ಕುದುರೆಮುಖದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆ ನಿಂತು 13 ವರ್ಷಗಳಾಯಿತು. ಕಂಪನಿಯಲ್ಲಿದ್ದ ಕಾಯಂ ನೌಕರರಿಗೆ ಸ್ವಯಂ ನಿವೃತ್ತಿ ಪ್ಯಾಕೇಜ್‌ನಡಿ ಹಣ ಸಿಕ್ಕಿತ್ತು. ಆದರೆ, ಅಲ್ಲಿದ್ದ ನೂರಾರು ದಿನಗೂಲಿಗಳಿಗೆ ಏನೂ ಸಿಕ್ಕಿರಲಿಲ್ಲ. ಅವರ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಕಾಡುತ್ತಿತ್ತು.
ಇತ್ತೀಚೆಗೆ ಕಳಸದಿಂದ ಕುದುರೆಮುಖಕ್ಕೆ ಹೋಗುವಾಗ ದಿನಗೂಲಿಗಳು ವಾಸವಿದ್ದ ವಿನೋಬನಗರದ ಕಡೆಗೆ ಬೈಕ್ ತಿರುಗಿಸಿದೆ. ಕುಸಿದಿದ್ದ ಸೇತುವೆಯ ತಡೆಗೋಡೆ, ಹದಗೆಟ್ಟ ರಸ್ತೆ ಸ್ವಾಗತಿಸಿತು. ಕಾಲೊನಿ ಹತ್ತಿರ ಹೋದರೂ ಜನವಸತಿ ಇರುವ ಪ್ರದೇಶದ ಲಕ್ಷಣಗಳೂ ಅಲ್ಲಿರಲಿಲ್ಲ. ಒಳಗೆ ಹೋಗುತ್ತಿದ್ದಂತೆ ರಸ್ತೆಯ ಬದಿ ಇದ್ದ ಕೆಲ ವೃದ್ಧರು ದಿಟ್ಟಿಸಿ ನೋಡತೊಡಗಿದರು. ಹರಿದ ಬಟ್ಟೆ ಧರಿಸಿದ್ದ ಮಕ್ಕಳು ರಸ್ತೆ ಬದಿ ಮಣ್ಣಿನಲ್ಲಿ ಆಡುತ್ತಿದ್ದವು !
‘ಇಲ್ಲಿಯವರಿಗೆ ಯಾವ ಸೌಲಭ್ಯವೂ ಸಿಕ್ಕಿಲ್ಲ’ ಎಂಬುದನ್ನು ಆ ಕಾಲೊನಿಯ ಪರಿಸ್ಥಿಯೇ ವಿವರಿಸುತ್ತಿತ್ತು. ಅಷ್ಟು ಹೊತ್ತಿಗೆ ಮಗುವೊಂದು ಬಳಿಗೆ ಬಂದು ನನ್ನ ಮಗಳ ಕೈಹಿಡಿದು ‘ಇವತ್ತು ನಮ್ಗೆ ಅಂಗನವಾಡಿ ರಜೆ. ನನ್ ಫ್ರೆಂಡ್ ಇವತ್ತ್ ಬಂದಿಲ್ಲ. ನೀನು ಎಲ್ಲಿಂದ ಬಂದೆ?’ ಎಂದು ಲವಲವಿಕೆಯಿಂದ ಕೇಳಿದಳು. ಸಮೀಪದಲ್ಲಿದ್ದ 70ರ ಪ್ರಾಯದ ವ್ಯಕ್ತಿ ಬೀಡಿ ಸೇದುತ್ತಾ ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದ. ನನ್ನ ಪರಿಚಯ ಹೇಳುತ್ತಿದ್ದಂತೆ, ಕಾಲೊನಿಯ ಕಥೆ ಹೇಳಲು ಶುರು ಮಾಡಿದರು.
