ಮುಂಬೈನ ಅಭಿಷೇಕ ವಾಣಿ ಸಾಫ್ಟ್‌ವೇರ್ ಎಂಜಿನಿಯರ್. ಲಕ್ಷಕ್ಕೂ ಅಧಿಕ ಸಂಬಳ ಕೊಡುವ ಕಂಪನಿಗಳ ಆಹ್ವಾನಕ್ಕೆ ಬೆನ್ನುಮಾಡಿ ಕುಂಬಾರಿಕಾ ತರಬೇತಿ ಸಂಸ್ಥೆ ಸೇರಿದರು. ಅಲ್ಲಿ ಕೈಕೆಸರು ಮಾಡಿಕೊಂಡು ಕಲಾಕೃತಿಯೊಂದರ ತಯಾರಿಕೆಯಲ್ಲಿ ಮುಳುಗಿದ್ದರು. ಇವರಿಗೆ ಸದಾ ಹೊಸತನ್ನು ಮಾಡುವ ಉಮೇದು. ಹೊಸ ರೀತಿಯ ಉದ್ಯಮವನ್ನು ಹುಟ್ಟುಹಾಕುವ ಕನಸು.
ಇವರ ಪಕ್ಕದಲ್ಲೇ ಮಣ್ಣಿನಮುದ್ದೆ ಹಿಡಿದು ಏನನ್ನೋ ಸೃಷ್ಟಿಸಲು ಸಿದ್ಧವಾಗಿದ್ದ ಬೆಂಗಳೂರಿನ ಎಸ್.ಜ್ಯೋತಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನೆಯಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ಅದನ್ನೇ ಉದ್ಯಮವಾಗಿ ಮಾಡಿಕೊಳ್ಳುವ ಆಲೋಚನೆ ಬಂದಿತು. ತಮ್ಮ ಕನಸಿಗೆ ರೆಕ್ಕೆ ಕಟ್ಟುವ ಕುಂಬಾರಿಕಾ ತರಬೇತಿ ಕೇಂದ್ರವನ್ನು ಹುಡುಕಿಕೊಂಡರು. ಈಗ ಯಾಂತ್ರಿಕಚಕ್ರ ಬಳಸಿ ವೈವಿಧ್ಯಮಯ ವಸ್ತುಗಳನ್ನು ಸಿದ್ಧಪಡಿಸುವುದನ್ನು ಕಲಿಯುತ್ತಿದ್ದಾರೆ. ಮಣ್ಣಿನ ಕಲಾಕೃತಿಗಳಿಗೆ ಪೇಂಟಿಂಗ್ ಸ್ಪರ್ಶ ನೀಡಿದರೆ ಬೆಂಗಳೂರಿನಲ್ಲಿ ದೊಡ್ಡಮಟ್ಟದ ವ್ಯಾಪಾರ ಮಾಡಬಹುದು ಎನ್ನುವ ಲೆಕ್ಕಾಚಾರ ಇವರದು.
ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿರುವ ಕೇಂದ್ರೀಯ ಗ್ರಾಮ ಕುಂಬಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂತಹ ಚಿತ್ರಗಳು ಹತ್ತಾರು. ಗೋವಾದ ಸಿವಿಲ್ ಎಂಜಿನಿಯರ್ ಚಿನ್ಮಯ್ ಮಗದುಮ್, ಗದಗಿನ ಎಂಬಿಎ ಪದವೀಧರ ಪ್ರವೀಣ ಕುಂಬಾರ, ಹಿಮಾಚಲ ಪ್ರದೇಶದ ಬಿಪಿನ್, ಆಂಧ್ರ ಪ್ರದೇಶದ ಲಾರಿ ಚಾಲಕ ವಿಜಯಗಿರಿ, ತೆಲಂಗಾಣದ ಪದವೀಧರೆ ನಿಖಿತಾ, ಉತ್ತರಾಖಂಡದ ಮನು, ಕೇರಳದ ಅಹೋಪತಿ, ಗುಜರಾತಿನ ವಿಷ್ಣುಕುಮಾರಿ... ಹೀಗೆ ಒಬ್ಬೊಬ್ಬರದೂ ಒಂದೊಂದು ಅನುಭವ.
