ADVERTISEMENT

ಮಕ್ಕಳ ಸಾಹಿತ್ಯ | ಮಕ್ಕಳಿಗಾಗಿ ಯಾರು ಬರೆಯಬೇಕು?

ಎಚ್.ಎಸ್.ವೆಂಕಟೇಶ ಮೂರ್ತಿ
Published 12 ನವೆಂಬರ್ 2022, 19:30 IST
Last Updated 12 ನವೆಂಬರ್ 2022, 19:30 IST
ಎಚ್‌.ಎಸ್‌.ವೆಂಕಟೇಶ ಮೂರ್ತಿ
ಎಚ್‌.ಎಸ್‌.ವೆಂಕಟೇಶ ಮೂರ್ತಿ   

ಮಕ್ಕಳಿಗಾಗಿ ಯಾರು ಬರೆಯಬೇಕು ಎನ್ನುವುದು ಚಿಂತಿಸಬೇಕಾದ ವಿಷಯ. ಮಕ್ಕಳಿಗಾಗಿ ಮಕ್ಕಳೇ ಬರೆಯಬೇಕೆಂದು ವಾದ ಮಾಡುವವರು ಇದ್ದಾರೆ. ಅದೇ ನಿಜವಾದ ಮಕ್ಕಳ ಸಾಹಿತ್ಯ, ದೊಡ್ಡವರು ಬರೆದಾಗ ಅವರು ಎಷ್ಟೇ ಪರಕಾಯಪ್ರವೇಶ ಚತುರರಾದರೂ ಮಕ್ಕಳ ಸಹಜ ಮುಗ್ಧತೆ ಅಲ್ಲಿ ಬರುವುದು ಸಾಧ್ಯವಿಲ್ಲ ಎನ್ನುವುದು ‘ಮಕ್ಕಳ ಸಾಹಿತ್ಯ ಮಕ್ಕಳಿಂದ’ ಎಂದು ವಾದಿಸುವವರ ಮುಖ್ಯ ನಿಲುವು.

ಯಾವುದೇ ಸಾಹಿತ್ಯವಿರಲಿ ಅದಕ್ಕೆ ಕಲಾತ್ಮಕತೆಯ ಪರಿಷ್ಕಾರವಾಗದೆ ಅದು ನಿಜವಾದ ಸಾಹಿತ್ಯವಾಗುವುದು ಸಾಧ್ಯವಿಲ್ಲ. ಮಕ್ಕಳು ಬರೆದುದರಲ್ಲಿ ಮುಗ್ಧತೆ ಇರುತ್ತದೆ ನಿಜ. ಆದರೆ ಆ ಬರಹಕ್ಕೆ ಸಾಹಿತ್ಯ ಸಂಸ್ಕಾರವಾಗದೆ ಅದಕ್ಕೆ ಲಯದ ಸಹಜ ಸೊಬಗು, ಭಾಷೆಯ ಬೆಡಗು, ಕಲ್ಪನೆಯ ಜಿಗಿತ ಸಿದ್ಧಿಸಲಾರದು. ಹಿಂದೆ ಕ್ಯಾಡ್ಬರಿಯವರು ಮಕ್ಕಳಿಗಾಗಿಯೇ ಒಂದು ಸ್ಪರ್ಧೆ ನಡೆಸಿ ನೂರಾರು ಮಕ್ಕಳ ರಚನೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ಮಕ್ಕಳಲ್ಲಿ ಸೃಷ್ಟಿಶೀಲತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಇಂಥ ಪ್ರಯೋಗಗಳು ಸ್ವಾಗತಾರ್ಹವಾದುವೇ. ಆದರೆ ಮಕ್ಕಳು ಹೀಗೆ ಬರೆದುದು ನಿಜವಾದ ಮಕ್ಕಳ ಸಾಹಿತ್ಯಕ್ಕೆ ಕಚ್ಚಾಮಾಲು ಎಂದು ನನಗೆ ಅನ್ನಿಸುತ್ತೆ. ಮಕ್ಕಳ ಕಲ್ಪನೆ ಹಾರಾಡುವ ನೆಲೆಯನ್ನು ಗುರುತಿಸಿಕೊಳ್ಳಲು ಬಗೆಯ ರಚನೆಗಳು ನಮಗೆ ಸಹಾಯ ಮಾಡುತ್ತವೆ. ಆದರೆ ಕ್ಯಾಡ್ಬರಿಯ ಅಂಥಾಲಜಿಯಲ್ಲಿ ಪಂಜೆ ಮಂಗೇಶರಾಯರ ತೆಂಕಣ ಗಾಳಿಯಾಟ, ಕುವೆಂಪು ಅವರ ಕಿಂದರಿಜೋಗಿ, ಬೇಂದ್ರೆಯವರ ಕರಡಿ ಕುಣಿತ, ರಾಜರತ್ನಂ ಅವರ ತುತ್ತೂರಿ, ಸಿದ್ಧಯ್ಯ ಪುರಾಣಿಕರ ಅಜ್ಜನ ಕೋಲಿದು- ಮೊದಲಾದ ರಚನೆಗಳ ಸಮೀಪಕ್ಕೆ ಬರುವ ರಚನೆಗಳೂ ಇಲ್ಲ. ನಮ್ಮ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗುವ ಮಕ್ಕಳು ಬರೆದ ಕವಿತೆಗಳೆನ್ನುವ ಬರಹವನ್ನು ಒಮ್ಮೆ ಗಮನಿಸಿದರೆ ನನ್ನ ಮಾತಿನ ಸತ್ಯ ಸ್ಪಷ್ಟವಾಗುವುದು.

ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ಭಾಷೆ, ಮಕ್ಕಳ ಕಲ್ಪನೆ, ಮಕ್ಕಳ ಮುಗ್ಧತೆ ಇವೆಲ್ಲಾ ಇರಲೇ ಬೇಕು. ಅವುಗಳ ಹಿಂದೆ ಶ್ರೇಷ್ಠ ಮಟ್ಟದ ಸಾಹಿತ್ಯಕ ಕಸುಬುಗಾರಿಕೆ ಮತ್ತು ಮನಸ್ಸಿನ ಪಕ್ವತೆ ಇಲ್ಲದೆ ಮಕ್ಕಳ ಸಾಹಿತ್ಯ ಉನ್ನತಿ ಸಾಧಿಸಲಾರದು. ಪ್ರೌಢತೆಯ ಹೆಗಲೇರಿ ಕುಳಿತ ಮುಗ್ಧತೆಯಿಂದ ಮಾತ್ರ ಅತ್ಯುನ್ನತ ಮಕ್ಕಳ ಸಾಹಿತ್ಯದ ನಿರ್ಮಿತಿ ಸಾಧ್ಯ. ಸಾಹಿತ್ಯ ಅಂದಮೇಲೆ ಅನುಭವದ ಆಯ್ಕೆ, ಅದರ ನಿರ್ಮಿತಿಗೆ ತಕ್ಕ ರೂಪದ ಆಯ್ಕೆ, ರೂಪವನ್ನು ಯುಕ್ತವಾಗಿ ಧರಿಸಬಲ್ಲ ಭಾಷೆಯ ಆಯ್ಕೆ, ಆ ಭಾಷೆಯೊಂದಿಗೆ ಭಾವಕ್ಕೆ ಸಾಥಿಯಾಗಿ ನಿಲ್ಲುವ ಉಚಿತ ಲಯದ ಆಯ್ಕೆ ಇವೆಲ್ಲಾ ಇರಲಿಕ್ಕೇ ಬೇಕು. ಅವು ಇಲ್ಲವಾದಲ್ಲಿ ಅತ್ಯುತ್ತಮ ಮಕ್ಕಳ ಸಾಹಿತ್ಯದ ನಿರ್ಮಿತಿ ಸಾಧ್ಯವೇ ಇಲ್ಲ. ಅಜ್ಜನ ಕೋಲನ್ನು ಕುದುರೆ ಎಂದು ಮಕ್ಕಳು ಕಲ್ಪಿಸಬಲ್ಲರು. ಆದರೆ, ಈ ಕುದುರೆಯ ವಿಲಕ್ಷಣ ಗುಣಲಕ್ಷಣಗಳನ್ನು ಬಾಲ್ಯವನ್ನು ಆಧಾರವಾಗಿ ಇಟ್ಟುಕೊಂಡು ಈವತ್ತು ಪ್ರೌಢತೆಯ ನೆಲೆಯಲ್ಲಿ ನಿಂತ ಪ್ರಬುದ್ಧ ಕವಿ ಸಿದ್ಧಯ್ಯ ಪುರಾಣಿಕರಂಥವರು ಮಾತ್ರ ಕಲ್ಪಿಸಬಲ್ಲರು.

ADVERTISEMENT

(ವಸಂತ ಬಾಲ ಸಾಹಿತ್ಯ ಮಾಲೆಗೆ ಬರೆದ ಪ್ರಸ್ತಾವದ ಆಯ್ದಭಾಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.