ADVERTISEMENT

ಹೇಳ್ತಿನಿ ಕೇಳ: ಕಂಬಾರರ ಲೋಕದಲ್ಲೊಂದು ‘ಅನುವಾದ’ ಯಾನ

ಕೃಷ್ಣಾ ಮನವಲ್ಲಿ
Published 12 ಜೂನ್ 2021, 19:30 IST
Last Updated 12 ಜೂನ್ 2021, 19:30 IST
ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ   

ಕಂಬಾರರ ಸಾಹಿತ್ಯದ ಭಾಷೆಯ ಸೊಗಡು, ಜನಪದ ಲಹರಿ, ಲಯ, ದನಿ, ಬನಿ ಸುಲಭಕ್ಕೆ ದಕ್ಕುವಂತಹದ್ದಲ್ಲ. ಇದನ್ನೆಲ್ಲ ಮತ್ತೊಂದು ಭಾಷೆಗೆ ಯಥಾವತ್ತಾಗಿ ಹಿಡಿದಿಡುವುದು ಅಸಾಧ್ಯದ ಮಾತೇ ಸರಿ. ಅಂತಹ ಸವಾಲಿನ ಕೆಲಸಕ್ಕೆ ಕೈಹಾಕಿ ಕಂಬಾರರಿಂದಲೇ ಸೈ ಎನಿಸಿಕೊಂಡ ಅನುವಾದಕಿಯ ‘ಅನುವಾದ ಯಾನ’ದ ಅನುಭವ ಕಥನ ಇಲ್ಲಿದೆ...

***

ಸಾಹಿತಿ ಚಂದ್ರಶೇಖರ ಕಂಬಾರರ ಕೃತಿಗಳ ಅನುವಾದಕ್ಕೆ ತೊಡಗಿದ ನನ್ನ ಇಡೀ ಸಾಹಿತ್ಯ ಪಯಣದ ಬಗ್ಗೆ ಚಿಂತಿಸಿದಾಗ, ನನ್ನ ಮನಸ್ಸು 90ರ ದಶಕಕ್ಕೆ ಹಿಂದೋಡುತ್ತದೆ. ಆಗ ನಾನು ಹಿರಿಯ ಸಂಗೀತಗಾರರಾದ ಪಂಡಿತ್ ರಾಜೀವ ತಾರಾನಾಥ ಅವರಲ್ಲಿ ಸರೋದ್‌ ಕಲಿಯುತ್ತಿದ್ದೆ. ತಾರಾನಾಥರು ಶ್ರೇಷ್ಠ ಸಂಗೀತಗಾರರಷ್ಟೇ ಅಲ್ಲ ಪ್ರಮುಖ ಸಾಹಿತ್ಯ ವಿಮರ್ಶಕರು ಹಾಗೂ ಸಂಸ್ಕೃತಿ ಚಿಂತಕರು.

ADVERTISEMENT

ಕಂಬಾರ ಹಾಗೂ ತಾರಾನಾಥರ ಸ್ನೇಹ 60ರ ದಶಕದ್ದು. ಈಗಲೂ ಕಂಬಾರರು ತಮ್ಮ ಕೃತಿಗಳನ್ನು ತಾರಾನಾಥರ ಮುಂದೆ ಮೊದಲು ಓದಿ, ಅವರ ಒಪ್ಪಿಗೆಯ ಮುದ್ರೆ ಬಿದ್ದ ಮೇಲೆಯೇ ಪ್ರಕಟಣೆಗೆ ಕಳಿಸುತ್ತಾರೆ. ಹಾಗೆ ಕಂಬಾರರ ಕೆಲ ಕೃತಿಗಳ ನಾಯಕರು ರಾಜೀವ ತಾರಾನಾಥ ಹಾಗೂ ಅವರ ತಂದೆ ಪಂಡಿತ್ ತಾರಾನಾಥರ ವ್ಯಕ್ತಿತ್ವವನ್ನು ನೆನಪಿಗೆ ತರುತ್ತಾರೆ. ವಿಶೇಷವಾಗಿ ‘ಚಕೋರಿ’ಯ ಚಂದಮುತ್ತನಂತಹ ಸಂಗೀತಗಾರರು, ಆದರ್ಶವಾದಿಗಳು, ‘ಶಿಖರ ಸೂರ್ಯ’ದ ಶಿವಪಾದ, ನಿನ್ನಡಿ... ಹೀಗೆ.

