ADVERTISEMENT

ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ: ಮಿಂಚಿ ಮರೆಯಾದ ತಾರೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 0:00 IST
Last Updated 25 ಜುಲೈ 2021, 0:00 IST
ದೋಣಿ ಮೂಲಕ ಬಾಂಗ್ಲಾದೇಶ–ಮ್ಯಾನ್ಮಾರ್‌ನ ಗಡಿ ದಾಟಿದ ರೋಹಿಂಗ್ಯಾ ಮಹಿಳೆ ಬಂಗಾಳ ಕೊಲ್ಲಿಯ ಶಾ ಪೊರಿರ್‌ ದ್ವೀಪ ತಲುಪಿದಾಗ ಸಮುದ್ರ ತೀರವನ್ನು ಸ್ಪರ್ಶಿಸಿದ ಭಾವುಕ ಕ್ಷಣ. (Photo: REUTERS/Danish Siddiqui)
ದೋಣಿ ಮೂಲಕ ಬಾಂಗ್ಲಾದೇಶ–ಮ್ಯಾನ್ಮಾರ್‌ನ ಗಡಿ ದಾಟಿದ ರೋಹಿಂಗ್ಯಾ ಮಹಿಳೆ ಬಂಗಾಳ ಕೊಲ್ಲಿಯ ಶಾ ಪೊರಿರ್‌ ದ್ವೀಪ ತಲುಪಿದಾಗ ಸಮುದ್ರ ತೀರವನ್ನು ಸ್ಪರ್ಶಿಸಿದ ಭಾವುಕ ಕ್ಷಣ. (Photo: REUTERS/Danish Siddiqui)   

ಅದು ಮಾನವ ಸಂಘರ್ಷವೇ ಇರಲಿ, ಮನುಕುಲದ ದುರಂತ ಘಟನೆಯೇ ಆಗಿರಲಿ ಎಲ್ಲರಿಗಿಂತ ಮೊದಲು ಅಲ್ಲಿ ಹಾಜರಿದ್ದು ‘ಮಾನವೀಯ ಬಿಂಬ’ಗಳನ್ನು ಹೆಕ್ಕಿ ತೆಗೆಯುತ್ತಿದ್ದ ಭಾರತದ ಅಸಾಮಾನ್ಯ ಛಾಯಾಗ್ರಾಹಕ ದಾನಿಶ್‌ ಸಿದ್ದಿಕಿ. ಅಫ್ಗಾನಿಸ್ತಾನದ ಯುದ್ಧದ ಚಿತ್ರಗಳನ್ನು ಸೆರೆ ಹಿಡಿಯಲು ಹೋದಾಗ ಅವರು ಗುಂಡಿಗೆ ಬಲಿಯಾಗಿದ್ದಾರೆ. ರೋಹಿಂಗ್ಯಾ ಸಮುದಾಯದ ಬಿಕ್ಕಟ್ಟು, ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಕಾರ್ಮಿಕರು ಅನುಭವಿಸಿದ ಇಕ್ಕಟ್ಟು, ದೆಹಲಿ ಗಲಭೆಯ ಹಿಂದಿನ ಗುಟ್ಟು, ಯುದ್ಧಭೂಮಿಯಲ್ಲಿ ಎರಡೂ ಪಾಳೆಯಗಳ ಪಟ್ಟು... ಹೀಗೆ ಅವರು ಉಳಿಸಿಹೋದ ಸಾವಿರಾರು ಚಿತ್ರಬಿಂಬಗಳು ಹೇಳುವ ಕಥೆಗಳ ಮೂಲಕ ಅವರು ಜನರೊಂದಿಗೆ ಸದಾ ಇರುತ್ತಾರೆ...

ದಾನಿಶ್‌ ಜತೆಗಿನ ಮೊದಲ ಭೇಟಿಯ ಸಂದರ್ಭವನ್ನೊಮ್ಮೆ ನನ್ನ ಸ್ಮೃತಿಪಟಲದಿಂದ ಹೆಕ್ಕಿ ತೆಗೆಯಲು ಯತ್ನಿಸುವೆ. ಅದು 2005ರ ಬೇಸಿಗೆ ಋತು. ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಎ.ಜೆ.ಕೆ. ಸಮೂಹ ಸಂವಹನ ಸಂಶೋಧನಾ ಕೇಂದ್ರದ (ಎಂಸಿಆರ್‌ಸಿ) ಫಿಲಂ ಸ್ಕೂಲ್‌ನಲ್ಲಿ ನಾವಿಬ್ಬರೂ ಪ್ರವೇಶವನ್ನು ಪಡೆದಿದ್ದೆವು.

ಪಿಸ್ತಾ ಬಣ್ಣದ, ಅರ್ಧತೋಳಿನ, ಅಂಚನ್ನು ಜೀನ್ಸ್‌ನೊಳಗೆ ತುರುಕಿದ ಶರ್ಟ್‌ ಧರಿಸಿದ್ದ ದಾನಿಶ್‌, ಎಡಭಾಗದ ಹೆಗಲಲ್ಲಿ ಕಡುಗೆಂಪು ಬಣ್ಣದ ಬ್ಯಾಕ್‌ಪ್ಯಾಕ್‌ ಹೊತ್ತಿದ್ದ. ಓಹ್‌, ಹೌದು... ಆತ ಸಿಗರೇಟ್‌ ಸೇದುತ್ತಾ ಹೊಗೆ ಬೇರೆ ಬಿಡುತ್ತಿದ್ದ. ಪ್ರತೀ ಸಲ ಹೊಗೆ ಬಿಟ್ಟಾಗಲೂ ಅದು ಸೃಷ್ಟಿಸುತ್ತಿದ್ದ ಹಲವು ಸುರುಳಿಗಳನ್ನು ಕಂಡು ಹೆಮ್ಮೆಯಿಂದ ಬೀಗುತ್ತಿದ್ದ. ಪ್ರಾಯೋಗಿಕ ತರಬೇತಿ ಹಾಗೂ ಕ್ಲಾಸ್‌ರೂಮ್‌ ತರಗತಿಗಳ ಮಧ್ಯದ ಬಿಡುವಿನ ಸಂದರ್ಭದಲ್ಲಿ –ಎಂಸಿಆರ್‌ಸಿ ಟೆರೆಸ್‌ ಮೇಲಿನ ಕ್ಯಾಂಟೀನ್‌ನಲ್ಲಿ– ಹೀಗೆ ಆತ ಹೊಗೆಯ ಸುರುಳಿಗಳನ್ನು ಸೃಷ್ಟಿಸುತ್ತಾ ನಿಂತಿದ್ದನ್ನು ನಾವು ಕಾಣಬಹುದಿತ್ತು.

