ADVERTISEMENT

ಎಲ್ಲಾ ಕಳಚಬೇಕು!

ಡಾ.ಮನೋಜ ಗೋಡಬೋಲೆ
Published 23 ಮಾರ್ಚ್ 2019, 19:30 IST
Last Updated 23 ಮಾರ್ಚ್ 2019, 19:30 IST
   

ಪೇಪರಿನ ಪುಟ ತಿರುವಿ ಹಾಕುತ್ತಿದ್ದೆ. ಆಯಾ ಪುಟಗಳಲ್ಲಿನ ಕೊಲೆ, ದರೋಡೆ, ಭೂಕುಸಿತ, ಪ್ರವಾಹ ಇತ್ಯಾದಿ ಸುದ್ದಿಗಳ ನಡುವೆ ಚಿತ್ರವೊಂದು ಗಮನ ಸೆಳೆಯಿತು. ಶಿಕ್ಷಕಿಯೋರ್ವಳು, ತರುಣಿಯ ಮೂಗೊಳಗೆ ಕೈಹಾಕಿ ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಳು! ದೊಡ್ಡ ಶಹರುಗಳ ಫುಟ್ ಪಾತುಗಳಲ್ಲಿ ಕೂತು ಹಲವರ ಕಿವಿ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸುವವರ ಬಗ್ಗೆ ಕೇಳಿದ್ದೆ, ನೋಡಿದ್ದೆ. ನ್ಯಾಷನಲ್ ಜಿಯೋಗ್ರಾಫಿಕ್ಕಿನಲ್ಲಿ ಆ ಕುರಿತ ಡಾಕ್ಯುಮೆಂಟರಿಯೂ ಪ್ರಸಾರವಾಗಿದೆ. ಆದರೆ, ಸಾರ್ವಜನಿಕವಾಗಿ ಇನ್ನೊಬ್ಬರ ಮೂಗೊಳಗೆ ನಗುತ್ತಾ ಕೈಹಾಕುವ ವ್ಯಕ್ತಿಯ ಕಂಡಿರಲಿಲ್ಲ. ಆ ದೃಶ್ಯ ಇನ್ನೂ ಕಣ್ಣೆದುರಿಗಿದೆ. ಆ ಶಿಕ್ಷಕಿಗೆ ಯಾಕೆ ಬೇಕಿತ್ತು ಬೇರೆಯವರ ಮೂಗೊಳಗೆ ಕೈಹಾಕುವ ಕೆಲಸಾ? ಥೂ ಎನ್ನುವಂತಾಗಿತ್ತು. ಆದರೆ, ಸುದ್ದಿಯನ್ನು ಕೂಲಂಕಷವಾಗಿ ಓದಿದ ಮೇಲೆ ತಿಳಿಯಿತು ಆ ಶಿಕ್ಷಕಿ, ವಿದ್ಯಾರ್ಥಿನಿಯ ಮೂಗುಬೊಟ್ಟನ್ನು ತೆಗೆಯುತ್ತಿದ್ದ ವಿಷಯ. ಯಾವುದೋ ಉದ್ಯೋಗ ಸಂಬಂಧೀ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ಮತ್ತು ಪರೀಕ್ಷಾ ಮೇಲ್ವಿಚಾರಕಿಯಾಗಿದ್ದರು ಅವರೀರ್ವರು.

ಬಿಸಿಯೂಟದ ದೆಸೆಯಿಂದ ಅಕ್ಕಿ, ಬೇಳೆ ಮತ್ತು ತರಕಾರಿ ಖರೀದಿಸುವ ವ್ಯಾಪಾರ ಕಲೆ, ಪಾಕ ಪ್ರಾವೀಣ್ಯತೆ, ಕೆನೆಗಟ್ಟದಂತೆ ಹಾಲು ಕಾಯಿಸುವ ವಿದ್ಯೆ ಮುಂತಾದ್ದನ್ನು ಶಿಕ್ಷಕರು ಬಲುಬೇಗ ಕಲಿತ ಹಲವಾರು ಉದಾಹರಣೆಗಳನ್ನು ನೋಡಿದ್ದೇನೆ. ಆದರೆ, ಸೊನೆಗಾರರಿಗಷ್ಟೇ ಸೀಮಿತವಾಗಿದ್ದ ಬಂಗಾರದ ಕೆಲಸದ ಪ್ರಾತ್ಯಕ್ಷಿಕೆಯೂ ಶಿಕ್ಷಕರಿಗೆ ಲಭ್ಯವಾಗುತ್ತಿರುವ ಈ ಕಾಲವನ್ನು ಮೆಚ್ಚಲೇಬೇಕು. ಆ ಫೋಟೋ ನೋಡಿದೊಡನೆ ನನ್ನ ಸ್ಮೃತಿ ಪಟಲದಲ್ಲಿ ಇತ್ತೀಚೆಗೆ ದೇಶದಾದ್ಯಂತ ಮೆಡಿಕಲ್ ಕೋರ್ಸಿನ ಪ್ರವೇಶಕ್ಕಾಗಿ ನಡೆದ ‘ನೀಟ್’ ಪರೀಕ್ಷೆಯ ಘಟನೆಯೊಂದು ಕಣ್ಣೆದುರು ಬಂದಿತು.

