ADVERTISEMENT

ಹೇಗಿದ್ದೀಯಾ ಪತ್ರ ಮಿತ್ರ!

ಕೀರ್ತಿ ಟಿ.ಎಸ್‌.
Published 8 ಸೆಪ್ಟೆಂಬರ್ 2020, 19:30 IST
Last Updated 8 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸ ವರ್ಷ ಶುರುವಾಗಲು ಇನ್ನೂ ನಾಲ್ಕು ತಿಂಗಳುಗಳು ಬಾಕಿ ಇವೆ. ಆರು ತಿಂಗಳು ಕೋವಿಡ್‌–19ನಿಂದಾಗಿ ಹೊಸ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಲ್ಲಿಯೇ ಕಳೆಯಿತು. ಸದ್ಯಕ್ಕಂತೂ ಪರಿಸ್ಥಿತಿಯನ್ನು ನಿಭಾಯಿಸಲು, ಮಾನಸಿಕ ತುಮುಲ ಕಡಿಮೆ ಮಾಡಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಜನ ಕಂಡುಕೊಳ್ಳುತ್ತಿದ್ದಾರೆ. ಕೆಲವು ವಿಧಾನಗಳು ಹಿಂದೆ ಇದ್ದಂತವೇ, ಮತ್ತೆ ಮರಳಿ ನಮ್ಮನ್ನು ಸಂತೈಸಲು ಸನ್ನದ್ಧವಾಗಿವೆ. ಈಗ ಹೇಳ ಹೊರಟಿರುವುದೂ ಅದನ್ನೇ.

ನಿಮಗೆ ನೀವೇ ಸಾಂತ್ವನ ಹೇಳಿಕೊಳ್ಳಬೇಕಾದರೆ ಪೆನ್‌ ಹಾಗೂ ಪೇಪರ್‌ ತೆಗೆದುಕೊಂಡು ಕುಳಿತುಕೊಳ್ಳಿ. ಆರಾಮವಾಗಿ ಕೂತು ಸ್ನೇಹಿತರಿಗೋ ಅಥವಾ ಅಪರಿಚಿತರಿಗೋ ಪತ್ರ ಬರೆಯಲು ಶುರು ಮಾಡಿ.

ಹೌದು, ಕೋವಿಡ್‌–19ನಿಂದಾಗಿ ಸ್ನೇಹಿತರ ಜೊತೆಗಿನ ಸುತ್ತಾಟ, ಔತಣಕೂಟ, ಸಹೋದ್ಯೋಗಿಗಳ ಜೊತೆಗಿನ ಹರಟೆ, ನೆಂಟರ ಮನೆಗಿನ ಭೇಟಿ ಎಲ್ಲವನ್ನೂ ತ್ಯಜಿಸಿದ್ದೇವೆ. ಆದರೆ ಪತ್ರ ಮಿತ್ರರೊಂದಿಗಿನ ಸಂಪರ್ಕ ಒಂದು ರೀತಿಯ ಸಾಂತ್ವನ ನೀಡುತ್ತದೆ. ಅಮೆರಿಕದಲ್ಲಿ ಶುರುವಾದ ಈ ಚಿಕಿತ್ಸಾ ವಿಧಾನ ಈಗ ನಮ್ಮಲ್ಲೂ ಶುರುವಾಗಿದೆ.

ADVERTISEMENT

ಆಪ್ತರ ಜೊತೆ ಫೋನ್‌ನಲ್ಲಿ ಮಾತನಾಡುವುದು, ಮೆಸೇಜ್‌ ಕಳಿಸುವುದು, ವಿಡಿಯೊ ಸಂಭಾಷಣೆ ನಡೆಸುವುದರಿಂದ ಮುಖತಃ ಭೇಟಿ ಆಗುವುದಕ್ಕಿಂತ ಹೆಚ್ಚಿನ ಖುಷಿ ಸಿಗಬಹುದು. ಆದರೆ ಎಲ್ಲಕ್ಕಿಂತ ಪತ್ರದಲ್ಲಿ ನಮ್ಮ ಭಾವನೆಗಳನ್ನು ಭಟ್ಟಿ ಇಳಿಸುವುದಿದೆಯಲ್ಲ, ಅದು ಮನಸ್ಸಿಗೆ ಹೆಚ್ಚಿನ ಖುಷಿ ಕೊಡುತ್ತದೆ. ಇದಕ್ಕೆ ಕಾರಣವೂ ಇದೆ. ಪತ್ರ ಬರೆದಾಗ ನಿಮಗೆ ತಕ್ಷಣದ ಪ್ರತಿಕ್ರಿಯೆ ಸಿಗುವುದಿಲ್ಲ. ಹೀಗಾಗಿ ಕೆಲವು ದಿನಗಳ ಕಾಲ ನೀವು ನಿರಾಳವಾಗಿ ನಿಮ್ಮಷ್ಟಕ್ಕೇ ನೀವು ಸಂತಸ ಅನುಭವಿಸಬಹುದು. ಬೇಸರವಾದಾಗ ಈ ಪತ್ರದ ವಿನ್ಯಾಸವನ್ನೂ ನೀವೇ ಮಾಡಬಹುದು. ಸುತ್ತಲೂ ಅಂಚು ಕಟ್ಟಿ, ಬಣ್ಣ ತುಂಬಬಹುದು. ಯಾವಾಗಲೂ ಕಂಪ್ಯೂಟರ್‌ ಕೀಲಿ ಮಣೆ ಕುಟ್ಟುವ ಏಕತಾನತೆಯಿಂದ ಹೊರಬಂದು ಪೆನ್‌ ಬಳಸುವ ಮೋಜು ಅನುಭವಿಸಬಹುದು.

