ADVERTISEMENT

ದಾಂಡೇಲಿಯಲ್ಲಿ ಮೊಸಳೆ ಕಂಡಾಗ

ಗೌರಿ ಭೀ.ಕಟ್ಟಿಮನಿ
Published 9 ಏಪ್ರಿಲ್ 2019, 20:00 IST
Last Updated 9 ಏಪ್ರಿಲ್ 2019, 20:00 IST
ಕ್ರೊಕೊಡೈಲ್ ಪಾರ್ಕ್‌ನಲ್ಲಿ ಕಂಡುಬಂದ ಮೊಸಳೆ ವಿಶ್ವಾಸ್ ಅಂಗಡಿ
ಕ್ರೊಕೊಡೈಲ್ ಪಾರ್ಕ್‌ನಲ್ಲಿ ಕಂಡುಬಂದ ಮೊಸಳೆ ವಿಶ್ವಾಸ್ ಅಂಗಡಿ   

ಆರಂಭದಲ್ಲಿ ಬೇಜಾರಾಗುತ್ತಿದ್ದ ದಿನಗಳು, ಇನ್ನೇನು ಕೋರ್ಸ್ ಮುಗಿಸಿ ಮತ್ತೆ ಜೀವನ ಮತ್ತೊಂದು ತಿರುವಿನತ್ತ ಹೆಜ್ಜೆ ಹಾಕಬೇಕನ್ನುವಷ್ಟರಲ್ಲಿ ಬಿಡಿಸಲಾಗದ ಸ್ನೇಹಸಂಬಂಧವೊಂದು ತಿಳಿಯದ ಹಾಗೇ ನಮ್ಮನ್ನು ಬಿಗಿಯಾಗಿ ಕಟ್ಟಿಹಾಕಿಬಿಡುತ್ತದೆ. ದಿನಗಳು ಕಳೆಯುತ್ತಿದ್ದರೆ ಮೆಮೊರೇಬಲ್ ಡೇಸ್‌ಗಳ ಲಿಸ್ಟ್ ದೊಡ್ಡದಾಗುತ್ತಲಿತ್ತು. ಅಪರಿಚಿತರಾಗಿ ಕ್ಯಾಂಪಸ್‌ಗೆ ಹೆಜ್ಜೆ ಇಟ್ಟವರು ದಿನಗಳೆದಂತೆ ಆತ್ಮೀಯರಾದ್ವಿ. ಬಿಟ್ಟು ಇರುವುದು ಕಷ್ಟ ಎನಿಸಿವಷ್ಟು ಅತಿಯಾಗಿ ಹಚ್ಕೊಂಡ್ವಿ. ಅದೆಷ್ಟೋ ಬಾರಿ ಆಡಿದ ಜಗಳಗಳು, ಮುನಿಸಿಕೊಂಡ ಕ್ಷಣಗಳು, ತಮಾಷೆಗಾಗಿ ಮಾಡಿದ ರ‍್ಯಾಗಿಂಗ್‌ಗಳು, ಲಾಸ್ಟ್ ಬೆಂಚ್‌ನಲ್ಲಿ ಕುಳಿತು ಮಾಡಿದ ಕೀಟಲೆಗಳು ಎಲ್ಲವೂ ಇನ್ನು ಸವಿಸವಿ ನೆನಪುಗಳು.

