ಕರ್ನಾಟಕದ ಜಾನಪದ ಸಂಸ್ಕೃತಿ ಹಾಗೂ ಕಲೆಗಳ ಸಂಗ್ರಹಾಲಯ ರಾಮನಗರದ ಜಾನಪದ ಲೋಕ. ಗ್ರಾಮೀಣ ಸಂಸ್ಕೃತಿಯ ವಿಸ್ಮಯಗಳ ಆಗರ. ಬಾಲ್ಯದ ನೆನಪುಗಳು ಮರುಕಳಿಸುವ ತಾಣವಿದು. ಪೂರ್ವಜರ ಬದುಕಿನ ಚಿತ್ರಣವೂ ಕಣ್ಣಮುಂದೆ ಹಾದು ಹೋದಂತಹ ಅನುಭವವಿಲ್ಲಿ.
ಕಲೆ ಮತ್ತು ಸಂಸ್ಕೃತಿಯ ಕುರುಹುಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡಿರುವ ಜಾನಪದ ಲೋಕದಲ್ಲಿ ಇದೀಗ ‘ಬುಡಕಟ್ಟು ಗಿರಿಜನರ ಲೋಕ’ವೊಂದು ಸೃಷ್ಟಿಯಾಗಿದೆ. ನಾಡಿನ ಪ್ರಮುಖ ಬುಡಕಟ್ಟು ಸಮುದಾಯಗಳ ಬದುಕು–ಬವಣೆ ಅನಾವರಣಗೊಂಡಿದೆ. ಮೂಲ ನಿವಾಸಿಗಳ ನೆಲೆ, ಅವರ ಪರಿಸರವು ಸುಮಾರು ಐದು ಎಕರೆಯಷ್ಟು ಜಾಗೆಯಲ್ಲಿ ತೆರೆದುಕೊಂಡಿದೆ. ಇದು ಪ್ರವಾಸಿಗರಿಗೆ ಜಾನಪದ ಲೋಕದ ಮತ್ತೊಂದು ಆಕರ್ಷಣೆ.
ಗಿರಿಜನರಾದ ಜೇನು ಕುರುಬರು, ಗೊಂಡರು, ಕುಡಿಯರು–ಮಲೆ ಕುಡಿಯರು, ಹಾಲಕ್ಕಿ ಒಕ್ಕಲಿಗರು ಹಾಗೂ ಗೌಳಿಗರ ಬದುಕಿನ ಹಾಡಿ (ವಾಸ ಸ್ಥಳ), ಗುಡಿಸಲು, ಜೀವನ ಶೈಲಿ, ಕಸುಬು, ಮನರಂಜನಾ ಕಲೆಗಳು, ವಸ್ತ್ರ ವೈವಿಧ್ಯ, ಸಾಕುಪ್ರಾಣಿಗಳು, ಸುತ್ತಮುತ್ತಲಿನ ಪರಿಸರ... ಇವೆಲ್ಲವೂ ಗಿರಿಜನರ ಲೋಕದಲ್ಲಿ ಪಡಿಮೂಡಿವೆ. ಮನುಷ್ಯ ಮತ್ತು ಪ್ರಾಣಿ–ಪಕ್ಷಿಗಳ ಶಿಲ್ಪಕಲೆಗಳ ಕೆತ್ತನೆಯಲ್ಲಿ ಜೀವಂತಿಕೆ ಎದ್ದು ಕಾಣುತ್ತದೆ.
‘ಪಶ್ಚಿಮಘಟ್ಟದ ಅರಣ್ಯದ ತಪ್ಪಲಿನಲ್ಲಿ ವಾಸಿಸುವ ಸಮುದಾಯಗಳನ್ನೇ ಮುಖ್ಯವಾಗಿ ಇಲ್ಲಿ ಚಿತ್ರಿಸಲಾಗಿದೆ. ಪ್ರತಿ ಮನೆಯ ಪ್ರವೇಶದ್ವಾರದಲ್ಲಿ ಆ ಸಮುದಾಯದ ಕುರಿತು ಮಾಹಿತಿ ಫಲಕವಿದೆ. ಅದನ್ನೊಮ್ಮೆ ಓದಿಕೊಂಡು ಒಳಗಡೆ ಹೋದರೆ ಬೇರೆಯದ್ದೇ ಲೋಕ ತೆರೆದುಕೊಳ್ಳುತ್ತದೆ. ಮನೆಯೊಳಗಿನ ಭಿತ್ತಿಯಲ್ಲಿ ನೇತಾಡುವ ಫೋಟೊಗಳು ಸಮುದಾಯದ ಜೀವನಶೈಲಿ ಹಾಗೂ ಬದುಕಿನ ಕಥೆಯನ್ನು ಹೇಳುತ್ತವೆ. ಅವರು ಬಳಸುವ ವಸ್ತುಗಳನ್ನು ಸಹ ಅಲ್ಲಿಡಲಾಗಿದೆ. ಹೊರಗಡೆ ಸಮುದಾಯಗಳ ಆರಾಧಿಸುವ ಬನವನ್ನು ನಿರ್ಮಿಸಲಾಗಿದೆ. ಇಡೀ ಪರಿಸರದಲ್ಲಿ ಮರ–ಗಿಡಗಳನ್ನು ಬೆಳೆಸಿ ಕಾಡಿನಂತೆಯೇ ಅಭಿವೃದ್ಧಿಪಡಿಸಲಾಗಿದೆ’–ಗಿರಿಜನ ಲೋಕದ ವಿಶೇಷಗಳನ್ನು ಜಾನಪದ ಲೋಕದ ಕ್ಯುರೇಟರ್ ಡಾ. ಯು.ಎಂ. ರವಿ ಹಂಚಿಕೊಳ್ಳುವುದು ಹೀಗೆ.
