ADVERTISEMENT

ವಿದೇಶಿಯರಿಗೆ ಹಂಪಿ ಯಾಕಿಷ್ಟ?

ವಾಸ್ತುಶಿಲ್ಪ, ಹಳ್ಳಿಯ ಸೊಗಡು, ಸ್ಥಳೀಯರ ಸಹಕಾರಕ್ಕೆ ಮನಸೋಲುವ ವಿದೇಶಿಯರು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 23 ಮಾರ್ಚ್ 2019, 20:00 IST
Last Updated 23 ಮಾರ್ಚ್ 2019, 20:00 IST
ಹಂಪಿ
ಹಂಪಿ   

‘ಇಂತಹದ್ದೊಂದು ಬಯಲು ಸಂಗ್ರಹಾಲಯ ಈ ಹಿಂದೆ ಎಲ್ಲೂ ನೋಡಿಲ್ಲ. ವಾಹನಗಳ ಓಡಾಟ ಇಲ್ಲ. ಮಾಲಿನ್ಯವಂತೂ ಇಲ್ಲವೇ ಇಲ್ಲ. ಇಲ್ಲಿನ ಬೆಟ್ಟ, ಗುಡ್ಡಗಳಲ್ಲಿ ಏನೋ ವಿಶಿಷ್ಟ ಶಕ್ತಿ ಇದೆ ಏನೋ ಅನಿಸುತ್ತದೆ. ಅದೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿರಬಹುದು’

ಹಂಪಿ ನೋಡಿದ ಬಳಿಕ ಹೀಗೆ ಉದ್ಗಾರ ತೆಗೆದರು ಫ್ರಾನ್ಸ್‌ನ ನೀಸ್‌ ನಗರದಲ್ಲಿ ಬಂದರು ಇಲಾಖೆಯ ನಿರ್ದೇಶಕರಾಗಿರುವ ಎರಿಕ್‌. ಎರಡು ದಿನಗಳ ಹಿಂದೆ ಹಂಪಿಗೆ ಬಂದಿರುವ ಅವರು, ಇಲ್ಲಿನ ಪರಿಸರಕ್ಕೆ ಬೆರಗಾಗಿ ಇನ್ನೂ ಕೆಲವು ದಿನ ಇಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ. ದಿನವಿಡೀ ಹಂಪಿ ಪರಿಸರದಲ್ಲಿ ಓಡಾಡುತ್ತಾರೆ. ಸಂಜೆಯಾದೊಡನೆ ಹೇಮಕೂಟಕ್ಕೆ ಬಂದು, ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದು ಮರೆಯುವುದಿಲ್ಲ. ಅದರ ಪ್ರತಿಯೊಂದು ಕ್ಷಣವನ್ನು ಬಂಡೆಗಲ್ಲಿನ ಅಂಚಿನಲ್ಲಿ ಕುಳಿತು ಆನಂದಿಸುತ್ತಾರೆ.

ಎರಿಕ್‌ ಅವರಿಗೆ ಸ್ಥಳೀಯ ಸಂಸ್ಕೃತಿ, ಆಚಾರ–ವಿಚಾರ ಬಹಳ ಇಷ್ಟ. ಅವರೇ ಹೇಳುವಂತೆ, ‘ಪಾಶ್ಚಾತ್ಯ ಸಂಸ್ಕೃತಿ ನೋಡಿ ಬೇಸತ್ತಿದ್ದೇನೆ. ಅಲ್ಲಿನ ಸಂಸ್ಕೃತಿಗೂ ಇಲ್ಲಿನ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ಅದನ್ನು ಪ್ರತಿಯೊಂದರಲ್ಲಿ ಕಾಣಬಹುದು. ಈ ನೆಲದ ಗುಣವೇ ಹಾಗೆ ಇರಬಹುದು. ಅದರಲ್ಲೂ ಹಂಪಿಯಲ್ಲಿ ಏನೋ ವಿಶಿಷ್ಟವಾದ ಶಕ್ತಿ ಇದೆ. ಈ ಹಿಂದೆ ನನ್ನ ತಾಯಿ ಬಂದಿದ್ದರು. ಈಗ ನಾನು ಬಂದಿದ್ದೇನೆ. ಇಲ್ಲಿರುವ ಶಕ್ತಿ ಕರೆಸಿಕೊಂಡರೆ ಪುನಃ ಬರುವೆ’ ಎಂದರು.

