ADVERTISEMENT

ಪ್ರತಿಕ್ರಿಯೆ: ಹೋಮಿಯೋಪಥಿ ಎಂಬುದು ಸಂಜೀವಿನಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 19:31 IST
Last Updated 1 ಏಪ್ರಿಲ್ 2023, 19:31 IST
ಹೋಮಿಯೋಪಥಿ ಔಷಧಿ
ಹೋಮಿಯೋಪಥಿ ಔಷಧಿ   

ಹೋಮಿಯೋಪಥಿ ಪದ್ಧತಿ ಕುರಿತು ನಾಗೇಶ ಹೆಗಡೆಯವರು ಬರೆದ ಲೇಖನ ತಪ್ಪು ಅಭಿಪ್ರಾಯ ಮೂಡಿಸುವಂತಿದೆ. ಹೋಮಿಯೋಪಥಿ ಚಿಕಿತ್ಸೆ ಜಗತ್ತಿನಾದ್ಯಂತ ಎರಡನೇ ಸ್ಥಾನದಲ್ಲಿರುವ ವೈದ್ಯಕೀಯ ಪದ್ಧತಿ. ಇಂದಿಗೂ 80ಕ್ಕೂ ಹೆಚ್ಚಿನ ರಾಷ್ಟ್ರಗಳ ಕೋಟ್ಯಂತರ ರೋಗಿಗಳ ಪಾಲಿಗೆ ಸಂಜೀವಿನಿ. ಭಾರತದ ಸಂಸತ್ತಿನಲ್ಲೇ ಹೋಮಿಯೋಪಥಿ ಪರಿಪೂರ್ಣ ವೈಜ್ಞಾನಿಕ ಪದ್ಧತಿ ಎಂದು ಅನುಮೋದಿಸಲಾಗಿದೆ. 20 ಕೋಟಿಗೂ ಅಧಿಕ ಭಾರತೀಯರು ಈ ಪದ್ಧತಿಯ ಮೇಲೆ ಅವಲಂಬಿತರಾಗಿದ್ದಾರೆ.

ಹೋಮಿಯೋಪಥಿ ಎಲ್ಲದಕ್ಕೂ ಮೂಲವಾದ ಜೀವವನ್ನು ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ಪದ್ಧತಿ. ಅದು ದೇಹ, ಮನಸ್ಸು, ಬುದ್ಧಿಯನ್ನು ಒಂದು ಘಟಕವೆಂದು ಪರಿಗಣಿಸುತ್ತದೆ. ಯಾವುದೇ ಪದಾರ್ಥ ಆರೋಗ್ಯವಂತ ವ್ಯಕ್ತಿಯಲ್ಲಿ ಕೆಲವು ರೋಗೋತ್ಪನ್ನಗಳನ್ನು ಉಂಟು ಮಾಡಬಲ್ಲುದಾದರೆ ಅದೇ ಪದಾರ್ಥ ಅತ್ಯಲ್ಪ ಪ್ರಮಾಣದಲ್ಲಿ ಅದೇ ರೋಗ ಲಕ್ಷಣವುಳ್ಳ ರೋಗಿಯಲ್ಲಿ ನಿವಾರಕವಾಗಿ ಕೆಲಸ ಮಾಡುತ್ತದೆ ಎಂಬುದು ಹೋಮಿಯೋಪಥಿ ಸಿದ್ಧಾಂತ.

ಸೂರ್ಯನ ಅಡಿಯಲ್ಲಿರಬಹುದಾದ ನಿಸರ್ಗದ ಎಲ್ಲ ರೋಗ ನಿವಾರಕಗಳು ಹೋಮಿಯೋಪಥಿಯಲ್ಲಿ ಔಷಧಿಗಳಾಗಿ ಬಳಕೆಯಾಗುತ್ತವೆ. ಇದರಲ್ಲಿ ಸಸ್ಯ, ಪ್ರಾಣಿ ಹಾಗೂ ಖನಿಜಗಳೂ ಸೇರಿವೆ. ಈ ಪದ್ಧತಿಯಲ್ಲಿ ಎಲ್ಲ ಕಚ್ಛಾವಸ್ತುಗಳು ಮೂಲ ಸೊಗಡನ್ನು ಕಳೆದುಕೊಂಡು ಕೇವಲ ರೋಗನಿವಾರಕ ಸಾಮರ್ಥ್ಯದ ಧಾತುಗಳಾಗಿ ಪರಿವರ್ತಿತವಾಗಿರುತ್ತವೆ. ಹೋಮಿಯೋಪಥಿ ತನ್ನದೇ ಆದ ಸ್ಥಿರತೆ ಯೋಗ್ಯತೆ ಮತ್ತು ಅರ್ಹತೆಯಿಂದಾಗಿ ಜನಮಾನ್ಯವಾಗಿದೆಯೇ ಹೊರತು ಕೃಪಾಪೋಷಿತವಾಗಿಲ್ಲ. ಬೇರೆ ಪದ್ಧತಿಗಳಿಂದಲೇ ಎಲ್ಲ ರೋಗಗಳು ಗುಣಮುಖವಾಗುವುದಾದರೆ ಕೊನೆಯಲ್ಲಾದರೂ ಹೋಮಿಯೋಪಥಿ ಚಿಕಿತ್ಸೆಗೆ ಬರುವ ಅಗತ್ಯವೇನಿದೆ?

