ಕಳೆದ ವರ್ಷ ಸುಮಾರು ಇದೇ ಸಮಯಕ್ಕೆ ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಲ್ಲಿ ಒಂದು ಕುತೂಹಲಕರ ಘಟನೆ ನಡೆಯಿತು. ಮೈಕ್ ಬೇಟ್ ಎನ್ನುವ ಜನಪ್ರತಿನಿಧಿ ತಾನು ಭಾಗವಹಿಸಬೇಕಾಗಿದ್ದ ಅಧಿವೇಶನಕ್ಕೆ ತುಸು ತಡವಾಗಿ ಬಂದಿದ್ದ. ಅಂತರರಾಷ್ಟ್ರೀಯ ವಿಕಾಸ ಇಲಾಖೆಯಲ್ಲಿ ಮಂತ್ರಿಯಾಗಿ ಕೆಲಸ ಮಾಡುವ ಬೇಟ್ ಮಧ್ಯಾಹ್ನ ಮೂರು ಗಂಟೆಗೆ ಶುರುವಾದ ಅಧಿವೇಶನದ ಮೊದಲ ಪ್ರಶ್ನೆಗೆ ಉತ್ತರಿಸಬೇಕಾಗಿದ್ದಾಗ ಸಂಸತ್ ಭವನ ಮುಟ್ಟಿರಲೇ ಇಲ್ಲ. ಹೀಗೆ ಕೆಲ ನಿಮಿಷ ತಡವಾಗಿ ಅಧಿವೇಶನಕ್ಕೆ ಬಂದವನೇ, ತಾನು ಸೌಜನ್ಯದ ಎಲ್ಲೆ ಮೀರಿದ್ದಕ್ಕಾಗಿ ಕ್ಷಮೆ ಕೋರಿ ರಾಜೀನಾಮೆ ಸಲ್ಲಿಸಿ ಅಧಿವೇಶನದಿಂದ ಹೊರನಡೆದ!
ಈತ ಉತ್ತರಿಸಬೇಕಾಗಿದ್ದ ಪ್ರಶ್ನೆಯನ್ನು ಕೇಳಿದ್ದ ವಿರೋಧ ಪಕ್ಷದ ರುತ್ ಲಿಸ್ಟರ್, ಬೇಟ್ ರಾಜೀನಾಮೆ ಕೊಟ್ಟು ಹೊರನಡೆದಾಗ ‘ರಾಜೀನಾಮೆ ಕೊಡಲಿ ಎಂದು ತಾನು ಬಯಸುವ ಆಳುವ ಪಕ್ಷದ ಸಂಸದರ ಪಟ್ಟಿಯಲ್ಲಿ ನೀನು ಅತ್ಯಂತ ಕೊನೆಯವನು, ನೀನ್ಯಾಕೆ ರಾಜೀನಾಮೆ ಕೊಟ್ಟೆ’ ಎಂದಿದ್ದಳು. ಇಷ್ಟು ಸಣ್ಣ ಕಾರಣಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಪ್ರಧಾನಿ ಥೆರೆಸಾ ಮೇ ಈತನ ರಾಜಿನಾಮೆಯನ್ನು ಅಂಗೀಕರಿಸಲಿಲ್ಲ. ರಾಜಕೀಯ ವಲಯಗಳಲ್ಲಿ ಪತ್ರಿಕೆಗಳಲ್ಲಿ ಮಂತ್ರಿಯೊಬ್ಬನ ಇಂತಹ ನಾಟಕೀಯ ನಡೆ ಅಚ್ಚರಿಯನ್ನೂ ಮೆಚ್ಚುಗೆಯನ್ನೂ ಪಡೆಯಿತು.