‘ನನ್ನ ಹೆಸರು ಸೋಲಮುತ್ತು. ನಾನು ಎಚ್‍ಇಸಿಎಲ್ ಕಂಪನಿಗೆ ಸೇರಿದಾಗಿನಿಂದ (1976ರಿಂದ) ಇಲ್ಲೇ ಇದ್ದೀನಿ. 2005ರವರೆಗೂ ಇಲ್ಲಿ 1000 ಜನ ಇದ್ದೆವು. ಎಲ್ಲರೂ ಅದಿರು ಸಂಸ್ಥೆಗೆ ದಿನಗೂಲಿ ಕೆಲಸಕ್ಕೆ ಹೋಗುತ್ತಿದ್ದೆವು. ಕಂಟ್ರಾಕ್ಟರ್‌ಗಳೇ ಸಂಬಳ ಕೊಡ್ತಿದ್ದರು. ಕಂಪನಿ ನಿಂತು ಹದಿಮೂರು ವರ್ಷಗಳಾಯ್ತು. ನಮಗೆ ಕೆಲಸವೂ ಇಲ್ಲ, ಬೇರೆ ಆದಾಯವೂ ಇಲ್ಲ. ಅಷ್ಟಿಷ್ಟು ಪಿಎಫ್ ಸಿಕ್ತು. ಈಗ ಅರ್ಧ ಸತ್ತು, ಅರ್ಧ ಬದುಕಿದ್ದೀವಿ’ ಎಂದು ಹತಾಶೆಯ ಧ್ವನಿಯಲ್ಲಿ ವಿವರಿಸಿದರು.
ಆ ಮಾತು ಕೇಳಿ ಬೇಸರವಾಯ್ತು. ‘ನೀವು ಬೇರೆ ಊರಿಗೆ ಹೋಗಿ ಕೆಲಸ ಮಾಡಬಹುದಲ್ಲವೆ’ ಎಂದು ಪ್ರಶ್ನಿಸಿದೆ. ‘ಸಾರ್, 15 ವರ್ಷದ ಹುಡುಗನಿಂದ ಇಲ್ಲೇ ಇದ್ದೀನಿ. ಇದೇ ನಮ್ಮೂರು. ಬೇರೆ ಊರು ಗೊತ್ತಿಲ್ಲ. 5-6 ವರ್ಷದ ಹಿಂದೆ ‘ನಿಮಗೆಲ್ಲ ಕಳಸದಲ್ಲಿ ಸೈಟ್ ಸಿಗುತ್ತೆ. 10 ಎಕರೆ ಮಂಜೂರು ಮಾಡಿದ್ದೀನಿ’ ಅಂತ ಆಗಿನ ಜಿಲ್ಲಾಧಿಕಾರಿ ಹೇಳಿದ್ದರು. ಈವರೆಗೂ ಸೈಟೂ ಇಲ್ಲ, ಮನೆಯೂ ಇಲ್ಲ’ ಎಂದು ಹೇಳುತ್ತಾ ಬಾಯಲ್ಲಿ ಬೀಡಿ ಕಚ್ಚಿದರು. ಅವರ ಮಾತಿಗೆ ಒಬ್ಬೊಬ್ಬರೂ ತಮ್ಮ ಅಹವಾಲು ಸೇರಿಸಲಾರಂಭಿಸಿದರು!
‘ನೋಡಿ ನಾವು ವಾಸ ಮಾಡುವ ಈ ಜಮೀನೆಲ್ಲ ಗೋಮಾಳ. ಇದು ಫಾರೆಸ್ಟ್‌ಗೆ ಸೇರಿಲ್ಲ. ನಮ್ಮನ್ನು ಸಂಸೆ ಗ್ರಾಮಕ್ಕೆ ಸೇರಿಸಿದರೆ ನಾವು ಆ ಪಂಚಾಯಿತಿಯಿಂದ ಮನೆಗೆ ಅರ್ಜಿ ಹಾಕಬಹುದು. ಆದರೆ ಈ ಜಾಗವನ್ನೂ ಕುದುರೆಮುಖ ನೋಟಿಫೈಡ್ ಏರಿಯಾದಲ್ಲೇ ಉಳಿಸಿಕೊಂಡಿದ್ದಾರೆ. ನಾವು ಯಾವ ಗ್ರಾಮಕ್ಕೂ ಸೇರಿದವರಲ್ಲ. ನಮ್ಮದು ತ್ರಿಶಂಕು ಸ್ಥಿತಿ ಆಗಿದೆ’ ಎಂದು ಅರವತ್ತರ ಹರೆಯದ ಗಂಗಮ್ಮ ಸಮಸ್ಯೆಯ ಮೂಲವನ್ನು ಪರಿಚಯಿಸಿದರು.
