ADVERTISEMENT

ವರಕವಿ ಬೇಂದ್ರೆ ಸ್ಮರಣೆ | ಐದು, ಐದು ಹತ್ತು; ಕೈಗೆ ಕೈ ಒತ್ತು!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 19:31 IST
Last Updated 22 ಅಕ್ಟೋಬರ್ 2022, 19:31 IST
ದ.ರಾ. ಬೇಂದ್ರೆ
ದ.ರಾ. ಬೇಂದ್ರೆ   

ದೀಪಾವಳಿ ಅಂದರೆ ವರಕವಿ ಬೇಂದ್ರೆ ನಮ್ಮನ್ನಗಲಿದ ದಿನವೂ ಹೌದು. ಆದರೆ, ಅವರು ಹಚ್ಚಿಟ್ಟ ಪದ್ಯ ದೀವಿಗೆ ಎಂದಿಗೂ ನಮ್ಮನ್ನು ಬೆಳಗುತ್ತಲೇ ಇದೆಯಲ್ಲವೇ? ದೈನಂದಿನ ವಿಷಯಗಳನ್ನು ಹೇಳುತ್ತಲೇ ಛಕ್ಕಂತ ಮಹಾಭಾರತ, ರಾಮಾಯಣ ತತ್ತ್ವ ವಿಚಾರಗಳಿಗೆ ಅವರು ಹಾರುತ್ತಿದ್ದ ಪರಿ ಅನನ್ಯ–ಅಪ್ರತಿಮ. ಹಾಗೆಂದೇ ಅವರೊಬ್ಬ ಶಬ್ದ ಗಾರುಡಿಗ. ಅವರ ಮಾತು ಕೇಳಿಸಿಕೊಳ್ಳುವ ಆ ಕ್ಷಣಗಳೆಂದರೆ ಕೇಳುಗರಿಗೆಲ್ಲ ರಸಪಾಕ...

***

ಅದು 1969–70ರ ಸಂದರ್ಭ. ನಾನಾಗ ಎಸ್‌.ಎಸ್‌.ಎಲ್‌.ಸಿ. ಓದುತ್ತಿದ್ದೆ. ನವಲಗುಂದದ ಮಾಡೆಲ್ ಹೈಸ್ಕೂಲ್‌ನಲ್ಲಿ ನನ್ನ ಓದು. ಆಗೆಲ್ಲ ಶಾಲೆಯಲ್ಲಿ ವರ್ಷದ ಕೊನೆಗೆ ಗ್ಯಾದರಿಂಗ್‌, ‘ಸರಸ್ವತಿ ಪೂಜೆ’ ಅಂತ ಇಟ್ಟುಕೊಳ್ಳೋರು. ದೊಡ್ಡ ಸಾಹಿತಿಗಳೋ, ಕವಿಗಳೋ, ಸಾಧಕರೋ ಅತಿಥಿಗಳಾಗಿ ಬಂದು ಕಾರ್ಯಕ್ರಮ ನಡೆಸಿಕೊಡೋರು. ಆ ವರ್ಷ ಧಾರವಾಡದಿಂದ ಕವಿವರ ದ.ರಾ.ಬೇಂದ್ರೆ ಅವರು ಅತಿಥಿಗಳಾಗಿ ಬಂದಿದ್ದರು. ಬೆಳಿಗ್ಗೆ-ಸಂಜೆ ಇಡೀ ದಿನ ಕಾರ್ಯಕ್ರಮ. ಬೆಳಿಗ್ಗೆ ಬಂದ ಬೇಂದ್ರೆ ಅವರು ಬೆಳಗಿನ ಕಾರ್ಯಕ್ರಮ ಪೂರೈಸಿ ಬಿಡುವಾದ ಮೇಲೆ, ವಿದ್ಯಾರ್ಥಿಗಳೊಂದಿಗೆ ಹರಟೆ-ಮಾತುಕತೆ ತರಹದ ಒಂದು ಆಪ್ತ ಸಂವಾದದಲ್ಲಿ ಪಾಲ್ಗೊಂಡರು. ಅದರಲ್ಲಿ ನನಗೂ ಭಾಗವಹಿಸುವ ಸುಯೋಗ.