ಕುಂಬಾರಿಕಾ ತರಬೇತಿ ಸಂಸ್ಥೆಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಕುಂಬಾರಿಕೆ ಎಂದರೆ ಅನಕ್ಷರಸ್ಥರಿಗೋ, ನಿರುದ್ಯೋಗಿಗಳಿಗೋ ಸೀಮಿತವಲ್ಲ. ಬಿಎ, ಬಿಎಸ್‌ಸಿ, ಎಂಎಸ್‌ಸಿ, ಎಂಜಿನಿಯರಿಂಗ್, ಕೃಷಿ ಪದವಿ ಸೇರಿದಂತೆ ವಿವಿಧ ಉನ್ನತ ಶಿಕ್ಷಣ ಪಡೆದವರೂ ಇಲ್ಲಿ ಇದ್ದಾರೆ.
ಕುಂಬಾರಿಕೆಯನ್ನು ಶೈಕ್ಷಣಿಕವಾಗಿ, ಶಾಸ್ತ್ರೀಯವಾಗಿ ಕಲಿಸಿಕೊಡುವ ದೇಶದ ಏಕಮಾತ್ರ ಸಂಸ್ಥೆ ಇದು. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಇಲಾಖೆಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಈ ಕೇಂದ್ರವನ್ನು ಆರಂಭಿಸಿದೆ. ಕುಂಬಾರಿಕಾ ಕೇಂದ್ರಗಳು ದೇಶದ ಎಲ್ಲ ರಾಜ್ಯಗಳಲ್ಲೂ ಇವೆ. ತರಬೇತಿ ನೀಡಿ, ಕೌಶಲವೃದ್ಧಿ ಮಾಡಿ, ಸಂಪನ್ಮೂಲ ವ್ಯಕ್ತಿಗಳನ್ನು ರೂಪಿಸುವುದು ಖಾನಾಪುರ ಕೇಂದ್ರದಲ್ಲಿ ಮಾತ್ರ.
‘ಈ ಮಣ್ಣಿನ ಗುಣ ವಿಶಿಷ್ಟವಾದುದು. ಇಲ್ಲಿ ತಯಾರಾಗುವ ಮಣ್ಣಿನ ಸಾಮಗ್ರಿಗಳು ಚೀನಾ, ಬರ್ಮಾ, ಸ್ವಿಡ್ಜರ್ಲೆಂಡ್‌ಗಳಲ್ಲಿ ಮಾರಾಟವಾಗುತ್ತವೆ. ದೇಶದ ಬಹಳಷ್ಟು ಸ್ಟಾರ್ ಹೋಟೆಲ್‌ನ ತಂದೂರಿ ಭಟ್ಟಿಗಳನ್ನು ನಮ್ಮ ವಿದ್ಯಾರ್ಥಿಗಳೇ ಸಿದ್ಧಪಡಿಸಿದ್ದಾರೆ. ಕುಂಬಾರಿಕೆ ಎಂದರೆ ಮೂಗು ಮುರಿಯುವ ಕಾಲ ಹೋಗಿ, ಹುಬ್ಬೇರಿಸುವ ದಿನಗಳು ಬಂದಿವೆ’ ಎಂದು ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಶೇಷೋ ನಾರಾಯಣ ದೇಶಪಾಂಡೆ ಹೇಳುತ್ತಾರೆ.
1954ರಲ್ಲಿ ಆರಂಭವಾದ ಈ ಕೇಂದ್ರದಿಂದ 50 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು ತಯಾರಾಗಿ ಹೋಗಿದ್ದಾರೆ. ಹಲವರು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ, ಉದ್ಯಮಿಗಳಾಗಿದ್ದಾರೆ. ಮತ್ತೆ ಹಲವರು ಕುಂಬಾರಿಕೆಗೆ ತಮ್ಮದೇ ಆದ ನೂತನ ಸ್ಪರ್ಶ ನೀಡಿದ್ದಾರೆ. ಹಳ್ಳಿಗಳಲ್ಲಿ ಉದ್ಯೋಗ ನೀಡಿದ್ದಾರೆ.