ADVERTISEMENT

ದಾನಿಶ್‌ ಯಾವಾಗಲೂ ಚೈತನ್ಯದ ಚಿಲುಮೆ ಆಗಿರುತ್ತಿದ್ದ. ಆತನ ತಮಾಷೆಗೆ ಮಿತಿಯೇ ಇರಲಿಲ್ಲ. ತರಗತಿಯ ಬಹುತೇಕ ಎಲ್ಲ ವಿದ್ಯಾರ್ಥಿಗಳು ತಮ್ಮ ಕಿರುಚಿತ್ರಗಳನ್ನು ಆತನೊಂದಿಗೇ ನಿರ್ಮಿಸಲು ಹಾತೊರೆಯುತ್ತಿದ್ದರು. ಯಾವುದೇ ವಿದ್ಯಾರ್ಥಿಯ ಚಿತ್ರ ತಂಡದಲ್ಲಿ ಆತನಿದ್ದರೆ ಛಾಯಾಗ್ರಹಣಕ್ಕೆ ಸಂಬಂಧಿಸಿದ ಯಾವ ಚಿಂತೆಯೂ ಇಲ್ಲದೆ ನಿರ್ದೇಶಕನ ಹೊರೆಯನ್ನು ಆ ವಿದ್ಯಾರ್ಥಿ ನಿರಾಳವಾಗಿ ನಿಭಾಯಿಸಬಹುದಿತ್ತು. ಆದರೆ, ತನ್ನ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡರೆ ಆತ ಸಹಕರಿಸಲು ನಿರಾಕರಿಸುತ್ತಿದ್ದ. ಹೀಗಿದ್ದೂ ಶೂಟಿಂಗ್‌ಗೆ ನಿರ್ಧರಿತವಾದ ಸಮಯಕ್ಕಿಂತ ಒಂದು ಗಂಟೆ ಮುಂಚೆಯೇ ಸ್ಥಳದಲ್ಲಿ ಹಾಜರಿರುತ್ತಿದ್ದ. ‘ನಿರ್ದೇಶಕ’ನ ಕುರಿತು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ, ಕೆಲಸವನ್ನು ಆರಂಭಿಸುತ್ತಿದ್ದ. ನೀವೊಂದು ವೇಳೆ ಆತನ ಸ್ನೇಹವಲಯಕ್ಕೆ ಸೇರಿದ ಅದೃಷ್ಟವಂತರಾಗಿದ್ದರೆ ಚಿತ್ರತಂಡದ ಅಧಿಕೃತ ಸದಸ್ಯನಲ್ಲದಿದ್ದರೂ ಆತ ಶೂಟ್‌ ಮಾಡಲು ಬರುತ್ತಿದ್ದ.

ಮುಂಬೈ ಬೀಚ್‌ನಲ್ಲಿ ಕಡಲ ಹಕ್ಕಿಗಳಿಗೆ ಆಹಾರ ನೀಡುತ್ತಿರುವ ವೃದ್ಧ (Photo: REUTERS/Danish Siddiqui)

ಕಾಲೇಜಿನಲ್ಲಿ ನಾನು ಒಂದೇ ಒಂದು ಕಿರುಚಿತ್ರವನ್ನೂ ಆತನಿಲ್ಲದೆ ಮಾಡಿದ ನೆನಪಿಲ್ಲ. ನಮ್ಮ ಪದವಿಯ ಅಂತಿಮ ವರ್ಷದ ಚಿತ್ರ ‘ರಿಹಾಇಶ್‌’ (ನಿವಾಸ, 2007) ಅನ್ನು ನಾವು ನವದೆಹಲಿಯ ಜಾಮಿಯಾನಗರದ ಸುತ್ತಮುತ್ತಲ ಪ್ರದೇಶದಲ್ಲಿ ಶೂಟ್‌ ಮಾಡಿದ್ದೆವು. ನಮ್ಮೆಲ್ಲರ ಅಮ್ಮಂದಿರು, ಸಂಬಂಧಿಗಳು ಹಾಗೂ ಸ್ನೇಹಿತರು ನಮ್ಮ ಚಿತ್ರೀಕರಣ ತಂಡದ ಸದಸ್ಯರಾಗಿದ್ದರು. ಭಾಗಶಃ ಆತ್ಮಕಥೆ, ಭಾಗಶಃ ರಾಜಕೀಯದ ಕಥಾವಸ್ತು ಹೊಂದಿದ್ದ ಈ ಕಿರುಚಿತ್ರದಲ್ಲಿ, ಭಾರತದಲ್ಲಿ ಹೆಚ್ಚುತ್ತಿರುವ ಬಹುಸಂಖ್ಯಾತ ಬಲಪಂಥೀಯ ವಾತಾವರಣದಲ್ಲಿ ಮತೀಯ ಅಲ್ಪಸಂಖ್ಯಾತ ಮಧ್ಯಮ ವರ್ಗದವರ ಬದುಕಿನ ಒಳತೋಟಿಗಳನ್ನು, ಅವರು ಎದುರಿಸಬೇಕಾಗಿದ್ದ ಸಂಘರ್ಷಗಳನ್ನು ನಮ್ಮ ಬದುಕುಗಳ ಮೂಲಕ ಚಿತ್ರಿಸಿದ್ದೆವು.

