ಕಳೆದ ತಿಂಗಳು ನಡೆದ ಗಣೇಶೋತ್ಸವ ಮತ್ತು ಈದ್-ಮಿಲಾದ್ ಮೆರವಣಿಗೆ ರಾಜ್ಯದ ಕೆಲ ಭಾಗಗಳಲ್ಲಿ ಅಹಿತಕರ ಬೆಳವಣಿಗೆಗೆ ಸಾಕ್ಷಿಯಾಗಿದ್ದವು. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಶಾಂತಿ,ಸೌಹಾರ್ದದಿಂದ ಆಚರಿಸುತ್ತಿದ್ದ ಈ ಎರಡು ಹಬ್ಬಗಳು, ಇತ್ತೀಚೆಗೆ ಧರ್ಮ ಮತ್ತು ರಾಜಕೀಯ ಬೆರೆತ ಪ್ರತಿಮಾ ರಾಜಕಾರಣದ ಶೀತಲ ಸಮರಕ್ಕೆ ವೇದಿಕೆಯಾಗುತ್ತಲಿವೆ. ವರ್ಷದಿಂದ ವರ್ಷಕ್ಕೆ ಸಮುದಾಯಗಳ ಸಾರ್ವಜನಿಕ ವಲಯದ ಪ್ರತಿಮಾಭಿವ್ಯಕ್ತಿ ತಾರಕಕ್ಕೇರುತ್ತಿದೆ.
ಸದಾ ಪ್ರಚಾರದ ಗುಂಗಿನಲ್ಲಿರುವ ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಜಾತ್ರೆ, ಉತ್ಸವ, ಉರುಸ್‌ಗಳ ಮೂಲ ಉದ್ದೇಶವನ್ನು ಬದಿಗೆ ಸರಿಸಿ, ರಾಜಕೀಯ ಮತ್ತು ಧಾರ್ಮಿಕ ಸಂದೇಶ ಕೊಡುವಂತಹ ಚಿತ್ರಗಳು, ಪ್ರತಿಮೆಗಳು, ಸಂಕೇತಗಳನ್ನೊಳಗೊಂಡ ಕಟೌಟ್‌ಗಳು, ಭಿತ್ತಿಚಿತ್ರಗಳು, ಫ್ಲೆಕ್ಸ್‌ಗಳನ್ನು ತೀರ ಅತಿರೇಕವೇ ಎಂಬಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿವೆ. ಇದು ಆಯಾ ಸಮುದಾಯಗಳ ಅಸ್ಮಿತೆಯ ವಿಷಯಕ್ಕೆ ಮಾತ್ರ ಸೀಮಿತವಾಗದೆ, ಆಕ್ರಮಣಶಾಲಿ ಧಾರ್ಮಿಕ ರಾಜಕಾರಣದ ಪ್ರತಿಪಾದನೆಗೆ ಬಳಕೆಯಾಗುತ್ತಿದೆ.
ಪ್ರತಿಮಾಶಾಸ್ತ್ರ ಮತ್ತು ಸಂವಹನದ ಮಿತಿ
ಬಹಳಷ್ಟು ಬಾರಿ ಬರವಣಿಗೆಗಿಂತ ಮಾತು ಪರಿಣಾಮಕಾರಿ ಎನಿಸುತ್ತದೆ. ಕೆಲವೊಮ್ಮೆ ಅಮೂರ್ತ ಪರಿಕಲ್ಪನೆಗಳನ್ನು, ಸಂಕೀರ್ಣ ವಿಚಾರಗಳನ್ನು ಸಮರ್ಪಕವಾಗಿ ದಾಟಿಸುವಲ್ಲಿ ಮಾತು ಕೂಡ ಸೋಲುತ್ತದೆ. ಆಗ ಹೆಚ್ಚು ಸರಳವಾಗಿ ಗ್ರಹಿಕೆಗೆ ನಿಲುಕುವ ಸಂವಹನದ ಮೂರ್ತರೂಪವೇ ಪ್ರತಿಮೆಗಳು ಅಥವಾ ಸಂಕೇತಗಳು. ಭಾಷೆ ಸೋತಾಗ ಪ್ರತಿಮಾಶಾಸ್ತ್ರ ಕೈಹಿಡಿಯುತ್ತದೆ. ಸಾಮಾನ್ಯ ಜನರಿಗೆ ಬರವಣಿಗೆಗಿಂತ ಛಾಯಾಚಿತ್ರಗಳು, ವಿಡಿಯೋಗಳು, ಚಲನಚಿತ್ರಗಳು, ಸಂಕೇತಗಳು, ಮತ್ತು ಪ್ರತಿಮೆಗಳೇ ಆಪ್ತ. ಇದು ಸಂವಹನದ ಗೆಲುವೂ ಹೌದು, ಮಿತಿಯೂ ಹೌದು.
