ADVERTISEMENT

ಅಕ್ಷರ ಆಕರದಲ್ಲಿ ಚೆನ್ನವೀರ ಕಣವಿ

ಪ್ರಜಾವಾಣಿ ವಿಶೇಷ
Published 16 ಫೆಬ್ರುವರಿ 2022, 6:14 IST
Last Updated 16 ಫೆಬ್ರುವರಿ 2022, 6:14 IST
ಧಾರವಾಡದ ಕಲ್ಯಾಣ ನಗರದಲ್ಲಿರುವ ತಮ್ಮ ಮನೆಯಲ್ಲಿ ಡಾ. ಚೆನ್ನವೀರ ಕಣವಿ ಅವರು ಅಷ್ಟೂ ಕೃತಿಗಳ ಪ್ರದರ್ಶಿಸಿದ ಡಾ. ಜಿ.ಎಂ. ಹೆಗಡೆ –ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ ಕಲ್ಯಾಣ ನಗರದಲ್ಲಿರುವ ತಮ್ಮ ಮನೆಯಲ್ಲಿ ಡಾ. ಚೆನ್ನವೀರ ಕಣವಿ ಅವರು ಅಷ್ಟೂ ಕೃತಿಗಳ ಪ್ರದರ್ಶಿಸಿದ ಡಾ. ಜಿ.ಎಂ. ಹೆಗಡೆ –ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ   

ಹೆಚ್ಚು ಸದ್ದುಗದ್ದಲವಿಲ್ಲದೆ, ಕಾಡತೊರೆಯಂತೆ ಜುಳುಜುಳು ಹರಿಯುತ್ತಲೇ ತಮ್ಮ ಒಳಧ್ವನಿಗೂ ಗಟ್ಟಿಯಾದ ನಿಲುವಿನಿಂದ ವ್ಯಕ್ತಪಡಿಸುತ್ತ ಇದ್ದದ್ದು ಕಣವಿ ಅವರ ವಿಶೇಷವಾಗಿತ್ತು. ಭಿನ್ನ ನೆಲೆಯ ವಿಭಿನ್ನ ಕವಿತೆಗಳು ವಿಮರ್ಶೆಗೆ ಒಳಪಟ್ಟಾಗ ಒಂದೊಂದು ಧ್ವನಿಗೂ ಹಲವು ಧ್ವನಿಗಳು ಜೊತೆಗೂಡಿವೆ. ಕಣವಿಯವರ ಒಡನಾಟದಲ್ಲಿದ್ದ, ಜಿ.ಎಂ. ಹೆಗಡೆಯವರು, ಕಣವಿ ಅವರ ಸಾಹಿತ್ಯ ಕೃಷಿಯ ಕುರಿತು ಇಲ್ಲಿ ಸ್ಮರಿಸಿದ್ದಾರೆ.

ಚೆನ್ನವೀರ ಕಣವಿ ಅವರು ಕನ್ನಡ ನಾಡಿನಲ್ಲಿ ಕಾವ್ಯ ಸಂಸ್ಕೃತಿ ನಿರ್ಮಾಣ ಮಾಡಿದಂತೆ,ಪುಸ್ತಕ ಸಂಸ್ಕೃತಿಯ ಪ್ರಸಾರವನ್ನೂ ಮಾಡಿದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಸಾರಂಗದ ಮೊದಲ ನಿರ್ದೇಶಕರಾಗಿ500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರೋಪನ್ಯಾಸ ನಡೆಸಿ ಜನಶಿಕ್ಷಣ ಕಾರ್ಯ ಮಾಡಿದರು.ಕನ್ನಡ ಅಧ್ಯಾಪಕರ ಪರಿಷತ್ತಿನ ಸಮಾವೇಶ ಮತ್ತು ಹೋರಾಟಗಳಲ್ಲಿ ಭಾಗವಹಿಸಿ ನಮಗೆ ಮಾರ್ಗದರ್ಶನ ಮಾಡಿದ್ದನ್ನು ನಾವು ಮರೆಯಲಾರೆವು.

ಕಣವಿಯವರು ಭಾರತದ ವಿವಿಧ ಭಾಷೆಗಳ ಜಾಗತಿಕ ಕವಿಗಳ ಕವಿತೆಗಳನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ವಿಶ್ವಾತ್ಮಕ ಭಾವನೆಗಳಿಗೆ ಪ್ರತಿಸ್ಪಂದನ ಅವರ ಕವಿ ವ್ಯಕ್ತಿತ್ವದ ವಿಶಿಷ್ಟತೆಯಾಗಿದೆ.ಮಕ್ಕಳಿಗಾಗಿಯೇ ‘ಚಿಣ್ಣರ ಲೋಕವ ತೆರೆಯೋಣ’ ಕವಿತಾ ಸಂಕಲನ ಕೊಟ್ಟಿದ್ದಾರೆ.ಕನ್ಡನದಲ್ಲಿ ಕುವೆಂಪು ರಾಮಕೃಷ್ಣ ಪರಮಹಂಸರ ಭಕ್ತಿಗೆ ತೆರೆದುಕೊಂಡರು. ಬೇಂದ್ರೆ ಮಧುರಚೆನ್ನ,ಗೋಕಾಕ ಅರವಿಂದ ದರ್ಶನಕ್ಕೆ ಪ್ರಭಾವಿತರಾದರು.ಆದರೆ ಕಣವಿ ಅವರು ಇಹನಿಷ್ಠ ಜೀವನದ ಸಮಸ್ಯೆಗಳಿಗೆ ಸ್ಪಂದಿಸಿದರು.ಆದರೂ ಅವರ ಅನುಭಾವಿಕ ನೆಲೆಯ ಕವಿತೆಗಳು ‘ಮಾನಸಪೂಜೆ’ ಸಂಕಲನದಲ್ಲಿ ಬಂದಿವೆ.

ADVERTISEMENT

ಕಣವಿ ಅವರೊಂದಿಗೆ ಕರ್ನಾಟಕದ ತುಂಬ ಸಾವಿರಾರು ಸಭೆಗೆ ಹೋಗಿದ್ದೇನೆ.ಅವರ ಪ್ರೀತಿ, ಅಂತಃಕರಣ, ಕಾವ್ಯಪ್ರೀತಿ ನೋಡಿ ಬೆರಗಾಗಿದ್ದೇನೆ.ಕಣವಿ ಅವರು ಹಾಸನದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾದಾಗ ಸಿಂದಗಿಯ ನೆಲೆ ಪ್ರಕಾಶಾನ ಪ್ರಕಟಿಸದ ನನ್ನ ‘ಕವಿ ಕಣವಿ’ ಪುಸ್ತಕ ಮೂರು ಮುದ್ರಣಗಳನ್ನು ಕಂಡಿತು.

ನಾನು ಸಂಪದಾದಿಸಿದ ‘ಕವಿ ಕಣವಿ ಸಂದರ್ಶನ’ ಪುಸ್ತಕವನ್ನು ಚಿಂಚಣಿಯ ಕನ್ನಡ ಜಾಗೃತಿ ಪುಸ್ತಕಮಾಲೆ ಪ್ರಕಟಿಸಿತು. ಕಣವಿಯವರಿಗೆ75ತುಂಬಿದಾಗ ನಮ್ಮ ಸೃಜನ ಚಿಂತನ ಬಳಗದಿಂದ ಧಾರವಾಡದಲ್ಲಿ ಕಣವಿ ಸಾಹಿತ್ಯ ವಿಚಾರಸಂಕಿರಣ ನಡೆಸಿದೆವು.ಆಗ ಡಾ.ಗುರುಲಿಂಗ ಕಾಪಸೆ ಅವರೊಂದಿಗೆ ನಾನು ಸಂಪಾದಿಸಿದ ‘ಬೆಳ್ಳಿತೇರಿನ ದಾರಿ’ ಕಣವಿ ಕಾವ್ಯಾಧ್ಯಯನಗ್ರಂಥ ಬಿಡುಗಡೆಯಾಯಿತು.ಕಣವಿಯವರಿಗೆ80ತುಂಬಿದಾಗ ಡಾ.ಕಾಪಸೆ ಅವರೊಂದಿಗೆ ಕಣವಿ ಅವರ ಕವಿತೆ:ಹೊಸ ಓದು ಕಣವಿ ಕವಿತೆಗಳ ಪ್ರಾಯೋಗಿ ವಿಮರ್ಶೆಯ ಬೃಹತ್ ಸಂಪುಟ ಸಂಪಾದಿಸಿದ್ದು ಅದರಲ್ಲಿ80ಕ್ಕೂ ಹೆಚ್ಚು ವಿಮರ್ಶಕರು ಕಣವಿ ಅವರ ನೂರೈದು ಕವಿತೆಗಳ ವಿಮರ್ಶೆ ಬರೆದದ್ದು ಕನ್ನಡದಲ್ಲಿ ಹೊಸ ಪ್ರಯೋಗವಾಯಿತು.

