ADVERTISEMENT

ಗಡಿಯಾರದ ಬ್ರ್ಯಾಂಡ್‌: ‘ಹಿಂದೂಸ್ತಾನ’ವು ಎಂದೂ ಮರೆಯದ ಕಾಲ

ಗಿರೀಶ ದೊಡ್ಡಮನಿ
Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
<div class="paragraphs"><p>ಬೆಂಗಳೂರಿನಲ್ಲಿರುವ ಎಚ್‌ಎಂಟಿ ಪರಂಪರಾ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದಲ್ಲಿರುವ ಕೈಗಡಿಯಾರಗಳ ಸಂಗ್ರಹಗಳನ್ನು ವೀಕ್ಷಿಸುತ್ತಿರುವ ಆಸಕ್ತರು </p></div>

ಬೆಂಗಳೂರಿನಲ್ಲಿರುವ ಎಚ್‌ಎಂಟಿ ಪರಂಪರಾ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದಲ್ಲಿರುವ ಕೈಗಡಿಯಾರಗಳ ಸಂಗ್ರಹಗಳನ್ನು ವೀಕ್ಷಿಸುತ್ತಿರುವ ಆಸಕ್ತರು

   

–ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್.

ಭಾರತದಲ್ಲಿ ಗಡಿಯಾರ ತಯಾರಿಕೆಯಲ್ಲಿ ಎಚ್‌ಎಂಟಿ ಹಲವು ಮೊದಲುಗಳ ದಾಖಲೆ ಬರೆದಿದೆ. ಕೈಗಡಿಯಾರ ಎಂದರೆ ಅದು ಎಚ್‌ಎಂಟಿ ಎನ್ನುವಷ್ಟರ ಮಟ್ಟಿಗೆ ಬ್ರ್ಯಾಂಡ್‌ ಆಗಿದ್ದು ಸಾಮಾನ್ಯ ಸಂಗತಿಯಲ್ಲ. ಈಗ ಮಾರುಕಟ್ಟೆಯನ್ನು ಕಳೆದುಕೊಂಡಿದ್ದರೂ ಜನರ ಹೃದಯದಲ್ಲಿ ಟಿಕ್‌...ಟಿಕ್‌... ಸದ್ದು ಕೇಳಿಸುತ್ತಲೇ ಇದೆ.

‘ದೇಶದ ಸಮಯಪಾಲಕ ..’ ಮೂರು ದಶಕಗಳ ಹಿಂದೆ ಯಾವುದೇ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಈ ಎರಡು ಪದ ಕೇಳಿದರೆ ಸಾಕು ಶಾಲೆಯ ಮಕ್ಕಳೂ ಕಣ್ಣಗಲಿಸಿ, ಕಿರುನಗೆ ಮಿನುಗಿಸಿ ‘ಎಚ್‌ಎಂಟಿ’ ಎಂದು ಜೋರಾಗಿ ಹೇಳುತ್ತಿದ್ದರು. 

ADVERTISEMENT

ಮಕ್ಕಳಷ್ಟೇ ಅಲ್ಲ; ಹಿರಿಯರು, ವೃತ್ತಿಪರರು, ಅಧಿಕಾರಿಗಳು, ಕ್ರೀಡಾಪಟುಗಳು, ರೈತರು, ಕಾರ್ಮಿಕರು, ಮಹಿಳೆಯರು, ಹದಿಹರೆಯದವರು ಮತ್ತು ಎಲ್ಲ ವರ್ಗದವರ ನಾಡಿಮಿಡಿತವೇ ಆಗಿದ್ದವು ಎಚ್‌ಎಂಟಿ ಕೈಗಡಿಯಾರಗಳು. ಅಪ್ಪಟ ಚಿನ್ನ, ಹಿತ್ತಾಳೆ ಮತ್ತಿತರ ಲೋಹಗಳು ಮತ್ತು ಪ್ಲಾಸ್ಟಿಕ್ ಸಾಮಗ್ರಿಯಿಂದ ಬಗೆಬಗೆಯ ಕೈಗಡಿಯಾರಗಳನ್ನು ಉತ್ಪಾದಿಸಿದ ಹೆಗ್ಗಳಿಕೆ ಹಿಂದೂಸ್ತಾನ್ ಮಷಿನ್ ಟೂಲ್ಸ್ (ಎಚ್‌ಎಂಟಿ) ಕಂಪನಿಯದ್ದು. ಅಷ್ಟೇ ಅಲ್ಲ; ಭಾರತ ದೇಶದ ಜನರಲ್ಲಿ ಕೈಗಡಿಯಾರದ ‘ಕ್ರೇಜ್‌’ ಹುಟ್ಟುಹಾಕಿದ್ದು ಇದೇ ಬ್ರ್ಯಾಂಡ್. ಇದು ಅಪ್ಪಟ ದೇಶಿ ಮತ್ತು ಬೆಂಗಳೂರಿನ ಕೊಡುಗೆ ಎನ್ನುವುದೇ ಹೆಮ್ಮೆ.

