ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಹೋರಿ ಹಬ್ಬ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಹಿಂದೆ ರೈತರು ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿದ್ದ ಈ ಹಬ್ಬ, ಈಗ ಜಲ್ಲಿಕಟ್ಟು, ಕಂಬಳ ರೀತಿ ಇವೆಂಟ್ ರೂಪ ಪಡೆದುಕೊಂಡಿದೆ. ಈ ಕುರಿತು ಬರಹ ಮಂಜುನಾಥ್ ಭದ್ರಶೆಟ್ಟಿ ಅವರಿಂದ..
––––––––
ಆ ಹೋರಿಗೆ ಆಕರ್ಷಕವಾಗಿ ಅಲಂಕಾರ ಮಾಡಲಾಗಿತ್ತು. ಕುತ್ತಿಗೆ ಮತ್ತು ಕೊಂಬುಗಳಿಗೆ ಒಣಕೊಬ್ಬರಿ ಸರಗಳನ್ನು ಹಾಕಲಾಗಿತ್ತು. ಅದರ ಕಣ್ಣುಗಳು ಕೆಂಡ ಕಾರುತ್ತಿದ್ದವು. ಬಾಲ ಚಾಟಿಯಂತೆ ಆಟವಾಡುತ್ತಿತ್ತು. ಅದರ ಓಟ ಹುಸೇನ್ ಬೋಲ್ಟ್ ನೆನಪಿಸುವಂತೆಯೂ ಇತ್ತು! ಟ್ರ್ಯಾಕ್‌ನ ಎರಡೂ ಬದಿಯಲ್ಲಿ ನಿಂತಿದ್ದ ಸಾವಿರಾರು ಜನರು ಒಂದೇ ಸಮನೆ ಜೋರಾಗಿ ಕೂಗುತ್ತಿದ್ದರು. ಹೋರಿ ಮತ್ತಷ್ಟು ಕಿವಿ ನಿಮಿರಿಸಿ, ಚಿಗರೆಯಂತೆ ಚಿಮ್ಮುತ್ತಾ, ಹಾರುತ್ತಾ ಓಡುತ್ತಿತ್ತು. ಅದೆಲ್ಲಿದ್ದನೋ ಆ ಹೀರೊ ಒಮ್ಮೆಗೆ ಗಾಳಿಯಲ್ಲಿ ಹಾರಿ, ಹೋರಿಯ ಡುಬ್ಬವನ್ನು ಹಿಡಿದು ಕೊಬ್ಬರಿ ಸರಕ್ಕೆ ಕೈ ಹಾಕುವಷ್ಟರಲ್ಲಿ ಹೋರಿ ಮಿಂಚಿನಂತೆ ತಪ್ಪಿಸಿಕೊಂಡಿತು! ಜನರೋ ಹುಚ್ಚೆದ್ದು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ನಾನು ಇಂತಹ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿದ್ದೆ. ನೇರವಾಗಿ ನೋಡಿದ್ದು ಅದೇ ಮೊದಲು. ಈ ರೋಮಾಂಚನಕಾರಿ ಅನುಭವ ದಕ್ಕಿದ್ದು ಹೋರಿ ಹಬ್ಬದಲ್ಲಿ.
ಇತ್ತೀಚಿನ ವರ್ಷಗಳಲ್ಲಿ ಹೋರಿ ಹಬ್ಬ ನಮ್ಮ ರೈತರ ಸಾಂಸ್ಕೃತಿಕ ಸಾಹಸ ಕ್ರೀಡೆಯಾಗಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಜನಪ್ರಿಯವಾಗುತ್ತಿದೆ. ಹಾವೇರಿ, ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಬ್ಯಾಡಗಿ, ರಟ್ಟಿಹಳ್ಳಿ, ಶಿಕಾರಿಪುರ, ಆನವಟ್ಟಿ, ನ್ಯಾಮತಿ, ಶಿಗ್ಗಾವಿ, ಶಿರಸಿ, ಮುಂಡಗೋಡ, ಸವಣೂರು, ದಾವಣಗೆರೆ, ಹರಿಹರ, ಹೊನ್ನಾಳಿ, ಶಿವಮೊಗ್ಗಗಳಲ್ಲಿ ಹೋರಿ ಹಬ್ಬ ಇವೆಂಟ್ ಆಗಿ ರೂಪುಗೊಳ್ಳುತ್ತಿದೆ.