ADVERTISEMENT

1985ರಲ್ಲಿ ಎರಿಕ್‌ ಅವರ ತಾಯಿ ಹಾಗೂ ಸಹೋದರಿ ಹಂಪಿಗೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲ, ಅವರ ಅನೇಕ ಜನ ಸ್ನೇಹಿತರು ಬಂದು ಹೋಗಿದ್ದಾರೆ. ‘ಒಂದು ಸಲವಾದರೂ ಹಂಪಿ ನೋಡಲೇಬೇಕು’ ಎಂದು ಇವರ ಬಳಿ ಅವರು ಹೇಳಿದ್ದಾರೆ. ಈಗ ರಜೆ ಇರುವುದರಿಂದ ಹಂಪಿಗೆ ಒಬ್ಬರೇ ಬಂದಿದ್ದಾರೆ.

‘ಸ್ಥಳೀಯ ಜನ ಬಹಳ ಒಳ್ಳೆಯವರು. ಬಡತನವಿದ್ದರೂ ಅವರ ಮುಖದಲ್ಲಿ ಸಂತೃಪ್ತಿ ಇದೆ. ಹಂಪಿಯ ರಸ್ತೆಬದಿಯಲ್ಲಿ ಮಕ್ಕಳು ಆಟ ಆಡುವುದು ನೋಡಿದರೆ ಬಹಳ ಸಂತಸವಾಗುತ್ತದೆ. ನಮ್ಮಲ್ಲಿ ಮಕ್ಕಳು ಏನೇ ಮಾಡಿದರೂ ಮನೆಯಲ್ಲೇ ಮಾಡಬೇಕು. ಇಂತಹ ಸ್ವಚ್ಛಂದ ವಾತಾವರಣದಲ್ಲಿ ಮಾತ್ರ ಮಕ್ಕಳು ಮುಕ್ತವಾಗಿ ಬೆಳೆಯಲು ಸಾಧ್ಯ ಎನ್ನುತ್ತಾರೆ’ ಸ್ವಿಟ್ಜರ್‌ಲೆಂಡ್‌ನಲ್ಲಿ ಎಂಜಿನಿಯರ್‌ ಆಗಿರುವ ರೋಜರ್‌.

‘ಜನ ಶ್ರೀರಾಮ, ಗಣೇಶನನ್ನು ದೊಡ್ಡ ಸಂಖ್ಯೆಯಲ್ಲಿ ಆರಾಧಿಸುತ್ತಾರೆ. ಅದನ್ನು ಹಂಪಿಯಲ್ಲೂ ನೋಡಿದ್ದೇನೆ. ದೇವರುಗಳ ಬಗ್ಗೆ ಜನರಲ್ಲಿ ಇಷ್ಟೊಂದು ಭಕ್ತಿ ಹೇಗೆ ಬೆಳೆಯಿತು ಎನ್ನುವುದು ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹಂಪಿ ಕುರಿತಾಗಿ ನನ್ನ ಗೆಳೆಯರು ಸಾಕಷ್ಟು ಹೇಳಿದ್ದರು. ನೋಡಿದ ನಂತರ, ಅವರು ಹೇಳಿರುವುದಕ್ಕಿಂತಲೂ ಉತ್ತಮ ಸ್ಥಳ ಇದಾಗಿದೆ’ ಎಂದರು.

