ಶೀರ್ಷಿಕೆ ಓದಿ ಓಹೋ..ಫಿಶ್ ಫ್ರೈ, ಫಿಶ್ ಕರಿ, ಫಿಶ್ ಮಸಾಲ, ಫಿಶ್ ಸುಕ್ಕಾ, ಮೀನ್ ಸಾರ್.. ಬರೋಬ್ಬರಿ ಆಸೆಯಿಂದ ತಿನ್ನುವ ಆಸಾಮಿ ಅಂದುಕೊಳ್ಳಬೇಡಿ. ಇದು ಮೀನುಗಳನ್ನು ಪ್ರೀತಿಸುವ, ಸಲಹುವ, ಸಾಕುವ, ಅವುಗಳಿಗೆ ವೇಳಾಪಟ್ಟಿಯಂತೆ ಊಟ ಮಾಡಿಸುವ ಮತ್ಸ್ಯಪ್ರಿಯನ ವಾತ್ಸಲ್ಯ ಯಾನವಿದು.
ದಾವಣಗೆರೆ ಜಿಲ್ಲೆ ಸಂತೆಬೆನ್ನೂರಿನಲ್ಲಿ ಐತಿಹಾಸಿಕ ಪುಷ್ಕರಣಿ ಇದೆ(ವಿವರಕ್ಕೆ ಬಾಕ್ಸ್ ನೋಡಿ). ಇದರ ನಡುವೆ ವಸಂತ ಮಂಟಪವಿದೆ. ಇದೊಂದು ಐತಿಹಾಸಿಕ ಸ್ಮಾರಕ. ಪುಷ್ಕರಣಿಯ ನೀರಿನಲ್ಲಿ ಭಿನ್ನ ಭಿನ್ನ ಜಾತಿಯ, ವರ್ಣಮಯ, ಆಕರ್ಷಕ ಮೀನುಗಳ ಸಾಮ್ರಾಜ್ಯವೇ ಇದೆ. ಮೀನು ಸಾಕಾಣೆ ಉದ್ದೇಶ ಅಲ್ಲದಿದ್ದರೂ ಆಕರ್ಷಣೆಯ ಕೇಂದ್ರ ಬಿಂದುವಾಗಿ ಸಾವಿರಾರು ಮೀನುಗಳು ನೋಡುಗರ ಮನಸೆಳೆದಿವೆ. ಈ ಮೀನುಗಳಿಗೆ ವ್ಯಕ್ತಿಯೊಬ್ಬರು ತಪ್ಪದೇ ಆಹಾರ ಪೂರೈಸುತ್ತಾರೆ. ಆ ಮತ್ಸಪ್ರಿಯರೇ ಸಂತೆಬೆನ್ನೂರಿನ ಪ್ರಸನ್ನ ಗೌಡರ್.
‘ದೇವರ ತಲೆ ಮೇಲೆ ಇಡುವ ಹೂ ತಪ್ಪಿದರೂ ತಪ್ಪಬಹುದು’ ಆದರೆ ಈ ಪ್ರಸನ್ನ ಅವರು ಮೀನುಗಳಿಗೆ ಬಡಿಸುವ ಊಟ ಮಾತ್ರ ಎಂದಿಗೂ ತಪ್ಪಿಲ್ಲ, ತಪ್ಪುವುದಿಲ್ಲ.
ಮೂಲತಃ ಚಿತ್ರ ಕಲಾವಿದರಾಗಿರುವ ಇವರು ಪ್ರತಿದಿನ ಸಂಜೆ ಪುಷ್ಕರಣಿ ಮೆಟ್ಟಿಲುಗಳ ಮೇಲೆ ಕುಳಿತು ಬ್ರೆಡ್, ಬನ್, ಮಂಡಕ್ಕಿಗಳನ್ನು ತಮ್ಮ ಕೈಯಾರೆ ಮೀನುಗಳಿಗೆ ತುತ್ತಿಟ್ಟಂತೆ ತಿನ್ನಿಸುತ್ತಾರೆ!
ಇವರು ಸಂಜೆ ಬಂದು ಎಂದಿನ ಜಾಗದಲ್ಲಿ ಕುಳಿತು ಬೆರಳುಗಳ ನಡುವೆ ಆಹಾರ ಹಿಡಿದು ನೀರಲ್ಲಿ ಕೈ ಅಲುಗಾಡಿಸಿದರಾಯಿತು; ಎಷ್ಟೇ ಆಳದಲ್ಲಿದ್ದರೂ ಎಲ್ಲಾ ಮೀನುಗಳು ನಾ ಮುಂದು ತಾ ಮುಂದು ಎಂದು ದೇವರ ಪ್ರಸಾದಕ್ಕೆ ಮುಗಿ ಬೀಳುವ ಭಕ್ತರಂತೆ ದೌಡಾಯಿಸಿ ಬಂದು ತಿನ್ನುತ್ತವೆ.
ಬೇರೆ ಏನೇ ಕಾರ್ಯಕ್ರಮಗಳಿದ್ದರೂ ಈ ಮತ್ಸ್ಯಪ್ರಿಯ ಕಲಾವಿದ ಅದನ್ನು ಮುಂದೂಡಿ ಅಥವಾ ರದ್ದುಮಾಡಿ ತನ್ನ ಮತ್ಸ್ಯ ದಾಸೋಹಿ ಕಾರ್ಯದಲ್ಲಿ ಸದಾ ತಲ್ಲೀನ.