ಈಗಿನ ಸ್ಮಾರ್ಟ್ ಯುಗದಲ್ಲಿ ನಕಲು ಮಾಡುವುದೂ ಹೈಟೆಕ್ಕಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬ್ಲೂಟೂತು, ವೈಫೈ, ಮೈಕ್ರೋ ಇಯರ್ ಫೋನ್ ಮೂಲಕ ಹೈದರಾಬಾದಿನ ಹೌಸ್ ವೈಫು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಪೋಲೀಸ್ ಹಸ್ಬೆಂಡಿಗೆ ಸಹಾಯ ಮಾಡಿ ಜೈಲಿಗೆ ಹೋದ ಕಥೆ ಎಲ್ಲರಿಗೂ ಗೊತ್ತೇ ಇದೆ. ಇಂತಹಾ ಅಕ್ರಮಗಳನ್ನು ತಡೆಯಲು ‘ನೀಟ್’ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಮೂಗುಬೊಟ್ಟು, ಕಿವಿಯೋಲೆ, ಬೆಲ್ಟು, ಚೈನು, ವಾಚು, ಮೆಟಲ್ ಕ್ಲಿಪ್ಪು, ಉಂಗುರ, ಬ್ರೇಸಲೆಟ್ಟು, ಮೊಬೈಲು, ಕಾಲುಚೀಲ, ಬೂಟು ಇವೆಲ್ಲವುಗಳನ್ನು ಕಳಚಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯೊಳಗೆ ಕಳುಹಿಸಬೇಕು. ವಸ್ತ್ರ ಸಂಹಿತೆಯ ಪ್ರಕಾರ ಅರ್ಧ ತೋಳಿನ ಸಡಿಲ ಉಡುಪುಗಳನ್ನೇ ಪರೀಕ್ಷಾರ್ಥಿಗಳು ಧರಿಸಿರಬೇಕು. ದುಪಟ್ಟಾ ಹೊದೆಯಬಾರದು. ಇವೆಲ್ಲಾ ಸೂಚನೆಗಳನ್ನು ವಿದ್ಯಾರ್ಥಿಗಳಿಗೆ ಮೊದಲೇ ಕೊಟ್ಟಾಗಿತ್ತು. ಆದರೂ ಹಲವರು ಇವುಗಳನ್ನು ಮೈಮೇಲೆ ಹೊತ್ತಿದ್ದರು. ಅವುಗಳನ್ನು ಕಳಚಿಸಿದ ನಂತರವಷ್ಟೇ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ಬಿಡಲಾಗುತ್ತಿತ್ತು. ನಮ್ಮ ಪುಣ್ಯ. ಹೆಚ್ಚಿನ ಅಭ್ಯರ್ಥಿಗಳ ಪಾಲಕರು ಬಂದಿದ್ದರಿಂದ ಆ ವಸ್ತುಗಳನ್ನು ಕಾಯುವ ಹೊಣೆ ಭದ್ರತಾ ಸಿಬ್ಬಂದಿಗಳಿಗಿರಲಿಲ್ಲ.