ಆದರೆ ಜಾಗತೀಕರಣದ ನಂತರ ಸೃಷ್ಟಿಯಾದ ಪೈಪೋಟಿ ಚಂಡಮಾರುತದಲ್ಲಿ ಮೊದಲಿನ ಮಾರುಕಟ್ಟೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗದ ಎಚ್‌ಎಂಟಿ ಜನಪ್ರಿಯತೆ ಮಾತ್ರ  ಉಳಿಸಿಕೊಂಡಿದೆ. ಡಿಜಿಟಲ್ ಗಡಿಯಾರ, ಮೊಬೈಲ್‌ಗಳಲ್ಲಿ ಸಮಯ ತಿಳಿಯುವ ಅನುಕೂಲ ಇರುವ ಕಾಲಘಟ್ಟದಲ್ಲಿ ಕೈಗಡಿಯಾರ ಕೇವಲ ಅಲಂಕಾರಿಕ ಆಭರಣವಾಗಿ ಉಳಿದಿರುವುದು ಸುಳ್ಳಲ್ಲ. ಆದರೆ ವಾಚ್‌ ಸಂಗ್ರಹ ಮಾಡುವ ಹವ್ಯಾಸಿಗಳಿಗೆ ಎಚ್‌ಎಂಟಿ ವಾಚ್‌ ಎಂದರೆ ಪಂಚಪ್ರಾಣ. ಅದಕ್ಕಾಗಿಯೇ ಆನ್‌ಲೈನ್ ಹಾಗೂ ಬೆಂಗಳೂರಿನಲ್ಲಿರುವ ನಾಲ್ಕು ಮಾರಾಟ ಮಳಿಗೆಗಳ ಮೂಲಕ ಎಚ್‌ಎಂಟಿ ವಾಚ್‌ ಮಾರಾಟ ನಡೆಯುತ್ತಿದೆ. 

ಈ ಕೈಗಡಿಯಾರಗಳ ಹುಟ್ಟು, ಬೆಳವಣಿಗೆ ಮತ್ತು ಸ್ವಾತಂತ್ರ್ಯನಂತರದ ಭಾರತದ ನಾಡಿಮಿಡಿತವಾದ ಘಟ್ಟಗಳನ್ನು ಅರಿಯಬೇಕೆಂದರೆ ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ‍ಪರಂಪರೆ ಮತ್ತು ವಸ್ತುಸಂಗ್ರಹಾಲಯದೊಳಗೆ ಪ್ರವೇಶಿಸಬೇಕು. ಇಲ್ಲಿರುವ ಕೈಗಡಿಯಾರದ ವಿಸ್ಮಯ ಲೋಕ ಬೆರಗಾಗಿಸುತ್ತದೆ. ಮೆಕ್ಯಾನಿಕಲ್, ಅನಲಾಗ್ ಮತ್ತು ಆಟೊಮ್ಯಾಟಿಕ್ ಕೈಗಡಿಯಾರಗಳ ಜಗತ್ತು ಮೋಡಿ ಮಾಡುತ್ತದೆ. ಇಲ್ಲಿರುವ ಉಸ್ತುವಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂತಹಂತವಾಗಿ ವಿವರಣೆ ನೀಡುತ್ತಾರೆ. ಸಾಕ್ಷ್ಯಚಿತ್ರದ ಮೂಲಕ ಕಂಪನಿ ಕುರಿತ ಸವಿಸ್ತಾರ ಪರಿಚಯ ಮಾಡಿಸುತ್ತಾರೆ.