ದೀಪಾವಳಿ ಬಂದರೆ ಈ ಭಾಗದ ಹಲವು ಊರುಗಳಲ್ಲಿ ಹೋರಿಗಳು ಗುಟುರು ಹಾಕುತ್ತವೆ. ಅನೇಕ ಗ್ರಾಮಸ್ಥರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬ ಆಯೋಜಿಸಿ ಗಮನ ಸೆಳೆಯುತ್ತಾರೆ.
ಸಂಕ್ರಾಂತಿ ಸಮಯದಲ್ಲಿ ದಕ್ಷಿಣ ಕರ್ನಾಟಕದ ಹಲವೆಡೆ ದನಕರುಗಳನ್ನು ಕಿಚ್ಚು ಹಾಯಿಸುವುದು ರೂಢಿ. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯಲ್ಲಿ ಎತ್ತುಗಳ ಕೋಡುಗಳಿಗೆ ಕೋಡುಬಳೆ ಕಟ್ಟಿ ಓಡಿಸುವುದು ಸಂಪ್ರದಾಯ. ಬೇಸಿಗೆಯಲ್ಲಿ ಚಕ್ಕಡಿ ಓಟದ ಸ್ಪರ್ಧೆಯೂ ಒಂದು ಜನಪ್ರಿಯ ಸಾಂಸ್ಕೃತಿಕ ಕ್ರೀಡೆ.
ದೀಪಾವಳಿ ಸಮಯದಲ್ಲಿ ಮಧ್ಯ ಕರ್ನಾಟಕದಲ್ಲಿ ಹೋರಿ ಹಬ್ಬದ ಹೆಸರಿನಲ್ಲಿ ಹೋರಿಗಳನ್ನು ಬೆದರಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಆದರೆ ಈಗ ಈ ಹಬ್ಬ ಸಂಪ್ರದಾಯಕ್ಕೇ ಸೀಮಿತವಾಗಿಲ್ಲ. ಜಲ್ಲಿಕಟ್ಟು, ಕಂಬಳದ ರೀತಿ ಸ್ಪರ್ಧಾತ್ಮಕ ಇವೆಂಟ್ ಆಗಿ ರೂಪುಗೊಳ್ಳುತ್ತಿದೆ. ತಿಂಗಳುಗಟ್ಟಲೇ ಶ್ರಮ ಹಾಕಿ ಹೊರಿ ಹಬ್ಬ ಆಯೋಜನೆ ಮಾಡುತ್ತಾರೆ.
ಹೋರಿ ಹಬ್ಬ ತಯಾರಿ ಹೇಗೆ?
