ADVERTISEMENT

ಕಣ್ಮರೆ ಆಗುತ್ತಿರುವ ಚಿತ್ರಗಳಿಗೆ ಜೀವ ತುಂಬಿದ ದಾವಣಗೆರೆ ಥೀಮ್‌ ಪಾರ್ಕ್‌

ಸುಮಾ ಬಿ.
Published 20 ಜುಲೈ 2024, 21:35 IST
Last Updated 20 ಜುಲೈ 2024, 21:35 IST
ದಾವಣಗೆರೆ ನಗರದ ದೃಶ್ಯ ಕಲಾ ಕಾಲೇಜು ಹಿಂಭಾಗದಲ್ಲಿರುವ ಥೀಮ್‌ ಪಾರ್ಕ್‌ನಲ್ಲಿ ದುಗ್ಗಮನ ಜಾತ್ರೆಯ ಸೊಬಗು
 ಚಿತ್ರಗಳು: ಸತೀಶ್‌ ಬಡಿಗೇರ
ದಾವಣಗೆರೆ ನಗರದ ದೃಶ್ಯ ಕಲಾ ಕಾಲೇಜು ಹಿಂಭಾಗದಲ್ಲಿರುವ ಥೀಮ್‌ ಪಾರ್ಕ್‌ನಲ್ಲಿ ದುಗ್ಗಮನ ಜಾತ್ರೆಯ ಸೊಬಗು  ಚಿತ್ರಗಳು: ಸತೀಶ್‌ ಬಡಿಗೇರ   

ದುಗ್ಗಮ್ಮನ ಜಾತ್ರೆಲಿ ದೀಡ್‌ ನಮಸ್ಕಾರ ಹಾಕುವ ಭಕ್ತರು, ಆರತಿ ಬಟ್ಟಲು ಹಿಡಿದು ದೇವಿಯ ಆರಾಧನೆಗೆಂದು ಲಘುಬಗೆಯಿಂದ ಸಾಗುವ ಮಹಿಳೆಯರು, ಕುರಿ, ಕೋಳಿ ಕಾಳಗ ನೋಡುತ್ತ ಪುಳಕಗೊಂಡ ಕ್ರೀಡಾ ರಸಿಕರು, ಎದುರಾಳಿಗೆ ಮಣ್ಣು ಮುಕ್ಕಿಸುವ ತವಕದಲಿ ಜಗಜಟ್ಟಿಗಳು, ಕಬಡ್ಡಿ ಆಟದಲ್ಲಿ ನಿರತ ಯುವಪಡೆ, ಬಂಡಿ ಓಡಿಸುವ ಬಾಲಕ, ಕುಂಟೆ ಬಿಲ್ಲೆ ಆಡುವ ಬಾಲಕಿಯರು, ಜಾನುವಾರು ಸಂತೆಯಲ್ಲಿ ವ್ಯಾಪಾರ ಕುದುರುವ ಬಗೆ, ವೈವಿಧ್ಯಮಯ ತಳಿಯ ಎತ್ತುಗಳು, ನಶಿಸುತ್ತಿರುವ ಜಾನಪದ ಕಲೆಗಳ ಸೊಬಗು...

ಇವೆಲ್ಲವನ್ನೂ ಒಂದೆಡೆಯೇ ಕಣ್ತುಂಬಿಕೊಂಡು, ಇನ್ನಷ್ಟು ಅಚ್ಚರಿಗಳನ್ನು ಮನಕ್ಕೆ ಇಳಿಸಬೇಕೆಂದರೆ ಬೆಣ್ಣೆ ನಗರಿಗೆ ಬರಬೇಕು. ‘ದಾವಣಗೆರೆಯಲ್ಲಿ ತಿನ್ನಲು ಬೆಣ್ಣೆದೋಸೆ ಬಿಟ್ಟು, ನೋಡಲು ಏನಿದೆ?’ ಎಂದು ಕೇಳುವವರಿಗೆ ನಗರದ ದೃಶ್ಯ ಕಲಾ ಕಾಲೇಜಿನ ಹಿಂದೆ ನಿರ್ಮಾಣವಾಗಿರುವ ‘ಥೀಮ್‌ ಪಾರ್ಕ್‌’ ಇದೆ.