ADVERTISEMENT

ಬೇಂದ್ರೆ ಅಜ್ಜ ಮಧ್ಯದಲ್ಲಿ. ನಾವಷ್ಟು ವಿದ್ಯಾರ್ಥಿಗಳು ಸುತ್ತ ಕುಳಿತಿದ್ದೆವು. ಒಬ್ಬೊಬ್ಬರಾಗಿ ಪರಿಚಯಿಸಿಕೊಂಡೆವು. ನಂತರ ಬೇಂದ್ರೆ ಅವರು ನಮ್ಮಲ್ಲೊಬ್ಬನನ್ನು ತೋರಿಸಿ, ‘ನೀನು ಹೇಳು, ನಿನ್ನ ಬಾಜೂಕ ಕೂತಾನಲ್ಲ, ಆಂವಾ ನಿನಗ ಏನಾಗಬೇಕು?’ ಅಂದರು. ಅದಕ್ಕೆ ‘ಆಂವಾ ನನಗ ಗೆಳೆಯ ಆಗಬೇಕು’ ಅಂದ. ಬೇಂದ್ರೆ ಮುಂದುವರಿದು ‘ಗೆಳೆಯ ಅಂದ್ರ ಏನು?’ ಅಂದರು. ಆಂವಾ ಸುಮ್ಮನಿರಬೇಕೋ ಬೇಡವೊ? ‘ಗೆಳೆಯ ಅಂದ್ರ, ಜೀವಕ್ಕ ಜೀವಾ ಕೊಡಾಂವ’ ಅಂದುಬಿಟ್ಟ. ಅಷ್ಟು ಸಾಕಾತು ಬೇಂದ್ರೆಯವರಿಗೆ. ಗೆಳೆಯ, ಜೀವಾ, ಜೀವಕ್ಕ ಜೀವಾ ಕೊಡೋದು ಅಂತ ಓತಪ್ರೋತವಾಗಿ ಮಾತಿನ ಲಹರಿ. ನಮಗೆಷ್ಟು ಅರ್ಥ ಆಯಿತೋ? ಎಷ್ಟು ದಕ್ಕಿತೋ? ಗೊತ್ತಿಲ್ಲ. ಅವರ ಜತೆ, ಅಂದು ನಮಗೆ ಮುಖ್ಯ ಅತಿಥಿಗಳ ಫಲಾಹಾರ-ಆತಿಥ್ಯದಲ್ಲಿ ಪಾಲು, ಧಾರವಾಡ ಪೇಢಾ ಹಾಗೂ ಚೂಡಾ ವಿಶೇಷವಾಗಿ ಸಿಕ್ಕಿದ್ದು ಇನ್ನೂ ಮರೆತಿಲ್ಲ. ಇದು ಬೇಂದ್ರೆ ಅಜ್ಜನೊಡನೆ ನನ್ನ ಮೊದಲ ಭೇಟಿಯ ಮುದ.

ಮುಂದೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅನೇಕಾನೇಕ ಗೌರವ/ಸನ್ಮಾನ ಸಮಾರಂಭಗಳು. ಬೆಂಗಳೂರಿನ ಮಹಾನಗರ ಪಾಲಿಕೆಯಿಂದಲೂ ಪೌರ ಸನ್ಮಾನ. ಬಹುಶಃ ಟೌನ್‌ಹಾಲ್‌ನಲ್ಲಿ ಅನ್ಸುತ್ತೆ. ಆರು ಗಂಟೆಗೆ ಕಾರ್ಯಕ್ರಮ. ಬೇಂದ್ರೆ ಠಾಕೊ-ಠೀಕ್ ಆಗಿ ಬಂದುಬಿಟ್ಟಿದ್ದರು. ಆಯೋಜಕರು ಮಾಮೂಲಾಗಿ ಆರೂವರೆ, ಏಳು ಹೀಗೆ ನಿಧಾನವಾಗಿ ಶುರುಮಾಡಬೇಕು ಅನ್ಕೊಂಡಿದ್ರೋ ಏನೋ? ಅಂತೂ ಲಗುಬಗೆಯಿಂದ ಸಭೆ ಶುರುವಾಯಿತು.

ಬೇಂದ್ರೆ ಅವರ ಭಾಷಣದ ಸರದಿ ಬಂತು. ‘ಆರು ಗಂಟೆಕ್ಕ ಕಾರ್ಯಕ್ರಮ ಅಂದಿದ್ದರು. ತಡ ಮಾಡಬಾರದು, ಕಾಯಿಸಬಾರ್ದು ಅಂದುಕೊಂಡು - ‘ಹೊತ್ತಾತು ಅಂತ ರಿಕ್ಷಾದಾಗ ಬಂದೆ. ಹೊತ್ತಾತು ‘ಅಂತರಿಕ್ಷಾ’ದಾಗ ಬಂದೆ’ ಅಂತ ಕೈ ಮೇಲೆತ್ತಿ ವಿಮಾನ ಹಾರಿದಂತೆ ತೋರಿಸಿದರು. ಸಭೆಯಲ್ಲಿ ಚಪ್ಪಾಳೆ. ಅವರ ಪದ-ಪ್ರಯೋಗದ ಶ್ಲೇಷೆಯ(ಪನ್) ಮುಖಾಂತರವೇ ಆಯೋಜಕರಿಗೂ ಬಿಸಿ ಮುಟ್ಟಿಸಿದರು, ಸಭಿಕರನ್ನೂ ರಂಜಿಸಿದರು. ಇದು ಹೆಚ್ಚು ಕಡಿಮೆ ಐವತ್ತು ವರ್ಷದ ಹಿಂದಿನ ಪ್ರಸಂಗ; ಈಗಿನ ಬೆಂಗಳೂರು? ಟೆರಿಫಿಕ್ಕ್-ಟ್ರಾಫಿಕ್ಕು ಊಹಿಸಿಕೊಳ್ಳೋದು ಕಷ್ಟ!

