ಇಂ ದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇಂಗ್ಲಿಷಿನ ಪ್ರಭಾವದಿಂದ ಬಿಡಿಸಿಕೊಂಡು ಡಿಜಿಟಲ್ ವೇದಿಕೆಗಳಲ್ಲಿ ನೆಲದ ಭಾಷೆಯನ್ನೇ ಬಳಸುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಭಾರತದಲ್ಲಿ ಕನ್ನಡವೂ ಸೇರಿದಂತೆ ಸಂವಿಧಾನದಎಂಟನೆಯ ಪರಿಚ್ಛೇದದ 22 ಭಾಷೆಗಳನ್ನೂ ಮಾಹಿತಿ ತಂತ್ರಜ್ಞಾನದ ವಿವಿಧ ರೂಪಗಳಲ್ಲಿ ದೇಶದಾದ್ಯಂತ ಅಳವಡಿಸುವುದು ನಿಜಕ್ಕೂ ಈ ಕಾಲದ ಬಹುದೊಡ್ಡ ಪಂಥಾಹ್ವಾನವಾಗಿದೆ.
ಬ್ರಿಟಿಷರ ಆಳ್ವಿಕೆಯಿಂದಾಗಿ ಇಂಗ್ಲಿಷಿನಲ್ಲೇ ವ್ಯವಹರಿಸುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಆಡಳಿತ ವ್ಯವಸ್ಥೆಯಲ್ಲಿ ಕನ್ನಡವನ್ನು ಜಾರಿಗೆ ತರುವ ಪ್ರಯತ್ನವು ಕರ್ನಾಟಕದಲ್ಲಿ ನಡೆಯುತ್ತಲೇ ಇದೆ. ಆಡಳಿತದ ಎಲ್ಲ ವಿಭಾಗಗಳಲ್ಲೂ ಹೊಸಹೊಸತಂತ್ರಾಂಶಗಳು ಜಾರಿಯಾಗುತ್ತಿವೆ. ಕೊರೊನಾವೈರಸ್ ತಂದಿಟ್ಟ ಬಿಕ್ಕಟ್ಟಿನಿಂದ ಭೌತಿಕ ಸಂಪರ್ಕಕ್ಕಿಂತ ಆನ್‌ಲೈನ್ ಸಂಪರ್ಕವೇ ಉತ್ತಮ ಎಂಬ ಅಭಿಪ್ರಾಯವೂ ಬಲವಾಗುತ್ತಿದೆ. ಮಾನವೀಯ ಸಂಬಂಧಗಳನ್ನು ಬೇಡುವ ಸಂದರ್ಭಗಳನ್ನು ಹೊರತುಪಡಿಸಿ ಆಡಳಿತದ ದಕ್ಷತೆಗಾಗಿ ತಂತ್ರಾಂಶಗಳನ್ನು ಅಳವಡಿಸುವುದು ಸರಿಯಾದ ಕ್ರಮವೂ ಹೌದು. ಹೀಗೆ ತಂತ್ರಾಂಶಗಳನ್ನು ಅಳವಡಿಸುವಾಗ ಕನ್ನಡವೇ ಮುಖ್ಯ ಆಯ್ಕೆಯ ಭಾಷೆಯಾಗುವ ಅವಶ್ಯಕತೆ ಇದ್ದೇ ಇದೆ.
ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎಂದಾಗ ಎರಡು ಪ್ರಮುಖ ಅಗತ್ಯಗಳನ್ನು ಗುರುತಿಸಬಹುದು. ಮೊದಲನೆಯದು - ತಂತ್ರಜ್ಞಾನದ ಹಿಂದಿನ ಗಣಕದ ಭಾಷೆಯಲ್ಲೇ ಕನ್ನಡವನ್ನು ಅಳವಡಿಸುವುದು. ಇದು ಸದ್ಯಕ್ಕಂತೂ ದೂರದ ಮಾತಾಗಿದೆ. ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ, ತಂತ್ರಾಂಶವನ್ನು ರೂಪಿಸುವ ವಿವಿಧ ಗಣಕ ಭಾಷೆಗಳಲ್ಲಿ ಕನ್ನಡದ ಆದೇಶಗಳನ್ನು, ಸಂಕೇತಗಳನ್ನು ಬಳಸುವ ವ್ಯವಸ್ಥೆ (ಕೋಡಿಂಗ್) ತಳಮಟ್ಟದಲ್ಲಿ ಕನ್ನಡ ಕೋಡಿಂಗ್ ಅಭಿವೃದ್ಧಿಯನ್ನು ಬಯಸುತ್ತದೆ.