ತಾವು ನಂಬಿದ ಸಿದ್ಧಾಂತಗಳಿಗೆ ತಮ್ಮಿಂದಲೇ ಭಂಗ ಬಂದಾಗ, ಕಾರಣ ಕ್ಷುಲ್ಲಕ ಎನಿಸಿದರೂ ರಾಜೀನಾಮೆ ಸಲ್ಲಿಸಿದ ಜನಪ್ರತಿನಿಧಿಗಳ ಪರಂಪರೆ ಆಂಗ್ಲ ಸಂಸತ್ತಿನಲ್ಲಿ ಹಿಂದೆ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಅಂತಹ ಉದಾಹರಣೆಗಳು ಕಡಿಮೆ ಎಂದೂ ಹಣ್ಣುತಲೆಯ ಹಿರಿಯ ಆಂಗ್ಲರು ಹೇಳುವುದಿದೆ. ಸಂಸತ್ತಿನಲ್ಲಿ ಯಾರೋ ಒಬ್ಬನಿಗೆ ಇಂತಹ ಸೂಕ್ಷ್ಮ ಎಚ್ಚರ ಇದೆಯಲ್ಲ ಎನ್ನುವುದೇ ಘಟನೆ ನಡೆದು ವಾರಗಳವರೆಗೂ ಇಲ್ಲಿ ಚರ್ಚೆಗೆ ಗ್ರಾಸವಾಯಿತು.
ಇನ್ನು ಅದೇ ಸಂಸತ್ತಿನಲ್ಲಿ ಕಳೆದ ಎರಡೂವರೆ ವರ್ಷಗಳಿಂದ ನಿತ್ಯವೂ ಬಿಸಿ ಹಚ್ಚುವ ವಿಚಾರವೊಂದಿದೆ. ಇಲ್ಲಿನ ರೇಡಿಯೋಗಳು, ದೂರದರ್ಶನಗಳು ಮೂವತ್ತು ತಿಂಗಳಿಂದ ನಿತ್ಯವೂ ವರದಿ ಮಾಡುತ್ತಿರುವ ಚರ್ಚಿಸುತ್ತಿರುವ ವಿಷಯವೂ ಹೌದದು. ಬ್ರಿಟನ್ನಿನಲ್ಲಿ ಪ್ರಾಥಮಿಕ ಶಾಲೆಯ ಪುಟಾಣಿಗಳು ಕೂಡ ಹೀಗಾಗಬೇಕಿತ್ತು, ಹಾಗಾಗಬಾರದಿತ್ತು ಎನ್ನುವ ವಿಖ್ಯಾತ ಕುಖ್ಯಾತ ಪ್ರಕರಣ. ಬ್ರೆಕ್ಸಿಟ್! ಬ್ರೆಕ್ಸಿಟ್‌ಗೆ ಚಾಲನೆ ಸಿಕ್ಕಿದ್ದು ಬ್ರಿಟನ್ನಿನ ಹಿಂದಿನ ಪ್ರಧಾನಿ ಡೇವಿಡ್ ಕ್ಯಾಮರೂನರ 2015 ರ ಚುನಾವಣಾ ಪ್ರಣಾಳಿಕೆಯಿಂದಲೇ.
1973ರಲ್ಲಿ ಯುರೋಪಿಯನ್ ಒಕ್ಕೂಟದೊಳಗೆ ಸೇರಿಕೊಂಡ ಬ್ರಿಟನ್‌ನ ನಿರ್ಧಾರದ ವಿಮರ್ಶೆ ಕಚೇರಿಗಳಲ್ಲಿ, ಪಬ್ಬುಗಳಲ್ಲಿ ದಶಕಗಳಿಂದ ಸಾಮಾನ್ಯವಾಗಿತ್ತು. ಇದೊಂದು ಚುನಾವಣಾ ವಿಷಯ ಎಂದು ತಿಳಿದವರು ಬ್ರಿಟನ್ನನ್ನು ಯುರೋಪಿನ ಒಕ್ಕೂಟದಿಂದ ಹೊರತರಬೇಕು ಎನ್ನುತ್ತಾ ರಾಷ್ಟ್ರೀಯತೆ, ಸ್ಥಳೀಯತೆಗಳ ಚರ್ಚೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಜಕೀಯ ಪಕ್ಷಗಳನ್ನೂ ಸ್ಥಾಪನೆ ಮಾಡಿದ್ದರು. ಮತ್ತೆ ಅಂತಹ ಪಕ್ಷಗಳು ಕಾಲಕ್ರಮೇಣ ಜನ ಬೆಂಬಲವನ್ನೂ ಪಡೆದು ಸಂಸತ್ತಿನಲ್ಲಿ ಕೆಲವು ಸ್ಥಾನಗಳನ್ನು ಪಡೆಯುವಷ್ಟು ಬಲವಾದವು.