ತರಬೇತಿ ಸಂಸ್ಥೆಯಲ್ಲಿ ಕಾಲಕ್ಕೆ ತಕ್ಕ ಬದಲಾವಣೆ ಮಾಡಿಕೊಳ್ಳಲಾಗಿದೆ. ಮೊದಲು ಮಾನವ ಚಾಲಿತ ಚಕ್ರಗಳಿದ್ದವು. ಇದರೊಂದಿಗೆ ಈಗ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ವಿದ್ಯುತ್ ಚಾಲಿತ ಚಕ್ರಗಳನ್ನು ಬಳಸಿ ಮಣ್ಣಿನಿಂದ ಕರಕುಶಲ ವಸ್ತುಗಳನ್ನು ಸಿದ್ಧಪಡಿಸಲಾಗುತ್ತಿದೆ. ಮಡಕೆ– ಕುಡಿಕೆಗಳನ್ನು ಮಾತ್ರ ಸಿದ್ಧಪಡಿಸುತ್ತಿದ್ದವರು, ಈಗ ಅದರ ಸಾಧ್ಯತೆ ಹೆಚ್ಚಿಸಿಕೊಂಡಿದ್ದಾರೆ. ವೈವಿಧ್ಯಮಯ ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ಸಾಮಗ್ರಿಗಳು, ಮೂರ್ತಿಗಳು, ಪ್ರತಿಮೆಗಳು, ಆಟದ ಸಾಮಾನುಗಳು, ಪೂಜಾ ಸಲಕರಣೆಗಳು... ಹೀಗೆ ಆಧುನಿಕ ಜೀವನಶೈಲಿಗೆ ಬೇಕಾದ ವಸ್ತುಗಳನ್ನು ಮಣ್ಣಿನಿಂದಲೇ ತಯಾರಿಸಲಾಗುತ್ತಿದೆ.
50 ಲೀಟರ್ ನೀರು ಕಾಯಿಸುವಂಥ ಹಂಡೆ, ಕುಡಿಯುವ ನೀರಿನ ಹೂಜಿ, ಆಹಾರ ತಯಾರಿಸುವ ಮಡಕೆ, ಕುಡಿಕೆ, ಚಿತ್ತಾಕರ್ಷಕ ಹಣತೆ, ಚಹಾ ಕುಡಿಯುವ ಲೋಟ, ಸೂಪ್ ಹೀರುವ ಬಟ್ಟಲು, ತಟ್ಟೆ, ಆಲಂಕಾರಿಕ ಹೂಜಿ, ಹ್ಯಾಂಗಿಂಗ್ ಚೈನು, ಹೂಕುಂಡ, ಒಲೆ, ವಿವಿಧ ರೀತಿಯ ಉದ್ಯಾನ ಪಾತ್ರೆ, ಡಸ್ಟ್‌ಬಿನ್, ಕಿವಿ ಮತ್ತು ಕೊರಳಲ್ಲಿ ಧರಿಸಬಹುದಾದ ಆಭರಣಗಳನ್ನು ತಯಾರಿಸುವ ತರಬೇತಿ ಸಿಗುತ್ತದೆ. ಪ್ಲಾಸ್ಟಿಕ್ ಬಾಟಲ್‌ಗಳಿಗೆ ಪರ್ಯಾಯವಾಗಿ ಮಣ್ಣಿನ ಬಾಟಲ್‌ಗಳನ್ನೂ ಸಿದ್ಧಪಡಿಸುತ್ತಾರೆ.
ತಂದೂರಿ ರೊಟ್ಟಿ, ತಂದೂರಿ ಚಿಕನ್, ತಂದೂರಿ ಪಿಜ್ಜಾ, ತಂದೂರಿ ಚಹಾ... ಎಲ್ಲದಕ್ಕೂ ಮಣ್ಣಿನ ಭಟ್ಟಿಯೇ ಬೇಕು. ಇಂಥ ಭಟ್ಟಿಗಳು, ಮೊಸರಿನ ಕುಡಿಕೆಗಳು, ತಂದೂರಿ ಬಿರಿಯಾನಿ ಇಡುವ ಪಾತ್ರೆಗಳೆಲ್ಲವೂ ಮಣ್ಣಿನಿಂದಲೇ ಆಗಿರಬೇಕು. ಹೀಗಾಗಿ, ಧಾಬಾಗಳಿಂದ ಹಿಡಿದು ಸ್ಟಾರ್ ಹೋಟೆಲ್‌ಗಳವರೆಗೆ ಬೇಡಿಕೆ ಹೆಚ್ಚಾಗಿದೆ. ಖಾನಾಪುರದಲ್ಲಿ ಸಿದ್ಧಗೊಳ್ಳುವ ಮಣ್ಣಿನಭಟ್ಟಿಗಳಿಗೆ ರಾಜ್ಯ ಮಾತ್ರವಲ್ಲದೇ, ದೇಶದ ಇತರ ಭಾಗಗಳಿಂದಲೂ ಬೇಡಿಕೆ ಇದೆ. ಸ್ಥಳೀಯ ಕುಂಬಾರರ ವಸ್ತುಗಳನ್ನು ವಿದೇಶದವರೂ ಖರೀದಿಸಿದ್ದಾರೆ. ಇಲ್ಲಿ ಪ್ರದರ್ಶನ ಮಳಿಗೆ ಕೂಡ ಇದೆ. ಹಲವು ಹೋಟೆಲ್ ಉದ್ಯಮಿಗಳು ಇಲ್ಲಿಂದಲೇ ಖರೀದಿಸುತ್ತಾರೆ. ಪ್ರವಾಸಿಗರ ಭೇಟಿಗೂ ಅವಕಾಶವಿದೆ.