ಕಲಾವಿದನೋರ್ವ ತನ್ನ ಕರ್ತೃಶಕ್ತಿಯ ಮೂಲಕ ಚಿತ್ರಗಳು, ದೃಶ್ಯಗಳಿಗೆ ಕಲಾತ್ಮಕ ರೂಪ ಕೊಟ್ಟರೆ, ಅವೇ ಚಿತ್ರಗಳು ಜನಪ್ರಿಯ ಸಂಸ್ಕೃತಿಯ ಅಂಗಳಕ್ಕೆ ಕಾಲಿರಿಸಿದಾಗ, ಅದರ ಉದ್ದಿಶ್ಯ, ಮೂಲಾರ್ಥಗಳೆಲ್ಲವೂ ವಿರೂಪಗೊಂಡು, ಹೊಸ ವಿಲಕ್ಷಣ ಅರ್ಥಕ್ಕೆ ಎಡೆ ಮಾಡಿಕೊಡಬಹುದು ಅಥವಾ ಅನುಕೂಲಸಿಂಧು ಪ್ರತಿಮಾ ರಾಜಕಾರಣಕ್ಕೆ ಬಳಕೆಯಾಗಬಹುದು. 2015ರಲ್ಲಿ ಕಾಸರಗೋಡಿನ ಕುಂಬ್ಳೆ ಮೂಲದ ಕರಣ್ ಆಚಾರ್ಯ ಎಂಬ ಕಲಾವಿದ ತನ್ನ ಊರಿನ ಗಣೇಶೋತ್ಸವದ ಬಾವುಟದಲ್ಲಿ ಮುದ್ರಿಸುವ ಸಲುವಾಗಿ ರಚಿಸಿದ ಗ್ರಾಫಿಕಲ್ ಮಾದರಿಯ ಹನುಮಂತನ ರೇಖಾಚಿತ್ರವೊಂದು ಈಗ ರಾಜ್ಯದಾದ್ಯಂತ ಮತ್ತು ಹೊರ ರಾಜ್ಯಗಳಲ್ಲಿ ಕೂಡ ಜನಪ್ರಿಯ ಸ್ಟಿಕರ್‌ಗಳಾಗಿ ಕಾರು-ಬೈಕುಗಳು, ಟ್ಯಾಕ್ಸಿ-ಆಟೋಗಳು, ಗೂಡ್ಸ್ ವಾಹನಗಳು, ಸಾರ್ವಜನಿಕ ಸಾರಿಗೆ ಬಸ್ಸುಗಳು, ಮಳಿಗೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುತ್ತಿದೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಕರಣ್ ರಚಿಸಿದ ಕೇಸರಿ ಬಣ್ಣದ ಹನುಮಂತ, ಅವರೇ ಹೇಳುವಂತೆ ಕೋಪಿಷ್ಟನಲ್ಲ; ಬದಲಿಗೆ, ‘ವಿಶಿಷ್ಟ ಆ್ಯಟಿಟ್ಯೂಡ್ ಹೊಂದಿರುವ ಹನುಮಂತ,’ ಯುವ ಜನಾಂಗದ ಹುರುಪನ್ನು ಪ್ರತಿನಿಧಿಸುವ ‘ಆಧುನಿಕ ಹನುಮಂತ.’
