ADVERTISEMENT

ಪಾದಕ್ಕೆ ತಂಪು ಕೊಲ್ಹಾಪುರಿ ಚಪ್ಪಲಿ

ರೇಷ್ಮಾ
Published 2 ಏಪ್ರಿಲ್ 2021, 19:30 IST
Last Updated 2 ಏಪ್ರಿಲ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಣ್ಣದ ನೂಲಿನಲ್ಲಿ ಚೆಂದವಾಗಿ ಹೆಣೆದ ಚಿತ್ತಾರ, ಅಲ್ಲಲ್ಲಿ ರಂಗಿನ ಕುಚ್ಚು, ನೇಯ್ಗೆಯ ಮೇಲೆ ಸುಂದರವಾಗಿ ಅಂಟಿಸಿದ ಕನ್ನಡಿಗಳು, ಜರಿಯ ರಂಗು ಇವೆಲ್ಲಾ ಕೊಲ್ಹಾಪುರಿ ಚಪ್ಪಲಿಯ ಸದ್ಯದ ಟ್ರೆಂಡ್‌. ಸಾಂಪ್ರದಾಯಿಕವಾದ ಈ ಚಪ್ಪಲಿ ಕಳೆದ ಕೆಲವು ವರ್ಷಗಳಿಂದ ಹೊಸ ರೂಪು ಪಡೆದು ಫ್ಯಾಷನ್ ಮಾರುಕಟ್ಟೆಯಲ್ಲಿ ರಂಗು ಮೂಡಿಸಿದೆ. ಅದರಲ್ಲೂ ಮಿಲೇನಿಯಲ್ ಯುವಕ–ಯುವತಿಯರ ಆಕರ್ಷಣೆ ಕೊಲ್ಹಾಪುರಿ ಚಪ್ಪಲಿ. ಕರಕುಶಲ ಕೆಲಸಕ್ಕೆ ಖ್ಯಾತಿ ಪಡೆದಿರುವ ಈ ಚರ್ಮದ ಚಪ್ಪಲಿಗಳು ಬೇಸಿಗೆಯಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುವ ಜೊತೆಗೆ ದೇಹಕ್ಕೆ ತಂಪೂ ನೀಡುತ್ತವೆ.

ಬೇಸಿಗೆಯಲ್ಲಿ ಉತ್ತಮ
ಬೇಸಿಗೆ ಕಾಲದಲ್ಲಿ ಶೂ ಅಥವಾ ಮುಚ್ಚಿದಂತಿರುವ ಸ್ಯಾಂಡಲ್ ಅಥವಾ ಚಪ್ಪಲಿಗಳನ್ನು ಧರಿಸಲು ಹಲವರು ಇಷ್ಟಪಡುವುದಿಲ್ಲ. ಸದಾ ಗಾಳಿಯಾಡಲು ನೆರವಾಗುವ ಚಪ್ಪಲಿಗಳನ್ನು ಧರಿಸಲು ಇಷ್ಟಪಡುವುದಾದರೆ ಕೊಲ್ಹಾಪುರಿ ಚಪ್ಪಲಿಗಳು ಉತ್ತಮ. ಇವು ಬೇಸಿಗೆಗೆ ಹೆಚ್ಚು ಹೊಂದುತ್ತವೆ. ಇವನ್ನು ಪ್ರಾಣಿಗಳ ಚರ್ಮದಿಂದ ತಯಾರಿಸುವ ಕಾರಣ ಇವು ದೇಹಕ್ಕೆ ತಂಪು ನೀಡುತ್ತವೆ. ಅಲ್ಲದೇ ಕಾಲಿನ ಅಂದವನ್ನೂ ಹೆಚ್ಚಿಸುತ್ತವೆ.

