ದೈನಂದಿನ ಚಟುವಟಿಕೆಗಳನ್ನು ಪ್ಲಾಸ್ಟಿಕ್ ಇಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ. ಆದರೂ ಪ್ರಯತ್ನದ ಹಾದಿಯಲ್ಲಿ ತರಕಾರಿಗೆ ಕಡ್ಡಾಯ ಕೈಚೀಲ ಒಯ್ಯುವ ಅಭ್ಯಾಸ ಮಾಡಿಕೊಂಡೆವು. ಅನಗತ್ಯ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವಲ್ಲಿ ಈ ಕೈಚೀಲದ ರೂಡಿ ‘ಪರವಾಗಿಲ್ವೆ. ನಾವೂ ಪ್ಲಾಸ್ಟಿಕ್ ಕವರ್ ಇಲ್ಲದೆಯೂ ಎಷ್ಟೊಂದು ಸಣ್ಣಪುಟ್ಟ ಕೆಲಸಗಳನ್ನೆಲ್ಲ ನಿಭಾಯಿಸಬಹುದಲ್ಲವಾ’ ಎನಿಸಲು ಶುರುವಾಯಿತು.
ನಮ್ಮ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಕೆಲಸ ಮನೆಯಿಂದ ಕೈತೋಟಕ್ಕೂ ಪಸರಿಸಿತು. ಕೈತೋಟದಲ್ಲಿ ಸಸಿ ತಯಾರಿಸಲು ತೆಂಗಿನ ಚಿಪ್ಪನ್ನು(ಗೆರಟೆ) ಬಳಸಿದೆ. ಆದರೆ, ಈ ಚಿಪ್ಪಿನಲ್ಲಿ ತರಕಾರಿ ಸಸಿ ಬೆಳೆಸಲು ಸಾಧ್ಯವಾಯಿತೇ ಹೊರತು, ದೊಡ್ಡ ದೊಡ್ಡ ಸಸಿಗಳನ್ನು ಬೆಳೆಸಲಾಗುತ್ತಿರಲಿಲ್ಲ. ಹೀಗಾಗಿ, ಮನೆ ಬಳಕೆಯ ದಪ್ಪ ಕವರ್ ಸಂಗ್ರಹಿಸಿ ಸಸಿ ತಯಾರಿಸಲು ಬಳಸುತ್ತಿದ್ದೆ. ‘ಇದಕ್ಕೂ ಏನಾದರೂ ಪರಿಸರ ಸ್ನೇಹಿ ವಿಧಾನ ಇರಬಾರದೇ’ ಎನ್ನಿಸುತ್ತಿತ್ತು.
ಹೀಗೆ ಯೋಚಿಸುವಾಗ, ತಿಂಗಳ ಹಿಂದೆ ‘ಅಡಿಕೆ ಪತ್ರಿಕೆ ಓದುಗ ಬಳಗ’ದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸದ್ಯರೊಬ್ಬರು ಹಾಕಿದ್ದ ಅಡಿಕೆ ಹಾಳೆಯಿಂದ ನರ್ಸರಿ ಬ್ಯಾಗ್ (ಗ್ರೋ ಬ್ಯಾಗ್) ತಯಾರಿಸುವ ವಿಡಿಯೊವೊಂದು ನನ್ನ ಸಮಸ್ಯೆಗೆ ಪರಿಹಾರ ನೀಡಿತು. ಆ ವಿಡಿಯೊದಲ್ಲಿ ಸಂಭಾಷಣೆ ಬೇರೆ ಭಾಷೆಯಲ್ಲಿತ್ತು. ಭಾಷೆ ಬಾರದಿದ್ದರೂ ಭಾವ ಅರ್ಥವಾಯಿತು. ಹೇಗೂ ನಮ್ಮ ಅಡಿಕೆ ತೋಟದಲ್ಲಿ ಹಾಳೆಗಳಿದ್ದವು. ನಾನು ಮತ್ತು ನನ್ನ ಕಿರಿಯ ಮಗ ಹಾಳೆಗಳನ್ನು ತಂದು ಗ್ರೋಬ್ಯಾಗ್ ತಯಾರಿಸಲು ಶುರು ಮಾಡಿದೆವು.
