ಸಾವು ಸಂಭ್ರಮವೇ? ಕೇಳಿದರೆ ಎಂಥ ಕೆಟ್ಟ ವಿಚಾರ ಅನ್ನಬಹುದು. ತೀರ ವಯಸ್ಸಾದವರು, ಗುಣವಾಗದ ಕಾಯಿಲೆಯಿಂದ ನರಳುತ್ತಿರುವವರು ಮರಣ ಹೊಂದಿದಾಗ ಸಾವಿನ ಸಂಭ್ರಮ ಕಾಣುವುದಿಲ್ಲ. ಅಲ್ಲಿ ಕೇವಲ ಅಗಲಿಕೆಯ ನೋವು. ಆದರೆ, ದಿನವೂ 500ಕ್ಕಿಂತಲೂ ಹೆಚ್ಚು ಶವಗಳನ್ನು ಅತ್ಯಂತ ನಿರ್ಭಾವುಕರಾಗಿ, ಒಲೆ ಉರಿಸುವಷ್ಟೇ ಸಹಜವಾಗಿ ತಮ್ಮ ನಿತ್ಯದ ಕಾರ್ಯಕ್ರಮವನ್ನು ಮಾಡುತ್ತಲೆ ಶವ ದಹನದಲ್ಲಿ ತೊಡಗಿರುವವರಿಗೆ ಯಾವ ಭಾವನೆಗಳೂ ಕಾಡುವುದಿಲ್ಲ. ಅತ್ತ ಶವದಹನ; ಇತ್ತ ಆಟ, ಮನರಂಜನೆಯ ಕಾರ್ಯಕ್ರಮ. ಇವು ಸಾವನ್ನು ಸಹಜಕ್ರಿಯೆಗೆ ತಂದು ಬಿಡುತ್ತವೆ.
ವಾರಾಣಸಿಯ ಗಂಗಾನದಿ ತಟದಲ್ಲಿರುವ ಮಣಿಕರ್ಣಿಕಾ ಘಾಟ್ ಜಗತ್ತಿನ ಅತಿಹೆಚ್ಚು ಶವಸಂಸ್ಕಾರಗಳು ನಡೆಯುವ ಸ್ಥಳ. ಈ ಪ್ರದೇಶದ ಸುಮಾರು ಸ್ಥಳಗಳಲ್ಲಿ ಶವದಹನ ನಡೆಯುತ್ತದೆ. ಅಲ್ಲಿಯ ಜಲಸ್ನಾನ ಘಾಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶವದಹನ ನಡೆಯುತ್ತದೆ. ಮಣಿಕರ್ಣಿಕಾ ಘಾಟ್ ಹಿಂದೂಗಳಿಗೆ ಅತ್ಯಂತ ಪವಿತ್ರ ಸ್ಥಳ. ಇಲ್ಲಿ ಸುಡುವ ಅಗ್ನಿ ಮೋಕ್ಷಕ್ಕೆ ಮಾರ್ಗವಾಗುತ್ತದೆ ಎಂಬ ನಂಬಿಕೆ ಇದೆ.