ಈ ಕಟ್ಟಡದ ಪ್ರವೇಶದ್ವಾರವನ್ನು ದಾಟಿ ಬಲಕ್ಕೆ ತಿರುಗಿದರೆ ದೊಡ್ಡ ಪಡಸಾಲೆಯಲ್ಲಿ ಎಚ್‌ಎಂಟಿ ಉದ್ಯಮವು ಬೆಳೆದು ಬಂದ ಹಂತಗಳನ್ನು ಚಿತ್ರ, ಮಾಹಿತಿಯ ರೂಪದಲ್ಲಿ ತಿಳಿಯಬಹುದು. 1952ರಲ್ಲಿ ಎಚ್‌ಎಂಟಿ ಯಂತ್ರೋಪಕರಣಗಳ ಉತ್ಪಾದನೆ ಕಾರ್ಖಾನೆ ಆರಂಭವಾಯಿತು. ಭಾರತವು ಕೈಗಾರಿಕೆಗಳ ಮೂಲಕ ಅಭಿವೃದ್ಧಿಯಾಗಬೇಕೆಂಬ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕನಸಿನ ಕೂಸಾಗಿ ಈ ಉದ್ಯಮ ಆರಂಭವಾಯಿತು. ಪ್ರತಿವರ್ಷವೂ ಒಂದು ಹೊಸ ಘಟಕ ಅಥವಾ ಉದ್ಯಮ ಆರಂಭಿಸುವ ಯೋಜನೆ ಇತ್ತು. ದೇಶದ ಬೇರೆ ಬೇರೆ ಊರುಗಳಲ್ಲಿ ಮಷಿನ್ ಟೂಲ್ಸ್‌, ಮೋಟಾರ್ ಡಿವಿಷನ್ ಟ್ರ್ಯಾಕ್ಟರ್ ಉತ್ಪಾದನಾ ಘಟಕಗಳನ್ನು ಆರಂಭಿಸಲಾಯಿತು. ಇದೇ ಯೋಜನೆಯಲ್ಲಿ 1962ರಲ್ಲಿ ಬೆಂಗಳೂರಿನಲ್ಲಿ ಮೊಟ್ಟಮೊದಲ ವಾಚ್‌ ತಯಾರಿಕಾ ಘಟಕ ಆರಂಭವಾಯಿತು. ಜಪಾನ್‌ನ ಸಿಟಿಜನ್ ಕಂಪನಿಯ ಸಹಯೋಗದೊಂದಿಗೆ ವಾಚ್ ಉತ್ಪಾದನೆ ಆರಂಭಿಸಿತು.