‘ಸಂಸೆ ಪಂಚಾಯಿತಿಗೆ ತುಂಬಾ ಸಲ ಅರ್ಜಿ ಕೊಟ್ಟಿದ್ದೇವೆ. ಆದರೆ ಅವರು ‘ನೀವು ನಮ್ಮ ಪಂಚಾಯಿತಿಗೆ ಸೇರಿಲ್ಲ’ ಎನ್ನುತ್ತಾರೆ. ಹಾಗಾದ್ರೆ ನಾವು ಯಾವ ಗ್ರಾಮಕ್ಕೆ ಸೇರಿದ್ದೀವಿ?’ – ಇದು ಅಂಜಲರ ಆವೇಶದ ಪ್ರಶ್ನೆ. ‘ಇಲ್ಲಿ ಯಾವ ಮನೆಗೂ ಕರೆಂಟ್ ಇಲ್ಲ. ನಲ್ಲಿ ನೀರು ಬರಲ್ಲ. ನಾವೇ ಗುಡ್ಡದಿಂದ ಪೈಪ್ ಹಾಕಿಕೊಂಡು ತಗೊಂಡು ಬಂದಿದ್ದೇವೆ. ಇಲ್ಲದಿದ್ದರೆ ನೀರೂ ಇಲ್ಲದೆ ಸಾಯುತ್ತಿದ್ವಿ. ಮೊನ್ನೆ ಮಳೆಗಾಲದಲ್ಲಿ 8 ಮನೆ ಬಿದ್ದುಹೋದವು. ಪುಣ್ಯಕ್ಕೆ ಯಾರೂ ಸಾಯಲಿಲ್ಲ. ಇನ್ನೊಂದೆರಡು ವರ್ಷಕ್ಕೆ ಎಲ್ಲ ಮನೇನೂ ಬಿದ್ದುಹೋಗ್ತವೆ’ ಎಂದು ನಿವಾಸಿಗಳು ಸಮಸ್ಯೆಯ ಸರಮಾಲೆ ಬಿಚ್ಚಿದರು.
ಹೀಗೆ ಕಾಲೊನಿ ಸುತ್ತಾಡುತ್ತಿದ್ದಾಗ, ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಯಾವ ಮನೆಗೂ ಶೌಚಾಲಯವಿದ್ದಂತೆ ಕಾಣಲಿಲ್ಲ. 4 ಕಡೆ ಸಾರ್ವಜನಿಕ ಶೌಚಾಲಯವಿದ್ದರೂ ಯಾವುದಕ್ಕೂ ನೀರಿನ ಸೌಲಭ್ಯವೇ ಇಲ್ಲ. ಕಾಲೊನಿಯ ಎಲ್ಲರೂ ಬಯಲಿನಲ್ಲೇ ಮಲವಿಸರ್ಜನೆ ಮಾಡುತ್ತಾರೆ ಎಂದು ನಿವಾಸಿಗಳು ವಿವರಿಸುತ್ತಿದ್ದಾಗ, ಕಾಲೊನಿಯಲ್ಲಿನ ಇಕ್ಕಟಾದ ಶಿಥಿಲ ಮನೆಗಳು, ಅವರ ಆಕ್ರೋಶದ ನುಡಿಗಳಿಗೆ ಸಾಕ್ಷಿಯಾಗಿದ್ದವು.