ಎರಡನೆಯದು – ತಂತ್ರಾಂಶಗಳನ್ನು ಬಳಕೆದಾರರು ಬಳಸುವ ಸಂದರ್ಭದಲ್ಲಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಪದಗಳನ್ನು ಕನ್ನಡದಲ್ಲಿ ಮೂಡಿಸುವುದು. ಇದು ಖಂಡಿತವಾಗಿಯೂ ಸಾಧ್ಯ. ಹೀಗೆ ಒಂದು ಭಾಷೆಯಿಂದ (ಮುಖ್ಯವಾಗಿ ಇಂಗ್ಲಿಷಿನಿಂದ) ಇನ್ನೊಂದು ಭಾಷೆಗೆ (ಮುಖ್ಯವಾಗಿ ಸ್ಥಳೀಯ ಭಾಷೆಗೆ) ಈ ಎಲ್ಲ ಪದಗಳನ್ನೂ ಅನುವಾದಿಸಿ ಅಥವಾ ಸಂವಾದಿ ಪದಗಳನ್ನು ರೂಪಿಸುವ ಈ ಪ್ರಕ್ರಿಯೆಯನ್ನು ಇಂಗ್ಲಿಷಿನಲ್ಲಿ ಲೋಕಲೈಸೇಶನ್ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಈ ಪ್ರಕ್ರಿಯೆಯನ್ನು ದೇಸೀಕರಣ ಎಂದು ಹೇಳಬಹುದು.
ದೇಸೀಕರಣ ಎಂದರೆ ಕೇವಲ ಇಂಗ್ಲಿಷಿನಿಂದ ಕನ್ನಡಕ್ಕೆ ಸಮಾನ ಪದಗಳನ್ನು ತರುವುದಲ್ಲ; ಅವುಗಳ ಬಳಕೆಯ ಸಂದರ್ಭ - ಸನ್ನಿವೇಶಗಳನ್ನು ಅರಿತು ಅದಕ್ಕೆ ತಕ್ಕಂತೆ, ಜನರು ಸುಲಭವಾಗಿ ಅರಿಯಬಹುದಾದ ಪದ – ಪದಪುಂಜ ಅಥವಾ ವಾಕ್ಯಗಳನ್ನು ಬಳಸುವುದು. ಇದಕ್ಕೆ ಕನ್ನಡ ಪದಗಳ ಬಳಕೆಯ ಕುರಿತು ಆಳವಾದ ಅರಿವೂ ಇರಬೇಕು;ಹೊಸಪದಗಳುಹೊಸಸನ್ನಿವೇಶಗಳಲ್ಲಿ ಬಳಕೆಯಾದಾಗ ವಿವಿಧ ಅರ್ಥಗಳನ್ನು ಕೊಡದೆಯೇ ಒಂದೇ ಅರ್ಥವನ್ನು ಬಿಂಬಿಸುವ ಬಗ್ಗೆ ಎಚ್ಚರಿಕೆಯೂ ಇರಬೇಕಾಗುತ್ತದೆ.
ಕೇಂದ್ರ ಸರ್ಕಾರದಿಂದ ರೂಪಿತವಾದ ಇ–ಕಚೇರಿ ಎಂಬ ಸರ್ಕಾರದ ಕಡತ ನಿರ್ವಹಣೆಯ ತಂತ್ರಾಂಶವನ್ನು ಕರ್ನಾಟಕ ಸರ್ಕಾರವೂ ಅಳವಡಿಸಿಕೊಂಡಿದೆ. 2019ರ ಕೊನೆಯಲ್ಲಿ ಇ–ಕಚೇರಿಯಲ್ಲಿ ಬಳಸುವ ಇಂಗ್ಲಿಷಿನ ಪದಗಳಿಗೆ ಸಂವಾದಿಯಾಗಿ ಹಲವು ಕನ್ನಡ ಪದಗಳನ್ನು ಅಧಿಕೃತವಾಗಿ ಕೊಡಲಾಗಿದೆ. ಈ ವರ್ಷ ಅದರ ಮುಂದುವರಿಕೆಯಾಗಿ ಇನ್ನೂ ನೂರಾರು ಪದ ಹಾಗೂ ಪದಪುಂಜಗಳನ್ನು ರಚಿಸಿ ಕೊಡಲಾಗಿದೆ.
