ADVERTISEMENT

ರಂಗಭೂಮಿ: ಬಹು ಸಂಕರಗಳ ಕಲಾತ್ಮಕ ಅಭಿವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 23:50 IST
Last Updated 23 ನವೆಂಬರ್ 2024, 23:50 IST
<div class="paragraphs"><p>ನಾಟಕ</p></div>

ನಾಟಕ

   

ಕೋವಿಡ್ ಮಹಾರೋಗದ ಒತ್ತಡ ಮತ್ತು ಸಂಘರ್ಷ, ಲಿವಿಂಗ್ ರಿಲೇಶನ್‌ಶಿಪ್, ಕ್ಯಾನ್ಸರ್ ಮತ್ತು ಲೈಂಗಿಕ ಅಲ್ಪಸಂಖ್ಯಾತ (ಟ್ರಾನ್ಸ್ ಜೆಂಡರ್) ನಾಲ್ಕು ಪ್ರಧಾನ ಧಾರೆಗಳಲ್ಲಿ ‘ಶೇಷಗ್ರಸ್ತರು’ ನಾಟಕದ ವಸ್ತು ವಿನ್ಯಾಸಗೊಂಡಿದೆ. ಮಹಾಭಾರತದ ಪಾತ್ರಗಳು ಸಾಂಗತ್ಯ ಧರ್ಮದ ಸಾಧ್ಯತೆಗಳನ್ನು ಮತ್ತು ವಿವಾಹದ ಕಟ್ಟಳೆಗಳನ್ನು ಮೀರಿ ಕುಟುಂಬವನ್ನು ಅಥವಾ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ ಬಗೆ, ವರ್ತಮಾನದ ಸಾಧ್ಯತೆಗಳಾಗಿ ಹೊಸರೂಪಾಗಿ ಮೈದಳೆದ ನವಚರಿತ್ರೆಯಂತೆ ನಾಟಕ ಕಟ್ಟಿಕೊಡುತ್ತದೆ.

ಕಲ್ಲಯ್ಯ ಮತ್ತು ಅವನ ಮಗ ಶ್ರೀಕಾಂತ ಇಬ್ಬರ ಹುಡುಕಾಟಗಳು ಮೇಲ್ನೋಟಕ್ಕೆ ಬೇರೆಬೇರೆಯಾಗಿ ಕಂಡರೂ ಅಂತಿಮವಾಗಿ ತಮ್ಮ ವ್ಯಕ್ತಿ ಚರಿತ್ರೆಯ ವಂಶವಾಹಿಗಳನ್ನು ಹುಡುಕಾಟ ಮಾಡುವುದು ನಾಟಕದ ಮೂಲಭಿತ್ತಿಯಾಗಿ ಕಾಣುತ್ತದೆ. ಆಸ್ತಿ ಹಕ್ಕನ್ನು ಮಗನಿಗೆ ವರ್ಗಾಯಿಸಲು ಬಯಸುವ ತಂದೆ, ಅದನ್ನು ನಿರಾಕರಿಸುವ ಮಗ, ವಿವಾಹ ಮಾಡಿಕೊಳ್ಳುವಂತೆ ಒತ್ತಾಯಿಸುವ ತಂದೆ ತಾಯಿ, ಅದನ್ನೂ ನಿರಾಕರಿಸುವ ಮಗ ಕಾಲದ ಯುವ ತಲೆಮಾರಿನ ರೂಪಕವಾಗಿಯೂ, ಭೂತಕಾಲದ ಶೇಷವಾಗಿಯೂ ಕಾಣುತ್ತಾನೆ. ಕಲ್ಲಯ್ಯ ತಾನು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಮಗನ ನಿರಾಕರಣೆಯ ನಂತರ ಲಿಂಗತ್ವ ಅಲ್ಪಸಂಖ್ಯಾತೆಯಾದ ತಂಗಿಯನ್ನು ಹುಡುಕಿಕೊಂಡು ಹೋಗುವ  ದೃಶ್ಯ ವಾಸ್ತವಕ್ಕೆ ದೂರವಾದರೂ, ನಾಟಕದ ಆಶಯವನ್ನು ಗಟ್ಟಿಗೊಳಿಸುತ್ತದೆ. 

ADVERTISEMENT

ನಾಟಕದ ಕಥಾ ಹಂದರ ಆಧುನಿಕವೆನಿಸಿದರೂ ಮನುಷ್ಯನ ಜೈವಿಕ, ಭೌಗೋಳಿಕ ಮತ್ತು ರಾಜಕೀಯ ಚರಿತ್ರೆ, ಸಂಕರಗೊಂಡ ಕಥನ ನಾಟಕದ ಆವರಣವನ್ನು ಬಹು ಬಗೆಯಲ್ಲಿ ಪ್ರಶ್ನಿಸುತ್ತಲೇ ನಮ್ಮ ಪುರಾಣ, ಮಹಾಕಾವ್ಯ, ಜಾನಪದ, ಚರಿತ್ರೆ ಮತ್ತು ವರ್ತಮಾನಕ್ಕೆ ಲೇಪಿಸಿ ಸಮರ್ಥವಾಗಿ ಪರಿಶೀಲಿಸುತ್ತದೆ.

