ADVERTISEMENT

Diwali 2024 | ದೀಪಗಳ ಬೆಳಕು; ಹಾಡುಗಳ ಹೊಳಪು

ಉಮಾ ಅನಂತ್
Published 1 ನವೆಂಬರ್ 2024, 23:30 IST
Last Updated 1 ನವೆಂಬರ್ 2024, 23:30 IST
   
ಬೆಳಕಿನ ಹಬ್ಬದ ಜೊತೆಗೆ ನಾದ ವೈಭವವೂ ಸೇರಿದರೆ ಮನೆಮನ ಉಲ್ಲಾಸಮಯ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮರಾಠಿ ಅಭಂಗ, ಚೀಜು, ಬಂದೀಶ್‌ಗಳು, ಭಕ್ತಿ ಸಂಗೀತ, ಬಾಲಿವುಡ್, ಕನ್ನಡ ಸಿನಿಮಾ ಸಂಗೀತ, ವಾದ್ಯ ಸಂಗೀತ ಎಲ್ಲವೂ ದೀಪಾವಳಿ ಸಂಭ್ರಮವನ್ನೇ ಬಿಂಬಿಸುತ್ತದೆ.

ಬೆಳಕಿನ ಹಬ್ಬ ದೀಪಾವಳಿ ತನ್ನ ಪ್ರಭಾವಳಿ ಬೀರಲಾರಂಭಿಸಿದೆ. ಹಬ್ಬಗಳ ಸಡಗರದಲ್ಲಿ ಜನ ತೇಲಾಡಲಾರಂಭಿಸಿದ್ದಾರೆ. ರಂಗು ರಂಗಿನ ರಂಗೋಲಿ, ಹೂವುಗಳ ಅಲಂಕಾರ, ತಳಿರು ತೋರಣ, ಸಾಲು ಸಾಲು ಹಣತೆಗಳ ದೀಪ, ಮನೆಯೊಳಗೆ ಘಮಘಮಿಸುವ ಸಿಹಿತಿಂಡಿ, ಪಟಾಕಿ, ಎಣ್ಣೆ ಸ್ನಾನ ಇವುಗಳ ಮಧ್ಯೆ ಕಿವಿಗೆ ಇಂಪಾಗುವ, ಮನಸ್ಸಿಗೆ ಹಿತವಾಗುವ, ಹೃದಯಕ್ಕೆ ಹತ್ತಿರವಾಗುವ ಮಧುರಾತಿಮಧುರ ಹಾಡುಗಳೂ ಹಬ್ಬಕ್ಕೆ ಉತ್ತಮ ಸಾಥಿ ನೀಡುತ್ತವೆ.

ದೀಪಾವಳಿ ಕುರಿತು ‘ರಸಾಸ್ವಾದ’ ಬೀರುವ ಹಾಡುಗಳು ಬಂದಿವೆ. ಈ ಹಾಡುಗಳು ಹಬ್ಬದ ಸೊಬಗನ್ನು ವರ್ಣಿಸುತ್ತವೆ, ಅದು ಲಘು ಶಾಸ್ತ್ರೀಯ ಹಾಡೇ ಆಗಿರಲಿ, ಜನಪದ ಹಾಡೇ ಇರಲಿ, ಸಿನಿಮಾ ಸಂಗೀತವೇ ಇರಲಿ, ಅಭಂಗ, ಚೀಜ್, ವಾದ್ಯ ಸಂಗೀತವೇ ಇರಲಿ, ದೀಪಗಳ ವೈಭವವನ್ನು ಸಾರುವುದನ್ನು ಕೇಳಲು ಮನಸ್ಸಿಗೆಷ್ಟು ಆನಂದ, ಕಿವಿಗೆಷ್ಟು ಶ್ರವಣಾನಂದಕರ! ‘ಹಣತೆ ಹಣತೆ ಬೆಳಕಿನಲ್ಲಿ ದೀಪಾವಳಿಯು ಬಂದಿದೆ
ವರುಷವೆಲ್ಲ ಹರುಷ ಚೆಲ್ಲಿ ಶುಭೋದಯವ ಸಾರಿದೆ’

ಈ ಹಾಡಿನಲ್ಲಿ ಬೆಳಕಿನ ಹಬ್ಬದ ಸೌಂದರ್ಯವೇ ಅಡಗಿದೆ.