ಸಂಗ್ರಹಾಲಯದಲ್ಲಿರುವ ಚಿನ್ನದ ಕೈಗಡಿಯಾರ

ಈ ಮಾಹಿತಿಯನ್ನು ಮೆಲುಕು ಹಾಕುತ್ತ ಇನ್ನೊಂದು ಕೋಣೆಗೆ ಪ್ರವೇಶಿಸುತ್ತಿದ್ದಂತೆ ಕಂಪನಿಯಿಂದ ಮಾರುಕಟ್ಟೆಗೆ ಬಿಡುಗಡೆಯಾದ ಮೊಟ್ಟಮೊದಲ ಜನತಾ ವಾಚ್‌ನ ದೊಡ್ಡ ಪ್ರತಿಕೃತಿ ಗಮನ ಸೆಳೆಯುತ್ತದೆ. ಅದರ ಅಕ್ಕಪಕ್ಕದ ಶೋಕೇಸ್‌ಗಳಲ್ಲಿ ಇದುವರೆಗೆ ಉತ್ಪಾದನೆಯಾದ ಐಕಾನ್ ಕೈಗಡಿಯಾರಗಳ ಸಂಗ್ರಹ ಇದೆ. ಈ ವಾಚ್‌ಗಳಲ್ಲಿ ಬಳಕೆಯಾಗುತ್ತಿದ್ದ ಸೂಕ್ಷ್ಮವಾದ ಯಂತ್ರೋಪಕರಣಗಳ ವಿನ್ಯಾಸ, ಜೋಡಣೆಗಳನ್ನು ನೋಡಲು ಸೂಕ್ಷ್ಮದರ್ಶಕದ ವ್ಯವಸ್ಥೆಯೂ ಇದೆ. ಪುಟ್ಟಪುಟ್ಟ ಉಪಕರಣಗಳನ್ನು ಜೋಡಣೆ ಮಾಡುತ್ತಿದ್ದ ಆ ಕಾಲಘಟ್ಟದ ಕುಶಲಕರ್ಮಿಗಳ ನೈಪುಣ್ಯ ಬೆರಗು ಮೂಡಿಸುತ್ತದೆ. ಅಲ್ಲಿಯೇ ಪಕ್ಕದ ಗೋಡೆಯ ಮೇಲಿನ ಕಪ್ಪು ಬಿಳುಪು ಚಿತ್ರವೊಂದು ಗಮನ ಸೆಳೆಯುತ್ತದೆ. ವಾಚ್ ಅಂಗಡಿಯ ಮುಂದೆ ಎಚ್‌ಎಂಟಿ ಕೈಗಡಿಯಾರ ಖರೀದಿಸಲು ಸಾಲುಗಟ್ಟಿದ ಜನರದ್ದು! 

‘ಆ ಕಾಲದಲ್ಲಿ ಎಚ್‌ಎಂಟಿ ವಾಚ್ ಎನ್ನುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ಮದುವೆ, ಜನ್ಮದಿನ ಇತ್ಯಾದಿ ಸಂದರ್ಭಗಳಲ್ಲಿ ಈ ವಾಚ್ ನೀಡುವುದೇ ಒಂದು ಗೌರವದ ವಿಷಯವಾಗಿತ್ತು. ಮಕ್ಕಳು ಉತ್ತಮ ಅಂಕ ಪಡೆದರೆ ಎಚ್‌ಎಂಟಿ ವಾಚ್ ಕೊಡಿಸುವುದಾಗಿ ಹೇಳುವ ತಂದೆ, ತಾಯಿಗಳಿದ್ದರು. ಹೆಣ್ಣು ಹೆತ್ತವರು ಗಂಡಿಗೆ ನೀಡುವ ವರೋಪಚಾರದಲ್ಲಿ ಈ ವಾಚ್ ಇರಲೇಬೇಕಿತ್ತು. ಆದರೆ ಆಗಲೂ, ಈಗಲೂ ಈ ಕೈಗಡಿಯಾರಗಳ ದರಗಳು ಮಧ್ಯಮ ವರ್ಗಕ್ಕೆ ಎಂದೂ ಹೊರೆಯಾಗಲಿಲ್ಲ. ಶ್ರೀಮಂತರಿಗೆ ಬೇಕಾದ ಮಾಡೆಲ್‌ಗಳು ಇವೆ. ಒಂದು ಗ್ರಾಂ ಚಿನ್ನದ ಪುಟ್ಟ ಬಿಸ್ಕೆಟ್ ಇರುವ ಮಾಡೆಲ್ ಬಹಳ ಜನಪ್ರಿಯವಾಗಿತ್ತು. ಆಗಿನ ಕಾಲದಲ್ಲಿಯೇ ಏಳೆಂಟು ಸಾವಿರ ಬೆಲೆ ಬಾಳುತ್ತಿತ್ತು. ಅದರೊಳಗಿನ ಕುಸುರಿ ಕೆಲಸ ಅತ್ಯಂತ ಆಕರ್ಷಕವಾಗಿತ್ತು’ ಎಂದು ವಸ್ತುಸಂಗ್ರಹಾಲಯದ ಅಧಿಕಾರಿಗಳು ವಿವರಿಸುತ್ತಾರೆ.