ನಮ್ಮ ಬದುಕಿನ ಸುತ್ತಲೂ ಆವರಿಸಿದ್ದ ಹಿಂಸೆಯ ಬೆದರಿಕೆಯನ್ನು ಅರ್ಥಮಾಡಿಕೊಳ್ಳಲು 15 ವರ್ಷಗಳ ಗೆಳೆತನದ ಉದ್ದಕ್ಕೂ ನಾವು ಪ್ರಯತ್ನಿಸುತ್ತಲೇ ಬಂದಿದ್ದೆವು. ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿ ಜಾಮಿಯಾ ಸೇರುವತನಕ ನಾನೊಬ್ಬ ಭಾರತೀಯ ಮುಸ್ಲಿಂ ಮಹಿಳೆ ಎಂಬ ನನ್ನ ಅಸ್ಮಿತೆಯನ್ನು ಅದುಮಿಡುತ್ತಲೇ ಬಂದಿದ್ದೆ. ಆ ಅಸ್ಮಿತೆ ಕುಟುಂಬದ ಚೌಕಟ್ಟಿನೊಳಗೆ ಮಾತ್ರ ತನ್ನ ಅಸ್ತಿತ್ವವನ್ನು ತೋರಿಸುತ್ತಿತ್ತು.

ಪುಲಿಟ್ಜರ್‌ ಪ್ರಶಸ್ತಿ ಪಡೆದ ಕ್ಷಣ

ಮತ್ತೊಂದೆಡೆ, ದಾನಿಶ್‌ ತನ್ನ ಗುರುತನ್ನು ಢಾಳಾಗಿ ಎತ್ತಿ ತೋರಿಸುತ್ತಿದ್ದ. ಅದನ್ನೊಂದು ಗೌರವದ ಬ್ಯಾಡ್ಜ್‌ನಂತೆ ಎದೆಯ ಮೇಲೆ ಹೊತ್ತು ಮೆರೆಯುತ್ತಿದ್ದ. ಆತನ ಜೋಕುಗಳಲ್ಲಿ ಪಕ್ಕಾ ಇಸ್ಲಾಮಿಕ್‌ ಮಾತುಗಳ ಮಸಾಲೆ ಇದ್ದೇ ಇರುತ್ತಿತ್ತು. ಅವನೊಂದಿಗೆ ಇದ್ದಾಗ ನನ್ನಲ್ಲೂ ನನ್ನ ಇತಿಹಾಸ ಹಾಗೂ ಅಸ್ಮಿತೆ ಕುರಿತು ಅದುಮಿಡುವಂಥದ್ದು ಏನಿಲ್ಲ ಎಂಬ ನಿರಾಳಭಾವ ಮೂಡಿತ್ತು.

ನಾವು ನಡೆಸುತ್ತಿದ್ದ ಚಿತ್ರೀಕರಣದ ಮೊದಲು ಹಾಗೂ ನಂತರ ನಾವಿಬ್ಬರೂ ಸಿಕ್ಕಾಪಟ್ಟೆ ವಾಗ್ವಾದ ಮಾಡಿಕೊಂಡಿದ್ದಿದೆ. ಆಗಿನ ದಿನಗಳಾದರೂ ಎಂಥವು ಅಂತೀರಿ? ಅಮೆರಿಕದ ಮೇಲೆ ನಡೆದ ‘9/11’ ದಾಳಿಯ ಬಳಿಕ ಜಗತ್ತು ನಮ್ಮ ಸಮುದಾಯದ ಕಡೆ ನೋಡುತ್ತಿದ್ದ ರೀತಿ ನಮ್ಮಲ್ಲಿ ಗೊಂದಲವನ್ನು ಸೃಷ್ಟಿಸಿತ್ತು. ವ್ಯಾಕುಲರನ್ನಾಗಿಯೂ ಮಾಡಿತ್ತು. ದೆಹಲಿಯಲ್ಲಿ ಆಗ ನಾವು ಎದುರಿಸಿದ್ದು ಕುದಿ ದಿನಗಳ ಅನುಭವವನ್ನು. ವೈರಲ್‌ ಆಗುತ್ತಿದ್ದ ದೂರದ ಯಾವುದೇ ಪ್ರದೇಶದಲ್ಲಿ ಸೆರೆಹಿಡಿದಿದ್ದ ದೃಶ್ಯ ತುಣುಕುಗಳು ನಮ್ಮ ಫೋನ್‌ಗಳಲ್ಲೂ ಕಾಣಿಸಿಕೊಳ್ಳಲು ಆರಂಭಿಸಿದ್ದರಿಂದ ನಾನು ಚಿಂತೆಗೀಡಾಗಿದ್ದೆ. 21 ವರ್ಷದ ತರುಣರಾಗಿ ನಾವು ಕ್ಲಾಸ್‌ರೂಮ್‌ಗಳಲ್ಲಿ ಮಾಧ್ಯಮ ಅಂದರೇನು ಎಂದು ಅರ್ಥೈಸಿಕೊಳ್ಳುವಾಗ ಇರಾಕ್‌ ಇಲ್ಲವೆ ಅಫ್ಗಾನಿಸ್ತಾನದಲ್ಲಿ (ಅಮೆರಿಕ ಆಗ ಈ ಎರಡೂ ದೇಶಗಳಲ್ಲಿ ಭಯೋತ್ಪಾದನೆ ವಿರುದ್ಧ ಯುದ್ಧ ಸಾರಿತ್ತು) ಸೆರೆಹಿಡಿದಿದ್ದ ಇಂತಹ ದೃಶ್ಯ ತುಣುಕುಗಳ ಮೂಲಕ ನಮ್ಮನ್ನೂ ನಿಂದನೆಗೆ ಗುರಿಪಡಿಸಲಾಗುತ್ತಿತ್ತು.

