ADVERTISEMENT

ಕೆರೆಯೊಂದರ ಕಥೆ-ವ್ಯಥೆ

ಡಾ ಎಸ್.ಶಿಶುಪಾಲ
Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
2003ರಲ್ಲಿ ನಿರ್ಮಾಣಗೊಂಡ ಕೆರೆಯ ನೋಟ...
(ಚಿತ್ರಕೃಪೆ: ಹೇಮಚಂದ್ರ ಜೈನ್)
2003ರಲ್ಲಿ ನಿರ್ಮಾಣಗೊಂಡ ಕೆರೆಯ ನೋಟ... (ಚಿತ್ರಕೃಪೆ: ಹೇಮಚಂದ್ರ ಜೈನ್)   
2003ರಲ್ಲಿ ನಿರ್ಮಿತವಾದ ಕುಂದವಾಡ ಕೆಲವೇ ವರ್ಷಗಳಲ್ಲಿ ಜೀವ ವೈವಿಧ್ಯದಿಂದ ನಳನಳಿಸಿದ್ದ ಕೃತಕ ಕೆರೆಯಾಗಿ ಬದಲಾಗಿತ್ತು. ಅದರ ಅಭಿವೃದ್ಧಿ ಕಾಮಗಾರಿ ಅಲ್ಲಿನ ಜೀವ ವೈವಿಧ್ಯವನ್ನು ಹೊಡೆದು ಓಡಿಸಿದೆ. ಈಗ ಮತ್ತೆ ಅದು ಹಳೆಯ ಸೊಬಗು ಮೂಡಿಸಿಕೊಳ್ಳಲು ಇನ್ನೆಷ್ಟು ಕಾಲ ಕಾಯಬೇಕೋ?

ಕೆರೆ ಒಂದು ಜೀವಸೆಲೆ. ಕೆರೆಯೆಂದರೆ ಮನಸೂರೆಗೊಳ್ಳುವ ಆಹ್ಲಾದಕರ ವಾತಾವರಣ, ಹಕ್ಕಿಗಳ ಚಿಲಿಪಿಲಿ ನಾದ. ಕೆರೆಯ ಮೇಲಿನಿಂದ ಬರುವ ತಣ್ಣನೆಯ ಶುದ್ಧ ಗಾಳಿ ಹಿತಾನುಭವ. ಸುತ್ತಲೂ ಮರಗಿಡಗಳ ಹಸಿರಿನ ಮಾತು. ನೀರಿನಲ್ಲಿ ಈಜುತ್ತಿರುವ ಬಾತುಗಳು, ಗಿಡಗಂಟೆಗಳ ಹೂಗಳಿಗೆ ಮುತ್ತಿಕ್ಕುವ ಚಿಟ್ಟೆಗಳು ಹೀಗೆ ಸೌಂದರ್ಯಲಹರಿ. ನಗರದ ಜನರು ಮಾನಸಿಕ ನೆಮ್ಮದಿ ಕಂಡುಕೊಳ್ಳುವ ತಾಣ ಕೆರೆ ಎನ್ನುವುದೂ ನಿಜ. ಸಾವಿರಾರು ಜಲಜನ್ಯ ಸಸ್ಯ ಮತ್ತು ಪ್ರಾಣಿಗಳ ಆವಾಸ ತಾಣವೂ ಹೌದು.