ಇದನ್ನು ದಾಟಿ ದೊಡ್ಡ ಕೋಣೆಗೆ ಕಾಲಿಟ್ಟರೆ ಕೈಗಡಿಯಾರಗಳ ಲೋಕ ತೆರೆದುಕೊಳ್ಳುತ್ತದೆ. ಮೊಟ್ಟಮೊದಲ ಜನತಾ ವಾಚ್, ಅತ್ಯಂತ ಬೇಡಿಕೆಯ ಪೈಲೆಟ್ ವಾಚ್, ಹೆಣ್ಣುಮಕ್ಕಳಿಗಾಗಿ ಬಗೆಬಗೆಯ ವಿನ್ಯಾಸದ ಆಕರ್ಷಕ ಕೈಗಡಿಯಾರಗಳು, ಆಯಾ ಕಾಲಘಟ್ಟದ ಯುವಸಮುದಾಯಕ್ಕೆ ಬೇಕಾದಂತಹ ವಿನ್ಯಾಸದ ಕ್ವಾರ್ಟ್ಜ್, ಆಟೋಮ್ಯಾಟಿಕ್ ಗಡಿಯಾರಗಳನ್ನು ಸಿದ್ಧಗೊಳಿಸಲಾಗಿತ್ತು. ಕ್ರೀಡಾಕೂಟಗಳಲ್ಲಿ ಬಳಕೆಯಾಗುವ ಸ್ಟಾಪ್‌ ವಾಚ್‌ಗಳೂ ಇಲ್ಲಿ ಉತ್ಪಾದನೆಯಾಗಿವೆ.

ಅಂಧರಿಗಾಗಿ ಬ್ರೈಲ್‌ ಲಿಪಿ ಇರುವ ಕೈಗಡಿಯಾರಗಳನ್ನು ಉತ್ಪಾದಿಸಿದ್ದು ಈ ಸಂಸ್ಥೆಯ ಹೆಗ್ಗಳಿಕೆ. ಈ ವಾಚ್‌ಗಳನ್ನು ಹೇಗೆ ಬಳಸುವುದು ಎಂದು ಬ್ರೈಲ್‌ ಲಿಪಿಯಲ್ಲೇ ಕಿರುಹೊತ್ತಿಗೆಯನ್ನೂ ಸಂಸ್ಥೆ ತಯಾರಿಸಿದೆ.

‘ನಮ್ಮ ಸಂಸ್ಥೆಯು ಸಾಂದರ್ಭಿಕ ಮಾದರಿಗಳನ್ನೂ ಸಿದ್ಧಗೊಳಿಸುತ್ತದೆ. ಭಾರತ ಸ್ವಾತಂತ್ರ್ಯ ಗಳಿಸಿ ಅಮೃತ ಮಹೋತ್ಸವಕ್ಕಾಗಿ ಒಂದು ಮಾಡೆಲ್ ಬಿಡುಗಡೆ ಮಾಡಲಾಗಿತ್ತು. ಇದಲ್ಲದೇ ಬೇರೆ ಬೇರೆ ಸಂಘ ಸಂಸ್ಥೆಗಳು ತಮ್ಮ ಸದಸ್ಯರು ಹಾಗೂ ಉದ್ಯೋಗಿಗಳಿಗೆ ನೀಡಲು ವಿಶೇಷ ವಿನ್ಯಾಸದ ಕೈಗಡಿಯಾರಗಳನ್ನು ನೀಡುತ್ತವೆ. ಅವುಗಳನ್ನು ನಾವು ಸಿದ್ಧಗೊಳಿಸುತ್ತೇವೆ. ಈ ಹಿಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥ ಗಡಿಯಾರ ಮಾಡಲಾಗಿತ್ತು. ಈಗಲೂ ಕೆಲವು ಸಂಘಟನೆಗಳು ಈ ಮಾದರಿಗೆ ಬೇಡಿಕೆ ಇಟ್ಟು ಖರೀದಿಸುತ್ತವೆ’ ಎಂದು ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನಲ್ಲಿರುವ ಎಚ್‌ಎಂಟಿ ಪರಂಪರಾ ಕೇಂದ್ರ ಮತ್ತು ವಸ್ತು ಸಂಗ್ರಹಾಲಯದಲ್ಲಿರುವ ಕೈಗಡಿಯಾರಗಳ ಸಂಗ್ರಹ

