ಕಾಡುಗೊಲ್ಲ ಸಮುದಾಯದ ಪೂರ್ವಿಕರು ನಿರ್ಮಿಸಿದ್ದ ನಾಗರಿಕತೆಯ ಉಗಮಸ್ಥಾನವಾದ ‘ಕರಿಮಲೆ-ಜರಿಮಲೆ’ ಸೀಮೆಯಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಪಾರಂಪರಿಕ ಗೊಲ್ಲರಹಟ್ಟಿಗಳನ್ನು ಸಂದರ್ಶಿಸಲು ಚಳ್ಳಕೆರೆ ಗೋವಿಂದರಾಜು ನನ್ನನ್ನು ಆಹ್ವಾನಿಸಿದರು. ಕತ್ತಲೆಯಲ್ಲಿ ಅಲ್ಲೊಂದು, ಇಲ್ಲೊಂದು ನಕ್ಷತ್ರಗಳನ್ನು ಹುಡುಕಿಕೊಂಡು ನೋಡುತ್ತಿದವನನ್ನು ಒಮ್ಮೆಲೆ ಕರೆತಂದು ನಕ್ಷತ್ರಪುಂಜದ ಮುಂದೆ ನಿಲ್ಲಿಸಿದಂತಾಯಿತು ನನ್ನ ಸ್ಥಿತಿ! ಹಿಂದು-ಮುಂದು ಯೋಚಿಸದೆ ಅವರೊಡನೆ ಹೊರಟುನಿಂತೆ. ಜನಾರಣ್ಯದಿಂದ ದೂರ ಉಳಿದು, ಉದ್ವಿಗ್ನತೆಯಿಲ್ಲದ ಸರಳತೆಗಳೊಂದಿಗೆ, ತಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದ ಸಾತ್ವಿಕತೆಯಿಂದ ಬಾಳುತ್ತಿರುವ ಹಟ್ಟಿಗಳನ್ನು ನೋಡುವ ತವಕ ನನ್ನೊಳಗೆ ಪುಟಿಯಿತು.
ನಮ್ಮ ಪ್ರವಾಸವನ್ನೆಲ್ಲ ಗೌಜುಗದ್ದಲಗಳಿಲ್ಲದ ನಿರ್ಜನ ರಸ್ತೆಗಳಲ್ಲಿ, ಕೆರೆ-ಕಾನು, ಬೆಟ್ಟ-ಗುಡ್ಡ-ಕಣಿವೆಗಳ ಮೂಲಕ ಕಡಲ ಹಕ್ಕಿಗಳಂತೆ ನಿರ್ಭೀತಿಯಿಂದ ಹಾರುತ್ತಾ ಹೋಗುವ ರಸ್ತೆಗಳ ನೀಲಿನಕ್ಷೆಯನ್ನು ಅವರು ಮೊದಲೇ ಸಿದ್ಧಪಡಿಸಿಕೊಂಡಿದ್ದರು. ಮೊಳಕಾಲ್ಮೂರಿನ ತಡಿಯಲ್ಲಿದ್ದ ‘ಹೊಸಹಟ್ಟಿ’ಯಿಂದ ಆರಂಭಿಸಿ ಕಾಡುಗೊಲ್ಲರ ಮೂಲಸ್ಥಾನವಾದ ‘ಕರಿಮಲೆ-ಜರಿಮಲೆ’ ಸೀಮೆಯ ಹತ್ತಾರು ಹಟ್ಟಿಗಳ ಕದ ತಟ್ಟಿ, ಜರಿಮಲೆಯ ಹಸುರು ಹುಲ್ಲುಗಾವಲಿನ ನಡುವೆ ಇದ್ದ ಜುಂಜಪ್ಪನ ಪೂರ್ವಿಕರು ನೆಲೆಗೊಂಡಿದ್ದ ‘ಚಿತ್ರದೇವರ ಹಟ್ಟಿ’ಯಲ್ಲಿ ಯಾತ್ರೆ ಕೊನೆಗಾಣಿಸಲು ನಿರ್ಧರಿಸಿದೆವು.
ಹತ್ತಾರು ಸಂಖ್ಯೆಯಲ್ಲಿ ನಮ್ಮನ್ನು ಭೇಟಿಯಾದ ಹಟ್ಟಿಗಳು, ಕಾಡುಗೊಲ್ಲರ ಜೀವನಶೈಲಿ, ಅವರ ಆರ್ಥಿಕ, ಸಾಮಾಜಿಕ ಬದುಕಿನ ವಿವರಗಳನ್ನು, ಮೇವು-ನೀರಿಗೆ ವಲಸೆ ಹೋಗುವ ಸ್ವರೂಪಗಳನ್ನು ಹಾಗೂ ಅವರ ದೈವಗಳಾದ ಚಿತ್ರದೇವರು, ಎತ್ತಪ್ಪ, ಜುಂಜಪ್ಪ ಮತ್ತು ಸ್ಥಳೀಯ ವೀರಗಾರರ ನೆನಪುಗಳಲ್ಲಿ ಆಳವಾಗಿ ಬೇರೂರಿರುವುದನ್ನು ನಮಗೆ ಅರಿವುಗಾಣಿಸಿದವು.