ಬ್ರಿಟಿಷ್ ಸಾರ್ವಭೌಮತ್ವದ ಕಲ್ಪನೆ, ಯುರೋಪಿನ ಒಕ್ಕೂಟದೊಳಗಿಂದ ಬ್ರಿಟನ್ ಒಳಬರುವ ವಲಸಿಗರಿಗೆ ಮುಕ್ತಪ್ರವೇಶದ ಉದಾರ ನೀತಿಗಳ ಬಗೆಗಿನ ಅಸಮಾಧಾನ ದೃಢಗೊಂಡು ಒಂದು ಪರ್ಯಾಯ ಚಿಂತನೆಯಾಗಿ ಬೆಳೆಯಿತು. ಹೆಚ್ಚು ಹೆಚ್ಚು ವ್ಯಾಪಕವಾಗತೊಡಗಿದ್ದ ಇಂತಹ ಮೂಲ ಪ್ರಶ್ನೆಗಳಿಗೆ ಪ್ರಜಾತಾಂತ್ರಿಕ ನಿರ್ಣಯವನ್ನು ಕೊಡುವ ನಿಟ್ಟಿನಲ್ಲಿ 2015 ರ ಚುನಾವಣೆಯಲ್ಲಿ ಕ್ಯಾಮರೂನರ ಕನ್ಸರ್ವೇಟಿವ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಬ್ರಿಟನ್ ಯುರೋಪಿನ ಒಕ್ಕೂಟದ ಒಳಗೆ ಇರಬೇಕೋ ಬೇಡವೋ ಎನ್ನುವ ಮತನಿರ್ಣಯ ಆಯೋಜಿಸುವುದಾಗಿ ಹೇಳಿತು.
ಅಲ್ಲಿಯ ತನಕವೂ ಬ್ರಿಟನ್ನಿನ ರಾಜಕೀಯ ವೇದಿಕೆಗಳಲ್ಲಿ ಬಂದು ಹೋಗುತ್ತಿದ್ದ ಚರ್ಚೆ ಇದೀಗ ರಾಷ್ಟ್ರೀಯ ಚುನಾವಣಾ ಪ್ರಚಾರದ ಭಾಗವೂ ಆಯಿತು. 2015ರಲ್ಲಿ ಕನ್ಸರ್ವೇಟಿವ್ ಪಕ್ಷ ಮರಳಿ ಗೆದ್ದು ಬಂತು. ಹಿಂದಿನ ಕಾಲಾವಧಿಯಲ್ಲೂ ಪ್ರಧಾನಿಯಾಗಿದ್ದ ಡೇವಿಡ್ ಕ್ಯಾಮರೂನ್ ಮತ್ತೆ ಪ್ರಧಾನಿ ಆದರು. ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ, ಭರವಸೆ ಕೊಟ್ಟಂತೆ ‘ಬ್ರಿಟನ್ ಎಕ್ಸಿಟ್’ ಅಥವಾ ಬ್ರೆಕ್ಸಿಟ್ ಮತನಿರ್ಣಯವನ್ನು ಆಯೋಜಿಸಿದರು. ಆರು ಕೋಟಿ ಜನ ಸಂಖ್ಯೆ ಇರುವ ದೇಶದಲ್ಲಿ ಸುಮಾರು ಮೂರುವರೆ ಕೋಟಿ ಜನರು ಮತ ಚಲಾಯಿಸಿದರು. ಅವರಲ್ಲಿ ಒಂದು ಮುಕ್ಕಾಲು ಕೋಟಿ ಜನರು ಬ್ರಿಟನ್ ಯುರೋಪ್ ಒಕ್ಕೂಟವನ್ನು ಬಿಡಬೇಕೆಂದು ಮತ ಚಲಾಯಿಸಿ, ಬ್ರಿಟಿಷ್ ನಿರ್ಗಮನಕ್ಕೆ ಬಹುಮತ ತಂದುಕೊಟ್ಟರು. ಶೇ 52ರಷ್ಟು ಜನರು ನಿರ್ಗಮನಕ್ಕೂ ಶೇ 48ರಷ್ಟು ಜನರು ಒಕ್ಕೂಟದೊಳಗೆ ಮುಂದುವರಿಯುವುದಕ್ಕೂ ವೋಟ್ ಮಾಡಿದರು.
