ADVERTISEMENT

ಹುಟ್ಟಿನೊಂದಿಗೇ ಹುಟ್ಟಿದೆ ಬೇಕೆಂಬ ಬಯಕೆ

ರಘು ವಿ
Published 20 ಸೆಪ್ಟೆಂಬರ್ 2019, 19:30 IST
Last Updated 20 ಸೆಪ್ಟೆಂಬರ್ 2019, 19:30 IST
ಬುದ್ದ
ಬುದ್ದ   

ಮನುಷ್ಯನ ಹುಟ್ಟಿನೊಂದಿಗೇ ಹುಟ್ಟಿದೆ ಬೇಕೆಂಬ ಬಯಕೆ. ತೊಟ್ಟಿಲ ಆಟಿಕೆಯಿಂದ ಆರಂಭಿಸಿ ಜೀವನದ ಪ್ರತಿಯೊಂದು ಹಂತದಲ್ಲೂ ‘ಅದು ಬೇಕು ಇದು ಬೇಕು’ ಎಂಬ ರಚ್ಚೆಯ ದನಿ ಹರಡಿದೆ. ಬಡವನಿಗೂ ಬೇಕು, ಸಿರಿವಂತನಿಗೂ ಬೇಕು; ವಿದ್ಯಾವಂತನಿಗೂ ಬೇಕು, ಅವಿದ್ಯಾವಂತನಿಗೂ ಬೇಕು. ಕಡೆಗೆ ಬೈರಾಗಿಗೂ ಬೇಕು.

ಬೈರಾಗಿಯೊಬ್ಬ ಚಕ್ರವರ್ತಿಯಲ್ಲಿ ತನಗೊಂದು ಪರ್ಣಕುಟಿಯನ್ನು ಕಟ್ಟಿಸಿಕೊಡೆಂದು ಬೇಡಲು ಹೋದ. ಅರಮನೆಗೆ ಬಂದಾಗ ಚಕ್ರವರ್ತಿ ಪ್ರಾರ್ಥನೆಗೆ ಕುಳಿತಿರುವುದು ತಿಳಿಯಿತು. ಹೊರಗೆ ಕಾದು ಕುಳಿತ. ಚಕ್ರವರ್ತಿಯ ಪ್ರಾರ್ಥನೆ ಕಿವಿಗೆ ಬಿತ್ತು. ‘ಹೇ ದೇವ! ನನ್ನ ರಾಜ್ಯವನ್ನು ವಿಸ್ತರಿಸಿಕೊಡು, ನನ್ನ ಬೊಕ್ಕಸದ ಹಣ ಹೆಚ್ಚುವಂತೆ ಮಾಡು’ ಎಂದು ಚಕ್ರವರ್ತಿ ಬೇಡುತ್ತಿದ್ದ. ಬೈರಾಗಿ ಎದ್ದು ಹೊರಟುಬಿಟ್ಟ. ಬಾಗಿಲ ಬಳಿ ಅವನನ್ನು ತಡೆದ ಮಂತ್ರಿ, ‘ಏಕೆ ಚಕ್ರವರ್ತಿಗಳನ್ನು ಭೇಟಿಯಾಗದೆ ಹೊರಟೆ?’ ಎಂದು ಕೇಳಿದಾಗ ಬೈರಾಗಿ ನಗುತ್ತ ಉತ್ತರಿಸಿದ: ‘ಭಿಕ್ಷುಕನ ಬಳಿಯೇ ಭಿಕ್ಷೆ ಬೇಡುವುದೇ?!’

‘ಸಾಕು’ ಎನ್ನುವವರೇ ಕಡಿಮೆ. ‘ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ, ಅಷ್ಟು ದೊರಕಿದರೆ ಮತ್ತಿಷ್ಟರಾಸೆ’ ಎಂದರು ಪುರಂದರದಾಸರು. ಆಸೆಯೇ ದುಃಖಕ್ಕೆ ಮೂಲ ಎಂದ ಗೌತಮ ಬುದ್ಧ. ಸಾಕು ಎಂದವನೇ ಯೋಗಿ, ಬೇಕು ಎಂದವನೇ ಭೋಗಿ ಎನ್ನುತ್ತಾರೆ ಹಿರಿಯರು. ಹಾಗಾದರೆ ಹಣ ಗಳಿಸುವುದು ತಪ್ಪೇ? ಖಂಡಿತ ತಪ್ಪಲ್ಲ. ಆದರೆ ಎಷ್ಟು ಗಳಿಸಬೇಕು ಎಂಬ ಅಳತೆ ತಿಳಿದುಕೊಳ್ಳದಿರುವುದು ತಪ್ಪು. ತನಗೆ ಅವಶ್ಯವಿದ್ದಷ್ಟು ಮಾತ್ರ ಗಳಿಸಬೇಕು. ಅವಶ್ಯವೆಂದರೆ ಎಷ್ಟು? ಇದೊಂದು ಮಹಾಪ್ರಶ್ನೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಆವಶ್ಯಕತೆಯೂ ಬೇರೆ ಬೇರೆ. ಜೊತೆಗೆ ಅದು ಹಿಗ್ಗಿಸುತ್ತ ಹೋಗುತ್ತದೆ. ನಮ್ಮ ನಿತ್ಯಚರಿತಕ್ಕೆ ಬೇಕಾಗುವಷ್ಟು, ಆಪದ್ಧನ ಒಂದಿಷ್ಟು; ಇವೆಲ್ಲಕ್ಕೂ ಮತ್ತೆ ಮಿತಿ ಇರಬೇಕು. ಜೊತೆಗೆ ಇದ್ದುದರಲ್ಲಿ ತೃಪ್ತಿ ಕಾಣುವ ಮನೋಭಾವವೂ ಇರಬೇಕು.

