ಕೋಲೆಬಸವ, ರಾಟೆ, ಒಕ್ಕಣೆಯ ಕಣ, ಹಾಲು ಹಿಂಡುವಿಕೆ, ಬುಡಬುಡಕೆಯವರು, ಶಕುನ ಸಾರುವ ಹಕ್ಕಿಗಳು, ಧ್ಯಾನ ಉಳುಮೆ ಮಾಡುತ್ತಿರುವ ರೈತ ಮತ್ತು ಎತ್ತುಗಳು, ಕುಂಬಾರಿಕೆ, ಕುಲುಮೆ, ವೀರಗಾಸೆ, ಯಕ್ಷಿಣಿ, ಜಗ್ಗ ಲಕ್ಕಿ ಡೊಳ್ಳುಕುಣಿತ, ರಾಕ್ಷಸಿ ಕಹಳೆ, ಕರಗ, ಪರಂಪರೆಯ ಗ್ರಾಮೀಣ ವಸ್ತುಸಂಗ್ರಹಾಲಯ, ಅಪರಿಮಿತ ಪರಿಸರಸ್ನೇಹಿ ಈಜುಕೊಳ, ಬಕಾಸುರ ಇಂಗು ಗುಂಡಿಗಳು, ರೋಮನ್ ಆ್ಯಂಪಿ ಥಿಯೇಟರ್, ವಿವಿಧ ಸಸ್ಯ ಪ್ರಭೇದಗಳು, ದಂಡಕಾರಣ್ಯ, ಸಾಕುಪ್ರಾಣಿಗಳು ಮತ್ತು ಜೇನುಸಾಕಣೆ.. ಇವೆಲ್ಲ ಬೆಂಗಳೂರಿನಿಂದ ಕೇವಲ 20 ಕಿ.ಮೀ. ದೂರದಲ್ಲಿ ಬೆಂಗಳೂರು– ಮಾಗಡಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ‘ನೆಲದ ಸಿರಿ ಗ್ರಾಮೀಣ ಸೊಗಡಿನ ಶೈಕ್ಷಣಿಕ, ಸಾಂಸ್ಕೃತಿಕ, ಸಮಗ್ರ ಕೃಷಿ ಕೇಂದ್ರ’ ತೋಟದಲ್ಲಿ ನೋಡಬಹುದು.
ಮಧುಗಿರಿಯ ಹನುಮನಹಳ್ಳಿ ಮೂಲದ ಡಾ.ಗೋಪಾಲಕೃಷ್ಣ ಮತ್ತು ಅವರ ಪತ್ನಿ ವಂದನಾ ಅವರು ಒಟ್ಟೂ ಐದೂವರೆ ಎಕರೆಯಲ್ಲಿ ಈ ತೋಟವನ್ನು ನಿರ್ಮಿಸಿದ್ದಾರೆ. ಇದು ಮಾಗಡಿ ರಸ್ತೆಯಲ್ಲಿರುವ ಚೆನ್ನದಾಸಿ ಪಾಳ್ಯ, ತಾವೆಕೆರೆ ಬಳಿಯಿದೆ. ‘ನಗರ ವಾಸ ನರಕವಾಸವಾಗಿಬಿಟ್ಟಿದೆ. ನಗರಗಳಲ್ಲಿ ಕಲುಷಿತ ಗಾಳಿ, ನೀರು ಮತ್ತು ಆಹಾರ ಸೇವನೆಯಿಂದ ಮನುಷ್ಯನ ಜೀವನ ಯಾತನಾಮಯವಾಗಿದೆ. ಜೊತೆಗೆ ಒತ್ತಡದ ಜೀವನ ಆರೋಗ್ಯಕ್ಕೆ ಮಾರಕವಾಗಿದೆ. ಈ ಬಗ್ಗೆ ಅರಿವು ಮೂಡಿಸಲು ಇದನ್ನು ಸ್ಥಾಪಿಸಲಾಗಿದೆ’ ಎಂದು ಡಾ. ಗೋಪಾಲಕೃಷ್ಣ ಹೇಳುತ್ತಾರೆ
ತೋಟದ ವಿಶೇಷತೆಗಳು
ತೋಟವು ಚಿಕ್ಕದಾಗಿದ್ದರೂ ಪರಿಸರ ಅಧ್ಯಯನ, ಸಮಗ್ರ ಕೃಷಿ, ಸಾವಯವ ಬೇಸಾಯ, ಗ್ರಾಮೀಣ ವಸ್ತುಸಂಗ್ರಹಾಲಯ.. ಹೀಗೆ ಹತ್ತು ಹಲವಾರು ಉದ್ದೇಶಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವುದು ವಿಶೇಷ. ಇವೆಲ್ಲವುಗಳನ್ನು ಶಿಕ್ಷಣ ರೂಪದಲ್ಲಿ ಶಾಲಾ ಮಕ್ಕಳಿಗೆ ಹೇಳಿಕೊಡಲಾಗುತ್ತದೆ.
ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯ
ನಮ್ಮ ಪೂರ್ವಜರು ಬಳಸುತ್ತಿದ್ದ ಉಪಕರಣಗಳು, ಸಾಮಗ್ರಿಗಳು ಮತ್ತು ಆಚಾರಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಪರಂಪರಾ ಗ್ರಾಮೀಣ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಹಿಂದಿನ ಕಾಲದ ಹೊಲ ಉಳುವ ನೇಗಿಲು ಮತ್ತು ಎತ್ತು, ಟ್ರ್ಯಾಕ್ಟರ್ ಎಂಬ ಆಧುನಿಕ ಯಂತ್ರದಿಂದ ಕಣ್ಮರೆಯಾಗಿದೆ. ಹಾಗೆಯೇ ಅಡುಗೆ ಮಾಡಲು ಬಳಸುತ್ತಿದ್ದ ಮಣ್ಣಿನ ಬಾನಿ– ಮುಚ್ಚಳಿಕೆ, ಹೆಂಚು, ಹಿತ್ತಾಳೆ ಪಾತ್ರೆಗಳು ಅಲ್ಯೂಮೀನಿಯಂ, ಸ್ಟೀಲ್ ಪಾತ್ರೆಗಳಿಂದಾಗಿ ಹಿನ್ನೆಲೆಗೆ ಸರಿದಿವೆ. ನಮ್ಮ ಪೂರ್ವಿಕರು ಬಳಸುತ್ತಿದ್ದ ಪರಿಸರಸ್ನೇಹಿ ಉಪಕರಣಗಳನ್ನು ಒಂದೆಡೆ ಸೇರಿಸಿ ಮಕ್ಕಳಿಗೆ ಉಪಕರಣಗಳ ಹೆಸರು ಮತ್ತು ಅವುಗಳು ಯಾವ ಕೆಲಸಕ್ಕೆ ಬಳಕೆಯಾಗುತ್ತಿದ್ದವು ಎನ್ನುವ ವಿಚಾರವನ್ನು ಪರಿಚಯಿಸುವ ಉದ್ದೇಶ ಹೊಂದಿದೆ.
ಇಂಗು ಗುಂಡಿಗಳು
ನೆಲದ ಸಿರಿ ತೋಟದ ಪಕ್ಕದಲ್ಲಿ ಪೂರ್ವದಿಕ್ಕಿಗೆ ಹೊಂದಿಕೊಂಡು ಹಳ್ಳ ಹರಿಯುತ್ತದೆ. ಇಲ್ಲಿ ಸುಮಾರು 600 ಅಡಿ ಸಾಗಿದ ನಂತರ ಮತ್ತೊಂದು ತಡೆಗೋಡೆಯನ್ನು ನಿರ್ಮಿಸಲಾಗಿದೆ. ಇಂಗುಗುಂಡಿಯಲ್ಲಿ ಸುಮಾರು 18 ಲಕ್ಷ ಲೀಟರ್ ನೀರು ತುಂಬಿದ ನಂತರ ನೀರನ್ನು ಬಿಡಲಾಗುತ್ತದೆ. ನೆಲದ ಸಿರಿಯಲ್ಲಿ ಸುಮಾರು 25 ಲಕ್ಷ ಲೀಟರ್‌ಗಳಷ್ಟು ಮಳೆ ನೀರನ್ನು ಕೊಯ್ಲು ಮಾಡಲಾಗುತ್ತದೆ.
ನೆಲದ ಸಿರಿಯ ಇತರೆ ವಿಶೇಷಗಳು
ಶಾಂತಲಾ ನಾಟಕಶಾಲೆ: ಸುಮಾರು 600 ಚದರ ಅಡಿಗಳಷ್ಟು ವಿಸ್ತೀರ್ಣವುಳ್ಳ ನಾಟ್ಯ ಶಾಲೆಯನ್ನು ಕಡಪ ಕಲ್ಲಿನಲ್ಲಿ ತಯಾರು ಮಾಡಲಾಗಿದೆ.
ಸಾಲು ಪರಗೊಲಾಸ್: ಸುಮಾರು 150 ಅಡಿ ದೂರಕ್ಕೆ ಒಂದು ಕಾಲುದಾರಿ ನಿರ್ಮಿಸಿ ಅದಕ್ಕೆ 36 ಕಲ್ಲಿನ ಕಂಬಗಳು ಮತ್ತು 69 ಕಲ್ಲಿನ ತೊಲೆಗಳನ್ನು ಬಳಸಲಾಗಿದೆ. ಇದರ ಮೇಲೆ ಪಡವಲ, ಸೀಮೆಬದನೆ, ಚಪ್ಪರದವರೆಕಾಯಿ ಹೀಗೆ ಹಲವಾರು ತರಕಾರಿಗಳನ್ನು ಹಬ್ಬಿಸಲಾಗಿರುವುದು ವಿಶೇಷ.