ಮೊಳಕಾಲ್ಮೂರಿನ ಪಶ್ಚಿಮಕ್ಕಿದ್ದ ಹೊಸಹಟ್ಟಿಗೆ ನಾವು ಕಾಲಿಟ್ಟಾಗ, ವಯಸ್ಸಾದ ಮಹಿಳೆಯರು ಮತ್ತು ಜಲ್ಲೆ ಊರಿಕೊಂಡು ನಡೆಯುವ ಹಿರಿಯರು ಹಾಗೂ ಅವರ ಸುತ್ತ ಆಡುತ್ತಿದ್ದ ಮಕ್ಕಳು-ಮರಿಗಳು ಮಾತ್ರ ಹಟ್ಟಿಯಲ್ಲಿದ್ದರು. ಉಳಿದವರೆಲ್ಲಾ ಬಿತ್ತನೆಗಾಗಿ ತಮ್ಮ ತಮ್ಮ ಹೊಲಗಳಿಗೆ ಹೋಗಿದ್ದರು. ಹಟ್ಟಿಯಲ್ಲಿದ್ದ ಚಿತ್ರದೇವರ ಗುಡಿಯ ಪೌಳಿಯ ಕಡೆ ನಾವು ಬಂದಾಗ ನಿಧಾನವಾಗಿ ಹಟ್ಟಿಯ ವಯಸ್ಸಾದ ಮಹಿಳೆಯರೆಲ್ಲ ನಮ್ಮ ಸುತ್ತ ನೆರೆದರು. ಎಲ್ಲರೂ ‘ಗೊಲ್ಲಕಡಗ’ ತೊಟ್ಟಿದ್ದರು. ಅವರಲ್ಲಿ ಕೆಲವರು ರವಿಕೆ ತೊಟ್ಟಿರಲಿಲ್ಲ. ಎತ್ತ ನೋಡಿದರೂ ಹಟ್ಟಿಯಲ್ಲಿ ಪ್ರಾಯದ ಹುಡುಗರು ಕಾಣಲಿಲ್ಲ!
ನಮ್ಮ ಮಾತು ಆಕಡೆ, ಈಕಡೆ ಎಳೆದಾಡುತ್ತಾ ಸಾಗುತ್ತಿದ್ದ ಬೆನ್ನಲ್ಲೇ ಬಿತ್ತನೆಗೆ ಹೋಗಿದ್ದವರೆಲ್ಲಾ ತಮ್ಮ ಕುಟುಂಬದವರೊಂದಿಗೆ ನಿಧಾನವಾಗಿ ಹಟ್ಟಿಗೆ ಮರಳುತ್ತಿದ್ದರು. ಕೋಡೊಣಸು, ಬಣ್ಣದ ಕುಚ್ಚು, ಗೆಜ್ಜೆಗಳಿಂದ ಡಿಕಾವಾಗಿ ಸಿಂಗರಿಸಿದ್ದ ಎತ್ತುಗಳನ್ನು ನೋಡಿ ನಮಗೆ ಆಶ್ಚರ್ಯವಾಯಿತು! ಪಾರಂಪರಿಕ ಬೇಸಾಯವನ್ನು ಉಳಿಸಿಕೊಂಡಿರುವ ಅವರನ್ನು ಕುತೂಹಲದಿಂದ ಕೇಳಿದೆವು. ‘ನಮ್ಮಲ್ಲಿ ಇದೊಂದು ಸಂಪ್ರದಾಯ. ಬಿತ್ತನೆ ಮಾಡುವಾಗ ಎತ್ತುಗಳನ್ನು ಸಿಂಗರಿಸಿ, ಅವುಗಳಿಗೆ ಪೂಜೆ ಮಾಡಿ ಕೂರಿಗೆಯೊಂದಿಗೆ ಹೊಲಕ್ಕೆ ಹೋಗುತ್ತೇವೆ’ ಎಂಬ ಉತ್ತರ ಅವರಿಂದ ಬಂದಿತು. ಹಾಗೆಯೇ ಹಟ್ಟಿಯನ್ನೊಂದು ಸುತ್ತು ಕಣ್ಣಳತೆಯಲ್ಲೇ ನೋಡಿದಾಗ ಸುಣ್ಣ-ಬಣ್ಣ ಕಾಣದ ಎಲ್ಲರ ಮನೆಯ ಮುಂದೆಯೂ ಕುರಿ-ಮೇಕೆ ಕಟ್ಟಿದ್ದರು. ಮುಖ್ಯವಾಗಿ ಬೇಸಾಯ ಹಟ್ಟಿಯನ್ನು ಪೊರೆಯುತ್ತಿತ್ತು.