ADVERTISEMENT

ಬಾಲಿವುಡ್‌ ಸೂಪರ್‌ ಹಿಟ್‌ ಸಿನಿಮಾ ‘ಚಿಚ್ಚೋರ್‘ನಲ್ಲಿ ಖ್ಯಾತ ಗಾಯಕ ಕೆ.ಜೆ. ಯೇಸುದಾಸ್‌ ಅವರು ಹಾಡಿರುವ ‘ಜಬ್ ದೀಪ್ ಜಲೇ ಆನಾ..’ ಹಾಡನ್ನು ಕೇಳಿ, ಆನಂದಿಸಿ, ಆಸ್ವಾದಿಸದೇ ಇರುವ ಸಹೃದಯರೇ ಇಲ್ಲ. ‘ದೀಪ್ ಜಲೇಂಗೆ ದೀಪ್ ದೀಪಾವಳಿ ಆಯಿ ಹೋ’, 1957ರಲ್ಲಿ ಬಿಡುಗಡೆಯಾದ ‘ಪೈಸಾ’ ಚಿತ್ರದ ಈ ಹಾಡು ಬಾಲಿವುಡ್ ಗಾಯಕಿ ಗೀತಾ ದತ್ ಅವರ ಮಧುರ, ಸೌಮ್ಯವಾದ ದನಿಯಲ್ಲಿ ಮೂಡಿಬಂದಿದ್ದು ಬಹಳ ಇಂಪಾಗಿದೆ.

‘ಏಕ್ ವೋ ಭಿ ದೀಪಾವಳಿ ಥಿ’ 1961ರ ಹಿಂದಿ ಸಿನಿಮಾ ‘ನಜ್ರಾನಾ’ ಸೂಪರ್ ಹಿಟ್ ಆಗಿದ್ದೇ ದೀಪಾವಳಿ ಕುರಿತ ಈ ಹಾಡನ್ನು ಮುಖೇಶ್‌ ಹಾಡಿದ ಕಾರಣಕ್ಕಾಗಿ ಎಂಬುದನ್ನು ಸಂಗೀತಪ್ರಿಯರು ಎಂದಿಗೂ ಮರೆಯುವಂತಿಲ್ಲ.

ಇದೇ ರೀತಿ ಕನ್ನಡದಲ್ಲಿ ‘ಮುದ್ದಿನ ಮಾವ’ ಸಿನಿಮಾದ ‘ದೀಪಾವಳಿ, ದೀಪಾವಳಿ ಗೋವಿಂದ ಲೀಲಾವಳಿ...’ ಹಾಡು ಕೂಡ ಎಂದಿಗೂ ಗುನುಗುನಿಸುವಂತಿದೆ. ‘ನಂಜುಂಡಿ’ ಸಿನಿಮಾದ ‘ದೀಪದಿಂದ ದೀಪವ ಹಚ್ಚಬೇಕು ಮಾನವ...’ ಹಾಡಿನಲ್ಲಿ ಹಬ್ಬದ ಸೊಬಗಿನ ಜೊತೆಗೆ ಮಾನವೀಯ ಸಂಬಂಧದ ಸೂಕ್ಷ್ಮ ಸಂವೇದನೆಯೂ ಅಡಕವಾಗಿದೆ.

‘ಆನಂದಾಚಿ ದಿವಾಲಿ, ಘರೀಬೋಲ ವಾ ವನಮಾಲಿ..’ ಬಾಬಜಿ ಆರ್‌. ಕಾನಡೆ.. ಹಾಡಿದ ಅಭಂಗ, ಆಲಿ ಮಾಜ್ಹಾ ಘರೀ ಹಿ ದಿವಾಲಿ..ರಮಾ ರಘುನಂದನ್ ಹಾಡಿದ ಮರಾಠಿ ಅಭಂಗ ದೀಪಾವಳಿ ಮಹಿಮೆಯನ್ನು ಸಾರುತ್ತವೆ.

‘ನಾಡಿನಂದ ಈ ದೀಪಾವಳಿ ಬಂತು; ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ...’ ಸೋರಟ್ ಅಶ್ವಥ್ ಸಾಹಿತ್ಯದ, ಎಂ. ವೆಂಕಟರಾಜು ಸಂಗೀತದ ಈ ಲಘು ಶಾಸ್ತ್ರೀಯ ಗೀತೆಯನ್ನು ಖ್ಯಾತ ಗಾಯಕಿಯರಾದ ಎಸ್. ಜಾನಕಿ ಮತ್ತು ಪಿ. ಸುಶೀಲ ಹಾಡಿದ್ದು, ದೀಪಾವಳಿ ಸಂದರ್ಭದಲ್ಲಿ ಹಬ್ಬದ ಘಮಲನ್ನು ಹೆಚ್ಚಿಸಲು ಸಹಕಾರಿಯಾಗಿದೆ.