ಅಫ್ಘಾನ್‌ನ ವಿಶೇಷ ಕಾರ್ಯಪಡೆ ವಿರುದ್ಧ ಸೆಣೆಸಾಟಕ್ಕೆ ಸನ್ನದ್ಧವಾಗುತ್ತಿರುವ ತಾಲಿಬಾನ್‌ ಉಗ್ರ (Photo: REUTERS/Danish Siddiqui)

ನಾನು ಆ ದೃಶ್ಯ ತುಣುಕುಗಳನ್ನು ನೋಡಲು ಹೋಗುತ್ತಿರಲಿಲ್ಲ. ಆದರೆ, ‘ಹುಡುಗರು’ ಅವುಗಳನ್ನು ತಪ್ಪದೇ ನೋಡುತ್ತಿದ್ದರು ಮತ್ತು ಹಂಚಿಕೊಳ್ಳುತ್ತಿದ್ದರು. 2005–06ರ ಸಮಯದಲ್ಲಿ ಅತ್ಯಂತ ಕೆಳಸ್ತರದ ನೋಕಿಯಾ ಫೋನ್‌ಗಳಿಗೆ ಬರುತ್ತಿದ್ದ ಅವಿಶ್ವಸನೀಯ ವಿಡಿಯೊಗಳ ಕುರಿತು ತಿಳಿಯುತ್ತಾ ಅವುಗಳಿಂದ ಜನರ ಬದುಕಿನ ಮೇಲೆ ಆಗುವ ಪರಿಣಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಬದಲು ಅರೆಬೆಂದ ಮಾಧ್ಯಮ ವರದಿಗಳ ಪ್ರಭಾವದಿಂದ ನಾನೂ ಒಂದೆರಡು ಬಾರಿ ಉಪದೇಶ ಮಾಡಿದ್ದುಂಟು. ಈ ಸಂಬಂಧವಾಗಿ ಕಿರಿಕಿರಿ ಆಗುವಷ್ಟರ‌ಮಟ್ಟಿಗೆ ವಾಗ್ವಾದ ಆಗಿದ್ದುಂಟು, ಗಟ್ಟಿ ಧ್ವನಿಯಲ್ಲಿ ಜಗಳಕ್ಕೆ ಇಳಿದಿದ್ದುಂಟು, ಇದಾದ ನಂತರ ನಂನಮ್ಮ ಸಂಗಾತಿಗಳನ್ನು ಸಂತೈಸಲು ಯತ್ನಿಸಿದ್ದೂ ಉಂಟು.

ದಾನಿಶ್‌ನ ಎದುರು ಹೆಚ್ಚು ಹೊತ್ತು ವಾದಿಸುತ್ತಾ ನಿಲ್ಲುವುದು ಕಠಿಣವಾಗುತ್ತಿತ್ತು. ಏಕೆಂದರೆ, ಸಂತೋಷಭರಿತವಾದ, ಹಿತಾನುಭವ ನೀಡುತ್ತಿದ್ದ ಅವನ ಸ್ನೇಹದಿಂದ ತುಂಬಾ ಹೊತ್ತು ದೂರ ಇರುವುದು ಅಸಾಧ್ಯದ ಮಾತಾಗಿತ್ತು.

ಜಾಮಿಯಾ ತೊರೆದ ಮೇಲೆ ದಾನಿಶ್‌ ಜತೆಗಿನ ನನ್ನ ಗೆಳೆತನ ತುಂಬಾ ಕಡಿಮೆ ವಾಗ್ವಾದಗಳಿಂದ ಕೂಡಿತ್ತು ಮತ್ತು ಹೆಚ್ಚು ಮಮತೆಯಿಂದ ತುಂಬಿತ್ತು. 2009ರಲ್ಲಿ ನಾವಿಬ್ಬರೂ ಜತೆಯಾಗಿ ಮತ್ತೊಂದು ಕಿರುಚಿತ್ರವನ್ನು ಮಾಡಿದ್ದೆವು. ಆತನ ಲೆನ್ಸ್‌ಗಳು ಚಿತ್ರರಂಗದ ದಿಗ್ಗಜ ಎನಿಸಿದ ಡಾ. ಡೆವಿಡ್‌ ಬೇಕರ್‌ ಅವರ ಗಮನವನ್ನು ಸೆಳೆದಿದ್ದವು. ಹೌದು, ಅದು ದಾನಿಶ್‌ ಪಾಲಿಗೆ ತೀರಾ ಅನಿರೀಕ್ಷಿತವಾಗಿತ್ತು.

ಹಿಂದೂ ಮೂಲಭೂತವಾದಿಗಳಿಂದ ವ್ಯಕ್ತಿಯೊಬ್ಬನಿಗೆ ಥಳಿತ (Photo: REUTERS/Danish Siddiqui)

ಅದೇ ಸಮಯದಲ್ಲಿ ದಾನಿಶ್‌ ಮುಂಬೈಗೆ ಸ್ಥಳಾಂತರಗೊಂಡ. ಬಳಿಕ ನಾವು ಯಾವಾಗಲೋ ಒಮ್ಮೆ ಭೇಟಿ ಆಗುತ್ತಿದ್ದೆವು. ಅವನ ಆ ಧೈರ್ಯ ಹಾಗೂ ಸ್ವಾತಂತ್ರ್ಯದ ಮನೋಭಾವ ಕಂಡು ಒಮ್ಮೊಮ್ಮೆ ನನಗೆ ಅಸೂಯೆಯೂ ಆಗಿದ್ದಿದೆ. ಹಾಗೆಯೇ ಆತನ ಗೆಳೆತನಕ್ಕಾಗಿ ನಾನು ಚಿರಋಣಿ ಆಗಿರುವೆ. ಮುಂದೆ ನಾನು ಪಿಎಚ್‌.ಡಿ ಮಾಡಲು ಇಂಗ್ಲೆಂಡ್‌ಗೆ ಹೋದೆ. ಭಿನ್ನ ಬಿಂದುಗಳತ್ತ ಬದುಕು ಸಾಗಿದರೂ ಪ್ರತೀ ವರ್ಷ ಮುಂಬೈ ಇಲ್ಲವೆ ದೆಹಲಿಯಲ್ಲಿ ನಾವು ತಪ್ಪದೇ ಭೇಟಿ ಮಾಡುತ್ತಿದ್ದೆವು.