ಆ ದಿನ ಕಂಬಾರರ ಭೇಟಿಯ ನಂತರ, ನನ್ನ ಗುರುಗಳಾದ ರಾಜೀವ ತಾರಾನಾಥರು ಅನುವಾದಿಸಿದ ಕಂಬಾರರ ‘ಜೋಕುಮಾರಸ್ವಾಮಿ’ ನಾಟಕವನ್ನು ಪುನಃ ಓದತೊಡಗಿದೆ. ಇದು 70ರ ದಶಕದಲ್ಲಿ ಕಂಬಾರರು ಬರೆದ ನಾಟಕ. ಅವರ ಜನಪದ ಲಹರಿ, ಭಾಷೆಯ ಸೊಗಡು, ಲಯ, ದನಿ... ಎಲ್ಲವನ್ನೂ ಇಂಗ್ಲಿಷ್ ಭಾಷೆಯಲ್ಲಿ ಹಿಡಿದಿಟ್ಟಿರುವ, ಅನುವಾದದ ಸಾಧ್ಯತೆಗಳನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ಮೂಡಿಬಂದಿರುವ ಕೃತಿ ನನ್ನನ್ನು ಬೆರಗಾಗಿಸಿತು. ಕಂಬಾರರ ಕೃತಿಗಳನ್ನು ಅನುವಾದಿಸಬೇಕೆಂಬ ಪ್ರೇರಣೆ ನನಗೆ ಸಿಕ್ಕಿದ್ದು ಇಲ್ಲಿ. ಆದರೂ ಆ ಕೆಲಸಕ್ಕೆ ನಾನು ಕೈ ಹಚ್ಚಿದ್ದು ಕೆಲ ವರ್ಷಗಳ ನಂತರ.

ನಾನು ಅಮೆರಿಕದಲ್ಲಿ ವ್ಯಾಸಂಗ ಮುಗಿಸಿ, ಇಲಿನಾಯ್‌ನಲ್ಲಿ ‘ಗ್ಲೋಬಲ್‌ ಲಿಟರೇಚರ್ಸ್‌’ (ಜಗತ್ತಿನ ಸಾಹಿತ್ಯಗಳು) ಎನ್ನುವ ಬಹಳ ಪ್ರಚಲಿತವಾಗಿದ್ದ ಕೋಸ್೯ ಅನ್ನು ಪಾಠ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಬೇರೆ ಬೇರೆ ಭಾಷಾ ಸಾಹಿತ್ಯಗಳು ‘ಗ್ಲೋಬಲ್ ಲಿಟರೇಚರ್’ ಎಂಬ ಪರಿಕಲ್ಪನೆಯಲ್ಲಿ ಹೇಗೆ ಬಿಂಬಿತವಾಗುತ್ತವೆ ಎನ್ನುವ ಪ್ರಶ್ನೆ ಕಾಡತೊಡಗಿತು. ಬಹುತೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಖ್ಯಾತಿ ಪಡೆದ, ಭಾರತದ ಆಂಗ್ಲ ಲೇಖಕರ ಬರಹವೇ ಇಲ್ಲಿ ಕಾಣಸಿಗುವುದು. ವಸಾಹತೋತ್ತರ ಸಾಹಿತ್ಯ ವಿಮರ್ಶಕರು, ದಕ್ಷಿಣ ಏಷ್ಯಾದ ಸಂಸ್ಕೃತಿ ಚಿಂತಕರು ಸಹ ಈ ವರ್ಗದ ‘ಸ್ಟಾರ್‌’ ಬರಹಗಾರರನ್ನೇ ಎತ್ತಿ ಹಿಡಿಯುತ್ತಾರೆ, ಅವರ ಬಗ್ಗೆಯೇ ಬರೆಯುತ್ತಾರೆ, ಅವರನ್ನೇ ವೈಭವೀಕರಿಸುತ್ತಾರೆ.