ADVERTISEMENT

‘ಜಗತ್ತಿನಲ್ಲಿ ಯುದ್ಧಗಳಿಂದ ಮೃತಪಟ್ಟವರಿಗಿಂತ ಔಷಧಗಳ ದುಷ್ಪರಿಣಾಮಗಳಿಂದ ಸತ್ತವರೇ ಹೆಚ್ಚು’ ಎಂಬ ಮಾತು ಸತ್ಯವಲ್ಲವೇ? ಆಧುನಿಕ ವೈದ್ಯಪದ್ಧತಿಯ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಎಷ್ಟೊಂದು ಜನ ಪ್ರಾಣ ಕಳೆದುಕೊಂಡಿಲ್ಲ? ಇಂಥ ಪ್ರಕರಣಗಳು ಹೋಮಿಯೋಪಥಿಯಲ್ಲಿ ಇಲ್ಲವೇ ಇಲ್ಲ. ಭಾರತದಲ್ಲಿ ಶ್ರೀಸಾಮಾನ್ಯನಿಗೆ ವೈದ್ಯಕೀಯ ವೆಚ್ಚ ಗಗನ ಕುಸುಮವಾಗಿರುವಾಗ ಸುಲಭವಾಗಿ ಸಿಗುವುದು ಹೋಮಿಯೋಪಥಿ ಮಾತ್ರ.

ಆಧುನಿಕ ವೈದ್ಯವಿಜ್ಞಾನ ವಿಶೇಷತಜ್ಞರನ್ನು ಸೃಜಿಸಿ ಮನುಷ್ಯನನ್ನು ಬಿಡಿಬಿಡಿಭಾಗಗಳಾಗಿ ನೋಡುತ್ತಿದೆಯೇ ಹೊರತು ಸಮಗ್ರವಾಗಿ ನೋಡಿಲ್ಲ. ಹೀಗಾಗಿ ವೈದ್ಯ ವಿಜ್ಞಾನ ಪರಿಪೂರ್ಣ ಎಂದು ಹೇಳಲಾಗದು. ಆದರೆ, ಹೋಮಿಯೋಪಥಿ ಮಾನವೀಯ ಮೌಲ್ಯ ಒಳಗೊಂಡ ಸಮಗ್ರ ಪದ್ಧತಿ.