ರಾಯಿಟರ್ಸ್‌ ಸುದ್ದಿ ಸಂಸ್ಥೆಯಲ್ಲಿ ಫೋಟೊ ಜರ್ನಲಿಸ್ಟ್‌ ಆಗಿ ದಾನಿಶ್‌ ಸೇರ್ಪಡೆಯಾದ. ಅಪಾಯಕಾರಿ ಅಸೈನ್‌ಮೆಂಟ್‌ಗಳ ಹೊಣೆ ಹೊತ್ತು ಬಿಡುವಿಲ್ಲದಂತೆ ಆತ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುತ್ತುತ್ತಿದ್ದ. ರಾಯಿಟರ್ಸ್‌ ಜತೆಗಿನ ಹತ್ತು ವರ್ಷಗಳ ವೃತ್ತಿ ಜೀವನದಲ್ಲಿ ಆತ ಮಾನವ ಸಂಘರ್ಷಗಳಿಗೆ ಸಂಬಂಧಿಸಿದಂತೆ ಎಂದಿಗೂ ಮಾಸದ ಸಾವಿರಾರು ಬಿಂಬಗಳನ್ನು ಸೆರೆಹಿಡಿದ. ಅವುಗಳಲ್ಲಿ ಕಾಬೂಲ್‌ನ ಬೆಳ್ಳಿತೆರೆಗೆ ಸಂಬಂಧಿಸಿದಂತೆ ತೆಗೆದ ಸರಣಿ ಚಿತ್ರಗಳು, ಭಾರತದಲ್ಲಿ ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ವಲಸೆ ಕಾರ್ಮಿಕರ ಪರದಾಟದ ಬಿಂಬಗಳು, ರೋಹಿಂಗ್ಯಾ ಜನಾಂಗದ ಕರುಣಾಜನಕ ಸ್ಥಿತಿಯ ನೋಟಗಳು (ಈ ಚಿತ್ರಗಳಿಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಯೂ ಬಂತು) ಸದಾ ಕಾಲದ ನನ್ನ ಫೇವರಿಟ್‌.

ಮಾನವೀಯತೆಯ ಅಪ್ರತಿಮ ಕ್ಷಣಗಳನ್ನೋ ದಾರುಣ ಸನ್ನಿವೇಶಗಳನ್ನೋ ತನ್ನ ಫ್ರೇಮ್‌ಗಳಲ್ಲಿ ಸೆರೆಹಿಡಿದ ಮಾತ್ರಕ್ಕೆ ದಾನಿಶ್‌ ವಿರಮಿಸುತ್ತಿರಲಿಲ್ಲ. ತನ್ನ ಬಿಂಬಗಳಲ್ಲಿ ಸೆರೆಯಾದ ವ್ಯಕ್ತಿಗಳನ್ನು ಚೌಕಟ್ಟಿನ ಆಚೆಗೂ ಆತ ಹುಡುಕಿಕೊಂಡು ಹೋಗುತ್ತಿದ್ದ. ಪ್ರತಿಯೊಂದು ಬಿಕ್ಕಟ್ಟಿನ ಸಂದರ್ಭದಲ್ಲೂ ಇದು ಪುನರಾವರ್ತನೆ ಆಗುತ್ತಿತ್ತು. ಅದೇ ದಾನಿಶ್‌ನ ಕೆಲಸದ ವೈಶಿಷ್ಟ್ಯ ಕೂಡ. ದೆಹಲಿಯಿಂದ ಊರಿಗೆ ನಡೆದುಕೊಂಡು ಹೋದ ವಲಸೆ ಕಾರ್ಮಿಕ ದಯಾರಾಮ್‌, ಬುಂದೇಲ್‌ಖಂಡದ ತನ್ನ ಹಳ್ಳಿಗೆ ಸುರಕ್ಷಿತವಾಗಿ ತಲುಪಿರುವುದನ್ನು ಆ ಹಳ್ಳಿಗೆ ತಾನೂ ಭೇಟಿಕೊಟ್ಟು ದಾನಿಶ್‌ ಖಚಿತಪಡಿಸಿಕೊಂಡಿದ್ದ.

ಹಿಂದೂ ಮೂಲಭೂತವಾದಿಗಳು ಜುಬೈರ್‌ ಎಂಬ ವ್ಯಕ್ತಿಯನ್ನು ಥಳಿಸುತ್ತಿದ್ದ ‘ಲೈವ್‌’ ಚಿತ್ರ ತೆಗೆದಿದ್ದ ಈ ಛಾಯಾಗ್ರಾಹಕ, ಜುಬೈರ್‌ನನ್ನು ಆತ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಭೇಟಿಮಾಡಿ, ಆತ ಚೇತರಿಸಿಕೊಂಡಿದ್ದನ್ನು ಕಂಡು ಸಮಾಧಾನದ ನಿಟ್ಟುಸಿರುಬಿಟ್ಟಿದ್ದ. ಮಾನವೀಯ ಸಂಘರ್ಷದ ‘ಐಕಾನಿಕ್‌ ಫೋಟೊ’ಗಳನ್ನು ಸೆರೆ ಹಿಡಿಯುವುದು ಅವನಿಗೆ ಎಷ್ಟು ಮುಖ್ಯವಾಗಿತ್ತೋ ಬಿಕ್ಕಟ್ಟಿನಲ್ಲಿ ಸಿಕ್ಕ ವ್ಯಕ್ತಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವುದು ಅಷ್ಟೇ ಮಹತ್ವದ್ದಾಗಿತ್ತು. ಹೀಗಾಗಿ ಆತ ಅಪಾಯ ಲೆಕ್ಕಿಸದೆ ಧೈರ್ಯದಿಂದ ಮುನ್ನುಗ್ಗುತ್ತಿದ್ದ.

ಜಾಮಿಯಾದಲ್ಲಿ ತಾನು ಜೀವಿಸಿದ್ದ ಸಮುದಾಯದ ಮೇಲೆ ಆತ ಹೊಂದಿದ್ದ ಬಲವಾದ ಒಲವು, ಭಾರತ ಹಾಗೂ ಹೊರಗಿನ ಜಗತ್ತಿನ ಕುರಿತು ಆತನಲ್ಲಿದ್ದ ಕಲ್ಪನೆಗಳ ಮೆರುಗು ಆತನನ್ನು ಅಪಾಯಕಾರಿ ಕೆಲಸಗಳಿಗೆ ಒಪ್ಪುವಂತೆ ಪ್ರೇರೇಪಿಸಿದ್ದವು. ಮುಸ್ಲಿಂ ಭಯೋತ್ಪಾದಕ ಹಾಗೂ ಮುಸ್ಲಿಂ ಉಪದ್ರವ ಎಂಬ ಪದಗಳು ಆತನ ಕೆಲಸ ಹಾಗೂ ಚಿಂತನೆಗಳ ಮೇಲೆ ಪ್ರಭಾವವನ್ನು ಬೀರಿದ್ದವು. ಆತನ ಮುನ್ನುಗ್ಗುವ ಧೈರ್ಯವಂತೂ ಪ್ರಶ್ನಾತೀತ. ಹಿಂಸಾಚಾರಗಳು ನಡೆದಾಗ, ಅದು ಯಾವುದೇ ಪ್ರದೇಶದಲ್ಲಿ ಸಂಭವಿಸಿರಲಿ, ಯಾವ ಅಪಾಯವನ್ನೂ ಲೆಕ್ಕಿಸದೆ ಒಳನುಗ್ಗಿ ಫೋಟೊ ಕ್ಲಿಕ್ಕಿಸುತ್ತಿದ್ದ.