ಇದು ಒಂದು ಉದಾಹರಣೆ ಮಾತ್ರ. ಸರ್ಕಾರದಲ್ಲಿ ಈಗ ರೂಪುಗೊಳ್ಳುತ್ತಿರುವ ವಿವಿಧ ತಂತ್ರಾಂಶಗಳನ್ನು ಗಮನಕ್ಕೆ ತೆಗೆದುಕೊಂಡರೆ ಈ ಕಾರ್ಯವು ತುಂಬಾ ದೊಡ್ಡದು ಎಂಬುದು ಕಲ್ಪನೆಗೆ ಸಿಗುತ್ತದೆ. ಇದನ್ನೆಲ್ಲ ಮನಗಂಡೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಇ–ಆಡಳಿತಇಲಾಖೆಗಳು ಒಟ್ಟಾಗಿ ದೇಸೀಕರಣಕ್ಕಾಗಿಯೇ ಇ–ಆಡಳಿತಪದರಚನಾ ಸಮಿತಿಯನ್ನು ರಚಿಸಿವೆ.
ಇ–ಆಡಳಿತದಲ್ಲಿ ಇರುವ ಇ–ಕನ್ನಡ (ಕನ್ನಡ ಕಂಪ್ಯೂಟಿಂಗ್) ಯೋಜನೆಯು ದೇಸೀಕರಣದ ತಾಂತ್ರಿಕ ಅಗತ್ಯಗಳನ್ನು ಪೂರೈಸುವ ಕಚೇರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಮಿತಿಯಲ್ಲದೆ ಸಾರ್ವಜನಿಕರಿಗೆ ನಿಘಂಟು –ಪದಕೋಶಗಳನ್ನು ಮುಕ್ತವಾಗಿ ಕೊಡುವಮತ್ತುದೇಸೀಕರಣದ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಪದಕಣಜ ಮತ್ತುದೇಸೀಕರಣ ಸಮಿತಿಯನ್ನೂ ರಚಿಸಲಾಗಿದೆ. ಮೊದಲ ಸಮಿತಿಯು ಇ–ಆಡಳಿತದಹೊಸಮೂಲ ಪದಗಳಿಗೆ ಕನ್ನಡ ಪದಗಳನ್ನು ಹುಡುಕಿಕೊಟ್ಟರೆ ಎರಡನೆಯ ಸಮಿತಿಯು ಪದಪುಂಜಮತ್ತುವಾಕ್ಯಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತನ್ನ ತಜ್ಞ ನೆರವನ್ನು ನೀಡಲಿದೆ.
ಹೀಗೆ ಆಡಳಿತದಲ್ಲಿ, ಅದರಲ್ಲೂ ಮಾಹಿತಿ ತಂತ್ರಜ್ಞಾನಯುಕ್ತ ಆಡಳಿತದಲ್ಲಿ ಕನ್ನಡವು ಸಂಪೂರ್ಣವಾಗಿ ಬಳಕೆಯಾಗುವ ದೃಷ್ಟಿಯಿಂದ ಪದಕಣಜ ಎಂಬ ನಿಘಂಟು–ಪದಕೋಶಗಳ ಜಾಲತಾಣ ವೇದಿಕೆಯನ್ನು ಇ–ಕನ್ನಡ ಯೋಜನೆಯು ರೂಪಿಸಿದೆ. ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿರುವ ಈ ಪದಕಣಜ ಪುಟದಲ್ಲಿಇ–ಆಡಳಿತ, ಆಡಳಿತದ ಕನ್ನಡ ಪದಗಳನ್ನು ಸಮಗ್ರವಾಗಿ ಒದಗಿಸಲಾಗುವುದು. ಅದಲ್ಲದೇ ಸಾರ್ವಜನಿಕರಿಗಾಗಿ ಕನ್ನಡಕ್ಕೆ ಸಂಬಂಧಿಸಿದ ಪ್ರಮುಖ ನಿಘಂಟುಗಳನ್ನು, ಪದಕೋಶಗಳನ್ನು ಒದಗಿಸಲಾಗುವುದು. ಮುಂದೆ ಇದನ್ನು ಒಂದು ಸ್ಮಾರ್ಟ್‌ಫೋನ್ ಆ್ಯಪ್ ಆಗಿಯೂ ನೀಡುವ ಪ್ರಸ್ತಾವ ಇದೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ–ಇಂಗ್ಲಿಷ್ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ಕನ್ನಡ ನಿಘಂಟು, ವಿ. ಕೃಷ್ಣ ಅವರು ರೂಪಿಸಿದ ಬೃಹತ್ ಕನ್ನಡ–ಇಂಗ್ಲಿಷ್ ನಿಘಂಟು, ವಿವಿಧ ಆಡಳಿತ ಪದಕೋಶಗಳು, ವಿವಿಧ ಇಲಾಖಾ ಕೋಶಗಳು, ಪಾರಿಭಾಷಿಕ ಪದಕೋಶಗಳು - ಹೀಗೆ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಗುರಿ ಇಟ್ಟುಕೊಳ್ಳಲಾಗಿದೆ. ಕೇವಲ ಆಡಳಿತವಷ್ಟೇ ಅಲ್ಲ, ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಸಂಶೋಧಕರು, ಅನುವಾದಕರು – ಎಲ್ಲರೂ ಕನ್ನಡವನ್ನು ಇನ್ನಷ್ಟು ವ್ಯಾಪಕವಾಗಿ ಅರಿತು ಬಳಸುವುದಕ್ಕೆ ಈ ಪದಕಣಜ ಜಾಲತಾಣವು ನೆರವಾಗಲಿದೆ.
ಇ–ಆಡಳಿತದಲ್ಲಿ ಕನ್ನಡವನ್ನು ಜಾರಿಗೊಳಿಸಬೇಕೆಂದರೆ ತಂತ್ರಾಂಶಗಳು ರೂಪುಗೊಳ್ಳುವ ಮೂಲ ವೇದಿಕೆಯಲ್ಲೇ ಕನ್ನಡವನ್ನು ಅಳವಡಿಸಿಕೊಳ್ಳುವ ಬಗ್ಗೆ ಯೋಜಿಸುವುದು ಮುಖ್ಯ. ರಾಜ್ಯ ಸರ್ಕಾರದಿಂದಲೇ ಸ್ಥಾಪಿತವಾದ ತಂತ್ರಾಂಶ ಅಭಿವೃದ್ಧಿ ಸಂಸ್ಥೆ ಸೆಂಟರ್‌ಫಾರ್‌ಸ್ಮಾರ್ಟ್ ಗವರ್ನೆನ್ಸ್‌ನಲ್ಲಿ (ಸಿಎಸ್‌ಜಿ) ಮೇಲೆ ಹೇಳಿದ ದೇಸೀಕರಣ ಯೋಜನೆಯನ್ನು ಮೂಲದಲ್ಲೇ ಅಳವಡಿಸಿಕೊಂಡರೆ ಉತ್ತಮ. ಈ ಪ್ರಯತ್ನವೂ ನಡೆದಿದೆ.
ಕನ್ನಡದಲ್ಲೇ ವ್ಯವಹರಿಸಬೇಕು, ಬೇಗ ಬೇಗ ವ್ಯವಹರಿಸಬೇಕು ಎಂದಾಗ ಕನ್ನಡ ಉಕ್ತಲೇಖನದಲ್ಲೂ ತಂತ್ರಾಂಶ ಅಳವಡಿಕೆ ಮಾಡಿಕೊಳ್ಳುವ ಅಗತ್ಯ ತಲೆದೋರುತ್ತದೆ. ಇದು ಕೃತಕ ಬುದ್ಧಿಮತ್ತೆಯನ್ನು ಬೇಡುವ ತಂತ್ರಾಂಶವಾಗಿದೆ. ಕರ್ನಾಟಕ ಸರ್ಕಾರದಿಂದ ಬೆಂಬಲ ಪಡೆದ ಕನ್ನಡಿಗರೇ ಸ್ಥಾಪಿಸಿದ ಬೆಂಗಳೂರಿನ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಕನ್ನಡದಲ್ಲಿ ಆಡುವ ಮಾತನ್ನು ತಕ್ಷಣವೇ ಅತಿ ಹೆಚ್ಚು ನಿಖರತೆಯ ಪ್ರಮಾಣದಲ್ಲಿ ಪಠ್ಯವಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ರೂಪಿಸಿದೆ. ರಾಜ್ಯ ಸರ್ಕಾರವು ಈ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದಕ್ಕೆ ಮುಂದಾಗಿದೆ. ಕನ್ನಡ ಅಕ್ಷರ ಜೋಡಣೆ ಮಾಡಲು ಬಾರದ, ಕನ್ನಡ ಭಾಷೆ ಬರುವವರೂ ಈ ತಂತ್ರಾಂಶವನ್ನು ಬಳಸಿ ಬಹುಬೇಗ ಕನ್ನಡದಲ್ಲಿ ಕಡತಗಳನ್ನು ರೂಪಿಸಬಹುದು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕ ಸಹಾಯವಾಣಿಗಳಿವೆ. ಈ ಸಹಾಯವಾಣಿಗಳ ಜೊತೆಗೇ ಕನ್ನಡ ಮಾತನ್ನು ಕೇಳಿ ಅರ್ಥ ಮಾಡಿಕೊಳ್ಳುವ, ಕನ್ನಡದ ವಾಕ್ಯಗಳನ್ನು ಓದಿ ಅರ್ಥ ಮಾಡಿಕೊಳ್ಳುವಮತ್ತುಸರಿಯಾದ ಉತ್ತರವನ್ನು ನೀಡುವ ತಂತ್ರಾಂಶಗಳ ಬಗ್ಗೆಯೂ ಈಗ ಪ್ರಯೋಗಗಳು ನಡೆದಿವೆ. ಚಾಟ್‌ಬಾಟ್ ಎಂದು ಕರೆಯುವ ಈ ತಂತ್ರಾಂಶಗಳನ್ನು ಸರ್ಕಾರವು ಗಮನಾರ್ಹ ಪ್ರಮಾಣದಲ್ಲಿ ಇನ್ನಷ್ಟೇ ಅಳವಡಿಸಿಕೊಳ್ಳಬೇಕಿದೆ.
ಇನ್ನು ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳು ತಂತಮ್ಮ ಸೇವೆಗಳನ್ನು ನೀಡಲು ನೂರಾರು ಸ್ಮಾರ್ಟ್‌ಫೋನ್ ಆ್ಯಪ್‌ಗಳನ್ನು ರೂಪಿಸಿವೆ. ಈ ಆ್ಯಪ್‌ಗಳಲ್ಲಿ ಕನ್ನಡದ ಬಳಕೆ ಕಡ್ಡಾಯವಾಗಿರಬೇಕು. ಇಲಾಖಾ ಜಾಲತಾಣಗಳಲ್ಲೂ ಕನ್ನಡ ಕಡ್ಡಾಯವಾಗಿ ಮೊದಲ ಆಯ್ಕೆಯ ಭಾಷೆ ಆಗಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಲಾಖಾ ಸಭೆಗಳನ್ನು ನಡೆಸಿ ಕನ್ನಡದ ಜಾರಿಗೆ ನಿರಂತರ ಯತ್ನಿಸುತ್ತಿದೆ. ಈ ಲೇಖಕ ಎರಡು ವರ್ಷಗಳ ಹಿಂದೆ ಜಾಲತಾಣಗಳ ಏಕರೂಪತೆ, ಕನ್ನಡದ ಬಳಕೆಮತ್ತುಸುಲಭ ಗ್ರಾಹ್ಯತೆ ಕುರಿತು ಸಲ್ಲಿಸಿದ ವರದಿಯನ್ನು ಸರ್ಕಾರವು ಅಳವಡಿಸಿಕೊಂಡು ಕನ್ನಡವನ್ನು ಬಳಸುವ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ.
ಪ್ರತಿದಿನವೂ ಸಾವಿರಾರು ದಾಖಲೆಗಳು ರೂಪುಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದವನ್ನು ಯಾಂತ್ರೀಕರಣ ಮಾಡುವುದೂ ಒಂದು ಉತ್ತಮ ಪರ್ಯಾಯವಾಗಿದೆ. ಯಂತ್ರಾನುವಾದವು ಎಷ್ಟೇ ನಿಖರ ಎಂದು ಹೇಳಿದರೂ, ಅದನ್ನು ವಸ್ತುಶಃ ಗಮನಿಸಿ ತಿದ್ದಬೇಕು ಎಂಬುದೇನೋ ನಿಜ. ಆದರೆ ಯಂತ್ರಾನುವಾದವನ್ನು ಬಳಸಿ ಸಾಕಷ್ಟು ಪ್ರಮಾಣದಲ್ಲಿ ಕನ್ನಡ ಅನುವಾದವನ್ನು ಮಾಡಬಹುದು ಎಂಬುದೂ ಅಷ್ಟೇ ನಿಜ. ಈ ತಂತ್ರಜ್ಞಾನ ಈಗಿನ್ನೂ ಶೈಶವಾವಸ್ಥೆಯಲ್ಲಿದೆ.
