ADVERTISEMENT

‘ನ್ಯೂ ನಾರ್ಮಲ್’ ಜೀವನ ನಾಯಿಮರಿಗೂ ಬೇಕು ಪ್ರೀತಿಯ ಸಿಂಚನ

ರೇಷ್ಮಾ
Published 27 ಅಕ್ಟೋಬರ್ 2020, 19:31 IST
Last Updated 27 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಾ ಕ್‌ಡೌನ್‌ ಕಾರಣದಿಂದ ಮನೆಯೊಳಗೆ ಇದ್ದ ನಮಗೆ ‘ನ್ಯೂ ನಾರ್ಮಲ್’ ಬದುಕಿಗೆ ಹೊಂದಿಕೊಳ್ಳುವುದು ಕೊಂಚ ಕಷ್ಟವಾಗಿದೆ. ಆದರೆ ಹೊಂದಿಕೊಳ್ಳುವುದು ಅನಿವಾರ್ಯ. ಈ ರೀತಿ ನ್ಯೂ ನಾರ್ಮಲ್ ಬದುಕಿಗೆ ನಾವಷ್ಟೇ ಹೊಂದಿಕೊಂಡರೆ ಸಾಲುವುದಿಲ್ಲ. ನಮ್ಮ ಮನೆಯ ಮುದ್ದಿನ ನಾಯಿ ಕೂಡ ಹೊಂದಿಕೊಳ್ಳಬೇಕಿದೆ.

ಕಳೆದ 6–7 ತಿಂಗಳಿಂದ ಮನೆಯೊಳಗೇ ಇದ್ದ ನಾವು ಮುದ್ದಿನ ನಾಯಿಮರಿಯೊಂದಿಗೆ ಹೆಚ್ಚಿನ ಸಮಯ ಕಳೆದಿರುತ್ತೇವೆ.ನಮ್ಮೊಂದಿಗೆ ಬೆಚ್ಚಗೆ ಬೆಡ್‌ ಮೇಲೆ, ಸೋಫಾ ಮೇಲೆ ಕುಳಿತು ಎಂಜಾಯ್ ಮಾಡುತ್ತಿದ್ದ ಪಪ್ಪಿಗೆ ಈಗ ನಾವು ಇದ್ದಕ್ಕಿದ್ದಂತೆ ಮನೆಯಿಂದ ಹೊರ ಹೊರಟಾಗ ದಿಗಿಲಾಗುವುದು ಸಹಜ. ಮನೆಯಿಂದ ಕೆಲಸಕ್ಕೆಂದು ಹೊರಗೆ ಹೋದ ನೀವು ಬಹಳ ಹೊತ್ತು ಮನೆಯಲ್ಲಿ ಕಾಣದಾದಾಗ ನಾಯಿಮರಿಯ ಮನಸ್ಸಿನಲ್ಲಿ ಬೇಡವೆಂದರೂ ಆತಂಕ, ಭಯ ಕಾಡುತ್ತದೆ. ಇದ್ದಕ್ಕಿದ್ದಂತೆ ಆದ ಈ ಬದಲಾವಣೆ ನಾಯಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದರೆ ಅದಕ್ಕೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ, ನ್ಯೂ ನಾರ್ಮಲ್ ಬದುಕಿಗೆ ಹೊಂದಿಕೊಳ್ಳಲು ತರಬೇತಿ ನೀಡುವುದು ಅವಶ್ಯ.

ನಾಯಿಮರಿಯ ಆತಂಕದ ಲಕ್ಷಣಗಳು

ADVERTISEMENT

ಲಾಕ್‌ಡೌನ್‌ಗೂ ಮೊದಲಿನ ಜೀವನ ನೋಡಿರದ ಹಾಗೂ ತನ್ನೊಂದಿಗೆ ಸದಾ ಇರುತ್ತಿದ್ದ, ಮುದ್ದಿಸುತ್ತಿದ್ದ ಒಡೆಯ ಇದ್ದಕ್ಕಿದ್ದಂತೆ ಕಾಣಿಸದಾದಾಗ ನಾಯಿಮರಿಗಳಲ್ಲಿ ಆತಂಕ ಕಾಡುವುದು ಸಹಜ.ನಾಯಿಮರಿಯ ವರ್ತನೆಯಲ್ಲಿ ಬದಲಾವಣೆಯಾಗಿರುವುದನ್ನು ಮಾಲೀಕರು ಗುರುತಿಸಬಹುದು. ನಿರಂತರವಾಗಿ ಬೊಗಳುವುದು, ಮನೆಯಿಡಿ ಗಲೀಜು ಮಾಡುವುದು, ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಮುಂತಾದ ವರ್ತನೆಯನ್ನು ನಿಮ್ಮ ಮುದ್ದಿನ ಪಪ್ಪಿ ತೋರುತ್ತಿದ್ದರೆ ಅದು ಆತಂಕಕ್ಕೆ ಒಳಗಾಗಿದೆ ಎಂದು ಅರ್ಥ.