ADVERTISEMENT

ಪರೀಕ್ಷೆಗೆ ಅರ್ಧ ಗಂಟೆಯಷ್ಟೇ ಬಾಕಿ. ಬಹುತೇಕರು ಒಳಗೆ ಹೋಗಿದ್ದರು. ಆಗ ನನ್ನ ಸಹೋದ್ಯೋಗಿ ಮಿಥುನ್ ಧ್ವನಿ ಜೋರಾಗಿ ಕೇಳಿಸುತ್ತಿತ್ತು. ಆತ ಯಾರೊಂದಿಗೋ ಜಗಳವಾಡುತ್ತಿದ್ದ. ‘ರೀ, ಮೆಟಲ್ ಡಿಟೆಕ್ಟರ್ ಪೀಂ ಅಂತಾ ಹೊಡ್ಕೋತಿದೆ. ನಿಮ್ಮ ಮಗಾ ಏನನ್ನೋ ಅಡಗಿಸಿ ಇಟ್ಗೊಂಡಿದಾನೆ. ಅವನನ್ನಾ ಒಳಗೆ ಬಿಡಲ್ಲಾ’ ಎಂದು ಜೋರು ಮಾಡುತ್ತಿದ್ದ. ಅವನೆದುರು ತಂದೆಯೋರ್ವ, ಸಭ್ಯಸ್ಥನಂತೇ ತೋರುತ್ತಿದ್ದ ಮಗನೊಂದಿಗೆ ಪೆಚ್ಚಾಗಿ ನಿಂತಿದ್ದ. ‘ಸಾರ್, ಇವನು ಕಾಪಿ ಹೊಡೆಯೋ ಆಸಾಮಿ ಅಲ್ಲಾ, ಬೇಕಾರೆ ನೀವೇ ಕೈಯಾರೆ ಚೆಕ್ ಮಾಡಿ. ಮಷೀನ್ನಲ್ಲೇ ಏನೋ ಫಾಲ್ಟಿರಬೇಕು. ದಮ್ಮಯ್ಯಾ ಅಂತಿನಿ. ಒಳಗೆ ಕಳ್ಸಿ’ ಎಂದು ಅಂಗಲಾಚುತ್ತಿದ್ದ ಅಪ್ಪ. ಮಿಥುನ್ ಬಿಲ್-ಕುಲ್ ಒಪ್ಪುತ್ತಿರಲಿಲ್ಲ.

ಮೇಲ್ನೋಟಕ್ಕೆ ಅವರು ಮುಗ್ಧರಂತೆ ತೋರುತ್ತಿದ್ದರು. ಮೇಲ್ವಿಚಾರಕನಾಗಿ ಕೇಂದ್ರದ ಎಲ್ಲರ ಸುಖ-ದುಃಖ ವಿಚಾರಿಸುವ ಜವಾಬ್ದಾರಿ ನನ್ನ ಮೇಲಿತ್ತು. ಹಾಗಾಗಿ, ಅವರ ಬಳಿ ತೆರಳಿ ‘ನೋಡಿ ಇವ್ರೆ, ಮೆಟಲ್ ಡಿಟೆಕ್ಟರ್ ಪ್ರಕಾರ ಅವನು ಏನನ್ನೋ ಅಡಗಿಸಿಕೊಂಡಿದಾನೆ. ಅದೇನು ಅನ್ನೋದನ್ನಾ ಅವನೇ ಹೇಳಬೇಕು. ಸಾರಿ’ ಎಂದೆ. ಬೇರೆ ವಿದ್ಯಾರ್ಥಿಗಳ ಪಾಲಕರು ಬ್ಲೂಟೂತೋ, ಮತ್ತೊಂದೋ ಈಗ ಹೊರ ಬರುತ್ತದೆ ಎಂಬ ನೋಟದಲ್ಲಿ ಅಪ್ಪ-ಮಗನನ್ನು ಗುರಾಯಿಸುತ್ತಾ ಕಣ್ಣೋಟದಿಂದಲೇ ತಿವಿಯುತ್ತಿದ್ದರು.