ಇನ್ನು ಫ್ರಾನ್ಸ್‌ನಲ್ಲಿ ಮಾರ್ಕೆಟಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ಲೀಸಾ ಮಾತಿಗಿಳಿದು, ‘ಬಹಳ ಪ್ರಶಾಂತವಾದ ಸ್ಥಳವಿದು. ವಾಹನಗಳ ಓಡಾಟದ ಸದ್ದಿಲ್ಲ. ಹೀಗಾಗಿಯೇ ಶುದ್ಧವಾಗಿ ಗಾಳಿ ಇದೆ. ಜಗತ್ತಿನ ಅನೇಕ ಸ್ಥಳಗಳಿಗೆ ಭೇಟಿ ಕೊಟ್ಟಿರುವೆ. ಆದರೆ, ನಿಸರ್ಗದ ಮಧ್ಯೆ ಇರುವ ಇಂತಹ ಪ್ರವಾಸಿ ತಾಣ ನೋಡಿರಲಿಲ್ಲ’ ಎಂದು ಮೆಚ್ಚುಗೆ ಮಾತುಗಳನ್ನು ಆಡಿದರು.

‘ಇಲ್ಲಿರುವ ಎಲ್ಲ ಸ್ಮಾರಕಗಳು ಬೆಟ್ಟ, ಗುಡ್ಡಗಳ ನಡುವೆ ಹಂಚಿ ಹೋಗಿವೆ. ಅಂಜನಾದ್ರಿ ಬೆಟ್ಟ, ಮಾತಂಗ ಪರ್ವತ, ಹೇಮಕೂಟದಿಂದ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ. ಮೊದಲ ಸಲ ಇಲ್ಲಿಗೆ ಬಂದಿರುವೆ. ಮತ್ತೆ ಬರುವ ಯೋಚನೆ ಇದೆ. ಮುಂದಿನ ಸಲ ಬಂದಾಗ ಗೆಳೆಯರನ್ನು ಜತೆಗೆ ಕರೆತರುವೆ’ ಎಂದು ಹೇಳಿದರು.

ಇದು ಹಂಪಿ ಕುರಿತು ವಿದೇಶಿ ಪ್ರವಾಸಿಗರ ಅಭಿಪ್ರಾಯ. ವಿಶ್ವ ಪ್ರಸಿದ್ಧ ಹಂಪಿ ಎಂದರೆ ಒಂದು ಜೀವಂತ ಪರಂಪರೆ ಇದ್ದಂತೆ. ನದಿ, ಬೆಟ್ಟಗುಡ್ಡಗಳು, ಹಚ್ಚ ಹಸಿರಿನ ಪರಿಸರ, ಅದರಲ್ಲಿ ನೆಲೆಸಿರುವ ಜೀವವೈವಿಧ್ಯ. ಇವುಗಳೆಲ್ಲದರ ಮಧ್ಯೆ ಶ್ರೀಮಂತ ವಾಸ್ತುಶಿಲ್ಪದಿಂದ ಕೂಡಿರುವ ಅಪರೂಪದ ಸ್ಮಾರಕಗಳು. ಒಬ್ಬ ಪ್ರವಾಸಿಗ ಬಯಸುವುದಕ್ಕಿಂತ ಹೆಚ್ಚಿನದೇ ಅಲ್ಲಿದೆ. ಈ ಕಾರಣಕ್ಕಾಗಿಯೇ ವಿದೇಶಿಯರು ಹಂಪಿಯನ್ನು ಹೆಚ್ಚು ಇಷ್ಟಪಡಲು ಬಹುಮುಖ್ಯ ಕಾರಣ.