ತೋಟದ ಮನೆ: ತೋಟದ ಮನೆಯನ್ನು ದೇಶಿ ಸಂಸ್ಕೃತಿಯನ್ನು ಹೊರಗಿನಿಂದ ಕಾಣುವ ಹಾಗೆ ವಿನ್ಯಾಸ ಮಾಡಲಾಗಿದ್ದು, 18 ಅಡಿಗಳ ಎತ್ತರದಲ್ಲಿ ಕಾಂಕ್ರೀಟಿನಿಂದ ಛಾವಣಿಯನ್ನು ನಿರ್ಮಿಸಿದ್ದಾರೆ.
ದಂಡಕಾರಣ್ಯ: ಬಗೆಬಗೆಯ ಕಾಡು ಮರಗಳನ್ನು ಬೆಳೆಸಲಾಗಿದ್ದು, ಘಮಘಮಿಸುವ ಕಾಡು ಹೂಗಳ ಪರಿಮಳ, ಪಕ್ಷಿಗಳ ಕಲರವ ತುಂಬಿಕೊಂಡಿರುತ್ತದೆ.
ಕೊಟ್ಟಿಗೆಗಳು: ಹಸು, ಎಮ್ಮೆ, ಕೋಳಿ-ಕುರಿ, ಮೇಕೆ, ಬೆಕ್ಕು, ಮೊಲ, ಮೀನು ಇತ್ಯಾದಿ ಸಾಕುಪ್ರಾಣಿಗಳನ್ನು ಪ್ರತ್ಯೇಕವಾದ ಕೊಟ್ಟಿಗೆಗಳಲ್ಲಿ ಸಾಕಲಾಗುತ್ತದೆ. ಇದರ ಉದ್ದೇಶ ಆರ್ಥಿಕ ಅವಲಂಬನೆಯ ಜೊತೆಗೆ ಮಕ್ಕಳಿಗೆ ವಿವಿಧ ಸಾಕುಪ್ರಾಣಿಗಳನ್ನು ತೋರಿಸುವುದು.
ತೋಟದ ಸಸ್ಯ ಪರಿಚಯ: ಸುಮಾರು 2000ಕ್ಕೂ ಹೆಚ್ಚು ಸಸ್ಯಗಳನ್ನು ಬೆಳೆಸಲಾಗಿದೆ. ತೋಟದ ಅಂಚಿನಲ್ಲಿ ಬಿದಿರು ಬೆಳೆಸಲಾಗಿದೆ. ಬೆಂಗಳೂರು– ಮಾಗಡಿ ರಸ್ತೆಯಲ್ಲಿ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ ಮತ್ತು ಕಲುಷಿತ ಗಾಳಿ ಮತ್ತು ರಾತ್ರಿ ವೇಳೆ ಉಂಟಾಗುವ ವಾಹನಗಳ ಬೆಳಕಿನ ಮಾಲಿನ್ಯ ತಡೆಗಟ್ಟಲು ಇದು ನೆರವಾಗಿದೆ.
ಗ್ರಾಮೀಣ ಕ್ರೀಡೆಗಳು: ಗ್ರಾಮೀಣ ಕ್ರೀಡೆಗಳನ್ನು ಜೀವಂತ ಉಳಿಸುವುದು ಮತ್ತು ಈಗಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ. ವಿವಿಧ ಗ್ರಾಮೀಣ ಕ್ರೀಡೆಗಳಾದ ಲಗೋರಿ, ಗೋಲಿಯಾಟ, ಕಣ್ಣಾಮುಚ್ಚಾಲೆ, ಮರಕೋತಿ ಆಟ, ಕುಂಟೆಬಿಲ್ಲೆ, ಚೌಕಾಬಾರ ಇತ್ಯಾದಿ ಆಟಗಳ ಬಗ್ಗೆ ಚಿತ್ರಣ ನೀಡಲಾಗಿದೆ.
ಗ್ರಾಮೀಣ ಕಸುಬುಗಳಾದ ಮಡಿಕೆ ಮಾಡುವುದು, ಕುಲುಮೆಯನ್ನು ತಯಾರಿಸುವುದು, ಗೊಂಬೆ ಮಾಡುವುದಲ್ಲದೇ, ಕೊರವಂಜಿ, ಬುಡಬುಡುಕಿ ಇತ್ಯಾದಿ ಗ್ರಾಮೀಣ ಕಲೆಗಳನ್ನು ಮಕ್ಕಳಿಗೆ ನುರಿತ ವ್ಯಕ್ತಿಗಳಿಂದ ಮಾಡಿಸಿ ತೋರಿಸಲಾಗುತ್ತದೆ. ಇದು ವಾರದ ಏಳೂ ದಿನ ತೆರೆದಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.