ಭಾರತದಲ್ಲಿನ ಜಾತಿ, ಉಪಜಾತಿಗಳ ಸಂಖ್ಯೆ ಸಾವಿರಾರು. ಈ ಜಾತಿಗಳ ಮೂಲ ಕಸುಬುಗಳ ನೆರವಿನಿಂದಲೇ ದೇಶದ ಸಂಸ್ಕೃತಿ ರೂಪಿತವಾಗಿದೆ. ಜನಪದ ಶೈಲಿಯ ಜೀವನದಿಂದ, ರೂಢಿ, ಸಂಪ್ರದಾಯ, ಆಚಾರ, ವಿಚಾರಗಳಿಂದ ನಮ್ಮ ದೇಶದ ಸಂಸ್ಕೃತಿಯ ಕಟ್ಟುವಿಕೆ ಆಗಿದೆ. ಉದಾಹರಣೆಗೆ ಕುಂಬಾರಿಕೆ, ಕಮ್ಮಾರಿಕೆ, ನೇಕಾರಿಕೆ, ಚಮ್ಮಾರಿಕೆ ಇನ್ನೂ ಹಲವು ಕುಲಕಸುಬುಗಳು ನಾಡಿನ ಸಾಂಸ್ಕೃತಿಕ ಲೋಕವನ್ನು ಸಿರಿವಂತಗೊಳಿಸಿವೆ. ಆದರೆ ಆಧುನಿಕತೆಯ ಹೊಡೆತಕ್ಕೆ ಎಲ್ಲಾ ಕುಲಕಸುಬುಗಳು, ಸಂಪ್ರದಾಯದ ರಾಯಭಾರಿಗಳೆಂದೇ ಬಿಂಬಿಸಲ್ಪಡುವ ಅನೇಕ ವೃತ್ತಿಗಳು ನಲುಗಿ ಹೋಗಿವೆ. ಇದಕ್ಕೆ ಚಮ್ಮಾರಿಕೆ ವೃತ್ತಿ ಹೊರತಲ್ಲ.
ಬಸವಣ್ಣನವರಿಗೆ ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿದ ಮಹಾನ್ ಕಾಯಕ ಶರಣ ಸಮಗಾರ ಹರಳಯ್ಯ ಕುಲದೈವವೆಂದು ಭಕ್ತಿಯಿಂದ ಆರಾಧಿಸುವವರು ಇವರು. ಚರ್ಮದ ಕೆಲಸ ಮಾಡುವವರು ಇವರು. ಚಪ್ಪಲಿ, ಶೂ ತಯಾರು ಮಾಡುವ ಚರ್ಮಶಿಲ್ಪಿಗಳು. ಇವರು ಚಪ್ಪಲಿ ರಿಪೇರಿ ಮಾಡುವ, ಚರ್ಮದ ಬೆಲ್ಟ್, ಚೀಲ ಹೀಗೆ ನಾನಾ ಬಗೆಯ ಕಾರ್ಯಗಳನ್ನು ಮಾಡುತ್ತಾರೆ. ಸುಡು ಬಿಸಿಲಲ್ಲಿ, ರಸ್ತೆ ಬದಿ ದೂಳಿನಲ್ಲಿ ಕುಳಿತು ತಮ್ಮ ನಿತ್ಯ ಕಾಯಕವನ್ನು ಮಾಡುವ ಇವರ ಗೋಳು ಕೇಳುವವರಿಲ್ಲ.
ದೊಡ್ಡ ಶೋರೂಂಗಳಲ್ಲಿ ಲೇಬಲ್‌ನಲ್ಲಿ ನಮೂದಿಸಿದ ಮೊತ್ತಕ್ಕೆ ಚಪ್ಪಲಿ ಖರೀದಿಸುವ ಹಲವರು, ಅದೇ ಚಪ್ಪಲಿ ಕಾಲ ಕ್ರಮೇಣ ಕಿತ್ತು ಹೋದಾಗ ಚಮ್ಮಾರರ ಬಳಿ ಚೌಕಾಸಿ ಮಾಡುತ್ತ ನಿಲ್ಲುತ್ತಾರೆ! ಇಲ್ಲಿ ನಾವು ಗಮನಿಸಬೇಕಾದುದು, ಚಮ್ಮಾರರ ಬದುಕು ಸಂಕಷ್ಟಕ್ಕೆ ಸಿಲುಕಿರುವುದನ್ನು, ಅವರ ಜೀವನ ನಿತ್ಯವೂ ಸಮಸ್ಯೆಯ ಜೋಳಿಗೆಯಲ್ಲಿ ತೂಗುತ್ತಿರುವುದನ್ನು. ಚಮ್ಮಾರರು ಪಾಲಿಶ್ ಮಾಡುವ ಶೂ, ಚಪ್ಪಲಿಗಳು ಹೊಳಪು ಕಾಣುತ್ತಿವೆಯೇ ವಿನಾ ಅವರ ಬದುಕು ಹೊಳಪು ಕಾಣುತ್ತಿಲ್ಲ. ವಿವಿಧ ರೀತಿಯ ರೆಡಿಮೇಡ್ ಚಪ್ಪಲಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಚಮ್ಮಾರಿಕೆಯ ಕಸುಬನ್ನೇ ಅವಲಂಬಿಸಿದ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿವೆ.