ಹಂಪಿ ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿ ಬದಲಾದರೂ ಅದರ ಸುತ್ತಮುತ್ತಲಿನ ಹಳ್ಳಿಯ ಸೊಗಡು ಹಾಗೆಯೇ ಉಳಿದುಕೊಂಡಿದೆ. ಸ್ಥಳೀಯವಾಗಿ ಆಚರಿಸುವ ಹಬ್ಬ ಹರಿದಿನಗಳು, ಆಚರಣೆಗಳು, ಜಾತ್ರೆ, ವೇಷ–ಭೂಷಣ, ಖಾದ್ಯ, ಸ್ಥಳೀಯರ ಸಹಕಾರ ಮನೋಭಾವ ಅವರಿಗೆ ಹೆಚ್ಚು ಆಪ್ತವೆನಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯರಿಂದ ತಮಗೆ ಯಾವುದೇ ರೀತಿಯ ಅಪಾಯವಿಲ್ಲ ಎಂಬ ಭಾವನೆ ಅವರಲ್ಲಿ ಗಟ್ಟಿಯಾಗಿ ಮನೆ ಮಾಡಿದೆ. ಈ ಕಾರಣಕ್ಕಾಗಿಯೇ ಅವರು ಸ್ವಚ್ಛಂದವಾಗಿ ಹಂಪಿಯಲ್ಲಿ ಏಕಾಂಗಿಯಾಗಿ ಓಡಾಡುತ್ತಾರೆ. ಒಂದು ಸಲ ಬಂದು ಹೋದವರು ಪದೇ ಪದೇ ಬರುತ್ತಾರೆ. ಅಷ್ಟೇ ಅಲ್ಲ, ಮಗದೊಮ್ಮೆ ಬರುವಾಗ ಸ್ನೇಹಿತರನ್ನು ಜತೆಯಲ್ಲಿ ಕರೆದುಕೊಂಡು ಬರುತ್ತಾರೆ.

ಅಂದಹಾಗೆ, ಹಂಪಿಗೆ ಬರುವ ವಿದೇಶಿ ಪ್ರವಾಸಿಗರ ದಿನಚರಿ, ಇರುವಷ್ಟು ದಿನವೂ ಅವರು ಏನು ಮಾಡುತ್ತಾರೆ ಎಂಬುದರ ಒಂದು ಪಕ್ಷಿನೋಟ ಇಲ್ಲಿದೆ.

ಅಧ್ಯಯನ

ಹಂಪಿಗೆ ಬರುವ ವಿದೇಶಿ ಪ್ರವಾಸಿಗರ ಪೈಕಿ ಕೆಲವರು ಅಧ್ಯಯನಕ್ಕೆಂದೇ ಇಲ್ಲಿಗೆ ಬರುತ್ತಾರೆ. ಇತಿಹಾಸ, ಪರಂಪರೆ, ವಾಸ್ತುಶಿಲ್ಪ, ಸ್ಥಳೀಯರ ಜೀವನ ಶೈಲಿ, ಕೃಷಿ, ವೇಷ–ಭೂಷಣ, ಆಚಾರ–ವಿಚಾರದ ಅಧ್ಯಯನಕ್ಕೆ ಹೆಚ್ಚಾಗಿ ಬರುತ್ತಾರೆ. ಸ್ಥಳೀಯ ಇತಿಹಾಸ ತಜ್ಞರು, ಮಾರ್ಗದರ್ಶಿಗಳ ಜತೆ ಸಮಾಲೋಚನೆ ನಡೆಸಿ, ಮಾಹಿತಿ ಕಲೆ ಹಾಕುತ್ತಾರೆ.

ಸ್ಥಳೀಯರ ಬದುಕು–ಬವಣೆ, ಕೃಷಿ, ವಸ್ತ್ರ, ಆಹಾರ ಪದ್ಧತಿ ತಿಳಿದುಕೊಳ್ಳಲು ಅವರೊಂದಿಗೆ ಕಾಲ ಕಳೆಯುತ್ತಾರೆ. ಅವರಲ್ಲಿ ತಾವು ಒಬ್ಬರಾಗಿ, ಅವರೊಂದಿಗೆ ಅವರ ಮನೆಯಲ್ಲಿ ತಯಾರಿಸಿದ ಊಟ ಮಾಡುತ್ತಾರೆ. ಅವರಂತೆ ಬಟ್ಟೆ ಹಾಕಿಕೊಳ್ಳುತ್ತಾರೆ. ಅದರಲ್ಲೂ ಲಂಬಾಣಿ ಸಮುದಾಯದ ಸಾಂಪ್ರದಾಯಿಕ ವಸ್ತ್ರ, ಲಂಗ–ದಾವಣಿ, ಸೀರೆ ತೊಡುವುದು ಎಂದರೆ ಬಲು ಇಷ್ಟ. ಪುರುಷರು ಕುರ್ತಾ, ಪೈಜಾಮ್‌, ಪಂಚೆ ಧರಿಸುತ್ತಾರೆ. ಸ್ಥಳೀಯರೊಂದಿಗೆ ಆಪ್ತರಾಗಿ ಇದ್ದುಕೊಂಡು ಇಂಚಿಂಚೂ ವಿವರ ಕಲೆ ಹಾಕುತ್ತಾರೆ.