ಈ ಕಾರಂಜಿಯಲ್ಲಿ ಆಮೆಗಳೂ ಇವೆ.ಅವು ಒಮ್ಮೊಮ್ಮೆ ಇವೂ ಪ್ರಸನ್ನರ ಆಹಾರ ರುಚಿ ನೋಡುತ್ತವೆ. ರಾತ್ರಿ ಪಾಳಿಯ ಕಾವಲುಗಾರರಿಲ್ಲದೇ ಇತ್ತೀಚಿಗೆ ಭಕ್ಷಿಸುವ ಮತ್ಸ್ಯಪ್ರಿಯರಿಂದ ದೊಡ್ಡ ದೊಡ್ಡ ಮೀನುಗಳು ಗಾಯಬ್ ಆಗುತ್ತಿರುವ ನೋವು ಪ್ರಸನ್ನ ಗೌಡರಿಗಿದೆ.
ದಕ್ಷಿಣ ಭಾರತದ ಓಸ್ಟ್ ಎಂದು ಕರೆಸಿಕೊಳ್ಳುವ ಸಂತೆಬೆನ್ನೂರಿನ ಈ ಕಾರಂಜಿ ನೋಡುಗರಿಗೆ ಹಬ್ಬ. ನಮ್ಮ ಪ್ರಸನ್ನರ ಧಾರಾಳತನದಿಂದ,ಮಾನವೀಯ ಬಂಧದೊಂದಿಗೆ ಜಲಚರ ಕಾಳಜಿಯಿಂದ ಈ ಕಾರಂಜಿಯಲ್ಲಿರುವ ಮೀನುಗಳಿಗೆ ನಿತ್ಯ ಆಹಾರದ ಹಬ್ಬ. ಬನ್ನಿ ಒಮ್ಮೆ ನಮ್ಮೂರ ಪುಷ್ಕರಣಿಗೆ, ಪ್ರಸನ್ನ ಗೌಡರ ಮತ್ಸ್ಯ ದಾಸೋಹ ನೋಡಲು!
ಪುಷ್ಕರಣಿ, ಮುಸಾಫಿರ್ ಖಾನ
ಸಂತೆಬೆನ್ನೂರಿನ ಐತಿಹಾಸಿಕ ಪುಷ್ಕರಣಿ ಅಥವಾ ಹೊಂಡ ಹೆಸರಾಂತ ಪ್ರವಾಸಿ ತಾಣ. ದುರ್ಗದ ಅರಸರ ಆಳ್ವಿಕೆಯ ಕಾಲದಲ್ಲಿ ಸಾಮಂತ ದೊರೆ ಕೆಂಗಾ ಹನುಮಪ್ಪ ನಾಯಕ ಎಂಬುವವನು ಇದನ್ನು ನಿರ್ಮಿಸಿದ್ದಾರೆಂದು ಐತಿಹ್ಯ ಇದೆ. 16ನೇ ಶತಮಾನದಲ್ಲಿ ಕುಶ್ಮಾಂಡ ಶೈಲಿಯಲ್ಲಿ ಕೆಂಪು ಕಲ್ಲಿನಲ್ಲಿ ಈ ಪುಷ್ಕರಣಿ ನಿರ್ಮಿಸಲಾಗಿದೆ. ನೀರಿನ ಮಧ್ಯೆ ತೇಲುವಂತೆ ಕಾಣುವ ವಸಂತ ಮಂಟಪ ಇದೆ. ಇದಕ್ಕೆ ಕಾರಂಜಿ ಮಂಟಪ ಎಂದೂ ಕರೆಯುತ್ತಾರೆ. ಇದರ ಸುತ್ತಲೂ ಅಷ್ಟ ದಿಕ್ಪಾಲಕರ ನೆನಪಿಗೆ ಎಂಟು ಮಂಟಪಗಳ ನಿರ್ಮಾಣ ಮಾಡಿದ್ದು ಕಾಲನ ಹೊಡೆತಕ್ಕೆ ಸಿಕ್ಕು ಇದೀಗ ಆರು ಮಾತ್ರ ಉಳಿದಿವೆ. ಎದುರಿಗೇ ದೆಹಲಿ ಸುಲ್ತಾನ ರಣದುಲ್ಲಾಖಾನ್ ಕಟ್ಟಿಸಿದ ‘ಮುಸಾಫಿರ್ ಖಾನ’ ಇದೆ.
ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಈ ಪುಷ್ಕರಣಿ ವಶಪಡಿಸಿಕೊಂಡ ಮೇಲೆ ಅಭಿವೃದ್ಧಿ ಕಾರ್ಯ ಸಾಗುತ್ತಿದೆ. ನಾಡಿನ ಮೂಲೆ ಮೂಲೆಯಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಈಗಾಗಲೇ ಹಲವಾರು ಸಿನಿಮಾ ಚಿತ್ರೀಕರಣ ನಡೆದಿದ್ದು ಬಹಳಷ್ಟು ನಿರ್ದೇಶಕರು ಸ್ಥಳ ಪರಿಶೀಲನೆಗೆ ಭೇಟಿ ಕೊಡುತ್ತಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.