ಕುದುರುದೇವು ಗೊಲ್ಲರಹಟ್ಟಿಗೆ ನಾವು ತಲೆಯಿಟ್ಟಾಗ ರಾಚುವಂತೆ ಕಂಡಿದ್ದು, ಸಂಜೆಯ ಹೊಂಬಣ್ಣಕ್ಕೆ ಮಿರುಗುತ್ತಿದ್ದ ಚಿತ್ರದೇವರು ಮತ್ತು ಈರನಾಗಣ್ಣನ ಭವ್ಯವಾದ ಆಧುನಿಕ ಗುಡಿಗಳು. ಇದನ್ನು ಅಣುಕಿಸುವಂತೆ ಗುಡಿಯ ಎಡಭಾಗಕ್ಕೆ ಕಾಡುಗೊಲ್ಲರ ಪ್ರಾಚೀನ ಗುಡಿಸಲೊಂದು ಹಾಗೆಯೇ ನಿಂತಿತ್ತು. ವಿದ್ಯುತ್ ಇಲ್ಲದ ಆ ಗುಡಿಸಲ ಮುಂದೆ ಹತ್ತಾರು ಹಸುಗಳನ್ನು ಕಟ್ಟಿದ್ದರು. ಗುಡಿಯ ಮುಂದೆ ಹಿರಿಯ ಯಜಮಾನರು ಕಂಡರು. ಅವರೆಲ್ಲಾ ಕಾಡುಗೊಲ್ಲರ ಪಾರಂಪರಿಕ ಉಡುಗೆಯಲ್ಲೇ ಇದ್ದರು. ಕಲ್ಲಿ ಮೀಸೆ, ಬೆಳ್ಳಿ ಉಂಗುರ, ಮೊಣಕಾಲಿನವರೆಗೆ ಇದ್ದ ಶೆಳ್ಳ, ಬಿಳಿ ಬಣ್ಣದ್ದು ಎಂದು ಕರೆಯಬಹುದಾಗಿದ್ದ ಕಸೆ ಅಂಗಿ, ಕೈಯಲ್ಲಿ ಬೆಳ್ಳಿ ಕಡಗ, ಬಾಯಲ್ಲಿ ತುಳುಕುವ ಎಲೆ ಅಡಕೆ, ನೀಳವಾದ ಕೂದಲು. ಅಚ್ಚ ಕನ್ನಡದ ಸೊಲ್ಲು. ಎಲ್ಲವೂ ಕಾಡುಗೊಲ್ಲರು ಅಚ್ಚಕನ್ನಡದವರು ಎಂಬುದನ್ನು ಹೇಳುವಂತಿದ್ದವು.
ನಮ್ಮ ಪಯಣ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿತ್ತು. ಆದರೆ ನಮ್ಮ ಕಣ್ಣುಗಳು ಮಾತ್ರ ಬಿತ್ತಿದ ಹೊಲ, ಹಸುರು ಬಯಲು, ಆವು-ಗೋವು, ಕೆಂಗುರಿಗಳ ಹಿಂಡನ್ನು ಮುಂದೆ ಬಿಟ್ಟುಕೊಂಡು, ಕೈಯಲ್ಲಿ ಕೆಂದ್ಹೋರಿಗಳನ್ನು ಹಿಡಿದು ಹಟ್ಟಿಯ ಕಡೆ ಧಾವಿಸುತ್ತಿದ್ದವರನ್ನು ನಿಲ್ಲಿಸಿ ಮಾತನಾಡಿಸುತ್ತಾ, ಹೊಲ-ನೀರಿನ ಒರತೆ, ಮಾಗಾಣಿಗಳನ್ನು ನೋಡಿಕೊಂಡು ಸಂಭ್ರಮಿಸುತ್ತಿತ್ತು. ನಮ್ಮ ನಡಿಗೆಯ ಹಾದಿಯ ಮರೆಯಲ್ಲಿ ಹಟ್ಟಿಗಳು ಮಬ್ಬಿನಿಂದ ಗೋಚರಿಸುತ್ತಿದ್ದವು. ‘ಕರಿಮಲೆ’ ಭಾಗದಲ್ಲಿ ಹೆಚ್ಚಾಗಿ ನಮಗೆ ಕಂಡಿದ್ದು ಕೆಂಗುರಿಗಳೆ! ನನಗೆ ಕೂಡಲೆ ನೆನಪಾಗಿದ್ದು, ದ್ವೈಮಾರನ ಮಗ, ಜುಂಜಪ್ಪನ ತಂದೆ ಕೆಂಗುರಿ ಮಲ್ಲೇಗೌಡ! ಯಾಕಿರಬಾರದು? ಈ ಕೆಂಗುರಿಗಳನ್ನು ಮೇಯಿಸುವನನ್ನೇ ಚಿತ್ರದೇವರ ಹಟ್ಟಿಯವರು ‘ಕೆಂಗುರಿ ಮಲ್ಲೇಗೌಡ’ (ಕೆಂದ+ಕುರಿ=ಕೆಂಗುರಿ) ಎಂದು ಕರೆದಿರಬಹುದು!