ಆ ಚುಚ್ಚುವ ನೋಟಗಳಿಂದ ಕುಗ್ಗಿದ್ದ ಅಪ್ಪ ‘ಸಾರ್, ಈಗಾಗ್ಲೇ ನೀವು ಹೇಳ್ದಂಗೆ ಬೆಲ್ಟು, ವಾಚು, ಉಂಗುರಾ, ಚೈನು, ಪರ್ಸು, ಬೂಟು ಎಲ್ಲಾ ತೆಗ್ಸಿದಿನಿ. ಇನ್ನು ಅವನ ಹತ್ರಾ ಅಡಗಿಸಿ ಇಡೋವಂಥದ್ದು ಏನೂ ಇಲ್ಲಾ. ಬೇಕಾರೆ ನೀವೇ ಕೈಯಾರೆ ಚೆಕ್ ಮಾಡಿ. ಲೇಟಾಗ್ತಿದೆ. ಹುಡುಗ ಪಾಪಾ ಟೆನ್ಷನ್ ಮಾಡ್ಕೊಂಡಿದಾನೆ’ ಎಂದು ಗೋಗರೆದ. ಕರುಣೆಯುಕ್ಕಿ ಹುಡುಗನ ಮುಖವನ್ನೊಮ್ಮೆ ಸೂಕ್ಷ್ಮವಾಗಿ ದಿಟ್ಟಿಸಿದೆ. ಡಿಟೆಕ್ಟರಿನ ಪೀಂ ಸೌಂಡಿನಿಂದ ಕಂಗೆಟ್ಟಿದ್ದ ಆತ, ಕಿತ್ತು ಬರುತ್ತಿದ್ದ ಬೆವರನ್ನು ತೊಯ್ದು ತೊಪ್ಪೆಯಾಗಿದ್ದ ಕರ್ಚೀಫಿನಲ್ಲೇ ಒರೆಸಿಕೊಳ್ಳುವ ಕಸರತ್ತು ನಡೆಸುತ್ತಿದ್ದ. ಹುಡುಗ ನೋಡಲು ಪಾಪದವನೇ. ಆದರೂ, ರೂಲ್ಸಂದ್ರೆ ರೂಲ್ಸಲ್ಲವೇ? ನಾನೇನೂ ಮಾಡುವ ಹಾಗಿರಲಿಲ್ಲ. ನಾನೇ ಅವನ ಜೇಬು, ಮೈ ಎಲ್ಲಾ ತಡಕಾಡಿದೆ. ಊಂಹ್ಞೂಂ, ಏನೂ ಸಿಗಲಿಲ್ಲ. ಮೆಟಲ್ ಡಿಟೆಕ್ಟರಿನಲ್ಲೇ ಏನಾದರೂ ಲೋಪವಿರಬಹುದೇನೋ ಎಂದು ನನ್ನ ಮೈಮೇಲಿದ್ದ ಆಭರಣ, ಬೂಟು, ಬೆಲ್ಟು ಎಲ್ಲವನ್ನೂ ಬಿಚ್ಚಿ ಟೆಸ್ಟ್ ಮಾಡಿಕೊಂಡರೆ ಮೆಟಲ್ ಡಿಟೆಕ್ಟರ್ ತಟಸ್ಥವಾಗಿತ್ತು. ಆದರೆ, ಆ ಹುಡುಗನ ಬಳಿ ಬಂದರೆ ಜೋರಾಗಿ ಪೀಂ ಎಂದು ಹೊಡೆದುಕೊಳ್ಳುತ್ತಿತ್ತು. ಸುತ್ತ ನೆರೆದವರ ಹುಬ್ಬು ಇನ್ನೂ ಎತ್ತರಕ್ಕೇರಿ ಕುತೂಹಲದ ಎವರೆಸ್ಟಿಗೇರಿದ್ದರು ಅವರೆಲ್ಲ.