‘ಎನ್ನ ಪಾಡಡೆನಗಿರಲಿ, ಅದರ ಸವಿಯನ್ನಷ್ಟೇ ನೀಡುವೆನು ನಿನಗೆ’ ಎಂದ ಕವಿ ಅಂದಿನ ಸಭೆಯ ಆರಂಭಕ್ಕೆ ‘ಮನುಷ್ಯ ದುಃಖ ಹ್ಯಾಂಗಾದರೂ ತಡಕೋಬಹುದು. ಆದರೆ, ಸುಖ ತಡಕೊಳೋದು ಭಾಳ ಕಷ್ಟ ಅದ’ ಎಂದು ಉದ್ಗಾರ ತೆಗೆದಾಗ ಮತ್ತೆ ಚಪ್ಪಾಳೆ. ಮುಂದುವರಿದು ಕರ್ನಾಟಕದ ಮಹತ್ವವನ್ನು ಸಾರುತ್ತ ‘ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದ’ ಎಂದು ಶಕುನ ಸಾರಿದರು. ಚಪ್ಪಾಳೆಯೋ ಚಪ್ಪಾಳೆ. ವಾಟಾಳ್ ನಾಗರಾಜರಂತೂ ಖುಷಿಯಿಂದ ತಮ್ಮ ಟೊಪ್ಪಿಗೆಯನ್ನೇ ಮೇಲೆ ತೂರಿ ಸಂಭ್ರಮಿಸಿದ್ದು ಕಣ್ಣಮುಂದೆ ಕಟ್ಟಿದಂತಿದೆ.

ಗೆಳೆಯ ಗೋಪಾಲ ವಾಜಪೇಯಿ ಅಭಿನಯಿಸಿಕೊಂಡು ಬಣ್ಣಿಸುತ್ತಿದ್ದ ಇನ್ನೊಂದು ಬೇಂದ್ರೆ ಪ್ರಸಂಗ. ಬೇಂದ್ರೆಯವರಿಗೆ ಗಣಿತದ ಲೆಕ್ಕಾಚಾರ, ಸಂಖ್ಯಾಶಾಸ್ತ್ರದ ಗೀಳು ಅಂಟಿಕೊಂಡಿದ್ದ ದಿನಗಳವು. ಮನಸ್ಸಿಗೆ 411; ಹೃದಯಕ್ಕೆ 881 ಎಂಬ ಸಂಖ್ಯೆಯನ್ನು ಬೇಂದ್ರೆಯವರು ಕೊಟ್ಟಿದ್ದರಂತೆ! ಅಂತೂ ಆ ದಿನಗಳಲ್ಲಿ, ಹುಬ್ಬಳ್ಳಿಯಲ್ಲಿ ರೈಲ್ವೆ ವರ್ಕ್‌ಶಾಪ್‌ ಕಾರ್ಮಿಕರು ಆಯೋಜಿಸಿದ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಬೇಂದ್ರೆ ಮಾತನಾಡಲು ಎದ್ದರು. ತಮ್ಮ ಬಲ ಹಸ್ತವನ್ನು ಬಿಚ್ಚಿ ತೋರುತ್ತ ‘ಇವು ಎಷ್ಟು?’ ಎಂದರು. ಸಭಿಕರು ಮೌನ. ‘ಇವು ಐದು’ ಎಂದು ಬೇಂದ್ರೆ ಮುಂದುವರಿದರು. ಎಡ ಹಸ್ತವನ್ನು ಹರಡಿ ‘ಇವು ಎಷ್ಟು?’ ಎಂದರು. ಮತ್ತೆ ಮೌನ. ‘ಇವು ಐದು’ ಬೇಂದ್ರೆ ಉತ್ತರ. ‘ಐದು, ಐದು ಹತ್ತು; ಕೈಗೆ ಕೈ ಒತ್ತು, ಮೇಲೆತ್ತು’ (ಕೈಗೆ ಕೈ ಒತ್ತಿ, ಮೇಲತ್ತಿ ತೋರಿಸುತ್ತ) ‘ಮನ, ನಮ... ಆಗ್ತದ್ರೋ... ಮನ, ನಮ ಆಗ್ತದ್ರೋ’ ಎಂದ್ರು. ಆ ಶ್ರಮಜೀವಿಗಳು ಈ ಹೊಸ-ಬೇಗೆಯ ಭಾಷಣವನ್ನು ಎಷ್ಟು ಗ್ರಹಿಸಿದರೋ? ಬೇಂದ್ರೆ ಬೆರಳುಗಳ ಮೂಲಕ ಸರಳವಾಗಿ ದೊಡ್ಡ ತತ್ತ್ವವನ್ನೇ ವಿವರಿಸಿದ್ದರು. ಹಾಗೇ ಮುಂದುವರಿದು ಹೇಗೆ ‘ಪತ - ತಪ’ ಆಗುತ್ತದೆ ಎಂದೂ ವಿವರಸಿದ್ದರಂತೆ.