ಕಣವಿ ಅವರಿಗೆ85ತುಂಬಿದಾಗ ಚೆನ್ನವೀರ ಕಣವಿ ಅವರ ಆಯ್ದ ಕವಿತೆಗಳ ಅನುಸಂಧಾನ ಸಪ್ನ ಬುಕ್‌ ಹೌಸ್‌ ವತಿಯಿಂದ ಬೃಹತ್ ವಿಮರ್ಶಾ ಸಂಪುಟ ಪ್ರಕಟಗೊಂಡಿತು.ಅದನ್ನು ಡಾ.ಕಾಪಸೆ ಮತ್ತು ನಾನು ಸಂಪಾದಿಸಿದ್ದೆವು.ಕಣವಿ ಅವರಿಗೆ90ತುಂಬಿದಾಗ ನನ್ನ ‘ಚೆಂಬೆಳಕಿನ ಕವಿ ಚೆನ್ನವೀರ ಕಣವಿ’ ಪುಸ್ತಕವನ್ನು ಗದುಗಿನ ತೋಂಟದಾರ್ಯ ಮಠದ ಡಾ.ಎಂ.ಎಣ.ಕಲಬುರ್ಗಿ ಲಿಂಗಾಯತ ಅಧ್ಯಯನ ಸಂಸ್ಥೆ ಪ್ರಕಟಿಸಿ,ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಧಾರವಾಡದಲ್ಲಿ ಕವಿ ಸನ್ಮಾನ ಜರುಗಿಸಿದರು.

ಕಣವಿಯವರಿಗೆ91ತುಂಬಿದಾಗ ಚೆನ್ನವೀರ ಕಣವಿ ಸಂದರ್ಶನ ಗ್ರಂಥವನ್ನು ಮೈಸೂರಿನ ಸಂವಹನ ಪ್ರಕಾಶನ ಪ್ರಕಟಿಸಿತು.ಕಣವಿ ಅವರಿಗೆ ಜನ್ಮದಿನೋತ್ಸವವಾದ ಜೂನ್28ಅನ್ನು ಕಳೆದ ಎರಡು ದಶಕಗಳಿಂದ ವಿಚಾರ ಸಂಕಿರಣ,ಗ್ರಂಥ ಬಿಡುಗಡೆ,ಕಾವ್ಯೋತ್ಸವಗಳ ಮೂಲಕ ವಿನೂತನವಾದ ರೀತಿಯಲ್ಲಿ ನಮ್ಮ ಸೃಜನ ಚಿಂತನ ಬಳಗ ಮೂಲಕ ನಡೆಸುತ್ತಾ ಬಂದಿದ್ದೇವೆ.ಕಣವಿಯವರಿಗೆ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭ ಧಾರವಾಡದಲ್ಲಿ ಜರುಗಿತು.ಆಗ ಕನ್ನಡ ಸಾಹಿತ್ಯ ಪರಿಷತ್ತು ಮನು ಬಳಿಗಾರ ನನ್ನ ಚನ್ನವೀರ ಕಣವಿ ಪುಸ್ತಕ ಪ್ರಕಟಿಸಿದರು.

ಬೆಳಕಾದರು: ಕಣವಿಯವರು ತಮಗೆ ಬಂದ ನೃಪತುಂಗ ಪ್ರಶಸ್ತಿಯ ಅರ್ಧ ಮೊತ್ತವನ್ನು ನೆರೆಯ ಹಾವಳಿಯಿಂದ ಬಳಲಿದ ಬಡ ಸಂತ್ರಸ್ತರಿಗೆ ನೀಡಲು ಸರ್ಕಾರಕ್ಕೆ ನೀಡಿದರು.ಕರ್ನಾಟಕದ ಜನ ಕೊಟ್ಟ ಸನ್ಮಾನದ ಶಾಲುಗಳನ್ನು ಅನಾಥಾಲಯಕ್ಕೆ ಹೋಗಿ ಬಡ ಮಕ್ಕಳಿಗೆ ಹೊದಿಸಿ ಬಂದರು.ಇದು ಸಾಮಾಜಿಕ ಋಣಸಂದಾಯದ ಭಾಗ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.