ನನಗೆ ತಲೆಬುಡ ಹರಿಯಲಿಲ್ಲ. ಮತ್ತೊಮ್ಮೆ ಆತನನ್ನು ತಡವುತ್ತಾ ಸೊಂಟದ ಹತ್ತಿರ ತಪಾಸಿಸಿದರೆ ದಪ್ಪನೆಯ ಬೆಳ್ಳಿಯ ಉಡಿದಾರವೊಂದು ಕಾಣಿಸಿತು! ಮನದಲ್ಲೇ ಯುರೇಕಾ ಎಂದುಕೊಂಡು ‘ಇಲ್ನೋಡು, ಈ ಉಡಿದಾರದಿಂದಲೇ ಸೌಂಡ್ ಬರ್ತಿರೋದು. ಅದನ್ನಾ ಬಿಚ್ಚಿಬಿಡು. ಎಲ್ಲಾ ಮುಗೀತದೆ. ಆರಾಮಾಗಿ ಒಳಗೆ ಹೋಗಿ ಪರೀಕ್ಷೆ ಬರೀ’ ಅಂತಂದೆ. ಆಗ, ಅಪ್ಪ-ಮಗ ಇಬ್ಬರೂ ಬೆಚ್ಚಿಬಿದ್ದರು. ‘ಅಯ್ಯಯ್ಯೋ, ನಾನು ಉಡಿದಾರ ಬಿಚ್ಚಲ್ಲಪ್ಪಾ..’ ಎಂದು ಮಗ ಬೊಬ್ಬೆ ಹೊಡೆಯತೊಡಗಿದ. ಅಪ್ಪನ ಮೋರೆ ಇಂಗು ತಿಂದ ಮಂಗನಂತಾಗಿತ್ತು. ಬಿಳುಚಿಕೊಂಡ ಮುಖದಿಂದಲೇ ಮಗನನ್ನು ಸಮಾಧಾನಪಡಿಸುತ್ತಾ ಪ್ರೇಕ್ಷಕ ವರ್ಗದಿಂದ ದೂರದ ಮೂಲೆಗೆ ಕರೆದೊಯ್ದ. ಅಡ್ಡನಿಂತು, ಉಡಿದಾರವನ್ನು ತೆಗೆಸಿ ಮತ್ತೆ ತಪಾಸಣೆಗೆ ಕಳುಹಿಸಿದ. ಈ ಬಾರಿ ಡಿಟೆಕ್ಟರ್ ಹೊಡೆದುಕೊಳ್ಳಲಿಲ್ಲ. ಮಗ, ನಾಚಿಕೆಯಿಂದ ತಲೆ ತಗ್ಗಿಸಿ ಪರೀಕ್ಷಾ ಕೇಂದ್ರದೊಳಗೆ ದೌಡಾಯಿಸಿದ. ಉಡಿದಾರ ತೆಗೆಯಲು ಇಷ್ಟೇಕೆ ನಾಚಿಕೆ ಎಂದು ತಿರುಗಿ ಅವನಪ್ಪನ ಕಡೆ ನೋಡಿದರೆ ಅವರು ಮಾರುದ್ದದ, ಗೇಣಗಲದ ಬಟ್ಟೆಯೊಂದನ್ನು ಸುತ್ತುತ್ತಿರುವುದು ಕಣ್ಣಿಗೆ ಬಿತ್ತು. ಉಡಿದಾರದ ಜೊತೆ ಹೊರಬಂದ ಲಂಗೋಟಿಯನ್ನು ಮಡಚಿ ತಮ್ಮ ಕೈಚೀಲಕ್ಕೆ ಲಗುಬಗೆಯಿಂದ ತುರುಕುತ್ತಿದ್ದರು ಅವರು! ತಲೆ ತಿರುಗಿಸಿ ಮಗನತ್ತ ನೋಡಿದರೆ ಆವರೆಗೆ ಇನ್ ಶರ್ಟ್ ಆಗಿದ್ದವ ಈಗ ಔಟ್ ಶರ್ಟಲ್ಲಿ ಅಂಗಿಯನ್ನು ಸಾಧ್ಯವಾದಷ್ಟು ಜಗ್ಗುತ್ತಾ ಪರೀಕ್ಷಾ ಕೇಂದ್ರದೊಳಗೆ ಧಾವಿಸುತ್ತಿದ್ದ. ಅಂತರಂಗದಲ್ಲಿ, ಟಿಎನ್ ಸೀತಾರಮ್ ಅವರ ಧಾರಾವಾಹಿಯಂತೆ ಮುಕ್ತ-ಮುಕ್ತ-ಮುಕ್ತನಾದರೂ, ಪಾಪ, ಫ್ರೀಡಮ್ ಮೂಮೆಂಟನ್ನು ಎಂಜಾಯ್ ಮಾಡುವಂತಿರಲಿಲ್ಲ! ಹೊರಗಿನಿಂದ ಆವರಿಸಿರುವ ಮೀಟರುಗಟ್ಟಲೇ ಬಟ್ಟೆಗಳಿದ್ದರೂ ಮಾನ ಮುಚ್ಚುವ ತುಂಡುಬಟ್ಟೆಯಿಲ್ಲದೇ ಎಲ್ಲರೆದುರು ನಗ್ನನಾಗಿ ನಿಂತಂತೆ ಭಾಸವಾಗಿತ್ತೇನೋ ಆತನಿಗೆ? ಆ ಸಂದರ್ಭದಲ್ಲಿ ಬಡಪಾಯಿ ಪರೀಕ್ಷೆಯನ್ನು ಹ್ಯಾಗೆ ಬರೆದನೋ ತಿಳಿಯಲಿಲ್ಲ. ಎಲ್ಲಾ ಪರೀಕ್ಷಾ ಕೊಠಡಿಗಳಿಗೆ ವಿಸಿಟ್ ಕೊಡುವಂತೆ ಆ ಹುಡುಗನ ಕೊಠಡಿಗೂ ತೆರಳಿದರೆ ನನ್ನ ಮೋರೆ ಕಂಡೊಡನೆ ಆತ ‘ಈ ಭೂಮಿ ಇಲ್ಲೇ ಬಿರಿಯಬಾರದೇ?’ ಎಂಬ ಭಾವದಲ್ಲಿ ನಾಚಿಕೆಯಿಂದ ಡೆಸ್ಕೊಳಗೆ ಇನ್ನೂ ಹುದುಗಿಕೊಂಡು ಬರೆಯತೊಡಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.