ನಮ್ಮನ್ನು ಬಹುವಾಗಿ ಸೆಳೆದಿದ್ದು ಸಣ್ಣಗೊಲ್ಲರಹಟ್ಟಿ. ಅಲ್ಲಿದ್ದ ಪ್ರಾಚೀನ ದೈವದ ಗುಬ್ಬಗಳಾದ ತಿಮ್ಮಪ್ಪ ಮತ್ತು ಈರಣ್ಣನ ಗುಡಿ ಕಾಡುಗೊಲ್ಲರ ಅಸ್ಮಿತೆಯಂತೆ ನಮಗೆ ಗೋಚರಿಸಿದವು. ಸೌಂದರ್ಯದಲ್ಲಿ ಸಾಟಿಯಿಲ್ಲದ ಈ ಎರಡು ಗುಬ್ಬಗಳು ಸಣ್ಣಗೊಲ್ಲರಹಟ್ಟಿಯ ಮುಕುಟದಂತಿವೆ. ಕಾಡುಗೊಲ್ಲರದ್ದು ದೇವಾಲಯ ಸಂಸ್ಕೃತಿಯಲ್ಲ, ಅವರದ್ದು ಗುಬ್ಬಗಳ ಸಂಸ್ಕೃತಿ. ಕಾಡುಗೊಲ್ಲರ ಇತಿಹಾಸದ ಅನೇಕ ಸಂಗತಿಗಳನ್ನು ಈ ಗುಬ್ಬಗಳು ಒಳಗೊಂಡಿವೆ.
ಹಿಂಡಿನ ಕುರಿಯೊಂದಿಗೆ ಹುಲ್ಲು ನೀರಿಗಾಗಿ ಕಳೆದ 7-8 ವರ್ಷಗಳಿಂದ ಪಡುವಾ ಹೋಗಿರುವ ಕುಟುಂಬಗಳೂ ಸಣ್ಣಗೊಲ್ಲರಹಟ್ಟಿಯಲ್ಲಿವೆ. ಹಟ್ಟಿಯ ಹಿರಿಯರು ತೋರಿದ ಆದರಣೆಗೆ ಕೃತಜ್ಞತೆ ವ್ಯಕ್ತಪಡಿಸಲು ನಮ್ಮೊಳಗೆ ಶಬ್ದಗಳ ಕೊರತೆ ಇತ್ತು. ಮೌನವಾಗಿಯೇ ಅವರಿಂದ ಬೀಳ್ಕೊಂಡು ಹಟ್ಟಿ ಬಿಟ್ಟೆವು. ಕೊನೆಯದಾಗಿ ನನ್ನ ಕಣ್ಣುಗಳಲ್ಲಿ ಉಳಿದಿದ್ದು, ಕಲಾತ್ಮಕವಾದ ದೈವದ ಗುಬ್ಬಗಳು ಮತ್ತು ಕುಡಿಯುವ ನೀರಿಗಾಗಿ ಹಟ್ಟಿಯವರು ಪಡುತ್ತಿದ್ದ ಬವಣೆ!
ಸಣ್ಣಗೊಲ್ಲರಹಟ್ಟಿಯಿಂದ ಜೋಗಿಕಲ್ಲು ಮಾರ್ಗವಾಗಿ ‘ಕರಿಮಲೆ’ ಸೀಮೆಯತ್ತ ಹೊರಟೆವು. ನೀಲಿ ಬಣ್ಣದಲ್ಲೇ ಅದ್ದಿ ತಗೆದಂತಿದ್ದ ಸಂಡೂರಿನ ಪರ್ವತಶ್ರೇಣಿ, ಕಣ್ಣು ಹಾಯಿಸಿದಕಡೆಯೆಲ್ಲಾ ಭೂಮಿಗೆ ಹಸುರು ಹೊದಿಕೆ ತೊಡಿಸಿದಂತಿದ್ದ ದೃಶ್ಯ ನಮ್ಮನ್ನು ಉತ್ತೇಜಿಸುವಂತಿತ್ತು! ಉಕ್ಕೆ ಹೊಡೆದ ಮೆಕ್ಕೆ ಜೋಳದ ಹೊಲಗಳು, ಹಸುರು ಬಯಲಲ್ಲಿ ಮೇಯುತ್ತಿದ್ದ ಕೆಂಗುರಿಹಿಂಡು, ಈ ನಿಸರ್ಗದ ಮಾಧುರ್ಯವನ್ನು ಸವಿಯುತ್ತಾ ಸಂಡೂರಿಗೆ ಸಮೀಪವಿದ್ದ ಕೋಡಿಹಳ್ಳಿ ಗೊಲ್ಲರಹಟ್ಟಿಗೆ ಕಾಲಿಟ್ಟೆವು.