ನ್ಯೂ ನಾರ್ಮಲ್‌ ಬದುಕಿನಿಂದ ಒತ್ತಡ ಹಾಗೂ ಅಸಮಾಧಾನದ ಲಕ್ಷಣಗಳನ್ನು ತೋರುವ ನಾಯಿಗಳಿಗೆ ಸಹಾಯ ಮಾಡಲು ಹೀಗೆ ಮಾಡಿ.

ಸಮಾಧಾನದಿಂದ ಕೂರಿಸಿಕೊಂಡು ಮುದ್ದು ಮಾಡಿ. ಆಗ ಮನೆಯಿಂದ ಹೊರ ಹೋದ ನೀವು ಆದಷ್ಟು ಬೇಗ ಮರಳಿ ಬರುತ್ತೀರಿ ಎಂಬ ಭರವಸೆ ಅದಕ್ಕೆ ಸಿಗುತ್ತದೆ. ಮನೆಯಲ್ಲಿನ ಇತರರೊಂದಿಗೆ ಹೊಂದಿಕೊಳ್ಳುವ ಅಭ್ಯಾಸ ಮಾಡಿಸಿ.

ನಾಯಿಮರಿಗೆ ಒಂಟಿಯಾಗಿರುವುದನ್ನು ಅಭ್ಯಾಸ ಮಾಡಿಸಿ. ಆ ಬಗ್ಗೆ ತರಬೇತಿ ನೀಡಿ. ಮನೆಯಲ್ಲಿ ಇದ್ದಾಗಲೂ ನೀವು ಅವುಗಳಿಂದ ದೂರ ಇದ್ದು ಅಭ್ಯಾಸ ಮಾಡಿಸುತ್ತಾ ಹೋಗಿ, ಕ್ರಮೇಣ ಅವು ಹೊಂದಿಕೊಳ್ಳುತ್ತವೆ.

ಒಂದೇ ಬಾರಿಗೆ ದೀರ್ಘಕಾಲ ಅವುಗಳಿಂದ ದೂರ ಇರಬೇಡಿ. ಮೊದಲು 5 ನಿಮಿಷ, ನಂತರ 10 ನಿಮಿಷ, ಅರ್ಧ ಗಂಟೆ, ಒಂದು ಗಂಟೆ ಹೀಗೆ ಅಭ್ಯಾಸ ಮಾಡಿಸಿ. ನಂತರ ಅದಕ್ಕೆ ನೀವು ಬಿಟ್ಟು ಹೋಗುವುದು ಸಾಮಾನ್ಯ ಎನ್ನಿಸುತ್ತದೆ.

ಕೆಲಸಕ್ಕೆ ಹೋಗಲು ಆರಂಭಿಸಿದ ಮೇಲೆ ಮನೆ ಬಿಡುವ ಸಮಯ ಹಾಗೂ ಮನೆಗೆ ಬರುವ ಸಮಯ ನಾಯಿಮರಿಗೆ ತಿಳಿಯುವ ಹಾಗೆ ಮಾಡಿ. ಇದರಿಂದ ಅದಕ್ಕೆ ನೀವು ಎಷ್ಟು ಸಮಯ ಮನೆಯಲ್ಲಿ ಇರುವುದಿಲ್ಲ ಎಂಬುದು ಪಕ್ಕಾ ಆಗುತ್ತದೆ. ಜೊತೆಗೆ ಅದು ಬದುಕಿನ ಭಾಗವಾಗುತ್ತದೆ.

ಇನ್ನೂ ನಾಯಿಗಳಲ್ಲಿ ಆತಂಕ ಹೆಚ್ಚಿದ್ದರೆ ಒಂದಷ್ಟು ದಿನ ನಾಯಿಗಳ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಡಿಸುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ.

ಇದೆಲ್ಲದರ ಜೊತೆಗೆ ಲಾಕ್‌ಡೌನ್‌ ಹಿಂದಿನ ದಿನಗಳಂತೆಯೇ ಮುಂಜಾನೆ ಅಥವಾ ಸಂಜೆ ನಾಯಿಮರಿಗೆ ವಾಯು ವಿಹಾರ ಮಾಡಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.