ಸಾರ್ವಜನಿಕ ವಲಯಕ್ಕೆ ಬಂದ ಈ ‘ಆ್ಯಟಿಟ್ಯೂಡ್ ಹನುಮಂತ’ ಸಂಪೂರ್ಣವಾಗಿ ‘ಆ್ಯಂಗ್ರಿ ಹನುಮಂತ’ನ ರೂಪ ಪಡೆದುಕೊಳ್ಳಲು ಬಹಳ ಸಮಯ ತೆಗೆದುಕೊಳ್ಳಲೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಕೂಡ ಸೆಳೆದ ಆಚಾರ್ಯರ ಹನುಮಂತ, ಬರಿಯ ರಾಮನ ಸೇವೆಗೆ ಮುಡಿಪಾಗಿರುವ ದಾಸ್ಯದ ರೂಪಕವಾಗಿ ಅಲ್ಲ, ಬದಲಿಗೆ ಪರಾಕ್ರಮಿಯಾಗಿ, ಸ್ನಾಯುಬಲದ ಪ್ರತೀಕವಾಗಿ ಮತ್ತು ಗಂಡೆದೆಯ ಪೌರುಷದ ಸಂಕೇತವಾಗಿ ಎಲ್ಲೆಡೆ ರಾರಾಜಿಸುತ್ತಿದ್ದಾನೆ. ಸಾಂಸ್ಕೃತಿಕ ರಾಜಕಾರಣದ ‘ಉಗ್ರರೂಪಿ’ ಬಜರಂಗಬಲಿಯಾಗಿ ಬಳಕೆಯಾಗುತ್ತಿದ್ದಾನೆ.
‘ಹನುಮಾನ್ಸ್ ಟೇಲ್: ದಿ ಮೆಸೇಜಸ್ ಆಫ್ ಎ ಡಿವೈನ್ ಮಂಕಿ’ ಕೃತಿಯ ಲೇಖಕ, ಅಯೋವಾ ವಿಶ್ವವಿದ್ಯಾಲಯದ ಹಿಂದಿ ಪ್ರಾಧ್ಯಾಪಕ ಪ್ರೊ. ಲುಟ್ಗೆಂಡಾರ್ಫ್ ಸರಿಯಾಗಿಯೇ ಗುರುತಿಸಿರುವಂತೆ ಸಾಂಪ್ರದಾಯಿಕವಾಗಿ ಹನುಮಂತ, ಶೈವರು ಮತ್ತು ವೈಷ್ಣವರಿಬ್ಬರಿಂದಲೂ ಪೂಜಿಸಿಕೊಳ್ಳುವ ಆಪ್ತ ದೈವ. ರಾಮಭಂಟ ಹನುಮನನ್ನು ಶೈವರು ರುದ್ರನ ಹನ್ನೊಂದನೇ ಅವತಾರವಾಗಿ ಅಂದರೆ, ರುದ್ರರೂಪಿಯನ್ನಾಗಿ ಪೂಜಿಸುತ್ತಾರೆ. ಆದರೆ ಈಗ, ವಾನರವೀರ ಹನುಮ, ಶೈವ-ವೈಷ್ಣವರೆಂಬ ಕವಲುಗಳನ್ನು ಒಗ್ಗೂಡಿಸಿದ ಸಾಂಸ್ಕೃತಿಕ ರಾಷ್ಟ್ರೀಯವಾದದ ಬಲಶಾಲಿ ಐಕಾನ್ ಆಗಿ ಹೊರಹೊಮ್ಮಿದ್ದಾನೆ.
ಕ್ಯಾಲೆಂಡರ್ ಚಿತ್ರಕಲೆ, ಪ್ರತಿಮಾ ರಾಜಕಾರಣ
ಹಿಂದೂ ಧಾರ್ಮಿಕ ಪರಂಪರೆಯ ದೇವಾನುದೇವತೆಗಳನ್ನು ಚಿತ್ರಗಳ ಮೂಲಕ ಸಾಮಾನ್ಯ ಜನರ ಮನಸ್ಸಿಗೆ ತಲುಪಿಸಿದ ಕೀರ್ತಿ ಕ್ಯಾಲೆಂಡರ್ ಚಿತ್ರಕಲೆಗೆ ಸಲ್ಲಬೇಕು. ಇದಕ್ಕೊಂದು ವಿಶಿಷ್ಟ ಆಯಾಮ ಕೂಡ ಇದೆ. ಖ್ಯಾತ ಚಿತ್ರ ಕಲಾವಿದ ರಾಜಾ ರವಿವರ್ಮ 19ನೇ ಶತಮಾನದಲ್ಲಿ ರಚಿಸಿದ ದೇವತೆಗಳ ಚಿತ್ರಗಳೇ ಭಾರತೀಯ ಜನಮಾನಸದಲ್ಲಿ ಈಗಲೂ ಶಾಶ್ವತವಾಗಿ ನೆಲೆಯೂರಿವೆ. ಮುದ್ರಣ ಯಂತ್ರಗಳ ಕ್ರಾಂತಿಯ ಬಳಿಕ ರವಿವರ್ಮ ಚಿತ್ರಿಸಿದ ರಾಮ, ಗಣಪತಿ, ಲಕ್ಷ್ಮಿ, ಸರಸ್ವತಿ ಮತ್ತಿತರ ಹಿಂದೂ ದೇವತೆಗಳ ಚಿತ್ರಗಳು ಲಿಥೋಗ್ರಾಫಿಕ್ ಪ್ರೆಸ್ ಮೂಲಕ ಕ್ಯಾಲೆಂಡರ್‌ಗಳಲ್ಲಿ ಮುದ್ರಿತವಾಗಿ ದೇಶದ ಮನೆಮನೆಗೂ ತಲುಪಿದವು.