ಜಲ್ಲೆ ಊರಿಕೊಂಡು ನಿಧಾನವಾಗಿ ನಮ್ಮ ಬಳಿಗೆ ಬಂದ ದಳವಾಯಿ ಚಿತ್ತಯ್ಯನವರು, ಸುಮಾರು ಎಂಬತ್ತರ ಗಡಿದಾಟಿದ್ದ ಎತ್ತರವಾದ ಆಳು. ಅವರನ್ನು ನೋಡಿದೊಡನೆ, ಇವರು ಜುಂಜಪ್ಪನ ಹತ್ತಿರದ ಸೋದರ ಸಂಬಂಧಿಯೇ ಇರಬೇಕೆಂದು ನಾನು ಭಾವಿಸಿದೆ. ಅವರ ನಿಲುವು ಕಾಡುಗೊಲ್ಲರ ಪೂರ್ವಿಕರನ್ನೇ ಹೋಲುತ್ತಿತ್ತು! ಈಚೆಗೆ ಅನಾರೋಗ್ಯದಿಂದ ಅವರ ಬೆನ್ನು ತುಸು ಬಾಗಿ, ಧ್ವನಿ ಕುಗ್ಗಿತ್ತು. ಎತ್ತಪ್ಪ, ಜುಂಜಪ್ಪ, ಚಿತ್ತಯ್ಯ, ಸಿದ್ದಯ್ಯ, ರಂಗಪ್ಪ ಹಾಗೂ ಗೌರಸಂದ್ರದ ಮಾರಕ್ಕನನ್ನು ಕುರಿತು ಜನಪದ ಕಾವ್ಯವನ್ನು, ಗದ್ಯ ಕಥನವನ್ನೂ ನಿರಗರ್ಳವಾಗಿ ಹಾಡುತ್ತಾರೆಂದು ನಾವು ಮೊದಲೇ ಮಾಹಿತಿ ಸಂಗ್ರಹಿಸಿದ್ದೆವು. ಮದುವೆ ಕಾರ್ಯಗಳಲ್ಲಿ ಜಾಡಿ (ಕರಿ ಕಂಬಳಿ) ಹಾಸುವುದು, ವೀಳ್ಳೇವು ಎತ್ತುವುದು ನಮ್ಮ ಕುಟುಂಬದ ಕೆಲಸ ಎಂದು ದಳವಾಯಿ ಚಿತ್ತಯ್ಯನವರು ನಮಗೆ ಹೇಳಿದರು. ಅಪಾರವಾದ ಲೋಕಜ್ಞಾನ ಹೊಂದಿದ್ದ ದಳವಾಯಿ ಚಿತ್ತಯ್ಯನವರನ್ನು ಮುಂದಿನ ಮಾತಿಗೆ ಎಳೆಯದೆ ಎತ್ತಪ್ಪನ ಕಥೆಗೆ ಅಣಿಗೊಳಿಸಿದೆವು.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ದಣಿವಿಲ್ಲದೆ ಎತ್ತಪ್ಪನ ಕಥನವನ್ನು ನಿರೂಪಿಸಿದ ದಳವಾಯಿ ಚಿತ್ತಯ್ಯನವರಲ್ಲಿ ಹುದುಗಿದ್ದ ಪ್ರತಿಭೆಯನ್ನು ಕಂಡು ನಾವಂತೂ ಮೂಕರಾದೆವು. ಕಥನದ ನಡುವೆ ಅವರು ಹಾಡುತ್ತಿದ್ದ ತ್ರಿಪದಿಗಳು, ಗಾದೆಗಳು, ಕಥನವನ್ನು ವಿವರಿಸುತ್ತಿದ್ದ ಶೈಲಿ ಇವೆಲ್ಲವೂ ಅವರೊಬ್ಬ ಅಸಾಧಾರಣ ಕಲಾವಿದ ಎಂಬುದನ್ನು ನಿರೂಪಿಸಿದವು. ಇದರ ನಡುವೆ ವಯಸ್ಸಿನ ಭಾರದಿಂದ ಅಚ್ಚಗನ್ನಡದ ಅವರ ನುಡಿಗಳು ಚದುರುತ್ತಿದ್ದವು. ಕೆಲವು ಕಡೆ ಸೊಲ್ಲುಗಳು ಅಸ್ಪಷ್ಟವಾಗುತ್ತಿದ್ದವು. ಅವರು ತಮ್ಮ ನೆನಪಿನ ಶಕ್ತಿಯನ್ನು ಒಗ್ಗೂಡಿಸಿಕೊಂಡು ಶ್ರದ್ಧೆಯಿಂದ ಹೇಳುತ್ತಿದ್ದ ಶೈಲಿಯನ್ನು ನೋಡಿದ ನಮಗೆ ಕನ್ನಡ ಮೌಖಿಕ ಪರಂಪರೆಯ ಹೆಮ್ಮೆಯ ಪ್ರತಿನಿಧಿಯಂತೆ ಕಂಡರು. ದಳವಾಯಿ ಚಿತ್ತಯ್ಯನವರು ಕಥನ ರೂಪದಲ್ಲಿ ಹೇಳಿದ ಎತ್ತಪ್ಪನ ಚರಿತವು ಕರಿಮಲೆ-ಜರಿಮಲೆಯ ಮಣ್ಣಿನ ಸುಗಂಧ, ಗಾಳಿ-ಬೆಳಕು-ನೀರು, ಕಾಡುಗೊಲ್ಲರ ಶ್ರಮದ ಸಂಸ್ಕೃತಿ, ಆಚರಣೆ, ನಂಬಿಕೆ ಹಾಗೂ ಈ ಭಾಗದ ಕನ್ನಡದ ಕಂಪಿನಿಂದ ಸಂಯೋಜನೆಗೊಂಡು ರೂಪು ಪಡೆದಿತ್ತು. ‘ಕರಿಮಲೆ-ಜರಿಮಲೆ’ ಸೀಮೆಯ ಪ್ರವಾಸದಲ್ಲಿ ನಾವು ಅನುಭವಿಸಿದ ಸಾರ್ಥಕ ಕ್ಷಣಗಳಲ್ಲಿ ಇದೂ ಒಂದು. ಅಪಾರವಾದ ಸಾಂಸ್ಕೃತಿಕ ಮತ್ತು ಮೌಖಿಕ ಸಾಹಿತ್ಯದ ನಿಧಿಯನ್ನು ಇಂದಿಗೂ ಉಳಿಸಿಕೊಂಡಿರುವ ಕಾಡುಗೊಲ್ಲರದು ಕರ್ನಾಟಕದ ಆದಿಮ ಬುಡಕಟ್ಟು ಸಮುದಾಯ.