ಈಗ ಅಭಿವೃದ್ಧಿಯ ರೆಕ್ಕೆಪುಕ್ಕ ಅಂಟಿಸಿಕೊಳ್ಳುತ್ತ ಮೇಲೇಳುತ್ತಿರುವ ಕುಂದವಾಡ ಕೆರೆ, ಅದರ ಹಿಂಭಾಗದಲ್ಲೇ ಇರುವ ‘ಗ್ಲಾಸ್‌ ಹೌಸ್‌’ ಆಕರ್ಷಣೀಯ ಪ್ರವಾಸಿತಾಣಗಳೆನಿಸಿದ್ದವು. ಥೀಮ್‌ ಪಾರ್ಕ್‌ ಪ್ರವಾಸಿತಾಣಗಳ ರೆಕ್ಕೆಗೆ ಹೊಸದೊಂದು ಗರಿಯಾಗಿದೆ. ಇದು ಶೀಘ್ರದಲ್ಲೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.

ADVERTISEMENT

ನಗರದ ಹೃದಯಭಾಗದಲ್ಲಿರುವ ದೃಶ್ಯ ಕಲಾ ಕಾಲೇಜು ಕಲಾಸಕ್ತರಿಗೆ ಪ್ರಿಯವಾದ ಸ್ಥಳ. ಕಾಲೇಜಿನ ಆವರಣ ಪ್ರವೇಶಿಸುತ್ತಿದ್ದಂತೆಯೇ ವಿದ್ಯಾರ್ಥಿಗಳ ಕೈಚಳಕದಲ್ಲಿ ಅರಳಿದ ಕಲಾಕೃತಿಗಳು  ಸೆಳೆಯುತ್ತವೆ. ಮಾಡರ್ನ್‌ ಕಲಾಕೃತಿಗಳನ್ನು ವೀಕ್ಷಿಸುತ್ತ ತಿಳಿದಷ್ಟು, ತಿಳಿಯದಷ್ಟನ್ನು ಮನಕ್ಕೆ ಇಳಿಸುತ್ತ ಪುಟ್ಟ ಕಾನನದ ದಾರಿಯಲ್ಲಿ ನವಿಲುಗಳ ಚೀಂಕಾರವನ್ನು ಕೇಳುತ್ತಾ ಹೆಜ್ಜೆ ಹಾಕಿದರೆ ಬೇರೆಯದೇ ಲೋಕ ಎದುರುಗೊಳ್ಳುತ್ತದೆ.

ಮಧ್ಯ ಕರ್ನಾಟಕದ ಕಲೆ, ಸಂಸ್ಕೃತಿ ಬಿಂಬಿಸುವ, ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ, ದೊಡ್ಡಾಟ, ಬಯಲಾಟ, ತೊಗಲುಬೊಂಬೆಯಾಟದ ಸಿರಿವಂತಿಕೆಯನ್ನು ಸಾರುವ ನಗರ–ಗ್ರಾಮೀಣ ಸಂಸ್ಕೃತಿಯೇ ಕಣ್ಣೆದುರು ಹಾದುಹೋಗುತ್ತದೆ. ಒಂದೊಂದು ಕಲಾಕೃತಿಗಳ ಹಾವ–ಭಾವ, ನೋಟ, ಗಾಂಭೀರ್ಯ ನೈಜವೆಂಬಂತೆ ರಚಿಸಿದ್ದಾರೆ ಕಲಾವಿದರು. ಅರೆಕ್ಷಣ ಅಚ್ಚರಿಯಿಂದ ಮೂಗಿನ ಮೇಲೆ
ಬೆರಳು ಹೋಗದೆ ಇರದು. ಈ ಕಲಾ ಸಿರಿವಂತಿಕೆಯ ರೂವಾರಿ ಹಾವೇರಿ ಜಿಲ್ಲೆ ಗೊಟಗೋಡಿಯ ಕಲಾವಿದ ರಾಜಹರ್ಷ ಸೊಲಬಕ್ಕನವರ. 