ನಾಟಕ ಒಂದು ವಾಸ್ತವವಾದಿ ನಾಟಕದಂತೆ ಕಂಡರೂ ತನ್ನ ಅಂತರಂಗ ಮತ್ತು ಬಹಿರಂಗದಲ್ಲಿ ಅಸಂಗತತೆಯನ್ನು  ಮೈವೆತ್ತಿದೆ. ಕಥನದೊಳಗಿರುವ ಪ್ರತಿಮೆ, ಸಂಕೇತಗಳು ವಸ್ತುವಿನ ಪ್ರಸ್ತುತಿಗೆ ಪೂರಕವಾದ ಸಾಮಗ್ರಿಗಳಾಗಿ ದುಡಿಯುತ್ತವೆ. ವಿಕಾಸವಾದದ ಸೂತ್ರ ವ್ಯಕ್ತಿ ಸಂಕರದ, ಭೂಪ್ರದೇಶ ಸಂಕರದ ಅನನ್ಯತೆಯಲ್ಲಿದೆ ಎಂಬ ವೈಚಾರಿಕ ಮತ್ತು ವೈಜ್ಞಾನಿಕ ತಿಳಿವಳಿಕೆ ಮಾನವ ಚರಿತ್ರೆಯನ್ನು ಹೇಳಲು ನಾಟಕ ಪ್ರಯತ್ನಪಟ್ಟಿದೆ. ಇದೆಲ್ಲದರ ನಡುವೆ ಮನುಷ್ಯನ ಅಭದ್ರತೆಗಳನ್ನು ಬಳಸಿಕೊಳ್ಳುವ ಶಕ್ತಿ ರಾಜಕಾರಣ ಹೇಗೆಲ್ಲಾ ವ್ಯಕ್ತಿಯ ಅಸ್ಮಿತೆಯನ್ನು ಜಟಿಲ ಅಥವಾ ಜಡ ಮಾಡುತ್ತದೆ ಎಂಬ ಹುನ್ನಾರಗಳನ್ನು ‘ಶೇಷಗ್ರಸ್ತರು’ ರಂಗ ಪ್ರಯೋಗ ತೆರೆದಿಡುತ್ತದೆ.

ವರ್ತಮಾನದ ಭ್ರಮಾತ್ಮಕ ಜಗತ್ತನ್ನು ಗೇಲಿ ಮಾಡುತ್ತಲೇ, ಅದರ ಸಾಧ್ಯತೆಗಳನ್ನು ವಿವರಿಸುತ್ತಲೇ ವರ್ಚುವಲ್ ಜಗತ್ತಿನ ಅನ್ವೇಷಣೆಗಳು ಮತ್ತು ಅದರ ಸಾಧಕ ಬಾಧಕಗಳು ಮನುಷ್ಯ ಜಗತ್ತನ್ನು ನಿರ್ವಹಿಸುತ್ತಿರುವ ಮತ್ತು ಪೋಷಿಸುತ್ತಿರುವ ರೀತಿ ನಾಟಕದಲ್ಲಿ ಅತ್ಯಂತ ಕಲಾತ್ಮಕವಾಗಿ ಅಭಿವ್ಯಕ್ತಿಗೊಂಡಿದೆ.