ಸುತ್ತಾಟದ ನಡುವೆ ಮಾತಿಗೆ ಸಿಕ್ಕ ಜನ, ಅಲ್ಲಿನ ವೈದ್ಯರ ಕೊರತೆ ಬಗ್ಗೆ ಹೇಳಿದರು. ಕುದುರೆಮುಖದ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಕಳಸದಿಂದ ಖಾಸಗಿ ವೈದ್ಯರು ವಾರಕ್ಕೊಂದು ದಿನ ಇಲ್ಲಿಗೆ ಬರುತ್ತಿದ್ದಾರೆ. ಉಳಿದ ದಿನಗಳಲ್ಲಿ ಆರೋಗ್ಯ ಕೆಟ್ಟರೆ 20 ಕಿ.ಮೀ ದೂರದ ಕಳಸಕ್ಕೆ ಹೋಗಬೇಕು ಎಂದರು.
‘ನಿಮಗೆಲ್ಲ ಯಾವುದಾರೂ ಪಿಂಚಣಿ ಬರುತ್ತದೆಯೇ?’ ಎಂದು ಕೇಳಿದೆ. ‘ಕಂಪನಿ ಮುಚ್ಚಿದಾಗ ಕಾಯಂ ನೌಕರರಿಗೆ ಲಕ್ಷಲಕ್ಷ ಹಣ ಸಿಕ್ತು. ನಮಗೇನೂ ಇಲ್ಲ. ಸರ್ಕಾರ ಪ್ರತಿ ತಿಂಗಳು ನೀಡುವ 600 ರೂಪಾಯಿ ಪೆನ್ಷನ್‌ಗಾಗಿ ಕಾಯುತ್ತೇವೆ’ ಎಂದು ವೃದ್ಧರು ಹೇಳುವಾಗ, ಅವರ ಮುಖದಲ್ಲಿ ತೀವ್ರ ನೋವಿನ ಛಾಯೆ ಆವರಿಸಿತ್ತು.
ಗಾರೆ ಕೆಲಸ, ತೋಟದ ಕೆಲಸ, ಪೇಂಟಿಂಗ್, ಬಾರ್ ಬೆಂಡಿಂಗ್, ಎಲೆಕ್ಟ್ರಿಕಲ್ ಕೆಲಸ ತಿಳಿದವರು, ಡ್ರೈವರ್‌ಗಳು ಈ ಕಾಲೊನಿಯಲ್ಲಿದ್ದಾರೆ. ಆದರೆ ಅವರಿಗೆ ಹತ್ತಿರದಲ್ಲಿ ಕೆಲಸವಿಲ್ಲ. ಹದಿಮೂರು ವರ್ಷಗಳಿಂದ ಕಳಸ, ಬಾಳೆಹೊನ್ನೂರು, ಶೃಂಗೇರಿ, ಬಜಗೋಳಿಗೆ ಹೋಗುತ್ತಾರೆ. ಮಳೆಗಾಲದಲ್ಲಿ ಕೆಲಸವಿಲ್ಲದೇ ಅರೆ ಹೊಟ್ಟೆಯಲ್ಲಿ ದಿನ ದೂಡುತ್ತಾರೆ. ಈಗಲಾದರೂ ಕಳಸದಲ್ಲಿ ಸೈಟ್ ಕೊಟ್ಟರೆ ಅಲ್ಲೇ ಅಕ್ಕಪಕ್ಕದಲ್ಲಿ ಕೆಲಸ ಮಾಡಿಕೊಂಡು ಹೇಗಾದರೂ ಬದುಕಿಕೊಳ್ತೇವೆ ಎಂದು ನಿವಾಸಿಗಳು ಆಗ್ರಹಿಸುತ್ತಾರೆ.