‘ಜಗತ್ತನ್ನು ರಾಕ್ಷಸನಂತೆ ಕಾಡುತ್ತಿರುವ ಪ್ಲಾಸ್ಟಿಕ್‌ನಿಂದ ಮುಕ್ತರಾಗಲು ಮಣ್ಣಿನ ವಸ್ತುಗಳೇ ಬೇಕು. ಈಗೀಗ ಮಣ್ಣಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಾರುಕಟ್ಟೆಯೂ ವಿಸ್ತಾರವಾಗಿದೆ. ಕಾಲಕ್ಕೆ ತಕ್ಕ ಪರಿವರ್ತನೆ ಮಾಡಿಕೊಂಡಿದ್ದೇ ಇದಕ್ಕೆ ಕಾರಣ’ ಎನ್ನುತ್ತಾರೆ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ವೆಂಕಟೇಶ.
ಮಲಪ್ರಭಾ ನದಿ ಪಾತ್ರದಲ್ಲಿ ಅಪಾರ ಪ್ರಮಾಣದ ಜೇಡಿಮಣ್ಣ ಸಿಗುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಯಥೇಚ್ಚವಾಗಿದೆ. ಹೆಚ್ಚು ಜಿಗುಟು ಬರುವುದರಿಂದ ವಸ್ತುಗಳು ಬಾಳಿಕೆ ಬರುತ್ತವೆ. ಮೊದಲು ನದಿ ಪಾತ್ರದಿಂದ ಮಣ್ಣು ತಂದು ಸಂಸ್ಕರಿಸಲಾಗುತ್ತದೆ. ಬೃಹದ್ದಾದ ಭಟ್ಟಿಗಳಲ್ಲಿ ಹಾಕಿ ಅದನ್ನು ಸುಡಲಾಗುತ್ತದೆ. ಮಣ್ಣು ಹದಕ್ಕೆ ಬಂದ ಮೇಲೆ ಒಣಹಾಕಿ, ಕಲೆಸಿದ ಬಳಿಕ ಉಪಯೋಗಕ್ಕೆ ಸಿಗುತ್ತದೆ. ಕಾಲಲ್ಲಿ ಮಣ್ಣು ತುಳಿದು, ಕೈಯಿಂದ ಚಕ್ರ ತಿರುಗಿಸುವ ಕಾಲವಿತ್ತು. ಈಗ ಎಲ್ಲದಕ್ಕೂ ಯಂತ್ರಗಳು ಬಂದಿವೆ. ಯಾಂತ್ರಿಕ ಕುಂಬಾರಿಕೆ ಜತೆಗೆ ಸಾಂಪ್ರದಾಯಿಕ ಪದ್ಧತಿಯನ್ನೂ ಜೀವಂತವಾಗಿ ಇಟ್ಟಿರುವುದು ಈ ಸಂಸ್ಥೆಯ ವಿಶೇಷ.
ನಾವು ಎಷ್ಟೇ ಆಧುನಿಕರಾದರೂ ಮತ್ತೆ ಮತ್ತೆ ಹಳೆಯದನ್ನು ನೆನಪಿಸಿಕೊಳ್ಳುವ, ಅಪ್ಪಿಕೊಳ್ಳುವ ಸಂದರ್ಭ ಆಗಾಗ ಬರುತ್ತಲೇ ಇರುತ್ತದೆ. ಹಾಗೆಯೇ ಮಣ್ಣಿನಿಂದ ತಯಾರಾದ ವಸ್ತುಗಳೂ ಕೂಡ.