ತಯಾರಿಸಿದ್ದು ಹೀಗೆ
ಮೊದಲು ಎರಡು ಅಡಿಕೆ ಹಾಳೆಯನ್ನು ತಂದಿಟ್ಟುಕೊಂಡೆವು. ಇನ್ನೊಂದು ಅಡಿಕೆ ಹಾಳೆಯನ್ನು ಸೀಳಿ ದಪ್ಪ ದಾರದ ಗಾತ್ರದ ಎಳೆಗಳನ್ನಾಗಿ ಮಾಡಿಟ್ಟುಕೊಂಡೆವು. ಹಸಿ ಅಡಿಕೆ ಹಾಳೆಯಾದರೆ ಈ ಎಲ್ಲ ಕೆಲಸಗಳು ಸರಳ. ಮಡಿಸುವುದು ಸುಲಭ. ಸ್ವಲ್ಪ ಒಣಗಿದ್ದರೆ, ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ, ಮುಂದಿನ ಹಂತಕ್ಕೆ ಹೋಗಬೇಕು.
ಸಿದ್ಧವಾದ ಅಡಿಕೆ ಹಾಳೆಗಳನ್ನು ‘+’ ಆಕಾರದಲ್ಲಿ ಒಂದರ ಮೇಲೊಂದು ಇಟ್ಟೆವು. ನಂತರ ನಾಲ್ಕು ತುದಿಗಳನ್ನು ಮಡಚಿದೆವು. ಮೊದಲೇ ಸಿದ್ಧ ಮಾಡಿಕೊಂಡಿದ್ದ ಅಡಿಕೆ ಹಾಳೆಯ ದಾರಗಳನ್ನು ತೆಗೆದುಕೊಂಡು, ಹಾಳೆಯ ತುದಿಗಳನ್ನು ಕಟ್ಟಿದೆವು. ಗ್ರೋಬ್ಯಾಗ್ ಸಿದ್ಧವಾಯಿತು.
ಆದರೆ ಅಡಿಕೆ ಹಾಳೆಯ ಅಗಲ ಜಾಸ್ತಿಯಾಯ್ತು, ಗ್ರೋ ಬ್ಯಾಗ್ ಎತ್ತರ ಕಡಿಮೆಯಾಯ್ತು. ಇದರಿಂದ ಗಿಡಗಳು ಬೇರು ಬಿಡಲು ಸಮಸ್ಯೆಯಾಗಬಹುದು ಎನ್ನಿಸಿತು. ತುಂಬ ದಿನ ಇಡಲು ಆಗುವುದಿಲ್ಲ. ದೊಡ್ಡ ಗಿಡ ಹಾಕಲು ಆಗುವುದಿಲ್ಲ ಎನ್ನಿಸಿತು. ಹಾಗಾಗಿ ಬ್ಯಾಗ್ ಎತ್ತರ ಮಾಡಬೇಕು ಎನ್ನಿಸಿತು. ಆಗ, ಒಂದು ಹಾಳೆಯನ್ನು ಉದ್ದಕ್ಕೆ ಸೀಳಿ ಎರಡು ಮಾಡಿದೆ. ಅದರಿಂದ ಬೇರೆ ಗ್ರೂ ಬ್ಯಾಗ್ ಮಾಡಿದೆವು. ಎತ್ತರ ಹೆಚ್ಚಾಯಿತು.
ನಮ್ಮ ಅನುಕೂಲಕ್ಕೆ ತಕ್ಕಂತೆ ಗ್ರೋಬ್ಯಾಗ್ ರೆಡಿಯಾಯ್ತು. ಇದಕ್ಕೆ ಗೊಬ್ಬರ ಮಿಶ್ರಣ ಮಾಡಿದ ಮಣ್ಣನ್ನು ತುಂಬಿ, ಮೊದಲು ದೊಡ್ಡ ಪ್ಲಾಸ್ಟಿಕ್ ಕವರ್‌ನಲ್ಲಿ ಬೆಳೆಸಿದ್ದ ಎಲ್ಲ ಗಿಡಗಳನ್ನು ಒಂದೆರಡು ಒಂದೆರಡು ಗಿಡಗಳನ್ನು ಹಾಳೆಯ ಗ್ರೋಬ್ಯಾಗ್‌ಗೆ ವರ್ಗಾಯಿಸಿದೆವು. ಗಿಡ ಚೆನ್ನಾಗಿಯೇ ಬಂದಿತು. ಅಡಿಕೆಹಾಳೆಯಲ್ಲಿ ಗಿಡ ಬೆಳೆಸಬಹುದೆಂದು ಮನವರಿಕೆಯಾಯ್ತು.
