ದಸರಾ ಮಹೋತ್ಸವಕ್ಕೆ ಬಂದಿರುವ ಗಜಪಡೆಯ ಆಹಾರ ಕ್ರಮ ಹೇಗಿದೆ ಗೊತ್ತಾ? ಇಲ್ಲಿದೆ ಒಂದು ಚಿತ್ರಣ...
ಬಲಾಢ್ಯ ಆನೆಗಳ ಆರೈಕೆಯಲ್ಲಿ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಶಿಬಿರದ ಗಜಗಳನ್ನು ದಸರಾ ಮೆರವಣಿಗೆಗಾಗಿ ನಾಡಿಗೆ ಕರೆತಂದು ವಿವಿಧ ತಾಲೀಮುಗಳನ್ನು ಮಾಡಿಸಲಾಗುತ್ತದೆ. ದಣಿಯುವ ಆನೆಗಳಿಗೆ ಶಕ್ತಿ ನೀಡಲು ವಿಶೇಷ ಆಹಾರ ನೀಡಲಾಗುತ್ತದೆ.
ಈ ವಿಶೇಷ ಆಹಾರವನ್ನು ಮಾವುತರು ಹಾಗೂ ಕಾವಾಡಿ ಗಳ ಮಕ್ಕಳಾದ ದುಬಾರೆಯ ಗಣೇಶ್, ಬಳ್ಳೆಯ ಪುನೀತ್, ಕೆಂಚ, ಮತ್ತಿಗೋಡಿನ ಸರ್ದಾರ್, ಮಹೇಶ್, ಶಾಂತರಾಜು ಸಿದ್ಧಪಡಿಸುತ್ತಾರೆ.
ನಿತ್ಯ ಹಸಿ ಹುಲ್ಲು, ಆಲದಮರದ ಸೊಪ್ಪನ್ನು ಗಜಪಡೆಯ ಮುಂದೆ ಹಾಕುತ್ತಾರೆ. ಜತೆಗೆ, ಕಬ್ಬನ್ನೂ ನೀಡುತ್ತಾರೆ. ಬೆಳಿಗ್ಗೆ ಬನ್ನಿಮಂಟಪದವರೆಗೆ ನಡೆಯುವ ತಾಲೀಮು (ಅಂದರೆ ಜಂಬೂಸವಾರಿಯಂದು ಸಾಗಬೇಕಾದ ದಾರಿಯ ರೂಢಿಗಾಗಿ) ಮುಗಿಸಿಕೊಂಡು ಬರುವ ಆನೆಗಳಿಗೆ ನಾಲ್ಕು ತೆಂಗಿನಕಾಯಿ, ಬೆಲ್ಲ, ಕಡಲೆಕಾಯಿ ಹಿಂಡಿ ನೀಡುತ್ತಾರೆ. ಸಂಜೆ ತಾಲೀಮಿಗೆ ಹೊರಡುವ ಮೊದಲು ಮತ್ತೆ ತೆಂಗಿನಕಾಯಿ, ಬೆಲ್ಲ, ಕಡಲೆಕಾಯಿ ಹಿಂಡಿ ನೀಡಲಾಗುವುದು.
ಸಂಜೆ ಬೇಯಿಸಿದ ಆಹಾರ: ಗೋಧಿ, ಉದ್ದಿನಕಾಳುಗಳನ್ನು ಚೆನ್ನಾಗಿ ಬೇಯಿಸಿದ ನಂತರ ಹೆಸರುಕಾಳು ಹಾಗೂ ಕುಸಬಲಕ್ಕಿ ಸೇರಿಸುತ್ತಾರೆ. ನಂತರ ಉಪ್ಪು, ಈರುಳ್ಳಿ ಹಾಕುತ್ತಾರೆ. ಬೆಂದ ಆಹಾರವನ್ನು ಟ್ರೇಗಳಲ್ಲಿ ಹರಡುತ್ತಾರೆ. ತಣ್ಣಗಾದ ಮೇಲೆ ಗುಡ್ಡೆಗಳನ್ನಾಗಿ ಮಾಡಿ ತರಕಾರಿ ಬೆರೆಸುತ್ತಾರೆ.
