‌ಗಳನ್ನು ಶುಲ್ಕ ಪಾವತಿಸಿಯೇ ನೊಡಬೇಕು. ಹೀಗೆ ಎಷ್ಟು ಚಾನೆಲ್‌ಗಳಿಗೆ ಶುಲ್ಕ ಪಾವತಿಸಲು ಸಾಧ್ಯ?
ಟ್ರಾಯ್‌ನ ಹೊಸ ನಿಯಮಗಳ ಪ್ರಕಾರ ಯಾವುದೇ ಬ್ರಾಡ್‌ಕಾಸ್ಟ್‌ ಸಂಸ್ಥೆ, ತನ್ನ ಯಾವುದೇ ಚಾನೆಲ್‌ಗೆ ₹19ಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ. ತಮ್ಮ ಚಾನೆಲ್‌ನ ವೀಕ್ಷಕರನ್ನು ಕಳೆದುಕೊಳ್ಳಲು ಇಷ್ಟಪಡದ ಹಲವು ಬ್ರಾಡ್‌ಕಾಸ್ಟ್‌ ಸಂಸ್ಥೆಗಳು, ಈಗಾಗಲೇ ಚಾನೆಲ್‌ಗಳ ಗುಚ್ಛವನ್ನು ರೂಪಿಸಿವೆ.

ಉದಾಹರಣೆಗೆ ಕಲರ್ಸ್‌ ಸಮೂಹದ ಎಂಟು ಅಥವಾ ಒಂಬತ್ತು ಚಾನೆಲ್‌ಗಳ ಗುಚ್ಛಕ್ಕೆ ₹30 ದರ ನಿಗದಿಪಡಿಸಲಾಗಿದೆ. ಜತೆಗೆ ಶೇ 18ರಷ್ಟು ಜಿಎಸ್‌ಟಿ ಪಾವತಿಸಬೇಕು. ಗ್ರಾಹಕರು ಒಂದೊಂದು ಚಾನೆಲ್‌ಗೆ ಹಣ ಪಾವತಿಸುವ ಬದಲು, ಚಾನೆಲ್‌ಗಳ ಗುಚ್ಛಕ್ಕೆ ಹಣ ಪಾವತಿಸಿದರೆ ಸಾಕು.

ಇಂತಹ ಚಾನೆಲ್‌ಗಳ ಗುಚ್ಛವನ್ನು ಎಂಎಸ್‌ಒ ಸಂಸ್ಥೆಗಳೂ ರೂಪಿಸುವ ಅವಕಾಶವಿದ್ದು, ಗ್ರಾಹಕರ ಅನುಕೂಲಕ್ಕಾಗಿ ಅವರು ಕೂಡ ಪ್ಯಾಕೇಜ್ ಮಾಡಿದರೆ ಈಗ ಪಾವತಿಸುತ್ತಿರುವ ದರಕ್ಕೆ ನಿಮ್ಮಿಷ್ಟದ ಎಲ್ಲ ಚಾನೆಲ್‌ಗಳನ್ನೂ ನೋಡಬಹುದು. ಬ್ರಾಡ್‌ಕಾಸ್ಟ್‌ ಸಂಸ್ಥೆಗಳು ಹೆಚ್ಚಿನ ದರ ನಿಗದಿ ಪಡಿಸಿದ್ದರೂ, ಹೊಸ ದರ ವ್ಯವಸ್ಥೆ ಜಾರಿಯಾದ ನಂತರ, ವೀಕ್ಷಕರ ಸಂಖ್ಯೆ ಇಳಿಕೆಯಾದರೆ ದರ ತಗ್ಗಿಸುವ ಯೋಚನೆ ಮಾಡುವ ಸಾಧ್ಯತೆಯೂ ಇರುತ್ತದೆ.