ಸುಮಾರು ಹದಿನೈದು ಎಕರೆಯಲ್ಲಿ ಹರಡಿಕೊಂಡಿರುವ ಜಾನಪದ ಲೋಕದಲ್ಲಿ ಬುಡಕಟ್ಟು ಗಿರಿಜನರ ಲೋಕವನ್ನು ಸೃಷ್ಟಿಸಬೇಕೆಂಬುದು ಜಾನಪದ ಲೋಕದ ಸಂಸ್ಥಾಪಕರಾದ ಎಚ್.ಎಲ್. ನಾಗೇಗೌಡ ಅವರ ಕನಸಾಗಿತ್ತು. ಇಲ್ಲಿಗೆ ಭೇಟಿ ನೀಡುವವರಿಗೆ ಬುಡಕಟ್ಟು ಸಮುದಾಯಗಳನ್ನು ಪರಿಚಯಿಸುವ ಇರಾದೆ ಹೊಂದಿದ್ದ ಅವರು, ಆ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ಹಾಕಿದ್ದರು.
ಕರ್ನಾಟಕ ಜಾನಪದ ಪರಿಷತ್ತಿನ ಹಿಂದಿನ ಅಧ್ಯಕ್ಷರಾಗಿದ್ದ ಟಿ. ತಿಮ್ಮೇಗೌಡ ಅವರ ಅವಧಿಯಲ್ಲಿ ಬಿಡುಗಡೆಯಾಗಿದ್ದ ₹2 ಕೋಟಿ ಅನುದಾನ ನಾಗೇಗೌಡರ ಕನಸಿನ ಸಾಕಾರಕ್ಕೆ ಮುನ್ನುಡಿ ಬರೆಯಿತು. ನಾಗೇಗೌಡರ ನಿಕಟವರ್ತಿಯೂ ಆಗಿದ್ದ ಜಾನಪದ ತಜ್ಞ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರ ಪರಿಲ್ಪನೆಯಲ್ಲಿ ಗಿರಿಜನ ಲೋಕ ನಿರ್ಮಾಣದ ನೀಲನಕ್ಷೆ ಸಿದ್ಧವಾಯಿತು. ಖ್ಯಾತ ಶಿಲ್ಪಕಲೆ ತಜ್ಞರಾದ ಶಿಗ್ಗಾವಿಯ ಡಾ. ಟಿ.ಬಿ. ಸೊಲಬಕ್ಕನವರ ಮಗ ಹರ್ಷ ಸೊಲಬಕ್ಕನವರ ನೇತೃತ್ವದ ತಂಡ ಗಿರಿಜನ ಲೋಕವನ್ನು ಸೃಷ್ಟಿಸಿತು.
‘ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ನಾನು ಪ್ರಾಧ್ಯಾಪಕನಾಗಿದ್ದಾಗ, ಅಲ್ಲಿ ಸುಮಾರು ಐದು ಎಕರೆಯಲ್ಲಿ ಗಿರಿಸೀಮೆಯನ್ನು ನಿರ್ಮಾಣ ಮಾಡಿದ್ದೆ. ಅದನ್ನು ನೋಡಿ ನಾಗೇಗೌಡರು ಬೆರಗಾಗಿದ್ದರು. ಜಾನಪದ ಲೋಕದಲ್ಲೂ ಇಂತಹದ್ದೊಂದು ಆಗಬೇಕು ಎಂಬುದು ನನ್ನ ಕನಸು. ನೀನೇ ಅದನ್ನು ಮಾಡಬೇಕು ಎಂದು ಹೇಳಿದ್ದರು’ ಎಂದು ಜಾನಪದ ಲೋಕದ ಆಡಳಿತ ಮಂಡಳಿಯ ಸದಸ್ಯ ಹಾಗೂ ನಾಡೋಜ ಎಚ್.ಎಲ್. ನಾಗೇಗೌಡ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರೂ ಆಗಿರುವ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಗಿರಿಜನ ಲೋಕದ ಪರಿಕಲ್ಪನೆ ಮೊಳಕೆಯೊಡೆದ ಬಗೆಯನ್ನು ಹಂಚಿಕೊಂಡರು.