ಯಂತ್ರಾನುವಾದವೂ ಸೇರಿದಂತೆ, ಕನ್ನಡ ವ್ಯಾಕರಣ ಪರೀಕ್ಷಕ, ಕನ್ನಡ ಪದಗಳನ್ನು ಒಡೆಯುವ ತಂತ್ರಾಂಶ (ಹೈಫೇನೇಶನ್), ಕನ್ನಡ ಪಠ್ಯದ ಚಿತ್ರಗಳನ್ನು ಪಠ್ಯವಾಗಿ ಪರಿವರ್ತಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಶನ್ (ಓಸಿಆರ್) ತಂತ್ರಾಂಶ, ಕನ್ನಡ ಫಾಂಟ್‌ಗಳು, ಕನ್ನಡದಲ್ಲಿ ಇ–ಪುಸ್ತಕಗಳನ್ನು ಪ್ರಕಟಿಸುವುದು, ಕನ್ನಡದ ಸರ್ಚ್ ಇಂಜಿನ್ - ಈ ಮುಂತಾದ ತಂತ್ರಾಂಶಗಳ ಮಾನದಂಡಗಳನ್ನು ರೂಪಿಸಲು ಇ–ಆಡಳಿತವು ಮುಂದಾಗಿರುವುದು ಈಗಿನ ಅತ್ಯುತ್ತಮ ಬೆಳವಣಿಗೆ. ಹೀಗೆ ಕನ್ನಡ ಅನುಷ್ಠಾನವೆಂದರೆ ಕೇವಲ ಆದೇಶಗಳನ್ನು ಜಾರಿ ಮಾಡುವುದಲ್ಲ, ಜಾರಿಗೆ ಬೇಕಾದ ಸಾಧನ – ಸಲಕರಣೆಗಳನ್ನು ರೂಪಿಸಿ ನೆರವಾಗುವುದು ಎಂಬ ಸಂದೇಶವನ್ನು ನೀಡಲಾಗಿದೆ. ಸಮುದಾಯದಲ್ಲಿರುವ ಕನ್ನಡ ಮಾಹಿತಿ ತಂತ್ರಜ್ಞಾನ ಅಭಿಯಾನಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಕನ್ನಡ ಕೇಂದ್ರಿತ ತಂತ್ರಾಂಶಗಳನ್ನು ರೂಪಿಸುತ್ತಿರುವುದು ಸರ್ಕಾರದಹೊಸವಿಧಾಯಕ ಹೆಜ್ಜೆಯಾಗಿದೆ.
ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಂತ್ರಜ್ಞಾನದಲ್ಲಿ ಅನುಸರಿಸಬೇಕಾದ ಕ್ರಮಗಳಮತ್ತುಮಾನದಂಡಗಳ ಬಗ್ಗೆಯೂ ಕರ್ನಾಟಕ ಸರ್ಕಾರವು ಒಂದು ಆದೇಶವನ್ನು ಹೊರಡಿಸಿದೆ. ಇ–ಆಡಳಿತದಲ್ಲಿ ಕನ್ನಡದ ಜಾರಿಯಾಗುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ದೇಸೀಕರಣಮತ್ತುಭಾಷಾ ತಂತ್ರಜ್ಞಾನ ವೇದಿಕೆಗಳಲ್ಲೂ ಕರ್ನಾಟಕ ಸರ್ಕಾರವು ಭಾಗವಹಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯುನಿಕೋಡ್ ಕನ್ಸಾರ್ಟಿಯಂನಲ್ಲಿ ರಾಜ್ಯ ಸರ್ಕಾರದ ಸದಸ್ಯತ್ವ ಹೊಂದುವ ಪ್ರಸ್ತಾಪವೂ ಇದೆ.