* ಕೆಲವೊಮ್ಮೆ ತಿಂಗಳುಗಟ್ಟಲೆ ಮನೆ ಬಿಟ್ಟು ಹೊರಗೆ ಹೋಗಿರುತ್ತೇವೆ. ಆ ಸಂದರ್ಭದಲ್ಲಿ ಟಿ.ವಿ ನೋಡುವುದಿಲ್ಲ. ಆದರೂ ಹಣ ಪಾವತಿಸುವಂತೆ ಕೇಬಲ್ ಆಪರೇಟರ್‌ಗಳು ಕೇಳುತ್ತಾರೆ ಏನು ಮಾಡಬೇಕು?
ನೀವು ಹೊರಗೆ ಹೋಗುವುದಿದ್ದರೆ, ನಿಮ್ಮ ಕೇಬಲ್‌ ಆಪರೇಟರ್‌ ಸಂಸ್ಥೆಯವರಿಗೆ ಮೊದಲೇ ತಿಳಿಸಿ. ಮೂರು ತಿಂಗಳ ವರೆಗೆ ನೀವು ಟಿ.ವಿ ನೋಡದೇ ಇದ್ದರೆ, ನಿರ್ವಹಣಾ ಶುಲ್ಕವೆಂದು ಕೇವಲ ₹25 ಪಾವತಿಸಬೇಕು. ಮೂರು ತಿಂಗಳಿಗಿಂತ ಹೆಚ್ಚು ಅಂದರೆ 9 ತಿಂಗಳ ವರೆಗೆ ಬಳಸದೇ ಇದ್ದರೆ ಕೇವಲ ₹100 ಶುಲ್ಕ ಪಾವತಿಸಬೇಕು. ಆದರೆ ಯಾವುದೇ ಕೇಬಲ್ ನೆಟ್‌ವರ್ಕ್‌ ಸಂಸ್ಥೆ ಅಥವಾ ಡಿಟಿಎಚ್‌ ಆಪರೇಟರ್ ಸಂಸ್ಥೆಯಾಗಲಿ 9 ತಿಂಗಳ ನಂತರ ಪುನಃ ಸಂಪರ್ಕ ಶುಲ್ಕವೆಂದು ಹೆಚ್ಚಿನ ಮೊತ್ತ ಕೇಳುವಂತಿಲ್ಲ.

* ಪ್ರಸ್ತುತ ನಾವು ತಿಂಗಳೆಲ್ಲಾ ನೋಡಿದ ನಂತರ ಹಣ ಪಾವತಿಸುತ್ತಿದ್ದೇವೆ. ಆದರೆ ಇದೇ 29ರ ನಂತರ ಮುಂಗಡ ಪಾವತಿ ವ್ಯವಸ್ಥೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಮೊದಲೇ ಹಣ ಪಾವತಿಸಿ ನೋಡುವುದು ಕಡ್ಡಾಯವೇ?
ಟ್ರಾಯ್‌ನಹೊಸ ನಿಯಮಗಳ ಅನುಸಾರ ಮುಂಚಿತವಾಗಿ ಹಣಪಡೆಯಬೇಕೆ ಅಥವಾ ನಂತರ ಪಡೆಯಬೇಕೆ ಎಂಬುದನ್ನು ಆಯಾ ಎಂಎಸ್‌ಒಗಳೇ ನಿರ್ಧರಿಸಬಹುದು. ಬಹುತೇಕ ಕೇಬಲ್ ಆಪರೇಟರ್‌ಗಳು ತಿಂಗಳ ಕೊನೆಯಲ್ಲಿ ಗ್ರಾಹಕರಿಂದ ಹಣ ಸಂಗ್ರಹಿಸುತ್ತಾರೆ. ಇದೇ ವ್ಯವಸ್ಥೆಯನ್ನು ಮುಂದುವರಿಸಲು ಅವಕಾಶವಿದೆ.

*ಉಚಿತ ಚಾನೆಲ್‌ಗಳ ಪಟ್ಟಿಯಲ್ಲಿ ಇಲ್ಲದ ನಮ್ಮ ನೆಚ್ಚಿನ ಚಾನೆಲ್‌ಗಳನ್ನೆಲ್ಲಾ ನೋಡಬೇಕೆಂದರೆ ಏನು ಮಾಡಬೇಕು?
ಪ್ರಸ್ತುತ ಸುಮಾರು 500 ಚಾನೆಲ್‌ಗಳು ಉಚಿತವಾಗಿ ನೋಡಲು ಲಭ್ಯವಿವೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಚಾನೆಲ್‌ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇಲ್ಲದಿದ್ದರೆ, ಆ ಚಾನೆಲ್‌ನ ಹೆಸರು ಮತ್ತು ಅದಕ್ಕೆ ನಿಗದಿ ಪಡಿಸಿರುವ ದರವನ್ನು ಪಟ್ಟಿಮಾಡಿಕೊಂಡು ನಿಮ್ಮ ಕೇಬಲ್ ಆಪರೇಟರ್‌ನನ್ನು ಸಂಪರ್ಕಿಸಿ ಅವನ್ನಷ್ಟೇ ಕೇಳಿ ಪಡೆಯಬಹುದು. ಟ್ರಾಯ್‌ನ ಜಾಲತಾಣದಲ್ಲೂ ದರಪಟ್ಟಿ ಇದ್ದು ಪರಿಶೀಲಿಸಬಹುದು.

