ADVERTISEMENT

ಅತಿಥಿಗೃಹ, ಜೈಲು, ಸ್ಮಾರಕ.. ಭದ್ರತೆಗೆ ಮತ್ತೊಂದು ಹೆಸರೇ ವಿಜಯಪುರ ದರ್ಗಾ ಜೈಲ್‌

‘ಮಲ್ಲಿಕ್‌ ಸರಾಯ್‌’ ಎಂಬ ಅತಿಥಿಗೃಹ ಕೂಡ ಒಂದು ಮನಮೋಹಕ ಸ್ಮಾರಕ

ಬಸವರಾಜ ಸಂಪಳ್ಳಿ
Published 6 ಜುಲೈ 2024, 23:37 IST
Last Updated 6 ಜುಲೈ 2024, 23:37 IST
ವಿಜಯಪುರ ನಗರದ ಐತಿಹಾಸಿಕ ದರ್ಗಾ ಜೈಲಿನ ಮುಂಭಾಗದ ನೋಟ  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಐತಿಹಾಸಿಕ ದರ್ಗಾ ಜೈಲಿನ ಮುಂಭಾಗದ ನೋಟ  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ದಕ್ಷಿಣ ಭಾರತದಲ್ಲಿ ಸುಮಾರು ಎರಡು ನೂರು ವರ್ಷಗಳ ಕಾಲ ರಾಜ್ಯವಾಳಿದ ಬಿಜಾಪುರದ ಆದಿಲ್‌ ಶಾಹಿಗಳು ತಮ್ಮ ಅವಧಿಯಲ್ಲಿ ಗುಮ್ಮಟ, ಕೋಟೆ, ಕೊತ್ತಲ, ಬುರುಜ್‌, ಮಸೀದಿ, ಅರಮನೆ, ಮಹಲು, ಮಂಜಿಲ್‌, ಬಾವಡಿ, ತಲಾಬ್‌, ಗೋರಿಗಳನ್ನು ಆಕರ್ಷಕವಾಗಿ ಕಟ್ಟಿಸಿದರು. ಅಂತಹವುಗಳಲ್ಲಿ ‘ಮಲ್ಲಿಕ್‌ ಸರಾಯ್‌’ ಎಂಬ ಅತಿಥಿಗೃಹ ಕೂಡ ಒಂದು ಮನಮೋಹಕ ಸ್ಮಾರಕವಾಗಿದ್ದು, ಇಂದಿಗೂ ಗಮನ ಸೆಳೆಯುತ್ತಿದೆ. 

ಸದ್ಯ ವಿಜಯಪುರ ಜಿಲ್ಲಾ ಕಾರಾಗೃಹವಾಗಿ ಬಳಕೆಯಾಗುತ್ತಿರುವ ಈ ‘ಮಲ್ಲಿಕ್‌ ಸರಾಯ್‌’ ದೇಶದ ಅತ್ಯಂತ ಹಳೆಯ ಕಾರಾಗೃಹಗಳಲ್ಲಿ ಒಂದಾಗಿದೆ. ‘ದರ್ಗಾ ಜೈಲ್‌’ ಎಂದೇ ಪ್ರಚಲಿತವಾಗಿರುವ ‘ಮಲ್ಲಿಕ್‌ ಸರಾಯ್‌’ ಮೂಲತಃ ಕಾರಾಗೃಹವಲ್ಲ! ತನ್ನದೇ ಆದ ಐತಿಹಾಸಿಕ ಮಹತ್ವವುಳ್ಳ ಒಂದು ಭವ್ಯ ರಾಜಾತಿಥ್ಯಗೃಹ.

‘ಈ ಪಾರಂಪರಿಕ ಕಟ್ಟಡವನ್ನು 1648ರಲ್ಲಿ ಮೊಹಮ್ಮದ್ ಆದಿಲ್‌ ಶಾಹಿಯ ಮಂತ್ರಿ ನವಾಬ್ ಮಲ್ಲಿಕ್‌ ನಿರ್ಮಿಸಿದ್ದು, ಮುಂದೆ ಈ ಐತಿಹಾಸಿಕ ಕಟ್ಟಡ ‘ಮಲ್ಲಿಕ್‌ ಸರಾಯ್‌’ ಎಂದೇ ಹೆಸರಾಯಿತು’ ಎನ್ನುತ್ತಾರೆ ಇತಿಹಾಸಕಾರ ಕೃಷ್ಣ ಕೊಲ್ಹಾರ ಕುಲಕರ್ಣಿ.