ಥೀಮ್‌ ಪಾರ್ಕ್‌ ಒಂದೂವರೆ ಎಕರೆ ಪ್ರದೇಶದಲ್ಲಿ ಮೈದಳೆದಿದ್ದು, ಬಯಲುರಂಗಮಂದಿರ, ವೈವಿಧ್ಯಮಯ ಸಂದೇಶ ಸಾರುವ ಕಲಾಕೃತಿಗಳು ಮೇಳೈಸಿವೆ. ಜಲ್ಲಿಕಲ್ಲು, ಕಬ್ಬಿಣ, ಸಿಮೆಂಟ್‌ ಒಳಗೊಂಡ (ಆರ್‌ಸಿಸಿ) ಮಾಧ್ಯಮದಲ್ಲಿ ಕಲಾಕೃತಿಗಳು ರಚನೆಗೊಂಡಿದ್ದು, ಅಂದಾಜು 350 ರಿಂದ 400 ಕಲಾಕೃತಿಗಳು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. 150 ಕಲಾವಿದರ ಸತತ ಒಂದು ವರ್ಷ ಶ್ರಮದ ಫಲವಾಗಿ ಥೀಮ್‌ ಪಾರ್ಕ್‌ ರೂಪುಗೊಂಡಿದೆ. ನಗರದಲ್ಲಿ ನಾಟಕ ಪ್ರದರ್ಶನಕ್ಕೆಂದೇ ಸೂಕ್ತ ರಂಗಮಂದಿರ ಈವರೆಗೆ ಇರಲಿಲ್ಲ. ಇಲ್ಲಿರುವ ಬಯಲುರಂಗಮಂದಿರ ಆ ಕೊರತೆಯನ್ನು ನೀಗಿಸಲಿದೆ.

‘ಆರ್‌ಸಿಸಿ ಮಾಧ್ಯಮ ನೂರು ವರ್ಷ ಬಾಳಿಕೆ ಬರುವಂತಹದ್ದು. ಬಿಸಿಲು–ಮಳೆಗೆ ಮೈಯೊಡ್ಡಿದರೆ ಬಣ್ಣ ಮಾಸಬಹುದು, ಕೆಲವೆಡೆ ಬಿರುಕು ಬಿಡಬಹುದು. ಆದರೆ ಕಲಾಕೃತಿ ನಶಿಸದು. ಆರ್‌ಸಿಸಿ ಕಟ್ಟಡ ಬಹುವರ್ಷ ಬಾಳಿಕೆ ಬರುವ ರೀತಿ ಕಲಾಕೃತಿಗಳ ಬಗ್ಗೆಯೂ ಕಾಳಜಿ ವಹಿಸಿದರೆ ಶತಮಾನದವರೆಗೂ ಹೊಸದರಂತೆ ಇರುತ್ತವೆ. ಸೂಪರ್‌ ರಿಯಾಲಿಸಂ ಶೈಲಿಯಲ್ಲಿ ಇಲ್ಲಿನ ಕಲಾಕೃತಿಗಳನ್ನು ರಚಿಸಲಾಗಿದೆ. ಅಂದರೆ ನೈಜತೆಗೆ ಬಹಳ ಹತ್ತಿರ ಇರುವ ಕಲಾಕೃತಿಗಳಿವು’–ಹೀಗೆ ಕಲಾಕೃತಿಗಳ ಒಳಹೊರಗನ್ನು ಬಿಡಿಸಿಟ್ಟರು ಕಲಾವಿದ ರಾಜಹರ್ಷ ಸೊಲಬಕ್ಕನವರ.

ಈ ಥೀಮ್‌ ಪಾರ್ಕ್‌ ರೂಪುಗೊಂಡಿರುವುದು ಸ್ಮಾರ್ಟ್‌ ಸಿಟಿ ಯೋಜನೆಯಡಿ. ಸ್ಮಾರ್ಟ್‌ ಸಿಟಿ ಎಂದೊಡನೆ ಧುತ್ತನೆ ಎದುರಾಗುವುದು ಅಭಿವೃದ್ಧಿಗೊಂಡ ರಸ್ತೆಗಳು, ಕಟ್ಟಡಗಳು, ಕೆರೆ ಏರಿಗಳು, ವಾಕಿಂಗ್‌ ಪಾತ್‌..