ಒಂದು ತಿಂಗಳ ಅವಧಿಯ ಹವ್ಯಾಸಿ ಕೋರ್ಸ್, ಅಡ್ವಾನ್ಸ್ ಪಾಟರಿ ಕೋರ್ (ಜಿಗರ್‌ಜಾಲಿ ಹಾಗೂ ಸ್ಲಿಪ್ ಕಾಸ್ಟಿಂಗ್ ಪ್ರೊಸೆಸ್ ಕೋರ್ಸ್), ಎರಡು ತಿಂಗಳ ಟೆರ‍್ರಾಕೋಟ ಆರ್ಟ್‌ವೇರ್ ಕೋರ್ಸ್, ನಾಲ್ಕು ತಿಂಗಳ ವೀಲ್ ಪಾಟರಿ ಕೋರ್ಸ್ ಇಲ್ಲಿವೆ. ವಯೋಮಿತಿ 16ರಿಂದ 50 ವರ್ಷದೊಳಗೆ ಇರಬೇಕು. 5ನೇ ತರಗತಿ ಪಾಸಾದವರು ಅಥವಾ ಓದಲು– ಬರೆಯಲು ಬಂದರೆ ಅದೇ ಶೈಕ್ಷಣಿಕ ಅರ್ಹತೆ. ಒಂದು ಬ್ಯಾಚ್‌ನಲ್ಲಿ 40 ಮಂದಿಗೆ ಅವಕಾಶ. ಉಚಿತ ಊಟ, ವಸತಿ ಸಹಿತ ಹಾಸ್ಟೆಲ್ ಸೌಲಭ್ಯ ಇದೆ. ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ₹1,500ರಿಂದ ₹3,000ರವರೆಗೆ ಕಲಿಕಾ ಭತ್ಯೆ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಕುಂಬಾರಿಕಾ ಸಶಕ್ತೀಕರಣ ಯೋಜನೆ ಅಡಿ ಯಂತ್ರಚಾಲಿತ ಚಕ್ರಗಳನ್ನೂ ವಿತರಿಸಲಾಗುತ್ತದೆ. ₹27 ಸಾವಿರ ಬೆಲೆಯ ಈ ಯಂತ್ರಗಳು ಈಗಲೂ ಲಭ್ಯ ಇವೆ. ಗುಡಿ ಕೈಗಾರಿಕೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗೆ ಸಾಲ ಸೌಲಭ್ಯವಿದೆ.
ಒಂದು ತಿಂಗಳ ಅವಧಿಯ ಹವ್ಯಾಸಿ ಕೋರ್ಸ್ ಅಡ್ವಾನ್ಸ್ ಪಾಟರಿ ಕೋರ್ (ಜಿಗರ್‌ಜಾಲಿ ಹಾಗೂ ಸ್ಲಿಪ್ ಕಾಸ್ಟಿಂಗ್ ಪ್ರೊಸೆಸ್ ಕೋರ್ಸ್) ಎರಡು ತಿಂಗಳ ಟೆರ‍್ರಾಕೋಟ ಆರ್ಟ್‌ವೇರ್ ಕೋರ್ಸ್ ನಾಲ್ಕು ತಿಂಗಳ ವೀಲ್ ಪಾಟರಿ ಕೋರ್ಸ್ ಇಲ್ಲಿವೆ. ವಯೋಮಿತಿ 16ರಿಂದ 50 ವರ್ಷದೊಳಗೆ ಇರಬೇಕು. 5ನೇ ತರಗತಿ ಪಾಸಾದವರು ಅಥವಾ ಓದಲು– ಬರೆಯಲು ಬಂದರೆ ಅದೇ ಶೈಕ್ಷಣಿಕ ಅರ್ಹತೆ. ಒಂದು ಬ್ಯಾಚ್‌ನಲ್ಲಿ 40 ಮಂದಿಗೆ ಅವಕಾಶ. ಉಚಿತ ಊಟ ವಸತಿ ಸಹಿತ ಹಾಸ್ಟೆಲ್ ಸೌಲಭ್ಯ ಇದೆ. ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ₹1500ರಿಂದ ₹3000ರವರೆಗೆ ಕಲಿಕಾ ಭತ್ಯೆ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಕುಂಬಾರಿಕಾ ಸಶಕ್ತೀಕರಣ ಯೋಜನೆ ಅಡಿ ಯಂತ್ರಚಾಲಿತ ಚಕ್ರಗಳನ್ನೂ ವಿತರಿಸಲಾಗುತ್ತದೆ. ₹27 ಸಾವಿರ ಬೆಲೆಯ ಈ ಯಂತ್ರಗಳು ಈಗಲೂ ಲಭ್ಯ ಇವೆ. ಗುಡಿ ಕೈಗಾರಿಕೆಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗೆ ಸಾಲ ಸೌಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.