ತರಕಾರಿಗಳಲ್ಲಿ ಗೆಡ್ಡೆಕೋಸು, ಮೂಲಂಗಿ, ಕ್ಯಾರೆಟ್, ಸೌತೆಕಾಯಿ, ಬೀಟ್‌ರೂಟ್ ಇವೆಲ್ಲವನ್ನು 3–4 ಕೆ.ಜಿಗಳಷ್ಟನ್ನು ಆಹಾರದ ಗುಡ್ಡೆಗಳಿಗೆ ಸೇರಿಸುತ್ತಾರೆ.
ನಂತರ ಚೆನ್ನಾಗಿ ಮಿಶ್ರಣ ಮಾಡಿದ ಮೇಲೆ ಅರ್ಧ ಕೆ.ಜಿಯಷ್ಟು ಬೆಣ್ಣೆಯನ್ನು ಸೇರಿಸಿ, ಉಂಡೆ ಮಾಡಿ ಆನೆಗಳಿಗೆ ತಿನ್ನಿಸುತ್ತಾರೆ. ಆಹಾರವನ್ನು ಒಣಭತ್ತದೊಂದಿಗೆ ಉಂಡೆ ಮಾಡಿ ಕೊಡುವುದಕ್ಕೆ ‘ಕುಸುರೆ’ ಎನ್ನುತ್ತಾರೆ.
ಈ ಬಗೆಯ ಆಹಾರವನ್ನು ಎರಡು ಹೊತ್ತು ಕೊಡುತ್ತಾರೆ. ನಿತ್ಯ ನಸುಕಿನ 5 ಗಂಟೆಯೊಳಗೆ ನೀಡುವುದು ರೂಢಿ. ಇದಕ್ಕಾಗಿ ರಾತ್ರಿಯೇ ಆಹಾರ ಸಿದ್ಧಪಡಿಸಿ ಇಡುತ್ತಾರೆ.
ಇನ್ನೊಮ್ಮೆ ಬೇಯಿಸಿದ ಆಹಾರವನ್ನು ಸಂಜೆಯ ತಾಲೀಮು ಮುಗಿಸಿಕೊಂಡು ಬಂದ ಕೂಡಲೇ ಅಂದರೆ ಏಳು ಗಂಟೆಯ ಹೊತ್ತಿಗೆ ನೀಡಲಾಗುವುದು. ಹೀಗೆ ಈ ಆರೈಕೆಯು ಜಂಬೂಸವಾರಿಯವರೆಗೂ ಮುಂದುವರೆಯುತ್ತದೆ. ಅದರಲ್ಲೂ ಅರ್ಜುನ ಆನೆಗೆ ಎಲ್ಲ ಆನೆಗಳಿಗಿಂತ ದುಪ್ಪಟ್ಟು ಆಹಾರ ನೀಡಲಾಗುವುದು. ಏಕೆಂದರೆ, ಜಂಬೂಸವಾರಿಯಂದು ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಇದರದ್ದು. ಜತೆಗೆ, ನಿತ್ಯ ಮರದ ಅಂಬಾರಿ ಹಾಗೂ ಮರಳಿನ ಮೂಟೆ ಹೊತ್ತು ಬನ್ನಿಮಂಟಪದವರೆಗೆ ತಾಲೀಮು ನಡೆಸುವ ಗಟ್ಟಿತನಕ್ಕಾಗಿ ದೈತ್ಯ ಅರ್ಜುನನಿಗೆ ಎಲ್ಲ ಬಗೆಯ ಆಹಾರದಲ್ಲಿ ಡಬಲ್ ನೀಡಲಾಗುವುದು ಎನ್ನುವ ಮಾಹಿತಿಯನ್ನು ಇವುಗಳ ಮೇಲ್ವಿಚಾರಕ ಡಾ.ನಾಗರಾಜು ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.