ಹೋರಿ ಹಬ್ಬದಲ್ಲಿ ಒಂದೇ ಊರಿನ ಹೋರಿಗಳು ಪಾಲ್ಗೊಳ್ಳುತ್ತಿಲ್ಲ. ಈಗ ನಡೆಯುತ್ತಿರುವ ಹೋರಿ ಹಬ್ಬದ ವಿಶೇಷವೇ ಇದು. ಸುತ್ತಮುತ್ತಲಿನ, ದೂರ ದೂರದ ಹತ್ತಾರು ಹಳ್ಳಿಗಳ ಹೋರಿಗಳು ಇನ್ನೊಂದು ಊರಿನ ಹಬ್ಬದಲ್ಲಿ ಪಾಲ್ಗೊಳ್ಳುತ್ತಿವೆ. ಒಂದೇ ದಿನ ನಡೆಯುವ ಹಬ್ಬಕ್ಕೆ ಕನಿಷ್ಠ 300 ಹೋರಿಗಳಾದರೂ ಹೆಸರು ನೋಂದಾಯಿಸಿಕೊಂಡರೇ ಆ ಹೋರಿ ಹಬ್ಬ ನೋಡಲು ರೋಚಕವಾಗಿರುತ್ತದೆ. ಟ್ರ್ಯಾಕ್ ತಯಾರಾದ ನಂತರ ಹೋರಿ ಮಾಲೀಕರು ಕಮಿಟಿ ಬಳಿ ಹಣ ಪಾವತಿಸಿ ನಂಬರ್‌ಗಳನ್ನು ಪಡೆದುಕೊಳ್ಳಬೇಕು. ಇಷ್ಟದ ನಂಬರ್ ಬೇಕಾದರೆ ಹೆಚ್ಚು ಹಣ ಕೊಡಬೇಕು. ಬಗೆಬಗೆಯಾಗಿ ಸಿಂಗರಿಸಿದ ಹೋರಿಗಳನ್ನು ಗೇಟ್ ತೆರೆದು ಒಂದೊಂದಾಗಿ ಬೀಡುತ್ತಾರೆ. ಇದರ ಟ್ರ್ಯಾಕ್ ಕೆಲವು ಕಡೆ 100, 150 ಮೀಟರ್, ಇನ್ನೂ ಕೆಲವು ಕಡೆ 300 ಮೀಟರ್ ಇರುತ್ತವೆ.
ಹೋರಿ ಬಿಟ್ಟ ತಕ್ಷಣ ಅದು ಯಾರ ಕೈಗೂ ಸಿಗದಂತೆ ಓಡುವುದನ್ನು ನೋಡಬೇಕು! ಹೋರಿ ಬೆದರಿಸುವವರು ಆ ಹೋರಿ ಮೈಮೇಲೆ ಏರಿ, ಅದರ ವೇಗವನ್ನು ನಿಯಂತ್ರಿಸಿ ಅದರ ಕೊರಳಿಗೆ ಕಟ್ಟಿರುವ ಒಣಕೊಬ್ಬರಿಯನ್ನು ಕಿತ್ತುಕೊಳ್ಳಬೇಕು. ಆ ವೇಳೆ ಹೋರಿಯ ಓಟಕ್ಕೆ ಉದ್ದೇಶಪೂರ್ವಕವಾಗಿ ತೊಂದರೆ ಮಾಡುವಂತಿಲ್ಲ. ಇನ್ನೊಂದೆಡೆ ಆಕ್ರಮಣಕಾರಿ ಎಂದು ಗುರುತಾದ ಹೋರಿಗಳನ್ನು ಕಮಿಟಿಯವರೂ ಭಾಗವಹಿಸಲು ಬಿಡುವುದಿಲ್ಲ. ಹೋರಿ ಟ್ರ್ಯಾಕ್‌ನಲ್ಲಿ ಏನಾದರೂ ತೊಂದರೆ ಆಗಿ ಬಿದ್ದರೆ ಅದನ್ನು ಮುಟ್ಟುವಂತಿಲ್ಲ. ಈ ವೇಳೆ ಕಮಿಟಿಯವರು ಹೋರಿ ನುಗ್ಗಿ ಹೋಗುವ ವೇಗ, ಜಾರಿಕೊಳ್ಳುವ ಪರಿ, ಅದರ ಅಲಂಕಾರ, ಆಕ್ರಮಣಶೀಲತೆಯನ್ನು ಗುರುತಿಸುತ್ತಾರೆ. ಆಗ ಹೋರಿ ಯಾರಿಗೂ ಬಗ್ಗದೇ ಕೊಬ್ಬರಿ ಕೊಡದೇ ತಪ್ಪಿಸಿಕೊಂಡು ಟ್ರ್ಯಾಕ್ ದಾಟಿ ಹೋದಾಗ ಅದನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡುತ್ತಾರೆ. ಎಲ್ಲ ಸುತ್ತುಗಳಲ್ಲೂ (ಸಾಮಾನ್ಯವಾಗಿ ಐದಾರು ಸುತ್ತು) ಜಯಶಾಲಿಯಾದರೆ ಆ ಹೋರಿ, ‘ಹಬ್ಬ’ ಮಾಡಿತು ಎಂದರ್ಥ. ಅವುಗಳಿಗೆ ನಗದು, ಟ್ರ್ಯಾಕ್ಟರ್, ಕಾರು, ಬುಲೆಟ್ ಬೈಕ್, ಸಾಮಾನ್ಯ ಬೈಕ್, ರೆಫ್ರಿಜಿರೇಟರ್, ಸ್ಮಾರ್ಟ್ ಟಿವಿ, ಇತ್ಯಾದಿಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ.