ಒಳಗೋ ಹೊರಗೋ ಅನ್ನುವವರ ಮಧ್ಯದ ಅಂತರ ಕಡಿಮೆಯೇ ಆದರೂ ಪ್ರಜಾತಂತ್ರದ ಮೌಲ್ಯಗಳನ್ನು ಬದ್ಧತೆಯಿಂದ ಆಚರಿಸುವ ಖ್ಯಾತಿಯ ಬ್ರಿಟನ್, 43 ವರ್ಷಗಳ ವ್ಯಾಪಾರ, ವಾಣಿಜ್ಯ ಸಂಬಂಧಗಳನ್ನು ಬದಲಿಸಬಲ್ಲ ಒಂದು ನಿರ್ಗಮನದ ತಯಾರಿ ಶುರು ಮಾಡಬೇಕಾಯಿತು. ವೈಯಕ್ತಿಕವಾಗಿ ಯೂರೋಪಿನ ಒಕ್ಕೂಟದ ಒಳಗೇ ಇರಬೇಕೆಂಬ ನಿಲುವಿನ ಕ್ಯಾಮರೂನ್, ಜನರ ತೀರ್ಪನ್ನು ಗೌರವಿಸಿ ತಕ್ಷಣ ಪ್ರಧಾನಿ ಪಟ್ಟದಿಂದ ಕೆಳಗಿಳಿದರು. ಕ್ಯಾಮರೂನ್‌ರಿಗೆ ಅಧಿಕಾರ ಬಿಡು ಎಂದು ದುಂಬಾಲು ಬಿದ್ದ ವಿರೋಧ ಪಕ್ಷದವರಿರಲಿಲ್ಲ ಅಥವಾ ಪಕ್ಷದೊಳಗೇ ಅವಿಶ್ವಾಸ ತೋರಿದವರಿಲ್ಲ. ಕ್ಯಾಮರೂನ್, ಮುಂದೆ ಬ್ರೆಕ್ಸಿಟ್ ಪ್ರಕಿಯೆ ನಿಭಾಯಿಸುವಲ್ಲಿ ಅಳುಕಿ ಸ್ಥಾನ ಬಿಟ್ಟರೋ ಅಥವಾ ಇದು ಪ್ರಜಾಸತ್ತಾತ್ಮಕ ಸನ್ನಡತೆಯೋ ಎನ್ನುವ ಸಂಶಯ ಮೂಡಿದರೂ ಪ್ರಧಾನಿ ಪಟ್ಟ
ದಂತಹ ಅಧಿಕಾರವನ್ನು ಇಂತಹ ಕಾರಣಗಳಿಗೆ ತಿರಸ್ಕರಿಸುವ ಹಾಗೂ ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ನಾಯಕರಿದ್ದಾರೆ ಎನ್ನುವ ವಾಸ್ತವ ಬಿಡಿ, ಕಲ್ಪನೆಯೇ ಅಪರೂಪವಾದದ್ದು!