ಕೆರೆ ಮತ್ತು ಸರೋವರಗಳು ಭೂಮಿಯ ಶೇ. 3ರಷ್ಟು ಮಾತ್ರವಿದ್ದು, ಸಿಹಿನೀರಿನ ಆಕರಗಳಾಗಿವೆ. ತಮ್ಮದೇ ಆದ ವಿಶಿಷ್ಟ ಪರಿಸರವನ್ನು ಹೊಂದಿದ್ದು, ಅಮೋಘ ಜೀವ ವೈವಿಧ್ಯಕ್ಕೆ ಸಾಕ್ಷಿಯಾಗಿವೆ. ಆದರೆ ಇಂತಹ ನೀರಿನ ಆಕರಗಳು ಅಭಿವೃದ್ಧಿ ಹೆಸರಿನಲ್ಲಿ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ. ನಗರೀಕರಣ, ಕೈಗಾರಿಕೀಕರಣ ಮತ್ತು ಹೆಚ್ಚುತ್ತಿರುವ ಮನುಷ್ಯನ ನೀರಿನ ಬೇಡಿಕೆಗಳಿಂದ ಶ್ರೀಮಂತ ನೀರಿನ ಸೆಲೆಗಳು ಅಳಿವಿನಂಚಿಗೆ ಹೆಜ್ಜೆ ಹಾಕುತ್ತಿವೆ. ಕೆರೆ-ಸರೋವರಗಳ ಅಧ್ಯಯನವನ್ನು ಲಿಮ್ನಾಲೋಜಿ (Limnology) ಎಂದು ಕರೆಯುತ್ತಾರೆ. ಹೆಚ್ಚುತ್ತಿರುವ ಮನುಷ್ಯನ ಅಗತ್ಯಗಳಿಗಾಗಿ ಇಂತಹ ನೀರಿನ ಮೂಲವನ್ನು ಅತಿ ಜಾಗೂರಕತೆಯಿಂದ ನಿರ್ವಹಿಸುವುದು ಇಂದಿನ ಅಗತ್ಯ. ಕೆರೆಯ ಭೌತಿಕ, ರಾಸಾಯಿನಿಕ ಮತ್ತು ಜೈವಿಕ ಅಂಶಗಳು ಪರಸ್ಪರ ಅವಲಂಬನೆಯಿಂದ ಕೂಡಿದ್ದು, ಯಾವುದೇ ಒಂದು ಅಂಶದಲ್ಲಿ ಏರುಪೇರಾದರೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಇಂತಹ ಸಂದರ್ಭದಲ್ಲಿ ದಾವಣಗೆರೆಯ ಕುಂದವಾಡ ಕೆರೆಯ ಕಥೆ ಹೇಳುತ್ತೇನೆ. ದಾವಣಗೆರೆ ನಗರದ ಮಧ್ಯಭಾಗದಲ್ಲಿರುವ ಕುಂದವಾಡ ಗ್ರಾಮಕ್ಕೆ ಹೊಂದಿಕೊಂಡಿದ್ದ ಸಾಧಾರಣ ಕೆರೆಯಿದು. ಸುತ್ತಲೂ ಹಚ್ಚ ಹಸಿರಿನ ಭತ್ತದ ಗದ್ದೆಗಳು ಮತ್ತು ಅಲ್ಲಲ್ಲಿ ತೆಂಗು-ಕಂಗುಗಳ ತೋಟದ ವಿಹಂಗಮ ದೃಶ್ಯ. ಸುತ್ತಲಿನ ಗದ್ದೆಗಳ ನೀರು ಮತ್ತು ಮಳೆ ನೀರು ಸೇರಿದಂತೆ ವರ್ಷದ ಒಂದಾರು ತಿಂಗಳು ನೀರಿದ್ದಂತಹ ಕೆರೆ. ಸುಮಾರು 265 ಎಕರೆಯಷ್ಟು ವಿಸ್ತೀರ್ಣದ ನೈಸರ್ಗಿಕ ಕೆರೆಯಾಗಿದ್ದದ್ದು ದೂರಗಾಮಿ ದೃಷ್ಟಿಯಿರುವ ಆಡಳಿತಗಾರರ ಕೃಪೆಯಿಂದ 2003ರಲ್ಲಿ ಒಂದು ಉತ್ತಮ ಕೆರೆಯಾಗಿ ರೂಪುಗೊಂಡಿತು. ಭದ್ರಾ ಜಲಾಶಯದಿಂದ ನೀರು ತರುವ ಭಗೀರಥ ಪ್ರಯತ್ನ ಸಫಲಗೊಂಡು, ವರ್ಷವಿಡೀ ನೀರನ್ನು ಹೊಂದುವ ಕ್ಷಮತೆ ಪಡೆಯಿತು. ದಾವಣಗೆರೆ ನಗರದ ಶೇ. 60ಕ್ಕೂ ಹೆಚ್ಚು ಪ್ರದೇಶಕ್ಕೆ ಕುಡಿಯುವ ನೀರಿಗೆ ಆಸರೆಯಾಯಿತು. ಸುತ್ತಲಿನ ಅಂತರ್ಜಲದ ಮಟ್ಟ ಹೆಚ್ಚಾಗಿ ಕೊಳವೆಬಾವಿಗಳು ಜನರ ದಾಹ ತಣಿಸತೊಡಗಿದವು. ದಶಕಗಳಿಂದ ದಾವಣಗೆರೆಯ ಜನರನ್ನು ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಮರೆಯಾಯಿತು. ದಾನಿಗಳು ನೀಡಿದ್ದ ನೂರಾರು ಬೆಂಚುಗಳು ಜನರಿಗೆ ಕೆರೆಯನ್ನು ಆಸ್ವಾದಿಸುವ ಸ್ಥಳವನ್ನಾಗಿಸಿತು. ಆದರೆ ಪಕ್ಕದಲ್ಲಿರುವ ತೆರೆದ ರಾಜಕಾಲುವೆಯಲ್ಲಿನ ಮೋರಿಯ ನೀರಿನ ದುರ್ನಾತ ಸಹಿಸಲಾಗುತ್ತಿರಲ್ಲಿಲ್ಲ.