ಕೂಡ್ಲಿಗಿಯಿಂದ ಸಮೀಪದಲ್ಲಿದ್ದ ಶಿವಪುರದ ಹಟ್ಟಿಗೆ ನಾವು ಬಂದಾಗ ಸಂಜೆಯ ಹೊನ್ನಿನ ಎಳೆಗಳು ಭೂಮಿಗೆ ಇಳಿಯುತ್ತಿದ್ದವು. ಸುಮಾರು 300 ಮನೆಗಳಿದ್ದ ಹಟ್ಟಿ ಅದು. ರೊಪ್ಪಗಳಲ್ಲಿ ನೂರಾರು ಸಂಖ್ಯೆಯ ಹೂಮರಿಗಳು ತಮ್ಮ ತಾಯಂದಿರು ಬರುವುದನ್ನೇ ಎದುರುನೋಡುತ್ತಿದ್ದವು. ನೋಡುತ್ತಿದ್ದಂತೆಯೇ ನಮ್ಮ ಕಣ್ಣೆದುರೆ ಅಗಾಧವಾದ ಕುರಿಹಿಂಡುಗಳು ಹಟ್ಟಿಯ ಬೀದಿಗಳಲ್ಲಿ ಸಾಗರದ ಅಲೆಗಳಂತೆ ನುಗ್ಗಿ ಬಂದವು. ಇಡೀ ಹಟ್ಟಿ ಕುರಿಹಿಂಡುಗಳಿಂದ ತುಂಬಿಹೋಯಿತು! ಹಟ್ಟಿಯಲ್ಲಿ ಯಾರನ್ನೇ ನೋಡಿದರೂ ಅವರ ಕೈಯಲ್ಲಿ ಎರಡು ಎಮ್ಮೆ, ಹಸು, ಎರಡು-ಮೂರು ಕುರಿ-ಮೇಕೆ, ತಲೆಯಮೇಲೆ ಹುಲ್ಲಿನ ಹೊರೆ, ಅದರ ಮೇಲೆ ಬುತ್ತಿ, ಕಂಕಳಲ್ಲಿ ಹಸುಗೂಸುಗಳನ್ನು ಹೊತ್ತ ಹೆಣ್ಣುಮಕ್ಕಳೇ ನಮಗೆ ಕಂಡುಬಂದರು. ಹೂಮರಿಗಳಂತೂ ತಮ್ಮ ತಾಯಂದಿರ ಕೆಚ್ಚಲಿಗೆ ಬಾಯಿ ಹಾಕಿ ಹಾಲುಕುಡಿಯುತ್ತಿದ್ದವು. ಇನ್ನೂ ಕೆಲವರು ಕುರಿಗಳಿಂದ ಹಾಲುಕರೆದುಕೊಳ್ಳುತ್ತಿದ್ದರು. ಹಟ್ಟಿಯುದ್ದಕ್ಕೂ ಈ ದೃಶ್ಯ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿತ್ತು! ಅಲ್ಲಿ ಯಾರೂ ಬಿಡುವಿನಿಂದ ಇರಲಿಲ್ಲ! ಕೃಷಿ ಮತ್ತು ಕುರಿ ಸಾಕಾಣಿಕೆಯೇ ಕಾಡುಗೊಲ್ಲ ಸಮುದಾಯದ ಆರ್ಥಿಕ ಬೆನ್ನೆಲಬು.