ಇನ್ನೊಂದು ಪ್ರಸಂಗ. ಹುಬ್ಬಳ್ಳಿ-ಧಾರವಾಡದ ಒಂದು ಕಾರ್ಯಕ್ರಮ. ಮಹಿಳೆಯರು ಜಾಸ್ತಿಯಿದ್ದ ಕಾರ್ಯಕ್ರಮವದು. ಬೇಂದ್ರೆಯವರು ಮಾತು ಆರಂಭಿಸಿದರಂತೆ. ‘ನೀರ-ಸಾಗರದಾಗ (ಆಗ ಹುಬ್ಬಳ್ಳಿ-ಧಾರವಾಡಕ್ಕೆ ನೀರಸಾಗರ ರಿಸರ್ವಾಯರ್‌ನಿಂದ ನೀರು ಸರಬರಾಜು ಆಗುತ್ತಿತ್ತು) ನೀರು ಸ್ವಚ್ಛ ಇದ್ದರ ನಮ್ಮ ಮನಿ ನಳದಾಗ ನೀರು ಸ್ವಚ್ಛ ಬರ್ತಾವ; ಆದರ ನಮ್ಮ ಮನಿ ನಳ ನಿಯಂತ್ರಣ ಮಾಡಲಿಕ್ಕೆ ಮನಿಯೊಳಗ ದಮಯಂತಿಯರು ಇರ್ತಾರ ಅಂದರಂತೆ. ಮಹಿಳೆಯರೆಲ್ಲ ಖುಷ್, ಚಪ್ಪಾಳೆಗಳೂ ಬಂದ್ವಂತೆ. ಹೀಗೆ ಬೇಂದ್ರೆ ದೈನಂದಿನ ವಿಷಯಗಳನ್ನು ಹೇಳುತ್ತಲೇ ಛಕ್ಕಂತ ಮಹಾಭಾರತ, ರಾಮಾಯಣ, ತತ್ತ್ವ ವಿಚಾರಗಳಿಗೆ ಹಾರೋ ಪರಿ ಅನನ್ಯ-ಅಪ್ರತಿಮವಾಗಿತ್ತು.

ಕೊನೆಯದಾಗಿ, ‘ಸಾಯೋದು ಸುಲಭ, ಬದುಕೋದು ಕಷ್ಟ’ ಅಂತಿದ್ದ ಬೇಂದ್ರೆಯವರಿಗೆ ‘ಹಂಗಾದರ ನೀವು ಸಾವಿಗೆ ಹೆದರೋದಿಲ್ಲ ಅಂತೀರಿ?’ ಅಂದರೆ ‘ಸಾವಿಗೆ ನಾನು ಹೆದರೋದಿಲ್ಲ; ಯಾಕಂದ್ರ, ಅದು ಬಂದಾಗ ನಾನು ಇರೋದಿಲ್ಲ. ಮತ್ತ... ನಾನು ಇರೋತನಕ ಅದು ಬರೋದಿಲ್ಲ’ ಎಂದು ಕೈಕೊಡವುತ್ತ ನಗಿಸುತ್ತಿದ್ದರು. ಅಂತಹ ಬೇಂದ್ರೆಯವರು 1981ರ ಅಕ್ಟೋಬರ್‌ 26ರಂದು (ದೀಪಾವಳಿ) ನಮ್ಮನ್ನಗಲಿದರು. ಕತ್ತಲಾವರಿಸಿತು ನಿಜ. ಆದರೆ ಅವರಿತ್ತಿರುವ ಪದ್ಯ-ದೀವಿಗೆಗಳಿಂದಲೇ ನಮ್ಮ ಪ್ರತೀದೀಪಾವಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.