‘ಗಿರಿಜನ ಲೋಕದಲ್ಲಿ ಸದ್ಯ ಐದು ಸಮುದಾಯಗಳಿಗೆ ಸಂಬಂಧಿಸಿದ ಕೆಲಸ ಪೂರ್ಣಗೊಂಡಿದೆ. ಸ್ಥಳೀಯ ಇರುಳಿಗರ ಗುಡಿಸಲು ಮತ್ತು ಕಾಡುಗೊಲ್ಲರ ದೈವ ಜುಂಜಪ್ಪನ ಗುಡಿಯನ್ನು ಸದ್ಯದಲ್ಲೇ ಇಲ್ಲಿ ನಿರ್ಮಿಸಲಾಗುವುದು. ಬುಡಕಟ್ಟು ಜನ ತಯಾರಿಸುವ ಕರಕುಶಲವಸ್ತುಗಳ ಮಾರಾಟ, ಬುಡಕಟ್ಟು ಶೈಲಿಯಲ್ಲಿ ಒಂದು ಕ್ಯಾಂಟೀನ್ ಆರಂಭಿಸಿ, ಅಲ್ಲಿ ದೇಸಿ ತಿನಿಸುಗಳು ಹಾಗೂ ದೇಸಿ ಪಾನೀಯಗಳು ಸಿಗುವಂತೆ ಮಾಡುವ ಆಲೋಚನೆ ಇದೆ’ ಎಂದು ಬೋರಲಿಂಗಯ್ಯ ಕನಸು ತೆರೆದಿಟ್ಟರು.
ಕಾಡುಗೊಲ್ಲರು, ಸೋಲಿಗ, ಸಿದ್ಧಿ, ಇರುಳಿಗ ಹಾಗೂ ಕೊರಗ ಸಮುದಾಯಗಳ ಅನಾವರಣ ಇನ್ನೂ ಆಗಬೇಕಿದೆ. ಆರ್ಥಿಕ ಕೊರತೆಯಿಂದಾಗಿ ಆ ಕೆಲಸ ವಿಳಂಬವಾಗಿದೆ. ಈ ಯೋಜನೆಗಳಿಗೆ ಅಗತ್ಯವಿರುವ ಅನುದಾನ ಕೋರಿ, ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ ಪ್ರಸ್ತಾವ ಕಳಿಸಲು ಚಿಂತನೆ ನಡೆಸಿದ್ದು, ಸಂಸ್ಥೆಯಿಂದಲೇ ಅಲ್ಲೊಂದು ಬುಡಕಟ್ಟು ವೇದಿಕೆ ನಿರ್ಮಿಸುವ ಇರಾದೆಯನ್ನು ಜಾನಪದ ಲೋಕದ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ವ್ಯಕ್ತಪಡಿಸಿದರು.
ಜಾನಪದ ಲೋಕದಲ್ಲಿ ಆಗಸ್ಟ್ 22ರಂದು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ‘ಗಿರಿಜನ ಲೋಕ’ವು ಪ್ರಮುಖ ಆಕರ್ಷಣೆಯಾಗಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಕುಣಿತ ಮತ್ತು ಗೊಂಡರ ನೃತ್ಯ ಪ್ರದರ್ಶನ ವಿಶೇಷವಾಗಿದೆ. ಜಾನಪದ ಲೋಕದ ಪ್ರವಾಸಿಗರ ಮಾಹಿತಿ ಪುಸ್ತಕವನ್ನು ಗಣ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಜಾನಪದ ಲೋಕದಲ್ಲಿ ಆಗಸ್ಟ್ 22ರಂದು ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ‘ಗಿರಿಜನ ಲೋಕ’ವು ಪ್ರಮುಖ ಆಕರ್ಷಣೆಯಾಗಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಹಾಲಕ್ಕಿ ಒಕ್ಕಲಿಗರ ಕುಣಿತ ಮತ್ತು ಗೊಂಡರ ನೃತ್ಯ ಪ್ರದರ್ಶನ ವಿಶೇಷವಾಗಿದೆ. ಜಾನಪದ ಲೋಕದ ಪ್ರವಾಸಿಗರ ಮಾಹಿತಿ ಪುಸ್ತಕವನ್ನು ಗಣ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.