ನಾವಿಬ್ಬರೂ ಕೊನೆಯ ಬಾರಿಗೆ ಭೇಟಿಯಾಗಿದ್ದು 2020ರ ಮಾರ್ಚ್‌ನಲ್ಲಿ. ಆತ ದೆಹಲಿ ಗಲಭೆಯನ್ನು ಆಗಷ್ಟೇ ಕವರ್‌ ಮಾಡಿಬಂದಿದ್ದ. ನಾನು ಕೆಲವಾರಗಳ ಮಟ್ಟಿಗೆ ಇದ್ದುಹೋಗಲು ತವರಿಗೆ ಬಂದಿದ್ದೆ. ಆ ಸಮಯದಲ್ಲಿ ಬಲಪಂಥೀಯ ಟ್ರೋಲ್‌ ದಾಳಿಯಿಂದ ಆತ ಖಿನ್ನನಾಗಿದ್ದ. ಹಿಂದುತ್ವದ ಪ್ರತಿಪಾದಕರಾಗಿದ್ದ ಗಲಭೆಕೋರರು ವ್ಯಕ್ತಿಯೊಬ್ಬನನ್ನು ಸಾಯುವಂತೆ ಥಳಿಸುತ್ತಿದ್ದ ‘ಲೈವ್‌’ ಚಿತ್ರವನ್ನು ತಾನು ತೆಗೆದ ಸಾಹಸದ ಕಥೆಯನ್ನು ಆತ ನನ್ನೆದುರು ಹೇಳಿಕೊಂಡಿದ್ದ. ಆ ಘಟನೆ ಒಂದು ಕುತಂತ್ರದಿಂದ ಕೂಡಿತ್ತು. ಗಲಭೆಕೋರರ ಕುರಿತು ಸಹಾನುಭೂತಿ ಹೊಂದಿದ ಪತ್ರಕರ್ತನಂತೆ ನಟಿಸಿದ್ದ ಆತ, ಥಳಿತದ ಘಟನೆಯಲ್ಲಿ ಜತೆ ಸೇರಿಕೊಳ್ಳುವಂತೆ ಗಲಭೆಕೋರರಿಂದಲೇ ಆಹ್ವಾನ ಪಡೆದಿದ್ದ. ವ್ಯಕ್ತಿಯನ್ನು ಥಳಿಸುವಾಗ ದಾನಿಶ್‌ ಫೋಟೊ ಕ್ಲಿಕ್ಕಿಸತೊಡಗಿದಂತೆ ಗಲಭೆಕೋರರಿಗೆ ಆತನ ಮೇಲೆ ಅನುಮಾನ ಬಂದಿತ್ತು. ಆಗ ಗುರುತಿನ ಚೀಟಿ ತೋರಿಸುವಂತೆ ಅವರು ಪಟ್ಟು ಹಿಡಿದಾಗ ಆತನ ನೆರವಿಗೆ ಬಂದಿದ್ದು ಹಿಂದೂ ಧರ್ಮಕ್ಕೆ ಸೇರಿದ ಒಬ್ಬ ಸಹೋದ್ಯೋಗಿ. ಇಬ್ಬರೂ ದಿಕ್ಕಾಪಾಲಾಗಿ ಓಡಿ, ಪ್ರಾಣಾಪಾಯದಿಂದ ಬಚಾವಾಗಿದ್ದರು.