ಇದೇ ಸಮಯದಲ್ಲಿ ನಾನು ದಕ್ಷಿಣ ಭಾರತದ ಸಂಸ್ಕೃತಿಗಳ ಬಗ್ಗೆ ಸಂಶೋಧಿಸುತ್ತಿದ್ದೆ. ಹಾಗಾಗಿ, ನಮ್ಮ ಭಾರತೀಯ ಭಾಷೆಗಳಲ್ಲಿ ಬರೆಯುವ, ಅದರಲ್ಲೂ ದಕ್ಷಿಣ ಭಾರತದ ಭಾಷೆಗಳ ಬರಹಗಾರರು ಮತ್ತು ಪ್ರಬಲ ಜಾತಿ, ವರ್ಗಗಳಿಗೆ ಸೇರದ ಲೇಖಕರು ಇಂತಹ ಗ್ಲೋಬಲ್ ಸಂದರ್ಭಗಳಲ್ಲಿ ಹೆಚ್ಚಾಗಿ ತೋರಿಬರುವುದಿಲ್ಲ ಎನ್ನುವ ಸತ್ಯ ಗೋಚರವಾಗತೊಡಗಿತು. ಕಂಬಾರರಂತಹ ಅನನ್ಯ ಸಾಹಿತಿಯ ಬರಹಗಳನ್ನು ಅನುವಾದಿಸಬೇಕು, ಗ್ಲೋಬಲ್‌ ಲಿಟರೇಚರ್ಸ್‌ನಂತಹ ಪಠ್ಯಗಳಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ನಿರ್ಧಾರವನ್ನು ಮತ್ತೊಮ್ಮೆ ಮಾಡಿದೆ.

2015ರ ಆಸುಪಾಸಿನಲ್ಲಿ ಕಂಬಾರರನ್ನು ಭೇಟಿ ಮಾಡಿ, ಅವರ ಕೃತಿಗಳನ್ನು ಅನುವಾದಿಸುವ ಬಗ್ಗೆ ಮಾತನಾಡಿದೆ. ನಂತರ ಹೊರಬಂದದ್ದು ಅವರ ‘ಕರಿಮಾಯಿ’ ಕಾದಂಬರಿಯ ಭಾಷಾಂತರ. ಈ ಕೃತಿಯಲ್ಲಿ ಕಾಣುವ ತಾಯಿಯ ಆದಿಮ ಪುರಾಣದ ಪರಿಕಲ್ಪನೆ ಕಂಬಾರರ ಎಲ್ಲ ಸೃಷ್ಟಿಯ ಜೀವಾಳ. ಕರಿಮಾಯಿಯ ಜೊತೆಗೆ, ಅದೇ ತಾನೆ ಪ್ರಕಟವಾದ ಅವರ ಕಾದಂಬರಿ ‘ಶಿವನ ಡಂಗುರ’ವನ್ನು 2017ರಲ್ಲಿ ಅನುವಾದ ಮಾಡಿದೆ. ‘ಕರಿಮಾಯಿ’ ಅನುವಾದ 2017ರ ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿತು.

ಕಂಬಾರರ ‘ಋಷ್ಯಶೃಂಗ’ ಹಾಗೂ ‘ಮೆಹಮೂದ್ ಗವಾನ್’ ಎಂಬ ಎರಡು ನಾಟಕಗಳನ್ನು ಒಳಗೊಂಡ ಅನುವಾದಿತ ಕೃತಿ ‘Two Plays’ಗೆ ಕೊರೊನಾ ಸಾಂಕ್ರಾಮಿಕದ ಸಂದಿಗ್ಧ ಕಾಲದಲ್ಲೂ ಬಹಳ ಮೌಲಿಕವಾದ ವಿಮರ್ಶೆ ದೊರೆತಿದೆ. ಡಿಜಿಟಲ್ ಮಾಧ್ಯಮ, ವಾರ್ತಾ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಸಂದರ್ಶನಗಳೂ ಸಾಹಿತ್ಯ ಚರ್ಚೆಗಳೂ ಹೊರಬಂದಿವೆ. ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದಂತಹ ಹಲವಾರು ಸಾಹಿತ್ಯ ಉತ್ಸವಗಳಲ್ಲಿ ಚರ್ಚೆಗಳು ನಡೆದಿವೆ.