ಛಾಯಾಗ್ರಹಣ

ಫೋಟೊಗ್ರಫಿಗೆ ಹಂಪಿ ಹೇಳಿ ಮಾಡಿಸಿದ ಸ್ಥಳ ಎಂಬುದರಲ್ಲಿ ಎರಡು ಮಾತಿಲ್ಲ. ಸ್ಮಾರಕಗಳ ಜತೆಗೆ ದೊಡ್ಡ ಜೀವಜಾಲವೇ ಇಲ್ಲಿ ಇರುವುದರಿಂದ ಛಾಯಾಗ್ರಹಣದಲ್ಲಿ ಅಭಿರುಚಿ ಇರುವವರು ಇಲ್ಲಿ ಹೆಚ್ಚಿನ ದಿನಗಳನ್ನು ಕಳೆಯಲು ಇಷ್ಟಪಡುತ್ತಾರೆ. ಯಾವುದಾದರೂ ಒಂದು ಸ್ಮಾರಕವನ್ನು ಭಿನ್ನ ಕೋನಗಳಲ್ಲಿ ಸೆರೆ ಹಿಡಿಯಲು ಹಲವು ದಿನಗಳನ್ನೇ ಕಳೆದು ಬಿಡುತ್ತಾರೆ.

ಕೆಲವರು ಸ್ಥಳೀಯ ಹವ್ಯಾಸಿ ಛಾಯಾಗ್ರಾಹಕರ ಮಾಹಿತಿ ಪಡೆದು, ಅವರನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಪ್ರಮುಖ ಸ್ಥಳಗಳಿಗೆ ಸುತ್ತಾಡಿ ಛಾಯಾಚಿತ್ರಗಳನ್ನು ಸೆರೆ ಹಿಡಿಯುತ್ತಾರೆ. ಮತ್ತೆ ಕೆಲವರು ಏಕಾಂಗಿಯಾಗಿ ಓಡಾಡುತ್ತಾರೆ. ತಮಗಿಷ್ಟವಾದ ಸ್ಥಳಗಳಿಗೆ ಸುತ್ತುತ್ತಾರೆ. ಯಾವುದು ಆಪ್ತವೆನಿಸುತ್ತದೆಯೋ ಅಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ.

ಕಾಲ್ನಡಿಗೆ, ಬೈಸಿಕಲ್‌

ಹಂಪಿಗೆ ಬರುವ ಶೇ 99ರಷ್ಟು ಪ್ರವಾಸಿಗರು ಕಾಲ್ನಡಿಗೆ ಹಾಗೂ ಬೈಸಿಕಲ್‌ನಲ್ಲಿ ಸುತ್ತಾಡಲು ಹೆಚ್ಚು ಇಷ್ಟಪಡುತ್ತಾರೆ. ಯಾವುದೇ ವಿದೇಶಿ ಪ್ರಜೆ ಕನಿಷ್ಠ ಒಂದು ವಾರವಾದರೂ ಹಂಪಿಯಲ್ಲಿ ತಂಗುತ್ತಾನೆ. ದಿನಕ್ಕೆ ಎರಡ್ಮೂರು ಸ್ಮಾರಕಗಳನ್ನೇ ನೋಡಲು ಸಾಧ್ಯವಾದರೂ ಸರಿ ಕಾಲ್ನಡಿಗೆ ಮತ್ತು ಬೈಸಿಕಲ್‌ ಮೇಲೆಯೇ ಓಡಾಡುತ್ತಾರೆ.