ಪ್ರತಿದಿನ 500ಕ್ಕೂ ಹೆಚ್ಚು ಶವಗಳನ್ನು ಇಲ್ಲಿ ಸುಡುತ್ತಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಒಂದು ಪ್ರತ್ಯೇಕ ಜನಾಂಗವೇ ಇದೆ. ಅವರಿಗೆ ‘ಧೂಡ’ ಎಂದು ಕರೆಯುತ್ತಾರೆ. ಇವರಿಗೆ ಒಬ್ಬ ನಾಯಕ. ಅವನೇ ಮಣಿಕರ್ಣಿಕಾ ಘಾಟ್‌ನಲ್ಲಿ ನಡೆಯುವ ಶವಸಂಸ್ಕಾರಗಳಿಗೆ ಮಾರ್ಗದರ್ಶನ ನೀಡುತ್ತಾನೆ. ಅವನ ಕೈಕೆಳಗೆ ನೂರಾರು ‘ಧೂಡ’ ಜನರು ಶವಸಂಸ್ಕಾರಕ್ಕೆ ಬೇಕಾಗುವ ಹೂವು, ಕಟ್ಟಿಗೆ, ಪೂಜಾ ಸಾಮಗ್ರಿಗಳನ್ನು ಪೂರೈಸಿ ಅವರೇ ದಹನ ಕ್ರಿಯೆ ಮಾಡುತ್ತಾರೆ. ಒಂದು ಶವ ದಹಿಸಲು ಸುಮಾರು ಮೂರು ಕ್ವಿಂಟಲ್‌ನಷ್ಟು ಕಟ್ಟಿಗೆ ಬೇಕಾಗುತ್ತದೆ. ಶವ ದಹಿಸುವ ಕ್ರಿಯೆಗೆ ₹ 6 ಸಾವಿರದಿಂದ ₹ 15 ಸಾವಿರ ನೀಡಬೇಕಾಗುತ್ತದೆ. ಘಾಟ್ ಹತ್ತಿರ ದೊಡ್ಡ ದೊಡ್ಡ ಕಟ್ಟಿಗೆ ಅಡ್ಡೆಗಳನ್ನು ಕಾಣಬಹುದು. ಈ ಅಡ್ಡೆಗಳಿಗೆ ದಿನಾ ಒಂದು ಸಾವಿರ ಟನ್‌ನಷ್ಟು ಕಟ್ಟಿಗೆಯನ್ನು ನಾವೆಗಳ ಮೂಲಕ ಪೂರೈಸಲಾಗುತ್ತದೆ.
ಹಗಲು–ರಾತ್ರಿಯನ್ನದೇ ಶವಗಳನ್ನು ದಹಿಸುವ ಈ ಸ್ಥಳವನ್ನು ಅತ್ಯಂತ ಭಕ್ತಿಯಿಂದ ನೋಡಲಾಗುತ್ತದೆ. ಇಲ್ಲಿ ಶವಸಂಸ್ಕಾರ ಮಾಡುವುದರಿಂದ ಸತ್ತವನಿಗೆ ಮೋಕ್ಷ ಪ್ರಾಪ್ತಿ ಆಗುತ್ತದೆಂಬ ಬಲವಾದ ನಂಬಿಕೆ ಇದೆ.
ಇಡೀ ಮಣಿಕರ್ಣಿಕಾ ಪ್ರದೇಶ ಧೂಪದ, ಕಟ್ಟಿಗೆ ಸುಡುವ ಹೊಗೆ, ಮಂತ್ರೋಚ್ಛಾರಣೆ ಮುಂತಾದವುಗಳಿಂದ ಮೊದಲನೆಯ ಸಲ ನೋಡುವವರಿಗಂತೂ ಭಯ ಹುಟ್ಟಿಸುತ್ತದೆ. ಕಾವಿಬಟ್ಟೆಯಲ್ಲಿ ಶವವನ್ನು ಸುತ್ತಿ ಬಿದರಿನ ಚಟ್ಟದ ಮೇಲಿಟ್ಟುಕೊಂಡು ತಂದು ಒಂದೆಡೆ ಇಟ್ಟ ಮೇಲೆ ಅದಕ್ಕೆ ಬೇಕಾಗುವ ಕಟ್ಟಿಗೆ, ತುಪ್ಪ, ಹೂವು, ಇತರೇ ವಸ್ತುಗಳಿಗೆ ಆಗುವ ಹಣದ ಬಗ್ಗೆ ಚರ್ಚೆಯಾಗುತ್ತದೆ. ಈ ಸಂದರ್ಭದಲ್ಲಿ ಹಣವಂತರು ಆಕಳುಗಳನ್ನು ದಾನ ಮಾಡುತ್ತಾರೆ. ಇಲ್ಲಿ ಗಂಧದ ಕಟ್ಟಿಗೆಯ ವ್ಯವಸ್ಥೆಯೂ ಇದೆ. ಆದರೆ, ಇದು ಬಹಳ ದುಬಾರಿ.