ADVERTISEMENT

ಇಲ್ಲಿ 150ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ತಜ್ಞರು ಗುರುತಿಸಿದ್ದರು. ದೇಶ-ವಿದೇಶಗಳಿಂದ ಬರುವ ವಲಸೆ ಹಕ್ಕಿಗಳಿಗೆ ಆಪ್ಯಾಯಮಾನ ಸ್ಥಳವಾಯಿತು. ಸುತ್ತಲಿದ್ದ ಪೊದೆಗಿಡಗಳಲ್ಲಿ 36 ಪ್ರಭೇದದ ಚಿಟ್ಟೆಗಳನ್ನು ದಾಖಲಿಸಲಾಗಿದೆ. ಕಪ್ಪೆ, ಅಳಿಲು, ಆಮೆ, ನೀರುಹಾವು, ಮೀನು, ಮುಂಗುಸಿ ಮುಂತಾದ ಜೀವಿಗಳ ತಂಗುದಾಣ ಇದಾಗಿದೆ. ಆಹ್ಲಾದಕರ ವಾತಾವರಣದಲ್ಲಿ ಆರೋಗ್ಯ ಮತ್ತು ಪರಿಸರಸ್ನೇಹಿ ಸ್ಥಳವಾಗಿ ನಾಗರಿಕರ ಮೆಚ್ಚಿನ ನಡಿಗೆ ತಾಣವಾಗಿ ಈ ಸ್ಥಳ ಮಾರ್ಪಾಡಾಯಿತು.