ಕಾಲ್ನಡಿಗೆ, ಬೈಸಿಕಲ್‌ನಲ್ಲಿ ಓಡಾಡುವುದರಿಂದ ನಿಸರ್ಗದ ಇಂಚಿಂಚೂ ಕಣ್ತುಂಬಿಕೊಳ್ಳಬಹುದು. ಬೇಕಿರುವ ಸ್ಥಳದಲ್ಲಿ ಹೆಚ್ಚಿನ ಹೊತ್ತು ಕಳೆಯಬಹುದು ಎಂಬ ನಂಬಿಕೆ. ನಡೆದಾಡುವುದು, ಸೈಕಲ್‌ ಓಡಿಸುವುದರಿಂದ ಆರೋಗ್ಯವಂತರಾಗಿ ಇರಬಹುದು ಎಂಬ ಭಾವನೆ ಹೆಚ್ಚಿನವರಲ್ಲಿ ಇದೆ. ಈ ಮಾತನ್ನು ಹಂಪಿಯಲ್ಲಿರುವ ಬಹುತೇಕ ಮಾರ್ಗದರ್ಶಿಗಳು ದೃಢಪಡಿಸುತ್ತಾರೆ. ಅನೇಕ ವಿದೇಶಿಯರು ತಾವು ಬೈಸಿಕಲ್‌ ಮೇಲೆ ಓಡಾಡುವುದಲ್ಲದೆ ಮಾರ್ಗದರ್ಶಿಗಳನ್ನು ಜತೆಗೆ ಕರೆದುಕೊಂಡು ಹೋಗುತ್ತಾರೆ. ಅವರು ಅನಿವಾರ್ಯವಾಗಿ ಅವರೊಂದಿಗೆ ಬೈಸಿಕಲ್‌ ತುಳಿದುಕೊಂಡು ಹೋಗುತ್ತಾರೆ. ಆದರೆ, ಸ್ವಲ್ಪ ಹೆಚ್ಚುವರಿ ಶುಲ್ಕ ವಿಧಿಸುತ್ತಾರೆ. ಬೈಸಿಕಲ್‌ಗಳಲ್ಲಿ ವಿದೇಶಿಯರು ಓಡಾಡಲು ಇಷ್ಟ ಪಡುವುದರಿಂದ ಹಂಪಿಯಲ್ಲಿ ಅನೇಕ ಜನ ವಿವಿಧ ರೀತಿಯ ಬೈಸಿಕಲ್‌ಗಳನ್ನು ಬಾಡಿಗೆಗೆ ಕೊಡುತ್ತಾರೆ. ದಿನಕ್ಕೆ ₹150 ಶುಲ್ಕ ವಿಧಿಸುತ್ತಾರೆ. ಮೊಪೆಡ್‌, ಬಗೆಬಗೆಯ ಬೈಕ್‌ಗಳು ಬಾಡಿಗೆಗೆ ಇಡಲಾಗಿದೆ. ಆದರೆ, ಅವುಗಳನ್ನು ಉಪಯೋಗಿಸುವವರು ಬಹಳ ಕಡಿಮೆ.

ಸುರ್ಯೋದಯ, ಸೂರ್ಯಾಸ್ತ

ಹಂಪಿಯ ಮಾತಂಗ ಪರ್ವತ ಸುರ್ಯೋದಯಕ್ಕೆ ಹೆಸರಾದರೆ, ಹೇಮಕೂಟ ಸೂರ್ಯಾಸ್ತ ವೀಕ್ಷಣೆಯ ನೆಚ್ಚಿನ ಸ್ಥಳವಾಗಿದೆ. ಈ ಎರಡೂ ಎತ್ತರವಾದ ಸ್ಥಳಗಳ ಮೇಲೆ ನಿಂತರೆ ಇಡೀ ಹಂಪಿಯ ಪರಿಸರ ಗೋಚರಿಸುತ್ತದೆ.

ಯಾರೇ ವಿದೇಶಿಗರು ಹಂಪಿಗೆ ಬಂದರೆ ಬೆಳಿಗ್ಗೆ ಆರು ಗಂಟೆಯ ಮುಂಚೆ ಮಾತಂಗ ಪರ್ವತದ ಮೇಲೆ ಹಾಜರಿರುತ್ತಾರೆ. ಕೆಲವರು ತೆಳುವಾದ ಬಟ್ಟೆ ಧರಿಸಿದರೆ, ಕೆಲವೊಂದಿಷ್ಟು ಜನ ಮೈಗೆ ಎಣ್ಣೆ ಹಚ್ಚಿಕೊಂಡು, ಬಿಸಿಲಿಗೆ ಮೈಯೊಡ್ಡಿ ಸುರ್ಯೋದಯದ ಅಪರೂಪದ ಕ್ಷಣಗಳನ್ನು ತುಂಬಿಕೊಳ್ಳುತ್ತಾರೆ.