*ಕೇಬಲ್ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ದೂರು ನೀಡಬೇಕೆಂದರೆ ಕೇಬಲ್ ಆಪರೇಟರ್‌ಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳು ಏನು ಹೇಳುತ್ತವೆ?
ಹೊಸ ನಿಮಯಗಳ ಅನುಸಾರ ಯಾವುದೇ ಕೇಬಲ್ ಅಥವಾ ಡಿಟಿಎಚ್‌ ನೆಟ್‌ವರ್ಕ್‌ ಸಂಸ್ಥೆಯಾಗಲಿ, ತಮ್ಮ ವೆಬ್‌ಸೈಟ್‌ನಲ್ಲಿ ಟೋಲ್‌ಫ್ರೀ ಸಂಖ್ಯೆಯನ್ನು ಕಡ್ಡಾಯವಾಗಿ ಗ್ರಾಹಕರಿಗೆ ಲಭ್ಯವಾಗುವಂತೆ ನಮೂದಿಸಬೇಕು. ಗ್ರಾಹಕರ ಯಾವುದೇ ದೂರನ್ನು 72 ಗಂಟೆಯೊಳಗೆ ಪರಿಹರಿಸಬೇಕು.

ಒಂದು ವೇಳೆ 72 ಗಂಟೆಯಲ್ಲಿ ದೂರು ಇತ್ಯರ್ಥವಾಗದಿದ್ದರೆ, ಗ್ರಾಹಕರಿಂದ ಶುಲ್ಕ ಕೇಳುವಂತಿಲ್ಲ. ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿದ ನಂತರವೂ ಪರಿಹಾರ ಸಿಗದಿದ್ದರೆ, ನೋಡಲ್ ಅಧಿಕಾರಿಯನ್ನು ಸಂಪರ್ಕಿಸಬಹುದು. ಪ್ರತಿಯೊಂದು ಕೇಬಲ್ ನೆಟ್‌ವರ್ಕ್ ಸಂಸ್ಥೆಯಲ್ಲೂ ನೋಡಲ್ ಅಧಿಕಾರಿ ಇರುವುದು ಕಡ್ಡಾಯ.

*ಕೇಬಲ್ ಶುಲ್ಕ ಹೆಚ್ಚಾಗುತ್ತಾ? ಕಡಿಮೆಯಾಗುತ್ತಾ?
ಪ್ರಸ್ತುತ ಕೇಬಲ್ ಆಪರೇಟರ್‌ಗಳು ಒದಗಿಸುತ್ತಿರುವ ಎಲ್ಲ ಚಾನೆಲ್‌ಗಳು ಬೇಕೆಂದರೆ ಖಂಡಿತ ದುಬಾರಿಯಾಗುತ್ತದೆ. ಅವುಗಳಲ್ಲಿ ಗ್ರಾಹಕರಿಗೆ ಇಷ್ಟವಿಲ್ಲದ, ಗ್ರಾಹಕರು ನೋಡದ ಚಾನೆಲ್‌ಗಳೇ ಹೆಚ್ಚಾಗಿರುತ್ತವೆ. ಅಂತಹ ಚಾನೆಲ್‌ಗಳು ಬೇಕೆ? ಬೇಡವೇ? ಎಂಬುದನ್ನು ಗ್ರಾಹಕರೇ ನಿರ್ಧರಿಸಿಬಹುದು. ಗ್ರಾಹಕರ ನೆಚ್ಚಿನ ಚಾನೆಲ್‌ಗಳೆಲ್ಲಾ ಉಚಿತ ಚಾನೆಲ್‌ಗಳೇ ಆಗಿದ್ದರೆ, ಕೇವಲ ₹154ರಲ್ಲಿ ನೋಡಿ ಆನಂದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.