ADVERTISEMENT

ಪರ್ಷಿಯನ್ ಶೈಲಿಯ ಪ್ರವೇಶದ್ವಾರವನ್ನು ಹೊಂದಿರುವ ಈ ಕಟ್ಟಡವು ಕಪ್ಪುಕಲ್ಲಿನ ಅಗಲವಾದ ಗೋಡೆಯನ್ನು ಹೊಂದಿದೆ. ಮಲ್ಲಿಕ್‌ ಸರಾಯ್‌ನ ಪ್ರವೇಶದ್ವಾರದಲ್ಲಿ ‘ಶಾಂತ ಮತ್ತು ಸುರಕ್ಷಿತ ವಾಸ್ತವ್ಯಕ್ಕಾಗಿ ಸ್ವಾಗತಿಸುತ್ತೇವೆ’ ಎಂಬ ತಾಮ್ರವರ್ಣದಲ್ಲಿ ಬರೆದಿರುವ ಅರೇಬಿಕ್ ಬರಹವು ಅತಿಥಿಗಳನ್ನು ಆದರಪೂರ್ವಕವಾಗಿ ಸ್ವಾಗತಿಸುತ್ತದೆ.

ಆದಿಲ್‌ ಶಾಹಿಗಳ ಆಸ್ಥಾನಕ್ಕೆ ದೇಶ, ವಿದೇಶಗಳಿಂದ ಬರುವ ರಾಜರು ಮತ್ತು ಉನ್ನತ ದರ್ಜೆಯ ವ್ಯಾಪಾರಸ್ಥರು ಸುರಕ್ಷಿತವಾಗಿ ತಂಗಲು ಮಲ್ಲಿಕ್‌ ಸರಾಯ್‌ಯನ್ನು ಬಳಸಲಾಗುತ್ತಿತ್ತು.

ಕಲ್ಲು, ಗಾರೆ, ಗಚ್ಚು ಬಳಸಿ ನಿರ್ಮಿಸಿರುವ ಮಲ್ಲಿಕ್‌ ಸರಾಯ್‌ ಕಟ್ಟಡ ಭೂಕಂಪನ ಸೇರಿದಂತೆ ಯಾವುದೇ ರೀತಿಯ ನೈಸರ್ಗಿಕ ವಿಕೋಪ, ಅಗ್ನಿ ಅವಘಡವಾದರೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೇ, ಬೇಸಿಗೆ, ಚಳಿಗಾಲ, ಮಳೆಗಾಲ ಸೇರಿದಂತೆ ಎಲ್ಲ ಹವಾಮಾನಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಈ ಕಟ್ಟಡಕ್ಕೆ ಇದೆ. ಅಲ್ಲದೇ, ಈ ಕಟ್ಟಡವು ಸುರಕ್ಷತೆ ದೃಷ್ಟಿಯಿಂದ ಎತ್ತರವಾದ ಎರಡು ರಕ್ಷಣಾ ಗೋಡೆಗಳನ್ನು ಹೊಂದಿದೆ. ಈ ಗೋಡೆಗಳನ್ನು ದಾಟಿ ಯಾರೊಬ್ಬರೂ ಒಳಗೆ ಬರಲು ಅಥವಾ ಹೊರಗೆ ತೆರಳಲು ಸಾಧ್ಯವೇ ಇಲ್ಲ. ಏನಿದ್ದರೂ ಮುಖ್ಯದ್ವಾರದ ಮೂಲಕವೇ ಬರಬೇಕು, ಹೋಗಬೇಕು. ಅಷ್ಟೊಂದು ಸುರಕ್ಷಿತ ಮತ್ತು ಭದ್ರತೆಯನ್ನು ಹೊಂದಿರುವ ಕಟ್ಟಡ ಇದಾಗಿದೆ. ಈ ಹಿನ್ನೆಲೆಯಲ್ಲಿ 1887ರಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಕ್ಯಾಪ್ಟನ್ ವಿಲ್ಕಿನ್ಸ್‌ ಅವರು ಈ ಕಟ್ಟಡವನ್ನು ಜೈಲಾಗಿ ಪರಿವರ್ತಿಸಿದರು. 1983ರಲ್ಲಿ ಇದನ್ನು ಕೇಂದ್ರ ಕಾರಾಗೃಹವನ್ನಾಗಿ ಮಾಡಲಾಯಿತು ಎನ್ನುತ್ತಾರೆ ದರ್ಗಾ ಜೈಲು ಅಧೀಕ್ಷಕ ಐ.ಜೆ.ಮ್ಯಾಗೇರಿ.

ಆದಿಲ್‌ ಶಾಹಿಗಳ ಕಾಲದ ಕುದುರೆ ಲಾಯಗಳು ಬ್ಯಾರಕ್‌ಗಳಾದವು. ಈ ಜೈಲಿನಲ್ಲಿ ಹತ್ತು ಬ್ಯಾರಕ್‌ಗಳಿವೆ. ಒಂದೊಂದು ಬ್ಯಾರಕ್‌ನಲ್ಲೂ 30 ರಿಂದ 40 ಕೈದಿಗಳನ್ನು ಇರಿಸಬಹುದಾಗಿದೆ. ಈ ಐತಿಹಾಸಿಕ ಕಟ್ಟಡದೊಳಗೆ ‘ಹಜರತ್‌ ಸಯ್ಯದ್‌ ರಾಜ ಮೊಹಮ್ಮದ್‌’ ದರ್ಗಾ ಕೂಡ ಇದೆ. ಇಡೀ ಕಟ್ಟಡದ ಐತಿಹಾಸಿಕ ಮಹತ್ವಕ್ಕೆ ಧಕ್ಕೆಯಾಗದಂತೆ ಕಾಪಿಟ್ಟುಕೊಳ್ಳಲಾಗಿದೆ.