ಅಲ್ಲಿಯೇ ರೊಪ್ಪವೊಂದರಲ್ಲಿ ಕುರಿಗಳನ್ನು ಕೂಡುತ್ತಿದ್ದ ತಿಪ್ಪಣ್ಣನವರನ್ನು ಮಾತನಾಡಿಸಿದಾಗ ‘ನಮ್ಮ ಹಟ್ಟಿಯಲ್ಲಿ ಸುಮಾರು 20,000 ದಿಂದ 25,000 ವರೆಗೆ ಕುರಿಗಳಿವೆ. ಒಂದೊಂದು ಮನೆಗೆ ಕಡಿಮೆ ಎಂದರೆ 250 ರಿಂದ 2000 ವರೆಗೆ ಕುರಿಗಳಿವೆ. ಕುರಿಗಳಿಂದಲೇ ನಮ್ಮ ಹಟ್ಟಿ ನಿಂತಿರೋದು. ಇಷ್ಟೇ ಅಲ್ಲ! ಇನ್ನೂ ಕೆಲವರ ಕರಿಹಿಂಡುಗಳು ಹಟ್ಟಿಯಿಂದ ಹುಲ್ಲು-ನೀರಿಗಾಗಿ ಹೊಸಪೇಟೆ ಹಿನ್ನೀರಿನ ಕಡೆಗೆ, ಕೆಲವು ಬಳ್ಳಾರಿ ದಾಟಿ ಹೋಗಿವೆ’ ಎಂದು ಹೇಳಿದರು. ‘ನಡೆಯುವುದೇ ನಮ್ಮ ಧರ್ಮ’ ಎನ್ನುವುದನ್ನು ಕಾಡುಗೊಲ್ಲರ ಎಲ್ಲ ಮೌಖಿಕ ಪಠ್ಯಗಳೂ ನಮಗೆ ಮತ್ತೆ ಮತ್ತೆ ಹೇಳಿವೆ.
ನಮ್ಮ ಕಾಲುಗಳು ಜರಿಮಲೆಯ ಅಂಚಿನ ಹಟ್ಟಿಗಳ ಕಡೆ ಮುಖಮಾಡಿದವು. ನೆಲಬೊಮ್ಮನಹಳ್ಳಿ ಮತ್ತು ಐನಳ್ಳಿ ಗೊಲ್ಲರಹಟ್ಟಿಗಳೊಂದಿಗೆ ಮಾತನಾಡಿಕೊಂಡು ಬರುತ್ತಿರುವಾಗ, ಈ ಹಟ್ಟಿಗಳಿಗೆ ಕೂಗಳತೆಯಲ್ಲಿದ್ದ ಚೌಡಾಪುರದ ಗೊಲ್ಲರಹಟ್ಟಿ ಬಗ್ಗೆ ಗೆಳೆಯ ಗೋವಿಂದರಾಜು ಕೂತೂಹಲಕರ ವಿಷಯ ತಿಳಿಸಿದರು. ‘ಏಳೆಂಟು ವರ್ಷಗಳ ಹಿಂದೆ ನಾನು ಚೌಡಾಪುರದ ಗೊಲ್ಲರಹಟ್ಟಿಗೆ ಬಂದಿದ್ದೆ. ವಿಶೇಷವೆಂದರೆ, ಆ ಹಟ್ಟಿಯ ಯಾವ ಗುಡಿಸಿಲಿಗೂ ಬಾಗಿಲೆಂಬುದೇ ಇರಲಿಲ್ಲ! ಎಲ್ಲವೂ ಖುಲ್ಲಂ-ಖುಲ್ಲ. ಇಂತಹ ಅಪರೂಪದ ಹಟ್ಟಿ ಅದು, ಈಗ ಹಟ್ಟಿಗೆ ಬಾಗಿಲನ್ನು ಇಟ್ಟುಕೊಳ್ಳುವ ಮಟ್ಟಕ್ಕೆ ಅವರು ಶ್ರೀಮಂತರಾಗಿದ್ದಾರೆ! ಇದೇ ಇಲ್ಲಿನ ದೊಡ್ಡ ಬದಲಾವಣೆ’ ಎಂದರು. ಹೊರಗಿನ ಸಮಾಜದಿಂದ ಏನನ್ನೂ ಅಪೇಕ್ಷಿಸದ ಕಾಡುಗೊಲ್ಲರಹಟ್ಟಿಗಳು ದೋಷವೆನಿಸುವಷ್ಟು ಸ್ವಾಭಿಮಾನ ಮತ್ತು ಆತ್ಮವಿಶ್ವಾಸದಿಂದ ಜೀವಿಸುತ್ತಿವೆ.
ಐನಹಳ್ಳಿ ಗೊಲ್ಲರಹಟ್ಟಿಯನ್ನು ದಾಟುತ್ತಿದ್ದ ಹಾಗೆ ನಮಗೆ ಎದುರಾದದ್ದು ನೂರೊಂದು ಪತ್ರೆಮರದ ಜುಂಜಪ್ಪನ ಅಡವಿ. ಐನಳ್ಳಿ ಗೊಲ್ಲರಹಟ್ಟಿಯ ಮಂಜುನಾಥ್ ಹೇಳುವಂತೆ – ‘ಒಂದು ಭೀಕರ ಬರಗಾಲದಲ್ಲಿ ಜುಂಜಪ್ಪನ ಪೂರ್ವಿಕರು ವಾಸಿಸುತ್ತಿದ್ದ ಚಿತ್ರದೇವರ ಹಟ್ಟಿಯಲ್ಲಿದ್ದ ನೂರೊಂದು ಆವುಗಳು ಮಡಿದವು. ಒಂದೊಂದು ಆವು ಮಡಿದಾಗಲೂ ಒಂದೊಂದು ಪತ್ರೆಮರ ಹುಟ್ಟಿತು. ಅದನ್ನು ಈಗ ಜುಂಜಪ್ಪನ ಅಡವಿ ಎಂದು ಕರೆಯುತ್ತೇವೆ’ ಎಂದರು. ಅದೊಂದು ವಿಶಾಲವಾದ ಹುಲ್ಲುಗಾವಲಿನ ಬಯಲು. ಈ ಅಡವಿಯಲ್ಲಿ ದೊಡ್ಡ ಹುತ್ತುವೊಂದು ಇದೆ. ಈ ಸ್ಥಳದಲ್ಲೇ ಜುಂಜಪ್ಪನ ತಾಯಿ ಚಿನ್ನಮ್ಮ ಜುಂಜಪ್ಪನಿಗೆ ‘ಜೆನಿಗೆ’ ಹಾಲುಕುಡಿಸಿದ್ದು ಎಂದು ಹೇಳಿದರು. ಕಾಡುಗೊಲ್ಲರ ಧಾರ್ಮಿಕ ಶ್ರದ್ಧೆಯ ಮೇಲೆ ಜುಂಜಪ್ಪನ ಅಡವಿ ಇಂದಿಗೂ ಜೀವಂತಿಕೆಯಿಂದ ಇದೆ.