ಭಾರತದಲ್ಲಿ 1990ರಿಂದ ಈಚೆಗಿನ ಮೂರು ದಶಕಗಳ ಅವಧಿಯಲ್ಲಿ –ನಮ್ಮ ಓರಗೆಯವರು ಬೆಳೆಯುತ್ತಿರುವ ದಿನಗಳಲ್ಲಿ– ಗಲಭೆಗಳಿಗೆ ಸಂಬಂಧಿಸಿದ ಮಾಧ್ಯಮದ ಸಂಕಥನಗಳು ನನ್ನ ಗೆಳೆಯನ ದೇಹದಲ್ಲಿ ಹೇಗೆಲ್ಲ ನೆಲೆ ಪಡೆದವು ಎಂದು ನೆನೆದಾಗ ಸೋಜಿಗ ಆಗುತ್ತದೆ. ಇಂತಹ ದೇಹವನ್ನು ಹೊಂದುವ ಅರ್ಥವೇನೆಂದು ನನಗೆ ತಿಳಿದಿದೆ. ಏಕೆಂದರೆ, ದ್ವೇಷದ ನೆರಳಿನಲ್ಲಿಯೇ ಬದುಕುವಾಗ ಮಧುರ ನೆನಪುಗಳಿಗೆ ಎಲ್ಲಿಯ ಜಾಗ? ಗಲಭೆಯಿಂದ ನಲುಗಿದವರ ನೋವನ್ನು ದಾಖಲಿಸುವುದು ತನ್ನ ಕರ್ತವ್ಯವೆಂದು ಭಾವಿಸಿದ್ದ ಆತನಿಗೆ, ದುರ್ಬಲರ ಮೇಲಿನ ದಾಳಿಯನ್ನು ದಾಖಲಿಸುವುದು ತನ್ನ ಮೇಲಿನ ಹೊಣೆಯಾಗಿ ಕಂಡಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ನನ್ನೊಂದಿಗೆ ಒಮ್ಮೆ ಚರ್ಚಿಸಿದ್ದ ದಾನಿಶ್‌, ನಮ್ಮಂಥವರಿಗೆ ಇದು ಯಾವ ರೀತಿಯಲ್ಲೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದ. ಆದರೆ, ಜಾಮಿಯಾದ ರಿಕ್ಷಾವಾಲಾ ಏನು ಮಾಡಬೇಕು ಎಂದು ಪ್ರಶ್ನಿಸಿದ್ದ. ತನ್ನ ಪೂರ್ವಜರು ಎಲ್ಲಿಂದ ಬಂದರು, ಎಲ್ಲಿಗೆ ಹೋದರು ಎನ್ನುವುದಕ್ಕೆ ಆತನ ಬಳಿ ಯಾವ ಕಾಗದಪತ್ರಗಳಿವೆ ಎಂದೂ ಕೇಳಿದ್ದ. ಕಳೆದ ಒಂದು ವರ್ಷದಿಂದ ನನಗೆ ಆತನ ಆರೋಗ್ಯದ ವಿಷಯ ತೀವ್ರ ಕಳವಳ ಉಂಟುಮಾಡಿತ್ತು. ನಮ್ಮ ಇತ್ತೀಚಿನ ಸಂದೇಶಗಳು ಮೊದಲಿನಂತೆ ಅಸಹ್ಯಕರ ರಾಜಕೀಯ ಸನ್ನಿವೇಶಗಳ ಕುರಿತ ಚರ್ಚೆಗೆ ಹೆಚ್ಚು ಬಳಕೆ ಆಗುತ್ತಿರಲಿಲ್ಲ. ನಾನು ಒಬ್ಬ ಅಮ್ಮನಂತೆ, ಒಬ್ಬ ಸಹೋದರಿಯಂತೆ, ರಾಜಕೀಯದ ಕುರಿತು ನಿರಾಸಕ್ತ ಗೆಳತಿಯಂತೆ ಆತನನ್ನು ವಿಚಾರಿಸಿಕೊಳ್ಳುತ್ತಿದ್ದೆ. 2019ರಲ್ಲಿ ಶ್ರೀಲಂಕಾಕ್ಕೆ ತೆರಳಿದ್ದಾಗ ಆತ ಕೆಲಕಾಲ ಬಂಧನಕ್ಕೆ ಒಳಗಾಗಿದ್ದ. ಆತನ ಒಡನಾಡಿಗಳೆಲ್ಲ ವರದಿ ಮಾಡಲು ಈ ರೀತಿ ರಿಸ್ಕ್‌ ತೆಗೆದುಕೊಳ್ಳದಂತೆ ಆಕ್ಷೇಪಿಸಿದ್ದರು.

ತನ್ನ ಮುಂದಿನ ಪ್ರವಾಸ ಅಫ್ಗಾನಿಸ್ತಾನಕ್ಕೆ ಎಂದು ದಾನಿಶ್‌ ಕಳೆದ ತಿಂಗಳು ನನಗೆ ತಿಳಿಸಿದ್ದ. ನನಗೆ ಈ ಸುದ್ದಿ ಆತಂಕ ತರುವ ಬದಲು ಸಮಾಧಾನವನ್ನೇ ಉಂಟು ಮಾಡಿತ್ತು. ಏಕೆಂದರೆ, ಭಾರತದಲ್ಲಿ ಕೋವಿಡ್‌ನ ಬಿಂಬಗಳನ್ನು ಆತ ಸೆರೆ ಹಿಡಿಯುತ್ತಿದ್ದ ರೀತಿಗೆ ವಿಪರೀತ ಎನಿಸುವಷ್ಟು ದ್ವೇಷವನ್ನು ಆತ ಎದುರಿಸಬೇಕಿತ್ತು. ಆನ್‌ಲೈನ್‌ನಲ್ಲೂ ತೀವ್ರ ಟೀಕೆಗೆ ಗುರಿಯಾಗಿದ್ದ.

‘ಅಫ್ಗಾನಿಸ್ತಾನದಲ್ಲಿ ದೊಡ್ಡ ಸಾಹಸಕ್ಕೆ ಕೈ ಹಾಕುವ ಅಗತ್ಯವಿಲ್ಲ’ ಎಂದು ನಾನು ಬರೆದಿದ್ದೆ. ‘ನೋಡೋಣ. ಅಫ್ಗಾನಿಸ್ತಾನ ಎಂದರೇನೇ ಸಾಹಸ ಅಲ್ಲವೇ’ ಎಂದು ಉತ್ತರಿಸಿದ್ದ ಆತ, ಜತೆಗೊಂದು ನಗುವಿನ ಇಮೋಜಿ ಕಳುಹಿಸಿದ್ದ.

ವಾರದ ಹಿಂದೆ ಹಮ್ವಿಯಲ್ಲಿ (ಮಿಲಿಟರಿ ಟ್ರಕ್‌) ಕುಳಿತು ಆತ ಚಿತ್ರೀಕರಿಸಿದ್ದ ವಿಡಿಯೊಗಳನ್ನು ವಾಟ್ಸ್‌ ಆ್ಯಪ್‌ನಲ್ಲಿ ನೋಡುತ್ತಿದ್ದೆ. ಅಲ್ಲಿನ ‘ಆ್ಯಕ್ಷನ್‌’ ಸೆರೆ ಹಿಡಿಯುವುದನ್ನು –ಅದೂ ಗುಡ್ಡಗಾಡಿನ ಆ ವಾಹನದ ಕುಲುಕಾಟದಲ್ಲಿ– ಈ ತಾರೆ ಹೇಗೆ ಆನಂದಿಸುತ್ತಿರಬಹುದು ಎಂದು ಯೋಚಿಸಿ ತುಟಿಯಂಚಿನಲ್ಲಿ ನಗುವೊಂದು ಮಿಂಚಿ ಮರೆಯಾಗಿತ್ತು.