ಚಾರಿತ್ರಿಕ ಸೋಲು– ಐತಿಹಾಸಿಕ ಜಯ
2016ರ ಜುಲೈ ತಿಂಗಳಲ್ಲಿ ಪ್ರಧಾನಿಯಾದ ಥೆರೆಸಾ ಮೇ ಅವರ ಪ್ರತಿದಿನವೂ ಬ್ರೆಕ್ಸಿಟ್ ಅನುಷ್ಠಾನಗೊಳ್ಳುವ ನಿಮಿತ್ತದ ಸವಾಲುಗಳು, ಅನಿಶ್ಚಿತತೆಗಳಿಂದ ತುಂಬಿವೆ. ಯುರೋಪಿನ ಒಕ್ಕೂಟದ ಜೊತೆ ಹಲವು ತಿಂಗಳುಗಳ ವಾದ– ವಿವಾದಗಳ ನಂತರ ಈ ವರ್ಷದ ಜನವರಿಯಲ್ಲಿ ಬ್ರೆಕ್ಸಿಟ್ ಒಪ್ಪಂದದ ಕರಡನ್ನು ಥೆರೆಸಾ ಮೇ ಸಿದ್ಧಪಡಿಸಿದ್ದರು. ಅಂದರೆ ಬ್ರಿಟನ್ ಯುರೋಪಿನ ಒಕ್ಕೂಟವನ್ನು ಹೇಗೆ ಬಿಡಬೇಕು, ಈಗಿರುವ ಯಾವ ಕ್ರಮಗಳು ಕಾನೂನುಗಳು ಉಳಿಯುತ್ತವೆ ಯಾವವು ಬದಲಾಗುತ್ತವೆ ಎನ್ನುವ ಕುರಿತಾದ ಮೇಲ್ಮಟ್ಟದ ಒಪ್ಪಂದ ಅದು.
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಕೆಲ ಹಿರಿಯರನ್ನು ಸೇರಿಸಿಕೊಂಡು ಸೂಚಿತವಾದ, ಯುರೋಪಿನ ನಾಯಕರ ಜೊತೆಗೆ ಚರ್ಚೆಗಳ ನಂತರ ರೂಪಿತವಾದ ಬ್ರೆಕ್ಸಿಟ್ ಒಪ್ಪಂದ ಎರಡೂ ಕಡೆಯವರ ಒಪ್ಪಿಗೆ ಪಡೆದು ಮುಂದಿನ ಹಂತವಾಗಿ ಲಂಡನ್‌ನ ಸಂಸತ್ತಿನಲ್ಲಿ ಮತಕ್ಕೆ ಒಳಪಟ್ಟಿತು. ಬಹುಮತ ಇರುವ ಆಡಳಿತ ಪಕ್ಷ ಹಾಗೂ ಮತ್ತೆ ಅಧಿಕಾರಕ್ಕೆ ಬರುವ ಹುನ್ನಾರದ ವಿರೋಧ ಪಕ್ಷಗಳ ಸದಸ್ಯರು ಈ ಕರಡು ಒಪ್ಪಂದಕ್ಕೆ ಮತ ಚಲಾಯಿಸಿದಾಗ ವಿರೋಧದ ಮತವೇ ಹೆಚ್ಚು ಬಂದಿತು.