ವಿಶೇಷವೆಂದರೆ, ರವಿವರ್ಮ ರಚಿಸಿದ ಬಹುತೇಕ ಕಲಾಕೃತಿಗಳು ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಉಪಕಥೆಗಳಲ್ಲಿ ಬರುವ ಪಾತ್ರಗಳೇ ಆಗಿದ್ದರೂ ಅವುಗಳ ರೂಪು, ಚೌಕಟ್ಟಿನ ಮೇಲೆ ಯುರೋಪಿನ ಪುನರುಜ್ಜೀವನ ಕಲಾವಿದರ ಪ್ರಭಾವವಿರುವುದು ಗಮನಿಸಬೇಕಾದ ಅಂಶ. ಅಂದರೆ, ಪಾತ್ರ ಭಾರತೀಯವಾದರೂ ಚಿತ್ರಗಳ ಸಂರಚನೆ, ಮತ್ತು ಸಂವೇದನೆಯಲ್ಲಿ ಐರೋಪ್ಯ ಕಲಾವಿದರ ಛಾಯೆ ಗಾಢವಾಗಿ ಕಂಡುಬರುವುದು ವಿಶಿಷ್ಟ. ಹಾಗಾಗಿ, ಭಾರತೀಯ ಪರಂಪರೆ ಮತ್ತು ಐರೋಪ್ಯ ಕಲಾತ್ಮಕ ಸಂವೇದನೆಗಳೆರಡನ್ನೂ ಸಂಕರಗೊಳಿಸಿದ ಹೊಸ ಪ್ರತಿಮಾಶಾಸ್ತ್ರದ ಹರಿಕಾರ ರಾಜಾ ರವಿವರ್ಮ ಎಂದರೆ ತಪ್ಪಾಗಲಾರದು.
ಈ ಹೊತ್ತಿಗೂ, ಜನಸಾಮಾನ್ಯರ ಮನೆಯ ಗೋಡೆಗಳ ಮೇಲೆ ಕಂಡುಬರುವ ಕ್ಯಾಲೆಂಡರ್‌ಗಳಲ್ಲಿ ಮರುಮುದ್ರಿತವಾಗುತ್ತಿರುವ ರವಿವರ್ಮ ರಚಿಸಿದ ನಮ್ಮ ಹಿಂದೂ ದೇವತೆಗಳ ಚಿತ್ರಗಳು ಕಾಕೇಶಿಯನ್ನರ ಲಕ್ಷಣ ಹೊಂದಿರುವುದು ಇದರ ಮುಂದುವರೆದ ಭಾಗ. ಭಾರತೀಯ ಸಾಮೂಹಿಕ ಸ್ಮೃತಿಯಲ್ಲಿ ಹಾಸುಹೊಕ್ಕಾದ ರವಿವರ್ಮನ ಓಲಿಯೋಗ್ರಾಫ್‌ಗಳು (ತೈಲಚಿತ್ರಗಳು), ಚಲನಚಿತ್ರ, ಟಿ.ವಿ. ಧಾರಾವಾಹಿ, ಚಿತ್ರಕಲೆ, ಹೀಗೆ ಜನಪ್ರಿಯ ಸಂಸ್ಕೃತಿಯ ವಿಶಾಲವಾದ ಅಂಗಳಕ್ಕೆ ಲಗ್ಗೆ ಇಟ್ಟವು. ಇದೇ ಮಾದರಿಯನ್ನು ಅನುಕರಿಸಿದ ದೇವತೆಗಳ ಚಿತ್ರಗಳು ತೊಂಬತ್ತರ ದಶಕದಿಂದೀಚೆಗೆ ಭಾರತದಲ್ಲಿ ಪ್ರತಿಮಾ ರಾಜಕಾರಣದ ದಾಳಗಳಾಗಿ ಬಳಕೆಯಾಗಲಾರಂಭಿಸಿದವು.