ಐದು ಎಕರೆ ವಿಸ್ತೀರ್ಣದಲ್ಲಿರುವ ಮಲ್ಲಿಕ್‌ ಸರಾಯ್‌ನಲ್ಲಿ ಸುಮಾರು ನಾಲ್ಕು ಎಕರೆಯಷ್ಟು ಜೈಲಿದೆ. ಇನ್ನುಳಿದ ಒಂದು ಎಕರೆಯಲ್ಲಿ ತೋಟ, ವಸತಿಗೃಹಗಳು ಇವೆ. ಜೈಲಿನ ಸುತ್ತ ಎರಡು ಆವರಣ ಗೋಡೆಗಳಿವೆ. ಈ ಕಾರಣದಿಂದ ಭದ್ರತೆ ದೃಷ್ಟಿಯಿಂದ ಈ ಜೈಲು ದೇಶದಲ್ಲೇ ಅತ್ಯಂತ ಸುರಕ್ಷಿತ ಜೈಲು ಎಂಬ ಹೆಸರು ಪಡೆದಿದೆ. ಕೈದಿಗಳು ಯಾವುದೇ ಕಾರಣಕ್ಕೂ ಇಲ್ಲಿಂದ ಪರಾರಿಯಾಗಲು ಸಾಧ್ಯವಿಲ್ಲ. ಈ ಹಿಂದೆ ಇಬ್ಬರು ಕೈದಿಗಳು ಈ ಯತ್ನ ಮಾಡಿ ವಿಫಲವಾಗಿರುವ ಉದಾಹರಣೆ ಇದೆ.

ಆರಂಭದ ದಿನಗಳಲ್ಲಿ ಆದಿಲ್‌ ಶಾಹಿಗಳ ಆತಿಥ್ಯಕ್ಕೆ ಪಾತ್ರವಾಗಿದ್ದ ‘ಮಲ್ಲಿಕ್‌ ಸರಾಯ್‌’ ನಂತರ ಬ್ರಿಟೀಷರ ಅವಧಿಯಿಂದ ಇದುವರೆಗೆ ಕೈದಿಗಳಿಗೆ ಸೆರೆಮನೆಯಾಗಿದೆ. ಶೀಘ್ರದಲ್ಲೇ ದರ್ಗಾ ಜೈಲನ್ನು ಅರಕೇರಿಯ ಐಆರ್‌ಬಿ ಎದುರು ನಿರ್ಮಾಣವಾಗಿರುವ ಹೊಸ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಸ್ಥಳಾಂತರದ ಬಳಿಕ ದರ್ಗಾಜೈಲ್‌ ಇತಿಹಾಸದ ಘಟನೆಯನ್ನು ನೆನಪಿಸುವ ಸ್ಮಾರಕವಾಗಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ.

ಈಗ ವಿಜಯಪುರ ದರ್ಗಾ ಜೈಲಾಗಿರುವ ಮಲ್ಲಿಕ್‌ ಸರಾಯ್‌ ಕಟ್ಟಡದ ಒಳಭಾಗ
ಕಾರಾಗೃಹದ ಬ್ಯಾರಕ್‌ಗಳಾಗಿ ಪರಿವರ್ತನೆಯಾಗಿರುವ ಆದಿಲ್‌ ಶಾಹಿಗಳ ಕುದುರೆ ಲಾಯ  
ಪರ್ಷಿಯನ್‌ ಶೈಲಿಯಲ್ಲಿ ಕಮಾನಾಕಾರವಾಗಿ ನಿರ್ಮಿತವಾಗಿರುವ ಆದಿಲ್‌ ಶಾಹಿಗಳ ಅತಿಥಿ ಗೃಹ (ಈಗಿನ ಕೇಂದ್ರ ಕಾರಾಗೃಹ) ಮಲ್ಲಿಕ್‌ ಸರಾಯ್‌ನ ಒಳನೋಟ 
ವಿಜಯಪುರ ದರ್ಗಾ ಜೈಲಿನಲ್ಲಿ ಕೈದಿಗಳಿಗಾಗಿ ಇರುವ ಕೈಮಗ್ಗ 
ವಿಜಯಪುರ ಕೇಂದ್ರ ಕಾರಾಗೃಹದ ಒಳಗೆ ಇರುವ ಐತಿಹಾಸಿಕ ದರ್ಗಾ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.