‘ಕಲ್ಲಿನ ಕಲ್ಲಿನ ಪಾದ; ಲಕ್ಷ್ಮೀ ಬಂದಳು ನೋಡೆ..., ಗಾಯಕಿ ಕೆ.ಎಸ್‌. ಸುರೇಖಾ ಹಾಡಿರುವ ಈ ಸುಗಮ ಸಂಗೀತ ದೀಪಾವಳಿ ದಿನಗಳಲ್ಲಿ ಲಕ್ಷ್ಮೀ ವೈಭವವನ್ನು ಸಾರಿಹೇಳುತ್ತದೆ. ಇದೇ ಆಲ್ಬಂನಲ್ಲಿ ಲಕ್ಷ್ಮಿಯ ಮೇಲೆ ಇರುವ ಇನ್ನೊಂದು ಹಾಡು ನಂದಿತಾ ಹಾಡಿದ್ದು, ‘ಪಾಲಿಸು ಲಕ್ಷ್ಮಿಯೇ’ ಗಾನ ಮಾಧುರ್ಯ ದೈವೀಭಾವನೆಯನ್ನು ಉಕ್ಕಿಸುವಂತಿದೆ.

‘ದೀಪ ದೀಪ ದೀಪ; ದೇದೀಪ್ಯಮಾನ ದೀಪ, ಬೆಳ್ಳಿಯ ಬೆಳಕನ್ನು ಚೆಲ್ಲುವ ದೀಪ, ಹೊನ್ನಿನ ಕಿರಣವ ಹೊಮ್ಮುವ ದೀಪ...’ ಉಪಾಸನಾ ಮೋಹನ ಸಂಗೀತ ನಿರ್ದೇಶನದಲ್ಲಿ ಲಲಿತಾ ಬೆಳವಾಡಿ ಹಾಡಿದ್ದು, ದೀಪದ ಹಬ್ಬದ ಸಡಗರವನ್ನು ವರ್ಣಿಸಿದೆ. ಇವೆಲ್ಲದರ ಜೊತೆಗೆ ಅಮರವಾದ ಅಭಂಗಗಳು, ಠುಮ್ರಿಗಳು, ನಾಟ್ಯ ಸಂಗೀತ, ಗಜಲ್‌ಗಳು ಮತ್ತು ಬಂದಿಶ್‌ಗಳ ಪ್ರಸ್ತುತಿಯೂ ದೀಪಾವಳಿಯ ಉತ್ಸಾಹವನ್ನು ಬೆಳಗಿಸುತ್ತದೆ.

ಇಷ್ಟೇ ಅಲ್ಲದೆ ಸಂಗೀತ ವಾದ್ಯಗಳಾದ ನಾದಸ್ವರ, ಡೋಲಕ್, ತವಿಲ್, ಶೆಹನಾಯ್ ಕೂಡ ದೀಪಾವಳಿ ಹಬ್ಬದ ದಿನಗಳಲ್ಲೇ ವಿಶೇಷವಾಗಿ ನುಡಿಸುವ, ಮಧುರ ನಾದವನ್ನು ಕೊಡುವ ಮಂಗಳಕರ ವಾದ್ಯಗಳಾಗಿವೆ.

ದೀಪಾವಳಿ ವಿಶ್ವದ ಹಬ್ಬ, ಹಾಡುಗಳ ಹಬ್ಬವೂ ಹೌದು. ಬೆಳಕಿನ ಪ್ರಖರತೆಯ ಮಧ್ಯೆ ಸ್ವರಗಳ ಹೊನಲು ಒಂದು ರೀತಿಯಲ್ಲಿ ಜುಗಲಬಂದಿ ಹಾಡುತ್ತವೆ, ಹಬ್ಬದ ದಿಬ್ಬಣ ಸಾಗಿದಂತೆ ಹಾಡಿನ ಔತಣ ಸಂಗೀತಪ್ರಿಯರ, ಸಹೃದಯರ ಮನಗೆಲ್ಲುತ್ತದೆ, ಮನೆ ಬೆಳಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.