ಈ ನೆನಪಿಗೆ ಮತ್ತೊಂದು ಹೊಸ ಸೇರ್ಪಡೆ ಅದುವೇ ದಾಂಡೇಲಿ ಟ್ರಿಪ್. ಇತ್ತೀಚೆಗಷ್ಟೆ ನಮ್ಮ ಪತ್ರಿಕೋದ್ಯಮ ವಿಭಾಗದಿಂದ ದಾಂಡೇಲಿಗೆ ಹೋಗಿದ್ದ ‘ಒನ್ ಡೇ ಟ್ರಿಪ್’ ಅಂತೂ ಮರೆಯೋಕೆ ಸಾಧ್ಯವೇ ಇಲ್ಲ. ಅಷ್ಟೊಂದು ಮನರಂಜನೆ ಅಲ್ಲಿ ಮನಸೂರೆಗೊಂಡಿತ್ತು. ಜೂನಿಯರ್ಸ್, ಸೀನಿಯರ್ಸ್‌ ಎಲ್ರೂ ಸೇರಿ ಹೋದಂತಹ ಫಸ್ಟ್ ಟ್ರಿಪ್ ಅದು. ಅಷ್ಟೇ ಅಲ್ಲ; ಇದು ಮರೆಯದೇ ಇರೋದಕ್ಕೆ ಮುಖ್ಯ ಕಾರಣವೂ ಇದೆ. 11 ವರ್ಷಗಳ ನಂತರ ಮತ್ತೆ ನಮ್ಮ ವಿಭಾಗದಿಂದ ಟ್ರಿಪ್‌ಗೆ ಹೋಗಿದ್ದು! ಮುಂಜಾನೆ 7.30ಕ್ಕೆ ಬಸ್ ಯೂನಿವರ್ಸಿಟಿ ದಾರಿಯಲ್ಲಿ ಹೊರಡ್ತಾಯಿದ್ದಂಗೆ, ಸಾಂಗ್ ಪ್ಲೇ ಆಯ್ತು. ಎಲ್ರೂ ಮೈಚಳಿ ಬಿಟ್ಟು ಕುಣಿಯೋಕೆ ಶುರು ಮಾಡಿಯೇ ಬಿಟ್ರು. ದಿನವೂ ಮಾತಾಡಬೇಡಿ ಅಂತಿದ್ದ ನಮ್ ಸರ್ ಆವತ್ತು ಯಾವುದೇ ರಿಸ್ಟ್ರಿಕ್ಷನ್ ಹಾಕ್ದೆ ಎಂಜಾಯ್ ಮಾಡೋಕೆ ಪರ್ಮಿಶನ್ ಕೊಟ್ಟಿದ್ರು.

ಬೆಳಿಗ್ಗೆ ಮೊದ್ಲು ಹೋಗಿದ್ದು ದಾಂಡೇಲಪ್ಪನ ದೇವಸ್ಥಾನಕ್ಕೆ. ಪ್ರವಾಸ ಸುಖಕರವಾಗಿ, ಖುಷಿಯಾಗಿರಲೆಂದು ಪ್ರಾರ್ಥಿಸಿ ಮುಂದೆ ಹೋಗಿದ್ದು ಕ್ರೊಕೊಡೈಲ್ ಪಾರ್ಕ್‌ಗೆ. ಯಪ್ಪಾ ಕಪ್ಪಾದ ಕಾಳಿದೇವಿಯ(ಕಾಳಿನದಿ) ಮಡಿಲಲ್ಲಿ ಮರದ ಬಡ್ಡಿಯಂತಹ ಮೊಸಳೆಗಳನ್ನು ಕಂಡು ಎಲ್ರೂ ಅಬ್ಬಾ! ಎನ್ನುವ ಉದ್ಗಾರ ತೆಗೆದು ಕಣ್ಣರಳಿಸಿ ನೋಡುವುದರ ಜೊತೆಗೆ ಒಂದಿಷ್ಟು ಫೋಟೊ ಜೊತೆಗೆ ವಿಡಿಯೊ ಮಾಡಿ ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ ಹಾಕಿದ್ದೂ ಆಯ್ತು.

ADVERTISEMENT

ಬಹುತೇಕ ಜನರು ದಾಂಡೇಲಿಗೆ ಬರುವುದೇ ಅಂಬಿಕಾ ನಗರದಲ್ಲಿರುವ ಸ್ಕೈ ಪಾಯಿಂಟ್ ನೋಡೋದಕ್ಕೆ. ಸಮುದ್ರಮಟ್ಟದಿಂದ 1530 ಅಡಿ ಎತ್ತರದಿಂದ ನೋಡುತ್ತಿದ್ದರೆ ಆಹಾ! ಪ್ರಕೃತಿಯ ಸೌಂದರ್ಯ ಅದೇಷ್ಟು ಚಂದ. ಮಧ್ಯಾಹ್ನ ಊಟ ಮುಗಿಸಿ ಮೌಳಂಗಿ ಇಕೋ ಪಾರ್ಕ್‌ನತ್ತ ಮುಖ ಮಾಡಿದ್ವಿ. ಹೆಚ್ಚು ಎಂಜಾಯ್ ಮಾಡಿದ್ದೆ ಇಲ್ಲಿ. ರಭಸವಾಗಿ ಹರಿಯುತ್ತಿದ್ದ ಕಾಳಿನದಿ, ಸುತ್ತಲೂ ಹಚ್ಚಹಸಿರು ವಾತಾವರಣ, ತಣ್ಣಗೆ ಬೀಸುತ್ತಿರುವ ಗಾಳಿ, ಜೊತೆಗೆ ಆಡಲು ಜೋಕಾಲಿ, ಟೈರ್ ವೀಲ್, ಜಾರುಬಂಡೆ ಕಂಡು ಮತ್ತೆ ಮಕ್ಕಳಾದ್ವಿ.