ಈಗ ಪ್ರತಿಮಾ ರಾಜಕಾರಣದ ಶೀತಲ ಸಮರ ಉಚ್ಛ್ರಾಯ ಸ್ಥಿತಿಯನ್ನು ತಲುಪಿದೆ. ಯಾವುದೇ ಕ್ಷಣ ಸ್ಫೋಟಗೊಳ್ಳಬಹುದಾದ ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ, ಮಹಾನಗರಗಳ ಬೀದಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಸಾರ್ವಜನಿಕ ಹಬ್ಬ, ಜಾತ್ರೆ-ಉತ್ಸವಗಳ ಸಂದರ್ಭದಲ್ಲಿ ತಾತ್ಕಾಲಿಕ ಗೋಪುರಗಳು, ಮಿನಾರುಗಳು, ಕಳಶ, ಗುಂಬಜ್‌ಗಳು ಪೈಪೋಟಿಗೆ ಬಿದ್ದಂತೆ ತಲೆಯೆತ್ತುತ್ತಿವೆ. ಜೊತೆಗೆ, ದೇವತೆಗಳು, ಐತಿಹಾಸಿಕ ವ್ಯಕ್ತಿಗಳು ರಾಜಕಾರಣದ ಪ್ರತಿಮೆಗಳಾಗಿ ಬಳಕೆಯಾಗುತ್ತಿದ್ದಾರೆ. ಒಂದು ಬಡಾವಣೆ ‘ಹಿಂದೂ ಸಾಮ್ರಾಜ್ಯ’ದ ಕಮಾನಿನಿಂದ ಅಲಂಕೃತಗೊಂಡಿದ್ದರೆ, ಮತ್ತೊಂದು ರಸ್ತೆ
‘ಟಿಪ್ಪುವಿನ ಸಲ್ತನತ್’ ಆಗಿ ಠೇಂಕರಿಸುತ್ತಿರುತ್ತದೆ. ಒಂದೆಡೆ ಹಿರಣ್ಯಕಶಿಪುವಿನ ಎದೆ ಬಗೆಯುತ್ತಿರುವ ಉಗ್ರ ನರಸಿಂಹನ ಚಿತ್ರವಿದ್ದರೆ, ಮತ್ತೊಂದೆಡೆ, ‘ಶೇರ್-ಎ-ಮೈಸೂರ್’ನ ಬೃಹತ್ ಕಟೌಟ್ ಕಣ್ಣಿಗೆ ರಾಚುತ್ತಿರುತ್ತದೆ.
ಹೀಗೆ, ಅಯೋಧ್ಯೆಯ ಶ್ರೀರಾಮ, ‘ಹಿಂದೂ ಹೃದಯ ಸಾಮ್ರಾಟ' ಛತ್ರಪತಿ ಶಿವಾಜಿ, ಮೊಘಲರ ಔರಂಗಜೇಬ್, ಹೈದರಾಲಿಯ ಭಿತ್ತಿಚಿತ್ರಗಳು, ಸೈದ್ಧಾಂತಿಕವಾಗಿ ಎಡ, ಬಲ, ಮಧ್ಯದಲ್ಲಿರುವ ಭಗತ್ ಸಿಂಗ್, ಸಾವರ್ಕರ್, ಸ್ವಾಮಿ ವಿವೇಕಾನಂದ, ಗಾಂಧೀಜಿ, ಸರ್ದಾರ್ ಪಟೇಲ್ ಎಲ್ಲರೂ ಅಕ್ಕಪಕ್ಕದಲ್ಲೇ ಚಿತ್ರಣಗೊಂಡ ಫ್ಲೆಕ್ಸ್‌ಗಳು, ಸಂಪೂರ್ಣ ನಗರಗಳನ್ನೇ ಆವರಿಸಿಕೊಳ್ಳುವ ಕೇಸರಿ ಮತ್ತು ಹಸಿರು ಬಾವುಟ-ಬಂಟಿಗ್‌ಗಳ ಅಬ್ಬರದ ನಡುವೆ ನೀಲಿ ಮತ್ತು ಬಿಳುಪಿನ ಬುದ್ಧನ ನಿರ್ಮಲ ನಗುವಿಗೆ ಸ್ಥಾನವೇ ಇರುವುದಿಲ್ಲ.