ಇದೆಲ್ಲದರ ನಡುವೆಯೂ ಕಲೆ, ಸಂಸ್ಕೃತಿಗೂ ಸ್ಮಾರ್ಟ್‌ ಸಿಟಿ ಯೋಜನೆಯ ಹಣ ಬಳಸಬಹುದು ಎನ್ನುವುದನ್ನು ಇದು ಎತ್ತಿ ತೋರಿಸಿದೆ. ಒಟ್ಟು ₹ 6 ಕೋಟಿ ವೆಚ್ಚದಲ್ಲಿ ಥೀಮ್‌ ಪಾರ್ಕ್‌ ರೂಪುಗೊಂಡಿದ್ದು, ಇರದ ನಿರ್ವಹಣೆ ಜವಾಬ್ದಾರಿಯನ್ನು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದೆ.

ಇವೆಲ್ಲ ಇವೆ...

ಉದ್ಯಾನದ ಒಳಗೆ ಅಡಿ ಇಡುತ್ತಿದ್ದಂತೆ ಭುವನೇಶ್ವರಿ ದೇವಿಯ ಕಲಾಕೃತಿ ಭಕ್ತಿಯ ಭಾವ ಸ್ಫುರಿಸುತ್ತದೆ. ದಾವಣಗೆರೆಯ ದುಗ್ಗಮ್ಮನ ಜಾತ್ರೆಯ ಕಲಾಕೃತಿಗಳು, ಪರಿಸರದ ಪಾಠ ಹೇಳುವ ಅಪ್ಪಿಕೊ ಚಳವಳಿಯ ಕಲಾಕೃತಿಗಳು, ಆರೋಗ್ಯದ ಗುಟ್ಟು ಮನಮುಟ್ಟಿಸುವ ಯೋಗ ಕಲಾಕೃತಿಗಳು, ಮಕ್ಕಳಿಂದ ದೂರವೇ ಉಳಿದಿರುವ ಕುಂಟೆಬಿಲ್ಲೆ, ಗೋಲಿ ಆಟ, ಬಂಡಿ, ಚಿನ್ನಿದಾಂಡು ಆಡುವ ಮಕ್ಕಳ ಕಲಾಕೃತಿಗಳು, ಆಧುನಿಕ ಭರಾಟೆಯಲ್ಲಿ ತೆರೆಯ ಅಂಚಿಗೆ ಸರಿದಿರುವ ದೊಡ್ಡಾಟ, ಹುಲಿ ಕುಣಿತ, ತಮಟೆ ವಾದನ, ಸೂತ್ರದ ಬೊಂಬೆಯಾಟ, ಜನಪದ ಹಾಡುಗಾರರು, ಲಂಬಾಣಿ ನೃತ್ಯದ ಕಲಾಕೃತಿಗಳು ಗಮನ ಸೆಳೆಯುತ್ತವೆ.

ಉದ್ಯಾನದ ಪ್ರಮುಖ ಆಕರ್ಷಣೆ ಜಾನುವಾರು ಸಂತೆ’. ಸಂತೆಯಲ್ಲಿ ಎತ್ತು, ಹಸು, ಎಮ್ಮೆಗಳ ವ್ಯಾಪಾರ ಕುದುರಿಸುವ ಕಲಾಕೃತಿಗಳು ಮನಮುಟ್ಟುವಂತಿವೆ. ಹಳ್ಳಿಕಾರ್‌, ಅಮೃತ್‌ ಮಹಲ್‌, ಕಿಲಾರಿ, ಜವಾರಿ, ದೇವಳಿ ತಳಿಯ ಎತ್ತುಗಳು ಹಾಗೂ ಗೌಳಿ, ಸುರ್ವೆ, ಮುರ‍್ರಾ ತಳಿಯ ಎಮ್ಮೆಗಳ ಕಲಾಕೃತಿಗಳು ನೈಜವೆಂಬಂತೆ ಚಿತ್ರಿತವಾಗಿವೆ. ಉದ್ಯಾನದ ಆದಿಯಲ್ಲೇ ಎದುರಾಗುವ ಚಿಟ್ಟೆ ಜೀವನ ಚಕ್ರ ಮಕ್ಕಳ ಮನದುಂಬುತ್ತದೆ.

ನಮ್ಮದೇ ಕಲೆ, ಸಂಸ್ಕೃತಿ, ಬದುಕನ್ನು ನೈಜವೆಂಬಂತೆ ಚಿತ್ರಿಸಿರುವ ಈ ಥೀಮ್‌ ಪಾರ್ಕ್‌ ಅನ್ನು ಎಲ್ಲರೂ ಒಮ್ಮೆ ನೋಡಲೇಬೇಕು.