ಮಳೆಗಾಲ, ಚಳಿಗಾಲ, ಬೇಸಿಗೆ ಎನ್ನುವ ವ್ಯತ್ಯಾಸವಿಲ್ಲದೆ ಶವಗಳು ಒಂದರ ನಂತರ ಒಂದು ಬರುತ್ತಲೇ ಇರುತ್ತವೆ. ಒಂದು ಶವ ದಹಿಸಲು 4ರಿಂದ 5 ತಾಸು ಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತೊಡಗಿರುವ ಧೂಡ ಜನಾಂಗದವರು ಸುಮಾರು ಐದು ಸಾವಿರದಷ್ಟಿದ್ದು, ಅವರಿಗೆ ಒಂದು ಶವ ದಹಿಸಲು ತಲಾ ₹ 150 ಸಿಗುತ್ತದೆ. ದಿನವೂ ಶವ ಸುಡುವ ವಾಸನೆ, ದಟ್ಟಹೊಗೆ ಸೇವಿಸಿ ಸುಡುವ ಶವಗಳನ್ನು ನೋಡಿ ನೋಡಿ ಈ ಜನರ ಭಾವನೆಗಳೆಲ್ಲವೂ ಶೂನ್ಯವಾಗಿರುವಂತೆ ಕಾಣುತ್ತದೆ. ಈ ಜನರಲ್ಲಿ ಬಹಳಷ್ಟು ಜನ ಮಾದಕ ದ್ರವ್ಯಗಳ ವ್ಯಸನಿಗಳಾಗಿರುವುದು ದುರ್ದೈವ.
ಮಣಿಕರ್ಣಿಕಾ ಘಾಟ್‌ನಲ್ಲಿ ನಿತ್ಯ ನಡೆಯುವ ಮೃತ್ಯುವಿನ ಸಮಾರಾಧನೆಯು ಮರಣದ ನಂತರ ವ್ಯಾಪಿಸುವ ಪ್ರಶಾಂತ ಸ್ವರೂಪದ ಅನುಭವ ನೀಡುತ್ತದೆ. ಇಲ್ಲಿ ಅನುಭವಿಸುವ ಸ್ಮಶಾನ ವೈರಾಗ್ಯ ಬಹುಕಾಲ ಉಳಿಯುತ್ತದೆ. ಈ ಘಾಟ್‌ನ ಪ್ರದೇಶದ ತುಂಬೆಲ್ಲ ನಡೆಯುವ ಮಕ್ಕಳ ಗಾಳಿಪಟದ ಆಟ, ಯುವಜನರ ಆಟ, ಮನರಂಜನೆಯ ಹಾಡು– ಕುಣಿತದ ದೃಶ್ಯಗಳು ಸಾವಿನ ವಿಷಾದ ಭಾವನೆ ದೂರವಾಗಿರಿಸಲು ಸಹಾಯಕ ಎನ್ನಬಹುದು.
ಪೌರಾಣಿಕ ಹಿನ್ನೆಲೆ...
ವಾರಾಣಸಿಯಲ್ಲಿರುವ ಮಣಿಕರ್ಣಿಕಾ ಘಾಟ್ ಅತ್ಯಂತ ಪುರಾತನವಾದುದು. ಅಲ್ಲದೆ ಅನೇಕ ಪುರಾಣಗಳಲ್ಲಿ ಇದರ ಹೆಸರು ಬರುತ್ತದೆ. ದಕ್ಷನು ಯಜ್ಞ ಏರ್ಪಡಿಸಿ ಎಲ್ಲರನ್ನೂ ಅಂದರೆ ಎಲ್ಲ ದೇವತೆಗಳನ್ನೂ ಆಹ್ವಾನಿಸಿ ತನ್ನ ಅಳಿಯ ಮಹಾದೇವನಿಗೆ ಮಾತ್ರ ಆಮಂತ್ರಣ ಕೊಟ್ಟಿರುವುದಿಲ್ಲ. ಆಗ ಪಾರ್ವತಿಯು ತಂದೆ ಮರೆತಿರಬಹುದು ಎಂದು ತಂದೆ ಮಾಡುತ್ತಿದ್ದ ಯಜ್ಞದ ಸ್ಥಳಕ್ಕೆ ಬರುತ್ತಾಳೆ. ಆಗ ದಕ್ಷ ಶಿವನಿಗೆ ಅವಮಾನ ಮಾಡುವಂತೆ ಅವಹೇಳನದ ಮಾತುಗಳನ್ನಾಡುತ್ತಾನೆ.