ಹೋರಿ ಬೆದರಿಸುವವರು ತಂಡ ಕಟ್ಟಿಕೊಂಡಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಹೋರಿಗಳನ್ನು ಪಳಗಿಸುವುದರಲ್ಲಿ ಆಸಕ್ತಿ ಇರುವ ಯುವಕರೇ ಇರುತ್ತಾರೆ. ಆವೇಶದಲ್ಲಿ ಹೋರಿ ಓಡಿ ಬರುವಾಗ ಅದರ ಮೈಮೇಲೆ ಎರಗಿ ಕೊಬ್ಬರಿ ಹರಿದುಕೊಳ್ಳುವುದು ಇವರ ಗುರಿ. ಹೋರಿಯನ್ನು ತಡೆದು ಕೊಬ್ಬರಿ ಕಿತ್ತುಕೊಂಡು ಅದನ್ನು ಕಮಿಟಿಯವರ ಬಳಿ ತೋರಿಸಿ ಹೆಸರು ಬರೆಸಬೇಕು. ಅವರಿಗೂ ಕೂಡ ಬಹುಮಾನಗಳಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಅನುಭವದೊಂದಿಗೆ ಮುನ್ನುಗ್ಗುವ ಛಾತಿಯುಳ್ಳವ ಬುಲ್ ಕ್ಯಾಚರ್‌ಗಳು ಇದರಲ್ಲಿ ಯಶಸ್ವಿಯಾಗುತ್ತಾರೆ.
ಹೋರಿಗಳ ತಯಾರಿ ಹೇಗೆ?
ಹೋರಿ ಹಬ್ಬದ ಹೋರಿಗಳನ್ನು ನೋಡುವುದೇ ಚೆಂದ. ಸ್ಥಳೀಯ ಹೋರಿಗಳೂ ಸೇರಿದಂತೆ ಮಧುರೈ ಭಾಗದ ಕಂಗಾಯಂ (ಅಮೃತ್ ಮಹಲ್), ಹಳೇ ಮೈಸೂರು ಭಾಗದಿಂದ ಹಳ್ಳಿಕಾರ್ ಹೋರಿಗಳನ್ನು ಪಳಗಿಸುವುದು ರೂಢಿ. ಇದಕ್ಕಾಗಿ ಹೋರಿ ಮಾಲೀಕರು ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡುತ್ತಿದ್ದಾರೆ.