ಪತ್ರೆಮರದ ಜುಂಜಪ್ಪನ ಅಡವಿಯಿಂದ ಕೂಗಳತೆಯಲ್ಲಿ ಇರೋದೆ ಚಿತ್ರದೇವರ ಹಟ್ಟಿ. ಜುಂಜಪ್ಪನ ಪೂರ್ವಿಕರು ಬಾಳಿ ಬದುಕಿದ ಹಟ್ಟಿ. ಈ ಭಾಗದವರು ಇದನ್ನು ‘ದೇವರ ಹಟ್ಟಿ’, ‘ದೇವರಹಟ್ಟಿ ಗಡ್ಡೆ’ ‘ದೇವರಹಟ್ಟಿ ಕೋಟೆ’ ಎಂದೂ ಕರೆಯುತ್ತಾರೆ. ಈಗ ಅದೊಂದು ಬೇಚರಕ್ ಗ್ರಾಮವಾಗಿದೆ. ದೇವರ ಹಟ್ಟಿಯ ಸುತ್ತಲೂ ಅಪಾರ ಜೀವವೈವಿಧ್ಯತೆಯ ಹಸುರು ಹುಲ್ಲುಗಾವಲು ಕಣ್ಣಿಗೆ ರಾಚುತ್ತದೆ. ಅದರಾಚೆಗೆ ಬೆಟ್ಟಗಳ ಸಾಲು. ಅದರಾಚೆಗೆ ನೀಲಿ ಮುಗಿಲು, ಎಲ್ಲವೂ ಪಶುಪಾಲನೆಗೆ ಹೇಳಿಮಾಡಿಸಿದ ಸ್ಥಳ. ಇದೆಲ್ಲವನ್ನೂ ನೋಡಿ; ನಾವು ಕಾಡುಗೊಲ್ಲರ ಬಾಲ್ಯದ ದಿನಗಳಿಗೆ ಬಂದಿದ್ದೇವೆ ಎನಿಸಿತು.
ಈ ಹಟ್ಟಿಯ ಒಂದು ತುದಿಯಲ್ಲಿ ಎತ್ತರದ ಮಣ್ಣಿನ ಗುಡ್ಡೆಯಿದೆ. ಇದನ್ನೇ ಕೋಟೆ ಎಂದು ಕರೆಯುತ್ತಾರೆ. ಈ ಹಟ್ಟಿಯ ಒಂದು ಭಾಗಕ್ಕೆ ಕೆಲವು ಗುಡ್ಡೆಗಳು (ಕಲ್ಲಿನ ಸಮಾಧಿ) ನಮ್ಮ ಗಮನಸೆಳೆದವು. ಈ ಹಟ್ಟಿಯ ದಕ್ಷಿಣಕ್ಕೆ ಪುರಾತನ ಬೇವಿನ ಮರವಿದೆ. ಇದನ್ನು ‘ಮಲೆಯಮ್ಮ’ ಎಂದು ಕರೆಯುತ್ತಾರೆ. ಬಹುಶಃ ಇದು ಚಿತ್ರದೇವರ ಹಟ್ಟಿಯ ಗ್ರಾಮದೇವತೆ ಇರಬಹುದು! ಇಂದು ಇವೆಲ್ಲವೂ ವಿಸ್ಮೃತಿಯ ದೂಳಿನಲ್ಲಿ ಸೇರಿಹೋಗಿವೆ. ಅಲ್ಲಿರುವುದು ಅವರ ಜೀವಂತ ಬುದಕಿನ ಅವಶೇಷಗಳು ಮಾತ್ರ. ಹೀಗಾಗಿ ದೇವರ ಹಟ್ಟಿ ಕಾಡುಗೊಲ್ಲರಿಗೆ ಆದಿಯೂ ಹೌದು, ವಾಸ್ತವವೂ ಹೌದು.
ಚಿತ್ರಗಳು: ನಿಸರ್ಗ ಗೋವಿಂದರಾಜು ಚಳ್ಳಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.