ಪತಿಯ ನಿಂದನೆಯನ್ನು ಸಹಿಸದೆ ಪಾರ್ವತಿ ದಕ್ಷ ನಡೆಸುತ್ತಿದ್ದ ಯಜ್ಞಕುಂಡದಲ್ಲಿಯೇ ಬಿದ್ದು ಮರಣ ಹೊಂದುತ್ತಾಳೆ. ಆಗ ಶಿವ, ಪಾರ್ವತಿಯ ದೇಹವನ್ನು ಹೊತ್ತು ಹಿಮಾಲಯದತ್ತ ಹೊರಡುತ್ತಾನೆ. ಆಗ ವಿಷ್ಣು ಪಾರ್ವತಿಯ ದೇಹವನ್ನು ತನ್ನ ಸುದರ್ಶನ ಚಕ್ರದಿಂದ ಐದು ಭಾಗಗಳನ್ನಾಗಿ ಮಾಡುತ್ತಾನೆ. ಅವು ಭೂಮಿಯ ಐದು ಸ್ಥಳಗಳಲ್ಲಿ ಬೀಳುತ್ತವೆ. ಅವೆಲ್ಲ ಐದೂ ಶಕ್ತಿ ಸ್ಥಳಗಳಾಗುತ್ತವೆ.
ಅವುಗಳನ್ನು ಏಕನ್ಯ ಶಕ್ತಿಪೀಠ ಎಂದು ಕರೆಯುತ್ತಾರೆ. ಅವುಗಳಲ್ಲಿ ಒಂದು ಮಣಿಕರ್ಣಿಕಾ ಘಾಟ್. ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ ಪಾರ್ವತಿ ಇಲ್ಲಿನ ಘಾಟ್‌ದಲ್ಲಿ ಸ್ನಾನ ಮಾಡುತ್ತಿದ್ದಾಗ ಅವಳ ಕಿವಿಯ ಓಲೆ ಬಿದ್ದು ಹೋಗುತ್ತದೆ. ಆಗ ಶಿವನು ಅಲ್ಲಿಯ ಜನರಿಗೆ ಆ ಆಭರಣ ಹುಡುಕಲು ಹೇಳುತ್ತಾನೆ. ಅದು ಸಿಗದಿದ್ದಾಗ ಶಿವನು ಅವರಿಗೆ ‘ನೀವು ಶವಗಳನ್ನು ಸುಡುವವರಾಗಿ’ ಎಂದು ಶಾಪ ನೀಡುತ್ತಾನೆ. ಹೀಗಾಗಿ ಇದು ಶವ ಸುಡುವ ಸ್ಥಳವಾಗುತ್ತದೆ.
ಶಿಲಾಶಾಸನಗಳಲ್ಲಿ ಸಹ ಈ ಸ್ಥಳದ ಉಲ್ಲೇಖವಿದೆ. ಐದನೇ ಶತಮಾನದ ಗುಪ್ತರ ಕಾಲದ ಶಿಲಾಶಾಸನಗಳಲ್ಲಿ ಮಣಿಕರ್ಣಿಕಾದ ಬಗ್ಗೆ ಉಲ್ಲೇಖವಿದೆ. ಝಾನ್ಸಿಯ ರಾಣಿ ಲಕ್ಷ್ಮಿಬಾಯಿ ಈ ಘಾಟ್ ಕಟ್ಟಿಸಿದಳು ಎಂದು ಅವಳ ಮೂಲ ಹೆಸರಾದ ‘ಮಣಿಕರ್ಣಿಕಾ’ ಎಂಬ ಹೆಸರು ಈ ಘಾಟಿಗೆ ಬಂತು ಎನ್ನುತ್ತದೆ ಇತಿಹಾಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.