ಕನ್ನಡ ರಂಗಭೂಮಿಯ ಅತ್ಯಂತ ಪ್ರತಿಷ್ಠಿತ ರಂಗತಂಡ  ರಂಗಸಂಪದ ಈಗಾಗಲೇ ಐದು ದಶಕಕ್ಕೂ ಹೆಚ್ಚು ಕಾಲ ಕನ್ನಡಕ್ಕೆ ಅತ್ಯಂತ ಮಹತ್ವದ ರಂಗಪ್ರಯೋಗಗಳನ್ನು ನೀಡಿದೆ. ‘ಶೇಷಗ್ರಸ್ತರು’ ನಾಟಕದ ಆಯ್ಕೆ ಮತ್ತು ಅದರ ಮಂಡನೆಗೆ ತಾತ್ವಿಕ ಮುನ್ನುಡಿಯನ್ನು ಸಮರ್ಥವಾಗಿ ರಂಗಸಂಪದ ಬರೆದಿದೆ. ರಮೇಶ್ ಚಂದ್  ಎಚ್.ಸಿ  ‘ಶೇಷಗ್ರಸ್ತರು’ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ. ಅವರ ಪರಿಕಲ್ಪನೆ ಮತ್ತು ವಿನ್ಯಾಸ, ತಂತ್ರ ಮತ್ತು ರೂಪಕಾತ್ಮಕವಾದ ಬಂಧವನ್ನು ದೃಶ್ಯಗೊಳಿಸಲು ಶಕ್ತ ರಂಗ ಮಾರ್ಗವಾಗಿದೆ. ಮಾತು ಭಾಷಣವಾಗುವ ಸಾಧ್ಯತೆಗಳನ್ನು ಮೀರಿ ನಿರ್ದೇಶಕರು ನಾಟಕವನ್ನು ಕಲಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಕಲ್ಲಯ್ಯನ ಪಾತ್ರಧಾರಿ ಚಂದ್ರಕಾಂತ ಅವರು ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳು ರಂಗದ ಕಸುಬು ಮಾಡಿರುವ ಕಲಾವಿದರು. ನೇಪಥ್ಯದಲ್ಲಿ ಬಹುವಾಗಿ ದುಡಿದಿದ್ದಾರೆ. ಚಂದ್ರಕಾಂತ ಅವರೊಳಗಿನ ಕಲಾವಿದನಿಗೆ ತನ್ನ ಅನುಭವಜನ್ಯ ಭಾವಭಿವ್ಯಕ್ತಿಯನ್ನು ಮಾಡಲು ಸೂಕ್ತ ಅವಕಾಶ ದೊರಕಿದೆ. ಪಾತ್ರ ಎಲ್ಲೂ ಲಘುವಾಗದಂತೆ  ಹದವಾಗಿ ಮತ್ತು ಪ್ರೌಢವಾಗಿ ಚಂದ್ರಕಾಂತರು ಅನುಭವಿಸಿ ಜೀವಿಸಿದ್ದಾರೆ. ಗಂಗಮ್ಮ ಮತ್ತು ಗಂಗಾಂಬೆಯ ಪಾತ್ರವನ್ನು ನಿರ್ವಹಿಸಿರುವ ಸೌಭಾಗ್ಯ ಅವರು ತಮ್ಮ ಅಭಿವ್ಯಕ್ತಿಯನ್ನು ಪಾತ್ರಕ್ಕೆ ಪೂರಕವಾಗಿ  ಪ್ರಕಟಿಸಿದ್ದಾರೆ. ಕಲ್ಪನಾ ಜಗತ್ತಿನಲ್ಲಿ ವಿಹರಿಸುವ ಅವರ ಅಭಿನಯ ಮನಮುಟ್ಟುತ್ತದೆ. ಶ್ರೀಕಾಂತ ಮತ್ತು ನಿತ್ಯ ಪಾತ್ರಧಾರಿಗಳು ನಾಟಕದ ಓಘವನ್ನು ಮುನ್ನಡೆಸುತ್ತಾರೆ. ಶಶಿಧರ ಅಡಪ ಮತ್ತು ಅಪ್ಪಯ್ಯ ಅವರ ರಂಗ ಸಜ್ಜಿಕೆ ರಂಗ ಪ್ರಯೋಗದ  ಅಗತ್ಯದ ಅಳತೆಯನ್ನು ಮೀರದೆ, ಪೂರಕವಾಗಿದೆ. ಶಂಕರ್ ಬಿಲ್ಲೇಮನೆಯವರ ಹಿನ್ನೆಲೆ ಸಂಗೀತ ಮತ್ತು ಧ್ವನಿಮುದ್ರಿತ ಸಂಗೀತ ರಂಗ ಕಥನ ಲೋಕದೊಳಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಅಕ್ಷರ. ವಿ ಅವರ ಬೆಳಕಿನ ವಿನ್ಯಾಸ ಕಥೆಯನ್ನು ಶಕ್ತವಾಗಿ ನೋಡುಗನಲ್ಲಿ ಬೆಳಗಿಸುತ್ತದೆ. ಕೋವಿಡ್ ನಂತಹ  ವಾಚ್ಯವಾಗಬಲ್ಲ ವಸ್ತುವನ್ನು ಕಲೆಯನ್ನಾಗಿಸುವ ಪ್ರಯತ್ನವನ್ನು ಮಾಡುವ ಮೂಲಕ ವಿಷಾದದೊಳಗೆ ಆತ್ಮ ವಿಮರ್ಶೆಯ ಚಲನೆಯನ್ನು ಪ್ರೇಕ್ಷಕನ ಬುದ್ಧಿಭಾವಗಳಲ್ಲಿ ಮರು ಪ್ರತಿಷ್ಠಾಪಿತಗೊಳ್ಳುವಂತೆ ನಾಟಕದ ನಿರ್ದೇಶನ, ಅಭಿನಯ ಸೇರಿದಂತೆ ಒಟ್ಟು ಮಂಡನೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.