ಪರಿಸರ-ಮಾರಕ ಅಭಿವೃದ್ಧಿ

ಅಭಿವೃದ್ಧಿ ಹೆಸರಿನಲ್ಲಿ ₹15 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪುಗೊಂಡು, 2019ರಲ್ಲಿ ಕೆರೆಯನ್ನು ಪುನರ್‌ನಿರ್ಮಿಸುವ ಕಾರ್ಯ ಪ್ರಾರಂಭವಾಯಿತು. ಮೊದಲಿಗೆ ಭದ್ರಾ ಜಲಾಶಯದಿಂದ ಬರುತ್ತಿದ್ದ ನೀರನ್ನು ನಿಲ್ಲಿಸಲಾಯಿತು. ಕೆರೆ ಏರಿಯನ್ನು ವಿಸ್ತರಿಸುವುದು, ಪಾದಚಾರಿ ರಸ್ತೆಯನ್ನು ಇನ್ನೂ ಅಗಲ ಮಾಡುವುದು, ಹೂವಿನ ಹಾಸು ರೂಪಿಸುವುದು, ಕುಳಿತುಕೊಳ್ಳುವ ಬೆಂಚುಗಳನ್ನು ನಿರ್ಮಿಸುವುದು, ವಿದ್ಯುತ್ ಬೆಳಕನ್ನೂ ಒಳಗೊಂಡಂತೆ ಆಲಂಕಾರಿಕ ಅಭಿವೃದ್ಧಿ ಮಾಡುವುದು... ಹೀಗೆ ಎಲ್ಲಾ ಕಾಮಗಾರಿಗಳು ಮಾನವ-ಕೇಂದ್ರಿತ ಅಭಿವೃದ್ಧಿಯಾಗಿ ಮಾರ್ಪಟ್ಟವು. ಒಂದು ಕಡೆಯ ಕೆರೆ ಏರಿ ಜಾಗಕ್ಕೆ ಪ್ಲಾಸ್ಟಿಕ್ ಹಾಸು ಹಾಕಿ ನೀರು ಇಂಗದಂತೆ ಮಾಡಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ನೀರಿಲ್ಲದೆ ಕೆರೆಯನ್ನು ಆಶ್ರಯಿಸಿದ್ದ ಸಾವಿರಾರು ಜಲಚರಗಳು ಸಾವಿಗೀಡಾದವು. ಹಕ್ಕಿಗಳು ಅನ್ಯ ಕೆರೆಗಳತ್ತ ಪಲಾಯನ ಮಾಡಿದವು. ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ಪರಿಸರ ಹದಗೆಟ್ಟಿತು. ಸುತ್ತಮುತ್ತಲಿನ ಪೊದೆ ಗಿಡಗಳು ಹಲವಾರು ಹಕ್ಕಿಗಳಿಗೆ ಗೂಡು ಮಾಡಲು ಪ್ರಶಸ್ತ ಸ್ಥಳಗಳಾಗಿದ್ದವು. ಕೆರೆಯಂಗಳದಲ್ಲಿ ಸತತ ಜೋರು ಶಬ್ದ ಹೊಮ್ಮಿಸಿದ ಜೆಸಿಬಿಗಳು ಜೀವವೈವಿಧ್ಯವನ್ನು ನಾಶಮಾಡಿದವು. ಜಿಲ್ಲಾ ಅರಣ್ಯ ಸಂರಕ್ಷಾಣಧಿಕಾರಿ ರಾಜ್ಯ ಜೀವವೈವಿಧ್ಯ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ ಇಲ್ಲಿನ ಜೀವವೈವಿಧ್ಯಕ್ಕೆ ಧಕ್ಕೆಯಾಗಿರುವುದನ್ನು ತಿಳಿಸಲಾಗಿದೆ. ಈಗ ಅಲ್ಲಿ ನೂರಾರು ಆಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಹುಲ್ಲುಹಾಸು (Lawn) ಬಂದಿದೆ. ಕೆರೆ ಏರಿಯಲ್ಲಿ ಹುಲ್ಲುಹಾಸು ಅಗತ್ಯವೆ? ನಿರ್ವಹಣೆ ಸಾಧ್ಯವೆ? ಗಿಡಗಳಿಗೆ ಡ್ರಿಪ್-ಇರಿಗೇಶನ್ ಕೊಳವೆಗಳನ್ನು ಅಳವಡಿಸಲಾಗಿದೆ. ಕೆರೆಯ ಬದಿ ಇರುವ ಗಿಡಗಳಿಗೆ ಹಣ ಖರ್ಚು ಮಾಡಿ ನೀರುಣಿಸುವ ಅಗತ್ಯವಿದೆಯೇ? 