ಹೀಗೆ ಇ–ಆಡಳಿತದಲ್ಲಿ ಇಂಗ್ಲಿಷಿನ ಅನಿವಾರ್ಯವನ್ನು ಮೀರಿ ಕನ್ನಡವನ್ನು ಜಾರಿಗೊಳಿಸುವ ಯತ್ನಗಳು ಈ ದಿನಗಳಲ್ಲಿ ಆರಂಭವಾಗಿವೆ. ಇಂತಹ ಯತ್ನಗಳು ಹೆಚ್ಚಾಗಿ ರಾಜ್ಯ ಸರ್ಕಾರದ ವಿವಿಧ ಹಂತಗಳಲ್ಲಿಮತ್ತುವಿಶೇಷವಾಗಿ ಇ–ಆಡಳಿತದಲ್ಲಿ ಕನ್ನಡವು ಸಂಪೂರ್ಣವಾಗಿ ಜಾರಿಯಾಗಬೇಕು. ಹಾಗಾದಾಗಲೇ ಗ್ರಾಮೀಣ ಪ್ರದೇಶಗಳಲ್ಲಿರುವ ಕೋಟಿ ಕೋಡಿ ಕನ್ನಡಿಗರೂ ಸರ್ಕಾರದ ಸೇವೆಗಳನ್ನು ಪಡೆಯುವ ಪ್ರಮಾಣ ಹೆಚ್ಚಾಗುತ್ತದೆ. ನಾಡಿನ ಅಭ್ಯುದಯವು ವೇಗ ಪಡೆಯುತ್ತದೆ.
ಇ-ಆಡಳಿತದಲ್ಲಿ ಕನ್ನಡ ಎಂದರೆ ಕೇವಲಕೆಲವುಪದಗಳಲ್ಲ, ಪದಗುಚ್ಛಗಳಲ್ಲ, ವಾಕ್ಯಗಳೂ ಅಲ್ಲ. ಡಿಜಿಟಲ್ ಪರದೆಗಳ ಮೇಲೆ ಅಚ್ಚಗನ್ನಡದಲ್ಲಿ, ಸುಲಲಿತವಾಗಿ, ಕನ್ನಡದ ಕಂಪನ್ನು ಬೀರುತ್ತ ವ್ಯವಹರಿಸುವುದು. ಕಾಗದದ ಯುಗದಿಂದ ಕಂಪ್ಯೂಟರ್, ಮೊಬೈಲ್ ಪರದೆಗಳ ಯುಗಕ್ಕೆ ಸ್ಥಿತ್ಯಂತರವಾಗುತ್ತಿರುವ ಈ ಮಹತ್ವದ ಕಾಲಘಟ್ಟದಲ್ಲಿ ಕನ್ನಡದ ಬಳಕೆಯನ್ನುಹೊಸಮಜಲಿಗೆ ಒಯ್ಯುವ ದೊಡ್ಡ ಗುರಿಯನ್ನು ಇಟ್ಟುಕೊಂಡು ಮುನ್ನಡೆಯಬೇಕಾಗಿದೆ. ನವಪೀಳಿಗೆಯಲ್ಲಿ ಕನ್ನಡದ ಓದು, ಬರಹವನ್ನು ಹೆಚ್ಚಿಸುವ ಕೆಲಸವನ್ನೂ ಜೊತೆಜೊತೆಗೇ ಮಾಡಬೇಕಿದೆ. ಇ-ಆಡಳಿತದಲ್ಲಿ ಮಾತ್ರ ಕನ್ನಡದ ಜಾರಿಯಾಗಿ, ಉಳಿದಂತೆ ಸಮಾಜದಲ್ಲೇ ಕನ್ನಡದ ಬಳಕೆ ಕಡಿಮೆಯಾದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ. ಆದ್ದರಿಂದ ನಾಡಿನ ಪ್ರಜ್ಞಾವಂತರು, ಆಡಳಿತ ನೀತಿ ನಿರೂಪಕರು, ಜನಪ್ರತಿನಿಧಿಗಳು - ಎಲ್ಲರೂ ಒಗ್ಗೂಡಿ ಕನ್ನಡವನ್ನು ಡಿಜಿಟಲ್ ಯುಗದ ಹೆಬ್ಬಾಗಿಲಿಗೆ ಒಯ್ಯುವ ಕಾಯಕದಲ್ಲಿ ತೊಡಗಬೇಕಿದೆ.
ಲೇಖಕ: ಮುಖ್ಯಮಂತ್ರಿಯವರಇ–ಆಡಳಿತಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.