ಸಹಬಾಳ್ವೆ ಮತ್ತು ಸಹಿಷ್ಣುತೆಯ ಪರಂಪರೆಯನ್ನು ಹೊಂದಿರುವ ಬಹುಸಂಸ್ಕೃತಿಯ ಭಾರತ ನಿಧಾನವಾಗಿ ವಿಘಟನೆಯ ಹಾದಿ ಹಿಡಿಯುತ್ತಿರುವುದು ಆರೋಗ್ಯಕರ ಲಕ್ಷಣವಂತೂ ಅಲ್ಲ. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ‘ಆರ್ಗ್ಯುಮೆಂಟೇಟಿವ್ ಇಂಡಿಯನ್’ ಕೃತಿಯಲ್ಲಿ ಗುರುತಿಸಿರುವಂತೆ, ಧಾರ್ಮಿಕ, ಆಧ್ಯಾತ್ಮಿಕ ಅನುಸಂಧಾನ ಮತ್ತು ಚರ್ಚೆಯ ಪರಂಪರೆ ಹಿಂದೂ ಸಂಸ್ಕೃತಿ ಮತ್ತು ಭಾರತೀಯ ಅಸ್ಮಿತೆಯ ಅತಿ ಮುಖ್ಯ ಲಕ್ಷಣ.
ಈ ಸಂಕೀರ್ಣವಾದ ಪರಂಪರೆಯಲ್ಲಿ ಭಕ್ತಿ ಪಂಥದ ದಾಸರ ದೈವ ಶರಣಾಗತಿಯ ಕೀರ್ತನೆಗಳು, ಪದಗಳೂ ಇವೆ; ಅಲ್ಲಮ ಪ್ರಭುವಿನ ಕ್ರಾಂತಿಕಾರಿ ವಚನಗಳ ಶೈವ ಪ್ರತಿಭೆಯೂ ಇದೆ; ಹಿಂದೂ ಪುನರುಜ್ಜೀವನದ ಹರಿಕಾರ ಶಂಕರಾಚಾರ್ಯರ ಮೇರು ಕಾವ್ಯಾಭಿವ್ಯಕ್ತಿಯೂ ಇದೆ. ಸಂತ ಕಬೀರ, ರವಿದಾಸರ ಆಧ್ಯಾತ್ಮಿಕ ದೋಹೆಗಳು, ಹಾಗೂ ಚಾರ್ವಾಕನ ನಾಸ್ತಿಕತೆಯ ಸಂವಾದವೂ ಇದೆ. ಇಂಥ ವೈವಿಧ್ಯಮಯ ಪರಂಪರೆಯನ್ನು ಹೊಂದಿರುವ ಭಾರತೀಯತೆಯನ್ನು ಏಕರೂಪಿ ಸಂಸ್ಕೃತಿಯನ್ನಾಗಿ ಬದಲಿಸಲು ಸಾಧ್ಯವೇ? ಅಥವಾ ಕೇವಲ ಎರಡು ಕವಲುಗಳಾಗಿ ವಿಂಗಡಿಸಲು ಸಾಧ್ಯವೇ?
ಮುಖ್ಯವಾಹಿನಿಯ ಈ ವಿರಾಟ್ ಪರಂಪರೆಯ ಸಾಗರಕ್ಕೆ ಬಂದು ಸೇರುವ ‘ಪ್ರತಿ ಸಂಸ್ಕೃತಿ’ಯ ಸಾವಿರಾರು ನದಿಗಳು ಬಹುಸಂಸ್ಕೃತಿಯ ಭಾರತೀಯ ಅಸ್ಮಿತೆಯೊಂದನ್ನು ಸೃಷ್ಟಿಸಿವೆ. ಇತ್ತೀಚೆಗೆ ಸಾರ್ವಜನಿಕ ವಲಯದಲ್ಲಿ ಪ್ರದರ್ಶಿತವಾಗುತ್ತಿರುವ ಆಕ್ರಮಣಕಾರಿ ಪ್ರತಿಮೆಗಳು, ನಿಜವಾದ ಈ ಭಾರತೀಯ ಸಾಕ್ಷಿಪ್ರಜ್ಞೆಯನ್ನು ವಿರೂಪಗೊಳಿಸದಿರಲಿ. ಕಾನೂನಿನ ಚೌಕಟ್ಟನ್ನು ಮೀರಿ, ಧಾರ್ಮಿಕ ನಂಬಿಕೆಯ ತಳಹದಿಯ ಮೇಲೆ ನಿಂತ ಸಂಕೇತಗಳ ಈ ಶೀತಲ ಸಮರ ಸಹಿಷ್ಣುತೆಯ ತಿಳಿನೀರನ್ನು ಕದಡದಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.