ಹಿಂದಿನ ಜಿಲ್ಲಾಧಿಕಾರಿ ಈ ಕಾಲೊನಿಯವರಿಗಾಗಿ ಕಳಸದಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿದ್ದರಂತೆ. ಆದರೆ ಆ ಜಾಗದಲ್ಲಿ ಕಳಸದ 200 ವಸತಿರಹಿತರಿಗೆ ಸೈಟ್ ಕೊಡುವುದಕ್ಕೆ ಯೋಜನೆ ಹಾಕಲಾಗುತ್ತಿದೆ. ಅಲ್ಲಿನ ಜನ ಕೂಡ, ‘ನೀವು ಇಲ್ಲಿಗೆ ಹೇಗೆ ಬರ್ತೀರೋ ನೋಡೋಣ’ ಎಂದು ಹೆದರಿಸ್ತಾರಂತೆ.
ಆರು ತಿಂಗಳ ಹಿಂದೆ ಕಾಲೊನಿಯವರು ಜಿಲ್ಲಾಧಿಕಾರಿ ಭೇಟಿಯಾಗಿ ಪರಿಸ್ಥಿತಿ ವಿವರಿಸಿದ್ದರು. ನಂತರ ಸಮಿತಿಯೊಂದು ಇಲ್ಲಿಗೆ ಬಂದು ಸಮೀಕ್ಷೆ ಮಾಡಿಕೊಂಡು ಹೋಗಿದೆ. ಆದರೆ ಆನಂತರ ಯಾವ ಬೆಳವಣಿಗೆಯೂ ಆದ ಬಗ್ಗೆ ಇವರಿಗೆ ಮಾಹಿತಿ ಇಲ್ಲ.
ಕಾಲೊನಿಯಲ್ಲೊಂದು ಅಂಗನವಾಡಿ ಕೇಂದ್ರವಿದೆ.ಇಲ್ಲಿನ ಮಕ್ಕಳು ಶಾಲೆಗೆ ಕುದುರೆಮುಖಕ್ಕೆ ಹೋಗಬೇಕಿದೆ. ಆ ಶಾಲೆಯಲ್ಲಿ 7 ಮಕ್ಕಳು ಮಾತ್ರ ಇದ್ದು ಮುಂದಿನ ವರ್ಷದಿಂದ ಅದೂ ಮುಚ್ಚುವ ಸೂಚನೆ ಇದೆ. ಇತ್ತೀಚೆಗೆ ಪೋಸ್ಟ್ ಆಫೀಸ್ ಮುಚ್ಚಿದರು. ಅಲ್ಲಿ ಕೆಲಸ ಮಾಡುತ್ತಿದ್ದವರು ಶಾಲೆಯಲ್ಲಿ ಬಿಸಿಯೂಟ ತಯಾರಿಕೆಗೆ ಸೇರಿದರು. ಮುಂದಿನ ವರ್ಷ ಶಾಲೆ ಮುಚ್ಚಿದರೆ ಜೀವನ ಹೇಗೆ ಎಂದು ಮಹಿಳೆಯೊಬ್ಬರು ಹತಾಶೆ ವ್ಯಕ್ತಪಡಿಸುತ್ತಾರೆ.
ಕಾಲೊನಿಯವರ ಸಂಕಷ್ಟದ ಕಥೆ ಕೇಳುತ್ತಾ ಕೇಳುತ್ತಾ ಹೊತ್ತು ಮುಳುಗಿತು. ಅಲ್ಲಿಂದ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಬೀದಿದೀಪ ಹೊತ್ತಿಕೊಂಡಿತು. ಆದರೆ ಕಾಲೊನಿಯ ಮನೆಗಳಲ್ಲೆಲ್ಲಾ ಕತ್ತಲು. ಕಾಲೊನಿ ಹೊಕ್ಕಾಗ ನಮ್ಮ ಬಳಿ ಬಂದಿದ್ದ ಮುದ್ದಾದ ಮಗು ಮತ್ತೆ ಕಣ್ಣಿಗೆ ಬಿತ್ತು. ಚುರುಕಾದ ಮಗುವಿಗೆ ಮುಂದಿನ ವರ್ಷ ಕಲಿಕೆಗೆ ಶಾಲೆಯೇ ಇರುವುದಿಲ್ಲ ಎಂಬ ವಾಸ್ತವ ವಿಷಾದ ಭಾವವೊಂದನ್ನು ಮೂಡಿಸಿತು!