ಪುರುಷರಿಗೂ ಮಹಿಳೆಯರಿಗೂ
ಈ ಚಪ್ಪಲಿಯ ಟ್ರೆಂಡ್ ಹೆಣ್ಣುಮಕ್ಕಳು ಹಾಗೂ ಪುರುಷರು ಇಬ್ಬರನ್ನೂ ಸೆಳೆದಿದೆ. ಅವರವರ ಇಚ್ಛೆಗೆ ತಕ್ಕಂತೆ ಇರುವ ಈ ಚಪ್ಪಲಿ ಟ್ರೆಂಡ್‌ಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿರುವುದು ಸುಳ್ಳಲ್ಲ. ಹೆಣ್ಣುಮಕ್ಕಳಿಗೆ ಸೀರೆ, ಕುರ್ತಾ, ಚೂಡಿದಾರ್‌ನೊಂದಿಗೆ ಹೊಂದಿಕೆಯಾದರೆ ಗಂಡುಮಕ್ಕಳಿಗೂ ಕುರ್ತಾ ಪೈಜಾಮದೊಂದಿಗೆ ಹೆಚ್ಚು ಹೊಂದುತ್ತದೆ.

ADVERTISEMENT

ಪಾಶ್ಚ್ಯಾತ್ಯ ಉಡುಪಿನೊಂದಿಗೂ ಹೊಂದಿಕೆ
ಜೀನ್ಸ್ ಟಾಪ್‌, ಮಿನಿ ಫ್ರಾಕ್‌, ಮ್ಯಾಕ್ಸಿಯಂತಹ ಪಾಶ್ಚಾತ್ಯ ಉಡುಪಿಗೂ ಹೊಂದುವ ಈ ಚಪ್ಪಲಿ ಹೊಸ ಟ್ರೆಂಡ್‌ಗೂ ಸೈ ಎನ್ನುತ್ತಿದೆ. ಅಲ್ಲದೇ ಟ್ರೆಂಡ್‌ಗೆ ತಕ್ಕಂತೆ ಈ ಚಪ್ಪಲಿ ಸ್ವರೂಪವೂ ಬದಲಾಗುತ್ತಿದೆ. ಹಾಗಾಗಿ ಭಾರತೀಯ ಹಾಗೂ ಪಾಶ್ಚಾತ್ಯ ಎರಡೂ ಬಗೆಯ ಡ್ರೆಸ್‌ಗಳಿಗೆ ಇದು ಹೊಂದಿಕೆಯಾಗುತ್ತಿದೆ.

ಬಾಲಿವುಡ್‌ ಮಂದಿಗೂ ಅಚ್ಚುಮೆಚ್ಚು
ಬಾಲಿವುಡ್‌ನ ಮಂದಿ ಕಳೆದ ಐದಾರು ವರ್ಷಗಳಿಂದ ಕೊಲ್ಹಾಪುರಿ ಚಪ್ಪಲಿಯ ಟ್ರೆಂಡ್‌ಗೆ ಮಾರು ಹೋಗಿದ್ದಾರೆ. ಪದ್ಮಾವತ್ ಸಿನಿಮಾ ಪ್ರಚಾರದ ವೇಳೆ ದೀಪಿಕಾ ಚೂಡಿದಾರ್‌ದೊಂದಿಗೆ ಬೆಳ್ಳಿ ಬಣ್ಣದ ಕೊಲ್ಲಾಪುರಿ ಧರಿಸಿದ್ದರು. ಶೃದ್ಧಾ ಕಪೂರ್‌ ಸೆಲ್ವಾರ್‌, ಕುರ್ತಾ ಟಾಪ್‌ನೊಂದಿಗೆ ಹೆಚ್ಚಾಗಿ ಕೊಲ್ಹಾಪುರಿ ಚಪ್ಪಲಿಯನ್ನೇ ಧರಿಸುತ್ತಾರೆ. ಸೋನಾಕ್ಷಿ ಸಿನ್ಹಾ, ಆಲಿಯಾ ಭಟ್‌, ಕರೀನಾ ಕಪೂರ್ ಖಾನ್‌, ಸೋನಾಲಿ ಬೇಂದ್ರೆ ಮೊದಲಾದವರು ಸಾಂಪ್ರದಾಯಿಕ ಉಡುಪಿನೊಂದಿಗೆ ಕೊಲ್ಹಾಪುರಿ ಚಪ್ಪಲಿ ಧರಿಸಲು ಇಷ್ಟಪಡುತ್ತಾರೆ.