ADVERTISEMENT

ಗಳಿಸುವುದು ತಪ್ಪಲ್ಲ, ಉಳಿಸುವುದೂ ತಪ್ಪಲ್ಲ. ಆದರೆ ಉಳಿಸಿ ಕೊಳೆಸುವುದು ಅಕ್ಷಮ್ಯ. ಆವಶ್ಯಕತೆಯನ್ನು ಮೀರಿದ ಆದಾಯ ಬಂದಾಗ, ಅಥವಾ ಖರ್ಚಿಗೆ ಕಳೆದು ಉಳಿದದ್ದು ಸದ್ವಿನಿಯೋಗ ಆಗಬೇಕು. ಅದನ್ನು ಸಮಾಜದ ಕ್ಷೇಮಕರ ಕಾರ್ಯಕ್ಕೆ ಬಳಸಬೇಕು. ಅನ್ನಸತ್ರಗಳು ಮರೆಯಾಗಿ ಸಾಲುಮರಗಳು ಉರುವಲಾಗಿದ್ದರ ಪರಿಣಾಮ ಇಂದಿನ ಜನಾಂಗವನ್ನು ಬಡಬಾಗ್ನಿ ಮತ್ತು ಕಡುಸೂರ್ಯ ಸುಡುತ್ತಿದ್ದಾರೆ. ಇಂದು ಪ್ರಪಂಚದ ಅರ್ಧದಷ್ಟು ಜನರು ಅಜೀರ್ಣದಿಂದ ಬಳಲುತ್ತಿದ್ದರೆ ಇನ್ನರ್ಧ ಜನ ಹಸಿವಿನಿಂದ ಪ್ರಾಣ ಬಿಡುತ್ತಿದ್ದಾರೆ. ಇಥಿಯೋಪಿಯಾದಲ್ಲಿ ಜನರು ಹುಡಿಮಣ್ಣು ತಿಂದು ಮುಷ್ಟಿಯಲ್ಲಿ ಜೀವ ಹಿಡಿದು ಕುಳಿತಿದ್ದರೆ ಮತ್ತೆಲ್ಲೋ ಅತಿಯಾಗಿ ಉಂಡಿದ್ದರ ಫಲವಾದ ಬೊಜ್ಜು ಕರಗಿಸಲು ಜನ ಒದ್ದಾಡುತ್ತಿದ್ದಾರೆ. ಈ ವಿಪರ್ಯಾಸ ಏಕೆಂದರೆ, ಹಂಚಿಕೊಳ್ಳುವ ಬುದ್ಧಿ ಇಲ್ಲದಿರುವುದು. ಬದುಕಿಗೆ ತ್ಯಾಗದ ಲೇಪ ಮಾಡಲು ಪರರ ಹಿತದಲ್ಲಿ ಸಾರ್ಥಕ್ಯವನ್ನು ಕಾಣುವ ಮನಸ್ಸು ಮಾಡಬೇಕು. ಈ ಚಿಂತನೆಯಲ್ಲಿಯೇ ಅಲ್ಲವೆ ಸಿದ್ಧಾರ್ಥನಲ್ಲಿ ಅಡಗಿದ್ದ ಬುದ್ಧ ನಿದ್ದೆಯಿಂದೆದ್ದದ್ದು? ಗದ್ದುಗೆಯ ಇಳಿದ ಬುದ್ಧ ಜಗವನ್ನೇ ಗೆದ್ದ.

ಉಪನಿಷತ್ತು ಹೇಳಿದೆ: ‘ತ್ಯಾಗೇನೈಕೇ ಅಮೃತತ್ವಮಾನಷುಃ’. ಇತರಿಗಾಗಿ ಬದುಕುವುದರಿಂದ ನಾವು ಅಮೃತತ್ವವನ್ನು ಪಡೆಯುತ್ತೇವೆ ಎಂಬುದು ಇದರ ಭಾವಾರ್ಥ. ನಮ್ಮ ಬೇಕುಗಳನ್ನು ಮಿತಿಗೊಳಿಸಿದಾಗ, ನಮ್ಮ ವೈಯಕ್ತಿಕ ಆವಶ್ಯಕತೆಗಳನ್ನು ಮಿತಗೊಳಿಸಿಕೊಂಡಾಗ, ನಾವು ಗಳಿಸಿ ಉಳಿಸಿದ ಹಣ ಸದ್ವಿನಿಯೋಗವಾದಾಗ ಸಾಕು-ಬೇಕುಗಳು ಸಮಾನಸ್ಥಲ ಮುಟ್ಟುತ್ತವೆ. ಹಾಗಾದಾಗ ಮಾತ್ರ ನಾವು ಸಮಾನತೆ ಸಾಧಿಸಬಹುದು ಮತ್ತು ಆಗ ಮಾತ್ರ ನಾವು ಮಾನವ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ನೆಲೆಸುತ್ತದೆ. ಉಣ್ಣುವ ಮುನ್ನ, ಉಡುವ ಮುನ್ನ, ಮೆರೆವ ಮುನ್ನ ಮರೆಯದಿರೋಣ ನೆರೆಯವರನ್ನ, ಇಲ್ಲದಿರುವವರನ್ನ. ಕೊಟ್ಟು ಕೆಟ್ಟವರಿಲ್ಲ ಜಗದೊಳಗೆ. ಆದುದರಿಂದಲೇ ಕಲಾಂ ಅಜ್ಜ ಹೇಳಿಕೊಟ್ಟ ಸೂತ್ರ, ಕೇಳಿಕೊಳ್ಳಬೇಕು ನಮ್ಮನ್ನು: ‘ನಾನೇನು ನೀಡಬಲ್ಲೆ, ಏನು ನೀಡಬಲ್ಲೆ?’ (What can I give? What can I give?)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.