ಪ್ರಸಾಧನದ ಈ ಪರಿ... ಕುಂಭಮೇಳಕ್ಕೆ ಬೂದಿ ಬಳಿದುಕೊಂಡು ಸನ್ನದ್ಧವಾಗುತ್ತಿರುವ ನಾಗಾ ಸಾಧು (Photo: REUTERS/Danish Siddiqui)

ಸ್ವತಃ ಬೈಕ್‌ ಸವಾರಿ ಪ್ರಿಯನಾದ ದಾನಿಶ್‌, ಚಲಿಸುವ ವಾಹನಗಳಿಂದ ದೃಶ್ಯ ಸೆರೆ ಹಿಡಿಯುವಲ್ಲಿ ನಿಸ್ಸೀಮನಾಗಿದ್ದ. 2005ರ ವೈರಲ್‌ ವಿಡಿಯೊಗಳಂತೆ ಇವುಗಳೇನು ಅವಿಶ್ವಸನೀಯ ಮೂಲಗಳಿಂದ ಬಂದಂಥವಲ್ಲ. ಹಿಂಸೆಯ ಚಿತ್ರಣಗಳನ್ನು ಆತನೇ ತೆಗೆದಿದ್ದರಿಂದ ಅವುಗಳ ಸತ್ಯಾಸತ್ಯತೆ ಕುರಿತು ಸಂಶಯಗಳಿಗೆ ಜಾಗವಿಲ್ಲ. ಮತ್ತೆ ವಾದಿಸುವುದು ಏನೂ ಉಳಿದಿಲ್ಲ. ಆ ದೃಶ್ಯಗಳಿಗೆ ಪ್ರಾಣಿಗಳ ಇಮೋಜಿಗಳೊಂದಿಗೆ ನಾನು ಪ್ರತಿಕ್ರಿಯೆ ನೀಡಿದ್ದೆ. ನನ್ನ ಆತಂಕವನ್ನು ತಮಾಷೆಯ ಚಿಹ್ನೆಗಳಲ್ಲಿ ಮರೆಮಾಡಿದ್ದೆ. ನಾನೇನಾದರೂ ಇನ್ನಷ್ಟು ಪ್ರೋತ್ಸಾಹಿಸಿದ್ದರೆ ತಾಲಿಬಾನ್‌ ವಿರುದ್ಧ ಆತ ಮತ್ತಷ್ಟು ರಿಸ್ಕ್‌ ತೆಗೆದುಕೊಳ್ಳಲು ಉತ್ಸಾಹ ತೋರುತ್ತಿದ್ದ ಎಂಬ ಭಯ. ಆದರೆ, ಆತ ಎಲ್ಲವನ್ನೂ ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದ. ಅಂದಹಾಗೆ, ಟ್ವಿಟರ್‌ ಆತನತ್ತ ದ್ವೇಷದ ಮಹಾಪೂರವನ್ನೇ ಹರಿಸಿದ ವೇದಿಕೆ. ಹಾಗೆಯೇ ಆತನ ಆರಾಧನೆಗೆ ಕಾರಣವಾದ, ಆತನ ಕೆಲಸದ ಕುರಿತು ಮೆಚ್ಚುಗೆಯ ಮಳೆಯನ್ನು ಸುರಿಸಿದ ವೇದಿಕೆಯೂ ಹೌದು.

ಮುಸ್ಲಿಂ ಅಲ್ಪಸಂಖ್ಯಾತ ಹಾಗೂ ಮುಸ್ಲಿಂ ಬಹುಸಂಖ್ಯಾತ ಎರಡೂ ಸನ್ನಿವೇಶಗಳ ಕುರಿತು ತೀವ್ರ ಕುತೂಹಲವನ್ನು ಹೊಂದಿ, ತನ್ನ ಅನುಭವಗಳನ್ನು ಹಂಚಿಕೊಂಡವನು ದಾನಿಶ್‌. ಅವನ ಗೆಳತಿಯಾದ ನನಗೆ ಅವನ ಅಗಲಿಕೆಯ ನೋವು ಅನಂತ. ಕೆಲವು ತಿಂಗಳ ಹಿಂದೆ ಆತ ನನ್ನೊಡನೆ ಮಾತನಾಡುವಾಗ, ‘ಯಾವುದು ನಿನ್ನನ್ನು ಅಷ್ಟೊಂದು ಬ್ಯುಸಿಯಾಗಿ ಇಟ್ಟಿದ್ದು’ ಎಂದು ಕೇಳಿದ್ದ. ನಾನು ‘ಬರಹ’ ಎಂದು ಉತ್ತರಿಸಿದ್ದೆ. ‘ಮಾರಾಯ್ತಿ, ಅದೆಷ್ಟೊಂದು ಬರೆಯುತ್ತಿ’ ಎಂದು ಎಂದಿನ ತಮಾಷೆ ಧಾಟಿಯಲ್ಲಿ ಮರುಪ್ರಶ್ನೆ ಹಾಕಿದ್ದ. ‘ನಿನ್ನ ಪ್ರಕಾಶಮಾನ ಹಾಗೂ ಕುತೂಹಲದ ವ್ಯಕ್ತಿತ್ವ ನನ್ನನ್ನೂ ಸ್ಪರ್ಶಿಸಿದೆ ಹಾಗೂ ಜಾಮಿಯಾದ ಆ ಭೇಟಿ ನನ್ನನ್ನು ಶಾಶ್ವತವಾಗಿ ಬದಲಾಗುವಂತೆ ಮಾಡಿದೆ, ಮಾರಾಯ’ ಎಂದು ಆತನಿಗೆ ಹೇಳದಿರುವ ವಿಷಾದ ನನ್ನನ್ನು ಈಗಲೂ ಕಾಡುತ್ತಿದೆ. ಇರಲಿ, ನಿನ್ನ ಚಿರನಿದ್ರೆ ನೆಮ್ಮದಿಯಿಂದ ಸಾಗಲಿ ಗೆಳೆಯ, ಒಳ್ಳೆಯದಕ್ಕಾಗಿ ನಮ್ಮ ಹೋರಾಟ ಹೀಗೆ ಮುಂದುವರಿಯುತ್ತದೆ.

(ಮೂಲ ಇಂಗ್ಲಿಷ್‌ ಲೇಖನ ‘ದಿ ವೈರ್‌’ನಲ್ಲಿ ಪ್ರಕಟವಾಗಿತ್ತು)

ಲೇಖಕಿ: ಬರ್ಲಿನ್‌ನ ಹಮ್‌ಬೋಲ್ಡ್‌ ವಿಶ್ವವಿದ್ಯಾಲಯದ ಸಂಶೋಧಕಿ
ಕನ್ನಡಕ್ಕೆ: ಪ್ರವೀಣ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.