–ಡಾ.ಬಿ.ಟಿ.ರುದ್ರೇಶ್, ಅಧ್ಯಕ್ಷ, ಕರ್ನಾಟಕ ಹೋಮಿಯೋಪಥಿ ಮಂಡಳಿ, ಬೆಂಗಳೂರು

*

ಅನುಭವಾಧಾರಿತ ವೈದ್ಯಪದ್ಧತಿ

ಹೋಮಿಯೋಪಥಿ ವಿಜ್ಞಾನವಲ್ಲ. ಆದರೆ, ಅದು ನಂಬಿಕೆಯನ್ನು ಆಧರಿಸಿದ್ದಲ್ಲ. ಅದನ್ನು, ಅನುಭವಾಧಾರಿತ (ಪ್ರಾಗ್ಮ್ಯಾಟಿಕ್) ವೈದ್ಯಪದ್ಧತಿ ಎನ್ನುವುದು ವೈಜ್ಞಾನಿಕ ದೃಷ್ಟಿಯ ನಿರಪೇಕ್ಷತೆಗೆ ಹೊಂದಿಕೊಳ್ಳುವ ಅಭಿಪ್ರಾಯ. ಹೋಮಿಯೋಪಥಿ ವಿಷಯದಲ್ಲಿ ‘ಹುಸಿ ನಂಬಿಕೆ’ ಎಂಬುದೂ ಸರಿಯಲ್ಲ. ಆಕಾಶಕ್ಕೆ ಕಲ್ಲು ಹೊಡೆದರೆ ಹಣ್ಣು ಉದುರುತ್ತದೆ ಎಂದರೆ ಹುಸಿನಂಬಿಕೆ. ಹಣ್ಣಿನ ಮರಕ್ಕೆ ಗುರಿಯಿಟ್ಟು ಕಲ್ಲು ಹೊಡೆದರೆ ಹಣ್ಣು ಉದುರುತ್ತದೆ ಎಂಬುದು ಅನುಭವ ಮೂಲದ ನಂಬಿಕೆ. ಹುಸಿ ನಂಬಿಕೆ ಎನ್ನುವ ಮುನ್ನ ಈ ವ್ಯತ್ಯಾಸ ತಿಳಿಯಬೇಕಿತ್ತು. ಹಾಗೆಯೇ ಹಾನಿಮನ್ ವ್ಯಕ್ತಿ ವಿವರಗಳಲ್ಲಿ ಅಗೌರವ-ನಿಂದನೆಯ ಛಾಯೆ ಇದೆ.

ಹೋಮಿಯೋಪಥಿಯಲ್ಲಿ ರೋಗ ನಿದಾನದ ಉಪಯುಕ್ತತೆಗೆ ಮಹತ್ವವಿದೆ. ಇದನ್ನು ತಿಳಿಯದವರು ಅಥವಾ ಉಪೇಕ್ಷಿಸುವವರು ಅದರ ಬಡಜನ ಸ್ನೇಹಿ ವೆಚ್ಚವನ್ನು ಮುಖ್ಯವೆಂದು ಪರಿಗಣಿಸದೆ, ಅದರ ‘ವಿಷಕಾರಕ’ ಮತ್ತು ‘ಅಪಾಯಕಾರಿ’ ಅಂಶಗಳ ಕುರಿತು ದೊಡ್ಡ ಗಂಟಲಿನಲ್ಲಿ ಹೇಳುತ್ತಾರೆ. ಈ ಪದ್ಧತಿಯ ಅಪಬಳಕೆಯಲ್ಲಿರುವ ಸಂದಿಗ್ಧತೆ, ಅಪಾಯ ಎಲ್ಲಾ ವೈದ್ಯ ಪದ್ಧತಿಯಲ್ಲೂ ಇರುವಂಥದ್ದೇ. ಲಾಭಕ್ಕಾಗಿ ಏನು ಬೇಕಾದರೂ ಮಾಡಲು ಹಿಂಜರಿಯದ ಔಷಧ ಮತ್ತು ಪರೀಕ್ಷಾ ಉಪಕರಣ ಕಂಪನಿಗಳ ಲಾಭಬಡುಕ ಮನೋಭಾವದ ಮುಂದೆ ವೈಜ್ಞಾನಿಕತೆಯ ಪ್ರಶ್ನೆ ಹಿಂದೆ ಸರಿದುಬಿಡುತ್ತದೆ ಅಲ್ಲವೇ?