ಮೊದಲು ನೈಸರ್ಗಿಕವಾಗಿ ಬೆಳೆಯುತ್ತಿದ್ದ ಲಂಟಾನ ಗಿಡಗಳನ್ನು ತೆಗೆದು, ದುಡ್ಡು ಕೊಟ್ಟು ತಂದ ಲಂಟಾನ ಮತ್ತು ಇತರೆ ಹೂಗಿಡಗಳನ್ನು ನೆಡಲಾಗಿದೆ. ಇಲ್ಲಿ ಬೆಳೆಯಲು ಪ್ರಾರಂಭಿಸಿರುವ ಗಿಡಗಳು ಹೂಕಳ್ಳರ ಪಾಲಾಗುತ್ತಿವೆ. ಕೆರೆಯಲ್ಲಿ ಸೈಕಲ್ ಟ್ರ್ಯಾಕ್‌ ನಿರ್ಮಾಣಕ್ಕೆ ಕೆರೆಯ ಒಳಾಂಗಣದ ಹತ್ತು ಮೀಟರ್ ಜಾಗವನ್ನು ಉಪಯೋಗಿಸಿ ಕೆರೆಯನ್ನು ಕಿರಿದು ಮಾಡಲಾಗಿದೆ. ಇಲ್ಲಿ ಕುಡಿಯುವ ನೀರು ಸಂಗ್ರಹವಾಗುವುದರಿಂದ ಪ್ಲಾಸ್ಟಿಕ್-ರಹಿತ ಪ್ರದೇಶವಾಗಬೇಕಿದ್ದ ಕೆರೆ ಪ್ಲಾಸ್ಟಿಕ್ ಹೊದಿಕೆ ಹೊದ್ದಿದೆ. ಮಳೆ-ಗಾಳಿ, ಬಿಸಿಲಿಗೆ ಕೆರೆಯ ಏರಿಯ ಕಲ್ಲಿನ ಕೆಳಗಿರುವ ಪ್ಲಾಸ್ಟಿಕ್ ದಿನಕಳೆದಂತೆ ಕರಗಿ ಕುಡಿಯುವ ನೀರಿಗೆ ಮೈಕ್ರೊಪ್ಲಾಸ್ಟಿಕ್ ಅಂಶಗಳನ್ನು ಬಿಟ್ಟು ಜನರಿಗೆ ಆರೋಗ್ಯ ಸಮಸ್ಯೆಯನ್ನು ಉಂಟುಮಾಡೀತು. ಕುಡಿಯುವ ನೀರಿನಿಂದ ಮೈಕ್ರೊಪ್ಲಾಸ್ಟಿಕ್ ಬೇರ್ಪಡಿಸಿ ಶುದ್ಧೀಕರಿಸುವ ತಂತ್ರಜ್ಞಾನವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯೂ ಮೈಕ್ರೋಪ್ಲಾಸ್ಟಿಕ್ ಕಲ್ಮಶದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಒಂದು ಪ್ರಕೃತಿ ನಿರ್ಮಿತ ಜಾಗದಲ್ಲಿ ಆದಷ್ಟು ಗಿಡ-ಮರಗಳಿರಬೇಕೇ ವಿನಾ ಕಾಂಕ್ರೀಟ್, ಕಬ್ಬಿಣ, ಪ್ಲಾಸ್ಟಿಕ್ ಮುಂತಾದ ವಸ್ತುಗಳಿರಬಾರದು. ಇನ್ನು ವಿದ್ಯುತ್ ಬೆಳಕು ಬರುವುದರಿಂದ ಅಲ್ಲಿನ ಪ್ರಾಕೃತಿಕ ಸೊಬಗು ನಾಶವಾಗಿ ಬಹಳಷ್ಟು ಜೀವಿಗಳಿಗೆ ತೊಂದರೆಯಾಗುವುದು.