ಹಬ್ಬಕ್ಕೆ ಬಳಸುವ ಹೋರಿ ಎಂದು ಖಚಿತವಾದ ಮೇಲೆ ಅದರ ವಿಶೇಷ ಆರೈಕೆ ಶುರುವಾಗುತ್ತದೆ. ಯುವ ರೈತರು ಹೋರಿಗಳ ಮೇಲೆ ವಿಶೇಷ ನಿಗಾವಹಿಸುತ್ತಾರೆ. ಹೋರಿಗೆ ಮೂರೂ ಹೊತ್ತು ಏಳೆಂಟು ಕಾಳುಗಳ ಸಮ್ಮಿಶ್ರಣದ ಹಿಂಡಿ ತಿನ್ನಿಸುತ್ತಾರೆ. ಅದರ ಜೊತೆ ಹಲವು ಬಗೆಯ ಸತ್ವಯುತ ಹೊಟ್ಟು ಹಾಕುತ್ತಾರೆ. ಪ್ರತಿದಿನ ಬೆಳಿಗ್ಗೆ ಎರಡ್ಮೂರು ಕಿಲೊಮೀಟರ್ ಓಡಿಸುವುದು, ಕೆರೆಯಲ್ಲಿ ಈಜಿಸುವುದು, ಬಿಸಿಲಿಗೆ ಕೆಲಹೊತ್ತು ನಿಲ್ಲಿಸುವುದನ್ನು ಮಾಡುತ್ತಾರೆ. ಹಬ್ಬಕ್ಕೆ ಹೋಗುವ ಹೋರಿ ವಿಶೇಷ ಆರೈಕೆಯಲ್ಲಿಯೇ ಇರುತ್ತದೆ. ಅಷ್ಟೇ ಅಲ್ಲದೇ ಅದು ಆ ಊರಿನ ಆಕರ್ಷಣೆ ಕೂಡ..
ಯಾಕಿಷ್ಟು ಟ್ರೆಂಡ್?
ಮಧ್ಯ ಕರ್ನಾಟಕದಲ್ಲಿ ಹೋರಿ ಹಬ್ಬ ಯಾಕಿಷ್ಟು ಜನಮನ್ನಣೆಗಳಿಸಿಕೊಂಡಿದೆ ಎಂಬುದಕ್ಕೆ ಸ್ಪಷ್ಟ ಕಾರಣಗಳನ್ನು ಹುಡುಕುವುದು ಕಷ್ಟ. ಕೊರೊನಾ ನಂತರ ಹೋರಿ ಹಬ್ಬ ಜನಪ್ರಿಯವಾಗುತ್ತಿದೆ. ಕೃಷಿಯಲ್ಲಿ ಟ್ರ್ಯಾಕ್ಟರ್ ಸೇರಿದಂತೆ ಅನೇಕ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವುದರಿಂದ ಎತ್ತುಗಳ ಬಳಕೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ರೈತರು ತಮ್ಮ ಅವಿಭಾಜ್ಯ ಅಂಗಗಳೇ ಆಗಿದ್ದ ಹೊರಿಗಳನ್ನು, ಎತ್ತುಗಳನ್ನು ಉಳಿಸಿಕೊಳ್ಳಬೇಕು ಎಂಬ ಇರಾದೆಗೋಸ್ಕರ ಹೋರಿ ಹಬ್ಬ ಮಾಡಲೆಂದೇ ಹೋರಿಗಳನ್ನು ಕಟ್ಟುತ್ತಿದ್ದಾರೆ.
‘ನಮಗೆ ಹೊಲ ಇದೆ, ಕಮತ ಜೋರು ಇದೆ. ಆದರೆ, ಇದಕ್ಕಾಗಿ ಹೋರಿ, ಎತ್ತುಗಳ ಬಳಕೆ ತುಂಬಾ ಕಡಿಮೆ. ಆದರೂ ದನಕರುಗಳನ್ನು ಉಳಿಸಬೇಕು. ಅದಕ್ಕೆ ಹೋರಿ ಹಬ್ಬವೇ ಸ್ಫೂರ್ತಿ’ ಎನ್ನುವ ಹೋರಿಗಳ ಮಾಲೀಕರು ಇದ್ದಾರೆ. ಬೇರೆ ಬೇರೆ ತಳಿಯ ಹೋರಿಗಳನ್ನು ತಮ್ಮ ಕೊಟ್ಟಿಗೆಯಲ್ಲಿ ಕಟ್ಟವುದು ಇಲ್ಲಿನ ಅನೇಕ ಯುವಕರಿಗೆ ಪ್ಯಾಷನ್ ಆಗಿದೆ.