ಕೊರೊನಾ ಕಾಲಘಟ್ಟ ಹೊಸ ಸವಾಲುಗಳನ್ನು ಒಡ್ಡಿದೆ. ಇಂತಹ ಸಮಯದಲ್ಲಿ ಬರವಣಿಗೆ ಇತರರೊಂದಿಗೆ ಸಂಪರ್ಕ ಬೆಸೆಯುವ ಕೊಂಡಿ. ಈ ಸಂವಹನ ಕ್ರಿಯೆ ‘ನಾನು ಏಕಾಂಗಿಯಲ್ಲ’ ಎನ್ನುವ ಭಾವ ಹುಟ್ಟಿಸುತ್ತದೆ. ಹಾಗೆಯೇ ನಾವು ಅನುವಾದಿಸುವ ಕೃತಿಯನ್ನು ಎಷ್ಟು ಜಾಗರೂಕತೆಯಿಂದ ಆರಿಸಬೇಕು ಎನ್ನುವುದು ಈಗ ಬಹಳ ಮುಖ್ಯ. ಯಾವ ಕೃತಿಗೆ ನಾವು ಸ್ಪಂದಿಸುತ್ತೇವೆ, ಯಾವ ಕೃತಿ ನಾವು ಒಪ್ಪುವ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಮೆರೆಯುತ್ತದೆ ಎನ್ನುವುದು ನಿರ್ಣಾಯಕ ಆಗುತ್ತದೆ‌. ಇಂಥ ಕೃತಿಗಳನ್ನು ಅನುವಾದಿಸುವ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಓದುಗರಿಗೆ ಈ ಕೃತಿ ದೊರೆಯುವಂತೆ ಮಾಡುವ ಕ್ರಿಯೆ ಅತ್ಯಂತ ಅವಶ್ಯಕ ಎನ್ನಿಸುತ್ತದೆ.

20ನೇ ಶತಮಾನದಲ್ಲಿ ಹೊರಬಿದ್ದ ನವ್ಯ ಸಾಹಿತ್ಯಕ್ಕೆ ವಿರುದ್ಧವಾದ ನೆಲೆಯಲ್ಲಿ ಬರೆದ ಕಂಬಾರರ ಬರವಣಿಗೆ ಅಚ್ಚರಿ ಮೂಡಿಸುತ್ತದೆ. ಐರೋಪ್ಯ ದೇಶ ಹಾಗೂ ಸಂಸ್ಕೃತಿಗಳಿಂದ ಗಾಢವಾಗಿ ರೂಪುಗೊಂಡ ನವ್ಯ ಸಾಹಿತ್ಯಕ್ಕಿಂತ ವಿಭಿನ್ನವಾದ ಹಾದಿ ತೋರಿದವರು ಅವರು. ಜನಪದ ಹಾಗೂ ಮಿಥ್‌ ಪರಂಪರೆಗಳಲ್ಲಿ ತಮ್ಮ ಮೂಲ ನೆಲೆಯನ್ನು ಕಂಡುಕೊಂಡವರು.