ಪ್ರಧಾನಿ ಮೇ ಅವರ ಪಕ್ಷದ 118 ಸಂಸದರೇ ಒಪ್ಪಂದದ ವಿರುದ್ಧ ಮತ ಚಲಾಯಿಸಿದರು. ಸರಿಯಾಗಿ ಚರ್ಚಿಸದೆ ರೂಪುಗೊಂಡ, ಮತ್ತೆ ಬಹುಪಾಲು ಜನರು ಬಯಸಿದ ರೀತಿಯ ನಿರ್ಗಮನ ನೀಡಲಾರದ ಕರಡು ಇದು ಎನ್ನುವ ಅಭಿಪ್ರಾಯದ ಆಡಳಿತ ಪಕ್ಷದ ಸಂಸದರು ಮೇ ಪ್ರತಿಪಾದಿಸಿದ ಒಪ್ಪಂದದ ವಿರುದ್ಧ ಮತ ಚಲಾಯಿಸಿದರು. ಆಡಳಿತ ಪಕ್ಷಕ್ಕೆ ಆ ಪಕ್ಷದ ಸದಸ್ಯರೇ ತಂದಿತ್ತ ಈ ಸೋಲನ್ನು ಬ್ರಿಟಿಷ್ ಪಾರ್ಲಿಮೆಂಟ್ ದಾಖಲಿಸಿದ ಬಹುದೊಡ್ಡ ಚಾರಿತ್ರಿಕ ಸೋಲು, ಆದರೆ ಪ್ರಜಾಪ್ರಭುತ್ವ ಕಂಡ ಐತಿಹಾಸಿಕ ಜಯ ಎಂದು ಪತ್ರಿಕೆಗಳು ಬಣ್ಣಿಸಿದವು. ಮೇ ಅವರ ಕಲ್ಪನೆಯ ಒಪ್ಪಂದಕ್ಕೆ ಸೋಲಾಗಿ ಆ ಒಪ್ಪಂದದ ವಿವರಗಳ ಕುರಿತು ಮತ್ತಷ್ಟು ವಿಮರ್ಶೆ, ಚರ್ಚೆ ನಡೆಯುವುದು ಅನಿವಾರ್ಯವಾಯಿತು.
ಬ್ರೆಕ್ಸಿಟ್‌ನ ಕರಡು ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ ಆಡಳಿತ ಪಕ್ಷದ ಜನಪ್ರತಿನಿಧಿಗಳು ತಮ್ಮ ಪ್ರಧಾನಿಯ ನಿಲುವಿನ ವಿರುದ್ಧವೇ ಮತ ಚಲಾಯಿಸುವುದು ಮತ್ತೆ ಅಂತಹ ನಡೆಗೆ ಗೌರವಪೂರ್ಣ ಸ್ವೀಕೃತಿ ಸಿಗುವುದು ಬ್ರಿಟನ್ನಿನ ಪ್ರಜಾಪ್ರಭುತ್ವಕ್ಕೊಂದು ವಿಶೇಷ ಚಾರಿತ್ಯ್ರವನ್ನು ನೀಡಿತು. ಮೇ ಬೆಂಬಲಿಸಿದ ಒಪ್ಪಂದಕ್ಕೆ ಪರಾಜಯವಾದ ಮರುದಿನವೇ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಸಂಸತ್ತಿನಲ್ಲಿ ಸರಿಯಾಗಿ ಚರ್ಚಿಸದೆ, ಎಲ್ಲರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಾಡಿಕೊಂಡ ಬ್ರೆಕ್ಸಿಟ್ ಒಪ್ಪಂದಕ್ಕೆ ಸೋಲುಣಿಸಿದ ಆಡಳಿತ ಪಕ್ಷದ ಶಾಸಕರು ಪಕ್ಷದ ನಾಯಕತ್ವದ ಪ್ರಶ್ನೆ ಬಂದಾಗ ಥೆರೆಸಾ ಮೇಯೇ ತಮ್ಮ ನಾಯಕಿಯೆಂದು ವಿಶ್ವಾಸ ವ್ಯಕ್ತಪಡಿಸಿ ಅವಿಶ್ವಾಸ ಗೊತ್ತುವಳಿಯ ಮತದಲ್ಲಿ ಗೆಲ್ಲಿಸಿದರು.