ಆಕರ್ಷಕ ಹೆಸರುಗಳು
ಇನ್ನೊಂದು ವಿಶೇಷವೆಂದರೆ ಹೋರಿಗಳಿಗೆ ಬಗೆ ಬಗೆಯಾದ ಹೆಸರುಗಳನ್ನು ಮಾಲೀಕರು, ಅಭಿಮಾನಿಗಳು ಕೊಟ್ಟಿರುತ್ತಾರೆ. ಕೆಲವು ಹೋರಿಗಳ ಹೆಸರುಗಳು ಹೀಗಿವೆ- ರಾಣೆಬೆನ್ನೂರು ಕಾ ರಾಜಾ, ಬಸ್ಮಾಸುರ, ಕುರುಕ್ಷೇತ್ರ, ಕರ್ನಾಟಕ ನಂದಿ, ಉಪ್ಪುಣಸಿ ರಾಷ್ಟ್ರಪತಿ, ಸಾಮ್ರಾಟ್, ರಾವಣ, ಬ್ಯಾಡಗಿ ಹೊಯ್ಸಳ, ಉಪ್ಪುಣಸಿ ಕನಸುಗಾರ, ಹಾವೇರಿ ಸಿಎಂ, ಆರ್.ಸಿ.ಬಿ, ದುಬೈ ಡಾನ್, ಕಲ್ಮನೆ ಕೊಲೆಗಾರ, ತಡಸನಹಳ್ಳಿ ಡಾನ್, ನಿರ್ಭಯಾ. ವೈಭವ್, ಚಾಂಪಿಯನ್, ಕೆಡಿಎಂ ಕಿಂಗ್, ಎನ್‌ಟಿಸಿ ಸರ್ಕಾರ್, ಎನ್‌ಟಿಸಿ ಅಧಿಪತಿ.
ಪೀಪಿ ಹೋರಿ, ಗಗ್ಗರಿ ಹೋರಿ!
ಹೋರಿ ಹಬ್ಬದ ಪ್ರಮುಖ ಆಕರ್ಷಣೆಯೇ ಪೀಪಿ ಹೋರಿ. ಎರಡೂ ಕೋಡುಗಳಿಗೆ ಸುಮಾರು 8–10 ಅಡಿ ಎತ್ತರದ ವೆಲ್ಡಿಂಗ್ ಮಾಡಿಸಿದ ಕಬ್ಬಿಣದ ಪೈಪುಗಳನ್ನು ಕಟ್ಟಿ ಅದಕ್ಕೆ ಬಲೂನಗಳಿಂದ ಸಿಂಗರಿಸಿದರೆ ಅದು ಪೀಪಿ ಹೋರಿ. ಟ್ರ್ಯಾಕ್‌ನಲ್ಲಿ ಕಾಲು ಕೆದರಿ ಹೋಗುವ ಪೀಪಿ ಹೋರಿಯನ್ನು ನೋಡುವುದೇ ಚಂದ. ಇನ್ನು, ಗಗ್ಗರಿ ಹೋರಿಗೆ ತಲೆಯ ಮೇಲೆ ಪೀಪಿ ಇರುವುದಿಲ್ಲ. ಅದಕ್ಕೂ ಕೂಡ ಹೋರಿ ಮಾಲೀಕರು ತಮ್ಮ ಇಷ್ಟದಂತೆ ಬಗೆಬಗೆಯಾಗಿ ಸಿಂಗರಿಸಿ ಓಡಿಸುತ್ತಾರೆ.
ಫ್ಯಾನ್ ಪೇಜ್‌ಗಳು!
ಸಾಕಷ್ಟು ಹೋರಿಗಳು ಸುತ್ತಮುತ್ತಲಿನ ಊರುಗಳಲ್ಲಿ ಅಭಿಮಾನಿಗಳಷ್ಟೇ ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ ಪೇಜ್‌ಗಳನ್ನು ಸೃಷ್ಟಿಸಿಕೊಂಡಿವೆ. ತಮ್ಮ ನೆಚ್ಚಿನ ಹೋರಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದಕ್ಕೆ ಅಭಿಮಾನಿಗಳ ನಡುವೆ ಜಗಳ ನಡೆಯುವುದುಂಟು.