–ವಿ.ಎನ್‌. ಲಕ್ಷ್ಮೀನಾರಾಯಣ, ಮೈಸೂರು

*

ನಂಬಿಕೆ ಇಟ್ಟವರಿಗೆ ಆಘಾತ

‘ಹೋಮಿಯೋಪಥಿ, ಹುಸಿನಂಬಿಕೆಗಳಿಗೆ ಹೊಸ ಪೆಟ್ಟು’ ಲೇಖನದಿಂದ ಹೋಮಿಯೋಪಥಿ ಚಿಕಿತ್ಸೆಯಲ್ಲಿ ನಂಬಿಕೆ ಇಟ್ಟಿರುವ ನನ್ನಂತಹ ಅನೇಕರಿಗೆ ಆಘಾತವಾಗಿದೆ. ನಾನು ಹೋಮಿಯೋಪಥಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ಸುಮಾರು ಹತ್ತು ವರ್ಷಗಳ ಹಿಂದೆ, ಮೆದುಳಿಗೆ ರಕ್ತ ಸಂಚಾರವಾಗುವ ನರಗಳಿಗೆ ಸಂಬಂಧಿಸಿದಂತೆ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದೆ. ಸ್ಕ್ಯಾನಿಂಗ್‌ ವರದಿಯ ಪ್ರಕಾರ ಎಡಭಾಗದ ರಕ್ತ ನಾಳಗಳು ಸಂಪೂರ್ಣ ಮುಚ್ಚಿಹೋಗಿದ್ದವು. ನನಗೆ ಮೆದಳಿಗೆ ರಕ್ತ ಪೂರೈಕೆ ಆಗುವ ನರಕ್ಕೆ ಸ್ಟೆಂಟ್ ಅಳವಡಿಸಲಾಗಿತ್ತು. ಪುನಃ ಅಲ್ಲಿ ಚಿಕಿತ್ಸೆಗೆ ಹೋದರೆ ಲಕ್ಷಾಂತರ ರೂಪಾಯಿ ಹೊಂಚಬೇಕಾಗುತ್ತದೆ ಎಂದು, ಹೋಮಿಯೋಪಥಿ ವೈದ್ಯರ ಬಳಿ ಹೋದೆ. ಅವರು ಕೊಟ್ಟ ಔಷಧಿಯನ್ನು ಒಂದು ತಿಂಗಳು ತೆಗೆದುಕೊಂಡು ಪುನಃ ಸ್ಕ್ಯಾನಿಂಗ್ ಮಾಡಿಸಿದೆ. ಪವಾಡವೆಂಬಂತೆ ನನ್ನ ರಕ್ತನಾಳಗಳು ಬಹುತೇಕ ಶುದ್ಧವಾಗಿದ್ದವು.

–ಮಹಮ್ಮದ್ ಕಲೀಂಉಲ್ಲ, ನಾಗಮಂಗಲ

*

ಆಧಾರವಿಲ್ಲದ ವಾದ

ಲೇಖಕರು ಜಿರಳೆಯ ಕಥೆಯೊಂದನ್ನು ಹೆಣೆದಿದ್ದಾರೆ, ಇದು ಸತ್ಯಕ್ಕೆ ದೂರ. ಇವರಿಗೆ ಹೋಮಿಯೋಪಥಿ ಕುರಿತು ಕನಿಷ್ಠ ಮಾಹಿತಿಯೂ ಇದ್ದಂತಿಲ್ಲ. ಆಸ್ತಮಾಕ್ಕೆ ಹೋಮಿಯೋಪಥಿಯಲ್ಲಿ ನೂರಾರು ಔಷಧಿಗಳಿವೆ. ಇಲ್ಲಿ ರೋಗಕ್ಕೆ ಔಷಧಿಯನ್ನು ಕೊಡುವ ಬದಲಾಗಿ, ರೋಗಿಗೆ ಔಷಧಿ ಕೊಡಲಾಗುತ್ತದೆ. ಆಸ್ತಮಾ ರೋಗಿಯ ಗುಣ ಲಕ್ಷಣಗಳು, ಜಿರಳೆಯ ಔಷಧಿಯ ಗುಣಲಕ್ಷಣಗಳಿಗೆ ಹೋಲಿಕೆಯಾದಲ್ಲಿ ಮಾತ್ರವೇ ಬ್ಲಾಟ ಓರಿಎಂಟಾಲಿಸ್ ಔಷಧಿ ನೀಡಬಹುದಾಗಿದೆ. ಕೋವಿಡ್ ಕಾಲದಲ್ಲಿ ಹೋಮಿಯೋಪಥಿ ಔಷಧಿ ಸೇವಿಸಿದವರ ಲಿವರ್ ಕೆಟ್ಟು ಪ್ರಾಣಬಿಟ್ಟ ಉದಾಹರಣೆಗಳಿವೆ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಆಧಾರವಿಲ್ಲದ ಈ ಆರೋಪ ನೂರಾರು ವರ್ಷಗಳ ಇತಿಹಾಸವಿರುವ, ವೈಜ್ಞಾನಿಕ, ಅಡ್ಡ ಪರಿಣಾಮಗಳಿಲ್ಲದ ಹೋಮಿಯೋಪಥಿಯ ಮೇಲೆ ಗೂಬೆ ಕೂರಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಹುನ್ನಾರದಂತಿದೆ.

–ಡಾ.ರಾಜೇಶ್ ಎಂ., ಹೋಮಿಯೋಪಥಿ ವೈದ್ಯ, ಪುತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.