ಇನ್ನು ಹಂಪಿಯಲ್ಲಿ ದಿನವಿಡೀ ಸುತ್ತಾಡಿ ದಣಿಯುವವರು ಸಂಜೆ ಆರು ಗಂಟೆಗೂ ಪೂರ್ವದಲ್ಲಿ ಹೇಮಕೂಟಕ್ಕೆ ಬಂದು ಸೇರುತ್ತಾರೆ. ಬೆಟ್ಟದ ತುದಿಯಲ್ಲಿರುವ ಬೃಹತ್‌ ಕಲ್ಲು, ಬಂಡೆಗಳ ಅಂಚಿನಲ್ಲಿ ಕುಳಿತುಕೊಂಡು, ಮೋಜು ಮಾಡುತ್ತ, ಕೋತಿಗಳ ಹಿಂಡಿಗೆ ಬಿಸ್ಕತ್‌, ಚಾಕಲೇಟ್‌ ಎಸೆಯುತ್ತ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುತ್ತಾರೆ.

ಸ್ಥಳೀಯ ಮಾರ್ಗದರ್ಶಿಗಳ ಪ್ರಕಾರ, ‘ಅನ್ಯ ದೇಶದ ಜನ ಮೊದಲು ಗೋವಾಕ್ಕೆ ಬರುತ್ತಾರೆ. ಸುರ್ಯೋದಯ ಹಾಗೂ ಸುರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ಅಲ್ಲಿಂದ ಹಂಪಿಗೆ ಬಂದು ಹಿಂತಿರುಗುತ್ತಾರೆ. ಅಷ್ಟರಮಟ್ಟಿಗೆ ಮಾತಂಗ ಪರ್ವತ ಮತ್ತು ಹೇಮಕೂಟ ಹೆಸರಾಗಿವೆ.

ನೆಮ್ಮದಿ ಅರಸಿ ಬರುವರು

ಇತರೆ ಪ್ರವಾಸಿ ತಾಣಗಳಂತೆ ಹಂಪಿ ಹೆಚ್ಚು ವ್ಯವಹಾರಿಕವಾಗಿ ಬೆಳೆದಿಲ್ಲ. ಅಲ್ಲಲ್ಲಿ ಕೆಲವು ಕಡೆ ಹೋಟೆ್‌, ರೆಸಾರ್ಟ್‌ಗಳು ಬಿಟ್ಟರೆ ಬೇರೆ ರೀತಿಯ ಚಟುವಟಿಕೆಗಳು ಇಲ್ಲ. ಪ್ರಕೃತಿಯ ಮಡಿಲಲ್ಲಿ ಇರುವುದರಿಂದ ವಾಹನಗಳ ಸದ್ದು ಗದ್ದಲ ಇಲ್ಲ. ಕೆಲವು ದಿನ ನೆಮ್ಮದಿಯಿಂದ ಕಾಲ ಕಳೆಯುವುದಕ್ಕಾಗಿಯೇ ವಿದೇಶಿಯರು ಬರುತ್ತಾರೆ. ಸ್ಥಳೀಯ ಮಾರ್ಗದರ್ಶಿಗಳು ಹಾಗೂ ರೆಸಾರ್ಟ್‌ ಮಾಲೀಕರು ಇದನ್ನೇ ಹೇಳುತ್ತಾರೆ.