ಹೀಗೆ ಹುಟ್ಟಿತು ಥೀಮ್‌ ಪಾರ್ಕ್‌ ಪರಿಕಲ್ಪನೆ

ದಾವಣಗೆರೆಯಲ್ಲಿ ‘ಸ್ಮಾರ್ಟ್‌ ಸಿಟಿ’ ಯೋಜನೆ ಆರಂಭವಾದಾಗ ಈ ಯೋಜನೆಯ ಅನುದಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ₹ 3.5 ಕೋಟಿಯನ್ನು ಮೀಸಲಿರಿಸಲಾಯಿತು. ಬ್ಯಾಂಕ್‌ನಲ್ಲಿದ್ದ ಅನುದಾನ ಕೆಲ ವರ್ಷಗಳ ಬಳಿಕ ಬಡ್ಡಿ ಸೇರಿ ₹ 5.5 ಕೋಟಿ ಆಗಿತ್ತು. ಈ ಹಣದ ಒಂದಷ್ಟನ್ನು ಕನ್ನಡ ಭವನ ಹಾಗೂ ಸ್ಕೂಲ್‌ ಆಫ್‌ ಆರ್ಟ್ಸ್‌ನ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಯೋಚಿಸಲಾಗಿತ್ತು. ಇಷ್ಟು ದೊಡ್ಡ ಮೊತ್ತವನ್ನು ಶಾಶ್ವತವಾಗಿ ಉಳಿಯುವಂತಹ ಯೋಜನೆಗೆ ವಿನಿಯೋಗಿಸಿದರೆ ಒಳಿತು ಎಂಬ ಸಲಹೆ ಕೇಳಿಬಂದಿತು. ಆಗ ರೂಪುಗೊಂಡಿದ್ದು ಥೀಮ್‌ ಪಾರ್ಕ್‌ ಪರಿಕಲ್ಪನೆ.

‘ಯೋಜನೆ ಆರಂಭಕ್ಕೂ ಮುನ್ನ (ಕೋವಿಡ್‌ಗೂ ಮುನ್ನ) ಗೊಟಗೋಡಿಯ ರಾಕ್‌ ಗಾರ್ಡನ್‌ ರೂವಾರಿ ಟಿ.ಬಿ.ಸೊಲಬಕ್ಕನವರ್‌ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಜಕ್ಕೂರಿನಲ್ಲಿ ನಿರ್ಮಾಣಗೊಂಡಿರುವ ಮಾದರಿ ಪಾರಂಪರಿಕ ಗ್ರಾಮ, ಗೊಟಗೋಡಿಯ ರಾಕ್‌ ಗಾರ್ಡನ್‌, ಕಾರವಾರದ ಉದ್ಯಾನ, ಮಹಾರಾಷ್ಟ್ರದ ಕೊಲ್ಲಾಪುರದ ಬಳಿ ಇರುವ ಕನ್ಹೇರಿ ಮಠದ ಉದ್ಯಾನ ಮುಂತಾದೆಡೆ ಎಡತಾಕಿ ಬಂದೆವು. ಅಲ್ಲಿನ ಥೀಮ್‌ ಪಾರ್ಕ್‌ಗಳ ಸಾಧಕ–ಬಾಧಕಗಳನ್ನು ತುಲನೆಗೊಳಪಡಿಸಿ ಬೆಣ್ಣೆನಗರಿಯ ಥೀಮ್‌ ಪಾರ್ಕ್‌ ಜನನಕ್ಕೆ ಯೋಜನೆ ರೂಪಿಸಲಾಯಿತು’ ಎಂದು ಮೆಲುಕು ಹಾಕುವರು ರಂಗಕರ್ಮಿ ಬಾ.ಮ.ಬಸವರಾಜಯ್ಯ.

ಕೋಳಿ ಕಾಳಗದ ನೋಟ
ನಶಿಸುತ್ತಿರುವ ಗ್ರಾಮೀಣ ಕ್ರೀಡೆ ಬುಗುರಿ ಆಟದ ನೋಟ
ಟಗರು ಕಾಳಗದ ಕಲಾಕೃತಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.