‘ನಾನು ಹುಟ್ಟಿದ್ದು ಉತ್ತರ ಕರ್ನಾಟಕದ ಹಳ್ಳಿ ಗೋಡಗೇರಿಯಲ್ಲಿ. ಈ ಚಿಕ್ಕ ಜನಪದ ತವರೇ ನನ್ನ ಚಿಂತನೆಯನ್ನು ಜೀವನಾದ್ಯಂತ ಒಗ್ಗೂಡಿಸಿ ಬೆಳೆಸಿದ್ದು. ಮಿಥ್‌ ಕಥನಗಳು, ಜನಸಾಮಾನ್ಯರು ಹೇಳುತ್ತಿದ್ದ ಕಥೆ, ಪ್ರಸಂಗಗಳು, ಅಚ್ಚುಕಟ್ಟಾಗಿ ಹೆಣೆದ ಬದುಕಿನ ಶೈಲಿ- ಇವೆಲ್ಲವೂ‌ ಈ ತಾಣದಲ್ಲೇ ನನಗೆ ದೊರೆತಿದ್ದು. ನಾನಿಲ್ಲಿ ನನ್ನ ಬೇರುಗಳನ್ನು ಕಂಡುಕೊಂಡೆ. ಈ ಹಳ್ಳಿಯೇ ನನ್ನ ಬರವಣಿಗೆಯಲ್ಲಿ ಬರುವ ಶಿವಾಪುರದ ಮೂಲದ್ರವ್ಯ’ ಎನ್ನುತ್ತಾರೆ ಕಂಬಾರರು.

‘ಇಲ್ಲಿನ ಮಿಥ್‌ ಕಲ್ಪನೆಯಿಂದ ಪಡೆದುಕೊಳ್ಳುವುದಷ್ಟೇ ಅಲ್ಲ, ನನ್ನ ‘ಭಾರತೀಯತೆ’ಯ ಪರಿಕಲ್ಪನೆಯು ಇಲ್ಲೇ ಹುಟ್ಟುತ್ತದೆ. ಮೇಲಾಗಿ ಈ ನನ್ನ ಶಿವಾಪುರ ಹೊರಗಿನ ದೇಶ, ಜಗತ್ತಿನ ಸೆಳೆತ- ತಲ್ಲಣಗಳಿಂದ ದೂರವಾಗಿಲ್ಲ. ಇದು ಹೊರಜಗತ್ತಿನ ಕನ್ನಡಿ ಕೂಡಾ ಆಗುತ್ತದೆ. ನನ್ನ ಸಂಪೂರ್ಣ ಜಗದೃಷ್ಟಿಯನ್ನು ರೂಪಿಸುತ್ತದೆ ಈ ನೆಲ’ ಎಂದಿದ್ದಾರೆ.

ಉತ್ತರ ಕರ್ನಾಟಕದ ಗ್ರಾಮ್ಯ ಸಮುದಾಯದ ಸಂಸ್ಕೃತಿಯನ್ನು ಅತ್ಯಂತ ಸಹಜವಾಗಿ ಮೈಗೂಡಿಸಿಕೊಂಡವರು ಕಂಬಾರರು. ಅವರ ಕಾಲ್ಪನಿಕ ಶಿವಾಪುರದಲ್ಲಿ ಮನುಷ್ಯರು, ದೇವತೆಗಳು, ದಾನವರು ಜೊತೆ ಜೊತೆಗೇ ಇರುತ್ತಾರೆ. ಹೊರಜಗತ್ತಿನ ಆಗುಹೋಗುಗಳು, ತಲ್ಲಣಗಳು, ಗ್ಲೋಬಲ್‌ ಆದಂತಹ ನಮ್ಮ ಸಮಕಾಲೀನ ಆಘಾತಗಳನ್ನು ಕೂಡಾ ಶಿವಾಪುರ ಅನುಭವಿಸುತ್ತದೆ. ಆದರೆ ಸಮುದಾಯಪ್ರಜ್ಞೆ, ಮನುಷ್ಯ- ಮನುಷ್ಯ, ಮನುಷ್ಯ- ಪ್ರಕೃತಿ ಹೀಗೆ ಗಾಢವಾದ ಬಂಧಗಳಿಂದ ಒಂದುಗೂಡಿಸುವ ಈ ಪುಟ್ಟ ಜನಪದ ನೆಲ, ಈ ಎಲ್ಲ ತಲ್ಲಣಗಳನ್ನು ದಾಟಿ ಮತ್ತೆ ತನ್ನ ಗಟ್ಟಿಯಾದ, ಒಟ್ಟಾದ ಜೀವನ ದರ್ಶನವನ್ನು ಮೆರೆಯುತ್ತದೆ. ಕಂಬಾರರ ಬರಹಗಳಲ್ಲಿ ಇತಿಹಾಸ–ಮಿಥ್, ನವ್ಯ–ಪೌರಾಣಿಕ, ದೇಸಿಸಂವೇದನೆ– ಜಾಗತೀಕರಣ ಎಲ್ಲವೂ ಒಟ್ಟಿಗೆ ಕಾಣಸಿಗುತ್ತವೆ. ಅವರ ಶ್ರೀಮಂತ ಜನಪದ ಭಾಷೆ, ಅದರಲ್ಲಿನ ಶ್ರುತಿಮಾಧುರ್ಯವನ್ನು (ಮ್ಯೂಸಿಕ್ಯಾಲಿಟಿ) ಇಂಗ್ಲಿಷಿನಲ್ಲೂ ಜೀವಂತವಾಗಿಸುವುದು ನನ್ನ ಗುರಿ.