ಜಲ್ಲಿಕಟ್ಟು ರೀತಿ ಹೋರಿ ಹಬ್ಬವೂ ಅಪಾಯಕಾರಿ. ಹೋರಿ ಬೆದರಿಸುವಾಗ ಕೆಲವರು ಸತ್ತಿರುವ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿರುವ ನಿದರ್ಶನಗಳಿವೆ. ಹಬ್ಬ ಆಯೋಜಿಸುವರು ಪೊಲೀಸರ ಅನುಮತಿ ಪಡೆದುಕೊಳ್ಳಬೇಕು, ಮುನ್ನೆಚ್ಚರಿಕೆ ಕ್ರಮಗಳ ಜೊತೆ ಪಶು ವೈದ್ಯರೂ ಸ್ಥಳದಲ್ಲಿರಬೇಕು. ಆದರೂ ಅವಘಡಗಳು ತಪ್ಪಿಲ್ಲ.
ಯಾರು ಏನೆನ್ನುತ್ತಾರೆ?
ರೈತರು, ಯುವಕರಿಂದ ಪ್ರೇರಣೆ: ಯಂತ್ರೋಪಕರಣ ಹಾಗೂ ಗೋಹತ್ಯೆಯಿಂದ ಬೇಸಾಯದಲ್ಲಿ ಎತ್ತು ಹೋರಿಗಳ ಬಳಕೆ ವ್ಯಾಪಕವಾಗಿ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೋರಿ ಹಬ್ಬದ ಹೆಸರಿಗಾದರೂ ನಮ್ಮ ರೈತರು ದನ ಕರುಗಳನ್ನು ಉಳಿಸಬೇಕೆಂದು ಹೋರಿಗಳನ್ನು ಕಟ್ಟುತ್ತಿದ್ದಾರೆ. ಹೋರಿ ಹಬ್ಬ ಆಯೋಜಿಸಲು ಮುಖ್ಯವಾಗಿ ರೈತರು, ಯುವಕರು ಪ್ರೇರಣೆ ಕೊಡುತ್ತಿದ್ದಾರೆ.ನಮ್ಮ ಭಾಗದ ಅನೇಕ ಗ್ರಾಮಸ್ಥರಿಗೆ ಹೋರಿ ಹಬ್ಬ ಆಯೋಜಿಸುವುದು ಪ್ರತಿಷ್ಠೆಯ ವಿಷಯವಾಗುತ್ತಿದೆ. ನಮ್ಮ ಭಾಗದ ಸಾಂಸ್ಕೃತಿಕ ಸಾಹಸ ಕ್ರೀಡೆಯಾಗಿ ರಾಜ್ಯ ಹೊರರಾಜ್ಯದಲ್ಲಿ ಗಮನ ಸೆಳೆಯುತ್ತಿರುವ ಹೋರಿ ಹಬ್ಬ ಉಳಿಯಲಿ, ಬೆಳೆಯಲಿ.-ಪ್ರಕಾಶ್ ಬುರಡಿಕಟ್ಟಿ (ಕಿಟ್ಟಣ್ಣ) ರಾಣೆಬೆನ್ನೂರು, ರಾಣೆಬೆನ್ನೂರು ಕಾ ರಾಜಾ ಹೋರಿ ಮಾಲೀಕರು.