ಝುಳುಝುಳು ಸದ್ದು ಮಾಡುತ್ತಿದ್ದ ನದಿಯಲ್ಲಿ ಕಾಲು ಇಳಿಬಿಟ್ಟು ನೀರಲ್ಲಿ ಕುಳಿತು ಒಬ್ರಿಗೊಬ್ರು ನೀರೆರೆಚುತ್ತ ಕಳೆದುಹೋಗಿದ್ವಿ. ಇದರ ಮಧ್ಯೆಯೇ ಗ್ರೂಪ್‌ ಫೋಟೊಸ್, ನೇಚರ್ ಫೋಟೊಗ್ರಫಿ, ಮೋಜು ಮಸ್ತಿಯ ಜೊತೆಗೆ ಕಲಿಕೆಯು ನಿರಂತರವಾಗಿತ್ತು. ಕಾಳಿನದಿಯ ಬ್ರಿಜ್ ಮೇಲೆ ಒಂದಿಷ್ಟು ಫೋಟೊಸ್ ತೆಗೆಸ್ಕೊಂಡ್ರಾಯ್ತು ಅಂತ ಫೋಸ್ ಕೊಡೋಕೆ ಮುಂದಾದ್ರೆ ವಾಹನಗಳು ಬರುತ್ತಿದ್ದಂತೆ ಕೇಳುತ್ತಿದ್ದ ಗಡಗಡ ಸೌಂಡ್‌ಗೆ ಹೃದಯ ಬಡಿತವೂ ಜಾಸ್ತಿಯಾಗುತ್ತಿತ್ತು. ಆದ್ರೂ ಅಲ್ಲಿಯ ಸೀನರಿಗೆ ಸಂಪೂರ್ಣ ಸೋತೋಗಿದ್ವಿ. ಅಷ್ಟೊತ್ತಿಗೆ ಸೂರ್ಯ ಕೂಡ ಸುಸ್ತಾಗಿ ಮನೆಗೆ ಹೋಗೋಕೆ ಸಿದ್ಧವಾಗಿ ಕತ್ತಲಿನ ಸುಳಿವು ಕೊಟ್ಟ, ಹಾಗಾಗಿ ನಾವೂ ಮತ್ತೆ ಧಾರವಾಡದತ್ತ ಹಿಂತಿರೋಗೋಕೆ ಅಣಿಯಾದ್ವಿ.

ಸೆಲ್ಫಿಗೊಂದು ಫೋಸು

ಬಿಸಿಲಿನಿಂದ ಬಳಲಿದ್ರೂ ನಮ್ಮಲ್ಲಿರುವ ಜೋಷ್ ಕಿಂಚಿತ್ತು ಕಮ್ಮಿಯಾಗಿರಲಿಲ್ಲ. ಬಸಣ್ಣಿ ಬಾ.. ಸಾಂಗ್ ಅಂತೂ ಹುಡುಗರನ್ನು ಸೀಟ್ ಮೇಲೆ ಕುಳಿತುಕೊಳ್ಳೋಕೆ ಬಿಟ್ಟಿರಲಿಲ್ಲ. ಎಲ್ಲರಿಗಿಂತ ಹೆಚ್ಚು ಎಂಟರ್‌ಟೈನ್ಮೆಂಟ್ ಕೊಟ್ಟಿದ್ದು ನಮ್ ಜಗದ್ಗುರು. ಆನೆ ಸೈಜ್ ಇರೋ ಇವನು ಜೋಕೆ ಸಾಂಗ್‌ಗೆ ಝೀರೋ ಫಿಗರ್‌ನ್ನು ಮೀರಿಸೋ ರೇಂಜ್‌ಗೆ ಸೊಂಟ ಬಳಕಿಸುತ್ತಿರುವಾಗ ಎಲ್ರೂ ಒನ್ಸ್‌ಮೋರ್ ಅಂತಾ ಶಿಳ್ಳೆ ಹೊಡದಿದ್ದೆ ಹೊಡದಿದ್ದು. ಧಾರವಾಡ ಸಮೀಪವಾಗುತ್ತಿದ್ದಂಗೆ ಎಲ್ರೂ ಹೋಲ್‌ಸೇಲಾಗಿ ಹೆಜ್ಜೆ ಹಾಕಿ ಖುಷಿಯ ವಿರಾಮ ಕೊಟ್ವಿ. ಒಟ್ಟಿನಲ್ಲಿ ಪಿಜಿ ಲೈಫ್‌ನ ದಿ ಬೆಸ್ಟ್ ಮೆಮೊರಿ ಈ ಒನ್ ಡೇ ಟ್ರಿಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.