ಅನುವಾದ ಒಂದು ಸೃಜನಾತ್ಮಕ ಕ್ರಿಯೆ. ಕಂಬಾರರಂತಹ ಲೇಖಕರ ಇಡೀ ಬರಹಗಳ ಲೋಕದಲ್ಲಿ ಪೂರ್ಣವಾಗಿ ಮುಳುಗಬೇಕು. ಆಗಲೇ ಈ ಕಷ್ಟಸಾಧ್ಯವಾದ ಅನುವಾದ ಕಾರ್ಯ ಮಾಡಲು ಶಕ್ಯ. ಇಂತಹ ಕ್ರಿಯೆಗೆ ಸಂಗೀತದಿಂದ ಮಾತ್ರ ನನಗೆ ಮಾದರಿ ದಕ್ಕುತ್ತದೆ. ನಾವು ರಾಗವೊಂದನ್ನು ಮತ್ತೆ ಮತ್ತೆ ಕೇಳಿ ಅಭ್ಯಾಸ ಮಾಡಿ, ಅದರ ಸಂಪೂರ್ಣ ಸಾಧ್ಯತೆಗಳ ಮೇಲೆ ಹಿಡಿತ ಸಾಧಿಸಬೇಕು. ಆಗ ಆ ರಾಗ ನಮ್ಮದಾಗುತ್ತದೆ. ಕಂಬಾರರ ಕೃತಿಗಳನ್ನು ಸೃಜನಾತ್ಮಕವಾಗಿ ಅನುವಾದಿಸಲು ನನಗೆ ಸಾಧ್ಯವಾಗಿದೆಯೇ? ದೇಶದ ಅತ್ಯುನ್ನತ ಗೌರವವಾದ ‘ಪದ್ಮಭೂಷಣ’ ಪ್ರಶಸ್ತಿ ಪುರಸ್ಕೃತರಾದ ಕಂಬಾರರು ಈಚೆಗೆ ನನ್ನೊಡನೆ ಸಂದರ್ಶನವೊಂದರಲ್ಲಿ ಹೇಳಿದ್ದು:

‘ನಾನು ಬಳಸುವ ಜನಪದ ನುಡಿಗಟ್ಟು, ಸಂಗೀತ, ಲಯ, ಧ್ವನಿಯನ್ನು ನಿಮ್ಮ ಅನುವಾದಗಳಲ್ಲಿ ಪುನಃ ಸೃಷ್ಟಿಸುತ್ತೀರಿ; ಇದು ಕಂಬಾರನದೇ ಭಾಷೆ ಅನ್ನುವಷ್ಟರ ಮಟ್ಟಿಗೆ! ನಿಮ್ಮ ಅನುವಾದಗಳ ಓದುಗರಿಗೆ ‘ಆ ಅನುವಾದಗಳಲ್ಲೆಲ್ಲೂ ಕಂಬಾರ ಇಲ್ಲವೆನ್ನಿಸುವುದೇ ಇಲ್ಲ’ ಎಂದಿದ್ದಾರೆ. ಇದಕ್ಕಿಂತ ಮಿಗಿಲಾದ ಹೆಗ್ಗಳಿಕೆ ಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.