ಬ್ರೆಕ್ಸಿಟ್ ಒಪ್ಪಂದದ ವಿಚಾರದಲ್ಲಿ ಸೋಲಿಸಿದವರೇ ಪಕ್ಷದ ನಾಯಕತ್ವದ ಪರೀಕ್ಷೆಯಲ್ಲಿ ಸಮರ್ಥನೆಯನ್ನೂ ನೀಡಿದರು. ದೇಶದ ಭವಿಷ್ಯದ ಬಗೆಗಿನ ವೈಚಾರಿಕ ಭಿನ್ನಾಭಿಪ್ರಾಯಗಳು ಹಾಗೂ ಪಕ್ಷ ನಿಷ್ಠೆಯ ನಿಲುವು ಎರಡೂ ಜೊತೆ ಜೊತೆಗೆ ಇರುವುದು ಸಾಧ್ಯ ಎಂದೂ ತೋರಿಸಿದರು. ಬಹುಜನ ಬಯಸಿದ ಬ್ರೆಕ್ಸಿಟ್ ಹೀಗಿರಬಾರದು ಎನ್ನುವ ಸಂಸದರು, ಸಂಸತ್ತಿನಲ್ಲಿ ಸರಿಯಾಗಿ ಸಮಾಲೋಚನೆಗೆ, ಚರ್ಚೆಗೆ ಒಳಪಡದೆ ತಮ್ಮ ನಾಯಕಿ ತೀರ್ಮಾನ ಕೈಗೊಂಡರು ಎನ್ನುವ ಅಸಮಾಧಾನಿಗಳು, ಇದೇ ಸಂದರ್ಭವನ್ನು ಬಳಸಿ ಹೇಗಾದರೂ ಮಾಡಿ ಮತ್ತೆ ಚುನಾವಣೆಯಾಗಿ ತಾನು ಅಧಿಕಾರಕ್ಕೆ ಬರಬೇಕು ಎನ್ನುವ ಆಕಾಂಕ್ಷೆಯ ಲೇಬರ್ ಪಕ್ಷ, ಇವೆಲ್ಲವೂ ಸೇರಿ ಸಂಕೀರ್ಣವಾದ ಬ್ರೆಕ್ಸಿಟ್‌ನ ಮುಂದಿನ ಹಾದಿಯ ಅಡೆತಡೆಗಳನ್ನು ಹೆಚ್ಚಿಸಿವೆ. ದಿನವೂ ಪ್ರತಿಹಂತದಲ್ಲೂ ನೂತನ ಸವಾಲು ಎದುರಿಸುತ್ತಿರುವ ಬ್ರೆಕ್ಸಿಟ್ ಪ್ರಕರಣ ದೇಶದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಿಗೆ ಅನಿಶ್ಚಿತ ಹಾಗೂ ಅನಿರ್ದಿಷ್ಟ ಆಯಾಮಗಳನ್ನು ನೀಡಿದೆ.
ಸಂಸತ್ತಿನಲ್ಲಿ ಸೋತ ಬ್ರೆಕ್ಸಿಟ್ ಒಪ್ಪಂದದ ಮೊದಲ ಆವೃತ್ತಿ ಇದೀಗ ಮರುವಿಮರ್ಶೆಗೆ ಒಳಗಾಗಿ ತುಸು ಬದಲಾವಣೆಗೊಂಡು ಇನ್ನೊಮ್ಮೆ ಸಂಸತ್ತಿನ ಸದಸ್ಯರ ಮತ ಆಯ್ಕೆಯಲ್ಲಿ ಬಹುಮತ ಗಳಿಸಿದೆ. ಆದರೆ ಬ್ರಿಟನ್ನಿನ ಸಂಸತ್ತಿನಲ್ಲಿ ಬದಲಾವಣೆ ಕಂಡು ಅನುಮೋದನೆ ಪಡೆದ ಪರಿಷ್ಕೃತ ಒಪ್ಪಂದ ಯುರೋಪಿನ ಒಕ್ಕೂಟಕ್ಕೆ ಒಪ್ಪಿತವಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಬ್ರಿಟನ್ ಹಾಗೂ ಯುರೋಪಿನ ಹಳೆಯ ಇತಿಹಾಸ, ಇತ್ತೀಚಿನ ವ್ಯಾಪಾರ ಸಂಬಂಧಗಳು ಮತ್ತೆ ಈ ಪ್ರಕ್ರಿಯೆ ಪ್ರಜಾತಾಂತ್ರಿಕ ವ್ಯವಸ್ಥೆಯ ಕಟ್ಟೆಚ್ಚರದಲ್ಲಿ ಮುನ್ನಡೆಯುತ್ತಿರುವುದು ಎಲ್ಲವೂ ಸೇರಿ ಬ್ರೆಕ್ಸಿಟ್ ಎನ್ನುವ ವಿಚ್ಛೇದನ ವಿಧಿಯನ್ನು ಜಟಿಲ ಹಾಗೂ ಸಂಕೀರ್ಣಗೊಳಿಸಿವೆ. ಪ್ರಕ್ಷುಬ್ಧತೆಯನ್ನೂ ತಳಮಳವನ್ನೂ ಹುಟ್ಟಿಸಿರುವ ಬ್ರೆಕ್ಸಿಟ್ ಮುಂದಿನ ಹಾದಿ ದುರ್ಗಮವೇ ಆಗಿದ್ದರೂ ಅಭದ್ರವೇ ಅನಿಸಿದರೂ ಪ್ರಜಾತಂತ್ರ ವ್ಯವಸ್ಥೆ ಮಾತ್ರ ಇಲ್ಲಿ ಸುಗಮವೂ ಸುಭದ್ರವೂ ಆಗಿ ನಿಂತಿದೆ. ಇಂಥ ಘಟನೆಗಳೇ ಬ್ರಿಟಿಷ್ ಸಂಸತ್ತಿನ ಚರಿತ್ರೆಗೆ ಹೊಸ ಪುಟಗಳಾಗಿ ಸೇರಿಕೊಳ್ಳುತ್ತಿವೆ.
ಪಂಚತಂತ್ರವಾದ ಪ್ರಜಾತಂತ್ರ
ಪುರಾತನ ಭಾರತದಲ್ಲಿ ರಚಿಸಲ್ಪಟ್ಟ ಜ್ಞಾನವನ್ನೂ ನೀತಿಯನ್ನೂ ಮೌಲ್ಯಗಳನ್ನೂ ಬೋಧಿಸುವ ಪಂಚತಂತ್ರದ ಕತೆಗಳನ್ನು ನಾವೆಲ್ಲಾ ಓದಿದ್ದೇವೆ. ಅಧಿಕಾರ ಬಯಸುವವರಿಗೂ ಆಡಳಿತ ಮಾಡುವವರಿಗೂ ಸಾಮಾನ್ಯ ಬದುಕನ್ನು ನಡೆಸುವವರಿಗೂ ಎಲ್ಲರಿಗೂ ಮನಮುಟ್ಟುವಂತೆ ವ್ಯಾವಹಾರಿಕ ಜಾಣ್ಮೆ, ನಡತೆಗಳನ್ನು ಸರಳವಾಗಿ ತಿಳಿಸಬಲ್ಲ ಶಕ್ತಿ ಮತ್ತು ಕೀರ್ತಿ ಪಂಚತಂತ್ರ ಕತೆಗಳದ್ದು. ಧೂರ್ತ ಜೀವಗಳು ಸದ್ಗುಣಿ ಆತ್ಮಗಳು, ಸ್ವಾರ್ಥಿಗಳು ಪರೋಪಕಾರಿಗಳು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು ಎಲ್ಲವೂ ಪಾತ್ರವಾಗಿ ವಿವೇಕವನ್ನು ಬೆಳಗಿಸುವುದು, ಪಾಠ ಹೇಳುವುದು, ಬದುಕಿನ ಮೌಲ್ಯದ ಜಾಗರೂಕತೆಯನ್ನು ಹೆಚ್ಚಿಸುವುದು ಪಂಚತಂತ್ರದ ಜೀವಾಳ. ಪ್ರಜಾತಂತ್ರದ ಕತೆಗಳೇ ಸದ್ಯಕ್ಕೆ ಬ್ರಿಟನ್ನಿನಲ್ಲಿ ಪಂಚತಂತ್ರದ ನೀತಿಗಳು... ಎಚ್ಚರಗಳು; ಪಕ್ಷಗಳು ಸೋತರೂ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಗುವ, ಭವಿಷ್ಯ ಅತಂತ್ರ ಎನಿಸಿದರೂ ಪ್ರಜಾತಾಂತ್ರಿಕ ವ್ಯವಸ್ಥೆ ಸ್ಥಿರವಾಗಿರುವ ಕತೆಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.