ಬೆಳಿಗ್ಗೆ ಹಾಗೂ ಇಳಿಸಂಜೆಯಲ್ಲಿ ನದಿ ತಟದಲ್ಲಿ ಹೆಚ್ಚಿನ ಕಾಲ ಕಳೆಯುತ್ತಾರೆ. ತಣ್ಣನೆಯ ನೀರಿನಲ್ಲೇ ಸ್ನಾನ ಮುಗಿಸುತ್ತಾರೆ. ತೆಪ್ಪದಲ್ಲಿ ಕುಳಿತು ಫೋಟೊಗ್ರಫಿ ಮಾಡುತ್ತಾರೆ. ನದಿಯಲ್ಲಿರುವ ಮೀನು, ಆಮೆಗಳಿಗೆ ಆಹಾರ ಹಾಕುತ್ತ ಹರಟುತ್ತಾರೆ.

ವಿದೇಶಿಯರ ಬಗ್ಗೆ ಮಾರ್ಗದರ್ಶಿಗಳು ಏನೆನ್ನುತ್ತಾರೆ?

‘ಹಂಪಿಗೆ ಇಟಲಿ, ಜರ್ಮನಿ, ರಷ್ಯಾ, ಇಂಗ್ಲೆಂಡ್‌, ಇಸ್ರೇಲ್‌ನಿಂದ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಸೆಪ್ಟೆಂಬರ್‌ನಿಂದ ಮಾರ್ಚ್‌ ವರೆಗೆ ಅತ್ಯಧಿಕ ಸಂಖ್ಯೆಯಲ್ಲಿ ಬಂದು ಹೋಗುತ್ತಾರೆ. ಹೆರಿಟೇಜ್‌, ಆರ್ಕಿಟೆಕ್ಟ್‌, ಗ್ರೀನರಿ, ಅನಿಮಲ್ಸ್‌ ಹೀಗೆ ಎಲ್ಲವೂ ಇರುವುದರಿಂದ ಇಲ್ಲಿಗೆ ಯಾರೇ ಬರಲಿ ಡಿಸಪಾಯಿಂಟ್‌ ಆಗುವುದಿಲ್ಲ’ ಎನ್ನುತ್ತಾರೆ ಹಿರಿಯ ಮಾರ್ಗದರ್ಶಿ ತಿಪ್ಪಣ್ಣಾ.

‘ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತಿನಂತೆ ಹಂಪಿ ಪರಂಪರೆಯ ಬಗ್ಗೆ ನಮ್ಮವರಿಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಇದನ್ನೊಂದು ಧಾರ್ಮಿಕ, ಯಾತ್ರಾ ಸ್ಥಳವಾಗಿ ನೋಡುತ್ತಾರೆ. ಆದರೆ, ವಿದೇಶಿಯರು ಹಾಗಲ್ಲ. ಅವರು ಇಲ್ಲಿನ ಇಂಚಿಂಚೂ ತಿಳಿದುಕೊಳ್ಳುತ್ತಾರೆ. ಅದರೊಟ್ಟಿಗೆ ಕಾಲ ಕಳೆದು, ಆನಂದಿಸುತ್ತಾರೆ’ ಎಂದರು.

ಹೋಳಿ ಹಬ್ಬ ಬಲು ಇಷ್ಟ: ವಿದೇಶಿಯರಿಗೆ ಹೋಳಿ ಹಬ್ಬ ಎಂದರೆ ಬಲು ಇಷ್ಟ. ಒಂದು ಸಲ ಬಂದವರು ಮತ್ತೆ ಮತ್ತೆ ಹೋಳಿ ಹಬ್ಬಕ್ಕೆ ಬಂದು ರಂಗಿನಾಟ ಆಡುತ್ತಾರೆ. ಯಾವುದೇ ರೀತಿಯ ಹಮ್ಮು, ಬಿಮ್ಮು ತೋರದೆ ಸ್ಥಳೀಯರೊಂದಿಗೆ ಮುಕ್ತವಾಗಿ ಬಣ್ಣದಾಟ ಆಡುತ್ತಾರೆ. ಸಂಗೀತಕ್ಕೆ ಹೆಜ್ಜೆ ಹಾಕುತ್ತಾರೆ. ಚಿಣ್ಣರನ್ನು ಭುಜದ ಮೇಲೆ ಕೂರಿಸಿಕೊಂಡು ಮೋಜು, ಮಸ್ತಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.