ಬೆಂಗಳೂರಿನ ಎಷ್ಟೋ ಕೆರೆಗಳನ್ನು ಈ ರೀತಿಯಲ್ಲಿ ಮಾನವ ಕೇಂದ್ರಿತ ಅಭಿವೃದ್ಧಿ ಮಾಡಿ, ಹಾಳು ಮಾಡಿರುವ ಉದಾಹರಣೆಗಳಿವೆ. ಅದರ ಪರಿಣಾಮ ಈಗಾಗಲೇ ಕಣ್ಣೆದುರಲ್ಲಿ ಇರುವಾಗ ಮತ್ತೆ ಅಂತಹುದ್ದೇ ಅನಾಹುತದ ಅಗತ್ಯ ಇಲ್ಲಿ ಇತ್ತೇ? ಕರ್ನಾಟಕ ಹೈಕೋರ್ಟ್‌ 2019ರ ಜೂನ್‌ 18ರಂದು ಕೊಟ್ಟ ತೀರ್ಪಿನಲ್ಲಿ ಮೂಲ ನೀರಿನ ಆಕರಗಳಾದ ಕೆರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಸ್ವರೂಪವನ್ನು ಬದಲಾಯಿಸುವಂತಿಲ್ಲವೆಂದು ಉಲ್ಲೇಖಿಸಿತ್ತು. ಅಲ್ಲಿರುವ ಜೀವ ವೈವಿಧ್ಯವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಬಾರದು. ಸಂವಿಧಾನದ ಪರಿಚ್ಛೇದ 21ರ ಪ್ರಕಾರ ಶುದ್ಧ ಪರಿಸರ ಪ್ರತಿಯೊಬ್ಬರ ಹಕ್ಕು ಎಂಬುದನ್ನು ಪ್ರತಿಪಾದಿಸಿತ್ತು.

ಇಡೀ ಕೆರೆಯ ಐದು ಕಿ.ಮೀ. ಜಾಗದಲ್ಲಿ ಶೌಚಾಲಯಗಳಿಲ್ಲ. ಈಗ ₹15 ಕೋಟಿ ಖರ್ಚಾದರೂ ಅಗತ್ಯ ಶೌಚಾಲಯ ನಿರ್ಮಾಣವಾಗಿಲ್ಲ. ಮಹಿಳೆಯರಿಗಂತೂ ಇದೊಂದು ಕ್ಲಿಷ್ಟಕರ ಸಮಸ್ಯೆ. ಕೆರೆಯ ಸುತ್ತ ಕನಿಷ್ಠ 100 ಮೀಟರ್ ಖಾಲಿ ಜಾಗವನ್ನು ಬಫರ್ ವಲಯವಾಗಿ ಬಿಡಬೇಕೆಂಬ ನಿಯಮವಿದೆ. ಇದನ್ನು ಗಾಳಿಗೆ ತೂರಿ ರಿಯಲ್ ಎಸ್ಟೇಟ್ ಮಾಫಿಯಾ ಚೆನ್ನಾಗಿ ಕೆಲಸ ಮಾಡಿದೆ. ಕೆರೆಯ ಪಕ್ಕದಲ್ಲೇ ಬಹುಮಹಡಿ ಕಟ್ಟಡಗಳು ತಲೆಎತ್ತಿವೆ. ಕಾಮಗಾರಿಯಿಂದ ಮುರಿದ, ತೆಗೆದ, ಸತ್ತ ಮರಗಳ ಪುನಶ್ಚೇತವಾಗಿಲ್ಲ.

ಅಭಿವೃದ್ಧಿಯೆಂಬ ನಾಗಾಲೋಟಕ್ಕೆ ಸಿಕ್ಕು ನಲುಗಿದ ಕುಂದವಾಡ ಕೆರೆ ತನ್ನ ಜೀವಸೌಂದರ್ಯವನ್ನು ಮತ್ತೆ ಪಡೆಯಲು ದಶಕಗಳೇ ಬೇಕಾಗಬಹುದು. ಶಾಲಾ ಮಕ್ಕಳಿಗೆ ಪರಿಸರ ಪಾಠಶಾಲೆಯಂತಿದ್ದ ಕೆರೆ ತನ್ನ ಕಷ್ಟಕಾಲವ ಕಳೆದು ಜೀವಸೆಲೆ ಚಿಮ್ಮಿಸುತ್ತಿದೆ. ವಿದ್ಯಾರ್ಥಿಗಳಿಗೆ ಒಂದು ಪರಿಸರ ಅಧ್ಯಯನ ಕೇಂದ್ರವಾಗಬೇಕಾದ ಜಾಗವಿದು. ಅಸಂಖ್ಯಾತ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಅಧ್ಯಯನಕ್ಕೆ ಪ್ರಶಸ್ತ ಸ್ಥಳ. ಸುಸ್ಥಿರ ಯೋಜನೆಗಳಿಂದ ಮಾತ್ರ ಇಂತಹ ಜೀವಜಲದ ಆಕರ ಉಳಿಯಲು ಸಾಧ್ಯ. ಕೆರೆಯನ್ನು ಜಲಸಂಗ್ರಹದ ತೊಟ್ಟಿಯನ್ನಾಗಿ ಮಾರ್ಪಡಿಸಿ ಸಿಂಗಾರ ಮಾಡಿದರೆ ಜೀವಸೆಲೆಗೆಲ್ಲಿಯ ನೆಲೆ?