ಬದಲಾದ ಕಾಲಘಟ್ಟದಲ್ಲಿ ಎಚ್‌ಎಂಟಿಯ ಕೆಲವು ವಾಚ್ ಘಟಕಗಳು ಬಂದ್ ಆಗಿವೆ. ಬೆಂಗಳೂರಿನಲ್ಲಿರುವ ಘಟಕದಲ್ಲಿ 70–ರಿಂದ 80 ಜನ ಕುಶಲಕರ್ಮಿಗಳು ಇದ್ದಾರೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ವಾಚ್‌ಗಳಿದ್ದರೂ ಎಚ್‌ಎಂಟಿಯೇ ಬೇಕು ಎನ್ನುವ  ವರ್ಗವೂ ಇದೆ.  ಆನ್‌ಲೈನ್‌ನಲ್ಲಿ (https://www.hmtwatches.in/mens) ಬಹಳಷ್ಟು ಬೇಡಿಕೆ ಇದೆ. ಕರ್ನಾಟಕದ ಖ್ಯಾತಿಯನ್ನು ಕಾಲಜ್ಞಾನದಲ್ಲಿಯೂ ಅಜರಾಮರವಾಗಿಸಿದ ಎಚ್‌ಎಂಟಿ ಇನ್ನೂ ಜನರ ಮಣಿಟ್ಟಿನಲ್ಲಿ ಸ್ಥಾನಪಡೆದಿದೆ. ಆ ವೈಭವದ ದಿನಗಳನ್ನು ನೋಡಿ ಹೆಮ್ಮೆ ಪಡಲು ಮ್ಯೂಸಿಯಂಗೆ (www.hmtmuseum.in)ಭೇಟಿ ನೀಡಬಹುದು.  ‌

ವಿಳಾಸ: ಎಚ್‌ಎಂಟಿ ಕಾಲೋನಿ, ಎಚ್‌ಎಂಟಿ ಎಸ್ಟೇಟ್, ಜಾಲಹಳ್ಳಿ, ಬೆಂಗಳೂರು  –560013

ಸಮಯ: ಬೆಳಿಗ್ಗೆ 10ರಿಂದ ಸಂಜೆ 6.30 (ಮಂಗಳವಾರ ರಜೆ)

ಪ್ರವೇಶ ಶುಲ್ಕ: ₹ 30 (ಶಾಲೆಗಳಿಂದ ಬರುವ ವಿದ್ಯಾರ್ಥಿ ತಂಡಗಳಿಗೆ ಟ್ರ್ಯಾಕ್ಟರ್‌ ರೈಡ್‌ ಕೂಡ ಇದೆ)

ರಾಯಭಾರಿಯಾಗಿದ್ದ ಕಪಿಲ್‌ ದೇವ್‌!
ಪ್ರಧಾನಿಗಳಾಗಿದ್ದ ಇಂದಿರಾಗಾಂಧಿ, ರಾಜೀವ್‌ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಅನೇಕ ಗಣ್ಯರ ಮನಸ್ಸು ಗೆಲ್ಲುವಲ್ಲಿ ಈ ಕೈಗಡಿಯಾರಗಳು ಯಶಸ್ವಿಯಾಗಿದ್ದವು. ಅಷ್ಟೇ ಅಲ್ಲ. 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಈ ವಾಚ್‌ಗೆ ಪ್ರಚಾರ ರಾಯಭಾರಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.