ADVERTISEMENT

ಕೊಲೆಯ ಸನ್ನಿವೇಶವೇ ಕಾದಂಬರಿಯ ಕೇಂದ್ರ: ಆಂಥೋನಿ ಹೊರೊವಿಜ್‌

ಹೆಚ್ಚು ಬರೆಯಲು, ಹೆಚ್ಚು ಓದಿರಿ– ಕಾದಂಬರಿಕಾರ ಆಂಥೋನಿ ಹೊರೊವಿಜ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:06 IST
Last Updated 6 ಜೂನ್ 2020, 15:06 IST
ಆಂಥೋನಿ ಹೊರೊವಿಜ್ 
ಆಂಥೋನಿ ಹೊರೊವಿಜ್    

ಬೆಂಗಳೂರು: ಪತ್ತೇದಾರಿ ಕಾದಂಬರಿಗಳಲ್ಲಿ ಕೊನೆಯವರೆಗೆ ಕುತೂಹಲ ಉಳಿಸಿಕೊಳ್ಳುವುದು ಹೇಗೆ ? ಕೊಲೆ ರಹಸ್ಯ ಭೇದಿಸುವ ಕಥಾಹಂದರವುಳ್ಳ ಕಾದಂಬರಿಗಳ ಮುಕ್ತಾಯವನ್ನು (ಕ್ಲೈಮ್ಯಾಕ್ಸ್‌) ಹೇಗೆ ಬರೆಯುವುದು ? ಕಥೆಯ ಬಿಡಿ ಬಿಡಿ ಎಳೆಯನ್ನು ಒಂದೇ ಚೌಕಟ್ಟಿನಲ್ಲಿ ಹೇಗೆ ತರುತ್ತೀರಿ ? ಕಥೆ ಕಟ್ಟುವಿಕೆಯಲ್ಲಿ ಎದುರಾಗುವ ಸವಾಲುಗಳಾವುವು...?

ಪತ್ತೇದಾರಿ ಮತ್ತು ಗೂಢಚರ್ಯದ ಕಾದಂಬರಿಗಳ ರಚನೆಯಿಂದ ವಿಶ್ವದಾದ್ಯಂತ ಮನೆ ಮಾತಾಗಿರುವ ಇಂಗ್ಲೆಂಡ್‌ನ ಆಂಥೋನಿ ಹೊರೊವಿಜ್‌ ಅವರಿಗೆ ಓದುಗರು ಕೇಳಿದ ಪ್ರಶ್ನೆಗಳಿವು. ಟಿವಿ ಕಾರ್ಯಕ್ರಮಗಳಿಗೆ, ಜೇಮ್ಸ್‌ ಬಾಂಡ್‌ ಸಿನಿಮಾಗಳಿಗೆ ಕಥೆ ಬರೆಯುವ ಹೊರೊವಿಜ್‌ ಅವರ ಕೃತಿಗಳ ಕುರಿತು ಚರ್ಚಿಸುವ ನಿಟ್ಟಿನಲ್ಲಿ ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ (ಬಿಐಸಿ) ಶನಿವಾರ ಆನ್‌ಲೈನ್‌ನಲ್ಲಿ (ಝೂಮ್‌ ವೆಬಿನಾರ್) ಈ ಕಾರ್ಯಕ್ರಮ ಏರ್ಪಡಿಸಿತ್ತು. ಮಕ್ಕಳ ಸಾಹಿತ್ಯ ರಚನೆಗೆ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ಪಡೆದಿರುವ ಪಾರೊ ಆನಂದ್‌ಕಾರ್ಯಕ್ರಮ ನಿರೂಪಿಸಿದರು.