ಈಗ 40–50ರ ಆಸುಪಾಸಿನಲ್ಲಿರುವವರಲ್ಲಿ ಬಹುತೇಕರಿಗೆ ಈ ಪತ್ರ ಮಿತ್ರರ ಅನುಭವವಾಗಿರಬಹುದು. ಪ್ರಾಥಮಿಕ ಶಾಲೆಯಲ್ಲಿ ಪತ್ರ ಬರೆಯುವುದು ಹೇಗೆ ಎಂದು ಶಿಕ್ಷಕರು ಕಲಿಸುತ್ತಿದ್ದ ನೆನಪೂ ಇದ್ದಿರಬಹುದು. ಹಾಗೆಯೇ ಬೇರೆ ಬೇರೆ ರಾಜ್ಯಗಳ, ಕೆಲವೊಮ್ಮೆ ವಿದೇಶಗಳ ಪತ್ರ ಮಿತ್ರರನ್ನು ಸಂಪಾದಿಸುವುದು ಒಂದು ಹವ್ಯಾಸವೂ ಆಗಿತ್ತು.

ಪತ್ರ ಮಿತ್ರರ ಗ್ರೂಪ್‌

ಪತ್ರ ಮಿತ್ರರೆಂದರೆ ಆತ್ಮೀಯ ಸ್ನೇಹಿತರಿಗಿಂತ ಹೆಚ್ಚು. ಅವರ ದೇಶ, ಭಾಷೆ, ನಡವಳಿಕೆ, ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಆಸಕ್ತಿಕರ ವಿಷಯವಾಗಿತ್ತು. ಜನಪ್ರಿಯ ನಿಯತಕಾಲಿಕಗಳಲ್ಲಿ ಈ ಬಗ್ಗೆ ಕಾಲಮ್‌ ಕೂಡ ಇರುತ್ತಿತ್ತು. ಈಗಲೂ ವೆಬ್‌ಸೈಟ್‌ನಲ್ಲಿ ‘ಗೀಕ್‌ ಗರ್ಲ್ಸ್‌ ಪೆನ್‌ ಪಾಲ್ಸ್‌’ ಸೇರಿದಂತೆ ಫೇಸ್‌ಬುಕ್‌ನಲ್ಲಿ ಕೂಡ ಗ್ರೂಪ್‌ಗಳಿವೆ.

ಈ ಪತ್ರ ಮಿತ್ರರಿಂದಾಗಿ ತಲೆಮಾರುಗಳ ನಡುವಿನ ಅಂತರವೂ ಕಡಿಮೆಯಾಗಿದೆ. ಹಿರಿಯ ನಾಗರಿಕರು ಈ ಕೋವಿಡ್‌–19 ಕಾಲದಲ್ಲಿ ಒಂಟಿತನ ಕಡಿಮೆ ಮಾಡಿಕೊಳ್ಳಲು ಪತ್ರ ವ್ಯವಹಾರ ಶುರು ಮಾಡಿದ್ದಾರೆ.

ದುಗುಡ ಕಡಿಮೆ ಮಾಡಲು..

ಪತ್ರ ಬರವಣಿಗೆ ಎಂಬುದು ಒತ್ತಡ ಕಡಿಮೆ ಮಾಡುವುದಲ್ಲದೇ ಆತಂಕ ಮತ್ತು ಖಿನ್ನತೆಯನ್ನು ನಿರ್ವಹಿಸಬಹುದು. ನಮ್ಮ ಭಾವನೆಗಳನ್ನು ಹೊರಹಾಕುವುದರಿಂದ ಹಗುರವಾಗಬಹುದು. ನಾವು ಬರೆಯುತ್ತ ಹೋದಂತೆ ನಮ್ಮಲ್ಲಿ ಹೆಪ್ಪುಗಟ್ಟಿರುವ ದುಗುಡ ಆಚೆ ಬಂದು ನಿರಾಳರಾಗಬಹುದು. ನಮ್ಮಷ್ಟಕ್ಕೆ ನಾವೇ ಸಮಾಧಾನ ಹೊಂದಬಹುದು.

ವಾಟ್ಸ್‌ ಆ್ಯಪ್‌ ಸಂದೇಶವನ್ನು ನಾವು ಆರಾಮವಾಗಿ ಹಾಕಬಹುದು. ಹೀಗಿರುವಾಗ ಈ ಪತ್ರ ಬರವಣಿಗೆ ಯಾಕೆ ಎಂಬ ಪ್ರಶ್ನೆ ಮೂಡಬಹುದು. ಆದರೆ ಮೊಬೈಲ್‌ ಪರದೆಯನ್ನು ನೋಡುವಾಗ, ಸ್ಕ್ರಾಲ್‌ ಮಾಡುವಾಗ ನಿಮ್ಮ ಮೆದುಳಿಗೆ ಆಯಾಸವೆನಿಸುತ್ತದೆ. ಹಾಗೆಯೇ ಒಂದು ರೀತಿಯಲ್ಲಿ ತಾಳ್ಮೆ ಕಳೆದುಕೊಳ್ಳುತ್ತೀರಿ. ಆದರೆ ಪತ್ರ ಬರೆಯುವಾಗ ಇವೆಲ್ಲ ಇರುವುದಿಲ್ಲ, ಹಾಗೆಯೇ ಪತ್ರವೊಂದು ನಿಮಗೆ ಬಂದಾಗ ಆಗುವ ಖುಷಿಯನ್ನ ಬಣ್ಣಿಸಲು ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.