ವಿವಿಧ ಬಣ್ಣಗಳಲ್ಲಿ
ಮೊದಲೆಲ್ಲಾ ಒಂದೆರಡು ಬಣ್ಣಗಳಲ್ಲಿ ಸಿಗುತ್ತಿದ್ದ ಕೊಲ್ಹಾಪುರಿ ಚಪ್ಪಲಿಗಳು ಈಗ ಡ್ರೆಸ್‌ಗೆ ಹೊಂದುವ ಬಣ್ಣ ಹಾಗೂ ವಿನ್ಯಾಸದಲ್ಲಿ ಲಭ್ಯವಿದೆ. ನೇಯ್ಗೆಯ ಉಡುಪಿಗೆ ಹೊಂದುವಂತಹ ಚಪ್ಪಲಿಗಳು ಸಹ ಮಾರುಕಟ್ಟೆಯನ್ನು ಅಲಂಕರಿಸಿವೆ. ಸಿಲ್ವರ್‌, ಗೋಲ್ಡ್‌, ಬ್ರೌನ್‌ ಹೀಗೆ ವಿವಿಧ ಬಣ್ಣಗಳಲ್ಲಿ ಇವು ಲಭ್ಯವಿವೆ.

ಹಬ್ಬ ಹಾಗೂ ಮದುವೆ ಸೀಸನ್‌ಗೆ ಬೆಸ್ಟ್‌
ಹಬ್ಬ, ಮದುವೆಯಂತಹ ಕಾರ್ಯಕ್ರಮಗಳಲ್ಲಿ ಧರಿಸಲು ಈ ಚಪ್ಪಲಿಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ವಿಭಿನ್ನ ವಿನ್ಯಾಸದಿಂದ ಕೂಡಿರುವ ಚಪ್ಪಲಿಗಳು ಕಾಲಿನ ಅಂದವನ್ನು ಹೆಚ್ಚಿಸುವುದು ಸುಳ್ಳಲ್ಲ. ಜೊತೆಗೆ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಹೆಚ್ಚು ಹೊಂದಿಕೆಯಾಗುತ್ತವೆ. ಡ್ರೆಸ್‌ನ ಅಂದವನ್ನೂ ಹೆಚ್ಚಿಸುತ್ತವೆ.

ವಿದೇಶದಲ್ಲೂ ಸದ್ದು
ಹಿಂದೆಲ್ಲಾ ಸಾಧಾರಣ ವಿನ್ಯಾಸದ ಕೊಲ್ಹಾಪುರಿ ಚಪ್ಪಲಿಗಳನ್ನು ಮದುವೆ, ಮುಂಜಿಯಂತಹ ಕಾರ್ಯಕ್ರಮದಲ್ಲಿ ಹೆಚ್ಚು ಧರಿಸುತ್ತಿದ್ದರು. ಉತ್ತರ ಭಾರತದ ಕಡೆ ಹೆಚ್ಚು ಬೇಡಿಕೆಯಲ್ಲಿದ್ದ ಈ ಚಪ್ಪಲಿಗೆ ಈಗ ವಿದೇಶಗಳಲ್ಲೂ ಬೇಡಿಕೆ ಇದೆ. ವಿವಿಧ ವಿನ್ಯಾಸದ ಮೂಲಕ ಗಮನ ಸೆಳೆಯುತ್ತಿರುವ ಈ ಚಪ್ಪಲಿಗಳು ಫ್ಯಾಷನ್ ಪ್ರಿಯರಿಗೆ ಅಚ್ಚುಮೆಚ್ಚು ಎನ್ನಿಸಿವೆ. ಅಲ್ಲದೇ ವಿದೇಶಿಗರೂ ಇದರ ಅಂದಕ್ಕೆ ಮಾರು ಹೋಗಿರುವುದು ಸುಳ್ಳಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.