ಪುಟಿದೆದ್ದ ಪ್ರಕೃತಿ

ಕಳೆದ ಎಂಟು ತಿಂಗಳಿನಿಂದ ಹೊಸ ನೀರು ಹರಿಸಲಾಗುತ್ತಿದೆ. ಆದರೆ ಕೆರೆಯಿನ್ನೂ ತುಂಬಿಲ್ಲ. ಪ್ರಕೃತಿ ತನ್ನಲ್ಲಿನ ಜೀವಿಗಳ ಉಳಿವಿಗಾಗಿ ತನ್ನದೇ ದಾರಿ ಕಂಡುಕೊಳ್ಳುತ್ತದೆ. ಸಹಸ್ರಾರು ವರ್ಷಗಳ ಜೀವ ವಿಕಾಸ ಪ್ರಕೃತಿಯ ಸಹಿಷ್ಣುತೆಗೆ ಸಾಕ್ಷಿ. ಬಟಾಬಯಲಾಗಿದ್ದ ಕೆರೆಯ ಅಂಗಳದಲ್ಲಿ ನೀರಿನ ಪಸೆ ಬಂದ ಕೂಡಲೇ ಮಾಯಾನಗರಿಯಂತೆ ಪುಟಿದೆದ್ದ ಜಲಸಸ್ಯಗಳು ಆವರಿಸಿವೆ. ನೀರು ಮತ್ತು ಜಲಸಸ್ಯಗಳನ್ನು ಗಮನಿಸಿದ ಹಕ್ಕಿಗಳ ದಂಡು ಮತ್ತೆ ಕುಂದವಾಡ ಕೆರೆಗೆ ದಾಂಗುಡಿಯಿಟ್ಟಿವೆ. ನೀರಿನ ದಾಹವೇ ಜೀವನದ ಮೂಲ. ದೂರದೂರದಲ್ಲಿದ್ದ ಹಕ್ಕಿಗಳಿಗೆ ಅದ್ಯಾರು ಸೂಚನೆ ಕೊಟ್ಟರೋ ಕಾಣೆ. ಜಲಸಸ್ಯಗಳ ಜೊಂಡಿನಲ್ಲಿ ಮರಿಮಾಡಲು ಸಾವಿರಾರು ಹಕ್ಕಿಗಳು ಆಗಮಿಸಿವೆ. ಮೊದಲಿದ್ದ ಸಣ್ಣ ಮರಗಳಲ್ಲಿ ಹಕ್ಕಿಗಳ ಗೂಡು ನಿರ್ಮಾಣ ಪ್ರಾರಂಭವಾಗಿದೆ. ಇತ್ತೀಚಿನ ಪಕ್ಷಿಗಣತಿ ಪ್ರಕಾರ ಕೇವಲ 52 ಪ್ರಭೇದಗಳು ಕಾಣಿಸಿವೆ. ಅಂದರೆ ಮೊದಲಿದ್ದ ಮೂರನೇ ಒಂದರಷ್ಟು ಪ್ರಭೇದಗಳು ಮಾತ್ರ ಬಂದಿವೆ. ಹಾಗೆಯೇ ಮೊದಲಿದ್ದ ಚಿಟ್ಟೆ ಪ್ರಭೇದಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಲೇಖಕರು: ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು

ಅಭಿವೃದ್ಧಿ ಹೆಸರಿನಲ್ಲಿ ನಶಿಸುತ್ತಿರುವ ಜಲಚರಗಳು
ಅಭಿವೃದ್ಧಿ ಹೆಸರಿನಲ್ಲಿ ಹಾಳಾದ ಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.