ನೋವಿಗೆ ‘ದೃಶ್ಯ ಸ್ಪರ್ಶ’!
ವಿನೋಬನಗರದ ಕುದುರೆಮುಖ ದಿನಗೂಲಿ ನೌಕರರ ನೋವಿನ ಕಥೆ ಮೂರೂವರೆ ದಶಕಗಳದ್ದು. ಕಂಪನಿ ಆರಂಭದಿಂದಲೂ ಎಲ್ಲ ಕೆಲಸಗಳಿಗೆ ಹೆಗಲಾಗಿ ಬೆವರು ಹರಿಸಿದ್ದ ಈ ಜೀವಗಳು 2005ರಲ್ಲಿ ಕಂಪನಿ ಸ್ಥಗಿತಗೊಂಡ ಮೇಲೆ ಮತ್ತಷ್ಟು ಸಂಕಷ್ಟದಲ್ಲಿ ಮುಳುಗಿವೆ. ಮುರುಕು ಸೂರಿನಲ್ಲಿ, ಕತ್ತಲು ಕೋಟೆಯಲ್ಲಿ ಉತ್ತಮ ನಾಳೆಗಳ ನಿರೀಕ್ಷೆ ಹಪಹಪಿಸುತ್ತಾ ಹೋರಾಟ ನಡೆಸುತ್ತಿರುವರ ಪರಿಸ್ಥಿತಿ ಕುರಿತು ‘ಮಲ್ನಾಡ್ಅಮಿಗೋಸ್’ ಸಂಸ್ಥೆ (Malnad Amigos) ಸಾಕ್ಷ್ಯಚಿತ್ರ ರೂಪಿಸಿದೆ. ಇದರ ಮೂಲಕ ನಾಡಿನ ಜನತೆಗೆ, ಕುಟುಂಬಗಳನೋವನ್ನುತಲುಪಿಸಲು ಮುಂದಾಗಿದೆ.
ಸಾಕ್ಷ್ಯಚಿತ್ರದಲ್ಲಿ ಕುದುರೆಮುಖದ ಸೌಂದರ್ಯದ ಹಿನ್ನೆಲೆಯಲ್ಲಿ ವಿನೋಬನಗರದ ಕುಟುಂಬಗಳ ಕತ್ತಲೆಯ ಬದುಕನ್ನು ಅನಾವರಣಗೊಳಿಸಿದ್ದಾರೆ. ‘ಅರಣ್ಯರೋದನ-ಸ್ವರವೂ ಉಸಿರು ಅಳಿವಿನ ಅಂಚಿನಲ್ಲಿ...’ ಶೀರ್ಷಿಕೆಯಡಿ ಡಾಕ್ಯುಮೆಂಟರಿ ಸಿದ್ಧ ಮಾಡಿದ್ದಾರೆ. ಸಾಕ್ಷ್ಯಚಿತ್ರ ವೀಕ್ಷಣೆಗೆ ಈ ಕೆಳಗಿನ ಕ್ಯುಆರ್ ಕೋಡ್ ಸ್ಕಾನ್ ಮಾಡಿ.
*
ವಿನೋಬನಗರದಲ್ಲಿ 60-65 ಮನೆಗಳಲ್ಲಿ ಮಾತ್ರ ಜನರು ವಾಸವಿದ್ದಾರೆ. ಅವರಿಗೆ ಆದ್ಯತೆ ನೀಡಿ ಕಳಸ ಸಮೀಪದಲ್ಲಿ ನಿವೇಶನ ನೀಡಿ, ಆನಂತರ ಉಳಿದ ನಿವೇಶನಗಳನ್ನು ಕಳಸದ ನಿವೇಶನರಹಿತರಿಗೆ ಮಂಜೂರು ಮಾಡಲು ಸೂಚಿಸಿದ್ದೇನೆ.
–ಎಂ.ಕೆ. ಶ್ರೀರಂಗಯ್ಯ, ಜಿಲ್ಲಾಧಿಕಾರಿ
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.