ದೇಶಿ ಸಾಹಸ ಕ್ರೀಡೆ: ಕಳೆದ ಎರಡು ವರ್ಷಗಳಿಂದ ಹೋರಿ ಬೆದರಿಸಲು ಹೋಗುತ್ತಿದ್ದೇನೆ. ಈ ಎರಡು ವರ್ಷದಲ್ಲಿ ಆರು ಭಾರಿ ಪ್ರಶಸ್ತಿ ತೆಗೆದುಕೊಂಡಿದ್ದೇನೆ. ಹೋರಿ ಬೆದರಿಸುವಾಗ ನಮ್ಮ ಜೀವಕ್ಕೆ ನಾವೇ ಹೊಣೆ. ಹೋರಿ ಹಿಡಿದ ಒಬ್ಬನಿಗೆ ಮಾತ್ರ ಪ್ರಶಸ್ತಿ ಕೊಡುತ್ತಾರಾದರೂ ನಮ್ಮ ಸಹಾಯಕ್ಕೆ ನಮ್ಮ ಸಂಗಡಿಗರು ಇರುತ್ತಾರೆ. ಹೋರಿ ಹಿಡಿದವರಿಗೆ ಚಿನ್ನ, ಬೆಳ್ಳಿ, ಬೈಕ್, ನಗದು ಇತ್ಯಾದಿ ಆಕರ್ಷಕ ಬಹುಮಾನ ಕೊಡುತ್ತಾರೆ ಎಂದು ಹೋರಿ ಹಿಡಿಯಲಷ್ಟೇ ಹೋಗುವುದಿಲ್ಲ ಅದೊಂದು ರೀತಿ ನಮಗೆ ದೇಶಿ ಸಾಹಸ ಕ್ರೀಡೆಯಾಗಿ ಕಾಣುತ್ತಿದೆ.-ಶಿವು ಅಲಿಯಾಸ್ ಶಿವು 01, ಬುಲ್ ಕ್ಯಾಚರ್, ಶಿರಸಿ
ಸಾಂಸ್ಕೃತಿಕ ಹೆಗ್ಗುರುತಾಗುತ್ತಿದೆ: ಹೋರಿ ಹಬ್ಬ ಆಯೋಜಿಸುವುದಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯಮಟ್ಟದ ಹಬ್ಬಗಳು ಹೆಚ್ಚು ಸದ್ದು ಮಾಡುತ್ತಿವೆ. ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಕಂಬಳದ ರೀತಿ ನಮ್ಮ ಭಾಗದ ಹೋರಿ ಹಬ್ಬವೂ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತಾಗುತ್ತಿದೆ.- ಮಾರುತಿ ದೊಡ್ಡಮನಿ, ಹೋರಿ ಹಬ್ಬದ ಸಂಘಟಕ, ಹಿರೇಕೆರೂರು
ಹಾಜರಾತಿ ಕಡ್ಡಾಯ: ಎಲ್ಲೇ ಹೋರಿ ಹಬ್ಬ ಇದ್ದರೂ ಅಲ್ಲಿ ನಮ್ಮ ಹಾಜರಾತಿ ಕಡ್ಡಾಯ. ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡುವುದು ನಮಗೆಲ್ಲ ಹಬ್ಬ. ಆಗ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನೇ ಮರೆತಿರುತ್ತೇವೆ.-ರಂಗನಾಥ ಬನಹಟ್ಟಿ, ಹೋರಿ ಹಬ್ಬದ ಅಭಿಮಾನಿ, ತಿಳವಳ್ಳಿ
ಗ್ರಾಮೀಣ ಪ್ರದೇಶದ ರೈತಾಪಿಗಳು ಮನೋರಂಜನೆಗೆಗಾಗಿ ಸಾಹಸ ಕ್ರೀಡೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಕಾಲ ಬದಲಾದಂತೆ ಅವುಗಳು ಮೆಲ್ಲಗೆ ತೆರೆಗೆ ಸರಿಯುತ್ತಿವೆ. ಆದರೆ, ಹೋರಿ ಹಬ್ಬದ ಹೋರಿ ಬೆದರಿಸುವ ಸ್ಪರ್ಧೆ ಈಗ ಇವೆಂಟ್ ಆಯಾಮ ಪಡೆದುಕೊಳ್ಳುತ್ತಿರುವುದು ಯುವಜನಾಂಗದ ಅಭಿರುಚಿಯನ್ನು ಹೇಳುತ್ತದೆ.
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.