ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ದೀಪಾವಳಿ ಆಚರಿಸಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಶ್ರೀರಾಮನು ರಾವಣನನ್ನು ಜಯಿಸಿ, ಸೀತೆ ಹಾಗೂ ಲಕ್ಷ್ಮಣರೊಂದಿಗೆ ಅಯೋಧ್ಯೆ ನಗರಕ್ಕೆ ಮರಳಿದ ಸಂದರ್ಭದಲ್ಲಿ ಅಯೋಧ್ಯೆಯ ಜನತೆ ದೀಪಗಳನ್ನು ಹಚ್ಚಿ ಸ್ವಾಗತಿಸಿದರು. ಇದರ ಸ್ಮರಣಾರ್ಥ ದೀಪಾವಳಿ ಆರಂಭವಾಯಿತು ಎಂಬ ಪ್ರತೀತಿ ಇದೆ.
ಅಮಾವಾಸ್ಯೆಯ ಹಿಂದಿನ ದಿನ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನವನ್ನಾಗಿ ನರಕ ಚತುರ್ದಶಿ ಆಚರಿಸಲಾಗುತ್ತದೆ. ದೀಪಾವಳಿಯನ್ನು ದಕ್ಷಿಣ ಹಾಗೂ ಉತ್ತರ ಭಾರತದಾದ್ಯಂತ ವಿಶೇಷವಾಗಿ ಆಚರಿಸುತ್ತಾರೆ. ದಕ್ಷಿಣದಲ್ಲಿ ಮೂರು ದಿನಗಳವರೆಗೆ ನಡೆಯುವ ಹಬ್ಬದಲ್ಲಿ ನರಕ ಚತುರ್ದಶಿ ಪ್ರಮುಖವಾಗಿದೆ. ಉತ್ತರ ಭಾರತದಲ್ಲಿ ಹೊಸ ಆರ್ಥಿಕ ವರ್ಷ ಪ್ರಾರಂಭವಾಗುವುದರೊಂದಿಗೆ ಹೊಸ ಲೆಕ್ಕದ ಪುಸ್ತಕಗಳನ್ನು ದೀಪಾವಳಿಯ ಅವಧಿಯಲ್ಲಿ ತೆರೆಯಲಾಗುತ್ತದೆ.
ಇನ್ನು ಉತ್ತರ ಕರ್ನಾಟಕದಲ್ಲಿ ಆಚರಿಸುವ ದೀಪಾವಳಿ ಭಿನ್ನ. ಮನೆಯಲ್ಲಿ ಅಮಾವಾಸ್ಯೆ ದಿನದಂದು ಹೋಳಿಗೆ, ಕಡಬು ಕಟ್ಟಿನ ಸಾಂಬಾರು, ಮತ್ತು ಪಾಡ್ಯದಿನದಂದು ಶಾವಿಗೆಯ ನೈವೇದ್ಯವನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಗೋವಿನ ಸಗಣಿಯಿಂದ ತಯಾರಿಸಿರುವ ಪಾಂಡವರ ಮೂರ್ತಿಗಳನ್ನು ಮನೆಯ ಅಕ್ಕ ಪಕ್ಕ ಹಾಗೂ ಮನೆಯ ಮೇಲೆ ಇಟ್ಟು ಪೂಜೆ ಮಾಡಲಾಗುತ್ತದೆ. ಗೋವುಗಳಿಗೆ ಬಂದಿರುವ ಕೆಡುಕನ್ನು ಹೋಗಲಾಡಿಸಲು ಸಾಂಪ್ರದಾಯಿಕ ಜನಪದ ಹಾಡುಗಳನ್ನು ಹಾಡಿ, ಗೋವುಗಳ ಹಟ್ಟಿಗೆ ಆರತಿ ಬೆಳಗಲಾಗುತ್ತದೆ.
ಈ ಪ್ರದೇಶದ ಕುರುಬ ಸಮುದಾಯಗಳಲ್ಲಿ ದೀಪಾವಳಿ ಸಂದರ್ಭ ಕುರಿದೊಡ್ಡಿಗಳಿಗೆ ಅಲಂಕಾರ ಮಾಡಿ, ಪೂಜೆ ನೆರವೇರಿಸಲಾಗುತ್ತದೆ. ಈ ಪೂಜಾ ಕಾರ್ಯಗಳಿಗಾಗಿಯೇ ಮನೆಯ ಹೆಣ್ಣುಮಕ್ಕಳನ್ನು ಅತ್ತೆ ಮನೆಯಿಂದ ಕರೆಸಲಾಗುತ್ತದೆ. ಕುರಿದೊಡ್ಡಿಗಳಿಗೆ ಲಕ್ಷ್ಮೀ ಪೂಜೆ, ಆರತಿಯನ್ನು ಮಾಡಲಾಗುತ್ತದೆ. ಅಲ್ಲಿರುವ ಕುರಿಗಳಲ್ಲಿ ತಮಗಿಷ್ಟವಾದ ಒಂದು ಕುರಿಮರಿಯನ್ನು ಆಯ್ಕೆ ಮಾಡಿಕೊಂಡು, ಆದಕ್ಕೆ ಕುಂಕುಮ ಹಚ್ಚಬೇಕು. ಅದರರ್ಥ ಆ ಕುರಿಮರಿ ಮನೆಯ ಹೆಣ್ಣು ಮಗಳಿಗೆ ಮೀಸಲಾಗಿರುತ್ತದೆ. ತವರುಮನೆಯಲ್ಲಿ ಬೆಳೆದು ದೊಡ್ಡದಾದ ಆ ಕುರಿಯನ್ನು ಮಗಳ ಮನೆಗೆ ಬಳುವಳಿಯಾಗಿ ನೀಡುವ ಸಂಪ್ರದಾಯವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.