’ಅನ್ನಂ ಬ್ರಹ್ಮೇತಿ’ ಎಂದು ವೇದಗಳು ಸಾರಿವೆ. ಅನ್ನದಿಂದಲೇ ಹುಟ್ಟಿ, ಜೀವಿಸಿ, ಕಡೆಗೆ ತಾನೇ ಮತ್ತೊಂದಕ್ಕೆ ಅನ್ನವಾಗಿ ಹೋಗುವುದು - ಅನ್ನದ ಚಕ್ರ. ಆದ್ದರಿಂದಲೇ ಅನ್ನಕ್ಕೆ ನಮ್ಮ ಸಂಸ್ಕೃತಿಯಲ್ಲಿ ಬಹಳ ಪ್ರಮುಖವಾದ ಸ್ಥಾನ. ಇಂದಿಗೂ ಹಳೆಯ ಕಾಲದ ಹಿರಿಯರು ಅನ್ನವನ್ನು ಸಾಕ್ಷಾತ್ ಲಕ್ಷ್ಮಿಯೆಂದೇ ಪರಿಗಣಿಸುತ್ತಾರೆ - ಅನ್ನವನ್ನು ಎಸೆಯಬಾರದು, ಧೂಳಿಗೆ ಹಾಕಬಾರದು ಎಂಬುದು ಇಂದಿಗೂ ನಮ್ಮ ಮನೆಗಳಲ್ಲಿ ಬಹುದೊಡ್ಡ ಮೌಲ್ಯ.
ಅನ್ನವನ್ನು ಬೆಳೆಯುವ ಭೂಮಿತಾಯಿ ಮತ್ತು ಬಸವಣ್ಣನಿಗೆ ನಮ್ಮ ಜನಪದದಲ್ಲಿ ಮಹತ್ವದ ಸ್ಥಾನ. ‘ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ ಬೂಮ್ತಾಯ ಎದ್ದೊಂದು ಗಳಿಗೆ ನೆನೆದೇನ’ ಎಂಬ ನೆನಕೆಯಿಂದಲೇ ರೈತರ ದಿನ ಶುರುವಾಗುತ್ತದೆ. ಇನ್ನು ತ್ರಿಪದಿಯ ಕವಿ ಸರ್ವಜ್ಞನಂತೂ ಅನ್ನದ ಮಹಿಮೆಯನ್ನು ಇನ್ನಿಲ್ಲದಂತೆ ವರ್ಣಿಸಿದ್ದಾನೆ:
ಅನ್ನದೇವರ ಮುಂದೆ ಇನ್ನು ದೇವರು ಉಂಟೆ
ಅನ್ನವುಂಟಾದರುಣಲುಂಟು ಜಗಕೆಲ್ಲ
ಅನ್ನವೇ ಪ್ರಾಣ ಸರ್ವಜ್ಞ
ಅನ್ನ ಕೇವಲ ಹೊಟ್ಟೆತುಂಬಿಸುವ, ಬಾಯಿಚಪಲಕ್ಕೆ ಒದಗುವ ವಸ್ತುವಲ್ಲ. ಅತಿಯಾದರೆ ಅಮೃತವೂ ವಿಷವೇ! ‘ನಾಕ್ಹೊತ್ತುಂಡೋನನ್ನ ಎತ್ತಿಕೊಂಡ್ಹೋಗಿ’ ಎನ್ನುವ ಗಾದೆಯೇ ಇದೆಯಲ್ಲ! ಸರ್ವಜ್ಞನು ಹದವಾಗಿ ಉಣುವ ಮರ್ಮವನ್ನು ಎರಡು ತ್ರಿಪದಿಗಳಲ್ಲಿ ಪರಿಣಾಮಕಾರಿಯಾಗಿ ತಿಳಿಸಿದ್ದಾನೆ:
ಹಸಿಯದಿರೆ ಉಣಬೇಡ ಹಸಿದು ಮತ್ತಿರಬೇಡ
ಬಿಸಿಬೇಡ ತಂಗಳುಣಬೇಡ ವೈದ್ಯರ
ಬೆಸೆಸಲೇ ಬೇಡ ಸರ್ವಜ್ಞ.
ನಾಲಿಗೆಯ ಕಟ್ಟಿದನು ಕಾಲನಿಗೆ ದೂರನಿಹ
ನಾಲಿಗೆಯು ರುಚಿಯ ಮೇಲಾಡುತಿರಲವನ
ಕಾಲ ಹತ್ತಿರವು ಸರ್ವಜ್ಞ
ಇಂದು ನಾವು ಊಟವನ್ನು ಸರಿಯಾಗಿ ಮಾಡದೇ ದೇಹಾರೋಗ್ಯವನ್ನೂ ಮನಶ್ಶಾಂತಿಯನ್ನೂ ಕಳೆದುಕೊಂಡು ವೈದ್ಯರ ಬಳಿಗೆ ಹೋಗುತ್ತೇವೆ, ಮಾತ್ರೆಗಳನ್ನು ನುಂಗುತ್ತೇವೆ. ಆದರೆ ನಾವು ಏನನ್ನು ತಿನ್ನುತ್ತೇವೆ, ಹೇಗೆ ತಿನ್ನುತ್ತೇವೆ ಎಂಬುದು ದೇಹಾರೋಗ್ಯವನ್ನು ಬಹುಪಾಲು ನಿಯಂತ್ರಿಸುತ್ತದೆ ಎನ್ನುವುದು ಸರ್ವಜ್ಞನ ಅಂಬೋಣ - ಅಕ್ಕಿಯನ್ನುಂಬುವನು ಹಕ್ಕಿಯಂತಾಗುವನು; ಜೋಳವನು ತಿಂಬುವನು ತೋಳದಂತಾಗುವನು, ನವಣೆಯನು ಉಂಬುವನು ಹವಣಾಗಿ ಇರುತಿಹನು, ರಾಗಿಯನು ಉಂಬುವ ನಿರೋಗಿಯೆಂದೆನಿಸುವನು – ಹೀಗೆ ಒಂದೊಂದು ಆಹಾರದ ಮಹತ್ವವನ್ನು ವರ್ಣಿಸುವ ಸರ್ವಜ್ಞ, ಮಜ್ಜಿಗಿಲ್ಲದ ಊಟ ಅಜ್ಜಿಯಿಲ್ಲದ ಮನೆಯಂತೆ ಲಜ್ಜೆಗೇಡೆಂದೇ ಹೇಳಿಬಿಟ್ಟಿದ್ದಾನೆ
ಹೀಗೆ, ಅನ್ನವೆಂಬುದು ಭೋಗವೂ ಹೌದು, ಯೋಗವೂ ಹೌದು. ಸರ್ವಜ್ಞನ ಮಾತುಗಳಲ್ಲೇ ಹೇಳುವುದಾದರೆ:
ಉಂಡು ನೂರಡಿಯೆಣಿಸಿ ಕೆಂಡಕ್ಕೆ ಕೈಕಾಸಿ
ಗಂಡು ಮೇಲಾಗಿ ಮಲಗಿದವನು ವೈದ್ಯನ
ಗಂಡ ಕಾಣಯ್ಯ ಸರ್ವಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.