ಹೊರೊವಿಜ್‌ ಬರೆದಿರುವ ಕಾದಂಬರಿಗಳ ಪೈಕಿ ಪ್ರಮುಖವಾಗಿ ‘ಮ್ಯಾಗ್‌ಪೈ ಮರ್ಡರ್ಸ್‌’ ಮತ್ತು ಈ ಕಾದಂಬರಿಯ ಮುಂದುವರಿದ ಭಾಗವಾಗಿ ರಚನೆಯಾಗಿರುವ ‘ಮೂನ್‌ಫ್ಲವರ್ಸ್‌ ಮರ್ಡರ್ಸ್‌’ ಕುರಿತು ಪಾರೊ ಪ್ರಶ್ನೆಗಳನ್ನು ಕೇಳಿದರು. ‘ಮೂನ್‌ಫ್ಲವರ್ಸ್‌ ಮರ್ಡರ್ಸ್‌’ ಕಾದಂಬರಿ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ADVERTISEMENT

ಕಾದಂಬರಿ ಕುರಿತು ವಿವರಿಸಿದ ನಂತರ, ಓದುಗರ ಪ್ರಶ್ನೆಗಳಿಗೆ ಉತ್ತರಿಸಿದ ಹೊರೊವಿಜ್‌, ‘ಹೆಚ್ಚು ಬರೆಯಬೇಕು, ಅಷ್ಟೇ ಚೆನ್ನಾಗಿ ಬರೆಯಬೇಕು ಎಂಬ ಹೆಬ್ಬಯಕೆ ನಿಮ್ಮದಾಗಿದ್ದರೆ, ಮೊದಲು ಹೆಚ್ಚು ಓದಬೇಕು’ ಎಂದು ಸಲಹೆ ನೀಡಿದರು.

‘ನಾನು 35 ವರ್ಷಗಳಿಂದ ಬರೆಯುತ್ತಿದ್ದೇನೆ. ಈಗಲೂ ದಿನಕ್ಕೆ ಹತ್ತು ತಾಸು ಬರೆಯುತ್ತೇನೆ. ನಿಮ್ಮ ಬರವಣಿಗೆ ಮೊದಲು ನಿಮ್ಮನ್ನು ಸಂತೋಷಪಡಿಸಬೇಕು, ನಿಮಗೆ ತೃಪ್ತಿ ನೀಡುವಂತಿರಬೇಕು. ಯಾವುದೇ ಕಾದಂಬರಿ ರಚನೆ ಮಾಡುವಾಗಲೂ, ಇದನ್ನು ಚೆನ್ನಾಗಿ ಬರೆಯುತ್ತೇನೆ ಎಂಬ ನಂಬಿಕೆ ನಿಮ್ಮದಾಗಿರಬೇಕು. ದಿನಕ್ಕೆ ಕನಿಷ್ಠ ಒಂದು ಗಂಟೆಯಾದರೂ ಬರೆಯುವ ಅಭ್ಯಾಸ ಇಟ್ಟುಕೊಳ್ಳಬೇಕು’ ಎಂದರು.

‘ಮ್ಯಾಗ್‌ಪೈ ಮರ್ಡರ್ಸ್‌ ಬರೆಯುವಾಗ ಅದರ ಮುಂದುವರಿದ ಭಾಗ ರಚಿಸುವ ಉದ್ದೇಶವಿರಲಿಲ್ಲ. ಓದುಗರಿಗೆ ಇಷ್ಟವಾಗಿರುವುದರಿಂದ ಪ್ರಕಾಶಕರೇ ಎರಡನೇ ಭಾಗ ಬರೆಯಲು ಒತ್ತಾಯಿಸಿದರು’ ಎಂದು ತಿಳಿಸಿದರು.

‘ಪತ್ತೇದಾರಿ ಕಾದಂಬರಿ ರಚನೆಯ ವೇಳೆ ಕೊಲೆಯ ಸನ್ನಿವೇಶವನ್ನೇ ಕೇಂದ್ರವಾಗಿಟ್ಟುಕೊಳ್ಳಬೇಕು. ಕೊಲೆ ಮಾಡಿದ್ದು ಯಾರು, ಕಾರಣವೇನು, ಅಂತಹ ಸನ್ನಿವೇಶ ಉದ್ಭವವಾಗಿದ್ದು ಏಕೆ ಎಂಬ ಅಂಶಗಳ ಆಧಾರದ ಮೇಲೆ ಕಥೆ ಹೆಣೆಯುತ್ತಾ ಹೋಗಬೇಕು’ ಎಂದು ಹೇಳಿದರು.

ಅಪ್ರಾಪ್ತರಿಂದ ಹಿಡಿದು ವಯೋವೃದ್ಧರವರೆಗಿನಎಲ್ಲ ವಯೋಮಾನದ ಓದುಗರು ಸಂವಾದದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.