ನಂತರದ ಪ್ರಯತ್ನದಲ್ಲಿ ಹೊಸ ಗಿಡಗಳು, ಹೂವಿನ ಕಡ್ಡಿಗಳು, ಬೇರುಗಳನ್ನು ನೆಟ್ಟೆವು. ಅವೂ ಸಹ ಚಿಗುರೊಡೆದವು. ಹೀಗೆ ಚಿಗುರೊಡೆದವನ್ನು ಗುಂಡಿತೋಡಿ ನೇರವಾಗಿ ನೆಲದಲ್ಲಿ ಇಟ್ಟರೆ ಆಯಿತು. ಹಾಳೆ ಕೊಳೆಯುವುದರಿಂದ ಪ್ಲಾಸ್ಟಿಕ್ ಕವರ್‌ನಂತೆ ತೆಗೆದು ನೆಡಬೇಕಾದ ಅಗತ್ಯವಿಲ್ಲ. ಹೀಗೆ ಖರ್ಚಿಲ್ಲದ ಅಡಿಕೆಹಾಳೆಯ ಗ್ರೋಬ್ಯಾಗ್ ಕಲ್ಪನೆಯನ್ನು ಮೆಚ್ಚಬೇಕಾದ್ದೆ.
ಇತಿ–ಮಿತಿಗಳ ನಡುವೆ..
ಅಡಿಕೆ ಹಾಳೆಯ ಗ್ರೋಬ್ಯಾಗ್‌ಗೆ ತನ್ನದೇ ಆದ ಮಿತಿಗಳೂ ಇವೆ. ಪ್ರತಿದಿನ ಗಿಡಗಳಿಗೆ ನೀರು ಹಾಕುವುದರಿಂದ ಪ್ಲಾಸ್ಟಿಕ್‌ನಂತೆ ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಬ್ಯಾಗ್ ಮಾಡುವುದಕ್ಕಾಗಿ ಬಳಸುವ ಹಾಳೆಯ ದಾರವೂ ಒಮ್ಮೊಮ್ಮೆ ತುಂಡಾಗಿಬಿಡುತ್ತದೆ.
ಜತೆಗೆ, ಈ ಬ್ಯಾಗ್ ಅನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುವಾಗ ಎಚ್ಚರಿಕೆಯಿಂದ ತಳದಿಂದ ಬಿಗಿಯಾಗಿ ಹಿಡಿಯಬೇಕು. ಇಲ್ಲದಿದ್ದರೆ ಹರಿದು ಹೋಗುವ ಸಂಭವವಿದೆ.
ಗ್ರೋಬ್ಯಾಗ್ ತಯಾರಿಸಲು ಹಸಿಯಾದ ಹಾಳೆಯೇ ಬೇಕು. ಬ್ಯಾಗ್ ತಯಾರಿಸಿದ ತಕ್ಷಣವೇ ಗಿಡ ನೆಡಬೇಕು. ಇಲ್ಲವಾದಲ್ಲಿ ಹಾಳೆ ಒಣಗಿ ಅದರ ಆಕಾರವೇ ಬದಲಾಗಿ ಬಿಡುತ್ತದೆ.
ಇವೆಲ್ಲದರ ನಡುವೆಯೂ ಕೈತೋಟಕ್ಕೆ ಸಸಿ ಬೆಳೆಸುವವರು ಧಾರಾಳವಾಗಿ ಅಡಿಕೆ ಹಾಳೆಯ ಗ್ರೋಬ್ಯಾಗ್ ಬಳಸಬಹುದು. ನನ್ನ ಕೈತೋಟದ ನರ್ಸರಿಗೆ ಈಗ ಪ್ಲಾಸ್ಟಿಕ್ ಕವರ್‌ನ ಅಗತ್ಯವಿಲ್ಲ. ಬ್ಯಾಗ್‌ನಿಂದ ಸ್ಥಳಾಂತರಿಸುವಾಗ ಗಿಡಕ್ಕೆ ಹಾನಿಯಾಗುವುದೆಂಬ ಚಿಂತೆಯಿಲ್ಲ.
ಚಿತ್ರಗಳು: ಲೇಖಕರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.