ಚಮ್ಮಾರರು, ಸಮಗಾರರು, ಮೋಚಿ ಎಂಬ ಹೆಸರುಗಳಿಂದ ಕರೆಸಿಕೊಳ್ಳುವ ಇವರಲ್ಲಿ ಅನುಕೂಲಸ್ಥರು ಬಹಳ ಕಡಿಮೆ. ಈ ಸಮುದಾಯ ಚೆನ್ನಾಗಿ ಓದಿಕೊಂಡಿಲ್ಲ. ಇತರೆ ಸಮುದಾಯಗಳಿಗೆ ಹೋಲಿಕೆ ಮಾಡಿದರೆ ಚಮ್ಮಾರರ ಸಮುದಾಯದ ಪಾಲಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ ಎನ್ನಬಹುದು.
ವಿವಿಧೆಡೆ ರಸ್ತೆ ವಿಸ್ತರಣೆ ಕಾರ್ಯಗಳಿಂದಾಗಿ ಇವರ ಪುಟ್ಟ ಮನೆಗಳು ಸರ್ವನಾಶವಾಗಿವೆ, ಬದುಕು ಬೀದಿ ಪಾಲಾಗಿದೆ. ಹಾಗೆಯೇ, ಇವರಿಗೆ ಹೂಡಿಕೆಗೆ ಹಣಕಾಸಿಕ ಕೊರತೆ, ಚರ್ಮದಂತಹ ಕಚ್ಚಾ ಸಾಮಗ್ರಿಗಳ ಸಮಸ್ಯೆ, ಹೆಚ್ಚು ಹೆಚ್ಚು ಉತ್ಪಾದಿಸಲು ಯಂತ್ರೋಪಕರಣಗಳ ಸಮಸ್ಯೆ, ತಾವು ಮಾಡಿದ ಚರ್ಮ ಉತ್ಪನ್ನಗಳಿಗೆ ಮಾರುಕಟ್ಟೆಯ ಸಮಸ್ಯೆ, ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಇಲ್ಲದಿರುವುದು, ಬೃಹತ್ ಚಪ್ಪಲಿ, ಶೂ ಕಂಪನಿಗಳಿಂದ ತೀವ್ರ ಸ್ಪರ್ಧೆ, ಉತ್ತಮ ಚರ್ಮ ಉತ್ಪನ್ನಗಳನ್ನು ತಯಾರಿಸಲು ಸೂಕ್ತ ತರಬೇತಿಯ ಕೊರತೆ, ಸಹಾಯಕ ಕಾರ್ಮಿಕರ ಸಮಸ್ಯೆ, ಹೀಗೆ ಇನ್ನೂ ಅನೇಕ ಸಮಸ್ಯೆಗಳು ಚಮ್ಮಾರರ ವೃತ್ತಿಗೆ ಅಡ್ಡಿಯಾಗಿ ನಿಂತಿವೆ.
ಇದರ ಪರಿಣಾಮವಾಗಿ, ಬಹುತೇಕ ಚಮ್ಮಾರ ಕುಟುಂಬಗಳು ತಮ್ಮ ಮೂಲಕಸುಬನ್ನು ತೊರೆದಿವೆ. ಇತರೆ ಕೆಲಸಗಳನ್ನು ಅವಲಂಬಿಸಿ ವಲಸೆ ಹೋಗಿವೆ. ಚಮ್ಮಾರರ ಓಣಿ, ಬೀದಿಗಳು ಇಂದು ಆ ಹೆಸರನ್ನು ಕಳೆದುಕೊಳ್ಳುತ್ತಿವೆ. ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಈ ಸಮುದಾಯ. ಇದು ತೀವ್ರ ಖೇದಕರ ಸಂಗತಿ. ಮುಸುಕಾಗಿರುವ ಚಮ್ಮಾರರ ಬುದುಕು ಹೊಳಪನ್ನು ಕಾಣಬೇಕಾದರೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು, ಸಂಘ, ಸಂಸ್ಥೆಗಳು ಇವರ ನೆರವಿಗೆ ಬರಬೇಕಾಗಿದೆ.
ಆರ್ಥಿಕ ಸಹಾಯ, ಕಚ್ಚಾ ವಸ್ತುಗಳನ್ನು ಒದಗಿಸುವುದು, ತಾಂತ್ರಿಕ ಸಹಾಯ, ಸೂಕ್ತ ಮಾರುಕಟ್ಟೆ ಒದಗಿಸುವುದು, ಶೈಕ್ಷಣಿಕ ಸಾಲ ಒದಗಿಸುವುದು, ವೃತ್ತಿ ಸಾಲ ಕೊಡುವುದು, ತರಬೇತಿ ನೀಡುವುದು, ಚರ್ಮ ಕುಟೀರದಂತಹ ಅಂಗಡಿಗಳನ್ನು ಒದಗಿಸುವುದು ಮುಂತಾದ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಚಮ್ಮಾರರ ಕಷ್ಟಗಳಿಗೆ ಸ್ಪಂದಿಸಬಹುದು. ಚಮ್ಮಾರರು ಸಹ ತಮ್ಮ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವುದರ ಮೂಲಕ ತಮ್ಮ ಅಭಿವೃದ್ಧಿಯನ್ನು ತಾವು ಮಾಡಿಕೊಳ್ಳುವಲ್ಲಿ ಮುಂದಾಗಬೇಕಿದೆ ಎಂಬುದನ್ನು ಮರೆಯುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.